Homeಅಂಕಣಗಳುಲೈಂಗಿಕ ದೌರ್ಜನ್ಯದ ಆರೋಪ: ಸರ್ಕಾರದ ಉದಾಸೀನವೋ? ಆರೋಪಿಯ ರಕ್ಷಣೆಗೆ ಮಾಡುತ್ತಿರುವ ತಂತ್ರವೋ?

ಲೈಂಗಿಕ ದೌರ್ಜನ್ಯದ ಆರೋಪ: ಸರ್ಕಾರದ ಉದಾಸೀನವೋ? ಆರೋಪಿಯ ರಕ್ಷಣೆಗೆ ಮಾಡುತ್ತಿರುವ ತಂತ್ರವೋ?

- Advertisement -
- Advertisement -

“ನಾನು ಬಾಕ್ಸಿಂಗ್ ರಿಂಗ್ ಒಳಗೆ ಹೋರಾಡುವುದನ್ನು ನೀವು ನೋಡಿದ್ದರೆ, ಆ ಫೈಟ್ ನನ್ನ ಎದುರಾಳಿಯನ್ನು ಸೋಲಿಸುವುದಕ್ಕೆ ಮಾತ್ರ ಇರುತ್ತಿರಲಿಲ್ಲ. ನನ್ನ ಫೈಟ್‌ಗೆ ಒಂದು ಗುರಿ ಇತ್ತು. ನಾನು ಹೇಳುವ ಸಂಗತಿಗಳನ್ನು ಜನರು ಕೇಳುವಂತೆ ಮಾಡಲು ನಾನು ಯಶಸ್ವಿಯಾಗಬೇಕಾದ ಅಗತ್ಯವಿತ್ತು… ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಚಾಂಪಿಯನ್ ಆಗಲು ನಾನು ಬಯಸಿದ್ದೆ. ತಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿಕೊಂಡು, ಹೆಮ್ಮೆ ಮತ್ತು ಘನತೆಯಿಂದ ಬದುಕುವಂತೆ ಇತರರಿಗೆ ಸ್ಫೂರ್ತಿ ನೀಡುವ ಭರವಸೆಯನ್ನು ಇಟ್ಟುಕೊಂಡಿದ್ದೆ”
– ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ

ಮುಹಮ್ಮದ್ ಅಲಿಯವರ ಮೇಲಿನ ಮಾತುಗಳು ದೆಹಲಿಯಲ್ಲಿ ಪ್ರತಿಭಟನಾನಿರತ ಭಾರತೀಯ ಕುಸ್ತಿಪಟುಗಳಿಗೆ ಈ ಸಮಯದಲ್ಲಿ ಹೆಚ್ಚು ಅನ್ವಯವಾಗುತ್ತವೆ. ಈಗ ಅವರು ಕುಸ್ತಿ ಒಕ್ಕೂಟದ ಅಧ್ಯಕ್ಷ- ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಾಡಿರುವ ಗಂಭೀರ ಲೈಂಗಿಕ ಕಿರುಕುಳಗಳ ಆಪಾದನೆಗಳನ್ನು ಗಮನಿಸಿದರೆ ಬಹುಶಃ ಈ ಕುಸ್ತಿಪಟುಗಳು ಎದುರಾಳಿಗಳನ್ನು ಸೋಲಿಸುವುದಕ್ಕೆ ಅಥವಾ ಪದಕ ಗಳಿಸಲು ಆಡಿದ್ದಕ್ಕಿಂತಲೂ, ತಮ್ಮ ವಿರುದ್ಧ ನಡೆದ ದೌರ್ಜನ್ಯವನ್ನು ಸೆಣೆಸುವ ಪ್ರತೀಕವಾಗಿ ಕುಸ್ತಿಯಾಡುತ್ತಿದ್ದರೆನಿಸುತ್ತದೆ; ಮತ್ತು ತಮ್ಮ ಮೇಲಾದ ದೌರ್ಜನ್ಯಗಳನ್ನು ಜನ ಮತ್ತು ಅಧಿಕಾರ ಕೇಳಿಸಿಕೊಳ್ಳುವಂತೆ ಮಾಡಲು ಅವರಿಗೆ ಆ ಪದಕಗಳು ಅನಿವಾರ್ಯವಾಗಿದ್ದವೆನಿಸುತ್ತದೆ. ಪದಕಗಳನ್ನು ಗೆದ್ದ ಮೇಲೆಯೂ, ಯಾವಾಗ ಅಧಿಕಾರ ಅವರ ಅಳಲನ್ನು ಆಲಿಸಲು ನಿರಾಕರಿಸಿತೋ, ಯಾವಾಗ ಸಹ ನಾಗರಿಕರಿಂದ ನಿರೀಕ್ಷಿತ ಮಟ್ಟದ ಬೆಂಬಲ ವ್ಯಕ್ತವಾಗಲು ವಿಫಲವಾಯಿತೋ ಅದೇ ಗಳಿಗೆಯಲ್ಲಿ ಅವರಿಗೆ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದಕ್ಕೆ ಮಾತ್ರ ಯೋಗ್ಯವೆನಿಸಿರಬೇಕು!

