Homeಅಂಕಣಗಳುಆದರ್ಶವಾದಿಗಳು ಸೋಲುತ್ತಿರುವುದೇಕೆ?

ಆದರ್ಶವಾದಿಗಳು ಸೋಲುತ್ತಿರುವುದೇಕೆ?

- Advertisement -
- Advertisement -

ಇದು ಈಚೆಗೆ ಜಯನಗರದ ಚುನಾವಣೆಯಲ್ಲಿ ಸೋಲುಂಡ ಲಂಚಮುಕ್ತ ಕರ್ನಾಟಕ ವೇದಿಕೆಯ ಮುಖ್ಯಸ್ಥರಾದ ರವಿಕೃಷ್ಣಾರೆಡ್ಡಿ ಸಾಮಾಜಿಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರ:
“ಒಬ್ಬ ಯೋಗ್ಯ ಅರ್ಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿರುವ ಮತ್ತು ಅಂತಹ ಕೆಲಸ ಮಾಡಿರುವ ಇತಿಹಾಸ ಇರುವ ಯಾವುದೇ ವ್ಯಕ್ತಿ ಚುನಾವಣೆÀಗೆ ನಿಂತರೆ, ಯಾವುದೇ ಆಕ್ರಮ ಮಾಡದೆ ಜನರ ತನು ಮತ್ತು ಧನದ ಸಹಾಯದಿಂದಲೇ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಂಡರೆ, ಅಂತಹ ವ್ಯಕ್ತಿಯನ್ನು ಜಾತಿ ಮತ್ತು ಪಕ್ಷಾತೀತವಾಗಿ ಜನತೆ ಗೆಲ್ಲಿಸುತ್ತಾರೆ ಎನ್ನುವುದನ್ನು ತೋರಿಸಬೇಕು ಎನ್ನುವ ಕನಸು ಮತ್ತು ಆದರ್ಶವನ್ನು ಸರಿಯಾಗಿ ಹತ್ತು ವರ್ಷಗಳಿಂದ ನಾನು ಪೋಷಿಸಿಕೊಂಡು ಬಂದಿದ್ದೆ. ಅದರ ಭಾಗವಾಗಿಯೇ ನನ್ನ ಇಲ್ಲಿಯತನಕದ ಚುನಾವಣ ಹೋರಾಟಗಳು ಇದ್ದವು. ಈಗ ಆ ಕನಸಿಗೆ ಮತ್ತು ಅಂತಹ ಪ್ರಯತ್ನಗಳಿಗೆ ತಿಲಾಂಜಲಿ ಇಡುತ್ತಿದ್ದೇನೆ (ತಾತ್ಕಾಲಿಕವಾಗಿ). ಆದರೆ ಇಂತಹ ಪ್ರಯತ್ನ ಯಾರಾದರೂ ಮಾಡಿದರೆ ಅವರಿಗೆ ನನ್ನ ನೈತಿಕ ಬೆಂಬಲವಿರುತ್ತದೆ ಮತ್ತು ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.’’
