Homeಕರ್ನಾಟಕಮೊಯ್ಲಿ-ಮುನಿಯಪ್ಪ: ತ್ರಿವಳಿ ಜಿಲ್ಲೆಗಳಿಗೆ ಅಮರಿಕೊಂಡಿರುವ ಅವಳಿಗಳು

ಮೊಯ್ಲಿ-ಮುನಿಯಪ್ಪ: ತ್ರಿವಳಿ ಜಿಲ್ಲೆಗಳಿಗೆ ಅಮರಿಕೊಂಡಿರುವ ಅವಳಿಗಳು

- Advertisement -
- Advertisement -

ನೀಲಗಾರ |

ಮೂರು ದಿನಗಳ ಹಿಂದೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೆಲವು ಜಿಲ್ಲೆಗಳ ಕಾಂಗ್ರೆಸ್‌ನ ಮುಖಂಡರ ಜೊತೆ ಒಂದು ಸಭೆ ನಡೆಸಿದರು. ಆಗ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹಿರಿಯ ಎಂ.ಪಿ.ಗಳಾದ ಕೆ.ಎಚ್.ಮುನಿಯಪ್ಪ ಮತ್ತು ವೀರಪ್ಪ ಮೊಯಿಲಿಯವರಿಗೆ ಈ ಸಾರಿ ಟಿಕೆಟ್ ಕೊಡಬಾರದೆಂದು ಸ್ಥಳೀಯ ಮುಖಂಡರು ಆಗ್ರಹಿಸಿದರೆಂದು ವರದಿಯಾಗಿದೆ. ಪತ್ರಿಕೆಗಳಲ್ಲಿ ಸುಳ್ಳು ವರದಿಗಳೂ ಬರಲು ಸಾಧ್ಯ. ಆದರೆ, ಈ ಎರಡು ಜಿಲ್ಲೆಗಳಲ್ಲಿ ಇವರಿಬ್ಬರ ಬಗ್ಗೆ ಸ್ಥಳೀಯ ಕಾರ್ಯಕರ್ತರಿಗಿರುವ ಸಿಟ್ಟಂತೂ ಸುಳ್ಳಲ್ಲ. ಇವರಿಬ್ಬರಿಂದ ಮುಕ್ತಿ ಸಿಗುವವರೆಗೂ ಈ ಜಿಲ್ಲೆಗಳು ಮತ್ತು ಇಲ್ಲಿನ ಕಾಂಗ್ರೆಸ್ ಪಕ್ಷ ಉದ್ಧಾರವಾಗಲ್ಲ ಎಂಬುದು ಬಹಳ ಹಳೆಯ ಮಾತು.

ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳೊಂದಿಗೆ ಹಿಂದೆ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡು ತಾಲೂಕುಗಳನ್ನು ಸೇರಿಸಿಕೊಂಡು ಇವೆರಡು ಲೋಕಸಭಾ ಕ್ಷೇತ್ರಗಳು ರೂಪುಗೊಂಡಿದ್ದವು. 2009ರ ಚುನಾವಣೆಯ ಹೊತ್ತಿಗೆ ಕ್ಷೇತ್ರಗಳ ವ್ಯಾಪ್ತಿ ಬದಲಾಗುವ ಹೊತ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆಯಿಂದ ಪ್ರತ್ಯೇಕವಾಗಿತ್ತು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಕೆ.ಎಚ್.ಮುನಿಯಪ್ಪನವರ ಸ್ವಂತ ತಾಲೂಕಾದ ಶಿಡ್ಲಘಟ್ಟಗಳು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿದ್ದವು. ಚಿಕ್ಕಬಳ್ಳಾಪುರ ಜಿಲ್ಲೆಯ ಉಳಿದ ತಾಲೂಕುಗಳೊಂದಿಗೆ, ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ವೀರಪ್ಪ ಮೊಯಿಲಿಯವರು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರುತ್ತವೆ. ಆ ರೀತಿಯಲ್ಲಿ ಈ ಇಬ್ಬರೂ ತಲಾ ಎರಡೆರಡು ಜಿಲ್ಲೆಗಳ ರಾಜಕಾರಣದೊಳಗೆ ತಲೆ ದೂರಿಸುವ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.

