Homeರಾಜಕೀಯಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

ಕರ್ನಾಟಕದ ಚುನಾವಣಾ ಕಣದಲ್ಲಿ ಅನಾಥವಾಗುತ್ತಿರುವ ಸೆಕ್ಯುಲರ್ ವಾದ

- Advertisement -
- Advertisement -

ಎಲ್ಲಾ ಪಕ್ಷಗಳ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾದ ಒಂದು ಚುನಾವಣೆಯಲ್ಲಿ ಪ್ರಮುಖವಾದ ಚುನಾವಣಾ ವಿಷಯವೇ ಇಲ್ಲದಾಗ ಏನೆಲ್ಲಾ ಆಗಬಹುದೋ ಅವೆಲ್ಲವೂ ಮತ್ತೊಂದು ವಿಧಾನಸಭಾ ಚುನಾವಣೆಯ ಹೊಸ್ತಿಲಿಗೆ ಬಂದು ನಿಂತಿರುವ ಕರ್ನಾಟಕದಲ್ಲಿ ಆಗುತ್ತಿವೆ. ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅದ್ಬುತ ಎನ್ನಬಹುದಾದ ಆಡಳಿತ ನೀಡದೆ ಹೋಗಿದ್ದರೂ ತನ್ನ ವಿರುದ್ಧ ದೊಡ್ಡ ಮಟ್ಟಿನ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗದಂತೆ ನೋಡಿಕೊಂಡಿದೆ. ಆಡಳಿತ ವಿರೋಧಿ ಅಲೆ ಇಲ್ಲದಲ್ಲಿ ಆಡಳಿತ ಪಕ್ಷವನ್ನು ಪ್ರಚಾರದಲ್ಲಿ ಹೇಗೆ ಮಣಿಸುವುದು ಎನ್ನುವುದರ ಬಗ್ಗೆ ಪ್ರಮುಖ ವಿರೋಧ ಪಕ್ಷಗಳಿಗೆ ಸ್ಪಷ್ಟತೆ ಇದ್ದಂತಿಲ್ಲ. ಶತಾಯಗತಾಯ ಕಾಂಗ್ರೆಸ್ಸಿನಿಂದ ಅಧಿಕಾರ ಕಸಿದುಕೊಳ್ಳಲೇಬೇಕು ಎಂದು ಟೊಂಕ ಕಟ್ಟಿಕೊಂಡು ನಿಂತಿರುವ ಬಿಜೆಪಿ ಈ ಗೊಂದಲದಲ್ಲಿ ತನ್ನ ಬತ್ತಳಿಕೆಯಲ್ಲಿ ಸುಲಭವಾಗಿ ನಿಲುಕುವ ಜಾತಿ-ಧರ್ಮಗಳ ವಿಷಯಗಳನ್ನು ಚುನಾವಣಾ ಕಣಕ್ಕೆ ಎಳೆದು ತಂದಿದೆ. ಕಾಂಗ್ರೆಸ್ಸಿನ ಕೆಲ ನಡೆಗಳು ಮತ್ತು ನಡವಳಿಕೆಗಳು ಇದಕ್ಕೆ ಪರೋಕ್ಷವಾಗಿ ನೆರವಾಗಿವೆ.