ಇದಕ್ಕೂ ಮುನ್ನ ಇದರ ಪೂರ್ವಪೀಠಿಕೆಯಂತಿರುವ ಭಾಷಣದ ವೀಡಿಯೊವನ್ನೂ ರವಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಅಮೆರಿಕದಿಂದ ಸಾಫ್ಟ್‍ವೇರ್ ಉದ್ಯೋಗವನ್ನು ಬಿಟ್ಟು ಭಾರತದ ರಾಜಕಾರಣದಲ್ಲಿ ಪ್ರಯೋಗ ಮಾಡಲು ಬಂದ ತಮ್ಮ ಹಿನ್ನೆಲೆಯನ್ನು ಹೇಳಿ, ಅನಾಮಿಕನಾಗಿ ಸ್ಪರ್ಧಿಸಿದಾಗ ಬಂದುದಕ್ಕಿಂತಲೂ ಜಯನಗರದಲ್ಲಿ ಕಡಿಮೆ ಮತ ಬಂದಿರುವುದಕ್ಕೆ ಬಿಟಿಎಂ ಬಡಾವಣೆಯ ಜನರ ಕ್ಷಮೆ ಕೇಳಿದ್ದರು; ತಮಗೆ ಸೋಲಿಗಿಂತಲೂ ಇಷ್ಟೊಂದು ಅಲ್ಪಪ್ರಮಾಣದ ಮತ ಬಿದ್ದಿರುವುದು ಹೆಚ್ಚಿನ ಆಘಾತ ತಂದಿದೆಯೆಂದು ನುಡಿದಿದ್ದರು; ಜನರಿಗೆ ಪ್ರಾಮಾಣಿಕ ಅಭ್ಯರ್ಥಿಗಳು ಬೇಕಾಗಿಲ್ಲವೆಂದೂ ಅವರು ಭ್ರಷ್ಟಾಚಾರ ವಿರೋಧಿಗಳಿಂದ ತಮಗೆ ತೊಂದರೆಯಾಗಬಹುದೆಂದು ಹೆದರಿದ್ದಾರೆಂದೂ ವ್ಯಾಖ್ಯಾನಿಸಿದ್ದರು. ಚುನಾವಣ ಹೋರಾಟದಲ್ಲಿ ತಮ್ಮ ಜತೆನಿಂತ ಜೀವನಸಂಗಾತಿಗೂ ಗೆಳೆಯರಿಗೂ ಕೃತಜ್ಞತೆ ಹೇಳಿ, ತನುಮನಧನ ಯಾವುದರಲ್ಲೂ ನೆರವಾಗದೆ ಕೇವಲ ಶುಭ ಹಾರೈಸಿದವರನ್ನು ಇಂತಹ ಆತ್ಮವಂಚನೆ ಮಾಡಬೇಡಿ ಎಂದು ಟೀಕಿಸಿದ್ದರು. ಅವರ ಮಾತಲ್ಲಿ ತಮ್ಮನ್ನು ಕಷ್ಟಕಾಲದಲ್ಲಿ ಬೆಂಬಲಿಸದ ಪರ್ಯಾಯ ರಾಜಕಾರಣದ ಬಗ್ಗೆ ಮಾತಾಡುವ ಪ್ರಗತಿಪರ ಚಿಂತಕರ ಮತ್ತು ಚಳುವಳಿಗಳ ಮೇಲೆ ಸಿಟ್ಟಿದ್ದರೆ ಅದು ಸಹಜ.
ಶಕ್ತಿರಾಜಕಾರಣಕ್ಕೆ ವಿದಾಯ ಹೇಳುತ್ತಿರುವಂತಿರುವ ರವಿಯವರ ತ್ಯಾಗಪತ್ರದಲ್ಲಿ ಸೋಲಿನ ಹತಾಶೆಯಿಂದ ಬಂದ ನೋವಿದೆ. ಸಾಫ್ಟ್‍ವೇರ್ ಇಂಜಿನಿಯರಿಕೆಗೆ ಹೊಂದಾಣಿಕೆಯಾಗದಂತೆ ತೋರುವ ಅವರ ಖಾದಿಧಿರಿಸು ಗಾಂಧಿಟೋಪಿಗಳು, ಪರೋಕ್ಷವಾಗಿ ಗಾಂಧಿಮಾರ್ಗದ ಸೋಲಿನಂತೆಯೂ ಕಂಡಿದ್ದರೆ ಸೋಜಿಗವಿಲ್ಲ. ಅದರೆ ಅವರ ನೋವು ಅವರದು ಮಾತ್ರವಲ್ಲ. ವಾಸ್ತವತೆಯ ಗೋಡೆಗೆ ಢಿಕ್ಕಿಹೊಡೆದು ಜರ್ಜರಿತವಾಗಿರುವ, ಪರ್ಯಾಯ ರಾಜಕಾರಣ ರೂಪಿಸುವಲ್ಲಿ ವಿಫಲವಾಗಿರುವ ನÀಮ್ಮ ಕಾಲದ ಅನೇಕರದ್ದೂ ಹೌದು.
