Homeಅಂಕಣಗಳುಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ...!

ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ…!

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

- Advertisement -
- Advertisement -

ಗುಲಾಬಿ ಅಂತ ನಾವು ಯಾವುದನ್ನು ಕರೀತೀವೋ,

ಅದರ ಹೆಸರು ಏನಿದ್ದರೇನು ಸುಗಂಧ ಅಷ್ಟೇ ಸಿಹಿಯಲ್ಲವೇ ?

ಅಂತ ಕವಿಯೊಬ್ಬ ಸುಮಾರು 400 ವರ್ಷ ಹಿಂದ ಒದರಿ ಹೋದ.

ಅವನ ಹೆಸರು ವಿಲಿಯಮ್ ಷೇಕ್ಸ್‌ಪಿಯರ್. ಅವ ಇಂಗ್ಲಂಡದೊಳಗ ನಾಟಕ, ಹಾಡು ಬರಕೊಂಡು ಇದ್ದಾಗ ನಮ್ಮಲ್ಲೇ ಮೊಹಮ್ಮದ್ ಜಲಾಲಉದ್ದೀನ್ ಅಕ್ಬರ್ ಅವರು ರಾಜ್ಯ ಆಳತಾ ಇದ್ದರು.

ನಮ್ಮಲ್ಲೆ ಬಹುಶಃ ಎಲ್ಲರಿಗೂ ಷೇಕ್ಸ್‌ಪಿಯರ್ ಅವರ ಹೆಸರು ಗೊತ್ತು. ಆದರ ಅಕ್ಬರ್ ಅನ್ನೋದು ಅವರ ಬಿರುದು, ಅವನ ಹೆಸರು ಅಲ್ಲ ಅಂತ ಗೊತ್ತಿಲ್ಲ.

ಅವ ಹೋಗಲಿ ಬಿಡ್ರಿ, ಮಹಾಭಾರತದಾಗ ಭೀಷ್ಮ ಅನ್ನೋದು ಗಂಗಾಪುತ್ರನ ಬಿರುದು, ಹೆಸರು ಅಲ್ಲ ಅನ್ನೋದು ಗೊತ್ತಿರೋದಿಲ್ಲ. ಹಂಗ ನೋಡಿದರ ಮಹಾಭಾರತದಾಗ ಬಿರುದುಗಳೇ ಜಾಸ್ತಿ, ಹೆಸರು ಕಮ್ಮಿ. ಇರಲಿ ಬಿಡ್ರಿ.

ಈಗ ನಮ್ಮ ಮುಂದೆ ಬಂದಿರೋ ವಿಷಯ ಅಂದ್ರ ವಿಶ್ವ ಸಂಸ್ಥೆಯವರು ನಮ್ಮ ದೇಶದ ಕೆಲವು ರಾಜ್ಯಗಳ ಕೋವಿಡ್ ನಿರ್ವಹಣೆಯನ್ನು ಹೊಗಳಿದ ಸುದ್ದಿ.

ಅಲ್ಲಿನ ತಜ್ಞರು ಮುಂಬೈ ಶಹರದ ಧಾರಾವಿ ಝೋಪಡ ಪಟ್ಟಿಯೊಳಗ ಹೆಂಗ ಈ ರೋಗ ನಿಯಂತ್ರಣಕ್ಕ ಬಂತು ಅನ್ನೋದನ್ನು ನೋಡಿ, ಅಲ್ಲೇ ಸರಿ ಆಗಬಹುದು ಅಂದ್ರ ಎಲ್ಲಾದರೂ ಆಗಬಹುದು ಅಂತ ಹೇಳಿದರು. ಮತ್ತು ಕೇರಳದ ರೋಗಿ ಪತ್ತೆ ವಿಧಾನ ಹಾಗೂ ಆಸ್ಪತ್ರೆ ನಿರ್ವಹಣೆ ವಿಷಯದ ಬಗ್ಗೆ ಹೊಗಳಿದರು. ಅವರು ಇನ್ನೊಂದು ವಿಷಯ ಪ್ರಸ್ತಾಪ ಮಾಡಿದರು.

