Homeಅಂಕಣಗಳುಕೇಳು ರಕ್ತವೇ ಕೇಳು ಹರಿಯದಿರು ನಿಲ್ಲು, ಹರಿವ ರಕ್ತವೇ ಕೇಳು ಉಕ್ಕದಿರು ನಿಲ್ಲು!

ಕೇಳು ರಕ್ತವೇ ಕೇಳು ಹರಿಯದಿರು ನಿಲ್ಲು, ಹರಿವ ರಕ್ತವೇ ಕೇಳು ಉಕ್ಕದಿರು ನಿಲ್ಲು!

ಕನ್ನಡದ ಜಾನಪದ ಸಂವೇದನೆಗಳನ್ನು ಗ್ರಹಿಸುತ್ತಾ ಹೋಗಬಹುದಾದ ಈ ಕಲೆವಲ ಕಾವ್ಯವು ಫಿನ್ಲೆಂಡಿನ ಕಾವ್ಯ ಎಂಬುದನ್ನು ಮರೆಯುವಂತೆ ಡಾ. ಕೆ ಆರ್ ಸಂಧ್ಯಾರೆಡ್ಡಿಯವರು ಅನುವಾದಿಸಿದ್ದಾರೆ.

- Advertisement -
- Advertisement -

ಏರು ಜವ್ವನದ ಗಾಳಿಯ ಮಗಳಿಗೋ ಬೆದೆಯು ತಿದಿಯೊತ್ತುತ್ತಿರುವಂತ ತಾಪ. ಏಕಾಂಗಿತನದ ಬೇಗೆಯನ್ನು ತಣಿಸಿಕೊಳ್ಳಲು ಸಮುದ್ರದೊಳಗಿಳಿಯುತ್ತಾಳೆ. ಕಡಲಿನ ಅಲೆಗಳು ಮತ್ತು ಗಾಳಿಯೆರಡೂ ಅವಳನ್ನು ಬಸಿರು ಮಾಡಿ, ಅವಳು ಜಲಮಾತೆಯಾಗುತ್ತಾಳೆ. ಅವಳೇ ಭೂಶಿಖರ, ಕಡಲತೀರ, ಸಾಗರದ ಆಳಗಳನ್ನು ರೂಪಿಸುತ್ತಾಳೆ. ಸೃಷ್ಟಿಯನ್ನು ಮಾಡುವವಳು ಇಲ್ಲಿ ಹೆಣ್ಣು. ಬೈಬಲ್ಲಿನ ಆದಮನಂತೆ ಅವಳ ಮಗ ವೆಯ್ನಮೊಯ್ನನ್ ಆದಿ ಚಾರಣಿಗ. ಅವನ ಕತೆಯೇ ಇನ್ನು ಕಲೆವಲದ ಮುಖ್ಯ ಭೂಮಿಕೆ.

ಭಾರತದ ಹಿರಣ್ಯಗರ್ಭದ ಪರಿಕಲ್ಪನೆಯಂತೆ ಕಲೆವಲದ ಸೃಷ್ಟಿಯ ಕತೆಯಲ್ಲಿಯೂ ಒಂದಿದೆ.

ಏನದ್ಭುತ ಯಾವೊಂದು ಚೂರೂ ಹಾಳಾಗಲಿಲ್ಲ
ಸೋಜಿಗದ ಬದಲಾವಣೆ ಕಂಡು ಬಂತಲ್ಲ
ಭೂಮಿಯಾಯಿತು ತತ್ತಿ ಕೆಳಗಿನ ಚೂರು
ಮೇಲಿನದ ಬಾನು
ಹೊಳೆವ ರವಿಯಾಯ್ತು ಹಳದಿ ಭಂಡಾರ
ಬೆಳ್ಳಿ ಚಂದಿರನಾಯ್ತು ಬಿಳಿಯ ಲೋಳೆ
ಉಳಿದ ಚೂರೆಲ್ಲಾ ನಕ್ಷತ್ರತಾರೆ.

