Homeಅಂತರಾಷ್ಟ್ರೀಯಕೆಜಿಗೆ 2.7 ಲಕ್ಷ ರೂ. ಬೆಲೆಯ ಜಗತ್ತಿನ ಅತಿ ದುಬಾರಿ ಮಾವಿನ ಹಣ್ಣು ಮಿಯಝಾಕಿ

ಕೆಜಿಗೆ 2.7 ಲಕ್ಷ ರೂ. ಬೆಲೆಯ ಜಗತ್ತಿನ ಅತಿ ದುಬಾರಿ ಮಾವಿನ ಹಣ್ಣು ಮಿಯಝಾಕಿ

- Advertisement -
- Advertisement -

ಭಾರತವಲ್ಲದೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾವಿನ ಹಣ್ಣಿಗೆ ವಿಶೇಷ ಸ್ಥಾನಮಾನವಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಮಾವಿನ ಹಣ್ಣಿನ ಪ್ರಿಯರಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾವಿನ ಬೆಳೆ ಬಹಳ ಕಡಿಮೆ. ಹಾಗಾಗಿ ಭಾರತ ಸೇರಿ ಏಷ್ಯಾದ ರಾಷ್ಟ್ರಗಳಿಂದ ಅಮೆರಿಕ ಮತ್ತು ಯುರೋಪ್‌ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣು ರಫ್ತಾಗುತ್ತದೆ. ವಿದೇಶಗಳಿಗೆ ರಫ್ತಾಗುವ ಮಾವಿನ ಹಣ್ಣುಗಳು ವಿಶೇಷ ಗುಣಮಟ್ಟವನ್ನು ಹೊಂದಿರುತ್ತವೆ ಮತ್ತು ಅವುಗಳ ಬೆಲೆಯೂ ಅಷ್ಟೇ ಹೆಚ್ಚಾಗಿರುತ್ತದೆ. ನಾವು ಮಾವಿನ ಹಣ್ಣಿನ ಬೆಲೆ ಕೆ.ಜಿ.ಗೆ 100 ರೂಪಾಯಿ ಎಂದರೆ ದುಬಾರಿ ಎಂದುಕೊಳ್ಳುತ್ತೇವೆ. ಆದರೆ ಇಲ್ಲೊಂದು ಮಾವಿನ ಹಣ್ಣಿದೆ. ಇದರ ಬೆಲೆಯನ್ನು ಕೇಳಿದರೆ ನಾವೆಲ್ಲರೂ ಆಶ್ಚರ್ಯಕ್ಕೆ ಒಳಗಾಗುತ್ತೇವೆ. ಹಾಗೇ ಇದು ನಿಜವೇ ಎಂದು ಪ್ರಶ್ನಿಸುತ್ತೇವೆ…

ಹೌದು ಇದು ಅಂತಹದ್ದೇ ಮಾವಿನ ಹಣ್ಣು. ನೋಡಲು ಅಷ್ಟೇ ಸುಂದರ. ಅಷ್ಟೇ ರುಚಿಕರ. ಸುವಾಸನೆ ಭರಿತ ತಳಿ. ಅಷ್ಟೇ ದುಬಾರಿ. ಒಂದು ಕೆಜಿಗೆ 2.7 ಲಕ್ಷ ರುಪಾಯಿ. ಅದು ಯಾವ ಮಾವಿನ ಹಣ್ಣು ಎನ್ನುತ್ತೀರಾ ? ಅದೇ ಜಪಾನ್ ಮೂಲದ ತಳಿಯ ಮಾವಿನ ಹಣ್ಣು ಮಿಯಝಾಕಿ. ಕೆಂಪು-ಬೂದು ಬಣ್ಣದ ಈ ಮಾವಿನ ಹಣ್ಣಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದೆ. ಮಧ್ಯಪ್ರದೇಶದ ಕೃಷಿಕ ದಂಪತಿಯೊಂದು ಮಿಯಝಾಕಿ ತಳಿಯ ಮಾವಿನ ಹಣ್ಣನ್ನು ತಮ್ಮ ಹೊಲದಲ್ಲಿ ಬೆಳೆದು ಅಪಾರ ಲಾಭ ಗಳಿಸಿದ್ದಾರೆ.

ದುಬಾರಿ ಈ ಮಾವಿನ ಹಣ್ಣನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಕೃಷಿ ದಂಪತಿ ಈ ಮಾವಿನ ಹಣ್ಣಿನ ತೋಟಕ್ಕೆ ಗಾರ್ಡ್‌ಗಳನ್ನು ನೇಮಿಸಿದ್ದಾರೆ.