ಮುಹಮದ್ ಅಲಿ

ಅಮೆರಿಕನ್ ಬಾಕ್ಸಿಂಗ್ ದಂತಕಥೆ ಮುಹಮದ್ ಅಲಿ ಕೂಡ ತಮ್ಮ ಒಲಂಪಿಕ್ ಪದಕವನ್ನು ನದಿಗೆ ಎಸೆದಿದ್ದ ಬಗ್ಗೆ ಭಾರತೀಯ ಮಾಧ್ಯಮಗಳು ಮೇಲಿನ ಘಟನೆಗೆ ಹೋಲಿಕೆ ಮಾಡಿದ್ದವು. ಜನಾಂಗೀಯವಾದ ವಿಪರೀತವಾಗಿದ್ದ ಸಮಯ ಮತ್ತು ಸ್ಥಳದಲ್ಲಿ ಅಲಿ ಜನಿಸಿದ್ದು. 1960ಲ್ಲಿ ಒಲಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲಿ, 48 ಗಂಟೆಗಳ ಕಾಲ ನಿರಂತರವಾಗಿ ಪದಕವನ್ನು ಧರಿಸಿಯೇ ಇದ್ದರಂತೆ. ಇಷ್ಟು ಜನಪ್ರಿಯರಾಗಿದ್ದರೂ ತಾವು ಜನಿಸಿದ್ದ ಸ್ಥಳದ ರೆಸ್ಟೊರೆಂಟ್ ಒಂದರಲ್ಲಿ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿ, ಅಲ್ಲಿ ಆಹಾರ ಪಡೆಯಲು ನಿರಾಕರಿಸಲ್ಪಟ್ಟಾಗ ಅಲ್ಲಿನ ಬಿಳಿಯರ ಜೊತೆಗೆ ಅಲಿ ಕಾದಾಟಕ್ಕೆ ಇಳಿದಿದ್ದರಂತೆ. ನಂತರ ಯಾವ ಹಂತದಲ್ಲೂ ನಿಲ್ಲದ ಈ ರೇಸಿಸಂಗೆ ಬೇಸತ್ತು ತಮ್ಮ ಪದಕವನ್ನು ಓಹಿಯೋ ನದಿಗೆ ಎಸೆದಿದ್ದ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಅವರು ಪದಕವನ್ನು ಕಳೆದುಕೊಂಡಿದ್ದರು ಎಂದು ಕೂಡ ಕೆಲವರು ಬರೆದಿದ್ದರೂ, ಒಟ್ಟಿನಲ್ಲಿ ಜನಾಂಗೀಯ ತಾರತಮ್ಯದ ಬಗ್ಗೆ ಅವರಿಗಿದ್ದ ಆಕ್ರೋಶವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ತಮ್ಮ ಬಾಕ್ಸಿಂಗ್‌ಅನ್ನು ಅಮೆರಿಕದ ರೇಸಿಸಂ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿಸಿಕೊಂಡಿದ್ದ ಅಪರೂಪದ ಕ್ರೀಡಾಪಟು ಅಲಿ.