ಜಗತ್ತಿನ ಉಗಮ, ಮನುಷ್ಯನ ಅಸ್ತಿತ್ವಕ್ಕೆ ಅಗತ್ಯವಿರುವ ಬೆಳಕು, ಫಲವಂತಿಕೆ, ಬೆಂಕಿ, ಲೋಹಗಳೆಲ್ಲವೂ ಕಾವ್ಯದಲ್ಲಿ ಜೀವ ತಳೆಯುತ್ತವೆ. ಹಾಗೆಯೇ ಪ್ರಾರಂಭಿಕ ವೀರರು ಜಗತ್ತಿನಲ್ಲಿ ಮನುಷ್ಯನ ಬದುಕಿಗೆ ಅಗತ್ಯವಿರುವ ನಿಯಮ ಮತ್ತು ರೂಢಿ ನೀತಿಗಳನ್ನು ಸರಿತಪ್ಪುಗಳ ಪ್ರಯೋಗದಿಂದ ಕಂಡು ನೇಮಗೊಳಿಸಿದರು. ಮಾನುಷ ಮಿತಿಗಳನ್ನು ಮೀರಿ ನಡೆಯಬೇಕಾದ ಸಂಗತಿಗಳನ್ನು ಆಗುಗೊಳಿಸಲು ಮಾಟಗಳಂತಹ ಅತೀಂದ್ರಿಯ ಶಕ್ತಿಗಳನ್ನು ಕಂಡುಕೊಂಡರು.

ಜಾನಪದದ ಮೌಖಿಕ ಕಾವ್ಯಗಳ ಸೊಗಸೇ ಅಂತಹದ್ದು. ಹೊಲದಲ್ಲಿ ಕೆಲಸ ಮಾಡುವಾಗ, ಬೇಟೆಗೆ ಹೋಗಿರುವಾಗ, ನೂಲು ತೆಗೆಯುತ್ತಾ, ನೇಯುತ್ತಾ, ಬಲೆಗಳನ್ನು ಹೆಣೆಯುತ್ತಾ, ಮದುವೆಯ ಆಚರಣೆಯಲ್ಲಿ; ಹೀಗೆ ದೈನಂದಿನ ಬದುಕಿನಲ್ಲಿ ಮತ್ತು ಬದುಕಿನ ಮುಖ್ಯ ಘಟ್ಟಗಳಲ್ಲಿಯೂ ಈ ಕಾವ್ಯವನ್ನು ಫಿನ್ನಿಶ್ ಜನರು ಹಾಡಿಕೊಳ್ಳುತ್ತಿದ್ದರು. ಕಾವ್ಯದಲ್ಲಿನ ಮಾಟಮಂತ್ರದ ವಿಷಯಗಳು ಮನರಂಜನೆಯ ವಿಷಯಗಳಾದವು. ಅಧ್ಯಯನ ಮಾಡುವವರಿಗೆ ಅಧ್ಯಯನದ ವಸ್ತುಗಳಾದವು.

