Homeಕರ್ನಾಟಕವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?

- Advertisement -
- Advertisement -

“ರಾಜ್ಯ ಕಾಂಗ್ರೆಸ್‌ ಘಟಕವು ಈಗ ಮಾಡುತ್ತಿರುವ ಅಭಿಯಾನಗಳು, ಹೋರಾಟಗಳು ಹಾಗೂ ಆಡಳಿತರೂಢ ಬಿಜೆಪಿಗೆ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಕಾಂಗ್ರೆಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಬದಲಿಸಿದೆಯೇ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

– ಹೌದು ಎನ್ನುತ್ತವೆ ‘ಕಾಂಗ್ರೆಸ್‌ ಮೂಲಗಳು’. “ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಯಾವ ರೀತಿಯ ತಂತ್ರಗಾರಿಕೆಯನ್ನು ಮಾಡಿತ್ತೋ, ಅದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಈಗ ಮಾಡುತ್ತಿದೆ. ಇದು ಪಕ್ಷದ ಸಾಂಪ್ರದಾಯಿಕ ರಾಜಕೀಯ ಗುಣಕ್ಕೆ ಹೊಂದಾಣಿಕೆಯಾಗದಿದ್ದರೂ, ಇಂತಹ ರಾಜಕೀಯದ ಮೂಲಕವೇ ಜನರನ್ನು ತಲುಪಬೇಕಾದ ಅನಿವಾರ್ಯತೆಯನ್ನು ಬಿಜೆಪಿಯವರು ಸೃಷ್ಟಿಸಿಬಿಟ್ಟಿದ್ದಾರೆ” ಎನ್ನುವುದು ಪಕ್ಷವನ್ನು ಬಲ್ಲವರ ಮಾತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪೇಸಿಎಂ’ ಪೋಸ್ಟರ್‌ ಅಭಿಯಾನ ಹಾಗೂ ಅದಕ್ಕೆ ಬಿಜೆಪಿಯವರು ನೀಡುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಕಾಂಗ್ರೆಸ್‌ನೊಳಗೆ ಕ್ರಿಯಾಶೀಲತೆ ಕಂಡು ಬರುತ್ತಿದೆ. ‘ಪೇಸಿಎಂ’ – ಪೋಸ್ಟರ್‌ನಲ್ಲಿನ ಸೃಜನಶೀಲತೆ ಹಾಗೂ ಅದು ಬೀರಿದ ಪರಿಣಾಮಗಳನ್ನು ಗಮನಿಸಿದವರು- ರಾಜ್ಯ ಕಾಂಗ್ರೆಸ್ ಇಷ್ಟೊಂದು ಕ್ರಿಯೇಟಿವ್‌ ಆಗಿದ್ದು ಹೇಗೆ ಎಂದು ಆಶ್ಚರ್ಯಪಡುತ್ತಿದ್ದಾರೆ.

‘40% ಕಮಿಷನ್ ಸರ್ಕಾರ, ಪೇಸಿಎಂ ಪೋಸ್ಟರ್‌’ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ, “ಈ ಹಿಂದೆ ನಮ್ಮ ಜೊತೆಯಲ್ಲಿ ಕೆಲಸ ಮಾಡಿದವರು ಈಗ ಕಾಂಗ್ರೆಸ್‌ ಜೊತೆ ಇದ್ದಾರೆ. ಟೂಲ್‌ ಕಿಟ್‌ ರೀತಿ ಕೆಲಸ ಮಾಡುತ್ತಿದ್ದಾರೆ” ಎಂದುಬಿಟ್ಟರು.

ಇದನ್ನೂ ಓದಿರಿ: ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು

“ಹೌದು, ಇದೊಂದು ಟೂಲ್‌ ಕಿಟ್‌ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗೆಂದು ಟೂಲ್‌ಕಿಟ್ ಎಂದರೆ ಯಾವುದೋ ಭಯೋತ್ಪಾದಕ ಕೃತ್ಯವೂ ಅಲ್ಲ” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರು.

