Homeಮುಖಪುಟ’ಶ್ಯಾಮನೆಂಬ ಕೃಷ್ಣಕೊಳಲು’ - ಸಾದತ್ ಹಸನ್ ಮಾಂಟೋ ಬರಹ

’ಶ್ಯಾಮನೆಂಬ ಕೃಷ್ಣಕೊಳಲು’ – ಸಾದತ್ ಹಸನ್ ಮಾಂಟೋ ಬರಹ

ಕೇವಲ 43 ವರ್ಷ ಬದುಕಿದ್ದ ಮಾಂಟೋ ಸೃಷ್ಟಿಸಿದ ಸಾಹಿತ್ಯ ಮರೆಯಲಾಗದು. ಇಂದು ಅವರ ಜನ್ಮ ದಿನ, ಅವರ ನೆನಪಿಗಾಗಿ ”ಪುನೀತ್ ಅಪ್ಪು” ಅನುವಾದಿಸಿದ ಮನಮಿಡಿಯುವ ಬರಹ.

- Advertisement -
- Advertisement -

ಭಾರತದ ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಸಾದತ್ ಹಸನ್ ಮಾಂಟೋ ಜನ್ಮದಿನ ಇಂದು. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಕೇವಲ 43 ವರ್ಷ ಬದುಕಿದ್ದ ಮಾಂಟೋ ಸೃಷ್ಟಿಸಿದ ಸಾಹಿತ್ಯ ಮರೆಯಲಾಗದು. ಇಂದು ಅವರ ಜನ್ಮ ದಿನ, ಅವರ ನೆನಪಿಗಾಗಿ ”ಪುನೀತ್ ಅಪ್ಪು” ಅನುವಾದಿಸಿದ ಮನಮಿಡಿಯುವ ಬರಹ.


ಅದು ಬಹುಷಃ ಎಪ್ರೀಲ್ ತಿಂಗಳ 23 ಅಥವಾ 24 ನೇ ತಾರೀಖಾಗಿರಬೇಕು. ನನಗೆ ಸರಿಯಾಗಿ ನೆನಪಿಲ್ಲ. ನಾನು ಲಾಹೋರಿನ ಹುಚ್ಚಾಸ್ಪತ್ರೆಯಲ್ಲಿದ್ದೆ. ಅಲ್ಲಿಗೆ ಯಾವುದೋ ವಾಹನದಲ್ಲಿ ಸಾಗಿದ್ದ ನೆನಪನ್ನು ಮೆಲುಕು ಹಾಕುತ್ತಿರುವಾಗಲೇ ಪತ್ರಿಕೆಯಲ್ಲಿ ಶ್ಯಾಮ್ ಮೃತಪಟ್ಟ ಸುದ್ದಿ ಗೊತ್ತಾಯಿತು.

ನಾನಂತೂ ಆಗ ವಿಚಿತ್ರ ಪರಿಸ್ಥಿತಿಯಲ್ಲಿದ್ದೆ, ಪ್ರಜ್ಞೆ ಮತ್ತು ಅಪ್ರಜ್ಞಾವಸ್ಥೆಗಳ ನಡುವಿನಿಂದ ಜಾರಿಹೋಗುತ್ತಿರುವ ಸ್ಥಿತಿಯಲ್ಲಿ. ಯಾವುದು ಎಲ್ಲಿ ಮುಗಿಯಿತು ಯಾವಾಗ ಯಾವುದು ಆರಂಭವಾಯಿತು ಎಂದು ಗುರುತಿಸಲು ಸಾಧ್ಯವಾಗದಂತಹ ಸ್ಥಿತಿ. ಎರಡೂ ದೇಶಗಳ ನಡುವೆ ಎಂತಹಾ ಬಿಕ್ಕಟ್ಟು ನಿರ್ಮಾಣವಾಗಿತ್ತೆಂದರೆ ನನಗಂತೂ ಯಾರಿಗೂ ಸೇರದ ಎಲ್ಲಿಯೋ ಬಂದು ಬಿದ್ದಿದ್ದೇನೋ ಅಂತಲೇ ಅನಿಸುತ್ತಿತ್ತು.

ಈ ಶ್ಯಾಮನ ಸಾವಿನ ಸುದ್ದಿಯ ವಿಷಯವೊಂದು ನನ್ನ ಕಣ್ಣಿಗೆ ಬಿದ್ದಾಗ ನನಗೆ ಇದು ಯಾಕೋ ನನ್ನ ಕುಡಿತದ ಚಟ ನಿಲ್ಲಿಸಿದ ಕಾರಣದಿಂದ ಆಗುತ್ತಿರಬಹುದಾದ ಅಡ್ಡ ಪರಿಣಾಮ ಅಂತಲೇ ನಾನು ಭಾವಿಸಿದ್ದೆ. ಕಳೆದ ಹಲವಾರು ವಾರಗಳಲ್ಲಿ ನನ್ನ ಹಲವು ಸಂಬಂಧಿಗಳು ನಾನು ಅರೆ-ಪ್ರಜ್ಞಾವಸ್ಥೆಯಲ್ಲಿರುವಾಗಲೇ ಸತ್ತು ಹೋಗಿದ್ದರು; ಆದರೆ ಅವರೆಲ್ಲರೂ ಸರಿಯಾಗಿಯೂ ಜೀವಂತವಾಗಿಯೂ ಇದ್ದು ನನ್ನ ಆರೋಗ್ಯ ಸುಧಾರಿಸಲು ಪ್ರಾರ್ಥಿಸುತ್ತಿದ್ದರೆಂದು ಆಮೇಲೆ ತಿಳಿಯಿತು.

ನನಗೆ ಅಸ್ಪಷ್ಟವಾಗಿ ನೆನಪಿದೆ, ನಾನು ಶ್ಯಾಮನ ಸುದ್ದಿಯನ್ನು ಓದಿದಾಗ ನನ್ನ ಪಕ್ಕದ ಕೊಟಡಿಯ ಸಹ ರೋಗಿಯಲ್ಲಿ ಕೇಳಿದ್ದೆ, ‘ನನ್ನ ಒಬ್ಬ ಆತ್ಮೀಯ ಸ್ನೇಹಿತ ಸತ್ತುಹೋದ ವಿಷಯ ನಿನಗೆ ಗೊತ್ತೇ?’
‘ಯಾರು?’ ಆತ ಕೇಳಿದ.
ಕಣ್ಣೀರು ತುಂಬಿದ ಸ್ವರದಲ್ಲಿ ‘ಶ್ಯಾಮ್’ ಎಂದು ಉತ್ತರಿಸಿದೆ.
‘ಇಲ್ಲಿ? ಹುಚ್ಚಾಸ್ಪತ್ರೆಯಲ್ಲಾ?’
ನಾನು ಆತನ ಪ್ರಶ್ನೆಗೆ ಉತ್ತರಿಸಲಿಲ್ಲ. ಆ ಕ್ಷಣದಲ್ಲಿಯೇ ನನ್ನ ಜ್ವರಗ್ರಸ್ತ ಮೆದುಳಿನಲ್ಲಿ ಹಲವಾರು ದೃಶ್ಯಗಳು ಜೀವಕಳೆ ಪಡೆಯತೊಡಗಿದವು: ಮುಗುಳ್ನಗುತ್ತಿರುವ ಶ್ಯಾಮ್, ಕಿರುಚುತ್ತಿರುವ ಶ್ಯಾಮ್, ಮರಣ ಮತ್ತು ಅದರ ಭೀಕರತೆಯನ್ನು ಅರಿಯದ ಶ್ಯಾಮ್. ಆ ದಿನ ಸುದ್ದಿಯಲ್ಲಿ ಓದಿದ್ದು ಸತ್ಯವಲ್ಲವೆಂದು ನನಗೇ ನಾನೇ ಹೇಳಿಕೊಂಡೆ … ನನ್ನ ಕೈಯ್ಯಲ್ಲಿಯೇ ಇದ್ದ ಆ ಸುದ್ದಿ ಪತ್ರಿಕೆಯನ್ನೂ ನನ್ನ ಯೋಚನೆಗಳ ಒಂದು ತುಣುಕಾಗಿರಬಹುದೆಂದು ನಾನು ಭಾವಿಸಿದೆ.