ಕಲೆವಲದ ಬಗ್ಗೆ ಫಿನ್‍ಲೆಂಡಿನ ಜನತೆ ಆದರ, ಅಭಿಮಾನದಿಂದ ಇಂದಿಗೂ ಹಾಡುತ್ತಿದ್ದಾರೆ ಮತ್ತು ಅಧ್ಯಯನದ ವಸ್ತುವನ್ನಾಗಿಟ್ಟುಕೊಂಡು ಗಂಭೀರವಾಗಿ ಪರಿಗಣಿಸಿದ್ದಾರೆ. ಕಲೆವಲದಲ್ಲಿ ಉಲ್ಲೇಖಿಸಿರುವಂತಹ ಆಭರಣಗಳು ಮತ್ತು ವಸ್ತ್ರವಿನ್ಯಾಸಗಳನ್ನೂ ಅನುಕರಿಸುವ ಮೂಲಕ ತಮ್ಮ ಸಾಂಸ್ಕೃತಿಕ ಅಭಿರುಚಿಯಲ್ಲಿ ಜೀವಂತವಿರಿಸಿಕೊಂಡಿದ್ದಾರೆ. ಈ ಕಾವ್ಯದಲ್ಲಿ ಪುರಾಣದ ಪದ್ಯಗಳೂ ಇವೆ. ಭಾರತವೂ ಸೇರಿದಂತೆ ವಿಶ್ವದ ಅನೇಕಾನೇಕ ಪುರಾಣಗಳ ಛಾಯೆಯನ್ನು ಈ ಕಲೆವರದಲ್ಲಿ ನೋಡಬಹುದು. ಈ ಕಾವ್ಯದ ಪ್ರಮುಖ ಪಾತ್ರಗಳೆಂದರೆ ವೆಯ್ನಾಮೊಯ್ನನ್ ಮತ್ತು ಕಮ್ಮಾರ ಇಲ್ಮಾರಿನೆನ್. ಇವರು ಜಲ ದೇವತೆ ಮತ್ತು ಭೂಮಿ ದೇವತೆಗಳ ಮೂಲ ಪರಿಕಲ್ಪನೆಯನ್ನು ಹೊಂದಿದ್ದರೂ ನಂತರ ಸಾಂಸ್ಕೃತಿಕ ವೀರರಾಗಿ ಮುಂದಿನ ಪರಂಪರೆಗಳಲ್ಲಿ ಕಾಣಬರುತ್ತಾರೆ. ಕಾವ್ಯದಲ್ಲಿ, ಸಾಂಸ್ಕೃತಿಕ ಅಭಿರುಚಿಯಲ್ಲಿ ಜೀವಂತವಿರುವ ಇವರು ಫಿನ್ಲೆಂಡಿನ ಧಾರ್ಮಿಕತೆ, ರಾಜಕೀಯ ಅಥವಾ ಶ್ರದ್ಧಾನಂಬುಗೆಗಳಲ್ಲಿ ಮೂಗು ತೂರಿಸುವುದಿಲ್ಲ.

ಸಮರ್ಥ ಶಿಕ್ಷಣ ಪದ್ಧತಿಯಲ್ಲಿ ಅಗ್ರಸ್ಥಾನದಲ್ಲಿರುವ ಫಿನ್ಲೆಂಡ್ ಮಾತ್ರವಲ್ಲ ಜಗತ್ತಿನ ಅನೇಕಾನೇಕ ಮುಂದುವರಿದ ರಾಷ್ಟ್ರಗಳು ತಮ್ಮ ಜಾನಪದ ಮತ್ತು ಪುರಾಣಗಳ ನಾಯಕರನ್ನು ಅಧ್ಯಯನ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಜೀವಂತವಾಗಿರಿಸಿಕೊಂಡಿದ್ದರೂ ಅವುಗಳು ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಜೀವನಗಳಲ್ಲಿ ಅಡ್ಡಗಾಲಾಗಿಸಿಕೊಂಡು ತೊಡರುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಮತ್ತು ತರ್ಕಗಳೆಲ್ಲವೂ ಅವುಗಳ ನಿರ್ನಾಮ ಮಾಡಿಲ್ಲ. ವ್ಯಕ್ತಿ ಮತ್ತು ಸಮಗ್ರ ಸಮಾಜದ ಪುರೋಗಾಮಿ ಬೆಳವಣಿಗೆಯ ಸಮಯ ಮತ್ತು ಶ್ರಮವನ್ನು ಅವು ತಿಂದುಹಾಕದಿರುವಷ್ಟು ಜನ ಪ್ರಜ್ಞಾವಂತರಾಗಿದ್ದಾರೆ.