1994 ರಿಂದ ಪ್ರತೀ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಬಿಜೆಪಿ ತೀವ್ರ ಪ್ರಯತ್ನ ಮಾಡುತ್ತಲೇ ಬಂದಿದ್ದರೂ ಈ ಹಿಂದಿನ ಯಾವ ಚುನಾವಣೆಯಲ್ಲೂ ಜಾತಿ-ಧರ್ಮಗಳ ವಿಷಯ ಈ ಬಾರಿಯಷ್ಟು ತೀಕ್ಷ ್ಣವಾಗಿ ರಾಜ್ಯದಲ್ಲಿ ಮುಂಚೂಣಿಗೆ ಬಂದದ್ದಿಲ್ಲ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದ 2008 ರ ಚುನಾವಣೆಯಲ್ಲೂ ಜಾತಿ-ಧರ್ಮಗಳು ಈ ಮಟ್ಟಿಗೆ ಜೋತುಬೀಳುವ ಪರಿಸ್ಥಿತಿ ಆ ಪಕ್ಷಕ್ಕೆ ಇರಲಿಲ್ಲ. ಹಿಂದೂ ಮತೀಯವಾದ ಎನ್ನುವುದು ಸುಪ್ತವಾಗಿ ಬಿಜೆಪಿಯ ಅಸ್ತ್ರವಾಗಿ ಸದಾ ಇದ್ದರೂ ಎದ್ದುಕಾಣುವಂತೆ ಅದನ್ನು ಮುಂಚೂಣಿಗೆ ಬಿಜೆಪಿ ಹಿಂದೆಂದೂ ಇಲ್ಲಿ ತಂದದ್ದಿಲ್ಲ. ಈ ಹಿಂದೆ ಈದ್ಗಾ ಮೈದಾನ, ಬಾಬಾ ಬುಡನಗಿರಿ ಮುಂತಾದ ಮತೀಯ ಆಯಾಮಗಳಿರುವ ವಿಷಯಗಳನ್ನು ಬಿಜೆಪಿ ಪಕ್ಷ ಸಂವರ್ಧಿಸಲು ಬಳಸಿಕೊಂಡಿತ್ತೇ ವಿನಃ ಚುನಾವಣೆಯಲ್ಲಿ ಅವುಗಳನ್ನು ಪ್ರಮುಖ ವಿಷಯಗಳನ್ನಾಗಿಸಿಕೊಂಡದ್ದಿಲ್ಲ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಪ್ರಮುಖವಾಗಿ ಪ್ರಧಾನಮಂತ್ರಿ ಮೋದಿಯವರ ಪ್ರಭಾವಳಿಯನ್ನೇ ಆಶ್ರಯಿಸಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತಿದ್ದರೂ ಜತೆಜತೆಗೆ ಅದು ಹಿಂದೂ ಮತೀಯವಾದವನ್ನು ದೊಡ್ಡ ಮಟ್ಟಿಗೆ ಪಣಕ್ಕಿಟ್ಟಂತೆ ಕಾಣಿಸುತ್ತದೆ.

ಮೇಲ್ನೋಟಕ್ಕೆ ಬಿಜೆಪಿ ಇತರ ಎರಡು ವಿಚಾರಗಳನ್ನೂ ಪ್ರಸ್ತಾಪಿಸುತ್ತಿದೆ. ಒಂದು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು. ಇನ್ನೊಂದು ಸಿದ್ದರಾಮಯ್ಯ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಇತ್ತು ಎನ್ನುವುದು. ಈ ಎರಡೂ ವಾದಗಳಿಗೆ ಜನರ ಕಣ್ಣಿಗೆ ರಾಚುವ ಪುರಾವೆಗಳನ್ನು ಒದಗಿಸಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ. ಅಭಿವೃದ್ಧಿಯ ಬಗೆಗಿನ ಮಾತುಗಳು ಕೇವಲ ಅಂಕಿ-ಅಂಶಗಳಾಗುತ್ತಿವೆ. ಭ್ರಷ್ಟಾಚಾರದ ಕುರಿತಾದ ಮಾತುಗಳು ಕೇವಲ ಆಪಾದನೆಗಳಂತೆ ಕೇಳಿಸುತ್ತಿವೆ. ಇವೆರಡೂ ದೊಡ್ಡ ಮಟ್ಟಿಗೆ ಮತದಾರರನ್ನು ತಟ್ಟಲಾರದು. ಆದುದರಿಂದಲೇ ಬಿಜೆಪಿ ಸಾಧ್ಯವಾದಷ್ಟು ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಮುನ್ನೆಲೆಗೆ ಎಳೆದು ತರುತ್ತಿರುವುದು.ಕಾಂಗ್ರೆಸ್ಸಿನ ಹಲವು ಎಡವಟ್ಟುಗಳು, ಗೊಂದಲಗಳು ಈ ವಿಚಾರದಲ್ಲಿ ಬಿಜೆಪಿಗೆ ನೆರವಾಗುತ್ತಿವೆ ಎನ್ನುವುದು ಇನ್ನೊಂದು ವಿಶೇಷ.

