Homeಅಂಕಣಗಳುಸ್ವತಂತ್ರ ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿ

ಸ್ವತಂತ್ರ ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿ

- Advertisement -
- Advertisement -

ಬಿಳಿಯರದೋ ಕರಿಯರದೋ, ಸಾಮ್ರಾಜ್ಯವಾವಗಂ ಸುಲಿಗೆ… “
“ನಾನು ರಸ್ತೆಯಲ್ಲಿ, ಕಾಲು ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರೆ ಎರಡೂ ಕಡೆಗಳಲ್ಲಿ ಮರ ಗಿಡ ಗುಡ್ಡಗಳ ಮೇಲೆಲ್ಲಾ ಕೆಂಬಾವುಟಗಳು ಪಟಪಟಗುಟ್ಟುತ್ತಿದ್ದವು. ಈ ವಿಶಾಲ ಪ್ರದೇಶ ಕಮ್ಯೂನಿಸ್ಟರ ಭದ್ರ ನೆಲೆಯಾಗಿಬಿಟ್ಟಿತ್ತು. ಹಳ್ಳಿ ಹಳ್ಳಿಗಳ ಪ್ರತಿಯೊಬ್ಬನೂ ಎನ್ನುವಂತೆ ಕಮ್ಯೂನಿಸ್ಟರಾಗಿಬಿಟ್ಟಿದ್ದರು. ನಿಜಾಮನ ಸೈನ್ಯವನ್ನು , ನಂತರ ಭಾರತದ ಸೈನ್ಯವನ್ನು ಎದುರಿಸಿ ದಿಟ್ಟವಾಗಿ ಸೆಣೆಸಿದ್ದರು. ಮಹಿಳೆಯರೂ ಸಶಸ್ತ್ರ ಹೋರಾಟದಲ್ಲಿ ಹಿಂದೆ ಬಿದ್ದಿರಲಿಲ್ಲ…. ರೈತ ಹೋರಾಟಗಳು ಭಾರತದ ಹಲವು ಭಾಗಗಳಲ್ಲಿ ನಡೆದಿದ್ದರೂ ಈ ಹೋರಾಟ ಅವುಗಳನ್ನೆಲ್ಲಾ ಮೀರಿಸಿತ್ತು.”
ಇದು ಭಾರತಕ್ಕೆ ಅಮೆರಿಕದ ಮೊದಲ ರಾಯಭಾರಿಯಾಗಿ 1951ರಲ್ಲಿ ನೇಮಕಗೊಂಡ ಚೆಸ್ಟರ್ ಬೌಲ್ಸ್ ತೆಲಂಗಾಣ ಪ್ರದೇಶಕ್ಕೆ ಭೇಟಿ ನೀಡಿದಾಗ ಕಂಡುಕೊಂಡ ಸತ್ಯ. ಮೂರು ಜಿಲ್ಲೆಗಳ ಮೂರು ಸಾವಿರಕ್ಕೂ ಹೆಚ್ಚು ಹಳ್ಳಿಗಳ ಮೇಲೆ ರೈತ ಸೇನೆ ತನ್ನ ಪ್ರಭುತ್ವ ಸ್ಥಾಪಿಸಿತ್ತು. ಈ ಪ್ರದೇಶದ ಸಾವಿರಾರು ಎಕರೆಗಳ ಒಡೆಯರಾದ ಭೂಮಾಲಕರ ಗೂಂಡಾ ಪಡೆಗಳು ಇವರನ್ನು ಎದುರಿಸಲಾಗದೆ ನಗರಗಳಿಗೆ ಫೇರಿ ಕಿತ್ತಿದ್ದರು. ಅವರ ಭೂಮಿಯನ್ನು ವಶಪಡಿಸಿಕೊಂಡ ರೈತ ಸಂಘ ಅದನ್ನು ಉಳುಮೆ ಮಾಡುತ್ತಿದ್ದ ಗೇಣಿದಾರ ಮತ್ತು ಜೀತದಾಳುಗಳಿಗೆ ಹಂಚಿ ಬಿಟ್ಟಿದ್ದರು. ಗ್ರಾಮಗಳಲ್ಲಿ ತಮ್ಮದೇ ಆಡಳಿತ ವ್ಯವಸ್ಥೆ ಮಾಡಿಕೊಂಡ ರೈತ ಮತ್ತು ಕೂಲಿಕಾರರು ಚುನಾಯಿತ ಗ್ರಾಮ ರಾಜ್ಯವನ್ನು ಸ್ಥಾಪಿಸಿದ್ದರು.