ಆದರೆ ಭಾರತವೆಂಬ ಉಪಖಂಡದಲ್ಲಿ ಇಂಥಾ ಕಾವ್ಯಗಳನ್ನು ಸಮಸ್ಯಾತ್ಮಕವಾಗುವಂತೆ ಮಾಡಿಬಿಡುತ್ತಾರೆ. ರಾಮಾಯಣ ಮತ್ತು ಮಹಾಭಾರತದಂತಹ ಅತ್ಯದ್ಭುತ ಮಹಾಕಾವ್ಯಗಳನ್ನು ಸಾಂಸ್ಕೃತಿಕ ಮತ್ತು ತಾತ್ವಿಕ ಅಭಿರುಚಿಯನ್ನಾಗಿ ಉಳಿಸಿಕೊಳ್ಳುವ ಬದಲು ಸಂಘರ್ಷಗಳ, ಮೌಢ್ಯದ ಮತ್ತು ರಾಜಕೀಯದ ಭಾಗವನ್ನಾಗಿಸಿಕೊಂಡು ಇಡೀ ರಾಷ್ಟ್ರ ತಮ್ಮ ಕಾವ್ಯದ ಬಗ್ಗೆ ಹೆಮ್ಮೆ ಪಡುವ ಬದಲು ಜಿಗುಪ್ಸೆ ಪಡುವಂತೆ, ಕುಹಕಗಳನ್ನಾಡುವಂತೆ, ಪ್ರಸ್ತುತ ಸಂಗತಿಗಳಿಗೆ ಅನ್ವಯಿಸಿಕೊಂಡು ಟೀಕೆ ಮಾಡುವಂತೆ ಮಾಡಿಬಿಡುತ್ತಾರೆ. ರಾಮಾಯಣ ಮತ್ತು ಮಹಾಭಾರತ ಸೇರಿದಂತೆ, ಕನ್ನಡದಲ್ಲಿ ಮಂಟೇಸ್ವಾಮಿ, ಮಲೆ ಮಹದೇಶ್ವರದಂತಹ ಅನೇಕಾನೇಕ ಮೌಖಿಕ ಕಾವ್ಯಗಳು ವಿವಿಧ ಭಾಷೆಗಳಲ್ಲಿ ಭಾರತದುದ್ದಕ್ಕೂ ಸಮೃದ್ಧವಾಗಿದೆ. ಯಾವುವು ನಮ್ಮ ನೆಲದ ಸಿದ್ಧಾಂತ, ಸಂಸ್ಕೃತಿ, ಮಾನವ ಬದುಕು, ಸಾಮಾಜಿಕ ಬೆಳವಣಿಗೆಗಳ ಚರಿತ್ರೆಯಾಗಬಹುದೋ ಅವುಗಳನ್ನು ಧಾರ್ಮಿಕತೆಗಳ ಚೌಕಟ್ಟುಗಳಲ್ಲಿ ಬಂಧಿಸಿ ಅವುಗಳ ಅರ್ಥವಂತಿಕೆಯನ್ನು ಸೀಮಿತಗೊಳಿಸುತ್ತಾರೆ. ಅವುಗಳ ಸಾರಸತ್ವದ ವಿಸ್ತಾರವನ್ನು ಸಂಕುಚಿತಗೊಳಿಸುವಂತಹ ಕೆಲಸಗಳಾಗುತ್ತಿವೆ. ನಿಜವಾಗಿಯೂ ಇದು ಸಾಂಸ್ಕೃತಿಕ ದ್ರೋಹವೆಂದು ನಾನು ಭಾವಿಸುತ್ತೇನೆ. ಕಾವ್ಯಗಳನ್ನು ವಿವಿಧ ನೆಪಗಳಿಂದ ಪ್ರಕ್ಷುಬ್ಧಕ್ಕೆ ಕಾರಣ ಮಾಡುವಂತಹ ಚಟುವಟಿಕೆಗಳು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಮತ್ತು ಜೀವಂತವಾಗಿರಿಸುವ ದಿಕ್ಕಿನಲ್ಲಿ ತೊಡಕಾಗುತ್ತವೆ. ಇದನ್ನು ಕಾವ್ಯಗಳನ್ನು ಅಪಮೌಲ್ಯಗೊಳಿಸುವ ಬಗೆಯೆಂದೇ ನಾನು ಭಾವಿಸುತ್ತೇನೆ.