ಈ ಹಿಂದೆ ಬಿಜೆಪಿ ಕಾಂಗ್ರೆಸ್ ವಿರುದ್ಧ ತನ್ನ ಹಿಂದೂವಾದಿ ಅಸ್ತ್ರವನ್ನು ಪ್ರಯೋಗಿಸುವಾಗ ಜಪಿಸುತ್ತಿದ್ದ ಪ್ರಮುಖ ಮಂತ್ರ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಯಲ್ಲಿ ತೊಡಗಿ ಹಿಂದೂಗಳ ಹಿತಾಸಕ್ತಿಯನ್ನು ಕಡೆಗಣಿಸಿದೆ ಎನ್ನುವುದಾಗಿತ್ತು. ಎಲ್.ಕೆ. ಅಡ್ವಾಣಿ ಕಾಲದಿಂದಲೂ ಈ ಅಲ್ಪಸಂಖ್ಯಾತರ ತುಷ್ಟೀಕರಣದ ಆಪಾದನೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರ ಸಾಧನ. ಈ ಬಾರಿ ಬಿಜೆಪಿ ತನ್ನ ಈ ಹಳೆಯ ಅಸ್ತ್ರಕ್ಕೆ ಹೊಸ ಹೊಸ ಮಂತ್ರಗಳನ್ನು ಆವಾಹಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಸಿದ್ದರಾಮಯ್ಯ ಸರಕಾರ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಸಿದ್ದು ಮಾತ್ರವಲ್ಲದೆ ಅದು ಹಿಂದೂ ವಿರೋಧಿ ಕೂಡಾ ಆಗಿತ್ತು ಎನ್ನುವ ಆಪಾದನೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹಿಂದೂಗಳ “ಮಾರಣಹೋಮ” ನಡೆಯಿತು ಎಂದು ಪ್ರಖರ ಪದಗಳನ್ನು ಬಳಸಿ ಬಿಜೆಪಿ ತನ್ನ ಹಳೆಯ ಅಸ್ತ್ರವನ್ನು ಹರಿತಗೊಳಿಸುತ್ತಿದೆ. ಹೇಗಾದರೂ ಮಾಡಿ ಈ ಒಂದು ವಾದವನ್ನು ಜನರ ಮನಮುಟ್ಟುವಂತೆ ಮಾಡಬೇಕು ಎನ್ನುವ ಬಿಜೆಪಿಯ ಹತಾಶೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಅದು ಅಂಕೆ-ಸಂಖ್ಯೆಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿರುವುದೇ ಒಂದು ಸಾಕ್ಷಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 24 ಹಿಂದೂಗಳ ಕಗ್ಗೊಲೆಯಾಯಿತು ಎನ್ನುವಲ್ಲಿ ಬಿಜೆಪಿಗೆ ಈ 24 ಎನ್ನುವ ಸಂಖ್ಯೆ ಬಹಳ ಮುಖ್ಯ. ರಾಜ್ಯ ಸರಕಾರ ಅಧಿಕೃತವಾಗಿಯೇ ಈ ಕುರಿತು ಸ್ಪಷ್ಟೀಕರಣ ನೀಡಿದರೂ ಯಾವುದೇ ಎಗ್ಗಿಲ್ಲದೆ ಬಿಜೆಪಿ ಅದೇ ಹಳೆಯ ತಪ್ಪು ಅಂಕಿಯನ್ನು ಬಳಸುತ್ತಿದೆ. ಜೀವಂತ ಇದ್ದವರನ್ನು ಈ ಲೆಕ್ಕದಲ್ಲಿ ಸೇರಿಸಿದ್ದು, ಸ್ವತಃ ತಮ್ಮ ಕಾರ್ಯಕರ್ತರೇ ಆಪಾದಿತರಾಗಿರುವ ಕೊಲೆ ಪ್ರಕರಣಗಳನ್ನು ಇದರಲ್ಲಿ ಸೇರಿಸಿದ್ದು, ಖಾಸಗಿ ಕಾರಣಗಳಿಗೆ ಕೊಲೆ ಆದವರನ್ನು ಹಿಂದೂ ಕಾರ್ಯಕರ್ತರು ಎಂದು ತೋರಿಸುತ್ತಿರುವುದು, ಈ ಅವಧಿಯಲ್ಲಿ ಆದ ಮುಸ್ಲಿಮರ ಕೊಲೆಗಳನ್ನು ಪ್ರಸ್ತಾಪಿಸದೆ ಇರುವುದು ಇತ್ಯಾದಿಗಳೆಲ್ಲ ಅರೆ-ಸತ್ಯಗಳನ್ನಾದರೂ ಆಶ್ರಯಿಸಿ ಹಿಂದೂ ಅಸುರಕ್ಷತೆಯ ಬಗ್ಗೆ ಹೊಸದೊಂದು ಸಂಕತನವನ್ನು ಹೇಗಾದರೂ ಹುಟ್ಟುಹಾಕಬೇಕು ಎನ್ನುವ ಬಿಜೆಪಿಯ ಹತಾಶೆ ಮತ್ತು ಹಪಹಪಿಯನ್ನುಎತ್ತಿ ತೋರಿಸುತ್ತದೆ. ಈ ಮಧ್ಯೆ ಕಾಂಗ್ರೆಸ್ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂಬ ಹಳೆಯ ಬೇಡಿಕೆಗೆ ತನ್ನ ಸಹಾಯಹಸ್ತ ಚಾಚಿದ್ದು ಕೂಡಾ ಬಿಜೆಪಿಗೆ ಕಾಂಗ್ರೆಸ್ಸನ್ನು ಹಿಂದೂ ವಿರೋಧಿಯಾಗಿ ಬಿಂಬಿಸಲು ಇನ್ನಷ್ಟೂ ನೆರವಾಯಿತು. ಕಾಂಗ್ರೆಸ್ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ ಎನ್ನುವ ಹೊಸ ಉಪಕತನವೊಂದನ್ನು ಬಿಜೆಪಿ ಈ ಹಿನ್ನೆಲೆಯಲ್ಲಿ ಹುಟ್ಟುಹಾಕಿತು. ಹಳೆಯ ತುಷ್ಟೀರಣ ರಾಜಕಾರಣದ ಜತೆ “ಹಿಂದೂ ಮಾರಣಹೋಮ” “ಹಿಂದೂ ಧರ್ಮ ಭಂಜನೆ” ಮುಂತಾದ ಹೊಸ ಪದಪುಂಜಗಳು ಸೇರಿಕೊಂಡವು. ಇದೇ ವೇಳೆ ಕಾಂಗ್ರೆಸ್ ಸರಕಾರ ಅಲ್ಪ ಸಂಖ್ಯಾತರ ವಿರುದ್ಧ ಇರುವ ಕೆಲ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವೇ ಎಂದು ಪರಿಶೀಲಿಸಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಹಿಂದೂ ಮಠಗಳನ್ನು ನಿಯಂತ್ರಿಸಲು ಆದೇಶ ಹೊರಡಿಸಲು ಮುಂದಾಗಿ ಮತ್ತೆ ಹಿಂದೆ ಸರಿದದ್ದು ನಡೆಯಿತು. ಇವೆಲ್ಲ ರಾಜ್ಯ ಸರಕಾರದ ಮತೀಯ ಅಜೆಂಡವಾಗಿರದೆ ಕೇವಲ ಆಡಳಿತಾತ್ಮಕ ಎಡವಟ್ಟುಗಳಾಗಿದ್ದರೂ ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿಗೆ ಕಾಂಗೆಸ್ಸ್ ವಿರುದ್ಧ ಪ್ರಬಲವಾದ ಹಿಂದೂ ವಿರೋಧಿ ಸಂಕತನವೊಂದನ್ನು ನಿರ್ಮಿಸಲು ನೆರವಾದ ಅಂಶಗಳು..