ಸ್ವತಂತ್ರ ಭಾರತದ ಕಾಂಗ್ರೆಸ್ ಸರ್ಕಾರಕ್ಕೆ, ಅದರ ಪ್ರಧಾನಿ ನೆಹರೂರವರಿಗೆ ಇದರಿಂದ ಖುಷಿಯಾಗಬೇಕಿತ್ತು. ಭೂಸುಧಾರಣೆ ತಮ್ಮ ಧ್ಯೇಯವೆಂದು ಘೋಷಿಸಿದವರಲ್ಲವೇ ಇವರು. ಅಖಿಲ ಭಾರತ ಕಿಸಾನ್ ಸಭಾವನ್ನು ಉದ್ಘಾಟಿಸಿದವರಲ್ಲವೇ ನೆಹರೂ.
ಇಂತಹ ಕೀರ್ತಿಯ ನೆಹರೂ ಮತ್ತು ಬಾರ್ದೋಲಿ ರೈತ ಹೋರಾಟದ ಖ್ಯಾತಿಯ ಪಟೇಲರು ಮಾಡಿದ ಕೆಲಸವೆಂದರೆ ಈ ರೈತ ಹೋರಾಟವನ್ನು ಅಡಗಿಸಲು ನಿಜಾಮನ ನೆಪ ಮಾಡಿ ಭಾರತದ ಸೈನ್ಯವನ್ನು ಕಳುಹಿಸಿ ರೈತರು ಮತ್ತು ಕೂಲಿಕಾರರ ಮಾರಣಹೋಮ ಮಾಡಿಸಿದ್ದು. ರೈತರ, ಕೂಲಿಕಾರರ, ಆದಿವಾಸಿಗಳ ಮಾರಣಹೋಮ ತಪ್ಪಿಸುವುದಕ್ಕಾಗಿ ಈ ವೀರ ಹೋರಾಟವನ್ನು ಕಮ್ಯೂನಿಸ್ಟ್ ಪಕ್ಷ ಹಿಂತೆಗೆದುಕೊಳ್ಳಬೇಕಾಯಿತು.
ಸ್ವಾತಂತ್ರ್ಯ ಬಂದ ಸಮಯದಲ್ಲಿ ನಡೆಯುತ್ತಿದ್ದ ಕಾರ್ಮಿಕ ಮತ್ತು ರೈತ ಹೋರಾಟಗಳನ್ನು ತೀವ್ರಗೊಳಿಸಿ ಸಾಮಾನ್ಯ ದುಡಿಯುವ ಜನರಿಗೆ ಸ್ವಾತಂತ್ರ್ಯದ ಫಲ ಸಿಗಬೇಕೆಂದು ಕಮ್ಯೂನಿಸ್ಟ್ ಪಕ್ಷ ಕರೆನೀಡಿತು. ಆ ಕಾರಣಕ್ಕಾಗಿ
ಕಮ್ಯೂನಿಸ್ಟ್ ಪಕ್ಷವನ್ನು ನಿಷೇಧಿಸಲಾಯಿತು. ದೇಶಾದ್ಯಂತ ಸಾವಿರಾರು ಕಮ್ಯೂನಿಸ್ಟರ ಬಂಧನವಾಯಿತು. ನಾಲ್ಕು ವರ್ಷಗಳ ಕಾಲ ಈ ನಿಷೇಧ ಮತ್ತು ಬಂಧನ ಸತ್ರ ಚಾಲ್ತಿಯಲ್ಲಿತ್ತು. ಇದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಶಕ್ತಿ ಮೀರಿ ಹೋರಾಟ ಮಾಡಿದ, ಜನಸಾಮಾನ್ಯರ ಸ್ವಾತಂತ್ರ್ಯಕ್ಕಾಗಿ ಸೆಣೆಸಿದ ಕಮ್ಯೂನಿಸ್ಟರಿಗೆ ಸ್ವಾತಂತ್ರ್ಯ ದೊರಕಿದ ರೀತಿ. ಈ ಕ್ರಿಯೆಗಳು ಮೇಲೆ ಉಲ್ಲೇಖಿಸಿದ ಕುವೆಂಪುರವರ ಕವಿತೆಯ ಸಾಲುಗಳನ್ನು ನಿಜವನ್ನು ಎತ್ತಿ ತೋರಿಸಿತ್ತು.
