Homeಮುಖಪುಟಈ ಸಾಂಕ್ರಾಮಿಕ ಹೊಸ ವ್ಯವಸ್ಥೆಗೆ ದಾರಿದೀಪವಾಗಬಲ್ಲದೆ? – ಅರುಂಧತಿ ರಾಯ್

ಈ ಸಾಂಕ್ರಾಮಿಕ ಹೊಸ ವ್ಯವಸ್ಥೆಗೆ ದಾರಿದೀಪವಾಗಬಲ್ಲದೆ? – ಅರುಂಧತಿ ರಾಯ್

- Advertisement -
- Advertisement -

ಮೂಲ: ಅರುಂದತಿ ರಾಯ್‌

ಅನುವಾದ: ಮಂಜುನಾಥ್ ಚಾರ್ವಾಕ

ಇವತ್ತಿನ ಪರಿಸ್ಥಿತಿಯಲ್ಲಿ “ವೈರಲ್ ಆಗೋಗಿದೆ” ಅನ್ನುವ ಪದವನ್ನು ಒಂದು ಚೂರೂ ಕನಲದೇ ಯಾರಿಗಾದರೂ ಬಳಸಲು ಸಾಧ್ಯವಾ? ಯಾವುದಾದರೊಂದು ವಸ್ತುವನ್ನು – ಬಾಗಿಲ ಚಿಲಕವಾಗಲೀ, ಒಂದು ಖಾಲಿ ಡಬ್ಬಾವಾಗಲೀ, ತರಕಾರಿ ತುಂಬಿದ ಬ್ಯಾಗ್ ಆಗಲಿ ನೋಡಿ, ಅದರಲ್ಲಿ ಹಿಂಡು ಹಿಂಡಾಗಿ ಓಡಾಡುತ್ತಿರಬಹುದಾದ, ನಮ್ಮ ಶ್ವಾಸಕೋಶಕ್ಕೆ ಸೇರಿಕೊಳ್ಳಲು ಕಾಯುತ್ತಿರುವ ಅದೃಶ್ಯವಾದ, ಜೀವ ಹೋಗಿರದ -ಜೀವವಿಲ್ಲದ ಸಣ್ಣ ಸಣ್ಣ ಬಿಂದುಗಳನ್ನು ಕಲ್ಪಿಸಿಕೊಳ್ಳದಿರಲು ಯಾರಿಗೆ ಸಾಧ್ಯ?

ಒಬ್ಬ ಅಪರಿಚಿತನಿಗೆ ಮುತ್ತಿಡಲು, ಸಾಕಷ್ಟು ಜನರಿರುವ ಬಸ್ ಹತ್ತಲು ಅಥವಾ ತಮ್ಮ ಮಕ್ಕಳನ್ನು ಶಾಲೆಗೆ ಭಯವಿಲ್ಲದೆ ಕಳುಹಿಸಲು ಯಾರಿಗೆ ಸಾಧ್ಯ? ದಿನನಿತ್ಯದ ಸಣ್ಣ ಸಣ್ಣ ಖುಷಿಯ ವಿಚಾರಗಳನ್ನು, ಅವುಗಳು ತರಬಹುದಾದ ಅಪಾಯದ ಬಗ್ಗೆ ಯೋಚಿಸದೆ ಅನುಭವಿಸಲು ಯಾರಿಗೆ ಸಾಧ್ಯ? ನಮ್ಮಲ್ಲಿ ಇವತ್ತು ಸೋಂಕು ರೋಗ ತಜ್ಞ , ವೈರಸ್ ಶಾಸ್ತ್ರಜ್ಞ, ಅಂಕಿಅಂಶ ತಜ್ಞ ಅಥವಾ ಒಬ್ಬ ಪ್ರವಾದಿಯ ಪಾತ್ರ ಯಾರು ತಾನೇ ವಹಿಸುತ್ತಿಲ್ಲ? ಯಾವ ವಿಜ್ಞಾನಿ ಅಥವಾ ವೈದ್ಯ ಯಾರಿಗೂ ತಿಳಿಯದ ಹಾಗೆ ಒಂದು ಪವಾಡಕ್ಕೆ ಮನಸ್ಸಿನಲ್ಲೇ ಬೇಡಿಕೊಳ್ಳುತ್ತಿಲ್ಲ? ಯಾವ ಪೂಜಾರಿ – ರಹಸ್ಯವಾಗಿಯಾದರೂ – ವಿಜ್ಞಾನಕ್ಕೆ ಶರಣಾಗಿಲ್ಲ?

ಮತ್ತು ಈ ವೈರಸ್ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವಾಗ ಕೂಡ, ನಗರದ ರಸ್ತೆಗಳಲ್ಲಿ ಕೇಳಿಸುತ್ತಿರುವ ಹಕ್ಕಿಗಳ ಹಾಡು ಕೇಳಿ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ರಸ್ತೆ ದಾಟುತ್ತಿರುವ ನವಿಲುಗಳ ನರ್ತನ ನೋಡಿ, ಆಕಾಶದಲ್ಲಿನ ನಿಶ್ಯಬ್ಧಕ್ಕೆ ಯಾರು ತಾನೇ ರೋಮಾಂಚನಗೊಂಡಿಲ್ಲ?

ಈ ವಾರ ಒಟ್ಟು ಕೇಸ್ ಗಳ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚಾಗಿದೆ. 50000ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹಲವು ಪಟ್ಟು ಹೆಚ್ಚಾಗಬಹುದು ಎಂಬ ಅಂದಾಜಿದೆ. ಈ ವೈರಸ್ ವ್ಯಾಪಾರದ ಮಾರ್ಗಗಳಲ್ಲಿ ಮತ್ತು ಅಂತರಾಷ್ಟ್ರೀಯ ಬಂಡವಾಳದ ಜತೆ ಅಡೆತಡೆಗಳಿಲ್ಲದೆ ಸ್ವತಂತ್ರವಾಗಿ ಹರಡಿದೆ, ಹಾಗೂ ಈ ಭೀಕರ ಪಿಡುಗು ಹಲವು ದೇಶಗಳ, ನಗರಗಳ ಜನರನ್ನು ಅವರ ಮನೆಗಳಲ್ಲಿ ಕೂಡಿಹಾಕಿದೆ.

ಆದರೆ ಈ ವೈರಸ್ ಗೆ ಬೇಕಾಗಿರುವುದು ತನ್ನ ವಂಶವೃದ್ಧಿ ಮಾಡುವುದಷ್ಟೇ ಹೊರತು, ಬಂಡವಾಳದ ಹರಿವಿನಂತೆ ಲಾಭ ಮಾಡುವುದಲ್ಲ, ಹಾಗಾಗಿ ಉದ್ದೇಶಪೂರ್ವಕವಾಗಲ್ಲದಿದ್ದರೂ ಬಂಡವಾಳದ ಹರಿವನ್ನು ಹಿಮ್ಮೆಟ್ಟಿಸಿದೆ. ಇದು ವಲಸೆ ನಿಯಂತ್ರಣ ಮಾಡುವ ಸಂಸ್ಥೆಗಳನ್ನು, ಡಿಜಿಟಲ್ ಕಣ್ಗಾವಲುಗಳನ್ನು ಮತ್ತು ಎಲ್ಲ ಬಗೆಯ ಡೇಟಾ ವಿಶ್ಲೇಷಣೆಗಳನ್ನೂ ಅಪಹಾಸ್ಯಕ್ಕೀಡು ಮಾಡುತ್ತಾ, ಪ್ರಪಂಚದ ಅತ್ಯಂತ ಶ್ರೀಮಂತರಿಗೆ ಹಾಗೂ ಶ್ರೀಮಂತ ದೇಶಗಳಿಗೆ ಬಲವಾದ ಹೊಡೆತ ನೀಡಿ, ಬಂಡವಾಳಶಾಹಿ ವ್ಯವಸ್ಥೆ ದಡಬಡಾಯಿಸಿ ನಿಲ್ಲುವ ಹಾಗೆ ಮಾಡಿದೆ. ಬಹುಶಃ ಇದು ತಾತ್ಕಾಲಿಕವೇ ಇರಬಹುದು, ಆದರೆ ಈ ವ್ಯವಸ್ಥೆಯ ಬಿಡಿಬಾಗಗಳನ್ನೆಲ್ಲ ಒಮ್ಮೆ ಕೂಲಂಕುಷವಾಗಿ ನೋಡಿ ಇಂತಹ ವ್ಯವಸ್ಥೆಯನ್ನು ಸರಿ ಪಡಿಸಿ ಮುಂದೆ ಸಾಗಬೇಕಾ ಅಥವಾ ಇದಕ್ಕಿಂತ ಉತ್ತಮ ಹೊಸ ವ್ಯವಸ್ಥೆಯನ್ನು ಹುಡುಕಬೇಕಾ ಎಂದು ಯೋಚಿಸಲು ಬೇಕಾಗುವಷ್ಟು ಕಾಲಾವಕಾಶ ನೀಡಿದೆ.