ಆದರೆ ದಿನಗಳೆದಂತೆ, ಮದ್ಯಪಾನದ ಮಂಜು ನನ್ನ ಮೆದುಳಿನಿಂದ ಸರಿದಂತೆ, ನಾನು ವಾಸ್ತವದ ಮೇಲೆ ನನ್ನ ಹಿಡಿತವನ್ನು ಪುನಃ ಸ್ಥಾಪಿಸಿಕೊಂಡೆ. ಈ ಪ್ರಕ್ರಿಯೆಗಳೆಲ್ಲಾ ಎಷ್ಟೊಂದು ನಿಧಾನವಾಗಿ ಮತ್ತು ಕಳಪೆಯಾಗಿ ಜರುಗಿದವೆಂದರೆ ನಾನು ಕೊನೆಗೆ ಶ್ಯಾಮ ಸತ್ತುಹೋದ ಎಂಬ ವಿಷ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳುವಷ್ಟರಲ್ಲಿ ನನಗೆ ಯಾವುದೇ ಆಘಾತವಾಗಲಿಲ್ಲ. ನನಗೆ ಆತ ಬಹಳ ಹಿಂದೆಯೇ ಸತ್ತುಹೋಗಿರಬಹುದೆಂದು ಅನಿಸಿತ್ತು ಮತ್ತು ನಾನು ಕೂಡಾ ಆತನ ಸಾವಿಗೆ ಹಿಂದೆ ಯಾವುದೋ ಸಮಯದಲ್ಲಿಯೇ ಶೋಕಿಸಿದ್ದೆನೆಂದೂ ಭಾವಿಸಿದೆ.
ಈಗ ಶೋಕದ ಲಕ್ಷಣಗಳು ಮಾತ್ರ ಆಗಾಗ ನೆನಪಿಗೆ ಬರುತ್ತಿದ್ದವು. ಮುರಿದುಬಿದ್ದ ನೆನಪುಗಳ ಅವಶೇಷಗಳ ಮಧ್ಯೆ, ತುಂಡು ತುಂಡಾಗಿ ಬಿದ್ದಿರುವ ಇಟ್ಟಿಗೆಗೆಳ, ಕಲ್ಲುಗಳ ರಾಶಿಯಲ್ಲಿ ಹುದುಗಿರುವ, ಶ್ಯಾಮನಿಗೆ ಸೇರಿರಬಹುದಾದ ಯಾವುದೋ ಒಂದು ನಗುವನ್ನೋ ಅಥವಾ ಹಾಸ್ಯದ ಹೊನಲನ್ನೊ ಪಡೆಯುವ ಆಸೆಯಿಂದ ಮತ್ತೆ ಮತ್ತೆ ಕೆದಕಿ ನೋಡುತ್ತಿದ್ದೆ.

ಹುಚ್ಚಾಸ್ಪತ್ರೆಯ ಹೊರಗೆ, ತಲೆನೆಟ್ಟಗಿರುವವರ ಜಗತ್ತಿನಲ್ಲಿ, ಶ್ಯಾಮನ ಸಾವಿನ ಸುದ್ದಿ ಕೇಳಿದ ನಂತರ ಮಾಂಟೋನಿಗೆ ಹುಚ್ಚು ಹಿಡಿದಿದೆ ಎಂದೇ ನಂಬಿದ್ದರು. ಆದರೆ ಹಾಗೇನಾದರೂ ಆಗಿದ್ದರೆ ನಾನು ಖಂಡಿತವಾಗಿಯೂ ಪಶ್ಚಾತಾಪ ಪಡುತ್ತಿದ್ದೆ. ಯಾಕೆಂದರೆ ಶ್ಯಾಮನ ಸಾವು ನನ್ನನ್ನು ಇನ್ನೂ ವಿವೇಕಿಯನ್ನಾಗಿಸಬೇಕಿತ್ತು. ಬದುಕಿನ ನಶ್ವರತೆಯ ಬಗ್ಗೆ ನನಗಿರುವ ಜ್ಞಾನವನ್ನು ಇನ್ನೂ ಹೆಚ್ಚಿಸಬೇಕಾಗಿತ್ತು. ಈ ಬದುಕಿನಲ್ಲಿ ಇನ್ನೂ ಏನಾದರೂ ಉಳಿದಿದ್ದರೆ ಅದನ್ನೂ ಬದುಕಿಯೇ ಬಿಡೋಣ ಎನ್ನುವಷ್ಟಾದರೂ ಶಕ್ತಿಯನ್ನು ಗಳಿಸಿಕೊಡಬೇಕಾಗಿತ್ತು. ಶ್ಯಾಮನ ಸಾವಿನ ಬಗ್ಗೆ ಕೇಳಿ ಹುಚ್ಚು ಹಿಡಿಯಿತು ಎಂದು ತಿಳಿಯುವುದೇ ದೊಡ್ಡ ಹುಚ್ಚು.

ಪ್ರೇಮದ ದಂತಕತೆಯಾಗಿರುವ ಫರ್ಹಾದ್ ನ ಬಗ್ಗೆ ಒಮ್ಮೆ ಗಾಲಿಬ್ ಹೀಗೆ ಬರೆದಿದ್ದ. ಆತ ತನ್ನ ಪ್ರೇಯಸಿ ಶಿರೀನಳ ಸಾವಿನ ಸುದ್ದಿ ಕೇಳಿದ ತಕ್ಷಣವೇ ಕಲ್ಲು ಕಡಿಯಲು ಬಳಸುತ್ತಿದ್ದ ದೊಡ್ಡ ಆಯುಧವೊಂದರಿಂದ ಒಂದೇ ಪೆಟ್ಟಿಗೆ ತನ್ನ ತಲೆಯೊಡೆದುಕೊಂಡು ಸತ್ತನಂತೆ. ಗಾಲಿಬ್ ಮಾತ್ರ ಇದೊಂದು ಅಮರ ಅದಮ್ಯ ಪ್ರೇಮಿ ಸಾಯುವ ರೀತಿಯೇ ಅಲ್ಲವೆಂದಿದ್ದ. ಅವನಿಗೆ ಸಾಯುವುದಾದರೆ ಅಷ್ಟೊಂದು ಸಾಂಪ್ರದಾಯಿಕ, ತಾಂತ್ರಿಕ ವಿಧಾನವನ್ನು ಬಳಸುವ ಅಗತ್ಯವೇನಿತ್ತು? ಆತ ಆಕೆಯ ಜೊತೆಯಲ್ಲಿ ತನ್ನನ್ನು ತಾನೇ ಕಳೆದುಕೊಳ್ಳಬೇಕಾಗಿತ್ತು. ಆದಕಾರಣ ಈಗ ನಾನು ಹುಚ್ಚನಾಗುವ ಮೂಲಕ ಶ್ಯಾಮನ ಸಾವನ್ನು ಯಾಕೆ ಅಪಮಾನಿಸಲಿ? ಮೊದಲೇ ಆತ ಸಂಪ್ರದಾಯ ವಿರೋಧಿಯಾಗಿದ್ದ.

ಶ್ಯಾಮ್ ಬದುಕಿದ್ದ. ಆತನ ಮುದ್ದಾದ ಎರಡು ಮಕ್ಕಳಲ್ಲಿ, ತಾಜಿ, ಆಕೆಯನ್ನು ‘ತನ್ನ ದೌರ್ಬಲ್ಯ’ ಎಂದೇ ಕರೆಯುತ್ತಿದ್ದ, ಆಕೆಯ ಮೇಲೆ ಆತನಿಗಿದ್ದ ಅದಮ್ಯ ಪ್ರೇಮದ ಪ್ರತೀಕವಾಗಿರುವ ಆ ಮಕ್ಕಳಲ್ಲಿ ಆತ ಜೀವಂತವಾಗಿದ್ದ. ಹಾಗೆ ನೋಡಿದರೆ ಒಂದೊಮ್ಮೆ ತನ್ನ ಪ್ರೀತಿ ತುಂಬಿದ ಹೃದಯಕ್ಕೆ ನೆರಳು ನೀಡಿದ ಆ ಎಲ್ಲಾ ರೇಷ್ಮೆ ಸೆರಗುಗಳ ಹೆಂಗಸರಲ್ಲಿ ಆತ ಜೀವಂತವಾಗಿದ್ದ. ಆತ ಈ ನನ್ನ ಶೋಕತಪ್ತ ಎದೆಯಲ್ಲಿಯೂ ಜೀವಂತವಾಗಿದ್ದ, ಯಾಕೆಂದರೆ ಆತ ಸಾಯುವ ಸಮಯದಲ್ಲಿ ಆತನ ಬಳಿಯಲ್ಲಿದ್ದು ‘ಶ್ಯಾಮ್ ಜಿಂದಾಬಾದ್’ ಎನ್ನಲು ನನಗೆ ಸಾಧ್ಯವಾಗಿರಲಿಲ್ಲ.

ಒಂದಂತೂ ಸತ್ಯ, ಆತ ಮೃತ್ಯು ಚುಂಬನಗೈಯ್ಯುವಾಗಲೂ ಅತ್ಯಂತ ಪ್ರಾಮಾಣಿಕವಾಗಿ ಮತ್ತು ತನ್ನದೇ ಇಸ್ಟೈಲಿನಲ್ಲಿ “ಮಾಂಟೋ, ದೇವರಾಣೆಗೂ ಈ ತುಟಿಗಳು ಹುಚ್ಚುಹಿಡಿಸ್ತಾವೆ ಕಣೋ” ಎನ್ನುತ್ತಿದ್ದ.

ನಾನು ಶ್ಯಾಮ್‌ನ ಬಗ್ಗೆ ಯೋಚಿಸಿದಾಗಲೆಲ್ಲಾ ರಷ್ಯನ್ ಕಾದಂಬರಿಯ ಒಂದು ಪಾತ್ರ ನೆನಪಿಗೆ ಬರುತ್ತದೆ. ಶ್ಯಾಮ ಒಬ್ಬ ಪ್ರೇಮಿಯಾಗಿದ್ದ, ಮತ್ತು ಆತನಿಗೆ ಪ್ರೇಮಿಸುವುದೆಂದರೆ ಕೇವಲ ಲೆಕ್ಕ ಭರ್ತಿಗೋಸ್ಕರವಾಗಿರಲಿಲ್ಲ. ಸುಂದರವಾಗಿರುವ ಏನೇ ಇರಲಿ ಅದಕ್ಕೋಸ್ಕರ ಆತ ಸಾಯಲೂ ಸಿದ್ಧವಾಗಿದ್ದ- ನನಗನಿಸುತ್ತಿದೆ, ಸಾವು ಕೂಡಾ ಅಷ್ಟೊಂದು ಸುಂದರವಾಗಿದ್ದಿರಬೇಕು, ಇಲ್ಲದಿದ್ದರೆ ಶ್ಯಾಮ್ ಸಾಯುತ್ತಲೇ ಇರಲಿಲ್ಲ.

ಆತ ಗಾಢತ್ವವನ್ನು ಪ್ರೀತಿಸುತ್ತಿದ್ದ. ಜನ ಮೃತ್ಯುವಿನ ಕೈಗಳು ಶೀತಲವಾಗಿರುತ್ತದೆ ಎಂದು ಹೇಳುತ್ತಾರೆ, ಆದರೆ ನಾನು ನಂಬುವುದಿಲ್ಲ. ಅದೊಂದು ವೇಳೆ ನಿಜವಾಗಿದ್ದುದೇ ಆದರೆ ಶ್ಯಾಮ್ ಆ ಕೈಗಳನ್ನು ಆಚೆಗೆ ನೂಕಿ, ” ತೊಲಗು ಹೆಣ್ಣೇ, ನಿನ್ನಲ್ಲಿ ಆ ಬಿಸಿಯೇ ಇಲ್ಲ” ಎನ್ನುತ್ತಿದ್ದ.

ಆತ ಒಂದು ಪತ್ರದಲ್ಲಿ ಹೀಗೆ ಬರೆದಿದ್ದ:

“ದೋಸ್ತ್, ಇಲ್ಲಿ ಹೆಚ್ಚು ಕಡಿಮೆ ಎಲ್ಲರೂ ‘ಹಿಪ್ಟುಲ್ಲಾ’ ಆಗಿಬಿಟ್ಟಿದ್ದಾರೆ. ಆದರೆ ನಿಜವಾದ ‘ಹಿಪ್ಟುಲ್ಲಾ’ ಅಂತೂ ತುಂಬಾ ದೂರವಾಗಿಬಿಟ್ಟಿದೆ. ನನಗಂತೂ ದೂರುತ್ತಾ ಕೂರುವಂತಹ ಯಾವುದೇ ಕಾರಣಗಳಿಲ್ಲ… ಬದುಕು ಮುಂದಕ್ಕೆ ಹರಿಯುತ್ತಾ ಇದೆ, ಒಳ್ಳೆಯ ದಿನಗಳು ಮತ್ತು ಕುಡಿತ, ಕುಡಿತ ಮತ್ತು ಒಳ್ಳೆಯ ದಿನಗಳು. ತಾಜಿ ಆರು ತಿಂಗಳ ನಂತರ ವಾಪಾಸಾಗಿದ್ದಾಳೆ. ಅವಳಿನ್ನೂ ನನ್ನ ‘ಅತೀ ದೊಡ್ಡ ದೌರ್ಬಲ್ಯ’ವಾಗಿಯೇ ಉಳಿದಿದ್ದಾಳೆ. ನಿನಗೂ ಗೊತ್ತು ಗೆಳೆಯಾ, ಜೀವನದಲ್ಲಿ ಹೆಣ್ಣಿನ ಪ್ರೀತಿಯ ಬಿಸಿಯಪ್ಪುಗೆಯನ್ನು ಅನುಭವಿಸುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು… ಅಷ್ಟಕ್ಕೂ ನಾನೊಬ್ಬ ಮನುಷ್ಯ, ಸಾಮಾನ್ಯ ಮನುಷ್ಯ.
ನಾನು ಆಗಾಗ ನಿಗರ್‌ಳ (ನಟಿ ನಿಗರ್ ಸುಲ್ತಾನ) ಬಳಿಯೂ ಓಡಾಡಿಕೊಂಡಿರುವೆ, ಆ ಮೊದಲ ದಿನದ ‘ ಚಹಾ’ವನ್ನಂತೂ ಮರೆತಿಲ್ಲ. ಸಂಜೆಗಳಲ್ಲಿ ನಿನ್ನ ಕಾಡು ವಿಚಾರಗಳೂ ನೆನಪಾಗುತ್ತವೆ. ”

ಶ್ಯಾಮ್ ‘ಹಿಪ್ಟುಲ್ಲಾ’ ಎಂಬ ಪದ ಬಳಸಿದ್ದಾನೆ, ಅದರ ಬಗ್ಗೆ ತುಸು ವಿವರಣೆಯ ಅವಶ್ಯಕತೆಯಿದೆ. ನಾನು ಬಾಂಬೇ ಟಾಕೀಸಿಗೆ ಕೆಲಸ ಮಾಡುತ್ತಿದ್ದೆ. ಆ ದಿನಗಳಲ್ಲಿ ಕಮಲ್ ಅಮ್ರೋಹಿಯ ‘ಹವೇಲಿ’ , ನಂತರ ಅದು ‘ಮಹಲ್’ ಎಂಬ ಚಲನಚಿತ್ರವಾಗಿ ಬಂತು, ಅದರ ಕೊನೆಯ ಕೆಲಸಗಳು ಬಾಕಿಯಿದ್ದವು. ಅಶೋಕ್ ಕುಮಾರ್, ವಚ, ಹಝ್ರತ್ ಲೂದಿಯಾನವಿ ಮತ್ತು ನಾನು ದಿನಾಲು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು, ಕೇವಲ ಚಿತ್ರಕಥೆಯ ಮೇಲೆ ಮಾತ್ರವಲ್ಲ ಎಲ್ಲಾ ವಿಷಯಗಳ ಮೇಲೆಯೂ, ಗಾಳಿಸುದ್ದಿಗಳು, ಹಗರಣಗಳೂ ಚರ್ಚೆಯಾಗುತ್ತಿದ್ದವು. ಶ್ಯಾಮ್ ಆ ದಿನಗಳಲ್ಲಿ ‘ ಮಜ್ಬೂರ್’ ಚಿತ್ರದಲ್ಲಿ ವ್ಯಸ್ತನಾಗಿರುತ್ತಿದ್ದ, ಆಗಾಗ ಕೆಲಸಕ್ಕೆ ಚಕ್ಕರ್ ಹೊಡೆದು ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದ.

ನಾನು ಸ್ಟುಡಿಯೋದೊಳಗೆ ಕಾಲಿಡುವಷ್ಟರಲ್ಲಿ ಚಿತ್ರಕಥೆಯ ತಂಡ ಆಗಲೇ ಚರ್ಚೆಯಲ್ಲಿ ತೊಡಗಿತ್ತು. ಕಮಲ್ ಅಮ್ರೋಹಿ ತಮ್ಮದೇ ಆದ ವಿಶಿಷ್ಟ ಮತ್ತು ಕೋರೈಸುವ ಶೈಲಿಯಲ್ಲಿ ಎಪಿಸೋಡೊಂದನ್ನು ವಿವರಿಸುತ್ತಿದ್ದರು. ಆತ ಮುಗಿಸಿದ ಕೂಡಲೇ ಅಶೋಕ್ ನನ್ನತ್ತ ನೋಡಿ ‘ಹೇಗಿದೆ ಮಾಂಟೊ?’ ಎಂದ. ಯಾಕೋ ಗೊತ್ತಿಲ್ಲ, ನನಗೆ ನಾನೇ ‘ಸರಿಯಾಗಿದೆ, ಆದರೆ ಇದರಲ್ಲಿ ಯಾಕೋ ‘ ಹಿಪ್ಟುಲ್ಲಾ’ ಇಲ್ಲ ಅನಿಸುತ್ತಿದೆ’ ಎಂದ ಹಾಗಾಯಿತು. ಆ ಸನ್ನಿವೇಶವು ವೇಗವನ್ನು ಕಳೆದುಕೊಂಡಿದೆ ಎಂದು ಹೇಳಹೊರಟಿದ್ದ ನನಗೆ ಈ ‘ಹಿಪ್ಟುಲ್ಲಾ’ ತನ್ನ ಅರ್ಥವನ್ನು ಪಡೆದುಕೊಂಡಿತು.

ಕಮಲ್ ಅಮ್ರೋಹಿಗೆ ಸಣ್ಣ ಸಣ್ಣ ಸಂಭಾಷಣೆಗಳಲ್ಲೂ ದೊಡ್ಡ ದೊಡ್ಡ ಸಾಹಿತ್ಯಿಕ ಪದಗಳನ್ನು ಬಳಸುವ ಚಾಳಿಯಿತ್ತು. ಅದೇ ನನಗೆ ದೊಡ್ಡ ಸಮಸ್ಯೆಯಾಗುತ್ತಿತ್ತು. ನಾನೇನಾದರೂ ಸರಳವಾದ ಪದಗಳಲ್ಲಿ ವಿವರಿಸಲು ಹೊರಟರೆ ಕಮಲ್ ಅಮ್ರೋಹಿಯ ಮುಖ ಸಣ್ಣದಾಗುತ್ತಿತ್ತು. ಹಾಗೆಂದುಕೊಂಡು ಆತನ ಶೈಲಿಯಲ್ಲಿಯೇ ‘ಭಾರವಾದ’ ಪದಗಳನ್ನು ಬಳಸಿದರೆ ಅವು ವಚ ಮತ್ತು ಅಶೋಕರ ತಲೆಯ ಮೇಲಿನಿಂದಲೇ ಹಾರಿ ಹೋಗುತ್ತಿದ್ದವು. ತದನಂತರ ನಾನು ಎಲ್ಲರಿಗೂ ಸುಲಭವಾಗುವಂತಹ ಒಂದು ವಿಚಿತ್ರ ಪದ ಬಳಕೆಯನ್ನು ರೂಢಿಸಿಕೊಂಡೆ.

ಒಂದು ದಿನ ಬೆಳಿಗ್ಗೆ ನನ್ನ ಮನೆಯಿಂದ ಬಾಂಬೆ ಟಾಕೀಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಓದಲೆಂದು ದಿನ ಪತ್ರಿಕೆಯನ್ನು ಬಿಡಿಸಿದವನು ಅದರಲ್ಲಿನ ಕ್ರೀಡಾ ಸುದ್ದಿಗಳತ್ತ ಹೊರಳಿದೆ. ಬ್ರಬೌರ್ನ್ ಸ್ಟೇಡಿಯಂನಲ್ಲಿ ಆಡಲಾಗಿದ್ದ ಕ್ರಿಕೆಟ್ ಪಂದ್ಯವೊಂದರ ಅಂಕಪಟ್ಟಿಯಿತ್ತು. ಅದರಲ್ಲಿದ್ದ ಒಂದು ವಿಚಿತ್ರ ಹೆಸರು ನನ್ನ ಗಮನಸೆಳೆಯಿತು. ‘ಹಿಪ್ಟುಲ್ಲಾ’ ! ನಾನು ಅಂತಹುದೊಂದು ಹೆಸರನ್ನು ಕೇಳಿಯೇ ಇರಲಿಲ್ಲ. ಬಹುಷಃ ‘ಹಿಬೈತುಲ್ಲಾ’ ಎಂಬ ಹೆಸರಿನ ಅಪಭ್ರಂಶವಾಗಿರಬಹುದೆಂದು ನಾನು ಊಹಿಸಿದೆ.

ನಂತರ ಸಭೆಯಲ್ಲಿ ನಮ್ಮ ‘ಹಝ್ರತ’ರು ಅದೇ ಸನ್ನಿವೇಶವನ್ನು ಇನ್ನೊಂದು ರೀತಿಯಲ್ಲಿ ಪ್ರಸ್ತುತ ಪಡಿಸಿದರು. ನನ್ನ ಅಭಿಪ್ರಾಯವನ್ನು ಕೇಳಿದಾಗ ನಾನು ಪ್ರಜ್ಞಾಪೂರ್ವಕವಾಗಿಯೇ ಹೇಳಿದೆ, ‘ಹಝ್ರತ್, ಇದರಲ್ಲಿ ಏನೂ ವ್ಯತ್ಯಾಸವಾಗಿರುವುದು ಕಂಡು ಬರುತ್ತಿಲ್ಲ. ಯಾವುದಾದರೂ ಒಂದು ‘ಹಿಪ್ಟುಲ್ಲಾ’ ತಂದು ಬಿಡಿ. ಅದೇ ‘ಹಿಪ್ಟುಲ್ಲಾ’ ಎಂದು ಎರಡನೇ ಬಾರಿ ನುಡಿದಾಗ ಇತರರ ಪ್ರತಿಕ್ರಿಯೆಗಾಗಿ ಸುತ್ತಲೂ ನೋಡಿದೆ. ಈ ಹೊಸ ಪದವು ಅವರಿಗೆ ಒಪ್ಪಿಗೆಯಾದುದನ್ನು ನೋಡಿ ನನಗೆ ಸಂತಸವಾಯಿತು. ಮುಂದಿನ ಸಭೆಗಳಲ್ಲಿ ಅದು ಎಲ್ಲರ ಬಾಯಿಯಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಮುಕ್ತವಾಗಿ ಓಡಾಡಿತು. ‘ ಇದರಲ್ಲಿ ಹಿಪ್ಟುಲ್ಲತ್ವ ಇಲ್ಲವೆಂದೋ, ಅಥವಾ ಇದನ್ನು ಹಿಪ್ಟುಲ್ಲೀಕರಣಗೊಳಿಸಬೇಕೆಂದೋ ಅವರು ಮಾತನಾಡುತ್ತಿದ್ದುದ್ದನ್ನು ನಾನು ನೋಡಿದೆ.

ಒಂದು ಹಂತದಲ್ಲಂತೂ ಅಶೋಕ್ ನನ್ನತ್ತ ಬಾಗಿ ಮೆಲ್ಲನೆ ಕೇಳಿಯೇಬಿಟ್ಟ, ಈ ಹಿಪ್ಟುಲ್ಲಾದ ನಿಜವಾದ ಅರ್ಥವೇನೆಂದು ಮತ್ತು ಯಾವ ಭಾಷೆಯಿಂದ ಇದು ಬಂದಿದೆ ಎಂದು. ಅಷ್ಟರಲ್ಲಿ ಶ್ಯಾಮ್ ಕೂಡಾ ಅಲ್ಲಿ ಬಂದು ಸೇರಿಕೊಂಡಿದ್ದ. ಈ ಹೊಸ ಪದವನ್ನು ಕೇಳಿ ಆತ ಎದ್ದುಬಿದ್ದು ನಗತೊಡಗಿದ. ಅವನ ಕಣ್ಣುಗಳು ನಕ್ಕೂ ನಕ್ಕೂ ಕಿರಿದಾಗಿದ್ದವು. ನಾನು ರೈಲಿನಲ್ಲಿ ಈ ವಿಚಿತ್ರ ಪದಾನ್ವೇಷಣೆಗೈದಿದ್ದಾಗ ಆತನೂ ನನ್ನ ಪಕ್ಕದಲ್ಲಿದ್ದ. ಎಲ್ಲರ ಮೇಲೆ ಬೀಳುತ್ತಲೇ ಆತ ‘ ಇದು ಮಾಂಟೋನ ಹೊಸ ಮಾಂಟೋವಾದ’ ಎಂದು ಹೇಳಿದ. ‘ಎಲ್ಲವೂ ವಿಫಲವಾದಾಗ ಈ ಮಾಂಟೋ ‘ಹಿಪ್ಟುಲ್ಲಾ’ವನ್ನು ಚಲನಚಿತ್ರ ಜಗತ್ತಿಗೆ ಎಳೆತಂದಿದ್ದಾನೆ’ ಎಂದು ಹೇಳಿದ. ಬಹುಬೇಗನೇ ಬಾಂಬೆಯ ಚಲನಚಿತ್ರ ಅಡ್ಡೆಗಳಲ್ಲಿ ಈ ಪದ ಚಲಾವಣೆಗೆ ಬಂದಿತು.