ಮನುಷ್ಯ ತಾನು ವಾಸಿಸುವ ಜಗತ್ತಿನ ಆಗುಹೋಗುಗಳಿಗೆ ಅನೇಕ ಅಗೋಚರ ಶಕ್ತಿಗಳು ಕಾರಣ ಎಂದು ಭಾವಿಸಿದ್ದ. ಏಕೆಂದರೆ ಆ ಘಟನೆಗಳ ವ್ಯವಸ್ಥೆಯು ಅವನ ಬುದ್ಧಿಗೆ ನಿಲುಕಿರಲಿಲ್ಲ. ಹಾಗಾಗಿ ಅನೇಕಾನೇಕ ಪರಿಕಲ್ಪನೆಗಳನ್ನು ಹುಟ್ಟಿಸಿಕೊಂಡಿದ್ದ. ಆದರೆ ವಿವೇಕ ಮತ್ತು ಜ್ಞಾನದ ವಿಸ್ತಾರವಾದಂತೆ ಅವುಗಳ ಕಾರಣಗಳನ್ನು ತಿಳಿದುಕೊಂಡ. ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಅವುಗಳ ಮೇಲೆ ತನ್ನ ಪ್ರಯೋಗಗಳನ್ನು ನಡೆಸಿ ತನ್ನ ಮೊದಲಿನ ಭಯ ಮತ್ತು ಕಲ್ಪನೆಗಳನ್ನು ಬಿಟ್ಟ. ಅವುಗಳನ್ನು ಬದಲಾಗುವ ಕಾಲಘಟ್ಟಗಳಲ್ಲಿ ವಿಕಾಸವಾಗುತ್ತಿರುವ ತನ್ನ ಜೀವನ ವಿಧಾನಗಳಲ್ಲಿ ಸಾಂಸ್ಕೃತಿಕ ಸ್ಮರಣೆಯಾಗಿ ಇರಿಸಿಕೊಂಡ. ಆದರೆ ಪ್ರಸ್ತುತ ಕಾಲಮಾನದಲ್ಲೂ ಬದುಕನ್ನು ಅದರ ಆಳ್ವಿಕೆಗೆ, ಅದೇ ಪುರಾತನರ ಪರಿಕಲ್ಪನೆಗೇ ಒತ್ತೆಯಿಟ್ಟರೆ ಅವರ ಭಯವೇ, ಆತಂಕವೇ ಜೀವಂತವಾಗಿ ಈ ಯುಗದ ಸಮಾಜವನ್ನೂ ಕಾಡುತ್ತದೆ. ಅದೇ ನಮ್ಮ ಭಾರತದ ಸದ್ಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತಿ.

ಪ್ರಾಚೀನ ಕಾವ್ಯಗಳು ನಮ್ಮ ಹಿಂದೆ ಬಾಳಿ ಹೋದವರ ಕನವರಿಕೆಗಳನ್ನು, ಕಲ್ಪನೆಗಳನ್ನು, ಕಷ್ಟಕಾರ್ಪಣ್ಯಗಳನ್ನು ಧ್ವನಿಸುತ್ತವೆ. ಅವುಗಳ ಎಷ್ಟೋ ಸಂಗತಿಗಳು ಬದುಕಿನ ಸೂಕ್ಷ್ಮತೆಗಳಾಗಿ ಈಗಲೂ ಮಿಡಿಯುವ ಸಾಧ್ಯತೆಗಳಿರುತ್ತವೆ.