ಈ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ಮ್ಯಾಂಡೇರಿಯನ್ನರು ಈ ಪರಿಸ್ಥಿತಿಯನ್ನು ಯುದ್ದ ಎಂದು ಕರೆಯುತ್ತಿದ್ದಾರೆ. ಯುದ್ಧ ಎನ್ನುವ ಪದವನ್ನು ಕನಿಷ್ಠ ರೂಪಕವಾಗಿಯೂ ಬಳಸದೆ, ಅದರ ನಿಜ ಅರ್ಥದಲ್ಲಿಯೇ ಬಳಸುತ್ತಿದ್ದಾರೆ. ಆದರೆ ಇದು ಯುದ್ಧವೇ ಆಗಿದ್ದರೆ, ಅಮೆರಿಕನ್ನರು ಎಲ್ಲರಿಗಿಂತ ಸಶಕ್ತವಾಗಿ ಸಿದ್ಧರಾಗಿರುತ್ತಿದ್ದರಲ್ಲವೇ? ಈ ಯುದ್ಧವನ್ನು ಮುಂಚೂಣಿಯಲ್ಲಿ ಎದುರಿಸುತ್ತಿರುವವರಿಗೆ ಬೇಕಾಗಿರುವುದು ಮಾಸ್ಕ್ ಗಳು, ಗ್ಲೋವ್ಸ್ ಗಳಾಗದೆ, ಗನ್ ಗಳು, ಬಾಂಬ್ ಗಳು,

ಬಂಕರ್ ಗಳನ್ನು ಸ್ಫೋಟಿಸುವ ಬಾಂಬ್ಗಳು, ಜಲಾಂತರ್ಗಾಮಿ ನೌಕೆಗಳು, ಯುದ್ಧ ವಿಮಾನಗಳಾಗಿದ್ದರೆ ಈ ಬಗೆಯಕೊರತೆಯಾಗಲು ಬಿಡುತ್ತಿದ್ದರೆ?

ವಿಶ್ವದ ಎಲ್ಲ ಮೂಲೆಗಳಿಂದ, ನಾವುಗಳು ನ್ಯೂಯಾರ್ಕ್ ಗವರ್ನರ್ ಪತ್ರಿಕೆಗಳಿಗೆ ನೀಡುವ ಸಂಕ್ಷಿಪ್ತ ವಿವರಗಳನ್ನು ಆಶ್ಚರ್ಯಚಕಿತರಾಗಿ ನೋಡುವ ಬಗೆಯನ್ನು ವಿವರಿಸುವುದು ಬಹಳ ಕಷ್ಟದ ವಿಷಯವಾಗಿದೆ. ನಾವು ಅಂಕಿ ಅಂಶಗಳನ್ನು ಗಮನಿಸುತ್ತಿದ್ದೇವೆ, ಅಮೆರಿಕಾದ ಆಸ್ಪತ್ರೆಗಳು ರೋಗಿಗಳನ್ನು ನೋಡಿಕೊಳ್ಳಲಾಗದ ಸುದ್ದಿಗಳನ್ನು, ಕಡಿಮೆ ಸಂಬಳದ ನರ್ಸ್ ಗಳ, ಮತ್ತು ಸುರಕ್ಷಾ ಧರಿಸುಗಳ ಕೊರತೆಯಿಂದ ರೈನ್ ಕೋಟ್ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಈ ರೋಗಕ್ಕೆ ತುತ್ತಾಗುತ್ತಿರುವ ಕಥೆಗಳನ್ನು ಕೇಳುತ್ತಿದ್ದೇವೆ. ಅಮೆರಿಕಾದ ರಾಜ್ಯಗಳು ಉಸಿರಾಟದ ಉಪಕರಣಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಪಾಲೊಳ್ಳಬೇಕಾದ ಪರಿಸ್ಥಿ ನೋಡುತ್ತಿದ್ದೇವೆ, ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಸಾಯಲು ಬಿಡಬೇಕು ಎನ್ನುವ ವೈದ್ಯರ ದ್ವಂದ್ವಗಳನ್ನು ನೋಡುತ್ತಾ, ನಮ್ಮಷ್ಟಕ್ಕೆ ಹೇಳಿಕೊಳ್ಳುತ್ತಿದ್ದೇವೆ”ದೇವರೇ , ಇದು ನಿಜವಾದ ಅಮೇರಿಕಾ.”

****

ಈ ದುರಂತ ತ್ವರಿತವಾಗಿ ನಮ್ಮ ಮುಂದೆ ಅನಾವರಣಗೊಳ್ಳುತ್ತಿರುವ ಮಹಾ ಘಟನೆ. ಆದರೆ ಇದೇನು ಹೊಸತಲ್ಲ. ಬಹಳ ವರ್ಷಗಳ ಹಿಂದೆಯೇ ಹಳಿ ತಪ್ಪಿ ತೆವಳುತ್ತ ಸಾಗುತ್ತಿರುವ ರೈಲಿನ ಅವಶೇಷದಂತೆ. “ರೋಗಿಗಳನ್ನು ಹೊರದಬ್ಬುವ” ವಿಡಿಯೋಗಳು ಯಾರಿಗೆ ನೆನಪಿಲ್ಲ – ಹಿಂಬದಿ ನಗ್ನವಾಗಿ, ಆಸ್ಪತೆಯ ಗೌನ್‌ನಲ್ಲೆ ಇರುವ ರೋಗಿಗಳನ್ನು ಹಾಗೆಯೇ ರಸ್ತೆಯ ಮೂಲೆಗಳಲ್ಲಿ ಅಸಾಹಾಯಕರಾಗಿ ಬಿಟ್ಟು ಹೋಗಿರಲಿಲ್ಲವೇ? ನಿರ್ಭಾಗ್ಯ ರೋಗಿಗಳಿಗೆ ಅಮೇರಿಕಾದ ಆಸ್ಪತ್ರೆಯ ಬಾಗಿಲುಗಳು ಮೊದಲಿಂದಲೂ ಮುಚ್ಚಿದ್ದವು. ಇಂತಹ ರೋಗಗಳಿಂದ ಎಷ್ಟರ ಮಟ್ಟಿಗೆ ಸಂಕಟ ಅನುಭವಿಸಿದ್ದರು ಎನ್ನುವುದು ಯಾವತ್ತೂ
ಲೆಕ್ಕಕ್ಕೆ ಬಂದಿರಲಿಲ್ಲ

ಇಲ್ಲಿಯ ತನಕ ಅದು ಅಂತ ದೊಡ್ಡ ವಿಷಯವೇನಾಗಿರಲಿಲ್ಲ – ಆದರೆ ಈಗ, ಈ ವೈರಸ್ ನ ಯುಗದಲ್ಲಿ, ಒಬ್ಬ ಬಡವನ ರೋಗ, ಶ್ರೀಮಂತ ಸಮಾಜದ ಆರೋಗ್ಯವನ್ನು ಹಾಳು ಮಾಡಬಲ್ಲದು. ಹಾಗಿದ್ದರೂ, ಸಾರ್ವಜನಿಕ ಆರೋಗ್ಯದ ವಿಚಾರವಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಬರ್ನಿ ಸ್ಯಾಂಡರ್ಗೆ, ಇವತ್ತಿಗೂ, ಅಧ್ಯಕ್ಷೀಯ ಚುನಾವಣೆಗೆ ಅವನ ಪಕ್ಷದವರೇ ಸಹಕರಿಸುತ್ತಿಲ್ಲ.