ನನಗಿನ್ನೂ ನೆನಪಿದೆ, ಒಮ್ಮೆ ನಾವಿಬ್ಬರೂ ಪುಣೆಯ ಪಾರ್ಕೊಂದರಲ್ಲಿ ನಡೆದಾಡುತ್ತಿದ್ದಾಗ ಶ್ಯಾಮ್ ನನ್ನಲ್ಲಿ ಹೇಳಿದ. ‘ ಮಾಂಟೋ, ಆ ಡೈಮಂಡ್ ಓರ್ವ ಗಟ್ಟಿಗಿತ್ತಿಯಾಗಿದ್ದಳು ಕಣೋ, ದೇವ್ರಾಣೆಗೂ. ಗರ್ಭಪಾತದ ಸ್ಥಿತಿಯನ್ನು ಅನುಭವಿಸಿದ ಹೆಂಗಸು ಜೀವನದಲ್ಲಿ ಯಾವ ಸವಾಲನ್ನಾದರೂ ಎದುರಿಸಬಲ್ಲಳು ಗೊತ್ತಾ ?’ ಶ್ಯಾಮ ತುಸುಹೊತ್ತು ಮಾತು ನಿಲ್ಲಿಸಿದ. ‘ ಆದರೆ ಮಾಂಟೋ, ಈ ಸಂಬಂಧದ ಪ್ರತಿಫಲವನ್ನು ಎದುರಿಸಲು ಹೆಣ್ಣು ಯಾಕೆ ಭಯಪಡಬೇಕು ? ಬಹುಷಃ ಅವಳು ಅದನ್ನು ಆಕೆಯ ಪಾಪದ ಫಲ ಎಂದು ನೋಡುವ ಕಾರಣದಿಂದ ಇರಬಹುದೇ? ಆದರೆ ಏನಿದು ದರಿದ್ರ ಪಾಪ ಪುಣ್ಯಗಳೆಲ್ಲಾ? ಬ್ಯಾಂಕ್ ನೋಟೊಂದು ಅಸಲಿಯೋ ನಕಲಿಯೋ ಆಗಿರಬಹುದು ಆದರೆ ಒಂದು ಮಗು ನೈತಿಕ ಅಥವಾ ಅನೈತಿಕ ಆಗಲು ಹೇಗೆ ಸಾಧ್ಯ? ಅದೇನು ಪ್ರಾಣಿಯೊಂದನ್ನು ಕತ್ತಿಯ ತುದಿಗೊಯ್ದು ಮುಸ್ಲಿಮರ ಪ್ರಕಾರವೋ ಅಥವಾ ಸಿಖ್ಖರ ಪ್ರಕಾರವೋ ಹಲಾಲ್ ಮಾಡುವುದೇ? ಮಗುವೆಂಬುದು ಒಂದೊಮ್ಮೆ ಆದಮ ಮತ್ತು ಈವಳನ್ನು ಕೊಂಡೊಯ್ದ ಅದೇ ಆಧ್ಯಾತ್ಮಿಕ, ಅತ್ತ್ಯುನ್ನತ ಉನ್ಮತ್ತಸ್ಥಿತಿಯ ಪ್ರತಿಫಲವೇ ಅಲ್ಲವೇ? ಅಬ್ಬಾ ! ಅದೆಂತಹಾ ಉನ್ಮತ್ತತೆ! ‘
ನಂತರ ಆತ ಅಸಂಖ್ಯಾತ ಹುಚ್ಚುತನಗಳ ಲೆಕ್ಕಾಚಾರದಲ್ಲಿ ಮುಳುಗಿದ.

ಒಂದು ಸಂಜೆ ಶ್ಯಾಮ್ ರೂಮಿಗೆ ಮರಳುವಾಗ ಎಂದಿನ ಮೂಡಿನಲ್ಲಿರಲಿಲ್ಲ. ಆತ ಆ ಸಂಜೆ ನೋಡಲು ಹೋಗಿದ್ದು ಕೆ.ಕೆ ಎಂಬ ನಟಿಯನ್ನು. (ನಟಿ ಕುಲ್ ದೀಪ್ ಕೌರ್ ಸ್ನೇಹಿತರ ವಲಯದಲ್ಲಿ ಹಾಗೇ ಕರೆಸಿಕೊಳ್ಳುತ್ತಿದ್ದಳು). ಅಂದು ಆಕೆಗೆ ಆತನಲ್ಲಿ ಖಾಸಗಿಯಾಗಿ ಮಾತನಾಡುವುದಿದೆ ಎಂದು ಅವನನ್ನು ಆಕೆ ತಂಗಿದ್ದ ಹೋಟೇಲಿಗೆ ಆಹ್ವಾನಿಸಿದ್ದಳು. ಯಾವಾಗಲೂ ತನ್ನ ಜಾಕಿಟಿನ ಒಳ ಜೇಬಿನಲ್ಲಿ ಅಡಗಿಸಿಡುತ್ತಿದ್ದ ಬ್ರಾಂಡಿಯ ಬಾಟಲಿನಿಂದ ಎರಡು ಲಾರ್ಜ್ ಪೆಗ್ ಗಳನ್ನು (ನೈಂಟಿ ಅಳತೆಯ ಪೆಗ್) ತಯಾರಿಸುತ್ತಾ ಶ್ಯಾಮ್ ಹೇಳಿದ, ‘ ಅವಳು ಮಾತನಾಡ ಬಯಸಿದ್ದ ಖಾಸಗಿ ವಿಷಯ ಏನೆಂದು ಗೊತ್ತಾ ಮಾಂಟೋ ?, ಒಮ್ಮೆ ಲಾಹೋರಿನಲ್ಲಿ ನಾನು ಯಾರಲ್ಲೋ ಹೇಳಿದ್ದೆ ಈ ಕೆ.ಕೆ ಗೆ ನನ್ನ ಮೇಲೆ ಇನ್ನಿಲ್ಲದ ಕ್ರಶ್ ಇದೆ ಅಂತಾ, ಅದು ಹೇಗೋ ಅವಳ ಕಿವಿಗೆ ಬಿದ್ದಿದೆ, ಅವಳಿಗೆ ನನ್ನ ಮೇಲೆ ಕ್ರಶ್ ಇರ್ಲಿಲ್ಲ ಅಂತಾ ಹೇಳೊದನ್ನೇ ಖಾಸಗಿಯಾಗಿ ಮಾತಾಡೋದಿದೆ ಅಂತಾ ಹೇಳಿ ನನ್ನ ಕರೆಸಿದ್ದು ಆ ಚಿನಾಲಿ, ಅದಕ್ಕೆ ನಾನು ಹೇಳಿದೆ ಕ್ರಶ್ ಇಲ್ಲಾಂದ್ರೆ ಇವತ್ತು ರಾತ್ರಿ ಬೆಳೆಸ್ಕೋ ಅಂತಾ, ಅದಕ್ಕೂ ಗಾಂಚಾಲಿ ತೋರ್ಸಿದ್ಳು, ಅಲ್ಲೇ ಒಂದು ಗುದ್ಬಿಟ್ಟೆ ನೋಡು’. ಶ್ಯಾಮ್ ಮುಷ್ಠಿಯನ್ನು ತೋರಿಸಿದ, ಗಾಯವಾಗಿ ರಕ್ತ ಹೆಪ್ಪುಗಟ್ಟಿತ್ತು.

‘ಹೆಂಗಸಿಗೆ ಹೊಡೆದು ಬಿಟ್ಯೇನೋ?’ ನಾನು ಗಾಬರಿಯಿಂದ ಕೇಳಿದೆ.

ಶ್ಯಾಮ್ ನೋವಿನಲ್ಲಿ ಹೇಳಿದ, ‘ಚೆಂಗ್ಲು ಮುಂಡೆ ಪಕ್ಕಕ್ಕೆ ಸರಿದು ಬಿಟ್ಳು, ನಾನು ಗೋಡೆಗೆ ಹೊಡ್ಕೊಂಡೆ’

ಶ್ಯಾಮ್ ಬಹಳ ಹೊತ್ತು ನಗುತ್ತಿದ್ದ, ‘ಚಿನಾಲಿ ಅವಳ ಆಟ ಏನಿದ್ರೂ ನನ್ನ ಪಡೆಯೋದಕ್ಕೋಸ್ಕರಾನೇ’.

