Homeಮುಖಪುಟ'ಕರಿದೊವಲ ಪಳೆಯ ಕುಳಿಯಂ ತೆರೆದಂದದ': ಕನ್ನಡ ಸಾಹಿತ್ಯ ಮತ್ತು ಜನಾಂಗೀಯ ತಾರತಮ್ಯ

‘ಕರಿದೊವಲ ಪಳೆಯ ಕುಳಿಯಂ ತೆರೆದಂದದ’: ಕನ್ನಡ ಸಾಹಿತ್ಯ ಮತ್ತು ಜನಾಂಗೀಯ ತಾರತಮ್ಯ

- Advertisement -
- Advertisement -

ಮೇ 25 ರಂದು ಅಮೆರಿಕಾದ ಮಿನ್ನಿಯಾಸೋಟ ರಾಜ್ಯದ ಮಿನ್ನಿಯಾಪೊಲಿಸ್ ನಲ್ಲಿ ಬಿಳಿಯ ಪೊಲೀಸ್ ದೌರ್ಜನ್ಯದಿಂದ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಮೃತರಾಗಿದ್ದರು. ಜನಾಂಗೀಯ ತಾರತಮ್ಯದಿಂದ ಉಂಟಾದ ಈ ಸಾವು ಜಗತ್ತಿನಾದ್ಯಂತ ಶತಮಾನಗಳಿಂದ ವರ್ಣಭೇದ ತಾರತಮ್ಯ, ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಒಂದು ನಿದರ್ಶನವಷ್ಟೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ವರ್ಣಭೇದ ತಾರತಮ್ಯ ಅಥವಾ ಜನಾಂಗೀಯ ನಿಂದನೆ ವ್ಯಾಪಕವಾಗಿರುವುದು ಇನ್ನಾದರೂ ಬದಲಾಗಬೇಕಷ್ಟೇ.

ವರ್ಣಭೇದ ತಾರತಮ್ಯ ಎಂಬ ಶಬ್ದವು, ಜಾತಿ, ಬಣ್ಣ, ಆನುವಂಶಿಕತೆ, ರಾಷ್ಟ್ರೀಯ ಅಥವಾ ಜನಾಂಗೀಯ ಮೂಲದ ಮೇಲೆ ಆಧಾರಿತವಾದ ಯಾವುದೇ ಭಿನ್ನತೆ, ಬೇರ್ಪಡಿಕೆ, ನಿರ್ಬಂಧತೆ ಅಥವಾ ಆದ್ಯತೆ ಎಂಬ ಅರ್ಥವನ್ನು ನೀಡುತ್ತದೆ. ಅದು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ಸಾರ್ವಜನಿಕ ಜೀವನದ ಯಾವುದೇ ಇತರ ವಿಭಾಗದಲ್ಲಿ ಕೆಲವು ನಿರ್ದಿಷ್ಟ ಗುರುತು ಹೊಂದಿರುವ ವ್ಯಕ್ತಿಗಳ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಮೊಟುಕುಗೊಳಿಸುವ ಅಥವಾ ಶೂನ್ಯವಾಗಿಸುವ ಅಥವಾ ಅವರ ಪುರಸ್ಕಾರ, ಸುಖಾನುಭವ ಮತ್ತು ಶ್ರಮಗಳನ್ನು ದುರ್ಬಲಗೊಳಿಸುವ ಉದ್ದೇಶ ಅಥವಾ ಪರಿಣಾಮವನ್ನು ಹೊಂದಿರುವಂತಹದು.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೆಲವು ವರ್ಗಗಳು ನೇರವಾಗಿ ಮನುಷ್ಯನ ದೈಹಿಕ ಬಣ್ಣದ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗುತ್ತಿದ್ದರೆ, ಭಾರತದಲ್ಲಿ ಇಬ್ಬಾಯ ಖಡ್ಗದಂತೆ ಹುಟ್ಟಿನ ಜಾತಿ ಮತ್ತು ಬಣ್ಣ ಇವೆರಡರ ಆಧಾರದಲ್ಲಿ ತಾರತಮ್ಯ ಸ್ಥಾಪಿತವಾಗಿದೆ.