ಈ ಮೂರೂ ಜಿಲ್ಲೆಗಳು, ಬೆಂಗಳೂರು ಮಹಾನಗರವನ್ನು ಬೆಳೆಸುತ್ತಾ, ತಾವು ಮಾತ್ರ ಹಿಂಡಿ ಹೋಗುತ್ತಿವೆ. ನೀರಾವರಿಯ ದೃಷ್ಟಿಯಿಂದ, ರಾಜಕಾರಣದ ದೃಷ್ಟಿಯಿಂದ, ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲದರಲ್ಲೂ ಇವು ನತದೃಷ್ಟ ಜಿಲ್ಲೆಗಳಾಗಿವೆ. ನತದೃಷ್ಟತನಕ್ಕೆ ಇವರಿಬ್ಬರು ಲೋಕಸಭಾ ಸದಸ್ಯರನ್ನು ಸೇರಿಸಿದರೆ, ಅಲ್ಲಿಗೆ ಮೂರು ಜಿಲ್ಲೆಗಳ ಜನರಿಗೂ ಮೂರುನಾಮ ಹಾಕುವಷ್ಟು ಐರನ್‌ಲೆಗ್ ಅದೃಷ್ಟ ಇವರಿಬ್ಬರದ್ದಾಗಿದೆ.

ಮೊಯ್ಲಿ ಮಹಾತ್ಮೆ ಇಲ್ಲಿಗೆ ಬಿದ್ದಿದ್ದು ಈಗಷ್ಟೇ. ಕೆ.ಎಚ್.ಮುನಿಯಪ್ಪನವರು ಕೋಲಾರಕ್ಕೆ ವಕ್ಕರಿಸಿಕೊಂಡಿದ್ದು ’ಪುರಾತನ ಕಾಲದಲ್ಲಿ. ಅವಿಭಜಿತ ಕೋಲಾರ ಜಿಲ್ಲೆಯು ರಾಜ್ಯದಲ್ಲೆ ಅತ್ಯಂತ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲೊಂದು. ಹಾಗಾಗಿಯೇ ಕೋಲಾರ ಲೋಕಸಭಾ ಕ್ಷೇತ್ರವು ಎಸ್.ಸಿ. ಮೀಸಲು ಕ್ಷೇತ್ರವಾಗಿದೆ. ಮೂರ್‍ನಾಲ್ಕು ಟರ್ಮ್ ಪ್ರತಿನಿಧಿಸಿದ ಬೋವಿ ಸಮುದಾಯದ ಜಿ.ವೈ.ಕೃಷ್ಣನ್ ಆಗಲೀ, ಇಂದಿರಾ ಗಾಂಧಿ ಸಾವಿನ ಅನುಕಂಪದ ಅಲೆಯನ್ನು ದಾಟಿ ಗೆದ್ದು ಬಂದ ವೆಂಕಟೇಶ್ ಆಗಲೀ ವಿಶೇಷ ಕೊಡುಗೆಯನ್ನೇನೂ ನೀಡಿರಲಿಲ್ಲ. ಹೀಗಿರುವಾಗ ಆಗಿನ್ನೂ ಕೋಲಾರ ಕ್ಷೇತ್ರಕ್ಕೆ ಸೇರಿರದ ಶಿಡ್ಲಘಟ್ಟದ ಕೆ.ಎಚ್.ಮುನಿಯಪ್ಪರಿಗೆ ಟಿಕೆಟ್ ಸಿಕ್ಕಿದ್ದಕ್ಕೆ ಒಂದು ಸ್ವಾರಸ್ಯಕರ ಹಿನ್ನೆಲೆಯಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಇಂದಿರಾ ಅಲೆಯಲ್ಲಿ ಗೆದ್ದು ಬಂದಿದ್ದ ವಿ.ಕೃಷ್ಣರಾವ್‌ರಿಗೆ ದೆಹಲಿಯಲ್ಲಿ ಕೆ.ಎಚ್.ಮುನಿಯಪ್ಪ ಒಳ್ಳೇ ಸಾಥ್ ಕೊಡುತ್ತಿದ್ದರು. ಯಾವುದರಲ್ಲಿ ಎಂದುಕೊಂಡಿರೋ….. ದೆಹಲಿಯ ದೇವಸ್ಥಾನಗಳನ್ನು ಒಂದಾದ ಮೇಲೆ ಒಂದು ಸುತ್ತುತ್ತಿದ್ದ ಬ್ರಾಹ್ಮಣ ವಿ.ಕೃಷ್ಣರಾವ್‌ರಿಗೆ ದಲಿತ ಸಮುದಾಯಕ್ಕೆ ಸೇರಿದ್ದ ಕೆ.ಎಚ್.ಮುನಿಯಪ್ಪರೇ ಸಾಥಿ. ಇಂತಹ ಜೊತೆಗಾರ ಪಕ್ಕದ ಕ್ಷೇತ್ರದಿಂದ ಗೆದ್ದರೆ ಒಳ್ಳೆಯದೆಂದು ಕೃಷ್ಣರಾವ್ ಪ್ರಭಾವ ಬೀರಿ, ಮುನಿಯಪ್ಪಗೆ ಟಿಕೆಟ್ ಕೊಡಿಸಿದ್ದರು. ನಂತರದಲ್ಲಿ ವಿ.ಕೃಷ್ಣರಾವ್, ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಕೆಪಿಸಿಸಿಗೇ ಅಧ್ಯಕ್ಷರಾಗಿದ್ದು ಮತ್ತೊಂದು ಆಶ್ಚರ್ಯಕರವಾದ ಸಂಗತಿಯಾಗಿತ್ತು. ಆಗಿನ ಮುಖ್ಯಮಂತ್ರಿ ವೀರಪ್ಪಮೊಯಿಲಿ ಮತ್ತು ಕೃಷ್ಣರಾವ್ ಇಬ್ಬರೂ ಸೇರಿ ಕರ್ನಾಟಕದ ಕಾಂಗ್ರೆಸ್‌ಗೆ 1994ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಅಲ್ಲಿಂದ ಮುಂದೆ ಕೃಷ್ಣರಾವ್ ಮುಂದಿನ ಚುನಾವಣೆಯಲ್ಲಿ ಆಗ ಜನತಾದಳದಲ್ಲಿದ್ದ ಆರ್.ಎಲ್.ಜಾಲಪ್ಪನವರೆದುರು ಸೋತು ಮೂಲೆಗುಂಪಾದರು. ಮುಂದಿನ ಸಾರಿಯೂ ಗೆದ್ದ ಕೆ.ಎಚ್. ಕೋಲಾರ ಕ್ಷೇತ್ರದಲ್ಲಿ ನೆಲೆಯೂರಿದರು.