ಈ ಸಲದ ಚುನಾವಣೆಯಲ್ಲಿ ಸೋತ ಆದರ್ಶವಾದಿ ಅಭ್ಯರ್ಥಿಗಳಲ್ಲಿ ರವಿ ಒಬ್ಬಂಟಿಯಲ್ಲ. ಕಮ್ಯುನಿಸ್ಟ್ ಪಕ್ಷಗಳ ಶ್ರೀರಾಮರೆಡ್ಡಿ, ಮುನೀರ್ ಕಾಟಿಪಾಳ್ಳ, ಮಾನಸಯ್ಯ, ಸ್ವರಾಜ್ ಇಂಡಿಯಾದ ದರ್ಶನ್ ಪುಟ್ಟಣ್ಣಯ್ಯ-ಹೀಗೆ ಹಲವರಿದ್ದಾರೆ. ಬಲವಾದ ಸ್ಪರ್ಧೆ ನೀಡಿ ಎರಡನೇ ಸ್ಥಾನಕ್ಕೆ ಬಂದು ಸೋತ ಶ್ರೀರಾಮರೆಡ್ಡಿ ಹಾಗೂ ದರ್ಶನ್ ಬಿಟ್ಟರೆ, ಹೆಚ್ಚಿನವರು ಠೇವಣಿ ಕಳೆದುಕೊಂಡವರು. ನಮ್ಮ ಮತದಾರರು ಶ್ರೇಷ್ಠ ಲೇಖಕರಾದ ಶಿವರಾಮ ಕಾರಂತ ಗೋಪಾಲಕೃಷ್ಣ ಅಡಿಗ, ಚಳುವಳಿಗಾರ ಎಂ.ಡಿ. ನಂಜುಂಡಸ್ವಾಮಿಯವರನ್ನು, ಈಶಾನ್ಯಭಾರತದಲ್ಲಿ ಸೈನಿಕ ಅತಿರೇಕಗಳ ವಿರುದ್ಧ ಉಪವಾಸವಿದ್ದು ಹೋರಾಡಿದ ಇರೋಮ್ ಶರ್ಮಿಳಾ ಅವರನ್ನು ಸೋಲಿಸಿರುವರು. ರಾಜ್ಯಸಭಾ ಚುನಾವಣೆಯಲ್ಲಿ ಅನಂತಮೂರ್ತಿಯವರೂ ಸೋತವರು. ರವಿಯವರದು ಇವರೆಲ್ಲರ ಸೋಲಿಗಿಂತ ಭಿನ್ನ. ಇವರು ಕಾರಂತರಂತೆ ಚುನಾವಣೆಯನ್ನು ಸಾಂಕೇತಿಕವಾಗಿ ತೆಗೆದುಕೊಂಡಿರಲಿಲ್ಲ. ದರ್ಶನ್ ಅವರಂತೆ ಕಣಕ್ಕೆ ಧುತ್ತನೆ ಇಳಿದವರಲ್ಲ. ವಿದೇಶದಲ್ಲಿ ಸುರಕ್ಷಿತ ಜೀವನ ನಡೆಸುತ್ತಿದ್ದ ಅವರು ಭಾರತಕ್ಕೆ ಮರಳಿ, ರಾಜಕೀಯ ಸುಧಾರಣೆಗಾಗಿ ಜೀವನವನ್ನೆ ತೊಡಗಿಸಿ, ಬೀದಿಯಲ್ಲಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು. ಇಂತಹವರ ಸೋಲು ಆದರ್ಶವಾದಿ ಅಥವಾ ಚಳುವಳಿ ರಾಜಕಾರಣದ ಹಿನ್ನಡೆಯಂತೆ ಕಾಣುತ್ತದೆ. ಅದರಲ್ಲೂ ಕಾಂಗ್ರೆಸ್- ಬಿಜೆಪಿ-ಜೆಡಿಎಸ್ ಹೊರತುಪಡಿಸಿದ ಪರ್ಯಾಯ ರಾಜಕಾರಣವನ್ನು ಕಲ್ಪಿಸಿಕೊಂಡಿದ್ದ ಎಲ್ಲರಿಗೂ ಇದು ಪಾಠದಂತಿದೆ. ಪ್ರಶ್ನೆಯೆಂದರೆ, ಆದರ್ಶವಾದಿಗಳೇಕೆ ಸೋತರು?
ಹಣ-ಜಾತಿ-ಸಾವು-ಕೋಮುವಾದಗಳನ್ನು ಅಯುಧಗಳಾಗಿ ಬಳಸಿ ಪಳಗಿರುವ ಪ್ರಧಾನಧಾರೆಯ ರಾಜಕೀಯ ಪಕ್ಷಗಳ ಎದುರು, ತಕ್ಕ ರಾಜಕೀಯ ತಂತ್ರಗಾರಿಕೆಯಿಲ್ಲದೆ, ಕೇವಲ ಭಾವುಕ ಆದರ್ಶಗಳು ಸಾಲುವುದಿಲ್ಲವೇ? ಹಿಂದೆ ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರು ಜನರೇ ಓಟಿನ ಜತೆ ಹಣಕೊಟ್ಟು ಗೆಲ್ಲಿಸುತ್ತಿದ್ದ ಮಾದರಿಯು, ರಾಜಕಾರಣವು ಬಂಡವಾಳಹೂಡಿ ಲಾಭ ಮಾಡುವ ಕ್ಷೇತ್ರವಾಗಿ ಸನ್ನಿವೇಶದಲ್ಲಿ ಅಪ್ರಸ್ತುತಗೊಂಡಿದೆಯೇ? ರಾಜಕೀಯ ಸಮಾನಮನಸ್ಕರು ಸಮಾನ ಎದುರಾಳಿಯ ವಿರುದ್ಧ ಚುನಾವಣ ಪೂರ್ವ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದೆ ಹೋಗಿದ್ದರಿಂದ ಹೀಗಾಯಿತೆ? ಚುನಾವಣೆ ಗೆಲ್ಲಬಲ್ಲ ಕೇಡರ್‍ಆಧಾರಿತ ಚಳುವಳಿಯನ್ನು ಕಟ್ಟದೆ ಏಕಾಂಗಿ ಆದರ್ಶವಾದಿಗಳು ಗೆಲ್ಲುವುದು ಕಷ್ಟವೇ? (ಬಿಎಸ್‍ಪಿಯ ಮಹೇಶ್ ಗೆಲುವಿನ ಹಿಂದೆ ಮೇಲ್ಕಾಣಿಸಿದ ಎರಡೂ ಕಾರಣಗಳಿವೆ.) ಚಳುವಳಿ ರಾಜಕಾರಣದ ಯುಗ ಮುಗಿದುಹೋಯಿತೆ? ಪರ್ಯಾಯ ರಾಜಕಾರಣ ಬಯಸುವ ಪ್ರಗತಿಪರ ಚಿಂತಕರು ಚಳುವಳಿಗಾರರು ಒಗ್ಗಟ್ಟಾಗಿ ನಿಂತು ಆದರ್ಶವಾದಿಗಳನ್ನು ಗೆಲ್ಲಿಸದೆ ಹೋದರೆÉೀ? ಆದರ್ಶವಾದಿಗಳಿಗೆ ಮತಹಾಕಿದರೂ ಗೆಲ್ಲುವುದಿಲ್ಲ ಎಂಬ ಜನರ ಕಾಮನ್‍ಸೆನ್ಸ್ ಇವರನ್ನು ನಿರ್ಲಕ್ಷ್ಯ ಮಾಡಿತೇ? ಫ್ಯಾಸಿಸಮ್ಮಾಗಿ ರೂಪಾಂತರಗೊಂಡು ಬೆದರಿಕೆ ಒಡ್ಡುತ್ತಿರುವ ಬಿಜೆಪಿಯ ಗುಮ್ಮ ಕಾಂಗ್ರೆಸನ್ನು ಗೆಲ್ಲಿಸುವ ಬಿಜೆಪಿಯನ್ನು ಸೋಲಿಸುವ ಎರಡು ಆಯ್ಕೆಗೆ ಜನರನ್ನು ನೂಕಿತೇ? ಜನರನ್ನು ಬದಲಾವಣೆಗೆ ಸಜ್ಜುಗೊಳಿಸದೆ ನಿಮ್ಮ ಉದ್ಧಾರಕ್ಕೆ ಬಂದಿರುವ ನನ್ನನ್ನು ಗೆಲ್ಲಿಸುವುದು ನಿಮ್ಮ ಕರ್ತವ್ಯ ಎಂಬ ಆದರ್ಶವಾದಿಗಳ ಮನೋಭಾವವು ಜನರಿಗೆ ನೈತಿಕ ಅಹಂಕಾರದ ಹಾಗೆ ಕಂಡಿರಬಹುದೆÉೀ? ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆಯಲ್ಲ, ಅಥವಾ ಅದರ ನಿವಾರಣೆ ಸಾಧ್ಯವಿಲ್ಲ, ಅದರೊಳಗೆ ತಮ್ಮ ಸಣ್ಣಪುಟ್ಟ ಕೆಲಸಗಳಾದರೆ ಸಾಕು ಎಂಬ ಅನೈತಿಕ-ವಾಸ್ತವಿಕತೆಗೆ ನಮ್ಮ ರಾಜಕಾರಣ ಜನರನ್ನು ತಲುಪಿಸಿಬಿಟ್ಟಿದೆಯೇ? ತಾಳ್ಮೆಯಿಂದ ಉತ್ತರ ಹುಡುಕಬೇಕಿದೆ. ಯಾಕೆಂದರೆ ಚುನಾವಣ ಸೋಲು-ಗೆಲುವುಗಳಿಗೆ ಒಂದೇ ಕಾರಣವಿರುವುದಿಲ್ಲ.
ರವಿ ಮತ್ತು ಅವರಂಥವರು ಮಾಡಿದ ಯತ್ನ ಮತ್ತು ಪ್ರಯೋಗಗಳು ಚಾರಿತ್ರಿಕವಾಗಿ ಮಹತ್ವದವು. ಅಮೂಲ್ಯವಾದವು. ನಮ್ಮ ಅಸಹಾಯಕತೆಯನ್ನೂ ಹೇಳುವಂತಹವು. ಹೀಗಾಗಿ ಅವರ ಸೋಲಿಗೆ ಆಯಾ ಕ್ಷೇತ್ರದ ಮತದಾರರು ಮಾತ್ರವಲ್ಲ, ನಾವೂ ಕಾರಣ ಎಂಬ ಅಪರಾಧಿಭಾವ ಅನೇಕರನ್ನು ಕಾಡುತ್ತಿದೆ. ರವಿ, ಮುನೀರ್, ಶ್ರೀರಾಮರೆಡ್ಡಿ, ಮಾನಸಯ್ಯ ಸದನದಲ್ಲಿದ್ದರೆ ಅದರ ಘನತೆ ಬೇರೆಯೇ ಇತ್ತು. ಆದರೆ ರವಿಕೃಷ್ಣಾರೆಡ್ಡಿ ಅಥವಾ ಮುನೀರ್ ಗೆದ್ದಿದ್ದರೆ ಅಸೆಂಬ್ಲಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತ ಮಾಡಬಹುದಾದ ರಗಳೆಗೆ ಅವರ ಸೋಲನ್ನು ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಅಧಿಕಾರಸ್ಥ ಪಕ್ಷಗಳೂ ಬಯಸಿದ್ದವು. ಆದರ್ಶವಾದಿಗಳ ಪರವಾಗಿದ್ದವರಿಗೂ ಈ ಹಣಾಹಣಿಯಲ್ಲಿ ಅವರು ಗೆಲ್ಲುವುದು ಕಠಿಣವೆಂದೂ ಗೊತ್ತಿತ್ತು. ಮಾತ್ರವಲ್ಲ, ಇವರು ಸೆಕ್ಯುಲರ್ ಮತಗಳನ್ನು ಗಳಿಸಿ ಪರೋಕ್ಷವಾಗಿ ಬಿಜೆಪಿಯನ್ನು ಗೆಲ್ಲಿಸಬಹುದು ಎಂಬ ಆತಂಕವೂ ಇತ್ತು. ಅನೇಕ ಕ್ಷೇತ್ರಗಳಲ್ಲಿ ಇದಾಗಿದೆ. ಹೀಗಾಗಿ ಇವರ ವಿರುದ್ಧ ಗೆದ್ದಿರುವುದು ಕಡಿಮೆ ಅಪಾಯಕಾರಿಯಾದ ಕಾಂಗ್ರೆಸ್ಸು ಎಂಬುದು ಸಮಾಧಾನದ ನಿಟ್ಟುಸಿರನ್ನೂ ಬಿಡುವಂತೆ ಮಾಡಿತು.