ಹೀಗೆ ಕಮ್ಯೂನಿಸ್ಟ್ ಪಕ್ಷ ನಿಷೇಧಗೊಂಡ ಪರಿಸ್ಥಿತಿಯಲ್ಲಿಯೆ ಇನ್ನೂ ಅನೇಕ ನಾಯಕರು ಬಂಧನದಲ್ಲಿದ್ದು ಚುನಾವಣಾ ಪ್ರಚಾರ ಕೈಗೊಳ್ಳುವುದಿರಲಿ , ಅಭ್ಯರ್ಥಿಗಳು ಮತದಾರರಿಗೆ ಮುಖ ಕೂಡಾ ತೋರಿಸಲಾಗದ ಸ್ಥಿತಿಯಲ್ಲಿ ಕಮ್ಯೂನಿಸ್ಟ್ ಪಕ್ಷ ಮೊದಲ ಮಹಾ ಚುನಾವಣೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿತ್ತು.
ಕಾಂಗ್ರೆಸ್ ಚುನಾವಣೆಗಳಲ್ಲಿ ತನ್ನ ಕಡು ವಿರೋಧಿ ಎಂದು ಗುರುತಿಸಿದ್ದು ಕಮ್ಯೂನಿಸ್ಟ್ ಪಕ್ಷವನ್ನೇ .ಈ ಕಡು ವಿರೋಧಿಗಳು ಚುನಾವಣೆಗಳಲ್ಲಿ ಎಲ್ಲೂ ಗೆಲ್ಲಲಾರದಂತೆ ಮಾಡಿದರೆ ದೇಶದೆಲ್ಲೆಡೆ ತನ್ನ ಗೆಲುವನ್ನು ಸಾಧಿಸಬಹುದೆಂಬ ತಂತ್ರವನ್ನು ಪ್ರಭುತ್ವದ ಅಧಿಕಾರವನ್ನು ದುರ್ಬಳಕೆ ಮಾಡಿ ಬಳಸಿತು.
ಇಂತಹ ಕಡು ಕಷ್ಟಪಟ್ಟು ಚುನಾವಣೆಯನ್ನು ಎದುರಿಸಿದರೂ ಕಮ್ಯೂನಿಸ್ಟ್ ಪಕ್ಷ , ಆಗ ಚಲೇಜಾವ್ ಚಳುವಳಿಯಲ್ಲಿ ತಮ್ಮ ಪಾತ್ರದಿಂದ ಜನರ ನಡುವೆ ಹೆಸರು ಗಳಿಸಿದ್ದ ಸಮಾಜವಾದಿ ಪಕ್ಷ , ಅಂಬೇಡ್ಕರವರ ಪಕ್ಷಗಳೂ ಕೂಡಾ ಕಮ್ಯೂನಿಸ್ಟ್ ಪಕ್ಷದ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಘೋಷಿಸಿ ಸ್ವತಂತ್ರವಾಗಿ ಸ್ಪರ್ಧಿಸಿದವು.
ಒಂದು ಕಡೆ ಆಳುವ ಕಾಂಗ್ರೆಸ್‍ನ ದಬ್ಬಾಳಿಕೆ, ಮತ್ತೊಂದು ಕಡೆ ಏಕಾಂಗಿತನ ಎರಡೂ ಕಾಡಿದರೂ ಲೋಕಸಭೆಯಲ್ಲಿ ಕಾಂಗ್ರೆಸ್ ನಂತರದ ಹೆಚ್ಚು ಸ್ಥಾನ ಗಳಿಸಿ ದೇಶದ ಪ್ರಥಮ ವಿರೋಧ ಪಕ್ಷವಾಯಿತು. ಅಂದಿನ ಮದ್ರಾಸ್ ಪ್ರಾಂತ್ಯ, ಪಂಜಾಬಿನ ಒಂದು ಸಂಸ್ಥಾನದಲ್ಲಿ ಬಹುಮತದ ಸಮೀಪದ ಸ್ಥಾನ ಗಳಿಸಿತು. ಕಾಂಗ್ರೆಸ್ ಮತ್ತೆ ಹಲವು ಕುತಂತ್ರಗಳ ಮೂಲಕ ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿತು.
ಇದು ಸ್ವಾತಂತ್ರ್ಯದ ತರುಣದಲ್ಲಿಯೇ ಕಾಂಗ್ರೆಸ್‍ನ ನಿಜ ಸ್ವರೂಪವನ್ನು ಎತ್ತಿ ತೋರಿಸಿತು. ಇದರಿಂದಾಗಿ ಕಮ್ಯೂನಿಸ್ಟ್ ಪಕ್ಷದಲ್ಲಿ ಭಾರತ ಪಡೆದ ಸ್ವಾತಂತ್ರ್ಯದ ಸ್ವರೂಪವೇನು ? ಸ್ವಾತಂತ್ರ್ಯ ಯಾರಿಗೆ ದಕ್ಕಿದೆ ? ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ನೀಡಿದ ಖ್ಯಾತಿಯ ಕಾಂಗ್ರೆಸ್‍ನ ನಿಜ ಸ್ವರೂಪವೇನು ಎಂಬ ಬಗ್ಗೆ ಗಂಭೀರವಾದ ಚರ್ಚೆಗಳನ್ನು ಎಬ್ಬಿಸಿತು.