ಮಧ್ಯಪ್ರದೇಶದ ಈ ಕೃಷಿ ದಂಪತಿ ಬೆಳೆದಿರುವ ಮಿಯಝಾಕಿ ಮಾವಿನ ಹಣ್ಣಿನ ಒಂದು ಚಿಕ್ಕ ಹೋಳಿನ ಬೆಲೆಯೇ ಸುಮಾರು 1,000 ರೂಪಾಯಿಗೂ ಅಧಿಕವಾಗಿದೆ ಎಂದರೆ ನೀವು ನಂಬಲಾರರಿ. ಆದರೆ ಇದು ಸತ್ಯ. ಮಧ್ಯಪ್ರದೇಶದ ಈ ಕೃಷಿಕರು ಬೆಳೆದ ಮಿಯಝಾಕಿ ಮಾವಿನ ಹಣ್ಣು ಬೂದು ಬಣ್ಣವನ್ನು ಪಡೆದುಕೊಂಡಿದೆ. ಹಾಗೇ ವಿಶೇಷ ಸುವಾಸನೆಯನ್ನು ಹೊಂದಿದೆ.

ಇದನ್ನೂ ಓದಿ : ಕೊರೊನಾದಿಂದ ಅನಾಥರಾದ ಮಕ್ಕಳ ಜವಾಬ್ದಾರಿ ಪಡೆದ ರಾಜ್ಯಗಳ ಸಾಲಿಗೆ ಉತ್ತರ ಪ್ರದೇಶ

1970-80 ರಲ್ಲಿ ಜಪಾನ್ ದೇಶದ ಮಿಯಝಾಕಿ ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳೆಯಲಾದ ಈ ಮಾವಿನ ತಳಿ ಆ ಪಟ್ಟಣದ ಹೆಸರನ್ನೇ ಪಡೆದುಕೊಂಡು ಜಗತ್ತಿನಾದ್ಯಂತ ಮಿಯಝಾಕಿ ಎಂದೇ ಪ್ರಸಿದ್ಧವಾಗಿದೆ. ಜಪಾನ್‌ನಲ್ಲಿ ಆರಂಭವಾದ ಮಿಯಝಾಕಿ ತಳಿಯ ಬೆಳೆ ಕೊರಿಯಾ, ಮಲೇಷ್ಯಾ, ಥೈಲಾಂಡ್ ಹೀಗೆ ಭಾರತದ ಮಧ್ಯಪ್ರದೇಶದವರೆಗೂ ಬಂದಿದೆ. ಸಾಧಾರಣ ಮಾವಿಗಿಂತ 15% ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುವ ಈ ಮಿಯಝಾಕಿ ಮಾವು ಅತ್ಯಂತ ಕಡಿಮೆ ಆಮ್ಲದ ಗುಣವನ್ನು ಹೊಂದಿದೆ. ಏಪ್ರಿಲ್ ನಿಂದ ಆಗಸ್ಟ್ ತಿಂಗಳವರೆಗೆ ಹಣ್ಣನ್ನು ಬಿಡುವ ಈ ತಳಿ ಉಷ್ಣವಲಯದಲ್ಲಿ ಮಾತ್ರ ಚೆನ್ನಾಗಿ ಫಲ ಕೊಡುತ್ತದೆ.

ಕಳೆದ ವರ್ಷ ಅಂತರರಾಷ್ಟಿಯ ಮಾರುಕಟ್ಟೆಯಲ್ಲಿ ಕೆಜಿಗೆ 2.7 ಲಕ್ಷ ಬೆಲೆಗೆ ಮಾರಾಟವಾಗಿದ್ದ ಮಿಯಝಾಕಿ ಬೆಲೆ ಈ ವರ್ಷ 3  ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ. ಕೆಂಪು ಬಣ್ಣದ ಡೈನೋಸಾರ್ ಮೊಟ್ಟೆಯನ್ನು ಹೋಲುವ ಈ ಮಿಯಝಾಕಿ ಹಣ್ಣು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿದೆ. ಈ ಹಣ್ಣಿನ ವಿವರ ಕೇಳಿದ ನೆಟ್ಟಿಗರು ದುಬಾರಿ ಬೆಲೆಯಿಂದಾಗಿ ಮಿಯಝಾಕಿ ಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾವಿನ ಹಣ್ಣಿನ ಸೀಸನ್‌ನಲ್ಲಿ ನೀವು ಮಾವಿನ ಪ್ರಿಯರಾಗಿದ್ದರೆ ಮಿಯಝಾಕಿ ತಳಿಯ ಹಣ್ಣನ್ನು ಪ್ರಯತ್ನಿಸುವ ಆಸೆಯಾಗುತ್ತಿದೆಯಾ ? ಹಾಗಿದ್ದರೆ 2.70 ಲಕ್ಷ ರೂಪಾಯಿಯನ್ನು ಮಾವಿನ ಹಣ್ಣಿಗಾಗಿ ನಿಮ್ಮ ಜೇಬಿನಿಂದ ತೆಗೆದಿರಿಸಿಕೊಳ್ಳುವುದು ಉತ್ತಮ.

– ರಾಜೇಶ್ ಹೆಬ್ಬಾರ್


ಇದನ್ನೂ ಓದಿ : ಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...