Homeಮುಖಪುಟತೆಂಗು-ಅಡಿಕೆ ತೋಟ ಕಳೆದುಕೊಂಡ ಸಿದ್ದಮ್ಮನಿಗೆ ಮೊದಲು ಪರಿಹಾರ ಕೊಡಿ, ನಂತರ ತನಿಖೆ ಮಾಡಿ

ತೆಂಗು-ಅಡಿಕೆ ತೋಟ ಕಳೆದುಕೊಂಡ ಸಿದ್ದಮ್ಮನಿಗೆ ಮೊದಲು ಪರಿಹಾರ ಕೊಡಿ, ನಂತರ ತನಿಖೆ ಮಾಡಿ

ಹೋದಲ್ಲಿ ಬಂದಲ್ಲಿ ರೈತರ ನೆರವಿಗೆ ಸದಾಸಿದ್ದ ಎಂದು ಹೇಳುವ ಯಡಿಯೂರಪ್ಪ ಗುಬ್ಬಿಯ ತಿಪ್ಪೂರು ಘಟನೆಯ ಬಗ್ಗೆ ಒಂದು ಚಕಾರವೂ ಇಲ್ಲ. ಭರವಸೆಗಳು ಬರೀ ಭಾಷಣಕ್ಕೆ ಸೀಮಿತವಾಗಬಾರದು.

- Advertisement -
- Advertisement -

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಸಿದ್ದಮ್ಮ ಎಂಬುವವರಿಗೆ ಸೇರಿದ ನೂರಾರು ತೆಂಗು, ಅಡಿಕೆ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜೊತೆಗೆ ಮೊದಲು ತೋಟ ಕಳೆದುಕೊಂಡಿರುವ ಸಿದ್ದಮ್ಮ ಅವರಿಗೆ ಪರಿಹಾರ ಕೊಡಿ, ಅನಂತರ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಿ ಎಂಬ ಕೂಗು ಜಿಲ್ಲೆಯಾದ್ಯಂತ ಜೋರಾಗಿ ಕೇಳಿಬಂದಿದೆ.

ಪರಿಹಾರವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಏಕೆಂದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ತೆಂಗು ಮತ್ತು ಅಡಿಕೆ ಗಿಡ ಗಳನ್ನು ಕಡಿಸಿ ಹಾಕಿಸಿರುವುದು ಅಕ್ಷಮ್ಯ ಅಪರಾಧ. ರೈತರು ಗಿಡಗಳನ್ನು ಕಡಿಯುವಾಗ ನಿಯಮಗಳು ಅಡ್ಡ ಬರುತ್ತವೆ. ಅಧಿಕಾರಿಗಳು ಆ ಕೆಲಸ ಮಾಡಿದಾಗ ನಿಯಮಗಳು ಅಡ್ಡಬರಲಿಲ್ಲವೇ ಎಂಬ ಪ್ರಶ್ನೆ ಜನರಿಂದ ವ್ಯಕ್ತವಾಗಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ಕಾನೂನು ಎಲ್ಲರಿಗೂ ಒಂದೇ ಇರಬೇಕು. ಶ್ರೀಮಂತರಿಗೊಂದು, ಬಡವರಿಗೊಂದು ನ್ಯಾಯ ಇರಬಾರದು. ರೈತರು ಮರಗಳನ್ನು ಕಡಿದರೆ ಅಧಿಕಾರಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಆಗ ಯಾವುದ್ಯಾವುದೋ ನಿಯಮಗಳು ನುಸುಳುತ್ತವೆ. ಅದೇ ಅಧಿಕಾರಿಗಳು ಮುಂದೆ ನಿಂತು ಗಿಡಗಳನ್ನು ಕಡಿಯುವಾಗ ತೋಟಗಾರಿಕೆ ಇಲಾಖೆಯ ನಿಯಮಗಳು ಅಡ್ಡಿಬರಲಿಲ್ಲವೇ? ಈಗ ಕಡಿದು ಹಾಕಿರುವ ಮರಗಳು ಮಧ್ಯವಯಸ್ಕ ಮರಗಳು. ತೋಟಗಾರಿಕೆ ಇಲಾಖೆ ಪಂಚನಾಮೆ ಮಾಡಬೇಕು. ಯಾವ ಪ್ರಭಾವಿಯ ಒತ್ತಡಕ್ಕೂ ಒಳಗಾಗಬಾರದು. 150 ಅಡಿಕೆ ಗಿಡಗಳು ಮತ್ತು 50 ತೆಂಗಿನ ಮರಗಳಿಗೆ ಭೂಪರಿಹಾರ ಕಾಯ್ದೆ ರೀತಿ ಲೆಕ್ಕಾಚಾರ ಹಾಕಿ ನಷ್ಟಪರಿಹಾರದ ಹಲವುಪಟ್ಟು ಪರಿಹಾರ ನೀಡಬೇಕು. ಈ ಪರಿಹಾರವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್.