ಈ ಚರ್ಚೆಗಳ ನಡುವೆಯೇ ಎರಡನೇ ಮಹಾ ಚುನಾವಣೆಗಳಲ್ಲಿ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ ಬಹುಮತವನ್ನು ಪಡೆದು ರಾಜ್ಯ ಸರ್ಕಾರವನ್ನು ರಚಿಸಿತು. ದೇಶವ್ಯಾಪಿ ಜನಪ್ರಿಯತೆ ಪಡೆದಿದ್ದ ಕಾಂಗ್ರೆಸ್ಸನ್ನು ಸೋಲಿಸಿ ದೇಶದ ಮೊತ್ತ ಮೊದಲ ಕಾಂಗ್ರೆಸ್ಸೇತರ ಸರ್ಕಾರವೆಂಬ ಕೀರ್ತಿಗೆ ಪಾತ್ರವಾಯಿತು. ವಿಶ್ವದಲ್ಲೇ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಮೊದಲ ಕಮ್ಯೂನಿಸ್ಟ್ ಪಕ್ಷವೆಂದು ವಿಶ್ವ ಕಮ್ಯೂನಿಸ್ಟ್ ಚಳುವಳಿಯ ನಡುವೆ ಹೆಸರಾಯಿತು.
ಹೀಗೆ ಅಧಿಕಾರಕ್ಕೆ ಬಂದ ಕೇರಳ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಲಕ್ಷಾಂತರ ಭೂರಹಿತರು, ಗೇಣೀದಾರ ಮತ್ತು ಬಡ ರೈತರಿಗೆ ನೀಡಿದ ಭೂಮಿ ಭೂಮಾಲೀಕರ ದಬ್ಬಾಳಿಕೆಯಿಂದ ರಕ್ಷಣೆ, ಶಿಕ್ಷಣದಲ್ಲಿ ಖಾಸಗೀ ಸಂಸ್ಥೆಗಳ ಪೀಡನೆಯಿಂದ ರಕ್ಷಣೆ, ತೀವ್ರ ಭೂ ಸುಧಾರಣೆಯ ಕ್ರಮಗಳು, ಭ್ರಷ್ಟಾಚಾರ ರಹಿತ ಆಡಳಿತ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಂತಹ ಕ್ರಮಗಳಿಂದ ದೇಶದಲ್ಲಿ ಹೆಸರಾಯಿತು.
ಕೇರಳ ಹೊರತುಪಡಿಸಿ ದೇಶದೆಲ್ಲೆಡೆ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೇರಳದ ಸರ್ಕಾರದ ಜನಪರ ಕ್ರಮಗಳನ್ನು ಪ್ರಜಾಪ್ರಭುತ್ವವಾದಿ ಎಂದು ವಿಶ್ವದಲ್ಲೇ ಹೆಸರಾಗಿದ್ದ ನೆಹರೂ ನಾಯಕತ್ವದ ಆ ಪಕ್ಷ ಸಹಿಸಲಿಲ್ಲ. ಎರಡು ವರ್ಷ ಕೂಡಾ ಆಡಳಿತ ಮಾಡಲು ಬಿಡದೆ ಕಮ್ಯೂನಿಸ್ಟ್ ಸರ್ಕಾರವನ್ನು ಸಂವಿಧಾನದ ದುರ್ಬಳಕೆ ಮಾಡಿ ವಜಾ ಮಾಡಿತು. ಮುಂದೆ ದೇಶಾದ್ಯಂತ ಹಲವು ಬಾರಿ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿ ಪ್ರಜಾಪ್ರಭುತ್ವಕ್ಕೆ ನಿರಂತರ ದ್ರೋಹ ಎಸಗುತ್ತಾ ಬಂದಿತು. ಜನರ ಚಳುವಳಿಗಳ ಮೇಲೂ ದಮನಕಾರಿ ಕ್ರಮಗಳನ್ನು ಕೈಗೊಂಡಿತು.
ಅದೇ ಸಮಯದಲ್ಲಿ ಜನರಲ್ಲಿ ಇದ್ದ ಎಡ ಜನಪರ ಕಾರ್ಯಕ್ರಮಗಳ ಪರ ಇದ್ದ ಬಲವಾದ ಆಕಾಂಕ್ಷೆಯನ್ನು ತಾನು ಅಧಿಕಾರದಲ್ಲಿ ಮುಂದುವರೆಯಲು ಬಳಸಿಕೊಂಡಿತು. ಕೇರಳದ ಕಮ್ಯೂನಿಸ್ಟ್ ವಿಜಯದ ನಂತರ 1957ರ ಆವಡಿ ಅಧಿವೇಶನದಲ್ಲಿ ದೇಶದಲ್ಲಿ ಸಮಾಜವಾದೀ ವಿನ್ಯಾಸದ ಸರ್ಕಾರವನ್ನು ನಡೆಸುವುದಾಗಿ ಘೋಷಿಸಿತು . ಭೂಸುಧಾರಣೆ ಮೊದಲಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿತು.
ಈ ಎಲ್ಲ ಕಾರಣಗಳಿಗಾಗಿ ಕಮ್ಯೂನಿಸ್ಟ್ ಪಕ್ಷದಲ್ಲಿ ಒಂದು ದಶಕದ ಕಾಲ ಗಂಭೀರ ಚರ್ಚೆಗಳು ನಡೆದು ಪಕ್ಷ ವಿಭಜನೆಯಾಯಿತು
ಕಾಂಗ್ರೆಸ್ ದೇಶದ ಅತಿದೊಡ್ಡ ಬಂಡವಾಳಶಾಹಿಗಳು ಮತ್ತು ಭೂಮಾಲೀಕ ಪಕ್ಷ ವಾಗಿ ಅವರ ಹಿತ ಕಾಯುವ ಕೆಲಸ ಮಾಡುತ್ತಿದೆ. ಜನರ ಹಿತ ಕಾಯಲು ಅದರ ನೀತಿಗಳ ವಿರುದ್ಧ ಸಂಘರ್ಷ ಅತ್ಯಗತ್ಯ . ಸಾಮೂಹಿಕ ಚಳುವಳಿಯ ಮಾರ್ಗದಿಂದಲೇ ಭಾರತದಲ್ಲಿ ಕ್ರಾಂತಿ ಎಂಬ ತೀರ್ಮಾನಕ್ಕೆ ಬಂದ ವಿಭಾಗ ಮಾಕ್ರ್ಸ್‍ವಾದಿ ಕಮ್ಯೂನಿಸ್ಟ್ ಪಕ್ಷ- ಸಿಪಿಐಎಂ ಅನ್ನು ರೂಪಿಸಿಕೊಂಡರು. ಕಾಂಗ್ರೆಸ್ ಒಂದು ಪ್ರಗತಿಪರ ಬಂಡವಾಳಗಾರರ ಪಕ್ಷ . ಅದರ ಜೊತೆಗೂಡಿ ಕೆಲಸ ಮಾಡುತ್ತಾ ಅದನ್ನು ಪರಿವರ್ತಿಸಬೇಕು ಎಂಬ ನಿಲುವಿಗೆ ಬಂದವರು ಭಾರತ ಕಮ್ಯೂನಿಸ್ಟ್ ಪಕ್ಷ- ಸಿಪಿಐ ಆಗಿ ಉಳಿದರು.. ಮುಂದೆ ದೇಶದಲ್ಲಿ ಪಾಳೆಯಗಾರಿ ಭೂಮಾಲಿಕರ ದಬ್ಬಾಳಿಕೆಯ ವಿರುದ್ಧ ಸಶಸ್ತ್ರ ಹೋರಾಟದ ಮೂಲಕವೇ ಕ್ರಾಂತಿ ಎಂಬ ನಿಲುವಿಗೆ ಬಂದ ಒಂದು ವಿಭಾಗ ಬೇರೆಯಾಗಿ ನಕ್ಸಲ್ ಅಥವಾ ಎಂಎಲ್, ಅಥವಾ ಮಾವೋವಾದಿ ಪಕ್ಷಗಳನ್ನು ರಚಿಸಿಕೊಂಡರು.
ಸಿಪಿಎಂ ಪಕ್ಷ ದೇಶದ ಮುಂದೆ ಪ್ರಜಾಪ್ರಭುತ್ವವನ್ನು ಜನತಾ ಪ್ರಜಾಪ್ರಭುತ್ವವನ್ನಾಗಿ ಪರಿವರ್ತಿಸುವ ಕ್ರಾಂತಿಯ ಕಾರ್ಯಕ್ರಮವನ್ನು ಮುಂದಿಟ್ಟಿತು. ಎಡಪಂಥೀಯ ಪಕ್ಷ ಮತ್ತು ಶಕ್ತಿಗಳ ಐಕ್ಯರಂಗವನ್ನು ರೂಪಿಸಲು ಶ್ರಮಿಸಿತು.