ಹಾಗಾದರೆ ಫ್ಯೂಡಲಿಸ್ಮ್, ಧಾರ್ಮಿಕ ಮೂಲಭೂತವಾದದ, ಜಾತಿ, ಬಂಡವಾಳ, ಬಲಪಂಥೀಯ ಹಿಂದೂ ರಾಷ್ಟ್ರವಾದಿಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ, ನನ್ನ ಬಡ-ಶ್ರೀಮಂತ ದೇಶ ಭಾರತದ ಕಥೆಯೇನು?

ಡಿಸೆಂಬರ್ ತಿಂಗಳಲ್ಲಿ ಚೀನಾ ವುಹಾನ್ನಲ್ಲಿ ವೈರಸ್ ವಿರುದ್ಧ ಹೋರಾಡುತ್ತಿದ್ದರೆ, ಮೇಲ್ನೋಟಕ್ಕೆ ತಿಳಿಯುವ ಮುಸ್ಲೀಂ ವಿರೋಧಿ ಕ್ರೂರ ತಾರತಮ್ಯದ ನಾಗರಿಕತೆಯ ಕಾನೂನನ್ನು ಲೋಕಸಭೆಯಲ್ಲಿ ಜಾರಿಮಾಡಿದ ನಂತರ ತನ್ನ ವಿರುದ್ಧ ತಿರುಗಿ ಬಿದ್ದಿದ್ದ ಲಕ್ಷಾಂತರ ಜನರ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಭಾರತ ಸರ್ಕಾರ ನಿರತವಾಗಿತ್ತು.

ನಮ್ಮ ಗಣರಾಜ್ಯ ದಿನದ ಮುಖ್ಯ ಅತಿಥಿ ಅಮೆಜಾನ್ ಕಾಡುಭಕ್ಷಕ ಮತ್ತು ಕೋವಿಡ್ ನಿರಾಕಾರಿ ಜೈರ್ ಬೋಲ್ಸೋನೊರೋ ದೆಹಲಿಯಿಂದ ತೆರಳಿದ್ದ ಕೆಲವೆ ದಿನಗಳ ನಂತರ, ಜನವರಿ 30ನೇ ತಾರೀಕು ಭಾರತದ ಮೊದಲ ಕೋವಿಡ್-19 ಪ್ರಕರಣ ವರದಿಯಾಗಿದ್ದು. ಆದರೆ ಫೆಬ್ರವರಿಯಲ್ಲಿ ವೈರಸ್ ಬಗ್ಗೆ ಏನನ್ನೂ ಮಾಡಲು ಪುರುಸೊತ್ತಿಲ್ಲದಷ್ಟು, ಆಢಳಿತ ಪಕ್ಷದ ವೇಳಾಪಟ್ಟಿಯಲ್ಲಿ ಸಾಕಷ್ಟು ಕೆಲಸಗಳಿದ್ದವು. ಡೊನಾಲ್ಡ್ ಟ್ರಂಪ್ ನ ಅಧಿಕೃತ ಭೇಟಿ ಆ ತಿಂಗಳ ಕೊನೆಯಲ್ಲಿ ನಿಗದಿಯಾಗಿತ್ತು. ಆ ಕಾರ್ಯಕ್ರಮಕ್ಕೆ ಗುಜರಾತ್ ನ ಕ್ರೀಡಾಂಗಣವೊಂದರಲ್ಲಿ 10 ಲಕ್ಷ ಜನರ ಭಾಗವಹಿಸುತ್ತಾರೆ ಎಂದು ಆತನಿಗೆ ಆಮಿಷ ನೀಡಲಾಗಿತ್ತು. ಅದಕ್ಕೆ ಸಾಕಷ್ಟು ಹಣ ಮತ್ತು ಸಮಯ ಬೇಕಾಗಿತ್ತು

ಆನಂತರ ದೆಹಲಿ ವಿಧಾನಸಭೆಯ ಚುನಾವಣೆಯಿತ್ತು. ಬಿಜೆಪಿ ತನ್ನ ಆಟವನ್ನು ಚುರುಕುಗಳಿಸದಿದ್ದರೆ ಅದರಲ್ಲಿ ಸೋಲುವುದು ಖಂಡಿತ ಎಂದು ತಿಳಿದಿದ್ದರಿಂದ, ಯಾವುದೇ ಅಡೆತಡೆಯಿಲ್ಲದ ಹಿಂದೂ ರಾಷ್ಟ್ರ ಪ್ರಚಾರದ ಕರೆ ಕೊಟ್ಟು, ದೈಹಿಕ ಹಲ್ಲೆಗೂ ಹಿಂದೂ ಮುಂದು ನೋಡದೆ, “ವಿದ್ರೋಹಿ”ಗಳಿಗೆ ಗುಂಡು ಹಾರಿಸಲು ಕರೆಕೊಟ್ಟ ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ನಿಂತಿತು.

ಆ ಚುನಾವಣೆಯನ್ನೇನೋ ಸೋತರು. ಆ ಸೋಲಿಗೆ ಶಿಕ್ಷೆಯಾಗಿ, ಅದಕ್ಕೆ ಕಾರಣ ಎಂದು ದೂಷಿಸಲಾದ ಮುಸ್ಲೀಂರಿಗೆ ಶಿಕ್ಷೆ ಕಾದಿತ್ತು. ಆಯುಧ ಸನ್ನದ್ದರಾದ ಕಾನೂನುಬಾಹಿರ ಹಿಂದೂ ಕಿಡಿಗೇಡಿಗಳು, ಪೊಲೀಸರ ಸಹಾಯದೊಂದಿಗೆ, ಮುಸ್ಲಿಂ ಕಾರ್ಮಿಕ ವರ್ಗದವರಿದ್ದ ಈಶಾನ್ಯ ದೆಹಲಿ ನೆರೆಹೊರೆಯ ಮೇಲೆ ದಾಳಿ ನಡೆಸಿದರು. ಮನೆಗಳು, ಅಂಗಡಿ ಮುಂಗಟ್ಟುಗಳು, ಮಸೀದಿಗಳು ಮತ್ತು ಶಾಲೆಗಳನ್ನು ಸುಟ್ಟರು. ಈ ದಾಳಿಯನ್ನು ಎದುರು ನೋಡುತ್ತಿದ್ದ ಮುಸ್ಲಿಮರ ತಿರುಗಿ ಬಿದ್ದರು. 50ಕ್ಕೂ ಹೆಚ್ಚು ಮುಸ್ಲಿಂ ಮತ್ತು ಕೆಲವು ಹಿಂದೂಗಳು ಮೃತರಾದರು.

ಸಮೀಪದ ಸ್ಮಶಾನದಲ್ಲಿ ನಿರ್ಮಿತವಾದ ನಿರಾಶ್ರಿತರ ಶಿಬಿರಗಳಲ್ಲಿ ಸಾವಿರಾರು ಜನರು ಸೇರಿಕೊಂಡರು. ಚರಂಡಿಗಳಲ್ಲಿ ಸಿಕ್ಕಿಹಾಕಿಕೊಂಡ ಮೃತ ದೇಹಗಳನ್ನು ಹೊರಗೆಳೆಯುವುದರಲ್ಲಿ ಪೊಲೀಸರು ನಿರತರಾಗಿದ್ದ ಸಮಯದಲ್ಲಿ ಮೊದಲ ಬಾರಿಗೆ ಕೋವಿಡ್-19 ನ ಬಗ್ಗೆ ಅಧಿಕಾರಿಗಳ ಮೊದಲ ಭೇಟಿ ಏರ್ಪಟ್ಟಿತು ಹಾಗೂ ಬಹುತೇಕ ಭಾರತೀಯರು ಮೊದಲ ಬಾರಿಗೆ ಸ್ಯಾನಿಟೈಸರ್ ನ ಅಸ್ಥಿತ್ವದ ಬಗ್ಗೆ ತಿಳಿದುಕೊಂಡರು.