ಪ್ರತಿಭಟನಾ ನಿರತ ಕುಸ್ತಿಪಟುಗಳು ಮೇ 30ರಂದು ತಮ್ಮ ಪದಕಗಳನ್ನು ಗಂಗಾನದಿಗೆ ಎಸೆಯಲು ತೆರಳಿದ್ದಾಗ ಭಾವನಾತ್ಮಕ ಪರಿಸ್ಥಿತಿ ಉಂಟಾಗಿತ್ತು. ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮಧ್ಯಪ್ರವೇಶದಿಂದ ಪದಕಗಳನ್ನು ಎಸೆಯಲಿಲ್ಲವಾದರೂ, ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ಅವರೆಲ್ಲರೂ ಶಪಥ ಕೈಗೊಂಡರು. ಇಷ್ಟೆಲ್ಲಾ ಘಟಿಸಿದರೂ ಮುಂದಿನ ಕೆಲವು ದಿನಗಳಲ್ಲಿ ನಡೆದ ಸಂಗತಿಗಳು, ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳಲು ಸೋತಿರುವ ದೆಹಲಿ ಪೊಲೀಸರ ಮತ್ತು ಅಧಿಕಾರ ವರ್ಗದ ದರ್ಪ, ಲೈಂಗಿಕ ದೌರ್ಜನ್ಯದ ಕುರಿತು ಈ ದೇಶದಲ್ಲಿ ಇರುವ ಉದಾಸೀನತೆಗೆ ಸಾಕ್ಷಿಯಾಗಿವೆ.

ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎನ್ನುವುದು ಸುಳ್ಳು, ತನಿಖೆ ಪ್ರಗತಿಯಲ್ಲಿದೆ ಎಂದ ದೆಹಲಿ ಪೊಲೀಸರು

ಜೂನ್ 2ನೆಯ ತಾರೀಖು ’ದ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ, ದೆಹಲಿ ಪೊಲೀಸರು ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಹಾಕಿರುವ ಎರಡು ಎಫ್‌ಐಆರ್‌ಗಳ ಕೆಲವು ಅಂಶಗಳನ್ನು ಆಧರಿಸಿ ಮಾಡಿದ ವರದಿ ಯಾವುದೇ ಪ್ರಜ್ಞಾವಂತ ನಾಗರಿಕನನ್ನು ಬೆಚ್ಚಿಬೀಳಿಸುವಂತಿತ್ತು. ಏಪ್ರಿಲ್ 28ರಂದು ಹಾಕಿರುವ ಈ ಎಫ್‌ಐಆರ್‌ನಲ್ಲಿ, ಸಿಂಗ್ ವೃತ್ತಿಪರ ಸಹಾಯ ನೀಡಲು ಅದಕ್ಕೆ ಬದಲಾಗಿ ಲೈಂಗಿಕ ತೃಷೆ ತಣಿಸುವ ಆಗ್ರಹಿಸಿರುವ ಎರಡು ಸಂದರ್ಭಗಳು ಸೇರಿದಂತೆ, ಅನುಚಿತವಾಗಿ ಹೆಣ್ಣುಮಕ್ಕಳ ಮೈಮುಟ್ಟಿರುವುದು, ಬೆದರಿಕೆ, ಹೆಣ್ಣುಮಕ್ಕಳನ್ನು ಚುಡಾಯಿಸಿ ಹಿಂದೆಬಿದ್ದಿರುವ ಕನಿಷ್ಟ 15 ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಆ ವರದಿಯಲ್ಲಿ ದಾಖಲಾಗಿರುವಂತೆ, ಆರು ಜನ ಕುಸ್ತಿಪಟುಗಳು ಬ್ರಿಜ್ ಭೂಷಣ್ ತಮ್ಮ ಮೇಲೆ ಎಸಗಿದ ದೌರ್ಜನ್ಯದ ಬಗ್ಗೆ ನೀಡಿರುವ ಹೇಳಿಕೆಗಳು, ಅಧಿಕಾರಸ್ಥರ ಹೀನಾತಿಹೀನ ಮನಸ್ಥಿತಿಗೆ ಪ್ರತೀಕ. ಯಾವುದೇ ನಾಗರಿಕ ಸಮಾಜ ತಲೆತಗ್ಗಿಸಬೇಕಾದಂತ ಆರೋಪಗಳವು. ಈ ಹೀನಾತಿಹೀನ ದೌರ್ಜನ್ಯದ ಬಗ್ಗೆ ತಿಳಿಯಲು ಕುಸ್ತಿಪಟು ಒಬ್ಬರ ಒಂದು ಆರೋಪವನ್ನು ಓದಿದರೆ ಸಾಕು; ಕುಸ್ತಿಪಟು-1: “ಒಂದು ದಿನ ರಾತ್ರಿ ಊಟ ಮಾಡಲು ಹೋಟೆಲ್ ಒಂದಕ್ಕೆ ಹೋಗಿದ್ದೆ. ಆರೋಪಿ (ಸಿಂಗ್) ನನ್ನನ್ನು ಪ್ರತ್ಯೇಕವಾಗಿ ಅವರ ಟೇಬಲ್‌ಗೆ ಕರೆದರು.. ನನಗೆ ಅಚ್ಚರಿ ಮತ್ತು ಆಘಾತವಾಗುವಂತೆ ನನ್ನ ಒಪ್ಪಿಗೆಯಿಲ್ಲದೆ ನನ್ನ ಸ್ತನಗಳ ಮೇಲೆ ಕೈಯ್ಯಿರಿಸಿದರು ಮತ್ತು ನಂತರ ಹೊಟ್ಟೆಯ ಭಾಗಕ್ಕೆ ಕೈಯ್ಯನ್ನು ಜಾರಿಸಿದರು. ನನಗೆ ನಂಬಲಸಾಧ್ಯವೆಂಬಂತೆ, ಆರೋಪಿ (ಸಿಂಗ್) ಅಲ್ಲಿಗೆ ನಿಲ್ಲಿಸದೆ ತನ್ನ ಕೈಯನ್ನು ಮತ್ತೆ ಸ್ತನಗಳ ಮೇಲೆ ತಂದರು. ಅವರು ಸ್ತನಗಳನ್ನು ಹಿಸುಕಿದರು, ಮತ್ತೆ ಹೊಟ್ಟೆಯ ಭಾಗಕ್ಕೆ ಕೈಇಳಿಸಿದರು ಮತ್ತೆ ಸ್ತನಗಳ ಹತ್ತಿರ ತಂದರು, ಹೀಗೆ ಮೂರು-ನಾಲ್ಕು ಬಾರಿ ಪುನರಾವರ್ತಿಸಿದರು.”

