Homeಮುಖಪುಟಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ!

ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ!

ಕಳೆದ ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಕಾರಣ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಆಗಸ್ಟ್ 13 ರ ರಾತ್ರಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು.

- Advertisement -
- Advertisement -

ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಂದು ಸಾವನ್ನಪ್ಪಿದ್ದಾರೆ. ಎಸ್‌ಪಿಬಿ ಕಳೆದ ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಕಾರಣ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಆಗಸ್ಟ್ 13 ರ ರಾತ್ರಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು.

ಆಗಸ್ಟ್ 5 ರಂದು ತನಗೆ ಸೋಂಕು ದೃಢಪಟ್ಟಿರುವುದರ ಕುರಿತು ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು.

ಸೆ.7 ರಂದು “ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಆದರೆ ಅವರು ಇನ್ನೂ ವೆಂಟಿಲೇಟರ್ ಸಹಾಯದಲ್ಲಿದ್ದಾರೆ” ಎಂದು ಎಸ್ ಪಿ ಬಿ ಪುತ್ರ ಎಸ್.ಪಿ.ಚರಣ್ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಾಳ ಪಯಣ;

1946ರ ಜೂನ್ 4ರಂದು, ಆಂಧ್ರಪ್ರದೇಶದ ನೆಲ್ಲೂರ್ ಸಮೀಪದ ಕೋನೆತಮ್ಮಪೇಟ ಎನ್ನುವ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿ, ಭಾರತದ ಶ್ರೇಷ್ಠ ಗಾಯಕರ ಸ್ಥಾನಕ್ಕೇರಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಈ ಮಹಾನ್ ಗಾಯಕರದ್ದು. ಚಿಕ್ಕಂದಿನಿಂದಲೇ ಸಂಗೀತದ ಕಡೆಗೆ ಆಸಕ್ತಿ ಹೊಂದಿದ್ದರು.

ಇದನ್ನೂ ಓದಿ: ಕೊರೊನಾ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ!

ತಂದೆ ಆಸೆಯಂತೆ ಜೆಎನ್‍ಟಿಯು ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಪ್ರವೇಶ ಪಡೆದರು. ಆದರೆ ಅನಾರೋಗ್ಯದ ಕಾರಣ ಪರೀಕ್ಷೆಗೆ ಹಾಜರಾಗಲು ಆಗಲಿಲ್ಲ. ನಂತರ ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆಗೆ ಸೇರಿ ಎಎಂಐಇ ಕೋರ್ಸ್ ಮುಗಿಸಿದರು.  ಈ ಬೆಳವಣಿಗೆ ಎಸ್‌ಪಿಬಿ ಸಂಗೀತದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ಒದಗಿಸಿತು. ತಮ್ಮ ಹವ್ಯಾಸವನ್ನು ಕೈಬಿಡದೆ ನಿರಂತರವಾಗಿ ಹಾಡುತ್ತಿದ್ದರು. ಅಷ್ಟೇ ಅಲ್ಲದೇ, ಕೊಳಲು, ಹಾರ್ಮೋನಿಯಂ ನುಡಿಸುವುದನ್ನೂ ಕಲಿತರು.

1964ರಲ್ಲಿ ಚೆನ್ನೈನಲ್ಲಿ ತೆಲುಗು ಸಾಂಸ್ಕೃತಿಕ ಸಂಘಟನೆಯೊಂದು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲ ಬಹುಮಾನ ಪಡೆದರು. ಆಗ ಎಸ್‌ಪಿಬಿ ಅವರಿಗೆ 18 ವರ್ಷ.  ಔಪಚಾರಿಕವಾಗಿ ಸಂಗೀತವನ್ನು ಕಲಿಯದೆ, ಶಾಸ್ತ್ರೀಯ ಸಂಗೀತದ ಜ್ಞಾನವಿಲ್ಲದೆಯೇ ಹಾಡಿದ್ದರೂ ಕೇಳುಗರ ಮನವನ್ನೂ, ಸ್ಪರ್ಧೆಯ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಇವರನ್ನು ನೋಡಿದ ಸಂಗೀತ ನಿರ್ದೇಶಕ ಎಸ್.ಪಿ.ಕೋದಂಡಪಾಣಿ 1966ರಲ್ಲಿ ತಾವು ಸಂಗೀತ ನಿರ್ದೇಶನ ಮಾಡಿದ ಚಿತ್ರದಲ್ಲಿ ಹಾಡುವ ಅವಕಾಶ ನೀಡಿದರು.

“ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ” ಚಿತ್ರದ ಮೂಲಕ ಎಸ್.ಪಿ.ಬಾಲಸುಬ್ರಮಣ್ಯಂ ಹಿನ್ನೆಲೆಗಾಯಕರಾದರು. ಹೇಮಾಮ್‍ಬರಧರ ರಾವ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಎಸ್‌ಪಿಬಿ ಎರಡು ಗೀತೆಗಳನ್ನು ಹಾಡಿದರು. ಮರುವರ್ಷ ಎಂ.ಜಿ.ಆರ್ ನಟಿಸಿದ “ಅಡಿಮೈ ಪೆಣ್” ಚಿತ್ರದಲ್ಲಿ ಹಾಡಿದರು. ಇದು ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿತು.

ಎಸ್‌ಪಿಬಿ ಗಾನಯಾನ;

ಇಲ್ಲಿಂದ ಆರಂಭವಾದ ಈ ಗೀತಯಾತ್ರೆ ನಾಲ್ಕು ದಶಕಗಳ ಕಾಲ ನಿಲ್ಲದೆ ಸಾಗಿತು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ನೂರಾರು ಚಿತ್ರಗಳಲ್ಲಿ ಎಸ್‌ಪಿಬಿ ಹಾಡಿದರು. ಹೀಗೆ ಅವರು ಹಾಡಿದ ಚಿತ್ರಗೀತೆಗಳ ಸಂಖ್ಯೆ 40 ಸಾವಿರಕ್ಕೂ ಅಧಿಕ. ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದೆಯೇ ಹಿನ್ನೆಲೆ ಗಾಯನದಲ್ಲಿ ಎಸ್‌ಪಿಬಿ ಮಾಡಿದ ಸಾಧನೆ ನೋಡಿ ಇಡೀ ಚಿತ್ರರಂಗವೇ ಬೆರಗಾಯಿತು. ತಮಿಳಿನಲ್ಲಿ ಎಂ.ಎಸ್.ವಿಶ್ವನಾಥನ್, ಕನ್ನಡದಲ್ಲಿ ಜಿ.ಕೆ.ವೆಂಕಟೇಶ್ ಎಸ್‌ಪಿಬಿ ಸಾಮರ್ಥ್ಯವನ್ನರಿತು ಬೆನ್ನು ತಟ್ಟಿದರು. ಮಲಯಾಳಂ ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್, “ನಿನಗೆ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದಿದ್ದರೇನಂತೆ, ಸಂಗೀತಕ್ಕೆ ನೀನ್ಯಾರೆಂದು ಗೊತ್ತು. ನೀನು ಹಾಡುತ್ತಿರು” ಎಂದು ಧೈರ್ಯ ತುಂಬಿದ್ದರು.

ತೆಲುಗು ಚಿತ್ರಪ್ರೇಮಿಗಳಿಗೆ ಇವರ ಪರಿಚಯವಾಗುವ ಹೊತ್ತಿಗೆ ಇತರೆ ಭಾಷೆಗಳಿಂದಲೂ ಆಹ್ವಾನ ಬಂದವು. ಕನ್ನಡದಲ್ಲಿ ಎಸ್‌ಪಿಬಿ ಹಲವು ಚಿತ್ರಗಳಲ್ಲಿ ಹಾಡಿದರು. ನಟಿಸಿದರೂ ಕೂಡ. ತಿರುಗುಬಾಣ, ಬಾಳೊಂದು ಚದುರಂಗ ಸೇರಿದಂತೆ ಹತ್ತು ಹಲವು ಚಿತ್ರಗಳಿಗೆ ಹಾಡಿದರು. ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಇವರು ಹಾಡಿದ  “ಉಮಂಡು, ಘುಮಂಡು” ಹಿನ್ನೆಲೆಯ ಗೀತೆಗೆ ರಾಷ್ಟ್ರ ಪ್ರಶಸ್ತಿಯೂ ಬಂತು. ಇದೇ ರೀತಿಯಲ್ಲಿ ಎಸ್ಪಿಬಿ ಹಿಂದಿ ಚಿತ್ರರಂಗದಲ್ಲೂ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸುವ ಅವಕಾಶ ಲಭಿಸಿತು. ನಂತರ ಒಂದು ದಶಕದ ಅವಧಿಯಲ್ಲಿ  ಹತ್ತಾರು ಚಿತ್ರಗಳಲ್ಲಿ ಹಾಡಿ ಎಸ್‌ಪಿಬಿ ಹಿಂದಿ ಚಿತ್ರಪ್ರೇಮಿಗಳ ಹೃದಯ ಗೆದ್ದರು.