ಮಾರ್ಚ್ ಕೂಡ ಸಾಕಷ್ಟು ಬಿಡುವಿಲ್ಲದ ತಿಂಗಳಾಗಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರವನ್ನು ತರುವುದಕ್ಕೆ ಮೊದಲ ಎರಡು ವಾರಗಳನ್ನು ಮೀಸಲಿಡಲಾಯಿತು. ಮಾರ್ಚ್ 11ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತು. ಎರಡು ದಿನಗಳ ನಂತರ ಮಾರ್ಚ್ 13ಕ್ಕೆ ಆರೋಗ್ಯ ಸಚಿವಾಲಯ ಕೊರೊನ “ಆರೋಗ್ಯ ತುರ್ತಲ್ಲ” ಎಂದು ಘೋಷಿಸಿತು.

ಕೊನೆಗೂ ಮಾರ್ಚ್ 19ಕ್ಕೆ, ಭಾರತದ ಪ್ರಧಾನ ಮಂತ್ರಿಗಳು ದೇಶವನ್ನುದ್ದೇಶಿಸಿ ಮಾತನಾಡಿದರು. ಅವರೇನು ಆ ಸಂಧರ್ಭಕ್ಕೆ ಅಷ್ಟು ತಯಾರಾಗಿ ಬಂದಿರಲಿಲ್ಲ. ಫ್ರಾನ್ಸ್ ಮತ್ತು ಇಟಲಿಯಿಂದ ಒಂದು ಉಪಾಯ ಎತ್ತಿಕೊಂಡು ಬಂದು, ನಮಗೆಲ್ಲ “ಸಾಮಾಜಿಕ ಅಂತರ”ದ (ಜಾತಿ ಪದ್ದತಿಯಿಂದ ತುಂಬಿರುವ ಸಮಾಜಕ್ಕೆ ಇದು ಬಹಳ ಸುಲಭದ ಕೆಲಸ) ಬಗ್ಗೆ ವಿವರಿಸಿ, ಮಾರ್ಚ್ 22ನ್ನು ಜನತಾ ಕರ್ಫ್ಯೂ ಎಂದು ಘೋಷಿಸಿದರು. ಅವರ ಸರ್ಕಾರ ಹೇಗೆ ಈ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಎನ್ನುವುದರ ಬಗ್ಗೆ ಏನೂ ಹೇಳದೆ, ಜನರಿಗೆ ಬಾಲ್ಕನಿಗೆ ಬಂದು, ಘಂಟೆ ಬಾರಿಸಿ, ತಟ್ಟೆ ಪಾತ್ರೆಗಳನ್ನು ಬಡಿದು ಸದ್ದು ಮಾಡಿ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸೂಚಿಸಿಲು ಕೇಳಿಕೊಂಡರು.

ಆದರೆ ಆ ಕ್ಷಣದವರೆಗೂ, ಭಾರತ ವೈದ್ಯಕೀಯ ಸುರಕ್ಷತಾ ಉಪಕರಣಗಳನ್ನು, ಉಸಿರಾಟದ ಉಪಕರಣಗಳನ್ನು ತನ್ನ ದೇಶದ ವೈದ್ಯಕೀಯ ಸಿಬ್ಬಂದಿಗೆ ನೀಡದೆ, ವಿದೇಶಕ್ಕೆ ರಫ್ತು ಮಾಡುತ್ತಿದ್ದರ ಬಗ್ಗೆ ಏನೂ ಹೇಳಲಿಲ್ಲ.

ಅಂದುಕೊಂಡ ಹಾಗೆ ಪ್ರಧಾನಿಗಳ ಈ ಕೋರಿಕೆಗೆ ಜನತೆ ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸದರು. ಸಾಮಾಜಿಕ ಅಂತರವೊಂದನ್ನು ಬಿಟ್ಟು, ಪಾತ್ರೆಗಳನ್ನು ಸದ್ದು ಮಾಡುವುದು, ಸಮುದಾಯ ನರ್ತನಗಳು, ಮೆರವಣಿಗೆಗಳೆಲ್ಲ ನಡೆದವು. ಆನಂತರ ಜನ ಪವಿತ್ರ ಗೋವಿನ ಸಗಣಿಯಲ್ಲಿ ಕುಪ್ಪಳಿಸಿದರು ಮತ್ತು ಬಿಜೆಪಿ ಪಕ್ಷದಿಂದ ಗೋಮೂತ್ರ ಸೇವನೆಯ ಪಾರ್ಟಿಗಳು ನಡೆದವು . ಇದನ್ನೆಲ್ಲಾ ಮೀರಿಸಲೇಬಾಕಾಗಿದ್ದರಿಂದ, ಮುಸ್ಲಿಂ ಸಂಘಟನೆಗಳು ಸಹ ದೇವರು ಈ ವೈರಸ್ ಗೆ ಉತ್ತರ ಎಂದು ಘೋಷಿಸಿ ನಂಬಿಕೆಯ ಹೆಸರಿನಲ್ಲಿ ಮಸೀದಿಯಲ್ಲಿ ಜನರನ್ನು ಗುಂಪು ಸೇರುವಂತೆ ಮಾಡಿದವು.

______________________________

ಮಾರ್ಚ್ 24ರಂದು, ರಾತ್ರಿ 8 ಘಂಟೆ ಸಮಯಕ್ಕೆ ಮೋದಿ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡು ಆದಿನ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರು. ಮಾರ್ಕೆಟ್ಗಳು, ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಎಲ್ಲ ಸ್ಥಬ್ದವಾಗುತ್ತದೆ ಎಂದು ಘೋಷಿಸಲಾಯಿತು.

ಈ ನಿರ್ಧಾರವನ್ನು ದೇಶದ ಪ್ರಧಾನಿಯಾಗಲ್ಲದೆ, ಮನೆಯ ಹಿರಿಯನಾಗಿ ಹೇಳುತ್ತಿದ್ದೇನೆ ಎಂದರು. ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸದೆ, ಇಂತಹ ನಿರ್ಧಾರ ತೆಗೆದುಕೊಳ್ಳಲು ಇನ್ನು ಯಾರಿಗೆ ಸಾಧ್ಯ? 138 ಕೋಟಿ ಜನರು ಯಾವುದೇ ಸಿದ್ಧತೆಯಿಲ್ಲದೆ, 4 ಘಂಟೆಗಳ ಮುನ್ಸೂಚನೆಯಂತೆ, ಲಾಕ್ ಡೌನ್ ಆಗುವುದು ಹೇಗೆ ಸಾಧ್ಯ? ಅವರ ಈ ನಿರ್ಧಾರಗಳು ಅವರಿಗೆ ಭಾರತದ ನಾಗರೀಕರ ಮೇಲೆ ಎಷ್ಟು ಆಸ್ಥೆಯಿದೆ ಎಂದು ತೋರಿಸುತ್ತದೆ. ನಾಗರಿಕರನ್ನು ವಿರೋಧಿ ಪಡೆ ಎಂಬುವಂತೆ ಕಂಡು ಅವರನ್ನು ನಂಬದೆ ಅವರ ಮೇಲೆ ಸಾಕಷ್ಟು ಬಲಪ್ರಯೋಗ ಮಾಡಿ, ಅವರನ್ನು ಆಶ್ಚರ್ಯ ಚಕಿತರನ್ನಾಗಿಸಿ, ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಭಾರತದ ಪ್ರಧಾನಿಗಳಿಗೆ ಇಷ್ಟವಿದ್ದ ಹಾಗೆ ಕಾಣುತ್ತದೆ.

ಲಾಕ್ ಡೌನ್ ಏನೋ ಆದೆವು. ಸಾಕಷ್ಟು ವೈದ್ಯಕೀಯ ಸಿಬ್ಬಂದಿ, ಸಾಂಕ್ರಾಮಿಕ ರೋಗ ತಜ್ಞರು ಈ ನಡೆಯನ್ನು ಶ್ಲಾಘಿಸಿದರು. ಬಹುಶಃ ಅವರ ವಾದದ ಪ್ರಕಾರ ಇದು ಸರಿಯೇ ಇರಬಹುದು. ಆದರೆ ಸಣ್ಣ ಸಿದ್ಧತೆಯಾಗಲಿ, ಯೋಜನೆಯಾಗಲಿ ಮಾಡಿಕೊಳ್ಳದೆ ಘೋಷಿಸಿದ ಜಗತ್ತಿನ ಅತ್ಯಂತ ಶಿಕ್ಷಾತ್ಮಕವಾದ ಈ ಲಾಕ್ ಡೌನ್ ತನ್ನ ಉದ್ದೇಶಕ್ಕೆ ವಿರುದ್ಧವಾಗಿ ಉಂಟುಮಾಡಿದ ಪರಿಣಾಮವನ್ನು ಅವರ್ಯಾರೂ ಬೆಂಬಲಿಸಲು ಸಾಧ್ಯವಿಲ್ಲ .