ನೆಲೆಯೂರಿದ್ದು ಎಂದರೆ ಹಂಗಿಂಗಲ್ಲ; ಕೋಲಾರದ ಯಾವುದೇ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಥವಾ ಸೋತ ಅಭ್ಯರ್ಥಿ ತನ್ನ ಪರವಾಗಿ ಬಲವಾಗಿ ನಿಲ್ಲದೇ ಹೋಗಬಹುದು ಎನಿಸಿದರೆ, ಅವರ ವಿರೋಧಿ ಪಕ್ಷದ ನಾಯಕನನ್ನೇ ಪಟಾಯಿಸುವುದರಲ್ಲಿ ಕೆ.ಎಚ್.ಗಿಂತ ಸಾಟಿ ಯಾರೂ ಇಲ್ಲ. ಹಾಗಾಗಿಯೇ ಚಿಂತಾಮಣಿಯ ಸುಧಾಕರ್ ವಿರುದ್ಧವಾಗಿ ಜೆಡಿಎಸ್‌ನ ಆಗಿನ ಕೃಷ್ಣಾರೆಡ್ಡಿ, ಈಗಿನ ಜೆ.ಕೆ.ಕೃಷ್ಣಾರೆಡ್ಡಿ, ಮಾಲೂರಿನ ಬಿಜೆಪಿ ನಾಯಕ ಕೃಷ್ಣಯ್ಯಶೆಟ್ಟಿ ಒಳಗೊಂಡಂತೆ ವಿರೋಧ ಪಕ್ಷದಲ್ಲಿದ್ದರೂ ಕೆ.ಎಚ್. ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಯಶಸ್ವಿಯಾಗುತ್ತಿದ್ದರು. ಆ ಹೊತ್ತಿಗೆ ಕೋಲಾರ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಅಂತಹ ಧುರೀಣರೂ ಇರಲಿಲ್ಲ. ಕೆ.ಎಚ್.ಗಿಂತ ಹಿರಿಯರಾದ ರಮೇಶ್‌ಕುಮಾರ್ ಕಾಂಗ್ರೆಸ್‌ಗೆ ಬಂದದ್ದು ಎಸ್.ಎಂ.ಕೃಷ್ಣ ಕಾಲದಲ್ಲಿ. ರಮೇಶ್‌ಕುಮಾರ್ರೇ ಪ್ರಳಯಾಂತಕ ಎಂಬ ಅಭಿಪ್ರಾಯ ಹಲವರಲ್ಲಿದೆಯಾದರೂ, ದಾನಿಕಿ ಮಿಂಚಿನ ಪ್ರಳಯಾಂತಕುಡು (ಅದನ್ನು ಮೀರಿಸಿದ ಪ್ರಳಯಾಂತಕುಡು) ಕೆ.ಎಚ್. ಎಂಬುದು ಇಲ್ಲಿ ಜನಜನಿತ.