ಅದು ಎನಪ ಅಂದ್ರ ಕೇರಳದ ಕುಟುಂಬಶ್ರೀ ವ್ಯವಸ್ಥೆ ಕೆಳಗ ನಡೀತಾ ಇರೋ ಕಮ್ಮಿ ಖರ್ಚಿನ ಸರ್ಕಾರಿ ಕ್ಯಾಂಟೀನ್‌ಗಳು ಹೆಂಗ ಬಡವರ ಹಸಿವನ್ನು ಕಮ್ಮಿ ಮಾಡಿದರು ಅನ್ನೋದನ್ನ ಎತ್ತಿ ತೋರಿಸಿದರು.

ಆ ರಾಜ್ಯದ 510 ನಗರ ಹಾಗೂ ಹಳ್ಳಿಗಳಲ್ಲಿ ರಾಜ್ಯ ಸರಕಾರದಿಂದ ಬಡವರಿಗೆ ಅಂತ ಹೇಳಿ ‘ಜನಕೀಯ ಕುಟುಂಬಶ್ರೀ’ ಕ್ಯಾಂಟೀನು ಶುರು ಅಗಿದಾವ. ಇವನ್ನ ಮಹಿಳಾ ಸಂಘಗಳು ನಡಸತಾವ. ಅವರು ಇಪ್ಪತ್ತು ರೂಪಾಯಿಗೆ ಒಂದು ಊಟ ಕೊಡತಾರ. ಅದರಾಗ ಅರ್ಧ ಖರ್ಚು ರಾಜ್ಯ ಸರಕಾರ ವಹಿಸಿಕೊಳ್ಳೋದಕ್ಕ ಅವರಿಗೆ ಒಂದು ಊಟದ ಮ್ಯಾಲೆ ಹತ್ತು ರೂಪಾಯಿ ಸಿಗತದ.

ಇಲ್ಲಿ ತನಕ ಆ ಮಹಿಳಾ ಖಾನಾವಳಿಗಳು ಸುಮಾರು ಹತ್ತು ಲಕ್ಷ ತಾಟು ಊಟ ಮಾರಾಟ ಮಾಡಿದಾವ. ಇವುಗಳ ಯಶಸ್ಸು ನೋಡಿ ಇನ್ನೂ ಹೆಚ್ಚು ಕ್ಯಾಂಟೀನ್ ಶುರು ಮಾಡಬೇಕು ಅಂತ ಸರಕಾರ ನಿರ್ಧಾರ ಮಾಡೇತಿ.

ಎಲ್ಲಕ್ಕಿಂತ ಮುಖ್ಯ ಅಂದ್ರ ಇವು ಲಾಕಡೌನ್‌ದಾಗೂ ಕೆಲಸ ಮಾಡಿದಾವು.

ಅಲ್ಲಿ ಸಾಧ್ಯ ಆಗಿದ್ದು ನಮ್ಮಲ್ಲೆ ಯಾಕ ಸಾಧ್ಯ ಆಗಿಲ್ಲ? ನಮ್ಮಲ್ಲೆ ಯಾಕ ಬಡವರು ರಸ್ತೆದಾಗ ಸತ್ತರು? ಯಾಕ ಅವರಿಗೆ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ? ಯಾಕ ನಮ್ಮ ಸರ್ಕಾರಿ ಖಾನಾವಳಿಗಳು ಲಾಕಡೌನ್‌ದಾಗ ಬಂದ ಆಗಿದ್ದವು?