ಈ ರೀತಿಯ ಜಾದೂಗಳ ಮೇಲೆ ಒಲವಿರುವ ವ್ಯಕ್ತಿ , ಒಂದು ಮಹಾ ಜಾದೂವನ್ನೇ ಸೃಷ್ಟಿಸಿದ್ದ.

ಇಡೀ ಪ್ರಪಂಚ ದಿಗಿಲಾಗಿ ನೋಡುತ್ತಿದ್ದರೆ, ಭಾರತ ಮಾತೆ ಅವರ ಮುಂದೆ ತನ್ನೆಲ್ಲ ಅವಮಾನ, ನಾಚಿಕೆಗಳಿಂದ ಅನಾವರಣಗೊಂಡಿದ್ದಳು – ಕ್ರೂರ, ವ್ಯವಸ್ಥಿತ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ, ಬಡವರ ನೋವಿಗೆ ಕಠಿಣ ಉದಾಸೀನತೆ ತೋರುವುದನ್ನ ಪ್ರದರ್ಶನಕ್ಕಿಟ್ಟಳು.

ಈ ಲಾಕ್ ಡೌನ್ ಒಂದು ರಾಸಾಯನಿಕ ಪ್ರಯೋಗದ ಹಾಗೆ ಕೆಲಸ ಮಾಡಿ, ಎಲ್ಲೋ ಅಡಗಿದ್ದ ಸಂಗತಿಗಳನ್ನೆಲ್ಲ ಬೆಳಗತೊಡಗಿಸಿತು. ಅಂಗಡಿಗಳು, ಹೋಟೆಲ್ಗಳು, ಫ್ಯಾಕ್ಟರಿಗಳು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳೆಲ್ಲ ನಿಂತ ಹಾಗೆ ಶ್ರೀಮಂತರು, ಮಧ್ಯಮ ವರ್ಗದ ಜನ ತಮ್ಮ ತಮ್ಮ ಗೇಟೆಡ್ ಸಮುದಾಯಗಳಲ್ಲಿ ಸೇರಿಕೊಂಡ ಹಾಗೆ, ನಮ್ಮ ಪಟ್ಟಣಗಳು, ಮಹಾ ನಗರಗಳು ತಮ್ಮ ಕೂಲಿ ಕೆಲಸಗಾರ ವರ್ಗವನ್ನು – ತಮ್ಮ ವಲಸೆ ಕಾರ್ಮಿಕರನ್ನು – ಬೇಡದ್ದೆಲ್ಲ ಸೇರಿಕೊಂಡಿತ್ತೇನೋ ಎನ್ನುವ ಹಾಗೆ ಹೊರ ದಬ್ಬಲು ಶುರುಮಾಡಿತು.

ಬಹಳಷ್ಟು ಜನರನ್ನು ಮಾಲೀಕರು, ಆಫೀಸಿನವರು ಹೊರಹಾಕಿದರೆ, ಲಕ್ಷಾಂತರ ಬಡವರು, ಹಸಿದವರು, ಬಾಯಾರಿದವರು, ಯುವಕರು ಮತ್ತು ವೃದ್ದರು, ಗಂಡಸರು, ಹೆಂಗಸರು, ಮಕ್ಕಳು, ಅನಾರೋಗ್ಯದಿಂದಿರುವವರು, ಕುರುಡರು, ಅಂಗವಿಕಲರು, ಬೇರೆಲ್ಲೂ ಹೋಗಲು ಸ್ಥಳವಿಲ್ಲದೆ, ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ, ತಮ್ಮ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೊರಟರು. ಬದೌನ್ , ಆಗ್ರಾ , ಅಝಮ್ಗರ್ಹ್ , ಅಲಿಘಡ್ , ಲಕ್ನೋ , ಗೊರಕ್ಪುರ್ ಕಡೆಗೆ ನೂರಾರು ಕಿಲೋಮೀಟರ್ಗಳ ದೂರ ದಿನಗಟ್ಟಲೆ ನಡೆದು ಸಾಗಿದರು. ಕೆಲವರು ರಸ್ತೆಯಲ್ಲೇ ಸತ್ತರು.

ತಮ್ಮೂರಿಗೆ ಹೋದ ನಂತರ ಈ ಹಸಿವು ಮತ್ತೆ ನಿಧಾನವಾಗಿಯಾದರೂ ಕಾಡುತ್ತದೆ ಎಂದು ಅವರಿಗೆ ತಿಳಿದಿತ್ತು. ಬಹುಶಹ ತಮ್ಮ ಜತೆ ವೈರಸ್ ಕೊಂಡು ಊರಿಗೆ ಹೋಗುತ್ತಿದ್ದೇವೆ ಮತ್ತದು ಅವರ ಕುಟುಂಬಗಳಿಗೂ ಹರಡುತ್ತದೆ ಎಂಬುದೂ ತಿಳಿದಿತ್ತು. ಆದರೆ ಅವರಿಗೆ ಪ್ರೀತಿಯಲ್ಲದಿದ್ದರೂ ತಮಗೆ ಪರಿಚಿತವಾದ ಮುಖಗಳ, ಗೌರವದ, ಘನತೆಯ ಮತ್ತು ಊಟದ ಅವಶ್ಯಕತೆ ತೀವ್ರವಾಗಿತ್ತು.

ಹಾಗೆ ನಡೆದು ಸಾಗುತ್ತಿರುವಾಗ ದಾರಿಯಲ್ಲಿ ಪೊಲೀಸರಿಂದ ಕ್ರೂರವಾಗಿ ದಾಳಿಗೆ ಒಳಗಾದರು ಮತ್ತು ಅವಮಾನಿತರಾದರು. ಯುವಕರನ್ನು ಮಂಡಿ ಮೇಲೆ ಕುಳಿತು ಕಪ್ಪೆಯ ಹಾಗೆ ಕುಪ್ಪಳಿಸುವ ಹಾಗೆ ಮಾಡಿದರು. ಬರೇಲಿ ಪಟ್ಟಣದ ಹೊರಗಡೆ ಒಂದು ಕಡೆ ಗುಂಪುಗೂಡಿಸಿ ರಾಸಾಯನಿಕ ಔಷಧಗಳನ್ನು ಅವರ ಮೇಲೆ ಸಿಂಪಡಿಸಲಾಯಿತು.

ಕೆಲವು ದಿನಗಳ ನಂತರ ಈ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹೋಗಿ ವೈರಸ್ ಹರಡುತ್ತಾರೆ ಎಂದು ನಡೆದು ಸಾಗುತ್ತಿದ್ದವರಿಗೂ ರಾಜ್ಯಗಳ ಗಡಿಗಳನ್ನೂ ಮುಚ್ಚಲಾಯಿತು. ಹೀಗೆ ದಿನಗಟ್ಟಲೆ ರಸ್ತೆಯಲ್ಲಿ ನಡೆಯುತ್ತಿದ್ದ ಜನರನ್ನು ಗಡಿಗಳಲ್ಲಿ ತಡೆದು ನಗರಗಳ ಯಾವ ಶಿಬಿರಗಳನ್ನು ತೊರೆದು ಬಂದಿದ್ದರೋ ಅಲ್ಲಿಗೆ ಕಳುಹಿಸಲಾಯಿತು.