V Krishna rao

ತನ್ನ ಕ್ಷೇತ್ರಕ್ಕೂ ನಯಾಪೈಸೆ ಕೆಲಸ ಮಾಡದ, ವಿರೋಧಿಗಳನ್ನು ಸೈಲೆಂಟಾಗಿಯೇ ಬಗ್ಗು ಬಡಿವ ಕೆ.ಎಚ್. ಅಲ್ಲಿಂದ ಇಲ್ಲಿಯವರೆಗೆ ಗೆದ್ದು ಬಂದಿದ್ದು ಬರೋಬ್ಬರಿ 7 ಸಾರಿ, ಒಟ್ಟು ಮೂವತ್ತು ವರ್ಷಗಳು. ಮೀಸಲು ಕ್ಷೇತ್ರದಿಂದ ಗೆದ್ದು ಬರುತ್ತಿರುವುದು ಮಾತ್ರವಲ್ಲದೇ, ಇದೇ ಅವಧಿಯಲ್ಲಿ ಮೇಲೆದ್ದ ಒಳಮೀಸಲಾತಿ ಕೂಗಿನ ಲಾಭವೂ ಎಡಗೈ ಸಮುದಾಯದ ಕೆ.ಎಚ್. ಅವರಿಗೆ ಆಗುತ್ತಲೇ ಇದೆ. ಆ ಕಾರಣದಿಂದ ಕಾಂಗ್ರೆಸ್ ಹೈಕಮ್ಯಾಂಡ್ ಅವರನ್ನು ನಿರ್ಲಕ್ಷಿಸುವಂತಿಲ್ಲ. ಆದರೆ, ದಲಿತ ಸಮುದಾಯಕ್ಕಾಗಲೀ, ಮಾದಿಗ ಸಮುದಾಯಕ್ಕಾಗಲೀ ಇವರಿಂದ ನಯಾಪೈಸೆ ಉಪಯೋಗವಾಗಿಲ್ಲ. ಆ ಸಮುದಾಯಕ್ಕಾಗಿ ಅವರು ಮಾಡಿದ ಉಪಯೋಗವೆಂದರೆ, ಅದೇ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಗೆ ಕೆಜಿಎಫ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದು ಮತ್ತು ಅವರು ಮಂತ್ರಿಯಾಗಬೇಕೆಂದು ಒತ್ತಡ ಹೇರುತ್ತಿರುವುದು. ಆ ಮಹಿಳೆಯ ಹೆಸರು ರೂಪಾ ಶಶಿಧರ್, ಕೆ.ಎಚ್.ಮುನಿಯಪ್ಪನವರ ಸ್ವಂತ ಪುತ್ರಿ!

ಕೋಲಾರ ಜಿಲ್ಲೆಯು ಎದುರಿಸುತ್ತಿರುವ ತೀವ್ರ ಬರ, ನೀರಾವರಿ ಸಮಸ್ಯೆಗೆ ಪರ್ಯಾಯವನ್ನು ಕಂಡುಕೊಳ್ಳುವುದು ಇವಕ್ಕೂ ಮುನಿಯಪ್ಪನವರಿಗೂ ಸಂಬಂಧವೇ ಇಲ್ಲ. ತಾನೇ ರೈಲ್ವೇ ಖಾತೆಯನ್ನೂ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದಾಗಲೂ, ಕ್ಷೇತ್ರದ ಚಹರೆಯಲ್ಲಿ ಯಾವ ದೊಡ್ಡ ಬದಲಾವಣೆಯೂ ಬರಲಿಲ್ಲ. ರೈಲ್ವೇ ಇಲಾಖೆಗೆ ಸೇರಿದ ಒಂದು ಕಾರ್ಖಾನೆ ಮತ್ತು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಒಂದು ರೈಲನ್ನು ಮುನಿಯಪ್ಪನವರ ಸಾಧನೆಗಿಂತ, ಮಿತಿಯನ್ನು ತೋರಿಸಲು ಉದಾಹರಣೆಯನ್ನಾಗಿ ಬಳಸಬಹುದು.