ನಾನು ಹಣಕಾಸಿನ ತೊಂದರೆಯ ಬಗ್ಗೆ ಹೇಳುತ್ತಿದ್ದೆನಲ್ಲ… ವಿಭಜನೆಯಾಗಿ ಎರಡು ವರ್ಷಗಳ ನಂತರ ಲಾಹೋರ್ ಚಲನಚಿತ್ರ ಮಂಡಳಿಯ ದುಸ್ಥಿತಿಯನ್ನು ಕಂಡು ನನ್ನ ತಲೆ ವಿಪರೀತ ಹಾಳಾಗಿತ್ತು. ನಾನು ಬರೆದಿದ್ದ ಸಣ್ಣಕಥೆ ‘ಥಂಡಾ ಗೋಶ್ತ್’ (ತಣ್ಣನ್ನ ಮಾಂಸ) ನ ಮೇಲೆ ಅಶ್ಲೀಲ ಸಾಹಿತ್ಯವೆಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಕೆಳನ್ಯಾಯಾಲಯವೊಂದು ನನಗೆ ಮೂರುತಿಂಗಳ ಸಶ್ರಮ ಸಜೆಯನ್ನೂ ಮುನ್ನೂರು ರೂಪಾಯಿಗಳ ದಂಡವನ್ನೂ ವಿಧಿಸಿತ್ತು. ನಾನು ಎಂತಹಾ ಭ್ರಮನಿರಸನಕ್ಕೊಳಗಾಗಿದ್ದೆನೆಂದಂರೆ ನಾನು ಬರೆದಿದ್ದೆಲ್ಲವನ್ನೂ ಬೆಂಕಿಗೆ ಬಿಸಾಕಿ ಸಾಹಿತ್ಯಕ್ಕೆ ಸಂಬಂಧವೇ ಇಲ್ಲದ ಯಾವುದಾದರೂ ಕೆಲಸ ಆರಂಭಿಸಬೇಕೆಂದು ಯೋಚಿಸಿದ್ದೆ. ಯಾವುದಾದರೊಂದು ಚೆಕ್ ಪೋಸ್ಟಿನಲ್ಲಿ ಕೈತುಂಬಾ ಲಂಚ ಪಡೆಯುವ ಕೆಲಸವಾದರೂ ಸರಿ, ಕುಟುಂಬವನ್ನಾದರೂ ಚೆನ್ನಾಗಿ ನೋಡಿಕೊಳ್ಳಬಹುದಲ್ಲಾ ಅನಿಸುತ್ತಿತ್ತು. ಯಾರನ್ನೂ ಟೀಕಿಸಿ ಬರೆಯಬಾರದು, ಯಾವುದರ ಮೇಲೂ ಅಭಿಪ್ರಾಯವನ್ನು ವ್ಯಕ್ತಪಡಿಸಬಾರದು ಎಂದುಕೊಂಡಿದ್ದೆ.

ಅದು ನಿರಾಶೆಯ ಪರಮಾವಧಿಯ ಕಾಲವಾಗಿತ್ತು. ಕೆಲವರಂತೂ ಕಥೆ ಬರೆಯುವುದು ಮತ್ತು ಅದರಲ್ಲಿರುವ ಅಶ್ಲೀಲತೆಯಿಂದಾಗಿ ಕೇಸು ಹಾಕಿಸಿಕೊಂಡು ನ್ಯಾಯಾಲಯಕ್ಕೆ ಅಲೆದಾಡುವುದೇ ನನ್ನ ಪೂರ್ಣಕಾಲಿಕ ವೃತ್ತಿ ಎಂದು ತಿಳಿದಿದ್ದರು. ಇನ್ನು ಕೆಲವರು ನಾನು ಅಗ್ಗದ ಪ್ರಚಾರ ಗಿಟ್ಟಿಸುವುದಕ್ಕೋಸ್ಕರ ಬರೆಯುತ್ತೇನೆ ಎಂದರೆ ಇನ್ನು ಕೆಲವರು ನನಗೆ ಜನರ ಕೆಳಹಂತದ ಭಾವನೆಗಳನ್ನು ಉದ್ರೇಕಿಸುವದರಲ್ಲೇ ಆಸಕ್ತಿ ಎಂದೂ ಸಾರಿದರು. ನಾನು ನಾಲ್ಕು ಸಲ ಕೋರ್ಟ್ ವಿಚಾರಣೆಗೊಳಲಟ್ಟಿದ್ದೆ, ಮತ್ತು ಆ ನಾಲ್ಕು ಕೇಸುಗಳಲ್ಲಿ ನಾನು ಪಟ್ಟ ಪಾಡು ನನಗೊಬ್ಬನಿಗೇ ಗೊತ್ತು.

ವಿಷಮ ದಿನಗಳು ಸಮೀಪಿಸುತ್ತಿದ್ದವು.

ವಿಭಜನೆಯ ಸಮಯ ಭಾರತ ಹಿಂದೆಂದೂ ಕಾಣದ ಹಿಂದೂ – ಮುಸ್ಲೀಮರ ಕೋಮುಗಲಭೆಯನ್ನು ಕಂಡಿತು. ದಿನಂಪ್ರತಿ ಸಾವಿರಾರು ಜನರು ಹತ್ಯೆಗೊಳಗಾಗುತ್ತಿದ್ದರು. ಶ್ಯಾಮ್ ಮತ್ತು ನಾನು ರಾವಲ್ಪಿಂಡಿಯ ಸಿಖ್ ನಿರಾಶ್ರಿತ ಕುಟುಂಬವೊಂದರ ಕರುಣಾಜನಕ ಕಥೆಯನ್ನು ಕೇಳುತ್ತಿದ್ದೆವು. ಅವರ ಕುಟುಂಬದ ಸದಸ್ಯರನ್ನು ಹೇಗೆ ಭೀಕರವಾಗಿ ಹತ್ಯೆಗೈಯ್ಯಲಾಯಿತು ಎಂಬುದನ್ನು ಅವರು ನಮಗೆ ವಿವರಿಸುತ್ತಿದ್ದರು. ಶ್ಯಾಮ್ ತೀವ್ರವಾಗಿ ದುಃಖಿತನಾಗಿರುವುದನ್ನು ನಾನು ಗಮನಿಸಿದ್ದೆ, ಆತನ ನೋವು ನನಗೆ ಅರ್ಥವಾಗಿತ್ತು. ಅಲ್ಲಿಂದ ಹೊರಟಾಗ ನಾನು ಬೇಕೆಂದೇ ಆತನಲ್ಲಿ ಕೇಳಿದೆ, ‘ನಾನೂ ಒಬ್ಬ ಮುಸಲ್ಮಾನ, ನನ್ನನ್ನು ಕೊಲ್ಲಬೇಕೆಂದು ನಿನಗೆ ಅನಿಸೋದಿಲ್ಲವಾ?’.

‘ಈಗ ಅಲ್ಲ’, ಆತ ಗಡುಸಾಗಿಯೇ ಉತ್ತರಿಸಿದ,’ ಆದರೆ, ಮುಸ್ಲೀಮರು ಮಾಡಿದ ದೌರ್ಜನ್ಯಗಳನ್ನು ಕೇಳುತ್ತಿರಬೇಕಾದರೆ… ಬಹುಷಃ ನಾನು ನಿನ್ನನ್ನೂ ಕೊಂದುಬಿಡುತ್ತಿದ್ದೆ’.

ಶ್ಯಾಮನ ಮಾತಿನಿಂದ ನನಗೆ ತೀವ್ರ ಆಘಾತವೇ ಆಯಿತು. ಬಹುಷಃ ನನಗೂ ಆತನನ್ನು ಕೊಂದೇ ಬಿಡಬೇಕೆಂದು ಅನಿಸಿತ್ತು. ಆದರೆ ನಂತರ ನಾನು ಅದರ ಕುರಿತು ಯೋಚಿಸಿದೆ. ಅವತ್ತಿನ ದಿನಗಳಿಗೂ ಇವತ್ತಿಗೂ ಭೂಮಿ ಆಕಾಶಗಳ ವ್ಯತ್ಯಾಸವಿದೆ – ದಿನಂಪ್ರತಿ ಸಾವಿರಾರು ಮುಗ್ಧ ಹಿಂದೂಗಳು ಮತ್ತು ಮುಸಲ್ಮಾನರು ಕೊಲ್ಲಲ್ಪಡುತ್ತಿರುವುದರ ಮೂಲಕಾರಣ ಅಂದು ನನಗೆ ಹೊಳೆದಿತ್ತು.

‘ಈಗ ಆಲ್ಲ… ಆದರೆ ಆ ಸಮಯದಲ್ಲಾಗಿದ್ದರೆ ಮಾತ್ರ ಹೌದು’ ಈ ಮಾತುಗಳನ್ನು ಮೆಲುಕು ಹಾಕುವಾಗ, ನಿಮಗೆ ವಿಭಜನೆಯ ಸತ್ಯಾಂಶಗಳು ತಿಳಿಯಬಹುದು, ಅದಕ್ಕೆ ಉತ್ತರ ಮನುಷ್ಯನ ಸ್ವಭಾವದಲ್ಲಿಯೇ ಇದೆ.

