Homeಕರ್ನಾಟಕಹಿರಿಯ ನಟ 'ವೈಜನಾಥ ಬಿರಾದಾರ' ಅವರ ಹುಟ್ಟುಹಬ್ಬ ಇಂದು!

ಹಿರಿಯ ನಟ ‘ವೈಜನಾಥ ಬಿರಾದಾರ’ ಅವರ ಹುಟ್ಟುಹಬ್ಬ ಇಂದು!

- Advertisement -
- Advertisement -

‘ವೈಜನಾಥ ಬಿರಾದಾರ’ ಎಂದಾಕ್ಷಣ ತೆರೆಯ ಮೇಲಿನ ಶೋಷಿತ ವ್ಯಕ್ತಿಯೊಬ್ಬನ ಚಿತ್ರ ಕಣ್ಮುಂದೆ ಬರುತ್ತದೆ. ಅವಮಾನ, ಬಡತನ, ಸಂಕಟಗಳನ್ನೆಲ್ಲಾ ಹೊಟ್ಟೆಯಲ್ಲಿಟ್ಟುಕೊಂಡು ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪಾತ್ರಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡದ್ದು. ಹಿರಿಯ ನಟ ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಕಳೆದ ಮೂರೂವರೆ ದಶಕಗಳಿಂದ ವೃತ್ತಿರಂಗಭೂಮಿ ಮತ್ತು ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟ ‘ವೈಜನಾಥ ಬಿರಾದಾರ’ ಇಂದು 68ಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟೂರು ಬೀದರ್ ಜಿಲ್ಲೆಯ ತೆಗಾಂಪೂರ್. ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಬಿರಾದರ ಮೂಲತಃ ವೃತ್ತಿ ರಂಗಭೂಮಿ ಕಲಾವಿದ. ನಟಿಸಿದ ಚಿತ್ರಗಳ ಸಂಖ್ಯೆ ಐನೂರರ ಆಸುಪಾಸಿನಲ್ಲಿದೆ. ತಮ್ಮ ‘ಬಿರಾದಾರ ಮಿತ್ರ ಮಂಡಳಿ’ ತಂಡದೊಂದಿಗೆ ಇಂದಿಗೂ ಅವರು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಬಿರಾದಾರ ಅವರ ಮಹತ್ವದ ಚಿತ್ರಗಳಲ್ಲೊಂದು. ಸ್ಪೇನ್‍ನ ಮ್ಯಾಡ್ರಿಡ್ ‘ಇಂಡಿಯಾ ಇಮ್ಯಾಜಿನ್’ ಚಿತ್ರೋತ್ಸವದಲ್ಲಿ (2011) ಈ ಚಿತ್ರ ಪ್ರದರ್ಶನಗೊಂಡಿತ್ತು. ಚಿತ್ರೋತ್ಸವ ಕೊಡಮಾಡುವ ಅತ್ಯುತ್ತಮ ನಟ ಪುರಸ್ಕಾರ ಬಿರಾದಾರ ಅವರಿಗೆ ಸಂದಿದೆ.

ವೈಜನಾಥ ಬಿರಾದಾರ

ಸದ್ಯ ಕೊರೋನಾ ಸಂಕಟದಿಂದಾಗಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದರಿಂದಾಗಿ ತೊಂದರೆಗೀಡಾಗಿರುವುದು ಅವರ ಮಾತುಗಳಲ್ಲಿ ವೇದ್ಯವಾಗುತ್ತದೆ. “ಕಲಾವಿದರಿಗೆ ಸಂಕಷ್ಟ ಯಾವಾಗ ತಪ್ಪಿದೆ? ಕೊರೋನಾ ಕಾಲ ಕಲಾವಿದರಿಗೆ ಸಂಕಷ್ಟ ತಂದಿದೆ. ನಮಗೆ ಕಲೆ ಇದೆ, ಖಾಯಂ ನೆಲೆ ಇಲ್ಲ. ಹೀಗೇ ಜೀವನ ನಡೆಸಿಕೊಂಡು ಹೋಗ್ತಾ ಇರೋದು ಅಷ್ಟೆ” ಎನ್ನುತ್ತಾರವರು.

ಕನ್ನಡಿಗರು ತಮ್ಮ ಮೇಲಿಟ್ಟಿರುವ ಅಭಿಮಾನ, ಪ್ರೀತಿಗೆ ಋಣಿ ಎನ್ನುತ್ತಾರವರು. ಮುಂದೆ ಮತ್ತಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವ ಇರಾದೆ ಅವರದ್ದು. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿನ ಎರಡು ಶೂಟಿಂಗ್ ಸೋಜಿಗಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

(ಬಿರಾದಾರ್ ಅವರು ಹೇಳಿಕೊಂಡಂತೆ…)

ಅದೇ ಡಬ್ಬಿಂಗ್ ಕಣೋ!

‘ಶಂಖನಾದ’ ಚಿತ್ರದಲ್ಲಿ ನಟಿಸಿದ ನಂತರ ನಿರ್ದೇಶಕ ಉಮೇಶ್ ಕುಲಕರ್ಣಿ, ‘ಏನ್ ಬ್ರದರ್ ಡಬ್ಬಿಂಗ್ ಮಾಡ್ತಿಯೇನಪ್ಪ?’ ಎಂದು ಕೇಳಿದರು. ಅದಿನ್ನೂ ನನಗೆ ಎರಡನೇ ಸಿನಿಮಾ ಆದ್ದರಿಂದ ಡಬ್ಬಿಂಗ್ ಏನೆಂದೇ ಗೊತ್ತಿರಲಿಲ್ಲ. ಹಾಗಾಗಿ, ‘ಇಲ್ಲ ಸಾರ್’ ಅಂದೆ. ‘ಆಯ್ತು, ಬೆಳಗ್ಗೆ ಚಾಮುಂಡೇಶ್ವರಿ ಸ್ಟುಡಿಯೋಗೆ ಬಾ. ಅಲ್ಲಿ ನೋಡ್ಕೋವಂತೆ’ ಎಂದರು ಕುಲಕರ್ಣಿ. ಬೆಳಕ್ಕೆ 8ಕ್ಕೆ ಹೋಗಿ ತಿಂಡಿ ತಿಂದು ಸ್ಟುಡಿಯೋದಲ್ಲಿ ಕುಳಿತುಕೊಂಡೆ. ಮಧ್ಯಾಹ್ನ ಒಂದೂವರೆಗೆ ಊಟವೂ ಆಯ್ತು. ‘ಏನಪ್ಪಾ, ಡಬ್ಬಿಂಗ್ ನೋಡಿಕೊಂಡ್ಯಾ?’ ಅಂತ ಕೇಳಿದರು ಕುಲಕರ್ಣಿ. ನಾನು ಇಲ್ಲವೆಂದೆ. ‘ಮತ್ತೆ, ಬೆಳಗ್ಗೆಯಿಂದ ಇಲ್ಲಿ ಏನು ಮಾಡಿದೆ?’ ಎಂದರು ನಿರ್ದೇಶಕರು. ‘ನೀವು ಏನೇನೋ ಮಾಡ್ತಿದ್ರಲ್ಲಾ, ನೋಡ್ತಾ ಕುಳಿತಿದ್ದೆ’ ಎಂದೆ. ‘ಏ ದಡ್ಡಾ ಅದೇ ಡಬ್ಬಿಂಗ್ ಕಣೋ!’ ಅಂದ್ರು ಉಮೇಶ್ ಕುಲಕರ್ಣಿ.

ವೈಜನಾಥ ಬಿರಾದಾರ

ಮೆಜಸ್ಟಿಕ್‍ನಲ್ಲಿ ತಗ್ಲಾಕ್ಕೊಂಡ ಕುಡುಕರು!

ಉತ್ತರ ಕರ್ನಾಟಕದಲ್ಲೊಂದು ನಾಟಕ ಮುಗಿಸಿಕೊಂಡು ಬಸ್‍ನಲ್ಲಿ ಬೆಂಗಳೂರಿಗೆ ಬಂದಿಳಿದೆ. ಮೆಜಸ್ಟಿಕ್‍ನಲ್ಲಿ ಬಸ್ ಇಳಿದು ಬಿಎಂಟಿಸಿ ಬಸ್‍ಸ್ಟ್ಯಾಂಡ್ ಕಡೆಗೆ ಬರ್ತಾ ಇದ್ದೆ. ಫುಲ್ ಟೈಟಾಗಿದ್ದ ಇಬ್ಬರು ಕುಡುಕರು ತೂರಾಡುತ್ತಾ ಎದುರಾದರು. `ಸಾರ್, ನೀವು! ನಾವು ನಿಮ್ ಅಭಿಮಾನಿಗುಳು. ಬನ್ನಿ ನಮ್ಗೆ ಕಂಪನಿ ಕೊಡಿ..’ ಎಂದು ಕೈಹಿಡಿದುಕೊಂಡರು. ಇದೇನು ಅಭಿಮಾನವೋ, ಕುಚೇಷ್ಟೆಯೋ ಒಂದೂ ಗೊತ್ತಾಗಲಿಲ್ಲ. `ಇಲ್ರಪ್ಪಾ, ನಾನು ಕುಡುಕನ ಪಾತ್ರ ಮಾಡ್ತೀನಷ್ಟೆ, ಕುಡಿಯೋಲ್ಲ’ ಅಂದೆ. `ಲೇಯ್, ಸುಳ್ಳು ಹೇಳ್ಬೇಡ! ಕುಡೀದೇ ಹೆಂಗಲೆ ನಿಶೆ ಏರ್ತದೆ? ಈಗ ಸುಮ್ನೆ ಬತ್ತಿಯೋ, ಇಲ್ವೋ!?’ ಎಂದು ಎಳೆದಾಡತೊಡಗಿದರು. ಅಷ್ಟರಲ್ಲಿ ನನ್ನನ್ನು ಗುರುತು ಹಿಡಿದ ಮೂರ್ನಾಲ್ಕು ಮಂದಿ ಸಂಕಷ್ಟದಿಂದ ಪಾರು ಮಾಡಿದರು!


ಓದಿ: ಕೇರಳದಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರನ ಕುರಿತು ಸಿನೆಮಾ: ದ್ವೇಷಾಭಿಯಾನ ಪ್ರಾರಂಭಿಸಿದ ಹಿಂದುತ್ವವಾದಿಗಳು


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...