ಎರಚುತ್ತ ಬೀಜ ವೆಯ್ನಾಮೊಯ್ನಾನ್ ನುಡಿದ
ಫಲವತ್ತಾಗಲಿ ದೇಶ ಹುಲುಸಾಗಲಿ ಧಾನ್ಯ
ಕೆಳಲೋಕದ ಪಿತೃಗಳೆ ಬಯಲು ನಾಡ ಹಿರಿಯರೆ
ಓ ಭೂಮಿ ತಾಯೇ
ಎಳೆಯ ಸಸಿ ಚೆನ್ನಾಗಿ ಮೇಲೆ ಬರಲಿ
ಬೆಳೆವ ಪೈರಿಗೆ ನಿಮ್ಮ ಹರಕೆ ಇರಲಿ

ಹೀಗೆನ್ನುವ ಪ್ರಾರ್ಥನೆಯು ಈಗಲೂ ಬೀಜವನ್ನು ಬಿತ್ತುವ ಯಾರೊಬ್ಬನ ಬೇಡಿಕೆಯಾಗಿರುತ್ತದೆ.

ಜೀವದೊಲುಮೆಯ ಯಾರೊಬ್ಬರ ರಕ್ತವೂ ಮೌಲ್ಯವೇ. ಅದು ಉಳಿಯಬೇಕು. ಬಾಳಬೇಕು. ರಕ್ತ ಹರಿಸುವುದೆಂದರೆ ಜೀವದ ಮೌಲ್ಯವನ್ನು ಕಡೆಗಣಿಸುವಂತಹ ಕ್ರೌರ್ಯವೇ ಆಗಿರುವುದು. ರಕ್ತನಾಶವೂ ಆಗಬಾರದು, ರಕ್ತವ್ಯರ್ಥವೂ ಆಗಬಾರದು. ಇದು ಜೀವನ ಪ್ರೇಮಿಯ, ಜೀವದ ಮೌಲ್ಯದ ಆಶಯ. ಅದು ಕಲೆವಲದಲ್ಲಿ ಧ್ವನಿಸುವುದು ಹೀಗೆ;

ಕೇಳು ರಕ್ತವೇ ಕೇಳು ಹರಿಯದಿರು ನಿಲ್ಲು
ಹರಿವ ರಕ್ತವೇ ಕೇಳು ಉಕ್ಕದಿರು ನಿಲ್ಲು.
ಹರಿಯದಿರು ನೆಲದಲ್ಲಿ, ಹರಿಯದಿರು ಕೆಸರಲ್ಲಿ
ಹರಿಯದಿರು ಹುಲ್ಲಲ್ಲಿ ಮನುಜಭೂಷಣವೇ
ಹರಿಯದಿರು ಹುಲ್ಲಲ್ಲಿ ವೀರಾಗ್ರಣಿ ರತ್ನವೆ
ಇರಬೇಕು ನೀನು ಎದೆಗುಂಡಿಗೆಯಲ್ಲಿ
ಪಪ್ಪುಸದ ಚಿಕ್ಕ ಕೋಣೆಗಳಲ್ಲಿ.
ತನಗೆ ಒಲ್ಲದ ಮದುವೆಯನ್ನು ಮಾಡುವಾಗಳೊಬ್ಬ ತರುಣಿ,
ತಂದೆತಾಯಂದಿರೆ ನನ್ನ ಹೆತ್ತವರೆ
ಯಾಕೆ ತಳ್ಳುವಿರಿ ಇಂಥ ದುಃಖಕ್ಕೆ
ನನ್ನ ಹೆತ್ತವಳೇ ಹಾಲೂಡಿಸಿದವಳೇ
ಇಷ್ಟುದಿನ ಸಾಕಿ ಬೆಳೆಸಿದವಳೇ
ನನ್ನ ಬದಲಿಗೆ ಒಂದು ಮೋಟು ಮರ
ನನ್ನ ಬದಲಿಗೆ ಒಂದು ಚೂರು ಕಲ್ಲಿಗೊ
ಸ್ನಾನ ಮಾಡಿಸಿ ಬಟ್ಟೆ ತೊಡಿಸಬಹುದಿತ್ತು
ಯಾಕೆ ಬೇಕಿತ್ತು ಇಂಥ ನೋವು
ಯಾಕೆ ಬೇಕಿತ್ತು ಇಂಥ ಶೋಕ.