ಇದರ ಹಿಂದ ಏನು ದೊಡ್ಡ ರಹಸ್ಯ ಇಲ್ಲ. ಇದರ ಹಿಂದ ಒಂದು ಮಜಾ ಕತಿ ಐತಿ. ಅದನ್ನ ಹೇಳಬೇಕು ಅಂದ್ರ ಷೇಕ್ಸ್‌ಪಿಯರ್‌ನ ನೆನಪು ಮಾಡಿಕೋಬೇಕು. ಅವನ ರೋಮಿಯೋ ಜೂಲಿಯಟ್ ನಾಟಕದ ಜಗತ್ ವಿಖ್ಯಾತ ಸಾಲು ‘ಹೆಸರಿನಲ್ಲಿ ಏನಿದೆ’ ಅನ್ನೋದನ್ನ ನೆನಪು ಮಾಡಿಕೋಬೇಕು.

ಕರ್ನಾಟಕದಾಗ ಸರ್ಕಾರಿ ಖಾನಾವಳಿಗಳಿಗೆ ಏನು ಅಂತ ಕರೀತಾರ? ಇಂದಿರಾ ಕ್ಯಾಂಟೀನು ಅಂತಾರ. ಆ ಹೆಸರನ ಅವಕ್ಕ ಕಂಟಕ ಆಗೇದ. ಹೆಂಗ ಅಂತೀರಿ? ಇಲ್ಲಿ ಕೇಳರಿ.

ಲಾಕಡೌನ್ ಆಗಿದ್ದಾಗ ಒಂದು ದಿವಸ ಯಾರೋ ಬಡವರು ಬಂದು ಅಲ್ಲಿ ಊಟ ಮಾಡಿದರು ಅಂದುಕೋರಿ. ಅವರು ಹೊರಗ ಹೋಗಿ ಏನು ಹೇಳತಾರ?

ನಾವು ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂತ ಹೇಳತಾರ. ಅದು ಈಗಿನ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ. ನಾವು ಊಟ ಹಾಕಿದೀವಿ, ಅದರ ಕಾಂಗ್ರೆಸ್ ನಾಯಕಿಗೆ ಹೆಸರು ಬಂತು ಅಂತ ಅವರು ಕಿರಿಕಿರಿ ಮಾಡಿಕೋತಾರ.

ಇದನ್ನು ತಪ್ಪಿಸೋದು ಹೆಂಗ ಅಂದ್ರ ಬಡವರು ಹಸಿವೆಯಿಂದ ಇರೋದು ಅವರ ಪ್ರಾಬ್ಲಂ ಅಂತ ಸರಕಾರ ಬ್ಯಾರೆ ಕಡೆ ನೋಡೋದು. ಭಾಷಣ, ಹೆಸರು ಬದಲಾವಣೆ, ರಸ್ತೆ, ಸೇತುವೆ, ಗಟಾರು, ಕೋರೋನಾ ಔಷಧಿ ಗುತ್ತಿಗೆ, ಕೋರೋನಾ ಕಾಳಜಿ ಕೇಂದ್ರದ ಬಾಡಿಗೆ ಮುಂತಾದ ಅತಿ ಮುಖ್ಯ ಸಂಗತಿಗಳ ಬಗ್ಗೆ ಸಚಿವರು ತಲೆ ಕೆಡಿಸಿಕೊಳ್ಳೋದು. ಆ ಕ್ಲಿಷ್ಟ ಸಮಸ್ಯೆಗಳಿಗೆ ಈ ಸರಳ ಪರಿಹಾರಗಳು.

ಆದರ ಆಳುವ ಪಕ್ಷಕ್ಕೆ ಹೆಸರು ಬದಲಾವಣೆ ಮಾಡೋದು ಏನು ಅಷ್ಟು ಕಷ್ಟದ ಕೆಲಸ ಅಲ್ಲ. ಪಂಥ ಪ್ರಧಾನ ಸೇವಕರು ಬಂದ ಮ್ಯಾಲೆ ಎರಡು ನೂರಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಾವಣೆ ಮಾಡಿದಾರು. ಕಾಂಗ್ರೆಸ್ ನವರು ಶುರು ಮಾಡಿದ ಯೋಜನೆ ಹೋಗಲಿ, ತಮ್ಮದೇ ಪಕ್ಷದ ಹಿರಿಯರು ಹರಿಬಿಟ್ಟ ಸ್ವದೇಶಿ ಅನ್ನೋ ವಿಚಾರದ ಹೆಸರು ಬದಲು ಮಾಡಿ ಆತ್ಮನಿರ್ಭರ ಅಂತ ಮಾಡಿದರು.

