Homeಮುಖಪುಟನಿಮ್ಮ ಮಾಹಿತಿ ಸೋರಿಕೆಗೆ ನಿಮ್ಮದೇ ಒಪ್ಪಿಗೆ; ಖಾಸಗಿ ಮಾಹಿತಿ ಕದಿಯುವ ಆಪ್‌ಗಳಿವು

ನಿಮ್ಮ ಮಾಹಿತಿ ಸೋರಿಕೆಗೆ ನಿಮ್ಮದೇ ಒಪ್ಪಿಗೆ; ಖಾಸಗಿ ಮಾಹಿತಿ ಕದಿಯುವ ಆಪ್‌ಗಳಿವು

ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆಧಾರ್‌ ಕಾರ್ಡಿಗೆ ವಿರೋಧ ವ್ಯಕ್ತಪಡಿಸುವ ನಾವು ನಮ್ಮದೆ ಮಾಹಿತಿ ಸೋರಿಕೆಗೆ ನಮ್ಮದೇ ಒಪ್ಪಿಗೆ ನೀಡುತ್ತಿದ್ದೇವೆ.

- Advertisement -
- Advertisement -

ಫೇಸ್‌ಬುಕ್, ಆ ಬುಕ್, ಈ ಬುಕ್ ಎಂದೆಲ್ಲಾ ನೋಡಿದವರು ನೀವು. ನಿಮ್ಮ ಫೇಸನ್ನೇ ಬದಲಿಸುವ FaceApp ಬಂದಿದೆ. ಹೌದು! ನಿಮ್ಮ ಮುಖವನ್ನೇ ಅದು ನಿಮಗೆ ಬೇಕೆಂದಂತೆ ಬದಲಿಸಿ ಕೊಡುತ್ತದೆ. ನಿಮ್ಮಮುಖವನ್ನು ಅದು ಗಂಡಸರಾದರೆ ಗಡ್ಡ ಇಟ್ಟೋ ಇಲ್ಲದೆಯೋ, ಹಿಂದೆ ಇದ್ದಂತೆಯೋ ಮುಂದೆ ಆಗುವಂತೆಯೋ ತೋರಿಸುತ್ತದೆ. ಗಡ್ಡವನ್ನು ಬೇಕೆಂದರೆ ಬಿಳಿಮಾಡಬಹುದು. ಹೆಂಗಸರಾದರೂ ಅಷ್ಟೇ! ಬೇಕೆಂದರೆ ನಿಮ್ಮ ಲಿಂಗ ಪರಿವರ್ತನೆಯನ್ನೂ ಮಾಡುತ್ತದೆ ಈ App! ಅದೇ ರೀತಿ voila ಆಪ್ ಕೂಡ ಬಂದಿದೆ. ನಿಮ್ಮ ಫೋಟೊವನ್ನು ಸುಂದರವಾಗಿ ಕಾಣಿಸುತ್ತದೆ. ಎಲ್ಲರೂ ನಂದೂ ಒಂದು ಇರಲಿ ಅಂತ ಹಂಚಿಕೊಳ್ಳುತ್ತಿದ್ದಾರೆ. ‘ವಾಟ್ ಫನ್’ ಅಲ್ಲವೇ? ತಮಾಷೆಯಾಗಿದೆ. ನೆಟ್ಟಿಗರ ಭಾಷೆಯಲ್ಲಿ ಕೂಲ್! ಇದೀಗ ಇದು ವೈರಲ್ ಆಗಿ, ಸೋಷಿಯಲ್ ಟ್ರೆಂಡ್ ಕೂಡಾ ಆಗಿದೆ. ಇದರಲ್ಲಿ ಇರುವ ಅಪಾಯಗಳ ಬಗ್ಗೆ ಎಚ್ಚರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ.