ಬ್ರಿಜ್ ಭೂಷಣ್ ಶರಣ್ ಸಿಂಗ್

ತಮ್ಮ ಮೇಲಾದ ಇಂತಹ ಆಘಾತಕಾರಿ ದೌರ್ಜನ್ಯವನ್ನು ಪೊಲೀಸರಲ್ಲಿ ನಿವೇದಿಸಿಕೊಳ್ಳುವಾಗ ಸಂತ್ರಸ್ತ ಕುಸ್ತಿ ಪಟು ಎಷ್ಟು ಮನೋವೇದನೆಯನ್ನು ಅನುಭವಿಸಿರಬೇಕು. ದೂರು ನೀಡಿರುವ ಸಂತ್ರಸ್ತೆಯರಲ್ಲಿ ಒಬ್ಬಾಕೆ ಅಪ್ರಾಪ್ತೆ ಕೂಡ. ಪೋಸ್ಕೋ (Protection of Children from Sexual Offences Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಬ್ರಿಜ್ ಭೂಷಣ್‌ನ ಬಂಧನ ಇನ್ನೂ ಆಗಿಲ್ಲ. ಆಡಳಿತ ಪಕ್ಷದ ಬಲಶಾಲಿ ರಾಜಕಾರಣಿ, ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಇಂತಹ ಗಂಭೀರ ಆರೋಪಗಳು ಎದುರಾದಾಗ, ದೆಹಲಿ ಪೊಲೀಸರು ಎಫ್‌ಐಆರ್ ಹಾಕುವುದರಿಂದ ಹಿಡಿದು, ವಿಚಾರಣೆ ಮುಗಿಸುವವರೆಗೆ ವಿಳಂಬ ನೀತಿಯನ್ನು ಅನುಸರಿಸಿದ್ದಾರೆ. ನ್ಯಾಯ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನ್ನುವುದಕ್ಕೆ ಸಿಂಗ್ ವಿರುದ್ಧದ ಈ ಪ್ರಕರಣವನ್ನು ಪೊಲೀಸರು ನಿರ್ವಹಿಸುತ್ತಿರುವ ರೀತಿ ಸಾಕ್ಷಿಯಾಗಿದೆ. ಬಲಿಪಶುಗಳಾಗಿರುವ ಕುಸ್ತಿಪಟುಗಳ ಮೇಲೆ ಆರೋಪಿಯ ಪ್ರಭಾವದಿಂದ ಒತ್ತಡ ಬೀಳುವ ಸಾಧ್ಯತೆಯಿರುವುದನ್ನು ಕೂಡ ಪೊಲೀಸರು ಪರಿಗಣನೆಗೆ ತೆಗೆದುಕೊಂಡಿಲ್ಲ. ಸಿಂಗ್ ಇಂತಹ ಒತ್ತಡ ಹಾಕುತ್ತಿರುವ ಬಗ್ಗೆ ಕೂಡ ಆರೋಪಗಳು ಬಂದಿವೆ. ಜೂನ್ 6ನೇ ತಾರೀಖು ಆ ಅಪ್ರಾಪ್ತ ಬಾಲಕಿ ಮ್ಯಾಜೆಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ಬದಲಿಸಿದ್ದಾರೆ ಎಂಬ ವರದಿಗಳು ಮೂಡಿಬಂದವು. ಆದರೆ ಅವರ ತಂದೆ ಅದನ್ನು ಅಲ್ಲಗಳೆದಿರುವ ವರದಿಗಳೂ ಪ್ರಕಟವಾದವು. ಎಲ್ಲಾ ಅಪಪ್ರಚಾರಗಳ ನಡುವೆಯೂ ಸಾಕ್ಷಿ ಮಲಿಕ್, ವಿನೇಶ್ ಪೋಘಟ್ ಮುಂತಾದ ಪ್ರತಿಭಟನಾ ನಿರತ ಕುಸ್ತಿಪಟುಗಳು ಯಾವ ರೀತಿಯಲ್ಲೂ ಹೆಜ್ಜೆ ಹಿಂದಿಟ್ಟಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡುತ್ತಲೇ ಇದ್ದಾರೆ.