ಸಿದ್ದಮ್ಮ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ಮಕ್ಕಳು ಬೆಳೆಸಿದಂತೆ ಬೆಳೆಸಿದ್ದರು. ಭೋಗವಾಗಿ ಬೆಳೆದಿದ್ದವು. ಜೀವತೇದು ಬೆಳೆಸಿದ ಮರಗಳನ್ನು ಕತ್ತರಿಸಿ ಹಾಕಿದರೆ ಎಂಥವರಿಗೂ ಹೊಟ್ಟೆ ಉರಿದುಹೋಗುತ್ತದೆ. ಅವು ಸಿದ್ದಮ್ಮನ ಜೀವನಾಧಾರವಾಗಿದ್ದವು. 50 ತೆಂಗಿನ ಮರಗಳು 150 ವರ್ಷ ಫಲ ಕೊಡುತ್ತವೆ. ವರ್ಷಕ್ಕೆ ಒಂದು ಮರ 250 ಕಾಯಿ ಕೊಡುತ್ತದೆಂದು ಲೆಕ್ಕಹಾಕಿದರೂ 50 ಮರಕ್ಕೆ 12,500 ಕಾಯಿ ಆಗುತ್ತದೆ. ಕಾಯಿಗೆ 20 ರೂನಂತೆ ಲೆಕ್ಕಹಾಕಿದರೂ ವರ್ಷಕ್ಕೆ 2 ಲಕ್ಷ 50 ಸಾವಿರ ಆದಾಯ ಬರುತ್ತದೆ. ಹಾಗಾಗಿ ಮುಂದಿನ 50 ವರ್ಷಗಳಿಗೆ ಅಡಿಕೆ ಮತ್ತು ತೆಂಗಿನ ಜೀವಿತಾವಧಿ ಎಂದು ಭಾವಿಸಿದರೂ 12 ಕೋಟಿ ಪರಿಹಾರ ನೀಡಬೇಕು. ಅವುಗಳನ್ನು ಶ್ರಮಪಟ್ಟು ಬೆಳೆಸಿಲ್ಲವೇ? ಹಾರೈಕೆ ಮಾಡಿಲ್ಲವೇ? ಎಂದು ರೈತರು ಪ್ರಶ್ನಿಸುತ್ತಾರೆ.

ಮರಗಳನ್ನು ಕಡಿದು ಹಾಕಿದ ಮೇಲೆ ಸಿದ್ದಮ್ಮರನ್ನು ಅಧಿಕಾರಿಗಳು ದಾಖಲೆ ಕೇಳಲು ಶುರುಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಹಶೀಲ್ದಾರ್ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಾರೆ. ಆದರೆ ಏಕೆ ಹೀಗಾಯ್ತು ಎಂಬುದನ್ನು ಸ್ಥಳೀಯ ಶಾಸಕರಾಗಲೀ, ಸಂಸದರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸ್ಪಷ್ಟೀಕರಣ ಕೇಳುತ್ತಿಲ್ಲ. ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರು ಹಾಗೂ ತಹಶೀಲ್ದಾರ್ ಬೇಜವಾಬ್ದಾರಿತನ ಈ ಪ್ರಕರಣದಲ್ಲಿ ಎದ್ದುಕಾಣುತ್ತಿದೆ. ಮರ ಕಡಿಯುವ ಸಂದರ್ಭದಲ್ಲಿ ದಾಖಲೆಗಳನ್ನು ಕೇಳಬಹುದಿತ್ತು. ಅದನ್ನು ಅಧಿಕಾರಿಗಳು ಮಾಡಿಲ್ಲ. ಮೊದಲೇ ದಾಖಲೆ ಪರಿಶೀಲಿಸಿದ್ದರೆ ಮರಗಳನ್ನು ಉಳಿಸಲು ಸಾಧ್ಯವಿತ್ತು. ಆದರೆ ಸಮಾಧಾನದಿಂದ ಪರಿಶೀಲಿಸುವ ಗೋಜಿಗೂ ಹೋಗಿಲ್ಲ ಅಂದರೆ ಅಧಿಕಾರಿಗಳ ತಪ್ಪು ಎದ್ದುಕಾಣುತ್ತಿದೆ. ಈ ತಪ್ಪಿಗೆ ಶಿಕ್ಷೆಯಾಗುವ ಮೊದಲು ಅವರಿಂದಲೇ ಪರಿಹಾರ ಕೊಡಿಸಬೇಕು. ಆಗ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ಬಯಲಿಗೆ ಬರುತ್ತದೆ.