ಯಾವ ರೀತಿಯ ವರ್ಚಸ್ಸನ್ನಾಗಲೀ, ಕ್ಷೇತ್ರದ ಸಂಪರ್ಕವಾಗಲೀ ಇಲ್ಲದ ಜೆಡಿಎಸ್‌ನ ಕೇಶವ ಅವರ ಮೇಲೆ ಕಳೆದ ಸಾರಿ ಕೇವಲ 47,850 ಮತಗಳಿಂದ ಕೆ.ಎಚ್.ಗೆದ್ದಿದ್ದರು. ಬಿಜೆಪಿಯ ನಾರಾಯಣಸ್ವಾಮಿಗೂ 2.67 ಲಕ್ಷಕ್ಕೂ ಹೆಚ್ಚು ಮತಗಳು ಬಿದ್ದಿದ್ದವು. ಈ ಸಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾದರೂ ಮುನಿಯಪ್ಪ ವಿರೋಧಿ ಮತಗಳು ಕನ್ಸಾಲಿಡೇಟ್ ಆಗಿ ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲು ಕಟ್ಟಿಟ್ಟ ಬುತ್ತಿಯೆಂಬುದು ಸ್ವತಃ ಕಾಂಗ್ರೆಸ್‌ನ ಮುಂಚೂಣಿ ಮುಖಂಡರ ಅಭಿಪ್ರಾಯ.

ತನ್ನ ವರಸೆಗಳಲ್ಲಿ ಕೆ.ಎಚ್.ಗೆ ಪೈಪೋಟಿ ನೀಡುವಂತಹ ಇನ್ನೊಬ್ಬ ನಾಯಕ ವೀರಪ್ಪ ಮೊಯಿಲಿಯವರ ಮಹಾತ್ಮೆಯನ್ನು ಪಕ್ಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕಳೆದ 10 ವರ್ಷಗಳಲ್ಲಿ ಕಾಣುತ್ತಿವೆ. ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಭೀಕರ ಸೋಲು ಕಾಣುತ್ತಾ ರಾಷ್ಟ್ರೀಯ ನಾಯಕರಾಗುವ ಕರಾವಳಿಯ ನಾಲ್ಕು ಬೃಹತ್ ನಾಯಕರಲ್ಲಿ ವೀರಪ್ಪ ಮೊಯಿಲಿಯೂ ಒಬ್ಬರು. ಜನಾರ್ಧನ ಪೂಜಾರಿ ಕಡೆಯ ಬಾರಿಗೆ ಗೆಲ್ಲುವ ಸಾಧ್ಯತೆಯಿದ್ದ ಅವಧಿಯಲ್ಲಿ, ಅವರನ್ನು ಪಕ್ಕಕ್ಕೆ ಸರಿಸಿ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೊಯ್ಲಿ ಅಲ್ಲಿ ಸೋತರಷ್ಟೇ ಅಲ್ಲದೇ, ಅಲ್ಲಿಂದ ಮುಂದಕ್ಕೆ ಕಾಂಗ್ರೆಸ್ ಗೆಲುವೇ ಕಾಣದಾಯಿತು.

ಹೀಗಾಗಿ, ಬೇರೊಂದು ಕ್ಷೇತ್ರದ ಹುಡುಕಾಟದಲ್ಲಿದ್ದ ಅವರಿಗೆ ಕಂಡಿದ್ದು, ಆರ್.ಎಲ್.ಜಾಲಪ್ಪನವರು ತೆರವು ಮಾಡಲಿದ್ದ ಚಿಕ್ಕಬಳ್ಳಾಪುರ. ಮೂರು ಬಾರಿ ಕೃಷ್ಣರಾವ್ ಮತ್ತು ನಾಲ್ಕು ಬಾರಿ ಜಾಲಪ್ಪನವರು ಗೆದ್ದಿದ್ದ ಆ ಕ್ಷೇತ್ರದಲ್ಲಿ, ಒಮ್ಮೆ ಸ್ವತಃ ಜಾಲಪ್ಪನವರೇ ಜನತಾದಳದಿಂದ ಗೆದ್ದಿದ್ದು ಬಿಟ್ಟರೆ ಸದಾ ಕಾಂಗ್ರೆಸ್ಸಿಗೇ ಗೆಲುವು ಸಂದಿತ್ತು. ವಯಸ್ಸಿನ ಕಾರಣ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ವಿರೋಧ ಕಟ್ಟಿಕೊಂಡಿದ್ದರಿಂದ ಜಾಲಪ್ಪ, ಚುನಾವಣಾ ರಾಜಕಾರಣದಿಂದ ಒಂದು ಕಾಲು ಹೊರಗಿಟ್ಟಿದ್ದರು. ಕಾಂಗ್ರೆಸ್ಸಿನ ಋಣ ತೀರಿಸಲು ಅಣುಒಪ್ಪಂದದ ಸಂದರ್ಭದಲ್ಲಿ ಓಟು ಹಾಕಿ, ಸೋನಿಯಾರಿಗೊಂದು ಪತ್ರ ಬರೆದು ಕಾಂಗ್ರೆಸ್ಸಿಗೂ, ರಾಜಕಾರಣಕ್ಕೂ ಜಾಲಪ್ಪ ಗುಡ್‌ಬೈ ಹೇಳಿದ್ದರು. ಅವರ ಮಗ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು, ಆಪರೇಷನ್ ಕಮಲಕ್ಕೆ ಒಳಗಾದಾಗ, ಅದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಜಾಲಪ್ಪ ಹೇಳುವುದನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಿರಲಿಲ್ಲ.

ಹಾಗಾಗಿ 2009ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವೇ ಸೇಫ್ ಸೀಟೆಂದು ಅಲ್ಲಿಗೆ ಮೊಯ್ಲಿ ಜಂಪ್ ಮಾಡಿದ್ದರು. ಮೊದಲ ಬಾರಿಗಾದ್ದರಿಂದ ಕ್ಷೇತ್ರದಲ್ಲೂ ಹೆಚ್ಚಿನ ವಿರೋಧ ಬರದೇ ಗೆಲುವು ದಕ್ಕಿತ್ತು. ಮುಖ್ಯಮಂತ್ರಿಯಾಗಿದ್ದಾಗ ಸುಳ್ಳಿನ ಸರದಾರರೆಂದು ಖ್ಯಾತಿ ಗಳಿಸಿದ್ದ ಮಹಾತ್ಮರನ್ನು ಚಿಕ್ಕಬಳ್ಳಾಪುರದ ಜನತೆ ಹತ್ತಿರದಿಂದ ನೋಡಿ ದಂಗುಬಡಿದು ಹೋಗಿತ್ತು. ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡದೇ, ಅಗತ್ಯವಿಲ್ಲದೇ ಇದ್ದರೂ ಸುಳ್ಳು ಹೇಳುವ ಮತ್ತು ಪ್ರಭಾವಿಯೂ ಆಗುವ ರಾಜಕಾರಣಿಯೂ ಇರುವುದು ಸಾಧ್ಯವೆಂದು ಇಲ್ಲಿನ ಜನರಿಗೆ ಇನ್ನೊಮ್ಮೆ ಮನವರಿಕೆಯಾಯಿತು. ಈ ಎಲ್ಲಾ ಗುಣಗಳಲ್ಲಿ ಹಳೆಯ ಕೃಷ್ಣರಾವ್‌ರನ್ನು ಮೀರಿಸಿದ ನಾಯಕನಾಗಿ ಮೆರೆದರಷ್ಟೇ ಅಲ್ಲದೇ, 2014ರ ಚುನಾವಣೆಗೆ ಮುಂಚೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿಸಿ ಇನ್ನೊಂದು ದ್ರೋಹವನ್ನೂ ಎಸಗಿದರು.