ಈ FaceApp ನೀವು ಕೂಡಾ ಈಗಾಗಲೇ ಬಳಸಿರಬಹುದು. ಫೇಸ್‌ಬುಕ್‌ನಲ್ಲಿ ನಿಮಗೆ ಪರಿಚಿತವಾದ ಬುದ್ದಿವಂತ ಮುಖಗಳು ‘ನಲ್ವತ್ತು ವರ್ಷಗಳ ನಂತರ ನಾನು’ ಎಂದು ಹಾಕಿಕೊಂಡಿರುವುದನ್ನು ಈಗಾಗಲೇ ಕಂಡಿರಬಹುದು. ಆದರೆ, ಇದು ಕಣ್ಣಿಗೆ ಕಾಣುವಷ್ಟು ಮುಗ್ಧ App ಅಲ್ಲ. ಇದೊಂದು ರಷ್ಯಾ ಮೂಲದ ವಂಚಕ App ಆಗಿದ್ದು, ಇದನ್ನು ಡೌನ್‌ಲೋಡ್ ಮಾಡುವಾಗ ಎಲ್ಲಾ App ಗಳಲ್ಲಿ ಇರುವಂತೆ ನೀವೊಂದು ಬಳಕೆದಾರರ ಒಪ್ಪಂದಕ್ಕೆ ಇಲೆಕ್ಟ್ರಾನಿಕ್ ರೂಪದಲ್ಲಿ ಸಹಿ ಮಾಡಿರುತ್ತೀರಿ. ಸಾಮಾನ್ಯವಾಗಿ ಅಷ್ಟು ಉದ್ದದ, ಚಿಕ್ಕ ಅಕ್ಷರಗಳ, ಕಾನೂನಿನ ಭಾಷೆಯಲ್ಲಿರುವ ಇಂತಹಾ ಒಪ್ಪಂದಗಳನ್ನು ಯಾರೂ ಓದಲು ಹೋಗುವುದಿಲ್ಲ. ‘ಐ ಎಗ್ರೀ’ ಬಟನ್ ಒತ್ತಿ ಬಿಡುತ್ತೀರಿ.

ಸಾಮಾನ್ಯವಾಗಿ, ಇದರಲ್ಲಿ Face ಎಂಬ ಪದ ಇರುವುದರಿಂದ ಇದು ಪೂರ್ತಿಯಾಗಿ ಅಲ್ಲವಾದರೂ, ಸಾಕಷ್ಟು ವಿಶ್ವಾಸಾರ್ಹವಾದ ಫೇಸ್‌ಬುಕ್‌ನದ್ದೇ ಒಂದು ಸಹ ಉತ್ಪನ್ನ ಇರಬಹುದೆಂದು ಜನರು ನಂಬುವ ಸಾಧ್ಯತೆ ಹೆಚ್ಚು. ಆದರೆ, ಇಲ್ಲಿ ಹಾಗೆ ಮಾಡುವುದರಿಂದ ನೀವು ನಿಮ್ಮ ಚಿತ್ರಗಳು, ಹೆಸರುಗಳು ಮತ್ತಿತರ ಮಾಹಿತಿಗಳನ್ನು ಈ ರಷ್ಯನ್ ಕಂಪೆನಿಗೆ ಅದು ಇಚ್ಛಿಸಿದ ರೀತಿಯಲ್ಲಿ ಬಳಸಿಕೊಳ್ಳುವ ಅಧಿಕಾರವನ್ನು ಧಾರೆಯೆರೆದು ಕೊಡುತ್ತೀರಿ. ನಿಮ್ಮ ಚಿತ್ರವನ್ನು ‘ಇಚ್ಛಿಸಿದ ರೀತಿ’ ಬಳಸಿಕೊಳ್ಳುವುದೆಂದರೆ ಏನೂ ಆಗಬಹುದು ಊಹಿಸಿ ನೋಡಿ. ಅದನ್ನು ನಗ್ನವಾಗಿ ಬಳಸಿ ದುರುಪಯೋಗಪಡಿಸಿಕೊಂಡರೂ ನೀವು ಮಾತಾಡುವಂತಿಲ್ಲ. ಮತ್ತೆ ನೀವು ಈ ಒಪ್ಪಂದದಿಂದ ಹಿಂದೆ ಸರಿಯುವಂತೆಯೂ ಇಲ್ಲ. ಫೇಸ್‌ಬುಕ್ ಮತ್ತು ಈ Appಗೆ ಸಂಬಂಧವೇ ಇಲ್ಲ. ಇದೇ ರೀತಿಯ ಮತ್ತೊಂದು ಆಪ್ ವೊಯ್ಲ (Voila) ಅಷ್ಟೆ.


ಇದನ್ನೂ ಓದಿ: ಗಡಿ ಉದ್ವಿಗ್ನತೆಯ ಮಧ್ಯೆಯೂ ಭಾರತದಲ್ಲಿ ಬ್ಯಾಂಕ್ ಆಫ್ ಚೀನಾ ಮೊದಲ ಶಾಖೆ ತೆರೆಯಿತೆ ?; ಫ್ಯಾಕ್ಟ್ ಚೆಕ್