ಇದನ್ನೂ ಓದಿ: 120 ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ!

ಕಿರುತೆರೆಯಲ್ಲಿ ಎಸ್‌ಪಿಬಿ ಪಯಣ;

ಚಿತ್ರಗಳಲ್ಲಿ ಹಾಡಿ, ಸಂಗೀತ, ನಟನೆ ಮಾಡಿದ ಎಸ್‌ಪಿಬಿ ಕಿರುತೆರೆ ಕಾಲಿಟ್ಟರು. ಇಲ್ಲಿ ಹಾಡಿನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಂಗೀತದ ಒಳಹೊರಗನ್ನು ಸ್ಪರ್ಧಿಗಳಿಗೆ ತಿಳಿಸುವ ಹೊಣೆ ಹೊತ್ತರು. ಈ ಟೀವಿ ಕನ್ನಡದ “ಎದೆ ತುಂಬಿ ಹಾಡುವೆನು”, ಈ ಟೀವಿ ತೆಲುಗಿನ  “ಪಾಡುತಾ ತೀಯಗಾ”, ಮಾ ಟೀವಿಯ “ಪಾಡಲಾನಿ ಉಂದಿ”, ಜಯ ಟೀವಿಯ , “ಎನ್ನೋಡು ಪಾಟ್ಟು ಪಾಡುಂಗಳ್”, ಕಲೈನ್ಯರ್ ಟೀವಿಯ “ವಾನಂ ಪಾಡಿ” ಶೋಗಳಲ್ಲಿ ಎಸ್‌ಪಿಬಿ, ಕಾರ್ಯಕ್ರಮ ನಿರೂಪಕರಾಗಿ, ತೀರ್ಪುಗಾರರಾಗಿ ಕಾಣಿಸಿಕೊಂಡರು.

ಎಸ್‌ಪಿಬಿ ಸಂಗೀತ ನಿರ್ದೇಶನದ ಚಿತ್ರಗಳು;

ಬಾಲಸುಬ್ರಮಣ್ಯಮ್ ಸಂಗೀತ ನಿರ್ದೇಶನ ಆರಂಭಿಸಿದ್ದು 70ರ ದಶಕದಲ್ಲಿ. ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿ ಕೊಟ್ಟ ಬಾಲು ಅವರನ್ನು ಹುಡುಕಿಕೊಂಡು ತೆಲುಗು, ಕನ್ನಡ ನಿರ್ಮಾಪಕರೂ ಆಹ್ವಾನಿಸಿದರು. 1978ರಲ್ಲಿ “ಸಂದರ್ಭ” ಚಿತ್ರದ ಮೂಲಕ ಕನ್ನಡ ಚಿತ್ರಕ್ಕೂ ಸಂಗೀತ ನಿರ್ದೇಶಿಸಿದರು. ನಂತರ ದೇವರೆಲ್ಲಿದ್ದಾನೆ (1985), ಬೇಟೆ (1986), ಸೌಭಾಗ್ಯ ಲಕ್ಷ್ಮಿ (1986), ರಾಮಣ್ಣ, ಶ್ಯಾಮಣ್ಣ (1988), ಬೆಳ್ಳಿಯಪ್ಪ ಬಂಗಾರಪ್ಪ (1992), ಕ್ಷೀರಸಾಗರ (1992), ಮುದ್ದಿನ ಮಾವ (1993) ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದರು. ಎಸ್‌ಪಿಬಿ ಸಂಗೀತ ನೀಡಿದ್ದು 45ಕ್ಕೂ ಹೆಚ್ಚು ಚಿತ್ರಗಳಿಗೆ. ಈ ಪೈಕಿ 35ಕ್ಕೂ ಹೆಚ್ಚು ಚಿತ್ರಗಳು ತೆಲುಗಿನವು. ಹಿಂದಿಯಲ್ಲಿ ನಾಚ್ ಮಯೂರಿ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಹಮ್ ಪಾಂಚ್ ಎಂಬ ಕಿರುತೆರೆ ಧಾರಾವಾಹಿಗೆ ಹಿನ್ನೆಲೆ ಸಂಗೀತ ನೀಡಿದ್ದರು.  ತುಡಿಕ್ಕುಮ್ ಕರಂಗಳ್, ಉನ್ನೈ ಚರಣದೈಧೆನ್, ಥೈಯ್ಯಲ್‌ಕಾರನ್, ಮಯೂರಿ, ಸಿಗಾರಂ ಎಂಬ ತಮಿಳು ಚಿತ್ರಗಳಿಗೂ ಎಸ್‌ಪಿಬಿ ಸಂಗೀತ ನೀಡಿದರು.