ಮುಂಬಯಿಯಲ್ಲಿ ಕೋಮು ವಾತಾವರಣವು ದಿನದಿಂದ ದಿನಕ್ಕೆ ವಿಷಮಯಗೊಳ್ಳುತ್ತಿತ್ತು. ಅಶೋಕ್ ಮತ್ತು ವಚ ಬಾಂಬೆ ಟಾಕೀಸಿನ ಆಡಳಿತದ ಚುಕ್ಕಾಣಿ ಹಿಡಿದಾಗ, ಕೆಲವು ಹಿರಿಯ ಹುದ್ದೆಗಳು ಹೇಗೋ ಮುಸ್ಲೀಮರ ಪಾಲಾದವು, ಅದು ಅಲ್ಲಿನ ಹಿಂದೂ ಸಿಬ್ಬಂದಿಗಳ ನಡುವೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ವಚನಿಗೆ ಹಲವಾರು ಅನಾಮೇಧೇಯ ಬೆದರಿಕೆ ಪತ್ರಗಳು ಬರತೊಡಗಿದ್ದವು. ಕೊಲೆಯಿಂದ ಹಿಡಿದು ಸ್ಟುಡಿಯೋವನ್ನೇ ಪುಡಿಗುಟ್ಟುವವರೆಗಿನ ಬೆದರಿಕೆಗಳು ಆರಂಭವಾಗಿದ್ದವು. ಆಶೋಕನಿಗಾಗಲೀ ವಚನಿಗಾಗಲೀ ಇದನ್ನು ನಿರ್ವಹಿಸುವ ಶಕ್ತಿಯೂ ಇರಲಿಲ್ಲ..ಕೊನೆಗೆ ನಾನೇ ಬಹುಷಃ ನನ್ನ ಭಾಗಶಃ ಸೂಕ್ಷ್ಮ ವ್ಯಕ್ತಿತ್ವದಿಂದಲೇ ಬಾಗಷಃ ನಾನು ಮುಸ್ಲೀಮನಾಗಿರುವುದರಿಂದಲೋ ಏನೋ, ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಾ ಬಂದೆ. ನನ್ನ ಸೇವೆಗಳನ್ನು ಕೊನೆಗೊಳಿಸುವಂತೆ ಅವರಿಗೆ ನಾನು ಸೂಚಿಸಿದೆ. ಯಾಕೆಂದರೆ ಅಲ್ಲಿನ ಕೆಲವು ಹಿಂದುಗಳು ಸ್ಟುಡಿಯೋದಲ್ಲಿ ಹಲವಾರು ಮುಸ್ಲೀಮರು ತುಂಬುಹೋಗಲು ನಾನೇ ಕಾರಣ ಎಂದುಕೊಂಡಿದ್ದರು. ಆದರೆ ಅಶೋಕ್ ಮತ್ತು ವಚ ಇಬ್ಬರೂ ನಿನಗೆ ತಲೆ ಕೆಟ್ಟಿದೆ ಎಂದು ನನ್ನ ಮಾತುಗಳನ್ನು ತಳ್ಳಿಹಾಕಿದರು.

ನನಗೆ ನಿಜವಾಗಿಯೂ ತಲೆಕೆಟ್ಟಿತ್ತು. ನನ್ನ ಪತ್ನಿ ಮತ್ತು ಮಕ್ಕಳು ಪಾಕಿಸ್ತಾನದಲ್ಲಿದ್ದರು. ಅದು ಭಾರತದ ಭಾಗವಾಗಿರುವಾಗಲೇನೋ ಪರವಾಗಿರಲಿಲ್ಲ. ಆಗೀಗ ಹಿಂದೂ ಮುಸ್ಲೀಂ ಗಲಭೆಗಳೂ ನಡೆಯುತ್ತಿದ್ದವು, ಆದರೆ ಈಗ ಮಾತು ಮಾತ್ರ ಬೇರೆ. ಈಗ ಆ ನೆಲದ ತುಂಡಿಗೆ ಹೊಸ ಹೆಸರಿಡಲಾಗಿತ್ತು. ಆ ಹೊಸ ಹೆಸರು ಆ ನೆಲಕ್ಕೆ ಮಾಡಿದ್ದಾದರೂ ಏನು ಎಂಬುದೇ ನನಗೆ ಅರ್ಥವಾಗುತ್ತಿರಲಿಲ್ಲ. ನಾನು ಎಷ್ಟೇ ಪ್ರಯತ್ನಿಸಿದರೂ ಈಗ ನಮ್ಮದೆಂದು ಹೇಳಲಾದ ಆ ಹೊಸ ಸರಕಾರದ ಮೇಲೆ ನನಗೆ ಯಾವುದೇ ಭಾವನೆಯೂ ಹುಟ್ಟಲಿಲ್ಲ.

ಆಗಸ್ಟ್ ಹದಿನಾಲ್ಕು, ಸ್ವಾತಂತ್ರ್ಯದ ರಾತ್ರಿ, ಮುಂಬಯಿಯಲ್ಲಿ ಅಮೋಘವಾಗಿ ಆಚರಿಸಲಾಗಿತ್ತು. ಪಾಕಿಸ್ತಾನ ಮತ್ತು ಭಾರತವನ್ನು ಎರಡು ವಿಭಿನ್ನ ರಾಷ್ಟ್ರಗಳೆಂದು ಘೋಷಿಸಲಾಗಿತ್ತು. ಸಾರ್ವಜನಿಕರಲ್ಲಿ ಅದ್ಭುತವಾದ ಆನಂದ ಎದ್ದು ಕಾಣುತ್ತಿತ್ತು, ಹಾಗೆಯೇ ಕೊಲೆಸುಲಿಗೆಗಳು ಕೂಡಾ ಅವ್ಯಾಹತವಾಗಿ ನಡೆದಿದ್ದವು.

ಈ ಎರಡು ದೇಶಗಳೊಳಗೆ ನನ್ನ ತಾಯ್ನಾಡು ಯಾವುದೆಂದು ನಿರ್ಧರಿಸುವುದೇ ನನಗೆ ಅಸಾಧ್ಯವಾಯಿತು. ದಿನನಿತ್ಯ ನಿರ್ದಯವಾಗಿ ಚೆಲ್ಲಲ್ಪಡುತ್ತಿರುವ ನೆತ್ತರಿಗೆ ಹೊಣೆ ಯಾರು? ಧರ್ಮದ ಹೆಸರಲ್ಲಿ ರಣಹದ್ದುಗಳು ಕಿತ್ತುಹಾಕಿದ ಆ ಮಾಂಸಗಳ ಎಲುಬುಗಳನ್ನು ಯಾವ ದೇಶಕ್ಕೆ ಸೇರಿಸುವುದು? ನಾವೀಗ ಸ್ವತಂತ್ರರಾಗಿದ್ದೇವೆ, ಆದರೆ ಗುಲಾಮಗಿರಿ ನಿಂತಿದೆಯೇ? ಹಾಗಾದರೆ ನಮ್ಮ ಗುಲಾಮರಾಗುವವರು ಯಾರು? ನಾವು ವಸಾಹತು ಸರಕಾರದ ಪ್ರಜೆಗಳಾಗಿದ್ದಾಗ ನಮಗೆ ಸ್ವಾತಂತ್ರ್ಯದ ಬಗ್ಗೆ ಕನಸು ಕಾಣಬಹುದಾಗಿತ್ತು, ಆದರೆ ಈಗ ನಾವು ಮುಕ್ತರಾಗಿದ್ದೇವೆ, ಇನ್ನು ನಾವು ಕಾಣಬೇಕಾದ ಕನಸು ಯಾವುದು? ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೇ? ಸಾವಿರಾರು ಹಿಂದೂಗಳೂ ಮುಸಲ್ಮಾನರೂ ನಮ್ಮ ಕಣ್ಣೆದುರೇ ಸಾಯುತ್ತಿದ್ದಾರೆ, ಅವರು ಯಾಕೆ ಸಾಯುತ್ತಿದ್ದಾರೆ?