ಸಿಪಿಎಂ ನೇತೃತ್ವದ ಈ ರಂಗದಲ್ಲಿ ಸಿಪಿಐ ಜೊತೆಗೆ ಹಲವು ಎಡಪಂಥೀಯ ಚಿಂತನೆಯ ಪಕ್ಷಗಳೂ ಸೇರಿ ಮೂರು ರಾಜ್ಯಗಳಲ್ಲಿ ಎಡರಂಗ ತನ್ನ ನೆಲೆಯನ್ನು ವಿಸ್ತಾರಗೊಳಿಸಿತು. 1967ರಲ್ಲಿ ಬಂಗಾಲದಲ್ಲಿ , ಕೇರಳದಲ್ಲಿ ಅಧಿಕಾರಕ್ಕೆ ಬಂದು ಮತ್ತೆ ಮತ್ತೆ ಕಾಂಗ್ರೆಸ್‍ನ ಸಂವಿಧಾನದ ದುರ್ಬಳಕೆಯಿಂದಾಗಿ ಕಿತ್ತೆಸೆಯಲ್ಪಟ್ಟಿತು. ಇಂದಿರಾ ಕಾಂಗ್ರೆಸ್‍ನ ಸರ್ವಾಧಿಕಾರಿ ಪ್ರವೃತ್ತಿಯ ಫಲವಾಗಿ 1972 ರಿಂದ 77 ರವರೆಗೂ ಬಂಗಾಲದಲ್ಲಿ ಪೊಲೀಸರು ಮಿಲಿಟರಿ ಮತ್ತು ಗೂಂಡಾಗಿರಿಯ ಕ್ರೌರ್ಯಗಳಿಗೆ ತುತ್ತಾಯಿತು. 1100 ಜನ ಸಿಪಿಎಂ ಕಾರ್ಯಕರ್ತರು ಕೊಲೆ ಮಾಡಲ್ಪಟ್ಟರು.
ಮುಂದೆ ಇಡೀ ದೇಶವೇ ತುರ್ತು ಪರಿಸ್ಥಿತಿಗೆ ಒಳಗಾದಾಗ ಅದರ ವಿರುದ್ಧ ಹೋರಾಟ ಮಾಡಿತು. 1977 ರ ನಂತರ ಬಂಗಾಲದಲ್ಲಿ , 1980 ರ ನಂತರ ತ್ರಿಪುರಾದಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚುಕಾಲ ಎಡರಂಗ ಸರ್ಕಾರಗಳನ್ನು ನಡೆಸಿ, ಕೇರಳದಲ್ಲಿ ಐದು ಬಾರಿ ಸರ್ಕಾರ ರಚಿಸಿ ದೇಶದಲ್ಲಿ ಒಂದು ರಾಜ್ಯ ಸರ್ಕಾರಕ್ಕೆ ದತ್ತವಾಗಿರುವ ಅಧಿಕಾರದ ಮಿತಿಯಲ್ಲಿ ಭ್ರಷ್ಟಾಚಾರರಹಿತ ಜನಪರ ಎಡಪಂಥೀಯ ನೀತಿಗಳನ್ನು ಅನುಸರಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಮೊದಲಾದ ಪಕ್ಷಗಳ ಬಂಡವಾಳಶಾಹಿ ನೀತಿಗಳಿಗೆ ಪರ್ಯಾಯವಾಗಿ ಎಡಪಂಥೀಯ ಮಾದರಿಯನ್ನು ದೇಶದ ಮುಂದಿಟ್ಟಿದೆ.
ತೀವ್ರ ಭೂಸುಧಾರಣೆ, ಕೈಗಾರಿಕೆಗಳು, ಶಿಕ್ಷಣ, ಆರೋಗ್ಯ, ಸಂಚಾರ, ಸಂಪರ್ಕ ವಿದ್ಯುತ್, ನೀರಾವರಿ, ಕುಡಿಯುವ ನೀರು ಮೊದಲಾದ ಸಾರ್ವಜನಿಕ ಸೇವೆಗಳಲ್ಲಿ ಸಾರ್ವಜನಿಕ ರಂಗವೇ ಪ್ರಧಾನವಾಗಿರಬೇಕು. ಆಹಾರ ಭದ್ರತೆ, ರೈತರಿಗೆ ಅಗ್ಗದ ಸಾಲ, ಬೆಳೆಗಳಿಗೆ ಲಾಭದಾಯಕ ಬೆಲೆ, ಕಾರ್ಮಿಕರಿಗೆ ಕನಿಷ್ಠ ಕೂಲಿ, ಖಾಯಂ ಉದ್ಯೋಗ ನೀಡುವ ಕಾರ್ಮಿಕ ಪ್ರಜಾಪ್ರಭುತ್ವ ಹಕ್ಕುಗಳ ಖಾತರಿ, ದಲಿತರು, ಮಹಿಳೆಯರಿಗೆ ಸಮಾನತೆ ಅಸ್ಪೃಶ್ಯತೆಯ ನಿರ್ಮೂಲನ, ರಾಜ್ಯಗಳಿಗೆ ಸ್ವಾಯತ್ತತೆ, ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮೊದಲಾದ ನೀತಿಗಳ ಜಾರಿ ಮತ್ತು ಅದಕ್ಕಾಗಿ ನಿರಂತರ ಹೋರಾಟ ಈ ಮಾದರಿಯ ಮುಖ್ಯಾಂಶಗಳು.