ಕಾಂಗ್ರೆಸ್ ಹೈಕಮ್ಯಾಂಡ್ ಜೊತೆಗೆ ಚೆನ್ನಾಗಿದ್ದ ಮೊಯ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಧನ ಖಾತೆ ಮತ್ತು ಅರಣ್ಯ ಹಾಗೂ ಪರಿಸರ ಖಾತೆ ಹೊಂದಿದ್ದ ಏಕೈಕ ಸಚಿವ. ಅಂಬಾನಿಗೆ ಕೃಷ್ಣಾ ಗೋದಾವರಿ ಕಣಿವೆಯಲ್ಲಿನ ತೈಲ ನಿಕ್ಷೇಪವನ್ನು ಬರೆದುಕೊಡಲೆಂದೇ ಆ ಅರೇಂಜ್‌ಮೆಂಟ್ ಆಗಿತ್ತು. ಆಮ್‌ಆದ್ಮಿ ಪಕ್ಷದ ಮೊದಲ ಅವಧಿಯಲ್ಲಿ ದೆಹಲಿ ಎಸಿಬಿ ಮೂಲಕ ಈ ಡೀಲ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ಆದಾಗ, ಮೊಯ್ಲಿಯೂ ಅದರಲ್ಲಿ ಆರೋಪಿಯಾಗಿದ್ದರು. ಮೊಯ್ಲಿ ಮತ್ತು ಅಂಬಾನಿಯನ್ನು ಉಳಿಸಲು ಯುಪಿಎ ಸರ್ಕಾರವು ಕೇಂದ್ರ ಸರ್ಕಾರದ ವ್ಯವಹಾರಗಳನ್ನು ತನಿಖೆ ಮಾಡುವ ದೆಹಲಿ ಎಸಿಬಿಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿತ್ತು!!

R L Jalappa

ಸ್ಥಳೀಯವಾಗಿ ಸೋತು ಹೋಗಿದ್ದ ಸಂಪಂಗಿ ಥರದವರನ್ನು ಬಿಟ್ಟರೆ ಬಹುತೇಕ ಎಂಎಲ್‌ಎಗಳ ಅಸಮಾಧಾನಕ್ಕೆ ಗುರಿಯಾಗಿದ್ದ ಮೊಯ್ಲಿಯವರನ್ನು ಇನ್ನೊಂದು ಅವಧಿಗೆ ಗೆಲ್ಲಿಸಿ ಕಳಿಸಲು ಯಾರೂ ಸಿದ್ಧರಿರಲಿಲ್ಲ. ಹೈಕಮ್ಯಾಂಡ್‌ನ ಹುಕುಂ ಇದ್ದರೂ ತನಗೆ ಗೆಲುವು ಕಷ್ಟವೆಂದು ಮೊಯ್ಲಿಯವರಿಗೆ ಅರಿವಾಗಿತ್ತು. ಕೆ.ಎಚ್. ಸ್ಥಳೀಯವಾಗಿ ವಿರೋಧ ಪಕ್ಷದಲ್ಲಿರುವ ಎಂಎಲ್‌ಎ ಅಥವಾ ಎಂಎಲ್‌ಎ ಕ್ಯಾಂಡಿಡೇಟ್‌ಗಳನ್ನು ಮ್ಯಾನೇಜ್ ಮಾಡಿದರೆ, ಮೊಯ್ಲಿ ವಿರೋಧ ಪಕ್ಷದ ನಾಯಕನನ್ನೇ ಮ್ಯಾನೇಜ್ ಮಾಡಿದರು. ಎಲ್ಲೆಡೆ ಇರುವ ವದಂತಿಯೆಂದರೆ, ಅಂಬಾನಿ ಮೂಲಕ ಭಾರೀ ದೊಡ್ಡ ಮೊತ್ತವನ್ನು ನೀಡಿ, ಮೊಯ್ಲಿ ಜೆಡಿಎಸ್‌ನೊಂದಿಗೆ ಡೀಲ್ ಕುದುರಿಸಿದರು. ಅದರಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಚಿಕ್ಕಬಳ್ಳಾಪುರಕ್ಕೆ ಬಂದ ಕುಮಾರಸ್ವಾಮಿ ಮೂರನೇ ಸ್ಥಾನ ಪಡೆದುಕೊಂಡರು. ಹೊಸಕೋಟೆಯನ್ನೊಂದು ಬಿಟ್ಟರೆ ಇನ್ನೆಲ್ಲಾ ಕ್ಷೇತ್ರಗಳಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಮೂರನೆ ಸ್ಥಾನಕ್ಕೆ ಹೋಗಿದ್ದೇಕೆ? ಇದರ ಲಾಭ ಯಾರಿಗೆ? ಎಂಬುದು ಚಿದಂಬರ ರಹಸ್ಯವೇನಾಗಿರಲಿಲ್ಲ. ಮೊಯ್ಲಿ ವಿರುದ್ಧವಿದ್ದ ಮತಗಳನ್ನು ಒಡೆದು ಎಚ್‌ಡಿಕೆ, ಬಚ್ಚೇಗೌಡರನ್ನು ಸೋಲಿಸಿದ್ದರು!!! ಮಾಜಿ ಮುಖ್ಯಮಂತ್ರಿ, ಪ್ರಭಾವಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಕೇವಲ 9,520 ಮತಗಳ ಅಂತರದಿಂದ ಬಚಾವಾಗಿದ್ದರು.