ಹಾಗಾಗಿ ಭಾರತದ ‘ಹಿಂದೂ’ ಸಮಾಜ ಸಾವಿರಾರು ವರ್ಷಗಳಿಂದ ಜಾತಿಯ ಅಸ್ಪೃಶ್ಯತೆಯ ಹೆಸರಿನಲ್ಲಿ ಈ ವರ್ಣಭೇದ ತಾರತಮ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಈ ಸಮಾಜದಲ್ಲಿ ಕೇವಲ ವರ್ಣಭೇದ ತಾರತಮ್ಯತೆ ಎಂದು ಕರೆಯದೆ ಅಸ್ಪೃಶ್ಯತೆ ಎಂದೂ ಕರೆಯಬಹುದು. ಏಕೆಂದರೆ ಇಲ್ಲಿನ ಬಹುಸಂಖ್ಯಾತ ಅಸ್ಪೃಶ್ಯರು ಕಪ್ಪು ವರ್ಣಿಯರೇ ಆಗಿದ್ದಾರೆ.

ಈ ವರ್ಣವನ್ನು ರಚಿಸುವ ಆನುವಂಶಿಕ ಸಂಗತಿಗಳು ಮಾನವ ಲಕ್ಷಣಗಳ ಮತ್ತು ಸಾಮಥ್ರ್ಯಗಳ ಪ್ರಾಥಮಿಕ ನಿರ್ಧಾರಕಗಳಾಗಿವೆ ಮತ್ತು ಆ ವರ್ಣಭೇದ ಭಿನ್ನತೆಗಳು ಒಂದು ನಿರ್ದಿಷ್ಟವಾದ ವರ್ಣದ (ಜಾತಿಯ) ಒಂದು ಆನುವಂಶಿಕತೆಯನ್ನು ಉತ್ಪತ್ತಿ ಮಾಡುತ್ತದೆ ಎಂಬುದು ವರ್ಣಭೇದ ತಾರತಮ್ಯದ ನಂಬಿಕೆಯಾಗಿದೆ. ವರ್ಣಭೇದ ತಾರತಮ್ಯವು ವಿಭಿನ್ನ ಗುರುತುಳ್ಳ ಜನಸಮೂಹದ ನಡುವೆ ಇರಬಹುದಾದ ಜೈವಿಕ ವರ್ಗೀಕರಣಕ್ಕೆ ಸಂಬಂಧಿಸಿದ ಭಿನ್ನತೆಗಳನ್ನು ಮಾನ್ಯ ಮಾಡುವುದರ ಜೊತೆಗೆ ಆ ಜನಾಂಗದ ಮತ್ತು ಅವರ ಸಂಸ್ಕøತಿಯ ವಿರುದ್ಧ ಭೇದಭಾವ ಎಣಿಸುವಂತೆ ಪ್ರೇರೇಪಿಸುತ್ತದೆ.

ಈ ಸ್ಥಿತಿಯು ಸಾಮಾಜಿಕವಾಗಿ ಅಷ್ಟೇ ಅಲ್ಲದೇ ಸಮಾಜದ ಪ್ರತಿ ಉತ್ಪನ್ನವೇ ಆದ ಸಾಹಿತ್ಯದಲ್ಲಿಯೂ ಇದರ ಪರಿಣಾಮವನ್ನು ನಾವು ನೋಡಬಹುದು. ಸುಮಾರು ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ಕನ್ನಡ ಸಮಾಜದ ಪ್ರತಿಬಿಂಬವಾಗಿರುವ ಕನ್ನಡ ಸಾಹಿತ್ಯದಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳನ್ನು ನಾವು ಕಾಣಬಹುದು.

ಹಳಗನ್ನಡ ಸಾಹಿತ್ಯದಲ್ಲಿ ಅವತ್ತಿನ ಕಾಲಕ್ಕೆ ಕಾವ್ಯ ರಚನೆ ಮಾಡಬಲ್ಲವರು, ಅಕ್ಷರ ಬಲ್ಲವರು ಉಚ್ಚವರ್ಣಿಯರೇ ಆಗಿದ್ದರು. ಅವರು ತಮ್ಮ ಕಾವ್ಯದಲ್ಲಿ ಅಸ್ಪೃಶ್ಯರನ್ನ ಯಾ ತಳ ವರ್ಗದವರನ್ನ ಕಾಣುತ್ತಿದ್ದುದು, ಕಾಣಿಸುತ್ತಿದ್ದುದು, ಚಿತ್ರಿಸುತ್ತಿದ್ದುದು ಕುರೂಪಿಯಾಗಿಯೋ, ಇಲ್ಲ ಸತ್ವಹೀನವಾಗಿಯೋ, ನಿರ್ಜೀವವಾಗಿಯೊ. ಒಟ್ಟಾರೆಯಾಗಿ ಅವು ಅತ್ಯಂತ ಕೀಳಾದ ಪಾತ್ರಗಳಾಗಿ, ಆ ಪಾತ್ರಗಳ ದೈಹಿಕ ರಚನೆ, ಬಣ್ಣ ಇವುಗಳನ್ನು ಹಂಗಿಸಿ ವರ್ಣಿತವಾಗಿರುತ್ತಿದ್ದವು.