ಕುಸ್ತಿಪಟುಗಳ ನೋವಿಗೆ ವಿರೋಧ ಪಕ್ಷಗಳು, ಪ್ರಜ್ಞಾವಂತ ನಾಗರಿಕರು ಸ್ಪಂದಿಸಿ ಒಂದು ಮಟ್ಟದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಅದು ಸಂಘಟಿತ ರೂಪ ತಳೆದಿಲ್ಲ. ಇದೇ ಕಾರಣಕ್ಕಾಗಿಯೂ ಸರ್ಕಾರ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೆ ಇಡೀ ಪ್ರಕರಣವನ್ನು ಹಳ್ಳ ಹಿಡಿಸಲು ಕಾಯುತ್ತಿರುವಂತೆ ಭಾಸವಾಗುತ್ತಿದೆ. ಎಫ್‌ಐಆರ್‌ನಲ್ಲಿ ಸಂತ್ರಸ್ತೆಯೊಬ್ಬರು ತಮಗಾಗುತ್ತಿದ್ದ ದೌರ್ಜನ್ಯದ ಬಗ್ಗೆ ಪ್ರಧಾನಿ ಮೋದಿಯವರ ಗಮನಕ್ಕೆ ತಂದದ್ದು ಕೂಡ ದಾಖಲಾಗಿದೆ. ಹೀಗಿದ್ದೂ ಕೂಡ ಪ್ರಧಾನಿ ಸರ್ಕಾರದ ಮುಖ್ಯಸ್ಥರಾಗಿ ಕಡೇ ಪಕ್ಷ ಸಿಂಗ್ ರಾಜೀನಾಮೆಗೆ ಆಗ್ರಹಿಸಿರುವ ಅಥವಾ ಪೊಲೀಸರ ತನಿಖೆ ಚುರುಕುಗೊಳಿಸಲು ಪ್ರಯತ್ನಿಸಿರುವ ಯಾವ ಕುರುಹೂ ಕಂಡುಬರುತ್ತಿಲ್ಲ! ಇದರ ಅರ್ಥ ರಾಜಕೀಯಕ್ಕೋಸ್ಕರ, ಲೈಂಗಿಕ ದೌರ್ಜನ್ಯದ ಆರೋಪಗಳನ್ನೂ ಲಘುವಾಗಿ ಸ್ವೀಕರಿಸಬಲ್ಲೆ ಎನ್ನುವ ಸಂದೇಶ ನೀಡುವುದೇ? ಹೆಣ್ಣುಮಕ್ಕಳ ಬಗೆಗಿನ ಇವರ ಕಾಳಜಿ ಹುಸಿ ಎಂಬುದು ಇದರಿಂದ ಸ್ಪಷ್ಟವಾಗುವುದಿಲ್ಲವೇ? ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಲು ವರ್ಷಗಟ್ಟಲೆ ಹೋರಾಟ ನಡೆಸಿ, ಹಲವು ಬಲಿದಾನಗಳನ್ನು ನೀಡಿದಂತೆ, ಈ ಪ್ರಕರಣದಲ್ಲಿಯೂ ಸರ್ಕಾರ ಅದನ್ನು ಎದುರುನೋಡುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...