ಇಲ್ಲಿರುವ ಕಾನೂನು ಭಾಷೆಯ ಬಳಕೆದಾರರ ಒಪ್ಪಂದವನ್ನು ಸ್ಥೂಲವಾಗಿ ಮತ್ತು ಸರಳವಾಗಿ ಹೀಗೆ ಅನುವಾದಿಸಲಾಗಿದೆ: ‘ನಿಮ್ಮ ಬಳಕೆದಾರ ಹೆಸರು, ಮಾಹಿತಿ, ಇತರ ಹೆಸರುಗಳನ್ನು ಪುನರುತ್ಪಾದಿಸಲು, ಬದಲಿಸಲು, ಬಳಸಲು, ಬಳಸಿಕೊಳ್ಳಲು, ಅನುವಾದಿಸಲು, ರೂಪಾಂತರಿಸಲು… ಈಗಿರುವ ಮತ್ತು ಮುಂದೆ ಅಭಿವೃದ್ಧಿಪಡಿಸಬಹುದಾದ ಎಲ್ಲಾ ರೀತಿಯ ವೇದಿಕೆಗಳಲ್ಲಿ, ಮಾಧ್ಯಮ ರೂಪಗಳಲ್ಲಿ…ವಿತರಿಸಲು, ಸಾರ್ವಜನಿಕವಾಗಿ ಪ್ರದರ್ಶಿಸಲು…ಯಾವುದೇ ಪರಿಹಾರ ಇಲ್ಲದೆ… ನಿರಂತರ, ಹಿಂತೆಗೆದುಕೊಳ್ಳಲಾಗದ, ಯಾವುದೇ ಪರಿಹಾರ ಇಲ್ಲದ, ಸಂಪೂರ್ಣ ಪಾವತಿ ಆಗಿರುವ, ವಿಶ್ವವ್ಯಾಪಿ, ವರ್ಗಾಯಿಸಬಹುದಾದ, ಉಪಗುತ್ತಿಗೆ ನೀಡಬಹುದಾದ ಪರವಾನಿಗೆಯನ್ನು ನೀವು Voila ಮತ್ತು FaceAppಗೆ ನೀಡಿರುತ್ತೀರಿ’.

ಇದರಿಂದ ನಿಮಗೆ ನೀವು ಯಾವ ರೀತಿಯ ಗುಲಾಮಿ ಒಪಂದಕ್ಕೆ ಸಹಿ ಹಾಕಿದ್ದೀರಿ ಅಥವಾ ಹಾಕಲಿದ್ದೀರಿ ಎಂಬುದು ಅರ್ಥವಾದೀತು. ಇಲ್ಲಿನ ಕಾನೂನು ಭಾಷೆಯ ಒಪ್ಪಂದವನ್ನು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದರೂ ಅದರ ವ್ಯಾಪಕತೆಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ; ಅದಕ್ಕೆ ವಕೀಲರೇ ಬೇಕು.

ಇತ್ತೀಚೆಗೆ ಬಹಿರಂಗೊಂಡ ‘ಫೇಸ್‌ಬುಕ್-ಕ್ಯಾಂಬ್ರಿಜ್ ಅನಾಲಿಟಿಕಾ ಡಾಟಾ ಹಗರಣ’ವು ನಾವು ಇಂತಹಾ Appಗಳಿಗೆ ನೀಡುವ ಮಾಹಿತಿಗಳು ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದನ್ನು ತಿಳಿಸಿಕೊಟ್ಟಿತು. ಅದಕ್ಕಾಗಿ ಫೇಸ್‌ಬುಕ್ ಬಹಿರಂಗ ಕ್ಷಮಾಪಣೆಯನ್ನೂ ಕೇಳಿತು.

ಹಿಂದೆಯೂ ಫೇಸ್‌ಬುಕ್‌ನಲ್ಲಿ ನಿಮ್ಮ ನೆಚ್ಚಿನ ಗೆಳೆಯರು ಯಾರು, ನೀವು ಯಾರನ್ನು ಹೋಲುತ್ತೀರಿ, ನೀವು ಹಾಗಿದ್ದರೆ ಹೇಗೆ, ಹೀಗಿದ್ದರೆ ಹೇಗೆ… ಇತ್ಯಾದಿಯಾಗಿ ಹಲವಾರು Appಗಳು ಬಂದಿದ್ದವು. ಮಕ್ಕಳು, ಯುವಕರು ಬಿಡಿ, ಮಧ್ಯವಯಸ್ಕರೂ, ಮುದುಕರೂ ಮಕ್ಕಳನ್ನೂ ನಾಚಿಸುವ ಉತ್ಸಾಹದಲ್ಲಿ ಇದರಲ್ಲಿ ಪಾಲುಗೊಂಡಿದ್ದರು. ಸಾಮಾನ್ಯವಾಗಿ ಇಂತಹಾ Appಗಳು ನಿಮ್ಮ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಹೇಳಿ, ಅದನ್ನು ಬಹಿರಂಗಪಡಿಸದಿರುವ ಒಪ್ಪಂದಕ್ಕೆ ಒಳಗಾಗುತ್ತವೆ. ಆದರೆ, ಇಲ್ಲಿ ಈ ಕಂಪೆನಿಯು ಅದೇ ರೀತಿ ಕಾಣುವ ಒಪ್ಪಂದದ ಮೂಲಕ ಜನರನ್ನು ವಂಚಿಸಿದೆ.


ಇದನ್ನೂ ಓದಿ: ಕೇರಳ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರನ ಸಿನೆಮಾ: ಹಿಂದುತ್ವವಾದಿಗಳ ದ್ವೇಷಾಭಿಯಾನ ಪ್ರಾರಂಭವಾಗುತ್ತಿದ್ದಂತೆ ಮೂವರು ನಿರ್ದೇಶಕರಿಂದ ಅದೇ ಕಥಾವಸ್ತುವಿಟ್ಟುಕೊಂಡು ಇನ್ನೂ ಮೂರು ಸಿನೆಮಾ ಮಾಡುವುದಾಗಿ ಘೋಷಣೆ

ನ್ಯೂಟ್ರಲ್ ನೆಟ್‌ವರ್ಕ್ ಟೆಕ್ನಾಲಜಿ ಎಂಬ ತಂತ್ರಜ್ಞಾನ ಬಳಸಿ ವಾಸ್ತವಕ್ಕೆ ಬಹಳಷ್ಟು ಹತ್ತಿರವಿರುವ ಚಿತ್ರಗಳನ್ನು ನೀಡುವ ಈ App, ರಷ್ಯಾದ ವೈರ್‌ಲೆಸ್ ಲ್ಯಾಬ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿರುದಂತದ್ದು. ಈ ಸಂಸ್ಥೆ ಈಗಾಗಲೇ ಎರಡು ಬಾರಿ ಈ ಮಾಹಿತಿಗಳನ್ನು ಜನಾಂಗೀಯ ನಿಂದನೆಗೆ ಸಂಬಂಧಿಸಿ ಬಳಸುವುದರ ಮೂಲಕ ವಿವಾದಕ್ಕೆ ಒಳಗಾಗಿ ಕುಖ್ಯಾತಿ ಪಡೆದಿದೆ. ಇಂದು ಮಾಹಿತಿ ಮಾರುಕಟ್ಟೆಯು ಬಿಲಿಯನ್ ಡಾಲರ್ ಉದ್ದಿಮೆಯಾಗಿದ್ದು, ಬಂಡವಾಳಶಾಹಿಯು ಅದನ್ನು ಉತ್ಪನ್ನಗಳ ಮಾರಾಟಕ್ಕೆ, ಚುನಾವಣೆಗೆ, ತಂತ್ರಗಾರಿಕೆ ರೂಪಿಸಲು, ಜನರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ತನಗೆ ಬೇಕಾದಂತೆ ತಿದ್ದಲು ಬಳಸಿಕೊಳ್ಳುತ್ತದೆ.