ಇದಕ್ಕೆ ಉದಾಹರಣೆಯಾಗಿ ಹದಿಮೂರನೇ ಶತಮಾನದ ಕವಿ ಜನ್ನನ ‘ಯಶೋಧರ ಕಾವ್ಯ’ದಲ್ಲಿ ಯಶೋಧರನ ಮಡದಿ ರಾಣಿ ಅಮೃತಮತಿ ಅರಮನೆಯ ಊಳಿಗದ ಬದಗನೊಬ್ಬನನ್ನು (ಅಸ್ಪೃಶ್ಯ) ಮೆಚ್ಚುತ್ತಾಳೆ. ಆತನನ್ನು ಕಂಡುಬರಲು ಗೆಳತಿಯೊಬ್ಬಳನ್ನು ಕಳುಹಿಸುತ್ತಾಳೆ. ಬದಗನನ್ನು ಕಂಡ ಉಚ್ಚವರ್ಣದ ಗೆಳತಿ, ತನ್ನ ಗೆಳತಿ ರಾಣಿಯ ರೂಪಿಗೂ ಈ ಬದಗ ಅಷ್ಟಾವಕ್ರನ ರೂಪಿಗೂ ಹೋಲಿಕೆ ಮಾಡುತ್ತಾ

“ಕರಿದೊವಲ ಪಳೆಯ ಕುಳಿಯಂ ತೆರೆದಂದದ …
“ಮುದುಗರಡಿಯ ಮುದು ತೊವಲಂದದ ಕರಿಯ

ಎಂದು ಕವಿ ರಾಣಿಯ ಗೆಳತಿಯ ಪಾತ್ರದ ಮೂಲಕ ಆ ಬದಗನನ್ನು ಹೀಯಾಳಿಸುತ್ತಾನೆ.

ಹಾಗೆಯೇ ಅದೇ ಕಾಲದಲ್ಲಿ ಇದ್ದ ರಾಘವಾಂಕ ಕವಿಯು ತನ್ನ ‘ಹರಿಶ್ಚಂದ್ರ ಕಾವ್ಯ’ದ ‘ಹೊಲತಿಯರ ಪ್ರಸಂಗ’ ದಲ್ಲಿ ಹೊಲತಿಯರು ಕ್ಷತ್ರಿಯನಾದ ಹರಿಶ್ಚಂದ್ರನಿದ್ದ ಜಾಗಕ್ಕೆ ಬರುವ ವರ್ಣನೆ ಮಾಡುವ ಸಂದರ್ಭದಲ್ಲಿ

“ಕಳೆದ ಹಿಂದಿನ ಕಗ್ಗತ್ತಲ ರಾತ್ರಿಯ ಈ ಕನ್ನೆಯರು( ಕಪ್ಪನೆ ಬಣ್ಣದವರು) ಹಗಲನ್ನು ನೋಡಲು ಬಂದಂತಿತ್ತು. ದೇವತೆಗಳು, ರಾಕ್ಷಸರು ಸಮುದ್ರವನ್ನು ಮಥಿಸಿದಾಗ ಹೊಸ ವಿಷದ ಹೊಗೆಹೊಯ್ದು, ಕಗ್ಗನೆ ಕಂದಿ, ಜಲದೇವತೆಗಳು ಮನದಲ್ಲಿ ನೊಂದು ಮನುಷ್ಯರಾದಂತಿತ್ತು. ಆ ಬ್ರಹ್ಮನು ನೀಲಮಣಿಯಿಂದ (ಕಪ್ಪುರತ್ನ) ತಯಾರಿಸಿದ ಸಾಲಭಂಜಿಕೆಗಳೆಲ್ಲಾ ಸೇರಿ ಜೀವ ಪಡೆದಂತೆ ಇದ್ದರು” ಎಂದು ಆ ಹೊಲತಿಯರನ್ನು ಚಿತ್ರಿಸುತ್ತಾನೆ.

‘ಮಾದಾರ ಚೆನ್ನಯ್ಯನ ರಗಳೆ’ಯಲ್ಲಿಯೂ ಕೂಡ ಶಿವಶರಣನಾಗಿರುವ ಚೆನ್ನಯ್ಯನನ್ನು ಒಬ್ಬ ಮಾದಿಗನಾಗೇ ಅಂದರೆ ಅಸ್ಪೃಶ್ಯನಾಗೇ ಕಡೆಯವರೆಗೂ ಚಿತ್ರಿಸಿದ್ದಾನೆ. ಶರಣನಾದ ಚೆನ್ನಯ್ಯನಿಗೆ, ‘ಮಾದಾರ ಚೆನ್ನ’ನೆಂಬ ಹೆಸರು ಅನ್ವರ್ಥಕನಾಗಿತ್ತು ಎಂಬ ಕವಿಯ ವರ್ಣನೆ ಯಾವ ಅರ್ಥ ಸೂಚಿಸುತ್ತದೆ ಹಾಗಾದರೆ? ಅದು ‘ಹೊಲೆಯ’, ‘ಮಾದಿಗ’ ಎಂಬ ವರ್ಣಭೇದ ತಾರತಮ್ಯವನ್ನೇ ಅಲ್ಲವೇ? ಕವಿಯ ಮನದಲ್ಲಿ ಇರುವುದು?.

ಆಧುನಿಕ ಸಾಹಿತ್ಯದಲ್ಲಿ ಈ ವರ್ಣಭೇದ ತಾರತಮ್ಯದ ನಿದರ್ಶನಗಳನ್ನು ನೋಡಬೇಕೆಂದರೆ ಹಳಗನ್ನಡ ಸಾಹಿತ್ಯದಲ್ಲಿ ಕಂಡಹಾಗೆ ನೇರವಾಗಿ ರೂಪದ, ಬಣ್ಣದ ಹಿನ್ನೆಲೆಯನ್ನು ಎದ್ದು ಕಾಣಿಸದೇ ಇದ್ದರೂ ಕೂಡ, ಸಾಮಾಜಿಕವಾಗಿ ತಾರತಮ್ಯಕ್ಕೆ ಒಳಗಾಗಿರುವ ಸಮುದಾಯದ ಆ ಪಾತ್ರಗಳಿಗೆ ಸ್ವಾತಂತ್ರ್ಯವನ್ನಾಗಲಿ, ಜೀವಂತಿಕೆಯನ್ನಾಗಲಿ ಆರೋಪಿಸದೆ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಆಲೋಚನೆ ಇಲ್ಲದ ನಿರ್ಜೀವ ವಸ್ತುಗಳಂತೆ ಚಿತ್ರಿತವಾಗಿವೆ.

ಇದಕ್ಕೆ ನಿದರ್ಶನವಾಗಿ ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯ ಚೋಮನ ಪಾತ್ರ, ಕಾದಂಬರಿಯ ಕಡೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದ ಚಿತ್ರಣ ಇದೆ. ಮತಾಂತರದ ಸಂದರ್ಭದಲ್ಲಿ ಚೋಮನ ದೈವೀಭಾವನೆ ಭೂತಾಕಾರವಾಗಿ ಬಂದು ಅವನ ಮುಂದೆ ನಿಲ್ಲುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ್ದು ಏನೆಂದರೆ ಕಾದಂಬರಿಯ ಆರಂಭದಿಂದ ಈ ಧಾರ್ಮಿಕ ಕ್ರಿಯೆ ಹಾಗೆ ಬೆಳೆದು ಮೈ ಪಡೆದುಕೊಂಡ ನಿಲ್ಲದೆ, ಕಡೆಯಲ್ಲಿ ಬರುವುದು ವಿಚಿತ್ರ ಅನ್ನಿಸುತ್ತೆ. ಜೊತೆಗೆ ಲೇಖಕರ ಹಿಂದೂಧರ್ಮದ ವರ್ಣಬೇಧ ತಾರತಮ್ಯದ ಒಲವನ್ನು ತೋರಿಸಿದಂತೆ ಕಾಣುತ್ತದೆ. ಇದೇ ರೀತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ಹೇಮಾವತಿ ಕಾದಂಬರಿಯಲ್ಲಿ ಬರುವ ದಲಿತ ಪಾತ್ರಗಳ ತಮ್ಮ ವಾಸ್ತವಿಕತೆಗಳನ್ನು ಕಳೆದುಕೊಂಡು ಕೇವಲ ಕಲ್ಪಿತ ಪಾತ್ರಗಳಾಗಿರುವುದು. ಬಸವರಾಜ ಕಟ್ಟೀಮನಿ ಅವರ ಕಾದಂಬರಿಗಳಲ್ಲಿ ಮತ್ತು ಅವರ ಸಂದರ್ಭದಲ್ಲಿಯೇ ಅದರೆ ಪ್ರಗತಿಶೀಲ ಕಾದಂಬರಿಕಾರರ ಕಾದಂಬರಿಗಳಲ್ಲಿ ಬರುವ ವೇಶ್ಯೆಯರೆಲ್ಲಾ ದಲಿತ ಹೆಣ್ಣುಗಳೇ ಆಗಿರುವುದು. ಹೀಗೆ ಹಲವು ಉದಾಹರಣೆಗಳು ದೊರಕುತ್ತವೆ.

ಎಸ್ ಎಲ್ ಭೈರಪ್ಪನವರ ‘ದಾಟು’ ಕಾದಂಬರಿಯಲ್ಲಿ ಕಂಡು ಬರುವ ದಲಿತ ಸಮಾಜದ ಬೆಟ್ಟಯ್ಯನಂತಹ ಎಂ ಎಲ್ ಎ, ಎಂಪಿ ಗಳು ವೆಂಕಟರಮಣಯ್ಯನಂತಹ ಬ್ರಾಹ್ಮಣರ ಎಕ್ಕಡ ಎತ್ತಬೇಕು. ಇಲ್ಲವೆಂದರೆ ಮತ್ತೊಂದು ದಲಿತ ಪಾತ್ರ ಮೋಹನದಾಸನಂತೆ ಪ್ರವಾಹದಲ್ಲಿ ಕೊಚ್ಚಿಹೋಗಬೇಕು. ಅಷ್ಟೇ ಅಲ್ಲದೆ ಕಾದಂಬರಿಯಲ್ಲಿ ಬ್ರಾಹ್ಮಣ ಹುಡುಗಿ, ಶೂದ್ರ ಹುಡುಗನ ಸಂಬಂಧವನ್ನು ಹೊಂದದೇ ಇರುವಂತೆ ವಹಿಸಿರುವ ಎಚ್ಚರ ಕಾದಂಬರಿಕಾರನಲ್ಲಿರುವ ವರ್ಣಭೇದ ತಾರತಮ್ಯಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಕಡೆಯದಾಗಿ ಕನ್ನಡದ ಮತ್ತೊಬ್ಬ ಕ್ರಾಂತಿಕಾರಿ ಲೇಖಕ ಯು ಆರ್ ಅನಂತಮೂರ್ತಿಯವರು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿರುವ ದಲಿತ ಪಾತ್ರಗಳಲ್ಲಿ ಕಣ್ಣಿಗೆ ರಾಚುವಂತೆ ಲೇಖಕನ ವರ್ಣಭೇದ ತಾರತಮ್ಯ ಮನೋಭಾವ ಅನಾವರಣಗೊಳ್ಳುತ್ತದೆ. ಇದರ ಬಗ್ಗೆ ವಿಮರ್ಶಕ ಜಿ.ಎಚ್. ನಾಯಕ್ ಅವರು ಹೀಗೆ ಹೇಳುತ್ತಾರೆ. “ಇವರ ಕಾದಂಬರಿಗಳಲ್ಲಿ ಹರಿಜನ ಸಮಾಜದ ಹೆಣ್ಣುಗಳು ಕಾಮವೊಂದನ್ನುಳಿದು ಇನ್ನಾವ ಮೈಯಲ್ಲಿಯೂ ಅವರು ಜೀವಂತವಾಗಿ ಬರುವ ಪಾತ್ರಗಳಾಗುವುದಿಲ್ಲ”.