ಕನ್ನಡದ ಜಾನಪದ ಸಂವೇದನೆಗಳನ್ನು ಗ್ರಹಿಸುತ್ತಾ ಹೋಗಬಹುದಾದ ಈ ಕಲೆವಲ ಕಾವ್ಯವು ಫಿನ್ಲೆಂಡಿನ ಕಾವ್ಯ ಎಂಬುದನ್ನು ಮರೆಯುವಂತೆ ಮಾಡುವುದು ಡಾ. ಕೆ ಆರ್ ಸಂಧ್ಯಾರೆಡ್ಡಿಯವರ ಅನುವಾದ. ಮದುಮಗಳನ್ನು ಮದುವೆ ಮಾಡಿಕೊಡುವಾಗ, ಕಳುಹಿಸುವಾಗ, ನೊಂದು ತಾಯಿಯ ಮನೆಗೆ ಬರುವ ಹೆಣ್ಣುಮಗುವಿನ ವ್ಯಾಕುಲಗಳನ್ನೆಲ್ಲಾ ಓದುವಾಗ ಕನ್ನಡತಿಯೊಬ್ಬಳ ಸಂಕಷ್ಟಗಳನ್ನೇ ನೋಡುವಂತಾಗುತ್ತದೆ. ಸಂಧ್ಯಾರೆಡ್ಡಿಯವರ ಜಾನಪದ ಅಧ್ಯಯನದ ವಿದ್ವತ್ತು ಮತ್ತು ಅವರ ರಚನಾಕಲೆಗಳೆರಡೂ ಕಲೆವಲದಲ್ಲಿ ಸಾಲುಸಾಲುಗಳಲ್ಲಿ ಅನಾವರಣಗೊಳ್ಳುತ್ತವೆ.

ಮಾತು ನಿಲ್ಲಿಸಬೇಕು ನನ್ನ ಬಾಯಿ
ಆಡದಂತೆ ನಾಲಗೆ ಸುಮ್ಮನಿರಬೇಕು
ನಿಲ್ಲಿಸಬೇಕು ಹಾಡುಗಳ ಪಠಣ
ತೊರೆಯಬೇಕು ನಾನು ನನ್ನ ಗಾನ
ಮುಗಿದಾದ ಮೇಲೆ ಬಲು ದೀರ್ಘ ಪಯಣ
ವಿಶ್ರಾಂತಿ ಕೊಡುವಂತೆ ಕುದುರೆಗಳಿಗೆ
ಮುಗಿದಾದ ಮೇಲೆ ಹುಲ್ಲು ಕೊಯ್ಯುವ ಕೆಲಸ
ಕಬ್ಬಿಣಕೂ ವಿಶ್ರಾಂತಿ ಬೇಕಾದ ಹಾಗೆ
ಉರಿದಾದ ಮೇಲೆ ರಾತ್ರಿ ಎಲ್ಲ
ಆರಿ ಹೋಗುವ ಬೆಂಕಿ ಹಾಗೆ
ದಣಿವಿಲ್ಲವೇನು ನಮ್ಮ ಗಾನಕ್ಕೆ.