“ಯಾವುದಾದರೂ ಒಂದು ಅಭಿಯಾನವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುವುದೇ ಟೂಲ್ ಕಿಟ್. ಯಾವ ವಿಚಾರದ ಮೇಲೆ ಏನನ್ನು ಪೋಸ್ಟ್ ಮಾಡಬೇಕು, ಯಾರು ಏನನ್ನು ಮಾತನಾಡಬೇಕು, ಅದಕ್ಕೆ ಸಂಬಂಧಪಟ್ಟ ಟ್ವೀಟ್‌ಗಳು ಹೇಗಿರಬೇಕು ಎಂಬುದನ್ನೆಲ್ಲ ಡಾಕ್ಯೂಮೆಂಟ್ ಮಾಡಲಾಗುತ್ತದೆ. ಇದನ್ನೇ ಬಿಜೆಪಿಯವರೂ ಮಾಡುತ್ತಾರೆ. ಒಂದು ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯವಸ್ಥಿತವಾಗಿ ಮಾಡುವುದೇ ಟೂಲ್ ಕಿಟ್‌” ಎನ್ನುತ್ತಾರೆ ಕಾಂಗ್ರೆಸ್ಸಿಗರು.

‘ಪೇಸಿಎಂ’, ‘40%ಕಮಿಷನ್ ಸರ್ಕಾರ’ದ ಸುತ್ತ ಬರುತ್ತಿರುವ ತರಹೇವಾರಿ ಟ್ರೋಲ್‌ಗಳು, ಪೋಸ್ಟರ್‌ಗಳು, ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕಾಗಿಯೇ ರೂಪುಗೊಂಡಿರುವ ವೆಬ್‌ಸೈಟ್‌, ಫೇಸ್‌ಬುಕ್ ಪೇಜ್‌, ಅಲ್ಲಿನ ಕಂಟೆಂಟ್‌ಗಳು- ಎಲ್ಲವೂ ಒಂದು ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಗಮನಿಸಬಹುದು. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದ ಕಾಂಗ್ರೆಸ್‌ಗೂ ಈಗ ಕ್ರಿಯಾಶೀಲವಾಗಿರುವ ಕಾಂಗ್ರೆಸ್‌ಗೂ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ.

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಳಿಕ, ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿತು. ಬಹುಶಃ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಒಗ್ಗಟ್ಟನ್ನು ವಿರೋಧಪಕ್ಷ  ಪ್ರದರ್ಶಿಸಿರಲಿಲ್ಲ ಎಂಬ ವಿಶ್ಲೇಷಣೆಗಳು ಬಂದವು. ಇದಾದ ನಂತರ ‘ಸಿದ್ದರಾಮಯ್ಯ’ನವರ ಅಮೃತ ಮಹೋತ್ಸವ ನಡೆಯಿತು. ಲಕ್ಷೋಪಲಕ್ಷ ಜನರು ಭಾಗಿಯಾಗಿದ್ದು ಭಾರೀ ಸುದ್ದಿಯಾಯಿತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಬಿರುಕಿದೆ ಎಂಬುದನ್ನು ಮುಚ್ಚುವ ಬಹುದೊಡ್ಡ ಪ್ರಯೋಗ ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ಮತ್ತಷ್ಟು ಶಕ್ತಿಪ್ರದರ್ಶನವನ್ನು ಮಾಡುತ್ತಿರುವುದು ಕಂಡುಬರುತ್ತಿದೆ.

ತಂತ್ರಗಾರಿಕೆಯ ಹಿಂದಿರುವವರು ಯಾರು?

ಕಾಂಗ್ರೆಸ್‌ ತೋರುತ್ತಿರುವ ತಂತ್ರಗಾರಿಕೆಯ ಹಿಂದೆ ಕೇಳಿಬರುತ್ತಿರುವ ಹೆಸರು ಸುನಿಲ್‌ ಕಣಗೊಲು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಜೊತೆಯಲ್ಲಿ ಕೆಲಸ ಮಾಡಿದವರಾದ ಸುನಿಲ್, ಈಗ ರಾಜ್ಯ ಕಾಂಗ್ರೆಸ್‌ಗಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿ ಯಾವ ಅಸ್ತ್ರಗಳನ್ನು ಬಳಸಲಾಗಿತ್ತೋ, ಅದೇ ಅಸ್ತ್ರಗಳನ್ನು ಕಾಂಗ್ರೆಸ್‌ನಲ್ಲಿ ಪ್ರಯೋಗ ಮಾಡಲಾಗುತ್ತಿದೆ.