ಇದಕ್ಕೆ ನಿದರ್ಶನವಾಗಿ ಅವರ ಸಂಸ್ಕಾರ ಕಾದಂಬರಿಯಲ್ಲಿ ಬರುವ ಬೆಳ್ಳಿ, ಚಂದ್ರಿಯರು. ಪುಟ 9 ರಲ್ಲಿ “ದುರ್ಗಾಭಟ್ಟರು ಚಂದ್ರಿಯನ್ನು ಪರೀಕ್ಷಿಸುತ್ತಾ ಕೂತರು, ಸಾಮಾನ್ಯ ಮನೆಯಿಂದ ಹೊರಡದಿದ್ದ ಕುಂದಾಪುರದಿಂದ ನಾರಾಣಪ್ಪ ಮೆಚ್ಚಿತಂದ ಈ ವಸ್ತು ಇಷ್ಟು ಪಕ್ಕಾಗಿ ಅವರ ರಸಿಕ ಕಣ್ಣಿಗೆ ಸಿಕ್ಕಿದ್ದು ಇವತ್ತೇ ಪ್ರಥಮ ಬಾರಿಗೆ. ಥೇಟು ವಾತ್ಸಾಯನ ಸೋಕ್ತ ಚಿತ್ತಿನಿ, ಉಂಗುಷ್ಠಕ್ಕಿಂತ ಉದ್ದವಾದ ಆ ಬೆರಳು ನೋಡು, ಆ ಮೊಲೆಗಳನ್ನು ನೋಡು, ಸಂಭೋಗದಲ್ಲವಳು ಗಂಡನನ್ನು ಹೀರಿಬಿಡುತ್ತಾಳೆ” ಎಂದು ಬ್ರಾಹ್ಮಣ ಸಮಾಜದ ಕಾಮದ ಬಯಕೆಗಳನ್ನು ತೀರಿಸುವ ಸಲುವಾಗಿಯೇ ಆ ದೇವರು ಹರಿಜನ ಹೆಣ್ಣುಗಳನ್ನು ಈ ಲೋಕಕ್ಕೆ ಕಳುಹಿಸುತ್ತಾನೆ ಎಂಬಂತೆ ವರ್ಣನೆ ಮಾಡಿರುವುದು ಕಾದಂಬರಿಕಾರರ ಪೂರ್ವಾಗ್ರಹ ಕಾದಂಬರಿಯಲ್ಲಿ ಉಳಿದುಕೊಂಡಿಲ್ಲವೇ ಎಂಬ ಪ್ರಶ್ನೆ ಏಳುವಂತೆ ಮಾಡುತ್ತದೆ.

ಹಾಗೆಯೇ ಅನಂತಮೂರ್ತಿಯವರ ಮತ್ತೊಂದು ಕಾದಂಬರಿ ‘ಭಾರತೀಪುರ’ದಲ್ಲಿ ಕಾದಂಬರಿಯ ಮುಖ್ಯಪಾತ್ರವಾದ ಜಗನ್ನಾಥನ ಸುತ್ತಲೂ ಬರುವ ಬ್ರಾಹ್ಮಣೇತರ ಪಾತ್ರಗಳಿಗೆ ಕಾದಂಬರಿಕಾರರು ಸ್ವತಂತ್ರ ಆಲೋಚನೆಯನ್ನಾಗಲೀ, ಶಕ್ತಿಯನ್ನಾಗಲಿ, ಕ್ರಾಂತಿಕಾರ ಮನೋಭಾವವನ್ನಾಗಲಿ ನೀಡಿಲ್ಲ.

ಹೀಗೆ ಕನ್ನಡ ಸಾಹಿತ್ಯದ ಮುಕ್ಕಾಲುಪಾಲು ಉಚ್ಛವರ್ಣದ ಘನತೆಯನ್ನು ಎತ್ತಿಹಿಡಿಯುತ್ತಲೇ ಇಲ್ಲಿನ ತಳಸಮುದಾಯದ ಜಾರ್ಜ್ ಪ್ಲಾಯ್ಡ್ ನಂತಹ ಜೀವಗಳನ್ನು ಇದೇ ವರ್ಣಭೇದ ತಾರತಮ್ಯದಿಂದ ದಿನನಿತ್ಯ ಸಾಯಿಸುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಜಗತ್ತಿನಾದ್ಯಂತ ವ್ಯವಸ್ಥಿತ ರಾಜಕೀಯ ಸುಧಾರಣೆಗಾಗಿ ಜನಾಂಗೀಯ ತಾರತಮ್ಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಭಾರತದಲ್ಲಿಯೂ ವಿವೇಕ ಮೂಡಿಸಿ, ಆ ಸುಧಾರಣೆ ಸಾಹಿತ್ಯದಲ್ಲಿಯೂ ಪ್ರತಿಫಲಿಸುವ ಕನಸ ಕಾಣಬಹುದೇ?


ಇದನ್ನು ಓದಿ: ಇತ್ತೀಚಿನ ಭಾರತ-ಚೈನಾ ಗಡಿ ಘರ್ಷಣೆಗಳು: ಗಡಿ ನಿರ್ಧರಿಸಲು ಭಾರತವು ಚೌಕಾಶಿ ಮಾತುಕತೆಗೆ ತಯಾರಾಗಬೇಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...