ದೇಶದ ಆರ್ಥಿಕ ಸ್ಥಗಿತತೆ , ನಿರುದ್ಯೋಗದ ಹೆಚ್ಚಳ, ಕೃಷಿಯ ತೀವ್ರ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಜಾರಿಗೆ ಬಂದ ಜಾಗತೀಕರಣ ಮತ್ತು ಅದೇ ಸಮಯದಲ್ಲಿ ಉಲ್ಬಣವಾದ ಕೋಮುವಾದದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬರಲಾಗಿದೆ. ದೇಶದ ಅತ್ಯಂತ ದೊಡ್ಡ ರೈತ ಸಂಘಟನೆ, ಸಮರಶೀಲ ಕಾರ್ಮಿಕ ಸಂಘಟನೆ, ಕೃಷಿ ಕೂಲಿಕಾರರ ಸಂಘಟನೆ , ವಿದ್ಯಾರ್ಥಿಗಳ, ಯುವಜನರ, ಮಹಿಳೆಯರ ಸಂಘಟನೆಗಳ ಮೂಲಕ ಈ ನೀತಿಗಳ ವಿರುದ್ಧ ಸೆಣಸಾಟ ನಡೆಸಿವೆ.
ಕೋಮುವಾದಿಗಳು ಪ್ರಭುತ್ವದ ಚುಕ್ಕಾಣಿ ಹಿಡಿಯುವುದರ ಬಗ್ಗೆ ನಿರಂತರವಾಗಿ ಹೋರಾಟ ಮತ್ತು ನೀತಿಗಳನ್ನು ಅನುಸರಿಸಿದೆ. ಎಡರಂಗ ಸರ್ಕಾರಗಳು ಅಧಿಕಾರದಲ್ಲಿ ಒಂದು ಕೋಮು ಗಲಭೆಗೂ ಅವಕಾಶವಾಗಲಿಲ್ಲ. ಅವರು ಪ್ರಬಲವಾಗಿದ್ದ ಸಮಯದಲ್ಲಿ ಕೋಮುವಾದಿಗಳ ಬೆಳವಣಿಗೆಗೆ ಅವಕಾಶವೇ ಸಿಕ್ಕಿರಲಿಲ್ಲ. ಕೇಂದ್ರದಲ್ಲಿ 1977 ರಲ್ಲಿ ಜನತಾ ಪಕ್ಷವನ್ನೇ ವಶ ಪಡಿಸಿಕೊಳ್ಳುವ ಪ್ರಯತ್ನ, ನಂತರ ಮತ್ತೆ ಮತ್ತೆ ಕಾಂಗ್ರೆಸ್ಸೇತರ ಮೈತ್ರಿ ರಂಗದ ಭಾಗವಾಗಿ ಬೆಳೆಯುವ ಅವರ ಕುತಂತ್ರಗಳ ವಿರುದ್ಧ ಕ್ರಮಗಳನ್ನು ಕೈಗೊಂಡು ಎರಡು ದಶಕಗಳ ಕಾಲ ಕೋಮುವಾದಿಗಳನ್ನು ದೂರ ಇಡಲು ನಂತರವೂ ಒಂದು ದಶಕದ ಕಾಲ ಅಧಿಕಾರದಿಂದ ದೂರ ಇಡಲು ಸಾಧ್ಯವಾಯಿತು.