ಎಸ್‌ಪಿಬಿ ಸಾಮರ್ಥ್ಯ ಕಂಡು ಬೆರಗಾದ ಸಂಗೀತ ನಿರ್ದೇಶಕರು;

ಎಸ್‌ಪಿಬಿ ಸಾಮರ್ಥ್ಯಕ್ಕೆ ಸಂಗೀತ ನಿರ್ದೇಶಕರು, ಗಾಯಕರು ದಂಗಾದ ಹಲವು ಸಂದರ್ಭಗಳಿವೆ. ಎಸ್‌ಪಿಬಿ ಎಂದೂ ಯಾರಿಗೂ ಹಾಡುವುದಿಲ್ಲ ಎಂದ ವ್ಯಕ್ತಿಯಲ್ಲ. ಹಾಗಾಗಿ ಅವರು ಹಲವು ಸಂದರ್ಭಗಳಲ್ಲಿ ಒಂದು ದಿನದಲ್ಲಿ ಗರಿಷ್ಟ ಗೀತೆಗಳನ್ನು ರೆಕಾರ್ಡ್ ಮಾಡಿದ್ದಿದೆ.

ಉಪೇಂದ್ರ ಕುಮಾರ್ ಮತ್ತು ಎಸ್‌ಪಿಬಿ ಜೋಡಿ ಅಂಥದ್ದೊಂದು ದಾಖಲೆಯನ್ನು ಬರೆಯಿತು. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯೊಳಗೆ ಎಸ್‌ಪಿಬಿ 16 ಹಾಡುಗಳನ್ನು ರೆಕಾರ್ಡ್ ಮಾಡಿದ್ದರು.  ಈ ಬಗ್ಗೆ ಎಸ್‌ಪಿಬಿ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ!

ಆನಂದ್ ಮಿಲಿಂದ್ ಅವರಿಗಾಗಿ ಒಂದೇ ದಿನದಲ್ಲಿ 17 ಹಾಡುಗಳನ್ನು ಹಾಡಿದ್ದರು! ಮೂರು ರೆಕಾರ್ಡಿಂಗ್ ಸ್ಟುಡಿಯೋಗಳಿಗೆ ಓಡಾಡುತ್ತಾ!  ಹಾಡಬೇಕಾದ ಗೀತೆಗಳನ್ನು ಕಾರಿನಲ್ಲೇ ಹಾಡಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರಂತೆ.
ಬ್ರೀತ್‌ಲೆಸ್ ಹಾಡು ಎಂದರೆ ನೆನಪಾಗುವುದು ಶಂಕರ್ ಮಹಾದೇವನ್. ಆದರೆ ಕಾರಿನಲ್ಲೇ 1976ರಲ್ಲೇ ಈ ಪ್ರಯೋಗವನ್ನು ಮಾಡಿದ್ದರು. ಅಷ್ಟೇ ಅಲ್ಲದೇ, ಅದೇ ದಿನ ಪಿ.ಸುಶೀಲ ಅವರೊಂದಿಗೆ 15 ಯುಗಳ ಗೀತೆ ಸೇರಿ ಒಟ್ಟು 23 ಗೀತೆಗಳನ್ನು ರೆಕಾರ್ಡ್ ಮಾಡಿದ್ದರು!