ಈ ಸಾರಿ ಕೋಲಾರದಲ್ಲಾಗುವಂತೆ, ಮೊಯ್ಲಿ ವಿರುದ್ಧದ ಮತಗಳ ಕ್ರೋಢೀಕರಣವಾಗುವ ಎಲ್ಲಾ ಸಾಧ್ಯತೆಯಿದೆ. ಈಗಾಗಲೇ ಬಚ್ಚೇಗೌಡರೇ ಇಲ್ಲಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿಯಾಗಿದೆ. ಮೀಸಲು ಕ್ಷೇತ್ರಗಳೆರಡನ್ನು ಬಿಟ್ಟರೆ ಉಳಿದೆಲ್ಲೆಡೆ ಇರುವ ಒಕ್ಕಲಿಗ/ರೆಡ್ಡಿ ಶಾಸಕರು ಮೊಯ್ಲಿಗೆ ಮುಳ್ಳಾಗುವುದರಲ್ಲಿ ಸಂದೇಹ ಯಾರಿಗೂ ಉಳಿದಿಲ್ಲ.

ಇವೆಲ್ಲದರ ಪರಿಣಾಮವಾಗಿ ಈ ಜಿಲ್ಲೆಗಳಲ್ಲಿ ಎಂಪಿಗಳು ನಾಯಕರಾಗುಳಿದಿಲ್ಲ. ಪ್ರತೀ ತಾಲೂಕಿಗೂ ಅಲ್ಲಿನ ಎಂಎಲ್‌ಎನೇ ನಾಯಕ. ಜಿಲ್ಲಾ ಮಟ್ಟದ ನಾಯಕರು ಅಂತ ಯಾರೂ ಇಲ್ಲ. ಡಿಸಿಸಿ ಅಧ್ಯಕ್ಷನ ಸ್ಥಾನ ಇರಲಿ, ಜಿಪಂ ಅಧ್ಯಕ್ಷನದ್ದಿರಲಿ, ಡಿಸಿಸಿ ಬ್ಯಾಂಕ್‌ದಿರಲಿ ಎಲ್ಲವೂ ಕಿತ್ತಾಡಿಯೇ ಬಗೆಹರಿಯಬೇಕು. ಜಿ.ಪಂ ಅಧ್ಯಕ್ಷನ ಸ್ಥಾನದ್ದು ದೊಡ್ಡ ಗಲಾಟೆಯೇ ಆಗಿ ಹೋಯಿತು. ಅದಕ್ಕೆ ಸಂಬಂಧಿಸಿದ ಜಗಳವು ರಾಹುಲ್‌ಗಾಂಧಿಯವರೆಗೂ ಹೋಗಿತ್ತು. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ರಾಹುಲ್, ಡಿಕೆಶಿ, ಸಿದ್ದು, ಮುನಿಯಪ್ಪ ಮಾತಾಡುತ್ತಿದ್ದಾಗ ದೂರದಿಂದ ವಿಡಿಯೋ ಮಾಡಿದ ಒಬ್ಬಾತ ಚಿಕ್ಕಬಳ್ಳಾಪುರದ ಸಮಸ್ಯೆಯ ಕುರಿತು ನಡೆದ ಸಂಭಾಷಣೆಯ ಧ್ವನಿ ಸಮೇತ ವೈರಲ್ ಮಾಡಿದ್ದ.

ಆದರೆ, ಇಂತಹವು ಯಾವುವೂ ಈ ಇಬ್ಬರು ಹಿರಿಯ ನಾಯಕರ ವರಸೆಗಳನ್ನು ಬದಲಿಸುವುದಿಲ್ಲ. ಹಳೆಯ ಮುಖಗಳಿಗೇ ಮಣೆ ಹಾಕಬೇಕೆಂದು ಕಾಂಗ್ರೆಸ್ ನಿರ್ಧರಿಸಿದರೆ, ಈ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ಖಚಿತ. ಅದರ ಬದಲು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಸಮಾನ ಶತ್ರುವನ್ನಾದರೂ ಸೋಲಿಸುವ ಸಾಧ್ಯತೆ ಇರುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...