“ಮುಂಚೆ ಕಾಂಗ್ರೆಸ್‌ನವರೇ ಎಲ್ಲ ಪ್ರತಿಕ್ರಿಯೆಗಳನ್ನು ನೇರವಾಗಿ ನೀಡುತ್ತಿದ್ದರು. ಆದರೆ ಈಗ ಅವರೊಂದಿಗೆ ವಿಷಯತಜ್ಞರು ಸೇರಿಕೊಂಡಿದ್ದಾರೆ. ಈ ತಜ್ಞರು ಬಿಜೆಪಿ, ಜೆಡಿಎಸ್‌ ಸೇರಿದಂತೆ ದೇಶದ ಬೇರೆ ಪಕ್ಷಗಳ ಜೊತೆಗೂ ಕೆಲಸ ಮಾಡಿದ್ದಾರೆ. ವೃತ್ತಿಪರ ಕ್ಯಾಂಪೈನಿಂಗ್ ಮ್ಯಾನೇಜರ್‌ಗಳು, ಕಂಟೆಂಟ್ ರೈಟರ್‌ಗಳು, ಡಿಸೈನರ್‌ಗಳು ಕಾಂಗ್ರೆಸ್‌ ಜೊತೆಗಿದ್ದಾರೆ” ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

2018ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ವಿರುದ್ಧ 10% ಕಮಿಷನ್‌ ಸರ್ಕಾರ ಎಂಬ ಅಸ್ತ್ರವನ್ನು ಬಿಜೆಪಿ ಬಳಸಿತ್ತು. ಈಗ ಕಾಂಗ್ರೆಸ್ 40% ಕಮಿಷನ್‌ ಸರ್ಕಾರ ಎಂಬ ಆರೋಪ ಮಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುವ ಪೋಸ್ಟ್‌ಗಳಲ್ಲಿ ಬಳಸುವ ಪದಗಳಲ್ಲೂ ಕಾಂಗ್ರೆಸ್ ನಾಯಕರು ಬದಲಾವಣೆ ಮಾಡಿಕೊಂಡಿದ್ದಾರೆ. ಅಗ್ರೆಸಿವ್‌‌ ಆಗಿರುವುದು ಕಂಡು ಬರುತ್ತಿದೆ. ‘ಪೇಸಿಎಂ ಗುರುಶಿಷ್ಯರು’, ‘40% ಸರ್ಕಾರ ಬಿಜೆಪಿ ಅಂದ್ರೆ ಭ್ರಷ್ಟಾಚಾರ’, ‘ಕಮಿಷನ್‌ ಕೊಟ್ರೆ ಪರ್ಮಿಷನ್‌’,- ಈ ರೀತಿಯಲ್ಲಿ ದಾಳಿ ಮಾಡಲಾಗುತ್ತಿದೆ. ಜೊತೆಗೆ ಜನಪ್ರಿಯ ಸಿನಿಮಾ ತುಣುಕುಗಳನ್ನು, ಜಾಹೀರಾತುಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡುವುದು ನಡೆಯುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಒಂದು ವಿಡಿಯೊ ವೈರಲ್ ಆಗಿದೆ. “ಯಾಕ್ರೀ ಸುಮ್ಮನಿದ್ದೀರಿ, ಹೊಡೆಯಿರಿ ಚಪ್ಪಾಳೆ, ಹೇಳಿಸಿಕೊಂಡು ಚಪ್ಪಾಳೆ ಹೊಡೆಸಿಕೊಳ್ಳಬೇಕಾದ ಸ್ಥಿತಿ ನಮಗೆ ಬಂದಿದೆ” ಎಂದಿರುವ ವಿಡಿಯೊ ತುಣುಕನ್ನು ವೈರಲ್ ಮಾಡಲಾಗುತ್ತಿದೆ. ಈ ಹಿಂದೆ ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸಿದ್ದೂ ಇದೇ ರೀತಿಯಲ್ಲಿ. “ರಾಹುಲ್‌ ಗಾಂಧಿಯವರನ್ನು ಪಪ್ಪು ಮಾಡಿದವರು ಈಗ ಬೊಮ್ಮಾಯಿಯನ್ನು ಪಪ್ಪು ಮಾಡುತ್ತಿದ್ದಾರೆ”.