ಈಗ ಭಾರತದಲ್ಲಿ ಫ್ಯಾಸಿಸ್ಟ್ ಸಿದ್ಧಾಂತದ ಆರೆಸ್ಸೆಸ್ ನ ಹಿಡಿತದ ಬಿಜೆಪಿ ಬಹುಮತ ಪಡೆದು ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. ನಾಲ್ಕು ಶೂಲದ ನೀತಿಯಿಂದ ಜನತೆಯನ್ನು ಇರಿಯುತ್ತಿದೆ.ಕೋಮು ದ್ವೇಷ, ದಂಗೆಗಳು ; ಕೋಮು ದ್ವೇಷದ ಮುಸುಕಿನಲ್ಲಿ ರಭಸದಿಂದ ಜಾಗತೀಕರಣ ನೀತಿಗಳು, ಸರ್ವಾಧಿಕಾರೀ ನೀತಿಗಳು, ಇವುಗಳ ವಿರುದ್ಧ ದೇಶೋವಿಶಾಳವಾದ ಕೋಮುವಾದ ವಿರೋಧಿ ರಂಗ ಮತ್ತು ರಾಷ್ಟ್ರಮಟ್ಟದ ಎಡರಂಗಗಳನ್ನು ಕಟ್ಟಲು ಶ್ರಮಿಸುತ್ತಿದೆ.
ಸ್ವತಂತ್ರ ಭಾರತದಲ್ಲಿ ಮಾಕ್ರ್ಸ್‍ವಾದದ ಪ್ರಭಾವ ಹಲವು ರೀತಿಗಳಲ್ಲಿ ವಿಸ್ತಾರಗೊಂಡಿತು. ಕಮ್ಯೂನಿಸ್ಟ್ ಪಕ್ಷ ಸಣ್ಣದೇ ಆದರೂ ಅದರ ನಿಲುವು, ಧೋರಣೆಗಳು , ಚಳುವಳಿಗಳು ಭಾರತದ ರಾಜಕೀಯ, ಸಾಮಾಜಿಕ ಚಳುವಳಿಗಳ ಮೇಲೆ ಅದರ ಶಕ್ತಿಯನ್ನು ಮೀರಿದ ಪ್ರಭಾವ ಬೀರಿತು.
ಭಾರತದ ಭೂಪಟವನ್ನು, ಅದರ ಆಳ್ವಿಕೆಯ ರೀತಿಯನ್ನು ಇಂದು ಕಾಣುವ ಭಾಷಾವಾರು ರಾಜ್ಯಗಳಾಗಿ ಬದಲಾಯಿಸಿದುದರಲ್ಲಿ ಕಮ್ಯೂನಿಸ್ಟ್ ಪಕ್ಷದ ಪಾತ್ರ ಗಣನೀಯ. ವಿಶಾಲಾಂಧ್ರ, ಐಕ್ಯ ಕೇರಳ, ಸಂಯುಕ್ತ ಮಹಾರಾಷ್ಟ್ರ, ಪಂಜಾಬಿ ಸುಬಾ, ಜಮ್ಮು ಕಾಶ್ಮೀರ, ಕರ್ನಾಟಕ ಏಕೀಕರಣ ಮೊದಲಾದ ಚಳುವಳಿಗಳಲ್ಲಿ ಪ್ರಧಾನ ಅಥವಾ ಗಣನೀಯ ಪಾತ್ರ ವಹಿಸುವ ಮೂಲಕ ಆಳುವ ವರ್ಗಗಳ ಪ್ರಬಲ ವಿರೋಧ , ಹಿಂಜರಿಕೆಯನ್ನು ಮೀರಿ ಭಾಷಾವಾರು ರಾಜ್ಯಗಳನ್ನು ರಚಿಸುವಂತೆ ಮಾಡಿತು. ಬ್ರಿಟಿಷ್ ಇಂಡಿಯಾ ಮತ್ತು ಅದರ ಅಧೀನದ ಆರು ನೂರಕ್ಕೂ ಹೆಚ್ಚು ಸಂಸ್ಥಾನಗಳ ಚಿನ್ನ , ವಿಚ್ಛಿನ್ನ ಭೂಪಟವೇ ಬದಲಾಯಿತು.
ಹತ್ತು ಹಲವು ರೀತಿಯಲ್ಲಿ ಭಾರತದ ಸಾಂಸ್ಕೃತಿಕ, ಸಾಹಿತ್ಯಕ ಲೋಕ ರಂಗಭೂಮಿ, ಸಿನೆಮಾಗಳ ಮೇಲೆ, ಅರ್ಥಶಾಸ್ತ್ರ, ಇತಿಹಾಸ ಇತರ ಸಾಮಾಜಿಕ ವಿಜ್ಞಾನಗಳ ಸಂಶೋಧನೆಯ ಮೇಲೆ ಬೀರಿದ ಪರಿಣಾಮಗಳನ್ನು ಪ್ರತ್ಯೇಕವಾಗಿಯೇ ವಿವರಿಸಬೇಕು.

– ಕೇಶವ ಶರ್ಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...