ರಾಜ್ಯದ ಮತದಾರರು ಈ ಹೊಸ ವರಸೆಯನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಈಗಲೇ ಹೇಳಲಾಗದು. ವಿಚಿತ್ರ ಎಂದರೆ ಕಾಂಗ್ರೆಸ್ಸಿನಂತಹ ಹಳೆಯ ಪಕ್ಷ ತನ್ನ ವಿರುದ್ಧ ಸೃಷ್ಟಿಯಾಗುತ್ತಿರುವ ಹೊಸ ಅಪಾಯಕಾರಿ ಆಪಾದನೆಗಳ ಸರಮಾಲೆಯನ್ನು ಎದುರಿಸುವಲ್ಲಿ ಹೇಗೆ ಹಿಂಜರಿಯುತ್ತಿದೆ ಎನ್ನುವುದು. “ಹಿಂದೂಗಳ ಕಗ್ಗೊಲೆಯ” ಅಂಕಿ-ಅಂಶಗಳಿಗೆ ಸಂಬಂಧಿಸಿದ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ಅಧಿಕೃತವಾಗಿ ಅಲ್ಲಲ್ಲಿ ಸ್ಪಷ್ಟಪಡಿಸಿದರೂ ಬಿಜೆಪಿಯ ವಾದವನ್ನು ಸಮರ್ಥವಾಗಿ ಖಂಡಿಸುವುದರಲ್ಲಿ ಅದು ಸಫಲವಾಗಿಲ್ಲ. ಮೊನ್ನೆ ಮೊನ್ನೆ ಸ್ಕ್ರಾಲ್.ಇನ್ ಎನ್ನುವ ವೆಬ್-ಆಧಾರಿತ ನಿಯತಕಾಲಿಕವೊಂದು ಬಿಜೆಪಿ ಪ್ರಸ್ತಾಪಿಸುತ್ತಿರುವ ಅಷ್ಟೂ ಹಿಂದೂ ಕೊಲೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳನ್ನು ಸಂದರ್ಶಿಸಿ ವಾಸ್ತವ ಸ್ಥಿತಿ ಏನು ಎನ್ನುವ ವರದಿ ಪ್ರಕಟಿಸಿತು. ಬಿಜೆಪಿಯ ಅರ್ಧ-ಸತ್ಯ ಆಧಾರಿತ ಪ್ರಚಾರವನ್ನು ಎದುರಿಸಲು ಕಾಂಗ್ರೆಸ್ಸಿಗೆ ಇದಕ್ಕಿಂತ ದೊಡ್ಡ ವಸ್ತು ಬೇಕಾಗಿರಲಿಲ್ಲ. ಆದರೆ ಕಾಂಗ್ರೆಸ್ ಈತನಕ ಈ ವರದಿಯನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಪ್ರಮುಖವಾಗಿ ಬಳಸುತ್ತಿರುವುದು ಸಿದ್ದರಾಮಯ್ಯ ಸರಕಾರ ಕೈಗೊಂಡಿರುವ ಸಾಮಾಜಿಕ-ನ್ಯಾಯ ಆಧಾರಿತ ಅಭಿವೃದ್ಧಿ ಮಾದರಿಯನ್ನು. ಬಿಜೆಪಿ ಇದರ ಸುತ್ತ ಕೂಡಾ ಒಂದು ಮತೀಯ-ಜಾತೀಯ ಆಯಾಮವನ್ನು ಸೃಷ್ಟಿಸಿದೆ. ಸಿದ್ದರಾಮಯ್ಯ ಸರಕಾರದ ಸಾಮಾಜಿಕ ನ್ಯಾಯದ ಅಷ್ಟೂ ಯೋಜನೆಗಳೂ ಜಾತಿ-ಜಾತಿಗಳ ಮಧ್ಯೆ ಕಂದಕ ನಿರ್ಮಿಸಿದ ಅಭಿವೃದ್ಧಿ ಮಾದರಿ ಎಂದು ಹಳಿಯುತ್ತಿದೆ. ಬಿಜೆಪಿಯ ಈ ವಾದವನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯುವ ಕೆಲಸವನ್ನು ಕೂಡಾ ಈತನಕ ಕಾಂಗ್ರೆಸ್ ಮಾಡಿಲ್ಲ. ಬಿಜೆಪಿ ಸಮರ್ಥ ಖಾಸಗಿ ವಕೀಲರಂತೆ ತನ್ನ ವಾದ ಮುಂದಿರಿಸಿದರೆ ಉದಾಸೀನ ಮನಸ್ಸಿನಿಂದ ವಾದಿಸುವ ಸರಕಾರೀ ವಕೀಲರಂತೆ ಕಾಂಗ್ರೆಸ್ ಪ್ರತಿವಾದ ಮಂಡಿಸುತ್ತದೆ. ಅಲ್ಲಲ್ಲಿ ಕಾಂಗ್ರೆಸ್ ನೀಡುತ್ತಿರುವ ಸಮರ್ಥನೆ ಒಂದು