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ರಾಮ್ ಲಕ್ಷ್ಮಣ್ ಚಿತ್ರದ ಆರು ಹಾಡುಗಳನ್ನು ಎಸ್‌ಪಿಬಿ ಹಾಡಿದ್ದಾರೆ. ಇದನ್ನು ಹಾಡಲು ಅವರು ತೆಗೆದುಕೊಂಡ ಸಮಯ ಕೇವಲ ಮೂರೂವರೆ ಗಂಟೆ. ಸಂಜೆ 5 ಗಂಟೆಗೆ ಸ್ಟುಡಿಯೋ ಹೊಕ್ಕ ಕಾರಿನಲ್ಲೇ 8.30ರ ಹೊತ್ತಿಗೆ 6 ಹಾಡುಗಳನ್ನು ಹಾಡಿ ಮುಗಿಸಿದ್ದರು! ದೇವ್ ಆನಂದ್ ಒಂದು ಪ್ರಶಸ್ತಿ ಸಮಾರಂಭದಲ್ಲಿ ಬಾಲು ಅವರ ಈ ಅಸಾಮಾನ್ಯ ಸಾಮರ್ಥ್ಯವನ್ನು ಹೊಗಳುತ್ತಾ, “ಮನುಷ್ಯನೋ, ಯಂತ್ರವೋ” ಎಂದು ಬೆರಗುಗೊಂಡಿದ್ದನ್ನು ಎಸ್‌ಪಿಬಿ ಅವರೇ ಸ್ಮರಿಸಿಕೊಂಡಿದ್ದರು.

ಕನ್ನಡದಲ್ಲಿ ಅವರು ಮೊದಲು ಹಾಡಿದ್ದು “ನಕ್ಕರೆ ಅದೇ ಸ್ವರ್ಗ’ (1967) ಚಿತ್ರಕ್ಕೆ. ಇದು ಅವರ ವೃತ್ತಿ ಬದುಕಿನ ಎರಡನೇ ಹಾಡು ಎನ್ನುವುದು ವಿಶೇಷ. ಆನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಕನ್ನಡದ ಎಲ್ಲಾ ಪ್ರಮುಖ ನಾಯಕನಟರಿಗೆ ಅವರು ದನಿಯಾಗಿದ್ದಾರೆ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ 120ಕ್ಕೂ ಹೆಚ್ಚು ಮುಂಚೂಣಿ ನಾಯಕನಟರಿಗೆ ಅವರು ಹಾಡಿದ್ದಾರೆ ಎನ್ನುವುದೊಂದು ಅಪರೂಪದ ದಾಖಲೆಯೇ ಸರಿ. ನನ್ನ ರಚನೆ ಮತ್ತು ಸಂಗೀತ ಸಂಯೋಜನೆಯ ಶೇ.80ರಷ್ಟು ಹಾಡುಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದಲೇ ಹಾಡಿಸಿದ್ದೇನೆ. “ಮುದ್ದಿನ ಮಾವ’ ಸಿನಿಮಾಗೆ ಅವರೇ ಸಂಗೀತ ಸಂಯೋಜಿಸಿದ್ದರು. ಈ ಸಿನಿಮಾದಲ್ಲಿ ಅವರು ಅಭಿನಯಿಸಿದ “ದೀಪಾವಳಿ ದೀಪಾವಳಿ…’ ಗೀತೆಯನ್ನು ಡಾ.ರಾಜಕುಮಾರ್ ಹಾಡಿದ್ದರು. ಇದೊಂದು ಅಪರೂಪದ ಸನ್ನಿವೇಶವಾಗಿ ದಾಖಲಾಗಿದೆ.

PC: Live Law

ಇದನ್ನೂ ಓದಿ: ಉಮರ್ ಖಾಲಿದ್‌ಗೆ ಅ. 22 ರವರೆಗೆ ನ್ಯಾಯಾಂಗ ಬಂಧನ: ದೆಹಲಿ ಕೋರ್ಟ್

ಸೋಮಾರಿ, ಆದರೆ ಕ್ರಿಕೆಟ್ ಪ್ರೇಮಿ;