ಈ ಎಲ್ಲಾ ಪ್ರಶ್ನೆಗಳಿಗೆ ಬೇರೆ ಬೇರೆ ಉತ್ತರಗಳಿದ್ದವು: ಭಾರತದ ಉತ್ತರ, ಪಾಕಿಸ್ತಾನದ ಉತ್ತರ, ಬ್ರಿಟೀಷರ ಉತ್ತರ. ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರವಿರುತ್ತಿತ್ತು. ಆದರೆ ನೀವೊಮ್ಮೆ ಸತ್ಯವನ್ನು ಹುಡುಕಲು ಹೊರಟಾಗ ಈ ಯಾವ ಉತ್ತರಗಳೂ ಉಪಯೋಗಕ್ಕೆ ಬರುತ್ತಿರಲಿಲ್ಲ. ಕೆಲವರು , ನಿನಗೆ ಸತ್ಯ ತಿಳಿಯಬೇಕಿದ್ದರೆ 1857 ರ ಸಿಪಾಯಿ ದಂಗೆಯ ರಾಶಿಯಲ್ಲಿ ಹುಡುಕು ಎನ್ನುತ್ತಿದ್ದರು, ಕೆಲವರು ಈಸ್ಟ್ ಇಂಡಿಯಾ ಕಂಪೆನಿಯ ಇತಿಹಾಸ ಹಣಕಲು ಹೇಳುತ್ತಿದ್ದರು, ಇನ್ನು ಕೆಲವರು ಮೊಘಲರ ಸಾಮ್ರಾಜ್ಯವನ್ನು ಅವಲೋಕಿಸಲು ಸಲಹೆ ನೀಡುತ್ತಿದ್ದರು. ಕೊಲೆಗಾರರು ಮತ್ತು ಭಯೋತ್ಪಾದರು ಹಾದಿಬೀದಿಗಳಲ್ಲಿ ಅವ್ಯಾಹತವಾಗಿ ಆರ್ಭಟಿಸುತ್ತಿರುವಾಗ, ರಕ್ತ ಮತ್ತು ಬೆಂಕಿಯ ಅಧ್ಯಾಯಗಳನ್ನು ಬರೆಯುತ್ತಿರುವಾಗ ಇವರು ಮಾತ್ರ ನನ್ನನ್ನು ಭೂತಕಾಲದೆಡೆಗೆ ನೂಕಲು ನೋಡುತ್ತಿದ್ದರು.

ನಾನು ಬಾಂಬೇ ಟಾಕೀಸಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಅಶೋಕ್ ಮತ್ತು ವಚ ಬಂದಾಗಲೆಲ್ಲಾ ನಾನು ಹುಶಾರಿಲ್ಲದವನ ಹಾಗೆ ನಟಿಸುತ್ತಿದ್ದೆ. ಶ್ಯಾಮ್ ನನ್ನನ್ನು ನೋಡಿ ನಗುತ್ತಿದ್ದ. ಅವನಿಗೆ ನಾನು ಏನು ಯೋಚಿಸುತ್ತಿದ್ದೆನೆಂದು ತಿಳಿದಿತ್ತು. ನಾನು ವಿಪರೀತ ಕುಡಿಯಲು ಆರಂಭಿಸಿದ್ದೆ, ಕೊನೆಗೆ ಅದೂ ಸಾಕಾಗಿ ಬಿಟ್ಟುಬಿಟ್ಟೆ. ಸದಾ ಅಮಲಿನಲ್ಲಿರುವವನ ಹಾಗೆ ಸೋಫಾದಲ್ಲಿ ಬಿದ್ದುಕೊಳ್ಳುತ್ತಿದ್ದೆ. ಒಂದು ದಿನ ಶ್ಯಾಮ್ ಸ್ಟುಡಿಯೋದಿಂದ ಸೀದಾ ನನ್ನ ಕೊಠಡಿಗೆ ಬಂದ. ನಾನು ಕೆಲಸವಿಲ್ಲದವನಂತೆ ಸೋಫಾದಲ್ಲಿ ಬಿದ್ದುಕೊಂಡಿದ್ದೆ. ಆತ ಅಡಿಕೆಯನ್ನು ಕಡಿಯುತ್ತಾ, ‘ಖ್ವಾಜಾ, ಹೋಗೋಣವೇ ‘ ಎಂದು ಕೇಳಿದ.

ನಾನು ಬೇಸರದಲ್ಲಿದ್ದೆ. ಇವನ್ಯಾಕೆ ನನ್ನ ತರಾ ಯೋಚಿಸುವುದಿಲ್ಲ? ಅದೆಷ್ಟು ಶಾಂತವಾಗಿದ್ದಾನೆ? ನನ್ನ ಎದೆಯೊಳಗಿಂದ, ಆತ್ಮದೊಳಗಿಂದ ಉಕ್ಕುತ್ತಿರುವ ಈ ನೋವು ಆಕ್ರೋಶಗಳು ಇವನಿಗೇಕೆ ಹುಟ್ಟುವುದಿಲ್ಲ? ಅದು ಹೇಗೆ ನಗುತ್ತಾ ತಮಾಷೆ ಮಾಡುತ್ತಾ ಕಾಲಕಳೆಯುತ್ತಾನೆ? ಅಥವಾ ಈ ಜಗತ್ತಿಗೆ ಸಂಪೂರ್ಣವಾಗಿ ಹುಚ್ಚು ಹಿಡಿದಿರುವಾಗ ಅದರ ಬಗ್ಗೆ ಯೋಚಿಸುವುದೇ ವ್ಯರ್ಥ ಎಂಬ ತೀರ್ಮಾನಕ್ಕೆ ಆತ ಬಂದುಬಿಟ್ಟಿದ್ದಾನೆಯೇ?

ಅದು ತೀರಾ ಬೇಗನೇ ನಡೆದಿತ್ತು. ಒಂದು ದಿನ ನನಗೆ ನಾನೇ ಹೇಳಿಕೊಂಡಿದ್ದೆ. ‘ ಎಲ್ಲವೂ ಹಾಳಾಗಿಹೋಗಲಿ, ನಾನು ಹೊರಡುತ್ತಿದ್ದೇನೆ’. ಆ ದಿನ ರಾತ್ರಿ ಶ್ಯಾಮ್ ಚಿತ್ರೀಕರಣದಲ್ಲಿದ್ದ. ನಾನು ಎಚ್ಚರವಿದ್ದು ನನ್ನ ಸಾಮಾನುಗಳನ್ನು ಮೂಟೆಕಟ್ಟಿದೆ. ಆತ ಬೆಳಿಗ್ಗೆ ಬೇಗನೇ ಬಂದಿದ್ದ. ಸುತ್ತಮುತ್ತ ನೋಡಿದವನೇ ,’ ಹೊರಟಿದ್ದೀಯಾ ?’ ಎಂದು ಕೇಳಿದ. ನಾನು ‘ಹೌದು’ ಎಂದು ಉತ್ತರಿಸಿದೆ.

ನಾವು ಮತ್ತೆ ಆ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಆತ ಅತ್ತ ಇತ್ತ ಸಾಗಿಸಲು ಸಹಾಯಮಾಡಿದ. ಹಾಗೆಯೇ ಆತನ ಎಂದಿನ ಚಿತ್ರೀಕರಣದ ರಂಜನೆಗಳನ್ನು ಹೇಳುತ್ತಾ ನನಗೆ ಮುದನೀಡಲು ಪ್ರಯತ್ನಿಸಿದ. ಆತ ತುಂಬಾ ನಗುತ್ತಿದ್ದ. ನಾನು ಹೊರಡುವ ಸಮಯ ಬಂದಾಗ ಆತ ಬ್ರಾಂಡಿಯ ಬಾಟಲೊಂಡನ್ನು ಹೊರತೆಗೆದು ಎರಡು ಲಾರ್ಜ್ ಪೆಗ್ ತಯಾರಿಸಿದ, ಒಂದು ಗ್ಲಾಸ್ ನನ್ನ ಕೈಗಿತ್ತು ‘ ಹಿಪ್ಟುಲ್ಲಾ’ ಎಂದ. ನಾನು ‘ಹಿಪ್ಟುಲ್ಲಾ’ ಎಂದು ಉತ್ತರಿಸಿದೆ.

ನಂತರ ಆತ ನನ್ನ ಕೊರಳಿನ ಸುತ್ತ ಕೈಗಳನ್ನು ಹಾಕುತ್ತಾ ಅಪ್ಪಿಕೊಂಡು, ‘ಲೋ ಹಂದಿ’ ಎಂದ.

ನಾನು ಕಣ್ಣೀರನ್ನು ತಡೆದುಕೊಳ್ಳುತ್ತಾ, ‘ಪಾಕಿಸ್ತಾನಿ ಹಂದಿ’ ಎಂದೆ.

ಆತ, ‘ಜಿಂದಾಬಾದ್ ಪಾಕಿಸ್ತಾನ್’ ಎಂದ.

ನಾನೂ ಧ್ವನಿಸೇರಿಸಿದೆ, ‘ಜಿಂದಾಬಾದ್ ಹಿಂದೂಸ್ತಾನ್ ‘


ಮೂಲಹಸನ್ ಸಾದತ್ ಮಾಂಟೋ
ಅನುವಾದ ಪುನೀತ್ ಅಪ್ಪು


ಇದನ್ನೂ ಓದಿ: ಪಿಸುಮಾತಿನ ರಾತ್ರಿಗಳು; ಮಾಂಟೋ ಜನ್ಮದಿನಕ್ಕೊಂದು ಕತೆ


ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...