ಚುನಾವಣಾ ನುಡಿ-ವರಸೆಯಾಗಿ ರೂಪುಗೊಂಡಿಲ್ಲ. ಬರಬರುತ್ತಾ ಬಿಜೆಪಿ ಹೇಳುತ್ತಿರುವುದರಲ್ಲಿ ಸತ್ಯವಿದೆಯೇನೋ ಎನ್ನುವ ಮನೋಭಾವ ಜನರಲ್ಲಿ ಸೃಷ್ಟಿಯಾದರೂ ಆದೀತು. ಕಾಂಗ್ರೆಸ್‍ನಿಂದ ತುಷ್ಟೀಕರಣದ ಕೆಲಸ ಆಗಿದ್ದರೆ, ಅಲ್ಪಸಂಖ್ಯಾತ ಮತೀಯವಾದವನ್ನು ಮಟ್ಟಹಾಕುವ ಕೆಲಸದಲ್ಲಿ ಅದು ವಿಫಲವಾಗಿದ್ದರೆ ಆ ತಪ್ಪುಗಳನ್ನು ಒಪ್ಪಿಕೊಂಡುವಿಫಲವಾಗಿದ್ದರೆ ಆ ಕುರಿತು ಆತ್ಮಾವಲೋಕನ ಮಾಡಿಕೊಂಡರೆ, ತಪ್ಪೊಪ್ಪಿಕೊಂಡರೆ ಅದು ರಾಜಕೀಯವಾಗಿ ಅನಾಹುತಕಾರಿಯಾದ ನಡೆ ಖಂಡಿತವಾಗಿಯೂ ಆಗುವುದಿಲ್ಲ. ಧರ್ಮನಿರಪೇಕ್ಷ ಮೌಲ್ಯವನ್ನು ಎತ್ತಿಹಿಡಿಯುವ ಮೂಲಕ, ಎಲ್ಲಾ ಧರ್ಮಗಳ ಬಗ್ಗೆ ಗೌರವದಿಂದ ಮಾತನಾಡುತ್ತಲೇ ಒಂದು ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಬಿಜೆಪಿಯಿಂದ ಭಿನ್ನವಾದ ರಾಜಕೀಯ ನುಡಿಗಟ್ಟನ್ನು ಮತದಾರರ ಮುಂದಿಡಲು ಇನ್ನೂ ಸಾಧ್ಯವಿದೆ. ಸೆಕ್ಯುಲರ್ ವಾದದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದರ ಮೂಲಕ, ಸೆಕ್ಯುಲರ್ ವಾದ ಎಂದರೆ ಅದು ಹಿಂದೂ ವಿರೋಧಿ ವಾದವೂ ಅಲ್ಲ, ಮುಸ್ಲಿಂ ಪರ ವಾದವೂ ಎಲ್ಲ ಎಂದು ಮತದಾರರಿಗೆ ಮನದಟ್ಟು ಮಾಡುವ ಮೂಲಕ ಬಿಜೆಪಿಯನ್ನು ಎದುರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಅದಕ್ಕೊಂದು ಅರ್ಥವಿದೆ. ಬದಲಿಗೆ ಬಿಜೆಪಿಯ ತಂತ್ರಗಳನ್ನೇ ಅನುಕರಿಸುವ ಮೂಲಕ ಕಾಂಗ್ರೆಸ್ ನಗೆಪಾಟಲಿಗೆ ಗುರಿಯಾಗುತ್ತಿದೆ. ಚುನಾವಣೆಯ ಕಾಲದಲ್ಲಿ ಧಾರ್ಮಿಕ ಕ್ಷೇತ್ರಗಳದರ್ಶನಮಾಡುವುದರ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಹುಸಿ-ಸೆಕ್ಯುಲರಿಸಂನ ಆಪಾದನೆಯನ್ನು ಪರೋಕ್ಷವಾಗಿ ಸಮರ್ಥಿಸುವಂತೆ ಕಾಣಿಸುತ್ತಿದೆ.. ಬಿಜೆಪಿಯದ್ದು ಹುಸಿ ರಾಷ್ಟ್ರೀಯವಾದ ಮತ್ತು ಹುಸಿ ಹಿಂದೂವಾದ ಎನ್ನುವ ಚುನಾವಣಾ ನುಡಿಗಟ್ಟೊಂದನ್ನು ಸಮರ್ಥವಾಗಿ ರೂಪಿಸಲು ಕಾಂಗ್ರೆಸ್ ಮುಂದಾಗುತ್ತಿಲ್ಲ. ಹೀಗಾಗಿ ಕರ್ನಾಟಕದ ಚುನಾವಣಾ ಕಣದಲ್ಲಿ ಸಾಂವಿಧಾನಿಕ ಸೆಕ್ಯುಲರ್ ಮೌಲ್ಯ ಅನಾಥವಾದಂತೆ ತೋರುತ್ತದೆ.

– ಎ. ನಾರಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...