ರವಿಯವರ ಮಾತುಗಳಲ್ಲಿ ಸೋಲುಂಡವರಿಗೆ ಅನುಭವಕ್ಕೆ ಬರುವ ವಾಸ್ತವಿಕ ತಥ್ಯಗಳ ವಿಷಾದಕರ ಅರಿವೂ, ಅದರಿಂದ ಬಂದ ಪ್ರಬುದ್ಧತೆಯೂ ಇದೆ. ಎಂತಲೇ ಅವರು ನೆಲ ಹದವಾಗದೆ ನಾನು ಬೀಜವನ್ನು ಬಿತ್ತಿದ್ದನೇನೊ ಎಂದು ಹೇಳಿದರು. ಇದು ಮಾವೊ ಹೇಳಿದ ಮೊಟ್ಟೆಯ ರೂಪಕವನ್ನು ನೆನಪಿಸುತ್ತದೆ. ಮೊಟ್ಟೆಗೆ ಮರಿಯಾಗುವ ಸಮಸ್ತ ಶಕ್ತಿಯಿದ್ದರೂ ಕಾವುಕೊಡುವ ಕೋಳಿಯಿಲ್ಲದಿದ್ದರೆ ಅದರ ಕನಸು ನಿಜಗೊಳ್ಳದು. ಬದಲಾವಣೆ ಬಯಸುವವರಿಗೆ ಜನತೆಯೆಂಬ ಕೋಳಿ ಕಾವಿಗೆ ಬಾರದೆಯಿದ್ದಾಗ ಮೊಟ್ಟೆಯಿಡಬಾರದು ಎಂಬ ಅರಿವಿರಬೇಕು. ಪ್ರಶ್ನೆಯೆಂದರೆ, ಆದರ್ಶವಾದಿಗಳು ಗೆಲ್ಲಬಲ್ಲ ಚಾರಿತ್ರಿಕ ಅವಕಾಶ ಬರುವುದು ಯಾವಾಗ? ಅದು ಬರುವಂತಾಗಲು ಏನು ಮಾಡಬೇಕು? ಇವು ಸರಳ ಉತ್ತರವಿರುವ ಪ್ರಶ್ನೆಗಳಿಲ್ಲ. ಆದರೆ ಕಾಲಕೂಡಿದಾಗ ರಾಜಕಾರಣದಲ್ಲಿ ಊಹಾತೀತ ಪವಾಡ ಸಂಭವಿಸಬಲ್ಲವು. ಆಪ್ ದೆಹಲಿಯಲ್ಲಿ ಪ್ರಚಂಡ ಬಹುಮತ ಪಡೆಯುವುದನ್ನು-ಆಗತಾನೇ ದೇಶವನ್ನು ವಶಪಡಿಸಿಕೊಂಡು ಪ್ರಧಾನಿಯಾಗಿ ಮೆರೆಯುತ್ತಿದ್ದ ಮೋದಿಯ ಕಾಲ್ಬುಡದಲ್ಲೇ- ಯಾರುತಾನೇ ಊಹಿಸಿದ್ದರು? ಪ್ರತಿ ಕಾಲಘಟ್ಟದ ಚುನಾವಣೆಯಲ್ಲೂ ರಾಜಕೀಯ ಆದ್ಯತೆಗಳು ವಿಲಕ್ಷಣವಾಗಿ ಬದಲಾಗುತ್ತವೆ. ಇಂತಹ ನಾಟಕೀಯ ಬದಲಾವಣೆಯಲ್ಲಿ ಆಪ್ ಗೆದ್ದಿತು. ನಮ್ಮೂರಲ್ಲಿ, ಅಕ್ರಮ ಗಣಿಗಾರಿಕೆಯ ವಿರುದ್ಧ ಬರೆಹ ಚಳುವಳಿ ಮಾಡಿಕೊಂಡು ಬಂದಿದ್ದವರೆಲ್ಲ ಬಿಜೆಪಿಯಿಂದ ವಲಸೆ ಬಂದಿದ್ದ ಆನಂದಸಿಂಗರನ್ನು ಗೆಲ್ಲಿಸುವ; ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದು ಬಿಜೆಪಿ ಹುರಿಯಾಳಾಗಿದ್ದ ಗವಿಯಪ್ಪನವರನ್ನು ಸೋಲಿಸುವ ಒತ್ತಡಕ್ಕೆ ಪ್ರಗತಿಪರರು ಸಿಲುಕಿದ್ದರು. ಫ್ಯಾಸಿಸಂನ ಭಯ ಎಂತೆಂತಹ ವೈರುಧ್ಯಗಳಿಗೆ ನಮ್ಮನ್ನು ದೂಡಿದೆ?