ಇವರಲ್ಲಿದ್ದ ವೃದ್ಧರಿಗೆ ಇದು 1947ರ ದೇಶ ವಿಭಜನೆಯ ನೆನಪುಗಳನ್ನು ಮರಳಿ ತಂದಿತು. ಆದರೆ ಇವತ್ತಿನ ಬಹಿಷ್ಕಾರ ಧರ್ಮದ ಮೇಲಲ್ಲದೆ, ವರ್ಗಗಳ ಮೇಲೆ ಅವಲಂಬಿತವಾಗಿತು. ಹಾಗಿದ್ದರೂ, ಇವರೆಲ್ಲ ಈ ದೇಶದ ಕಡುಬಡವರಾಗಿರಲಿಲ್ಲ. ನಗರಗಳಿಗೆ ಕೆಲಸಕ್ಕೆ ಹೋಗಿ (ಕನಿಷ್ಠ ಇಲ್ಲಿಯವರೆಗೂ) ಹಳ್ಳಿಗಳ ಮನೆಗೆ ಹಿಂತಿರುಗಬಲ್ಲವರಾಗಿದ್ದರು. ಕೆಲಸವಿಲ್ಲದ, ಮನೆಗಳಿಲ್ಲದ, ನಿರ್ಭಾಗ್ಯರು ಎಲ್ಲಿದ್ದರೋ ಅಲ್ಲೇ ಉಳಿದುಕೊಂಡರು. ಇಷ್ಟೆಲ್ಲಾ ನಡೆಯುತ್ತಿದ್ದರೂ ದೇಶದ ಗೃಹಮಂತ್ರಿ ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ದೆಹಲಿಯಲ್ಲಿ ಜನ ನಡೆದು ಊರಿಗೆ ಹೊರಟಾಗ, ನಾನು ಆಗಾಗ ಬರೆಯುವ ಮಾಸಿಕವೊಂದರಿಂದ ಪತ್ರಿಕೆಯ ಪಾಸ್ ತೆಗೆದುಕೊಂಡು ದೆಹಲಿ ಮತ್ತು ಉತ್ತರ ಪ್ರದೇಶಗಳ ಗಡಿಗೆ ಭೇಟಿ ನೀಡಿದೆ.

ಅಲ್ಲಿನ ದೃಶ್ಯಗಳು ಕ್ರಿಸ್ತನ ಶಿಲುಬೆ ಹೊರುವ ದೃಶ್ಯ ಹೋಲುತ್ತಿತ್ತು. ಅಥವಾ ಹಾಗಲ್ಲದೆ ಇರಬಹುದು. ಆ ಸಮಯದಲ್ಲಿ ಇಷ್ಟೊಂದು ಸಂಖ್ಯೆಯ ಜನರಿರಲಿಲ್ಲವೇನೋ. ಜನರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದ ಲಾಕ್ ಡೌನ್ ಅದಕ್ಕೆ ವಿರುದ್ಧವಾದ ಪರಿಣಾಮ ಬೀರಿತ್ತು – ಊಹಿಸಲಾಗದ ಪ್ರಮಾಣದ ದೈಹಿಕ ಸಾಮೀಪ್ಯ ಉಂಟು ಮಾಡಿತ್ತು. ಮುಖ್ಯರಸ್ತೆಗಳೇನೋ ಖಾಲಿಯಿರಬಹುದು ಆದರೆ ಬಡವರು ತಮ್ಮ ಸಣ್ಣ ಸಣ್ಣ ಗಲ್ಲಿಗಳ ಸ್ಲಂಗಳಲ್ಲಿ ಕಿಕ್ಕಿರಿದು ಹೋಗಿದ್ದರು.

ಅಲ್ಲಿ ನಡೆದು ಸಾಗುತ್ತಿದ್ದ ಜನರಲ್ಲಿ ನಾನು ಮಾತನಾಡಿಸಿದವರೆಲ್ಲ ವೈರಸ್ ಬಗ್ಗೆ ಚಿಂತಿತರಾಗಿದ್ದರು. ಆದರೆ ಅದು ಅವರ ಮುಂದಿದ್ದ ನಿರುದ್ಯೋಗ, ಹಸಿವು ಮತ್ತು ಪೊಲೀಸರ ದೌರ್ಜನ್ಯದ ಮುಂದೆ ಗೌಣವಾಗಿ ಕಾಣಿಸುತಿತ್ತು. ಕಳೆದ ತಿಂಗಳಷ್ಟೇ ಕೋಮು ಗಲಭೆಯಿಂದ ತಪ್ಪಿಸಿಕೊಂಡ ಮುಸ್ಲಿಂ ಟೈಲರ್ಗಳನ್ನೂ ಸೇರಿಸಿ, ನಾನು ಅಂದು ಭೇಟಿಯಾದ ಅಷ್ಟೂ ಜನಗಳಲ್ಲಿ ಒಬ್ಬ ವ್ಯಕ್ತಿಯ ಮಾತುಗಳು ನನ್ನನು ಬಹಳ ಕಾಡಿತು. ಅವನು ಒಬ್ಬ ಬಡಗಿ, ರಂಜೀತ್, ನೇಪಾಳ ಗಡಿಯ ಹತ್ತಿರ ಇದ್ದ ಗೋರಕ್ಪುರ್ ವರೆಗೂ ನಡೆದುಕೊಂಡು ಹೋಗಲು ನಿರ್ಧರಿಸಿದ್ದ.

“ಬಹುಶ ಮೋದಿಜಿ ಹೀಗೆ ಮಾಡಲು ನಿರ್ಧರಿಸಿದಾಗ, ಅವರಿಗೆ ನಮ್ಮ ಬಗ್ಗೆ ಯಾರೂ ಹೇಳಲಿಲ್ಲ ಅನ್ನಿಸುತ್ತದೆ. ಬಹುಶ ನಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲವೇನೋ” ಎಂದ.

“ನಾವು” ಅಂದರೆ ಹೆಚ್ಚು ಕಡಿಮೆ ೪೬ ಕೋಟಿ ಜನರು.

_______________________________________________

ಭಾರತದ ರಾಜ್ಯ ಸರ್ಕಾರಗಳು ಈ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಹೃದಯವಂತಿಕೆ ತೋರಿಸಿವೆ. ಕಾರ್ಮಿಕ ಸಂಘಟನೆಗಳು, ನಾಗರಿಕರು ಮತ್ತು ಸಾಕಷ್ಟು ಸಂಘಸಂಸ್ಥೆಗಳು ಆಹಾರ ಮತ್ತು ತುರ್ತು ವಸ್ತುಗಳನ್ನು ಒದಗಿಸುತ್ತಿವೆ. ಕೇಂದ್ರ ಸರ್ಕಾರ ಇವರು ಕೇಳುತ್ತಿರುವ ಪರಿಹಾರ ಒದಗಿಸುವುದಕ್ಕೆ ಬಹಳ ತಡ ಮಾಡುತ್ತಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಲ್ಲಿ ಸ್ವಲ್ಪವೂ ಹಣವಿಲ್ಲವಂತೆ. ಬದಲಾಗಿ ಪ್ರಧಾನ ಮಂತ್ರಿಗಳ ಹೊಸ PM-CARES ನಿಧಿ ಸಂಗ್ರಹಕ್ಕೆ ಹಣದ ಹೊಳೆ ಹರಿದು ಬರುತ್ತಿದೆ. ಸಿದ್ಧವಾದ ಊಟದ ಪೊಟ್ಟಣಗಳ ಮೇಲೆ ಮೋದಿಯವರ ಚಿತ್ರ ಹಾಕಿ ಹಂಚುತ್ತಿದ್ದಾರೆ.

ಇದರ ಜತೆಗೆ ಮೋದಿಯವರು ತಮ್ಮ ನಿದ್ರಾ-ಯೋಗದ ಅನಿಮೇಟೆಡ್ ವಿಡಿಯೋ ಒಂದರಲ್ಲಿ ಅದ್ಭುತವಾದ ಯೋಗಾಸನಗಳನ್ನು ತೋರಿಸಿ, ಜನರ ಮಾನಸಿಕ ಆರೋಗ್ಯಕ್ಕೆ ಸಹಾಯವಾಗಲಿ ಎಂದು ಬಿಡುಗಡೆ ಮಾಡಿದ್ದಾರೆ.