ಇದನ್ನೂ ಓದಿ: ನನ್ನ ತೆಂಗು, ಅಡಿಕೆ ಮರಗಳನ್ನು ವಾಪಸ್‌ ಕೊಡಿ : ಧರಣಿ ಕೂತ ಮಹಿಳೆ, ಗ್ರಾಮಸ್ಥರ ಬೆಂಬಲ


ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿನ್ನೆ ಟ್ವೀಟ್ ಮಾಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಅವರದೇ ಪಕ್ಷದ ಮಾಜಿ ಸಚಿವರು ಹಾಲಿ ಶಾಸಕ ಶ್ರೀನಿವಾಸ್ ಆ ಕ್ಷೇತ್ರದವರೇ ಆಗಿದ್ದಾರೆ. ಹಾಗಾಗಿ ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು. ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೋದಲ್ಲಿ ಬಂದಲ್ಲಿ ರೈತರ ನೆರವಿಗೆ ಸದಾಸಿದ್ದ ಎಂದು ಹೇಳುತ್ತಿದ್ದಾರೆ. ಆದರೆ ಗುಬ್ಬಿಯ ತಿಪ್ಪೂರು ಘಟನೆಯ ಬಗ್ಗೆ ಒಂದು ಚಕಾರವೂ ಇಲ್ಲ. ಭರವಸೆಗಳು ಬರೀ ಭಾಷಣಕ್ಕೆ ಸೀಮಿತವಾಗಬಾರದು. ಅದು ಅನುಷ್ಠಾನಕ್ಕೆ ಬರಬೇಕು ಅಷ್ಟೇ ಅನ್ನುತ್ತಾರೆ ರೈತರು.

ತೋಟ ಕಳೆದುಕೊಂಡಿರುವ ಸಿದ್ದಮ್ಮ ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯುವ ಕಾಂಗ್ರೆಸ್ ಮುಖಂಡ ಆರ್ ರಾಜೇಂದ್ರ ಭೇಟಿ ನೀಡಿ ಇನ್ನು ಮೂರು ದಿನಗಳಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿ ಬಂದಿದ್ದಾರೆ. ಇಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಂತ್ರಸ್ಥೆಯ ನೆರವಿಗೆ ಧಾವಿಸಬೇಕು. ಮೊದಲು ಪರಿಹಾರ ಸಿಗಬೇಕು. ಆನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಘಟನೆಯ ಹಿಂದೆ ಎಂಥಾ ಪ್ರಭಾವಿಯೇ ಇದ್ದ ಶಿಕ್ಷೆಗೆ ಗುರಿಪಡಿಸಬೇಕು. ಸಿದ್ದಮ್ಮ ಅವರಿಗೆ ಸೂಕ್ತ ನ್ಯಾಯ ದೊರೆಯಬೇಕು ಕೇವಲ ಅಧಿಕಾರಿಗಳನ್ನು ವರ್ಗ ಮಾಡುವುದರಿಂದ ನ್ಯಾಯ ದೊರೆಯುವುದಿಲ್ಲ ಎಂಬ ಸತ್ಯ ಹಲವು ಪ್ರಕರಣ ಗಳಲ್ಲಿ ಸ್ಪಷ್ಟವಾಗಿದೆ. ಈಗ ಸಂಸದ ಬಸವರಾಜು, ಸ್ಥಳೀಯ ಶಾಸಕ ಎಸ್.ಆರ್. ಶ್ರೀನಿವಾಸ್ ಪರಿಹಾರ ಕೊಡಿಸಲು ಮುಂದಾಗಬೇಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...