ರವಿಯವರ ಧಾಟಿಯಲ್ಲೇ ವೈವಿಎಸ್ ದತ್ತ ಅವರೂ ಪತ್ರ ಬಿಡುಗಡೆ ಮಾಡಿದರು. ದತ್ತ ಜೆಡಿಎಸ್ ಅಭ್ಯರ್ಥಿಯಾಗಿದ್ದರೂ, ಬಹಳ ಜನ ಅವರ ಗೆಲುವನ್ನೂ ಹಾರೈಸಿದ್ದರು; ಅತ್ಯಲ್ಪ ಸಂಖ್ಯೆಯಲ್ಲಿರುವ ಸಮುದಾಯದಿಂದ ಬಂದ ಅವರನ್ನು ಗೆಲ್ಲಿಸಿದ ಮತದಾರರ ಜಾತ್ಯತೀತತೆ ಮತ್ತು ಪ್ರಬುದ್ಧತೆಯನ್ನು ಮೆಚ್ಚಿಕೊಂಡಿದ್ದರು. ದತ್ತ ತಮ್ಮ ಪತ್ರದಲ್ಲಿ ತಮ್ಮ ತಪ್ಪನ್ನು ಕ್ಷಮಿಸುವಂತೆ ಜನರನ್ನು ಕೋರಿರುವುದಲ್ಲದೆ, ಪ್ರಾಮಾಣಿಕರನ್ನು ಆರಿಸಿದ್ದಕ್ಕೆ ಜನರನ್ನು ಪತ್ರದಲ್ಲಿ ಅಭಿನಂದಿಸಿದರು. ಈ ಕ್ಷಮಾಪಣೆ ಮತ್ತು ಅಭಿನಂದನೆಯಲ್ಲಿ ಕಹಿವ್ಯಂಗ್ಯವಿದೆ. ತನ್ನಂತಹ ಸಾಮಾಜಿಕ ಬದ್ಧತೆಯುಳ್ಳ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕಾಗಿ ಗಾಢವಿಷಾದವಿದ್ದರೂ ರವಿಯವರ ಪತ್ರದಲ್ಲಿ ವ್ಯಂಗ್ಯವಿಲ್ಲ. ಇಬ್ಬರ ಪತ್ರ- ಭಾಷಣಗಳ ಹಿಂದೆ ಎಷ್ಟೇ ಕೆಟ್ಟ ಅನುಭವವಾಗುತ್ತಿದ್ದರೂ `ಸದಾ ಒಳ್ಳೆಯದನ್ನು ಮಾಡಿ’ ಎಂಬ ಇತ್ಯಾತ್ಮಕ ಚಿಂತನೆಯಿದೆ. ಈ ಚಿಂತನೆಯುಳ್ಳ ಪುಸ್ತಕವನ್ನು ಸ್ವತಃ ರವಿ ಅನುವಾದಿಸಿ ಪ್ರಕಟಿಸಿರುವರು. ಅವರು ಆ ಪುಸ್ತಕದಲ್ಲಿರುವ ಹತ್ತು ವಿರೋಧಾಭಾಸದ ಆದೇಶಗಳನ್ನು ತಮ್ಮ ಭಾಷಣದ ಕೊನೆಯಲ್ಲಿ ಓದಿದರು. ಅದರಲ್ಲಿ ಜನ ಬಲಿಷ್ಠರನ್ನೇ ಬೆಂಬಲಿಸುತ್ತಾರೆಂದೂ ಆದರ್ಶಗಳನ್ನು ಸೋಲಿಸುತ್ತಾರೆಂದೂ, ಆದರೂ ಧೃತಿಗೆಡಬಾರದೆಂದೂ ಹೇಳಿದೆ. ಆದರೆ ಕರ್ನಾಟಕದ ರಾಜಕಾರಣ, ಹೀಗೆ ಸರಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸದಷ್ಟು ಜಟಿಲಗೊಂಡಿದೆ.