ಇಂಟರ್ನೆಟ್ ಜಗತ್ತಿನಲ್ಲಿ ಯಾವುದಕ್ಕೂ ಮಿತಿ ಇಲ್ಲ. ಅಶ್ಲೀಲ ಚಿತ್ರಗಳು, ಹಿಂಸೆಯ ಕ್ರೂರ ಚಿತ್ರಗಳು, ಮಾನಸಿಕ ವಿಕೃತಿಯ ಚಿತ್ರಗಳು ಅತ್ಯುತ್ತಮ ಮಾಹಿತಿಗಳ ಜೊತೆಜೊತೆಗೇ ಸಿಗುತ್ತವೆ. ಬ್ಲೂ ವೇಲ್‌ನಂತಹಾ ಆಟಗಳು ಪ್ರಪಂಚದಾದ್ಯಂತ ಹಲವಾರು ಮುಗ್ಧ ಮಕ್ಕಳ ಪ್ರಾಣಕ್ಕೆ ಎರವಾದುದನ್ನು ಕಂಡಿದ್ದೇವೆ. ಇವತ್ತು ಹಲವು ಮಕ್ಕಳು ಪಬ್‌ಜೀಯಂತಹಾ ಆಟಗಳಿಗೆ ಗುಲಾಮರಾಗಿ ಹಿಂಸಾಪ್ರವೃತ್ತಿ ಬೆಳೆಸಿಕೊಂಡು, ಓದನ್ನು ನಿರ್ಲಕ್ಷಿಸುತ್ತಿರುವುದನ್ನು ಕಾಣಬಹುದು. ಈ ಆಟದ ಆನ್ಲೈನ್ ಸ್ಪರ್ಧೆಗಳೂ ನಡೆಯುತ್ತಿವೆ. ಓದುವಂತೆ ಹೇಳಿದರೆ, “ನನಗೊಂದು ಲ್ಯಾಪ್‌ಟಾಪ್, ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಡಿ ಪಬ್‌ಜಿಯಲ್ಲಿ ಲಕ್ಷಾಂತರ ಸಂಪಾದಿಸಿಕೊಡುತ್ತೇನೆ” ಎಂದು ಹದಿಹರೆಯದ ಮಕ್ಕಳು ಹೆತ್ತವರಿಗೆ ಹೇಳುವಷ್ಟು ಮುಗ್ಧ ಹುಚ್ಚಾಟದ ತನಕ ಇದು ಮುಟ್ಟಿದೆ. ಮಕ್ಕಳು ಮಕ್ಕಳೇ! ಆದರೆ ಬೆಳೆದವರು, ಬುದ್ಧಿವಂತರೆಸಿಕೊಂಡವರೂ Voila, FaceApp ನಂತಹ ವಂಚನೆಗೆ ಗುರಿಯಾಗುತ್ತಿರುವುದು ಆತಂಕದ ವಿಷಯ. ಇಡೀ ಇಂಟರ್ನೆಟ್ ವಿಷಯದಲ್ಲಿ ಒಂದು ಅಂತರರಾಷ್ಟ್ರೀಯ ಒಪ್ಪಂದ ಆಗಬೇಕಾದುದು ಅತ್ಯಗತ್ಯ. ಕ್ಯೂಬಾ ಈಗಾಗಲೇ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ.

ಅದಿರಲಿ, ಬಹಳಷ್ಟು ಭಾರತೀಯರು ಆಧಾರ್‌ ಕಾರ್ಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧಕ್ಕೆ ಕಾರಣವೆಂದರೆ ಮಾಹಿತಿ ಸೋರಿಹೋಬಹುದು ಎಂಬುದು ಒಂದಾದರೆ, ಸರ್ವಾಧಿಕಾರಿ ಸರಕಾರವೊಂದು ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸಿ ತನ್ನ ವಿರೋಧಿಗಳನ್ನು ಬಗ್ಗುಬಡಿಯುವ ಈ ಮಾಹಿತಿಗಳನ್ನು ಬಳಸಬಹುದು ಎಂಬುದು ಇನ್ನೊಂದು. ಇತ್ತೀಚೆಗೆ ಡ್ರೈವಿಂಗ್ ಲೈಸನ್ಸ್‌ಗಾಗಿ ನೀಡಿದ ಮಾಹಿತಿಯನ್ನು ಸರಕಾರವೇ 20 ಕೋಟಿ ರೂ.ಗಳಂತೆ ಹಲವು ಕಂಪೆನಿಗಳಿಗೆ ಮಾರಿರುವ ಸುದ್ದಿ ಬಂದಿದೆ. ಬೇರೆ ದೇಶಗಳಲ್ಲಾಗಿದ್ದರೆ ದೊಡ್ಡ ಹಗರಣವಾಗಿ ಗದ್ದಲವಾಗುತ್ತಿತ್ತು.

ಹೀಗಿರುವಾಗ ನಾವಾಗಿಯೇ ಮೂರ್ಖತನದಿಂದಲೋ, ಅಜ್ಞಾನದಿಂದಲೋ ವಿದೇಶಿ ಸಂಸ್ಥೆಯೊಂದಕ್ಕೆ ನಮ್ಮ ಮಾಹಿತಿ ದುರುಪಯೋಗಕ್ಕೆ ಮುಕ್ತ ಅನುಮತಿ ನೀಡುವ ಗುಲಾಮಿ ಒಪ್ಪಂದಕ್ಕೆ ಸಹಿಹಾಕುತ್ತಿರುವುದು ನಾಚಿಕೆಗೇಡು. ಇನ್ನಾದರೂ ಯಾವುದೇ App ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಕನಿಷ್ಟ ಮೇಲುಮೇಲಾದರೂ ಗ್ರಾಹಕ ಒಪ್ಪಂದವನ್ನು ಓದಿಕೊಳ್ಳೋಣ.


ಓದಿ: ಮನೆ ಮುಂದೆ ಕಾರು ಪಾರ್ಕಿಂಗ್‌ಗೆ ವಾರ್ಷಿಕ 5000/- ವರೆಗೆ ಶುಲ್ಕ: ತರಾತುರಿ ಟೆಂಡರ್ ಕರೆದ BBMP


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...