“ನಾನು ಸೋಮಾರಿ, ತುಂಬಾ ಟೀವಿ ನೋಡ್ತೀನಿ. ಆ್ಯಕ್ಷನ್ ಫಿಲ್ಮ್ ಅಂದ್ರೆ ತುಂಬಾ ಇಷ್ಟ. ನ್ಯೂಸ್ ನೋಡ್ತೀನಿ. ಸಂಗೀತ ಬಿಟ್ರೆ ನಾನು ತುಂಬಾ ಇಷ್ಟಪಡೋದು ಕ್ರಿಕೆಟನ್ನು. ಕ್ರಿಕೆಟ್ ನೋಡುವುದಕ್ಕಾಗಿಯೇ ನಾನು ದೂರದ ಸ್ಥಳಗಳಿಗೆ ಹೋಗುತ್ತೇನೆ. ಹಲವು ಕ್ರಿಕೆಟ್ ಸ್ಟಾರ್‌ಗಳು ನನ್ನ ಸ್ನೇಹಿತರು. ನಾನು ನನ್ನ ಜೀವನವನ್ನು ತುಂಬಾ ಪ್ರೀತಿಸ್ತೀನಿ. ಸುಮ್ಮನಿದ್ದು ಹೆಚ್ಚು ಕಾಲ ಕಳೆಯುತ್ತೇನೆ. ಮಲಗ್ತೀನಿ. ಕಾರು ಏರಿ ಸುಮ್ಮನೆ ದೂರ ಹೋಗಿ ಪೇಪರ್ ಓದಿ ವಾಪಸ್ ಬರ್ತೀನಿ. ನನ್ನ ಬದುಕು ಇಷ್ಟೆ. ತುಂಬಾ ವಿಶೇಷ ಎಂಬುದೇನಿಲ್ಲ” ಎಂದು ಸಂದರ್ಶನವೊಂದರಲ್ಲಿ ಎಸ್‌ಪಿಬಿ ಹೇಳಿಕೊಂಡಿದ್ದರು.

ಬರೋಬ್ಬರಿ 16 ಭಾಷೆಗಳಲ್ಲಿ ಹಾಡಿದ ಎಸ್‌ಪಿಬಿ;

ಎಸ್‌ಪಿಬಿ ಒಟ್ಟು 16 ಭಾಷೆಗಳಲ್ಲಿ ಹಾಡಿದ್ದಾರೆ. ಅವರು ಮೂಲತಃ ಆಂಧ್ರಪ್ರದೇಶದವರಾಗಿದ್ದರೂ, ತೆಲುಗಿನಷ್ಟೇ ಸಲೀಸಾಗಿ ತಮಿಳನ್ನೂ ಮಾತಾಡಬಲ್ಲರು. ಕನ್ನಡದಲ್ಲಿ ಹಾಡಲಾರಂಭಿಸಿದ ಮೇಲೆ ಕನ್ನಡವನ್ನು ಕಲಿತರು. ಅವರ ಕನ್ನಡ ಸಕ್ಕರೆಯಷ್ಟು ಸವಿಯಾಗಿದೆ ಎಂದು ಕೆಲವರು ಮೆಚ್ಚುಗೆಯ ಮಾತಾಡಿದ್ದುಂಟು. ಹಾಗೆಯೇ ಹಿಂದಿ, ಮಲಯಾಳಂಗಳನ್ನು ಕಲಿತರು. ತಾವು ಯಾವ ಭಾಷೆಯಲ್ಲಿ ಹಾಡುತ್ತೇವೊ ಆ ಭಾಷೆಯನ್ನು ಕಲಿಯಬೇಕು ಎಂದು ಎಸ್‌ಪಿಬಿ ಹೇಳುತ್ತಿದ್ದರು. ಭಾಷೆಯ ಜ್ಞಾನವಿದ್ದಾಗ, ಸ್ಥಳೀಯ ಭಾಷೆಯನ್ನು ಕಲಿತಾಗ ಮಾತ್ರ ಗೀತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಭಾವಪೂರ್ಣವಾಗಿ ಹಾಡಿ ಆ ಗೀತೆಗೆ ನ್ಯಾಯ ಒದಗಿಸುವುದುಕ್ಕೆ ಸಾಧ್ಯವಾಗುವುತ್ತದೆ ಎಂದು ಅವರು ಹೇಳುತ್ತಿದ್ದರು.

ಎಸ್‌ಪಿಬಿ ಗೆ ಗಂಟಲಲ್ಲಿ ಆಪರೇಷನ್!