ರವಿ ವೀಡಿಯೊ ಭಾಷಣ ಮಾಡುವಾಗ ಪಕ್ಕದಲ್ಲಿ ಬಾಡಿದ ಮುಖದಲ್ಲಿ ಕ್ಯಾಮೆರಾ ನೋಡಲು ನಿರಾಕರಿಸುವವರಂತೆ ಬಾಡಿದ ಮುಖದಲ್ಲಿ ಮುಖತಗ್ಗಿಸಿ ಗಂಡನ ದುಗುಡವನ್ನು ಒಳಗೇ ಅನುಭವಿಸುತ್ತಿರುವಂತಿದ್ದ ಅವರ ಜೀವನಸಂಗಾತಿ ಸುಪ್ರಿಯಾರ ಮುಖ ಯಾಕೊ ಕಾಡುತ್ತಿದೆ? ಅವರ ಮನಸ್ಸಿನೊಳಗೆ ಯಾವ ಮಥನ ನಡೆದಿರಬಹುದು? ಅವರು ಮನಬಿಚ್ಚಿ ಮಾತಾಡಲು ಸಾಧ್ಯವಾಗಿದ್ದರೆ ಏನೆಲ್ಲ ಹೇಳುತ್ತಿದ್ದರು? ಕುತೂಹಲವಾಗುತ್ತಿದೆ. ಅವರದು ಕಸ್ತೂರಬಾ ಮೌನ. ಇಷ್ಟಕ್ಕೂ ರವಿಯೆದುರು ಗೆದ್ದಿರುವವರು ಒಬ್ಬ ಹೊಸತಲೆಮಾರಿನ ಮಹಿಳೆ. ಅವರ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿಯವರಂಥ ಬಲಿಷ್ಠ ರಾಜಕಾರಣಿ ಪ್ರಭಾವಳಿಯಿದೆ, ನಿಜ. ಆದರೂ ರವಿ ಆಕೆಗೆ ಔಪಚಾರಿಕವಾಗಿ ಶುಭ ಕೋರಿದರು. ಆಕೆ ಬಯಸಿದರೆ ಜಯನಗರದ ಕೆಲಸಗಳಲ್ಲಿ ಕೈಜೋಡಿಸುವುದಾಗಿಯೂ ಹೇಳಿದರು. ಇದು ಸೋತವರು ತೋರುವ ನಮ್ರತೆ. ಈ ನಮ್ರತೆಯೆ ತನ್ನೆಲ್ಲ ವಿಕಾರಗಳೊಡನೆ ಡೆಮಾಕ್ರಸಿಯಲ್ಲಿರುವ ಚೆಲುವು. ರವಿ ಪತ್ರದಲ್ಲಿ ರಾಜಕಾರಣಕ್ಕೆ ತಿಲಾಂಜಲಿ ಕೊಡುವ ನಿರ್ಣಯವನ್ನು ಕಂಸದಲ್ಲಿ ತಾತ್ಕಾಲಿಕವೆಂದು ಸೂಚಿಸಿದ್ದಾರೆ. ಆ ಕಂಸ ತೆರವಾಗುವ ದಿನ; “ಯೋಗ್ಯ ಅರ್ಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿರುವ ವ್ಯಕ್ತಿ ಚುನಾವಣೆÀಗೆ ನಿಂತರೆ’’ ಜಾತಿ ಮತ್ತು ಪಕ್ಷಾತೀತವಾಗಿ ಗೆಲ್ಲಿಸುವ ದಿನ ಬಂದೀತು. ಅದಕ್ಕಾಗಿ ವ್ಯಕ್ತಿವಾದಿ ಹೋರಾಟಗಳಿಗಿಂತ ಚದುರಿದ ಸಂಗಾತಿಗಳು ಒಗ್ಗೂಡಿ ಕೆಲಸ ಮಾಡಬೇಕಾಗುವುದೊ ಏನೊ?

– ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...