ಕಾಂಗ್ರೆಸ್ ಚುನಾವಣಾ ತಂತ್ರಗಳೇನು?

“ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂಬುದೇ ರಾಜ್ಯ ಕಾಂಗ್ರೆಸ್‌ನ ಚುನಾವಣಾ ಅಸ್ತ್ರ. ಇಷ್ಟೇ ಅಲ್ಲದೆ ಮತ್ತಷ್ಟು ದಾಳಿಗಳನ್ನು ಕಾಂಗ್ರೆಸ್ ಮಾಡಲಿದೆ. ಬಿಜೆಪಿಯ ವಚನ ಭ್ರಷ್ಟತೆಯನ್ನು ಮುನ್ನೆಲೆಗೆ ತರಲಾಗುತ್ತದೆ. ಸುಮಾರು ಆರು ನೂರು ವಚನಗಳನ್ನು ಬಿಜೆಪಿ ನೀಡಿತ್ತು. ಅದರಲ್ಲಿ ಶೇ. 10ರಷ್ಟು ಕೂಡ ನೆರವೇರಿಲ್ಲ. ಕಾಂಗ್ರೆಸ್‌ ಇದನ್ನು ದೊಡ್ಡ ಮಟ್ಟದಲ್ಲಿ ಪ್ರಶ್ನಿಸಲಿದೆ. ‘ವಚನ ವಂಚನೆ’ ಅಭಿಯಾನವೂ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ‘ವಚನ ವಂಚನೆ’ ಕ್ಯಾಂಪೇನ್‌‌ ಚರ್ಚೆಯಾಗಬೇಕೆಂದು ಕಾಂಗ್ರೆಸ್ ಬಯಸಿದೆ. ಬಿಜೆಪಿ ನೀಡಿದ ವಚನವೇನು? ಈಗ ಮಾಡಿದ್ದೇನು? ಎಂಬ ಪ್ರಶ್ನೆಯನ್ನು ದೊಡ್ಡ ಮಟ್ಟದಲ್ಲಿ ಕೇಳಲಿದ್ದೇವೆ” ಎನ್ನುತ್ತಾರೆ ಕಾಂಗ್ರೆಸ್ಸಿಗರು.

ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮು ಹಿಂಸೆಗಳು, ರೈತರ ಸಮಸ್ಯೆ- ಈ ವಿಚಾರಗಳನ್ನು ಟಾರ್ಗೆಟ್ ಮಾಡಲಿದೆ ಎಂದು ಮೂಲಗಳು ಹೇಳುತ್ತವೆ. ಬಿಜೆಪಿ ಕೋಮುವಿಚಾರಗಳನ್ನೇ ಮೊದಲ ಆದ್ಯತೆಯಾಗಿ ನೋಡುತ್ತಿದೆ. ಧರ್ಮವನ್ನು ಮುನ್ನೆಲೆಗೆ ತಂದು ಹಿಂದುತ್ವದ ಪ್ಲೇಕಾರ್ಡ್ ಹಾಕುತ್ತದೆ. ಇದನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತದೆ? ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆಯಂತಹ ಗಂಭೀರ ಸಂಗತಿಗಳು ಹಿಂದಕ್ಕೆ ಸರಿದು, ಕೋಮುಭಾವನೆಯೇ ಪ್ರಧಾನವಾದರೆ ಕಾಂಗ್ರೆಸ್ ಏನು ಮಾಡಬಲ್ಲದು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೂ ಕಾಂಗ್ರೆಸ್‌ ಒಂದು ಹಾದಿಯನ್ನು ಹಿಡಿದಿದೆ.