ಎಸ್‌ಪಿಬಿ ತುಂಬಾ ಖುಷಿಯಿಂದ ಇರಬೇಕೆನ್ನುವ ವ್ಯಕ್ತಿ. ಅವರೆಂದೂ ತಮ್ಮ ಜೀವನಕ್ಕೆ ಕಟ್ಟುಪಾಡುಗಳನ್ನು ಹಾಕಿಕೊಂಡು ಬದುಕಿದವರಲ್ಲ. ಹಾಡುವವರು ಕಂಠವನ್ನು ಸದಾ ಶುದ್ಧವಾಗಿಟ್ಟುಕೊಳ್ಳಬೇಕು, ಅಭ್ಯಾಸ ಮಾಡುತ್ತಿರಬೇಕು, ಅದನ್ನು ತಿನ್ನಬಾರದು, ಇದನ್ನು ಕುಡಿಯಬಾರದು ಎಂಬ ಕಟ್ಟುಪಾಡುಗಳನ್ನು ಅವರು ಲೆಕ್ಕಿಸುತ್ತಿರಲಿಲ್ಲ. ಅವರೇ  ಹೇಳಿದಂತೆ, “ನಾನು ಆಗಾಗ ಸಿಗರೇಟ್ ಸೇದ್ತೀನಿ. ದಿನಕ್ಕೊಮ್ಮೆ ವಿಸ್ಕಿ ಕುಡೀತೀನಿ. ಎಲ್ಲ ರೀತಿಯ ಕೂಲ್ಡ್ ಡ್ರಿಂಕ್ಸ್ ಕುಡೀತೀನಿ. ನಿದ್ರೆ ಕಡಿಮೆ ಮಾಡ್ತೀನಿ. ಅದಕ್ಕೆ ಅನ್ಸುತ್ತೆ. ಅಲೂಗಡ್ಡೆ ಥರಾ ಊದಿಕೊಂಡಿದ್ದೀನಿ. ಇನ್ನು ನಿತ್ಯ ಅಭ್ಯಾಸ ಮಾಡೋದೆಲ್ಲ ಸುಳ್ಳು. ನಾನು ಬಾತ್‌ರೂಮ್‍ನಲ್ಲಿ ಕೂಡ ಹಾಡೋದಿಲ್ಲ. ರೆಕಾರ್ಡಿಂಗ್ ಇಲ್ಲಾಂದ್ರೆ ನಾನು ಹಾಡೋದನ್ನು ಮರೆತೇ ಬಿಡ್ತೀನಿ” ಎಂದು ಹೇಳಿದ್ದರು. ಆದರೆ ಹಾಡೋಕೆ ನಿಂತ್ರೆ ಕೇಳುಗರ ಮೈಮರೆಸಿಬಿಡುತ್ತಿದ್ದರು. ಅಂಥದ್ದೊಂದು ಮ್ಯಾಜಿಕ್ ಅವರ ಕಂಠದಲ್ಲಿತ್ತು.

PC:The Federal

 

 

 

 

 

 

 

 

ಇಂಥ ಎಸ್‌ಪಿಬಿ ಇನ್ನು ಮುಂದೆ ಹಾಡೋದೆ ಇಲ್ಲ ಅನ್ನುವಂಥ ಸಂದರ್ಭ ಎದುರಾಯಿತು. ಗಂಟಲಲ್ಲಿ ಗಡ್ಡೆಯಾಗಿತ್ತು. ಅದನ್ನು ಆಪರೇಷನ್ ಮಾಡಿ ತೆಗೆಯಬೇಕಾಗಿತ್ತು. ತೆಗೆಯದೇ ಇದ್ದರೆ, ಸ್ಪಲ್ಪ ಕಾಲ ಹಾಡಬಹುದಿತ್ತು. ಆದರೆ ತೆಗೆದರೆ ಹಾಡುತ್ತಾರೆಂಬುದು ಗ್ಯಾರಂಟಿ ಇರಲಿಲ್ಲ. ಎಸ್ಪಿಬಿ ಮೂರು ತಿಂಗಳು ಈ ಗಂಟಲು ನೋವಿನಿಂದ ಬಳಲಿದರು. ಆಪರೇಷನ್ ವಿಷಯ ಬಂದಾಗ ಸ್ನೇಹಿತರು, ಆಪ್ತರು ಮುಂದೆ ಹಾಡಲಾಗುವುದಿಲ್ಲ ಎಂದು ಹೇಳಿ ಆಪರೇಷನ್‍ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ಎಸ್‌ಪಿಬಿ ಈ ದಿನಗಳನ್ನು ತುಂಬಾ ಆತಂಕದಲ್ಲೇ ಕಳೆದರು. ಕಡೆಗೂ ಆಪರೇಷನ್ ಮಾಡಿಸುವ ನಿರ್ಧಾರಕ್ಕೆ ಬಂದರು. ಹೇಗೂ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀನಿ. ಈಗ ಆಪರೇಷನ್ ಮಾಡಿಸಿದರೆ ದನಿ ಬರಲಿ, ಬರದೇ ಇರಲಿ. ಚೆನ್ನಾಗಿ ಹಾಡಲು ಸಾಧ್ಯವಾದರೆ ಸಂತೋಷ. ಹಾಡಲು ಆಗುವುದೇ ಇಲ್ಲವೆಂದರೆ ಇನ್ನೂ ಸಂತೋಷ ಎಂದು ಹೇಳಿ ಬಿಟ್ಟರು. ಬಹುಶಃ ಚಿತ್ರರಂಗದ, ಚಿತ್ರಪ್ರೇಮಿಗಳ ಪ್ರಾರ್ಥನೆಯ ಫಲ ಎಸ್‌ಪಿಬಿ ಎಂದಿನಂತೆ ತಮ್ಮ ಮ್ಯಾಜಿಕ್ ಮುಂದುವರೆಸಿದರು.