ಕಲೆವಲವನ್ನು ಕನ್ನಡಕ್ಕೆ ಅನುವಾದಿಸುವ ನೆಪದಲ್ಲಿ ಜಗತ್ತಿನ ಒಂದು ಅದ್ಭುತ ಕಾವ್ಯಕಲಾಕೃತಿಯೊಂದರ ಪರಿಚಯ ಪಡೆದ ಭಾಗ್ಯ ನನ್ನದು ಎನ್ನುವ ಸಂಧ್ಯಾರೆಡ್ಡಿಯವರೇ ತಮ್ಮ ಮಾತಿನಲ್ಲಿ ಹೇಳುವಂತೆ,
“ಕಲೆವಲ ನಿಜಕ್ಕೂ ಬಹಳ ಸುಂದರ ಕಾವ್ಯ. ಇಲ್ಲಿನ ಕಾವ್ಯ ಸೌಂದರ್ಯ, ಸಾಂಸ್ಕೃತಿಕ ವಿಶೇಷ, ನಮ್ಮ ಸಂಸ್ಕೃತಿಯೊಂದಿಗೆ ಕಂಡುಬರುವ ಅದ್ಭುತ ಸಾಮ್ಯ ಇವುಗಳನ್ನು ಕುರಿತು ಪ್ರತ್ಯೇಕ ವಿಶ್ಲೇಷಣೆ ನಡೆಯುವುದು ಅಗತ್ಯ. ಭಾರತೀಯರ ದೃಷ್ಟಿ ಕೋನಕ್ಕೂ, ಫಿನ್ಲೆಂಡಿನ ದೃಷ್ಟಿಕೋನಕ್ಕೂ ಇರುವ ಸಾಮ್ಯ ಕಂಡಾಗ ಮೈ ಪುಳಕಗೊಳ್ಳುತ್ತದೆ.”

ಚೆನ್ನಾಗಿದ್ದೇವೆ ಈಗೆಂಬ ಹಮ್ಮಿನಲಿ
ಎಲ್ಲ ಗೊತ್ತಿದೆ ಎಂಬ ಜಂಭದಲ್ಲಿ
ಕೈಹಾಕದಿರಿ ನೀವು ದೋಣಿ ಕೆಲಸಕ್ಕೆ
ಎಲ್ಲವನೂ ಕಣ್ಣಿಟ್ಟು ನೋಡುತಿರುವನು ಅವನು
ಎಲ್ಲವೂ ನಡೆಯುವುದು ಅವನ ಅಪ್ಪಣೆಯಂತೆ
ವೀರ ಶೂರರು ಆಲೋಚಿಸಿದಂತಲ್ಲ
ಎಲ್ಲ ವೀರರ ಬಲವೂ ಅವನೊಬ್ಬಗೆ ಸಮವಲ್ಲ.

ಮನುಷ್ಯ ತನ್ನ ಅಹಂಅನ್ನು ಪಳಗಿಸಲು, ವಿನಯಗೊಳಿಸಿಕೊಂಡು ನಯವಾಗಿ ಬಾಳಲು ಜನಪದರು ದೇವರನ್ನು ನೆನೆದೇ ನೆನೆಯುತ್ತಾರೆ. ಈ ವಿರಾಟ ಸೃಷ್ಟಿಯಲ್ಲಿ ತಾನೊಂದು ಸಣ್ಣಾತಿಸಣ್ಣ ಅಣು ಎಂಬುದನ್ನು ನೆನಪಿಸಿಕೊಂಡು ಕರುಣೆ, ಮಮತೆಗಳಲ್ಲಿ ತನ್ನಿರುವನ್ನು ಮುದವಾಗಿಟ್ಟುಕೊಳ್ಳಲು ಬಯಸುತ್ತಾನೆ. ಅಂತಹ ಹಲವು ವಿಷಯಗಳ ಅನಾವರಣ ಕಲೆವಲ ಎಂಬ ಕಾವ್ಯದಲ್ಲಿ ಆಗಿದೆ.

ಕಲೆವಲ
ಫಿನ್ಲೆಂಡಿನ ಜಾನಪದ ಕಾವ್ಯ
ಕನ್ನಡಕ್ಕೆ: ಡಾ. ಕೆ ಆರ್ ಸಂಧ್ಯಾರೆಡ್ಡಿ


ಇದನ್ನೂ ಓದಿ: ದಮನಿತರಿಗೆ ಶಿಕ್ಷಣಕ್ರಮ ಹೇಗಿರಬೇಕು?: ಪಾಲೊ ಫ್ರೇರಿಯ ‘ಪೆಡಗಾಗಿ ಆಫ್ ದಿ ಅಪ್ರೆಸ್ಡ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...