ಈ ಸ್ವ-ಲೋಲುಪತೆ ನಿಜಕ್ಕೂ ಆತಂಕಕಾರಿ. ಬಹುಶ ಆ ಆಸನಗಳಲ್ಲಿ ಒಂದು “ಬೇಡಿಕೆ ಆಸನವಾಗಿರುತ್ತೇನೋ“ – ಕಳೆದ ವರ್ಷ ರಫೇಲ್ ಜೆಟ್ ಗೆ ನೀಡಿದ 780 ಕೋಟಿ ಯೂರೋಗಳನ್ನು ಈ ತುರ್ತು ಪರಿಸ್ಥಿತಿಗಾಗಿ ಮೋದಿ ಫ್ರೆಂಚ್ ಪ್ರಧಾನಿಗಳಿಂದ ಮರಳಿ ಪಡೆದು, ಲಕ್ಷಾಂತರ ಹಸಿದ ಬಡವರ ಸಂಕಷ್ಟಕ್ಕೆ ಬಳಸಬಹುದೇನೋ. ಖಂಡಿತ ಫ್ರೆಂಚ್ ದೇಶದವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಈ ಲಾಕ್ ಡೌನ್ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಸರಂಜಾಮು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ ಮತ್ತು ಅವಶ್ಯಕ ವಸ್ತುಗಳು ಖಾಲಿಯಾಗುತ್ತಿವೆ. ಸಾವಿರಾರು ಟ್ರಕ್ ಚಾಲಕರು ಹೆದ್ದಾರಿಗಳಲ್ಲಿ ಊಟ ತಿಂಡಿಗಳಿಲ್ಲದೆ ಸಿಕ್ಕಿಹಾಕಿಕೊಂಡಿದ್ದಾರೆ. ಬೆಳೆಗಳು ಕಟಾವಿಗೆ ಸಿದ್ಧವಾಗಿ ನಿಧಾನಕ್ಕೆ ಹಾಳಾಗುತ್ತಿವೆ.

ಆರ್ಥಿಕ ಬಿಕ್ಕಟ್ಟು ಈಗಾಗಲೇ ಎದುರಿಗಿದೆ. ರಾಜಕೀಯ ಬಿಕ್ಕಟ್ಟು ಸಾಗಿದೆ. ಮುಖ್ಯವಾಹಿನಿ ಮಾಧ್ಯಮಗಳು ಕೋವಿಡ್ ಪರಿಸ್ಥಿತಿಯನ್ನು ಮುಸ್ಲಿಂ ವಿರೋಧಿ ಪ್ರಚಾರವಾಗಿ ಪರಿವರ್ತಿಸಿ 24/7 ಘಂಟೆ ಸುದ್ದಿ ಬಿತ್ತರಿಸುತ್ತಿವೆ. ತಬ್ಲಿಗಿ ಜಮಾತ್ ಎನ್ನುವ ಸಂಘಟನೆ ದೆಹಲಿಯಲ್ಲಿ ಲಾಕ್ ಡೌನ್ ಗು ಮೊದಲು ಆಯೋಜಿಸಿದ್ದ ಕಾರ್ಯಕ್ರಮವೊಂದು”ಸೂಪರ್ –ಹರಡುಗಾರ” ಆಗಿ ಘೋಷಿತವಾಗಿದೆ. ಮುಸ್ಲಿಮರು ಸೃಷ್ಟಿ ಮಾಡಿದ ವೈರಸ್ಇ ದು, ಪ್ರಜ್ಞಾಪೂರ್ವಕವಾಗಿ ಹರಡಿ ಜಿಹಾದ್ ಹೋರಾಟ ಮಾಡುತ್ತಿದ್ದಾರೆ ಎನ್ನುವಂತಹ ಒಟ್ಟಾರೆ ಧ್ವನಿ ಕಾಣಿಸಿಕೊಂಡಿದೆ.

ಕೋವಿಡ್ ಬಿಕ್ಕಟ್ಟು ಇನ್ನೂ ಉಲ್ಬಣಗೊಳ್ಳಬಹುದು. ಅಥವಾ ಇಲ್ಲ. ನಮಗೆ ತಿಳಿದಿಲ್ಲ. ಅಕಸ್ಮಾತ್ ಹಾಗಾದರೂ, ಈಗಾಗಲೇ ಸಂಪೂರ್ಣ ಸಿದ್ಧವಿರುವ ಎಲ್ಲ ಧರ್ಮ, ಜಾತಿ ಮತ್ತು ವರ್ಗ ಪೂರ್ವಗ್ರಹಗಳ ಜತೆಗೆ ಎದುರುಗೊಳ್ಳಲು ವೇದಿಕೆ ಸಜ್ಜಾಗಿದೆ.

ಇವತ್ತಿಗೆ (ಏಪ್ರಿಲ್ 2) ಭಾರತದಲ್ಲಿ ಒಟ್ಟು 2000 ಪ್ರಕರಣಗಳು ವರದಿಯಾಗಿದ್ದು 58 ಜನ ಮೃತರಾಗಿದ್ದಾರೆ. ಒಟ್ಟು ಪರೀಕ್ಷೆಗಳ ಸಂಖ್ಯೆ ಗಮನಿಸಿದರೆ ಈ ಸಂಖ್ಯೆಗಳು ಖಂಡಿತಾ ನಂಬಲರ್ಹವಲ್ಲ. ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ತಜ್ಞರು ನೀಡಿದ್ದಾರೆ . ಕೆಲವರು ಲಕ್ಷಗಟ್ಟಲೆ ಪ್ರಕರಣಗಳನ್ನು ಅಂದಾಜಿಸಿದ್ದಾರೆ. ಇನ್ನೂ ಕೆಲವರು ಅಷ್ಟು ಪ್ರಕರಣಗಳಾಗುವುದಿಲ್ಲ ಎನ್ನುತ್ತಿದ್ದಾರೆ. ಬಹುಶಹ ಈ ಬಿಕ್ಕಟ್ಟು ತುತ್ತ ತುದಿ ತಲುಪಿದಾಗಲೂ ನಮಗೆ ವಾಸ್ತವದ ಚಿತ್ರಣ ದೊರೆಯದೆ ಹೋಗಬಹುದು. ನಮಗೆ ಇವತ್ತಿಗೆ ತಿಳಿದಿರುವುದು ಆಸ್ಪತ್ರೆಗಳು ಈ ಹೋರಾಟಕ್ಕೆ ಇನ್ನೂ ಸಿದ್ಧವಾಗಿಲ್ಲ.

ಪ್ರತಿವರ್ಷ 10 ಲಕ್ಷ ಮಕ್ಕಳು ಬೇಧಿಯಿಂದ ಸಾಯುವುದನ್ನು ತಡೆಯಲಾಗದ, ಲಕ್ಷಾಂತರ ಟಿಬಿ ರೋಗಿಗಳು (ಪ್ರಪಂಚದ ನಾಲ್ಕನೇ ಒಂದು ಭಾಗದಷ್ಟು ಪ್ರಕರಣಗಳು ), ಅಗಾಧ ಪ್ರಮಾಣದ ರಕ್ತಹೀನತೆ ಮತ್ತು ಪೌಷ್ಟಿಕಾಂಶ ಕೊರತೆಯಿರುವ ರೋಗಗಳಿಗೆ

ಸುಲಭವಾಗಿ ತುತ್ತಾಗುವ ಜನ ಸಮುದಾಯಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇಲ್ಲದ ಭಾರತೀಯ ಸಾರ್ವಜನಿಕ ಆಸ್ಪತ್ರೆಗಳು, ಕ್ಲಿನಿಕ್ ಗಳು ಇಂದು ಅಮೇರಿಕಾ ಅಥವಾ ಯೂರೋಪಿನ ದೇಶಗಳು ಎದುರಿಸುತ್ತಿರುವ ಬಗೆಯ ಬಿಕ್ಕಟ್ಟನ್ನಂತೂ ಹೇಗೆ ಎದುರಿಸಲು ಸಾಧ್ಯ ಎಂದು ಯೋಚಿಸಲೂ ಸಾಧ್ಯವಿಲ್ಲ.

ಎಲ್ಲ ಆರೋಗ್ಯ ಸಂಸ್ಥೆಗಳನ್ನು ಈ ವೈರಸ್ ನ ಪರಿಸ್ಥಿತಿ ನಿರ್ವಹಣೆಗೆ ಬದಲಾಯಿಸಲಾಗಿದೆ. ದೇಹದ ಸುಪ್ರಸಿದ್ಧ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (AIIMS) ಮುಚ್ಚಲಾಗಿದೆ. ಆಸ್ಪತ್ರೆ ಸುತ್ತುವರೆದ ರಸ್ತೆಗಳಲ್ಲಿ ಕಾದು ಕುಳಿತಿರುತ್ತಿದ್ದ ನೂರಾರು ಬಡ ನಿರಾಶ್ರಿತ ಕ್ಯಾನ್ಸರ್ ರೋಗಿಗಳನ್ನು ದನಗಳಂತೆ ಹೊಡೆದಟ್ಟಲಾಗಿದೆ.