ನಟನಾಗಿ ಎಸ್‌ಪಿಬಿ;

ನಟನೆಯನ್ನು ಹವ್ಯಾಸವಾಗಿಸಿಕೊಂಡವರು ಎಸ್‌ಪಿಬಿ. ತಮ್ಮ ಗಾಯನ ವೃತ್ತಿಯಿಂದ ಸ್ವಲ್ಪ ಬದಲಾವಣೆಗಾಗಿ ಆಗಾಗ ನಟಿಸುತ್ತಿದ್ದರು. ಹಾಗೆ ಅವರು ನಟಿಸಿದ ಚಿತ್ರಗಳು 50ಕ್ಕೂ ಹೆಚ್ಚು. ಐದು ಭಾಷೆಗಳಲ್ಲಿ ಹಾಡಿದರೂ ಎಸ್‌ಪಿಬಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿದರು.

ಇದನ್ನೂ ಓದಿ: ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ: ಸುರೇಶ್ ಗೌಡ ಹೇಳಿಕೆಗೆ ವ್ಯಾಪಕ ವಿರೋಧ

ರಾಷ್ಟ್ರಪ್ರಶಸ್ತಿಗಳು;

ಮಲಯಾಳಂನ ಗಾಯಕ ಏಸುದಾಸ್ 7 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ನಂತರ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಮ್ .

ಓಂಕಾರ ನಾದಾಲು: ಶಂಕರಾಭರಣಂ (ತೆಲುಗು, 1979)
ತೇರೆ ಮೇರೆ ಬೀಚ್ ಮೆ: ಏಕ್ ದುಜೆ ಕೆ ಲಿಯೆ (ಹಿಂದಿ, 1981)
ವೇದಂ ಅಣುವಣವುಲು ನಾದಮ್: ಸಾಗರ ಸಂಗಮಮ್ (ತೆಲುಗು, 1983)
ಚೆಪ್ಪಲಾನಿ ಉಂದಿ: ರುದ್ರವೀಣಾ (ತೆಲುಗು, 1988)
ಉಮಂಡು ಘುಮಂಡು: ಗಾನಯೋಗಿ ಪಂಚಾಕ್ಷರಿ ಗವಾಯಿ (ಕನ್ನಡ, 1995)
ತಂಗ ತಾಮರೈ: ಮಿನ್ಸಾರಾ ಕನವು (ತಮಿಳು, 1996)

ಪ್ರಶಸ್ತಿ ಗೌರವಗಳು;

ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ- 1981, ಪದ್ಮಶ್ರೀ ಪ್ರಶಸ್ತಿ- 2001, ಬಸವಶ್ರೀ- 2007, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – 2008, ಪದ್ಮ ಭೂಷಣ- 2011, ಎನ್‌ಟಿಆರ್ ನ್ಯಾಷನಲ್ ಅವಾರ್ಡ್- 2012.

1 ಫಿಲ್ಮ್‌ಪೇರ್ ಅವಾರ್ಡ್‌, 6 ಫಿಲ್ಮ್‌ಫೇರ್ ಅವಾರ್ಡ್‌ ಸೌತ್, 1 ಸೈಮಾ ಅವಾರ್ಡ್, 8 ನಂದಿ ಅವಾರ್ಡ್, 4 ತಮಿಳುನಾಡು ಸ್ಟೇಟ್ ಫಿಲ್ಮ್ ಅವಾರ್ಡ್, 3 ಕರ್ನಾಟಕ ಸ್ಟೇಟ್ ಫಿಲ್ಮ್‌ ಅವಾರ್ಡ್ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: ಅಮ್ಮ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ಹಬ್ಬಿಸದಿರಿ: ಹಿನ್ನಲೆ ಗಾಯಕಿ ಎಸ್. ಜಾನಕಿ ಪುತ್ರ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...