ಆದರ ಕರ್ನಾಟಕದೊಳಗ ಅದು ಸಾಧ್ಯ ಆಗಲಿಲ್ಲ. ಯಾಕೋ ಗೊತ್ತಿಲ್ಲ. ಅದಕ್ಕ ಆಡಳಿತಾತ್ಮಕ ಕಾರಣಗಳಿಗಿಂತ ರಾಜಕೀಯ ಕಾರಣನ ಹೆಚ್ಚು ಇರಬಹುದು.

ಅದು ಹೋಗಲಿ ಬಿಡ್ರಿ.

ಕರ್ನಾಟಕದ ಖಾನಾವಳಿಗೆ ಇಂದಿರಮ್ಮನ ಹೆಸರು ಹೆಂಗ ಬಂತು ಅಂತ ಗೊತ್ತೇನು ನಿಮಗ?

ಅದು ಗೊತ್ತಾಗಬೇಕು ಅಂದ್ರ ನಿಮಗ ಕೊಲ್ಲು ಹುಡುಗಿ ಒಮ್ಮೆ ನನ್ನ ಅನ್ನೋ ಹಾಡು ಗೊತ್ತಿರಬೇಕು. ಅದು ಮುಂಗಾರು ಮಳೆ ಅನ್ನೋ ಪಿಚ್ಚರುದಾಗಿನದು. ಅದರ ನಿರ್ದೇಶಕ ಯಾರು, ಅದಕ್ಕ ರೊಕ್ಕ ಕೊಟ್ಟವರು ಯಾರು ಅಂತ ನಿಮಗ ಗೊತ್ತಿರಬೇಕು. ಹಂಗ ಅದಕ್ಕ ರೊಕ್ಕ ಹೊಂದಿಸಿದವರು ಒಬ್ಬರು ರಾಜಕೀಯದಾಗ ಹೋಗೋಣು ಅಂತ ನಿರ್ಧಾರ ಮಾಡಿದರು.

ಅವರು ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಸೇರಿಕೊಂಡರು. ಅಷ್ಟರೊಳಗ ರಾಜ್ಯ ಸರಕಾರ ಖಾನಾವಳಿ ಆರಂಭ ಮಾಡಬೇಕು, ಅವಕ್ಕ ನಮ್ಮ ಕ್ಯಾಂಟೀನ್ ಅಂತ ಹೆಸರು ಇಡಬೇಕು ಅಂತ ನಿರ್ಧಾರ ಮಾಡಿತ್ತು.

ನಮ್ಮ ಸಿನಿಮಾ ಸ್ಟಾರ್ ಅವರು ಕಾಂಗ್ರೆಸ್‌ನೊಳಗ ಫಳ ಫಳ ಹೊಳೀಬೇಕು ಅಂತ ಹೇಳಿ ಒಂದು ಸಲಹೆ ಕೊಟ್ಟರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೊಳಗ ಇದಕ್ಕ ನಮ್ಮ ಕ್ಯಾಂಟೀನ್ ಅನ್ನೋದು ಬ್ಯಾಡ, ಇಂದಿರಾ ಕ್ಯಾಂಟೀನ್ ಅನ್ನೋಣು ಅಂತ ಅಂದರು. ಇಂತಹ ಬೀಜ ಮಂತ್ರ ಪ್ರಯೋಗ ಆದ ಮೇಲೆ ಅದನ್ನ ವಿರೋಧ ಮಾಡೋ ಗಣ ಮಗ ಕಾಂಗ್ರೆಸ್ ದೊಳಗ ಯಾರ ಅದಾರು? ಎಲ್ಲರೂ ಸುಮ್ಮನೇ ಕೂತರು. ಜೈಕಾರ ಹಾಕಿದರು.