ಜನ ರೋಗಗಳಿಂದ ಮನೆಯಲ್ಲೇ ಸಾಯುತ್ತಾರೆ ಮತ್ತದು ನಮಗೆ ಎಂದಿಗೂ ತಿಳಿಯದೇ ಹೋಗಬಹುದು. ಅಂಕಿ ಅಂಶಗಳಲ್ಲೂ ಸೇರದೆ ಹೋಗಬಹುದು. ಈ ವೈರಸ್ ಗೆ ಚಳಿಯಿರುವ ಹವಾಮಾನ ಮಾತ್ರ ಸೂಕ್ತ ಎನ್ನುವ ಅಂಶ ಸತ್ಯವಾಗಲಿ ಎಂದಷ್ಟೇ ಆಶಿಸಬಹುದು. ಹಿಂದೆಂದೂ ಜನ ಸುಡು ಬೇಸಗೆಗೆ ಇಷ್ಟು ಕಾತರದಿಂದ ಎದುರು ನೋಡುತ್ತಿದ್ದ ಸಮಯ ಇರಲಿಲ್ಲ ಎನಿಸುತ್ತದೆ.

ನಮಗೆ ನಿಜಕ್ಕೂ ಎದುರಾಗಿರುವ ಪರಿಸ್ಥಿತಿಯೇನು? ಇದೊಂದು ವೈರಸ್, ನಿಜ. ಅದೊಂದನ್ನೇ ಪರಿಗಣಿಸಿದರೆ ಅದರಲ್ಲಿ ಯಾವುದೇ ನೈತಿಕ ಪ್ರಜ್ಞೆ ಕಾಣಿಸುವುದಿಲ್ಲ. ಆದರೆ ಇದು ನಿಜಕ್ಕೂ ವೈರಸ್ ಗಿಂತ ದೊಡ್ಡ ಸಂಗತಿ. ನಮ್ಮ ಪ್ರಜ್ಞೆ ಜಾಗೃತಗೊಳ್ಳಲು ದೇವರು ನಮಗೆ ತಂದೊಡ್ಡಿರುವ ಪರೀಕ್ಷೆ ಇದು ಎಂದು ಕೆಲವರು ನಂಬಿದ್ದಾರೆ. ಇನ್ನು ಕೆಲವರು ವಿಶ್ವವನ್ನು ಆಕ್ರಮಿಸಿಕೊಳ್ಳುವುದಕ್ಕೆ ಚೀನಾ ದೇಶ ಮಾಡಿರುವ ಸಂಚು ಇದೆಂದು ನಂಬಿದ್ದಾರೆ.

ಏನಾದರಾಗಲಿ, ಕೊರೊನ ವೈರಸ್ ಇಡೀ ಪ್ರಪಂಚವನ್ನು ಮಂಡಿಯೂರಿ ಕುಳಿತುಕೊಳ್ಳುವ ಹಾಗೆ ಮಾಡಿ, ಎಲ್ಲವನ್ನೂ ದಿಢೀರನೆ ಸ್ತಬ್ಧಗೊಳಿಸಿದೆ. ನಮ್ಮ ಮನಸ್ಸುಗಳು ಹಿಂದಕ್ಕೆ ಮುಂದಕ್ಕೆ ಓಲಾಡುತ್ತಾ, “ಸಹಜತೆಗೆ” ಮರಳಲು ಪ್ರಯತ್ನಿಸುತ್ತಾ, ಈಗ ಸೃಷ್ಟಿಯಾಗಿರುವ ಕಂದಕವನ್ನು ಒಪ್ಪಿಕೊಳ್ಳಲಾಗದೆ, ನಮ್ಮ ಭವಿಷ್ಯವನ್ನು ಭೂತದ ಜತೆ ಸೇರಿಸಿ ಹೊಲೆಯಲು ಪ್ರಯತ್ನಿಸುತ್ತಿದೆ. ಆ ಕಂದಕ ಇರುವುದಂತೂ ವಾಸ್ತವ. ಈ ಮಹಾ ಭ್ರಮನಿರಸನ ವಾತಾವರಣದಲ್ಲಿ, ನಮಗೆ ನಾವೇ ಸೃಷ್ಟಿಸಿಕೊಂಡ ಈ ಪ್ರಪಂಚವನ್ನೇ ಮುಳುಗಿಸುವ ಯಾಂತ್ರಿಕ ಬದುಕಿನ ಬಗ್ಗೆ ಯೋಚಿಸಲು ಕಾಲಾವಕಾಶ ಕೊಟ್ಟಿದೆ. ಸಹಜತೆಗೆ ಮರಳುವುದಕ್ಕಿಂತ ಕೆಟ್ಟದು ಇನ್ನೇನು ಇರಲಾರದೇನೋ.

ಚಾರಿತ್ರಿಕವಾಗಿ, ಸಾಂಕ್ರಾಮಿಕಗಳು ಮನುಷ್ಯ ತನ್ನ ಭೂತದ ಜತೆ ನಂಟನ್ನು ಕಳಚಿಕೊಂಡು ಹೊಸ ಪ್ರಪಂಚದ ಬಗ್ಗೆ ಯೋಚಿಸುವ ಹಾಗೆ ಮಾಡಿದೆ. ಇದೂ ಸಹ ಅದಕ್ಕಿಂತ ಭಿನ್ನವೇನಲ್ಲ. ಇದೊಂದು ದ್ವಾರ, ನಮ್ಮ ಬಳಿ ಇರುವ ಹಾಗು ಮುಂದೆ ಬರಲಿರುವ ಜಗತ್ತಿನ ಮಧ್ಯೆ ಇರುವ ಹೆಬ್ಬಾಗಿಲು.

ನಮ್ಮ ದ್ವೇಷ ಮತ್ತು ಪೂರ್ವಗ್ರಹಗಳ, ನಮ್ಮ ಅವ್ಯವಹಾರಗಳ, ನಮ್ಮ ಸತ್ತ ವಿಚಾರಗಳ, ಸತ್ತ ನದಿಗಳ ಮತ್ತು ಹೊಗೆತುಂಬಿದ ಆಕಾಶದ ಈ ಕೊಳೆತ ಮೃತದೇಹಗಳನ್ನು ನಮ್ಮ ಹಿಂದೆ ಎಳೆದುಕೊಂಡು ನಾವು ಈ ಹೆಬ್ಬಾಗಿಲ ಮೂಲಕ ಸಾಗುವುದನ್ನ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಸಾಕಷ್ಟು ಹಗುರವಾಗಿ, ಹೆಚ್ಚಿನ ಸಾಮಾನುಗಳಿಲ್ಲದೆ, ಹೊಸ ಕಲ್ಪನೆಯ ಪ್ರಪಂಚಕ್ಕೆ ಸಿದ್ಧರಾಗಿ ಅದಕ್ಕೆ ಹೋರಾಡಬಹುದು.

– ಅರುಂಧತಿ ರಾಯ್, ಬೂಕರ್ ಪ್ರಶಸ್ತಿ ವಿಜೇತೆ. ರಾಯ್ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು.
ಗಾಡ್ ಆಫ್ ಸ್ಮಾಲ್ ಥಿಂಗ್ಸ್, ದ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ಸ್ ಅವರ ಕಾದಂಬರಿಗಳು.

ಕನ್ನಡಕ್ಕೆ :ಮಂಜುನಾಥ್ ಚಾರ್ವಾಕ, ಸಣ್ಣ ಕಥೆಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಎಂಜಿನಿಯರ್. ವಿಶ್ವದ
ಒಳ್ಳೆಯ ಕಥೆಗಳನ್ನು, ಬರಹಗಳನ್ನು ಕನ್ನಡಕ್ಕೆ ತರುವ ತವಕ ಇರುವ ಮಂಜುನಾಥ್ ಫೋಟೋಗ್ರಾಫರ್ ಕೂಡ.
(ಮೂಲ) ಎಫ್ ಟಿ. ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...