“ಕೋಮುಪ್ರಕರಣಗಳಿಂದ ಅಂತರ ಕಾಯ್ದುಕೊಳ್ಳುವುದೇ ಕಾಂಗ್ರೆಸ್‌ನ ತಂತ್ರಗಾರಿಕೆ. ಕೋಮುಪ್ರಚೋದನೆಗಳು ನಡೆದಾಗ ಕಾಂಗ್ರೆಸ್ ಪ್ರತಿಕ್ರಿಯೆ ನೀಡುವುದಿಲ್ಲ. ಮೊದಲು ಮೌನವಹಿಸುತ್ತದೆ. ವಿರೋಧ ಪಕ್ಷಗಳು ಪ್ರತಿಕ್ರಿಯೆ ನೀಡಿದರೆ ಮಾತ್ರ ಆ ಘಟನೆಗೆ ಮಹತ್ವ ಬಂದುಬಿಡುತ್ತದೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಕಾರಣ ಅಲ್ಲಿ ಕೋಮು ಪ್ರಕರಣಗಳಿಂದ ಅಂತರ ಕಾಯ್ದುಕೊಳ್ಳಲಾಗಿತ್ತು” ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.

ಇದನ್ನೂ ಓದಿರಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ಮತ್ತೆ ದಾಳಿ ನಡೆಸಿದ NIA; 50 ಜನರು ವಶಕ್ಕೆ

ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸುತ್ತೇವೆ ಎಂದಾಗ ಕಾಂಗ್ರೆಸ್ ನಾಯಕರು, “ಬೋಧಿಸಿ, ತಪ್ಪೇನಿಲ್ಲ” ಎನ್ನುವ ಮೂಲಕ ಈ ವಿಷಯಕ್ಕೆ ಹೆಚ್ಚಿನ ಮಾನ್ಯತೆಯನ್ನೇ ನೀಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳಾದಾಗ ಕಾಂಗ್ರೆಸ್‌ ಅಷ್ಟಾಗಿ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ. ಅಂದರೆ ಮತೀಯ ವಿಷಯಗಳಿಗೆ ಹೆಚ್ಚಿನ ಸ್ಪೇಸ್ ನೀಡುವುದಕ್ಕೆ ಕಾಂಗ್ರೆಸ್ ಹೋಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಹಾಗಾದರೆ ಕೋಮುಗಲಭೆಗಳಾದಾಗ ಕಾಂಗ್ರೆಸ್‌ ಏನು ಮಾಡುವುದಿಲ್ಲವೆ? ಎಂಬ ಕೇಳಿದರೆ, “ಕೋಮು ಸೂಕ್ಷ್ಮ ವಿಷಯಗಳಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವುದಿಲ್ಲ. ಘಟನೆ ನಡೆದ ಸ್ಥಳದಲ್ಲಿ ಪಕ್ಷದ ಮುಖಂಡರು ಶಾಂತಿ ಸಭೆಯನ್ನು ನಡೆಸುತ್ತಾರೆ. ಒಟ್ಟಿಗೆ ಕೂರಿಸಿ ಮಾತನಾಡುತ್ತಾರೆ. ಈ ರೀತಿಯ ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್ ಆನ್‌ಲೈನ್‌ನಿಂದ ಆಫ್‌ಲೈನ್‌ಗೆ ಶಿಪ್ಟ್ ಆಗಿದೆ. ಮಾತುಕತೆಗಳ ಮೂಲಕ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಆನ್‌ಲೈನ್ ಹಾದಿ ಹಿಡಿದಿದೆ. ಆದರೆ ಅದಕ್ಕೆ ವಿರುದ್ಧ ಧ್ರುವದಲ್ಲಿ ಆಫ್‌ಲೈನ್‌ ತಂತ್ರಗಾರಿಕೆಯೇ ಮುಖ್ಯವಾಗುತ್ತದೆ. ಭಾರತ್‌ ಜೋಡೋ ಯಾತ್ರೆಯನ್ನು ಬೀದಿಗಿಳಿದು ಮಾಡುತ್ತಿರುವುದು ಆಫ್‌ಲೈನ್‌ ಹೋರಾಟದ ಬಹುದೊಡ್ಡ ಭಾಗ. ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಕಾಂಗ್ರೆಸ್ ಯತ್ನಿಸುತ್ತಿದೆ” ಎನ್ನುತ್ತವೆ ಪಕ್ಷದ ಮೂಲಗಳು.

‘ಹಿಂದುತ್ವ’ದ ಕುರಿತು ಮೌನ ಸರಿಯೇ?

‘ಹಿಂದುತ್ವ’ದ ಕುರಿತು ಕಾಂಗ್ರೆಸ್ ಮೌನವಹಿಸುವುದು ಸರಿಯೇ? ಕೇವಲ ಭ್ರಷ್ಟಾಚಾರವನ್ನು ಪ್ರಶ್ನಿಸಿದರಷ್ಟೇ ಸಾಕೆ? ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಕಾಂಗ್ರೆಸ್ ತಂತ್ರಗಾರಿಕೆಗಳ ಕುರಿತು ಪ್ರತಿಕ್ರಿಯಿಸಿದ ಚಿಂತಕ ಶಿವಸುಂದರ್‌, “ಕಾಂಗ್ರೆಸ್ ಬದಲಾಗುತ್ತಿದೆ ಎಂದು ಅನಿಸುತ್ತಿಲ್ಲ. ಬಾಬಾಬುಡನ್ ದರ್ಗಾ, ಹಿಜಾಬ್‌, ಇಡಬ್ಲ್ಯೂಎಸ್‌, ರಾಮಜನ್ಮಭೂಮಿಯಂತಹ ವಿಚಾರದಲ್ಲಿ ಕಾಂಗ್ರೆಸ್ ಸರಿಯಾದ ನಿಲುವು ತಾಳಲಿಲ್ಲ. ಸಿದ್ದರಾಮಯ್ಯನಂಥವರು ಕೆಲವೊಮ್ಮೆ ಮಾತನಾಡುತ್ತಾರಷ್ಟೇ” ಎಂದರು.

“ಒಟ್ಟಾರೆ ರಾಜಕೀಯ ವ್ಯವಸ್ಥೆಯಲ್ಲಿ ಸವರ್ಣೀಯ ಮನಸ್ಥಿತಿಯನ್ನು ಹಿಂದುತ್ವ ಮನಸ್ಥಿತಿಯಾಗಿ ಬಿಜೆಪಿಯವರು ಬೆಳೆಸಿದ್ದಾರೆ. ಅದನ್ನು ಒಡೆದುಹಾಕುವ ಪರ್ಯಾಯವಿರದೆ ಇದ್ದರೆ ಇದೆಲ್ಲ ಕೇವಲ ನೆಪಮಾತ್ರದ ಬದಲಾವಣೆ ಅನಿಸುತ್ತದೆ. ರಾಮಜನ್ಮಭೂಮಿಯ ಭೂಮಿಪೂಜೆಯಾಯಿತು. ಅಂದು ಪ್ರಿಯಾಂಕಾ ಗಾಂಧಿಯವರು ನಿಧಿ ಸಂಗ್ರಹಿಸಿದ್ದರು. ಈಗ ಮುಸ್ಲಿಂ ಮತಗಳಿಗೆ ಮೂರ್ನಾಲ್ಕು ಜನ ಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಮುಸ್ಲಿಂ ಮತಗಳ ಮೇಲೆಯೂ ನಂಬಿಕೊಳ್ಳುವಂತಿಲ್ಲ. ಪಿಎಫ್‌ಐ ವಿಚಾರದಲ್ಲಿ ತರಹೇವಾರಿ ಹೇಳಿಕೆಗಳನ್ನು ಕಾಂಗ್ರೆಸ್‌ನವರು ಕೊಡುತ್ತಿರುವುದೇ ಈ ಕಾರಣಕ್ಕೆ. ಸವರ್ಣೀಯ ಮನಸ್ಥಿತಿಗೆ ಧಕ್ಕೆಯಾಗದಂತೆ ಒಂದಿಷ್ಟು ತಂತ್ರಗಾರಿಕೆಗಳನ್ನು ಬಿಜೆಪಿಯೇತರ ಕಾಂಗ್ರೆಸ್‌, ಎಎಪಿ ಥರದ ಪಕ್ಷಗಳು ಮಾಡುತ್ತವೆ. ರಾಜಕಾರಣದಲ್ಲಿ ಹಿಂದುತ್ವ ಪ್ರಬಲವಾಗಿದೆ. ಬಿಜೆಪಿ ಅಸ್ತಿತ್ವ ಕಳೆದುಕೊಂಡರೂ ಇನ್ನುಳಿದ ಪಕ್ಷಗಳು ಹಿಂದುತ್ವವನ್ನು ಪ್ರಶ್ನೆ ಮಾಡುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...