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

ಬರ ಬರ್ತಾ ಅವನ್ನ ಮಹಿಳಾ ಸಂಘಗಳಿಗೆ ವಹಿಸಿ ಕೊಡಬೇಕು ಅನ್ನೋ ವಿಚಾರ ಹೋತು. ಅವು ಖಾಸಗಿ ಗುತ್ತಿಗೆದಾರರ ಕೈಯಾಗ ಸಿಕ್ಕು ನಮ್ಮ ಕ್ಯಾಂಟೀನು ಆಗದೇ ಕಾಂಟ್ರಾಕ್ಟರ ಕ್ಯಾಂಟೀನು ಆದವು.

ಇನ್ನು ಆ ಐತಿಹಾಸಿಕ ಐಡಿಯಾ ಕೊಟ್ಟ ಪುಣ್ಯಾತ್ಮ ಇಂದಿರಾ ಅವರ ಪಕ್ಷದೊಳಗ ಬಹಳ ದಿವಸ ಉಳೀಲಿಲ್ಲ. ಮುಂಗಾರು ಮಾರುತ ಇತ್ತಲಾಗ ಬೀಸಲಿಕ್ಕೆ ಹತ್ತಿದ್ದು ನೋಡಿದ ಅವರು ಈಗ ಕಮಲ ಪಕ್ಷ ದೊಳಗ ಅದಾರು.

ಯಕ್ಷಗಾನ ಭಾಗವತರು ಪ್ರತಿ ಸರೆ “ಬಲಿರೆ ಪರಾಕ್ರಮ ಕಂಠೀರವ” ಅಂತ ಹೇಳಿದಾಗ ಅವರು ಹೊಸ ಪಾತ್ರದ ಪರಿಚಯ ಮಾಡತಿರತಾರ. ಒಮ್ಮೊಮ್ಮೆ ಹಳೇ ಪಾತ್ರನ ಹೊಸ ಹೆಸರಿನಿಂದ ಬರತಾವೂ. ಯಾವಾಗ ಭಾಗ್ಯವಾತರು ನಕ್ಕೋತ ಹೊಸಬರ ಪರಿಚಯ ಮಾಡತಾರ.

ಆ ವಿಲಿಯಮ್ ಷೇಕ್ಸ್‌ಪಿಯರ್‌ಗೆ ಏನು ಗೊತ್ತು – ಹೆಸರಿನ ಗಮ್ಮತ್ತು? ನಮ್ಮಲ್ಲೇ ಗುಲಾಬಿ ಹೂವಿಗೆ ಕಮಲ ಅಂತ ಹೆಸರು ಇಟ್ಟರ ಅದು ಸೂಸೋ ಗಂಧನ ಬೇರೆ!

ಅಲ್ಲವೇ ಮನೋಲ್ಲಾಸಿನಿ?


ಇದನ್ನು ಓದಿ: ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಿಜೆಪಿ ಟಿಕೆಟ್ ಆಮಿಷ ನೀಡಿ ರಾಜೀನಾಮೆ ಕೊಡಿಸಿ ವಂಚಿಸಿದ್ರು’: ಮಣಿಪುರ ಹಿಂಸಾಚಾರದ ತನಿಖೆ ನಡೆಸುತ್ತಿದ್ದ...

0
ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವ ವಹಿಸಲು ಸುಪ್ರೀಂ ನಿರ್ದೇಶನದ ಕೆಲವೇ ದಿನಗಳಲ್ಲಿ ಅಸ್ಸಾಂ-ಮೇಘಾಲಯ ಕೇಡರ್‌ನ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ...