Homeಮುಖಪುಟಕೆಪಿಸಿಸಿ ದಿನೇಶ್ ಆಯ್ಕೆ ಅಚ್ಚರಿಯಲ್ಲ

ಕೆಪಿಸಿಸಿ ದಿನೇಶ್ ಆಯ್ಕೆ ಅಚ್ಚರಿಯಲ್ಲ

- Advertisement -
- Advertisement -

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆಯಾಗಿದ್ದಾರೆ. ರಾಹುಲ್ ಗಾಂಧಿಯವರ ಕೋರ್ ಟೀಂನ ನಡೆಯನ್ನು ಬಲ್ಲವರಿಗೆ ಈ ಆಯ್ಕೆ ಯಾವ ಆಶ್ಚರ್ಯವನ್ನೂ ಉಂಟು ಮಾಡುವುದಿಲ್ಲ. ಹಾಗೆ ನೋಡಿದರೆ, ಈ ಸೂಚನೆ ಸಿಕ್ಕಿ 2 ವರ್ಷಗಳಾದುವು. ದಿನೇಶ್ ಗುಂಡೂರಾವ್ ಮತ್ತು ಖಂಡ್ರೆಯವರ ನೇಮಕಾತಿಯ ಆದೇಶವನ್ನು ಹೊರಡಿಸಿರುವ ಅಶೋಕ್ ಗೆಹ್ಲೊಟ್, ರಾಹುಲ್‍ಗಾಂಧಿಯವರ ಕೋರ್ ಟೀಂನ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದಾರೆ. ರಾಜಸ್ತಾನದ ಮಾಜಿ ಮುಖ್ಯಮಂತ್ರಿಯಾದ ಗೆಹ್ಲೊಟ್, ಗುಜರಾತ್ ಚುನಾವಣೆಯ ಸಂದರ್ಭದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಗೆಹ್ಲೊಟ್ ಈಗ ಪಕ್ಷ ಸಂಘಟನೆಯ ಜವಾಬ್ದಾರಿಯಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಗೆಹ್ಲೊಟ್ ಒಬ್ಬರನ್ನು ಬಿಟ್ಟರೆ, ರಾಹುಲ್ ಗಾಂಧಿ ಆಯ್ದುಕೊಂಡಿರುವ ಹೊಸ ತಂಡದ ಎಲ್ಲರೂ ‘ಹೊಸ ಯುವ ಮುಖಗಳೇ’.
ಗೆಹ್ಲೊಟ್ ಈಗ ಇರುವ ಸ್ಥಾನದಲ್ಲಿ ಹಿಂದೆ ಸೋನಿಯಾಗಾಂಧಿಯವರು ಆಯ್ದುಕೊಂಡಿದ್ದ ಜನಾರ್ಧನ ದ್ವಿವೇದಿಯವರಿದ್ದರು. ಅವರಿಗೀಗ ಯಾವ ಮಹತ್ವದ ಜವಾಬ್ದಾರಿಗಳೂ ಇಲ್ಲ. ಹಾಗೆಯೇ ಮಹತ್ವದ ಜವಾಬ್ದಾರಿಗಳನ್ನು ಹೊಂದಿದ್ದ ದಿಗ್ವಿಜಯ ಸಿಂಗ್, ಮೋಹನ್ ಪ್ರಕಾಶ್, ಮಧುಸೂಧನ್ ಮಿಸ್ತ್ರಿ ಮತ್ತು ಬಿ.ಕೆ.ಹರಿಪ್ರಸಾದ್‍ರೂ ಸಹಾ ಯಾವ ರಾಜ್ಯದ ಜವಾಬ್ದಾರಿಗಳನ್ನೂ ಹೊಂದಿಲ್ಲ. ದಿಗ್ವಿಜಯ್‍ಸಿಂಗ್‍ರ ಜಾಗದಲ್ಲಿ ಕೆ.ಸಿ.ವೇಣುಗೋಪಾಲ್ ಮತ್ತು ಹರಿಪ್ರಸಾದ್ ಜಾಗದಲ್ಲಿ ಜಿತೇಂದ್ರ ಸಿಂಗ್ (ಒರಿಸ್ಸಾ ಉಸ್ತುವಾರಿ) ಇದ್ದರೆ, ಗೆಹ್ಲೊಟ್ ಖಾಲಿ ಮಾಡಿದ ಗುಜರಾತ್ ಉಸ್ತುವಾರಿಯನ್ನು ರಾಜೀವ್ ಸತವ್‍ರಿಗೆ ನೀಡಲಾಗಿದೆ. ಗುಜರಾತ್ ಪಿಸಿಸಿ ಅಧ್ಯಕ್ಷರಾಗಿದ್ದ ಭರತ್‍ಸಿಂಗ್ ಸೋಲಂಕಿಯವರ ಜಾಗದಲ್ಲಿ ಅಮಿತ್ ಚಾವ್ಡಾರನ್ನು ನೇಮಿಸಲಾಗಿದೆ. ಹಾಗೆಯೇ ದೀಪಕ್ ಬಾಬರಿಯಾ, ಆರ್‍ಪಿಎನ್ ಸಿಂಗ್, ಅವಿನಾಶ್ ಪಾಂಡೆ ಮತ್ತು ಪಿಎಲ್ ಪುನಿಯಾರಿಗೆ ಪದಾಧಿಕಾರಿಗಳಾಗಿ ಹೊಸ ರಾಜ್ಯ ಜವಾಬ್ದಾರಿಗಳನ್ನು ನೀಡಲಾಗಿದೆ. ಮಹಿಳಾ ಕಾಂಗ್ರೆಸ್‍ನ ಉಸ್ತುವಾರಿಯನ್ನೂ ಸಂಸತ್ಸದಸ್‍ಯೆ ಸುಷ್ಮಿತಾ ದೇಬ್‍ರಿಗೆ ನೀಡಲಾಗಿದೆ.
ಕರ್ನಾಟಕದಲ್ಲೂ ದಿನೇ ದಿನೇ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಭೈರೇಗೌಡರ ಸ್ಥಾನಮಾನಗಳು ಹೆಚ್ಚುತ್ತಾ ಇದ್ದವು. ಮೇಲೆ ಹೇಳಲಾದ ಹೆಸರುಗಳಾಚೆ ರಾಹುಲ್‍ಗಾಂಧಿ ಕೋರ್‍ಟೀಂ ಎಂದು ಕರೆಯಬಹುದಾದ ಇನ್ನೊಂದು ‘ಸುಪ್ತ’ ತಂಡಕ್ಕೂ ಇವರೀರ್ವರು ಹತ್ತಿರವಾಗಿದ್ದಾರೆ. ಹೊಸ ತಲೆಮಾರಿನ, ಕಾಂಗ್ರೆಸ್ಸಿಗೆ ನಿಷ್ಠೆ ಹೊಂದಿರುವ ಡೈನಾಮಿಕ್ ನಾಯಕರು ಎಂಬುದು ಇವರ ಬಗೆಗಿನ ಒಲವಿಗೆ ಕಾರಣ. ಆದರೆ, ಮಾಸ್ ಲೀಡರ್ ಎಂಬ ವಿಚಾರಕ್ಕೆ ಬಂದರೆ, ಅದು ಸಿದ್ದರಾಮಯ್ಯ ಮಾತ್ರವೆಂಬ ಅನಿಸಿಕೆ ರಾಹುಲ್ ಮತ್ತು ಅವರ ಕೋರ್ ಟೀಂನದ್ದಾಗಿತ್ತು. ಹಾಗಾಗಿಯೇ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯರನ್ನು ಪ್ರತಿಷ್ಠಾಪಿಸಲಾಯಿತು.
ಕೃಷ್ಣ ಭೈರೇಗೌಡ ಸಹಾ ಕೋರ್‍ಟೀಂಗೆ ಹತ್ತಿರದವರಾದರೂ, ಮುನ್ನುಗ್ಗುವ ಮತ್ತು ಎಲ್ಲರನ್ನೂ ಜೊತೆಗೊಯ್ಯಬಲ್ಲ ಛಾತಿ ಇಲ್ಲ ಎಂಬುದೂ, ಸ್ವತಃ ಕೃಷ್ಣ ಕೆಪಿಸಿಸಿಯಂತಹ ಮಹತ್ವದ ಜವಾಬ್ದಾರಿ ಹೊರಲು ಸಿದ್ಧರಿಲ್ಲದಿರುವುದು ಅವರನ್ನು ಸಂಪುಟದ ಒಬ್ಬ ಖಾಯಂ ಸದಸ್ಯರನ್ನಾಗಿಸಿಯಷ್ಟೇ ಉಳಿಸಿತು. ದಿನೇಶ್‍ರಲ್ಲೂ ಈ ಎರಡೂ ಅಂಶಗಳು ದೊಡ್ಡ ಪ್ರಮಾಣಕ್ಕೆ ಇಲ್ಲ. ಆದರೆ, ‘ಕೋರ್ ಟೀಂ’ಗೆ ಹತ್ತಿರದವರಲ್ಲಿ ಇವರು ಮಾತ್ರ ಜವಾಬ್ದಾರಿ ಹೊರಲು ಸಿದ್ಧವಿದ್ದರು. ಹಾಗಾಗಿ ಪ್ರಮುಖ ಜವಾಬ್ದಾರಿ ಕೊಡುವ ಮುಂದಾಲೋಚನೆಯ ಜೊತೆ ದಿನೇಶ್ ಗುಂಡೂರಾವ್‍ರಿಂದ ಮಂತ್ರಿ ಪದವಿಗೆ ರಾಜೀನಾಮೆ ಕೊಡಿಸಿ ಕಾರ್ಯಾಧ್ಯಕ್ಷರನ್ನಾಗಿಸಲಾಯಿತು. ದಿನೇಶ್ ದಕ್ಷಿಣ ಕರ್ನಾಟಕಕ್ಕೂ, ಎಸ್.ಆರ್.ಪಾಟೀಲ್ ಉತ್ತರ ಕರ್ನಾಟಕಕ್ಕೂ ಜವಾಬ್ದಾರರು ಎಂದು ಹೇಳಲಾಯಿತಾದರೂ, ಅಂತಹ ಕಾರ್ಯವಿಭಜನೆಯೇನೂ ಇರಲಿಲ್ಲ. ಪಕ್ಷದ ಸಂಘಟನಾ ಜವಾಬ್ದಾರಿ ದಿನೇಶ್‍ರದ್ದೇ ಆಗಿತ್ತು. ಚುನಾವಣೆಯ ಸಂದರ್ಭದಲ್ಲೂ ಹೈಕಮ್ಯಾಂಡ್ ತೀರ್ಮಾನಗಳನ್ನು ಜಾರಿ ಮಾಡುವ ಪ್ರಧಾನ ಜವಾಬ್ದಾರಿ ಅವರದ್ದೇ ಆಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದರಲ್ಲದೇ, ಯಾರೊಂದಿಗೆ ಹೆಚ್ಚಿನ ವಿರೋಧ ಕಟ್ಟಿಕೊಳ್ಳದೇ ತನಗೆ ಕೊಟ್ಟ ಕೆಲಸವನ್ನು ಶಿಸ್ತಿನಿಂದಲೂ ನಿಭಾಯಿಸಿದರು. ವಿವಿಧ ಬಗೆಯ ಜನರೊಂದಿಗೆ ವ್ಯವಹರಿಸುವಾಗ, ಎಲ್ಲರನ್ನೂ ಸಮಾಧಾನ ಮಾಡಿಕೊಂಡು ಹೋಗುವ ಕುಶಲತೆಯನ್ನೂ ಪ್ರದರ್ಶಿಸಿದ್ದರು. ಆದರೆ, ಅವರು ಜನನಾಯಕರಾಗಿ ಸ್ಥಾಪಿತರಾದವರಲ್ಲ.
ವಾಸ್ತವದಲ್ಲಿ ‘ನಿಜವಾದ ಜನನಾಯಕ’ರಾಗಿ ಈ ಅವಧಿಯಲ್ಲಿ ಹೊಸದಾಗಿ ಹೊರಹೊಮ್ಮಿದ್ದು ಎಂ.ಬಿ.ಪಾಟೀಲ್ ಮಾತ್ರ. ಯು.ಟಿ.ಖಾದರ್‍ರನ್ನು ಅವರ ಅಭಿಮಾನಿಗಳು ಹಾಗೆಂದು ಸಂಬೋಧಿಸುತ್ತಿದ್ದರೂ, ಅವರು ತಮ್ಮ ಕ್ಷೇತ್ರದ ಹೊರಗೆ ಕೆಲಸ ಮಾಡುವ ಛಾತಿ ತೋರುತ್ತಿಲ್ಲ. ಸತೀಶ್ ಜಾರಕಿಹೊಳಿ ಅತ್ತಲಾಗಿ ವೈಚಾರಿಕ ನೆಲೆಯ ಪ್ರಗತಿಪರ ನಾಯಕರೂ ಆಗದೇ, ಇತ್ತಕಡೆ ಎಲ್ಲರನ್ನೂ ಜೊತೆಗೊಯ್ಯಬಲ್ಲ ರಾಜಕೀಯ ಸಂಘಟಕನೂ ಆಗದೇ ಉಳಿದುಬಿಟ್ಟರು. ಕಣ್ಣೆದುರಿಗೇ ಶ್ರೀರಾಮುಲು ಮಾದರಿಯ ನಾಯಕತ್ವವು ನಾಯಕ ಸಮುದಾಯವನ್ನು ಬಿಜೆಪಿಯ ಕಡೆಗೆ ಕೊಂಡೊಯ್ಯುತ್ತಿದ್ದರೂ, ಅದನ್ನು ನಿರ್ಣಾಯಕವಾಗಿ ತಿರುಗಿಸುವ ಸಾಧ್ಯತೆಯನ್ನು ಸೂಕ್ತ ಮುನ್ನೋಟವಿಲ್ಲದೇ ಕಳೆದುಕೊಂಡರು. ಉಳಿದಂತೆ, ಟಿ.ಬಿ.ಜಯಚಂದ್ರ ಅಥವಾ ಎಚ್.ಕೆ.ಪಾಟೀಲರ ಥರದ ‘ಹಿರಿಯ’ರನ್ನು ರಾಹುಲ್‍ಗಾಂಧಿ ಆಯ್ದುಕೊಳ್ಳುವ ಸಾಧ್ಯತೆಯೇ ಇರಲಿಲ್ಲ.
ಡಿ.ಕೆ.ಶಿವಕುಮಾರ್‍ರ ದುರಂತವೇ ಬೇರೆ. ಮೇಲ್ನೋಟಕ್ಕೆ ಜನನಾಯಕರಂತೆ ತೋರುವ, ಭಾರೀ ಡೈನಾಮಿಕ್ ಆದ, ಹಣದ ಥೈಲಿಯನ್ನು ಹೊಂದಿರುವ ಡಿ.ಕೆ. ಹಿಂದೆ ಎಂ.ಎಲ್.ಎಗಳಿಲ್ಲವೆಂಬುದು ಹೈಕಮ್ಯಾಂಡ್‍ಗೆ ಸ್ಪಷ್ಟವಾಗಿ ಗೊತ್ತು. ಹಗರಣಗಳನ್ನು ಮೈಮೇಲೆ ಹೊತ್ತು ಕೊಂಡಿರುವವರನ್ನು ಮುಂಚೂಣಿಗೆ ತರುವುದು ರಾಹುಲ್‍ಗಾಂಧಿಗೆ ಇಷ್ಟವೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಎಲ್ಲರನ್ನೂ ಜೊತೆಗೊಯ್ಯುವ ವ್ಯಕ್ತಿ ಅವರಲ್ಲ.
ದಿನೇಶ್ ಗುಂಡೂರಾವ್ ಜನನಾಯಕರಲ್ಲ; ದೊಡ್ಡ ಜಾತಿಗಳ ಬೆಂಬಲವಿಲ್ಲ, ಸಂಪನ್ಮೂಲ ಹೊಂದಿಸಿಕೊಳ್ಳುವ ಸಾಮಥ್ರ್ಯವನ್ನೂ ತೋರಿಸಿಲ್ಲ. ಜಾತಿ ಬೆಂಬಲದ ಕಾರಣಕ್ಕೇ ಕಾರ್ಯಾಧ್ಯಕ್ಷರನ್ನಾಗಿ ಈಶ್ವರ ಖಂಡ್ರೆಯವರನ್ನು ನೇಮಿಸಿದಂತಿದೆ. ಹಾಗೆ ನೋಡಿದರೆ ಅದಕ್ಕೆಲ್ಲಾ ಸೂಕ್ತವಿದ್ದುದು ಎಂ.ಬಿ.ಪಾಟೀಲ್. ಆದರೆ, ಎಂತಹುದೇ ಸಂದರ್ಭದಲ್ಲೂ ಪಕ್ಷಕ್ಕೆ ತಮ್ಮ ನಿಷ್ಠೆ ಕದಲುವುದಿಲ್ಲ ಎಂಬ ಧೋರಣೆಯನ್ನು ಅವರು ಸಾಬೀತುಪಡಿಸಿಲ್ಲ. ಎಲ್ಲರನ್ನೂ ಜೊತೆಗೊಯ್ಯುವ ಮನೋಭಾವಕ್ಕಿಂತ ‘ತನ್ನ ಪಾಲು ದಕ್ಕದೇ ಬಿಡುವುದಿಲ್ಲ’ ಎಂಬುದನ್ನು ತೋರಿದ್ದಾರೆ. ಎಂ.ಬಿ.ಪಾಟೀಲರನ್ನು ಅಧ್ಯಕ್ಷರನ್ನಾಗಿಸಿದರೆ, ಕಾರ್ಯಾಧ್ಯಕ್ಷರಿಗೆ ಅವಕಾಶವಿರುವುದಿಲ್ಲ. ಹಾಗೆಂದು, ದಿನೇಶ್ ಗುಂಡೂರಾವ್ ಕೆಳಗೆ ಅವರಿಗಿಂತ ಹಿರಿಯರೂ, ಹೆಚ್ಚು ಸಾಮಥ್ರ್ಯವುಳ್ಳವರೂ ಆದ ಪಾಟೀಲರನ್ನು ಕಾರ್ಯಾಧ್ಯಕ್ಷರನ್ನಾಗಿಸುವುದು ಸಾಧ್ಯವಿಲ್ಲ.
ಇವೆಲ್ಲಾ ಕಾರಣಗಳಿಂದ ದಿನೇಶ್ ಗುಂಡೂರಾವ್ ಮತ್ತು ಖಂಡ್ರೆ ನೇಮಕಗೊಂಡಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅಹಿಂದ ಹಿನ್ನೆಲೆಯ ನಾಯಕರಾದ ಸಿದ್ದರಾಮಯ್ಯನವರಿದ್ದಾರೆ ಮತ್ತು ಉಪಮುಖ್ಯಮಂತ್ರಿಗಳಾದ ದಲಿತ ಹಿನ್ನೆಲೆಯ ಜಿ.ಪರಮೇಶ್ವರ್ ಇದ್ದಾರೆ. ಲೋಕಸಭೆಯ ಕಾಂಗ್ರೆಸ್ ನಾಯಕ ಸ್ಥಾನದಲ್ಲಿ ಖರ್ಗೆಯವರೂ ಇದ್ದಾರೆ. ಹೀಗಾಗಿ ‘ಮೇಲ್ಜಾತಿ ಹಿನ್ನೆಲೆಯ ಇಬ್ಬರು’ ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿರುವುದು ಸಮತೋಲನದ ದೃಷ್ಟಿಯಿಂದ ದೊಡ್ಡ ತಪ್ಪಲ್ಲವಾದರೂ, ಹೊಸ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು ತಮ್ಮ ಸಾಮಥ್ರ್ಯವನ್ನಿನ್ನೂ ಸಾಬೀತುಪಡಿಸಬೇಕಿದೆ.
ಹೊಸ ನಾಯಕರ ಮುಂದಿವೆ ಸವಾಲುಗಳು
ವಾಸ್ತವದಲ್ಲಿ ಅಹಿಂದ ಪರವಾದ ರಾಜಕಾರಣವನ್ನು ಒಂದು ಮಟ್ಟಿಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಮಾಡಿತ್ತಾದರೂ, ಕಾಂಗ್ರೆಸ್ ಪರವಾಗಿ ನಿಂತಿದ್ದು ಮುಸ್ಲಿಮರು ಮತ್ತು ಕುರುಬರು ಮಾತ್ರ. ದಲಿತ ಸಮುದಾಯದ ಎಡಗೈ ಬಣವು ಗಟ್ಟಿಯಾಗಿ ನಿಲ್ಲಲಿಲ್ಲ; ವಾಲ್ಮೀಕಿ ಸಮುದಾಯ ಹಾಗೂ ಸ್ಪøಶ್ಯ ಎಸ್‍ಸಿ ಜಾತಿಗಳು ಕಾಂಗ್ರೆಸ್‍ನಿಂದ ದೂರ ಹೋಗಿ ಬಹಳ ಕಾಲವಾಗಿದೆ. ಇನ್ನು ಹಿಂದುಳಿದವರಲ್ಲೂ ಚಿಕ್ಕಪುಟ್ಟ ಜಾತಿಗಳಲ್ಲಿ ಬಹಳಷ್ಟು ಸಮುದಾಯಗಳು ಕಾಂಗ್ರೆಸ್‍ನೊಟ್ಟಿಗೆ ಇಲ್ಲ. ಸಿದ್ದರಾಮಯ್ಯನವರು ವಿಫಲವಾದದ್ದು ಇಲ್ಲಿಯೇ. ವಿವಿಧ ಪ್ರದೇಶಗಳಲ್ಲಿ ಬಿಲ್ಲವರು, ದೀವರು, ಈಡಿಗರು ಎಂದು ಕರೆಯಲ್ಪಡುವ ಸಮುದಾಯ, ಗಂಗಾಮತಸ್ಥರು, ಬೆಸ್ತರು, ಮೊಗವೀರರು ಎಂದು ಕರೆಯಲ್ಪಡುವ ಮೀನುಗಾರ ಸಮುದಾಯ, ಐದು ಭಿನ್ನ ಪಂಗಡಗಳುಳ್ಳ ವಿಶ್ವಕರ್ಮ ಸಮುದಾಯಗಳು ಕಡಿಮೆ ಸಂಖ್ಯೆಯಲ್ಲೇನೂ ಇಲ್ಲ. ಹಾಗೆಯೇ ಕುಂಬಾರ, ಮಡಿವಾಳ, ಸವಿತಾ ಸಮಾಜವಾದಿಯಾಗಿ ಅದೆಷ್ಟೋ ಜಾತಿಗಳು ನಾಡಿನುದ್ದಕ್ಕೂ ಹರಡಿಕೊಂಡಿವೆ. ಇದ್ದುದರಲ್ಲಿ ಮೈಸೂರು ಭಾಗದ ಕೆಲವು ಜಾತಿಗಳನ್ನು ಮಾತ್ರ ಸಿದ್ದರಾಮಯ್ಯನವರು ಹಿಡಿದಿಟ್ಟುಕೊಂಡಿದ್ದಾರೆ. ಅದೇನೇ ಇದ್ದರೂ, ಅಹಿಂದದಲ್ಲಿ ಗಣನೀಯ ಭಾಗ ಕಾಂಗ್ರೆಸ್‍ನೊಳಗೆ ಇಲ್ಲ. ಸ್ವತಃ ಅಹಿಂದ ನಾಯಕನಾಗಿ ಸಿದ್ದರಾಮಯ್ಯ ಸಾಧಿಸಲು ಎಡವಿದ ಸವಾಲನ್ನು ಇದೀಗ ದಿನೇಶ್ ಮತ್ತು ಖಂಡ್ರೆಯ ಹೆಗಲೇರಿವೆ.
ದಿನೇಶ್ ಗುಂಡೂರಾವ್ ಬ್ರಾಹ್ಮಣ ಸಮುದಾಯದಾಗಿದ್ದು, ಆ ಸಮುದಾಯವನ್ನು ಮೈಂಟೇನ್ ಮಾಡುವುದನ್ನು ಅವರು ಸಾಕಷ್ಟು ಕಾಲದಿಂದ ಮಾಡಿಕೊಂಡು ಬಂದಿದ್ದಾರೆ. ಆದರೆ, ಹಿಂದಿನ ಕಾಂಗ್ರೆಸ್ ಬ್ರಾಹ್ಮಣರು ಇಂದು ಉಳಿದುಕೊಂಡಿಲ್ಲ ಮತ್ತು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿರುವ ದಿನೇಶ್ ಸಂಘಪರಿವಾರದ ಮುಂದಿನ ಟಾರ್ಗೆಟ್ ಆಗಿರುತ್ತಾರೆ. ಹೀಗಾಗಿ ವೈದಿಕರನ್ನು ಒಲಿಸಿಕೊಳ್ಳುವ ಎಡಬಿಡಂಗಿ ಕ್ರಮಗಳಿಗೆ ಕೈ ಹಾಕಬಾರದು. ಬದಲಿಗೆ ರಾಜ್ಯದ ಎಲ್ಲಾ ದುಡಿವ, ಶೂದ್ರ ಸಮುದಾಯಗಳನ್ನು ಒಳಗೊಳ್ಳುವ ಕನ್ನಡ ಪರಂಪರೆಯನ್ನು ಮುಂದಿಟ್ಟುಕೊಂಡು ಹೋಗಬೇಕು.
ಈ ಜಾತಿ ಸಮೀಕರಣವನ್ನು ನಿಭಾಯಿಸುತ್ತಲೇ ಇಡಿ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದ ಮಟ್ಟಿಗೆ ಪುನರ್‍ರೂಪಿಸುವ ಕೆಲಸವನ್ನೂ ಇವರು ಮಾಡಬೇಕಿದೆ. ಯಾಕೆಂದರೆ ಖುದ್ದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸೈದ್ಧಾಂತಿಕ ಬುನಾದಿಯನ್ನು ಕಳೆದುಕೊಂಡು ಒಂದು ಅಧಿಕಾರ ಲಾಲಸಿಗರ ರಾಜಕೀಯ ಪಕ್ಷ ಎಂಬ ಹಣೆಪಟ್ಟಿಗೆ ಗುರಿಯಾಗಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿರುವ ಕಾರ್ಯಕರ್ತರು ಸಹಾ ತಮ್ಮ ರಾಜಕೀಯ ಅವಕಾಶಗಳಿಗಾಗಿ ಅಲ್ಲಿದ್ದಾರೆಯೇ ಹೊರತು ಆ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅಲ್ಲ. ಹಾಗಾಗಿ ಕಾಂಗ್ರೆಸ್‍ನ ಪಕ್ಷದ ಪರಂಪರೆ ಬಿಜೆಪಿಗಿಂತ ಹೇಗೆ ಭಿನ್ನ ಎಂಬುದನ್ನು ಮೊದಲು ಪಕ್ಷದ ಕಾರ್ಯಕರ್ತರಿಗೆ ತಿಳಿಸಿ, ಲಕ್ಷಾಂತರ ಬದ್ಧ ಕಾರ್ಯಕರ್ತರ ಪಡೆ ಕಟ್ಟುವ ಕೆಲಸ ಮೊದಲು ಆಗಬೇಕಿದೆ. ಆ ಕಾರಣಕ್ಕೇ ರಾಹುಲ್‍ಗಾಂಧಿ ಹೊಸ ಹುಮ್ಮಸ್ಸಿನ ಯುವಕರಿಗೇ ಮಣೆ ಹಾಕುತ್ತಾ ಬಂದಿರೋದು. ದಿನೇಶ್‍ಗೆ ಕೆಪಿಸಿಸಿ ಗಾದಿ ಒಲಿದು ಬಂದಿರುವುದು ಅದೇ ಕಾರಣಕ್ಕೆ. ಈಗವರು ಈ ಬೃಹತ್ ಸಾಹಸಕ್ಕೆ ಹೇಗೆ ಕೈಹಾಕಲಿದ್ದಾರೆ ಅನ್ನೋದು ಅವರ ಭವಿಷ್ಯವನ್ನು ಮಾತ್ರವಲ್ಲ, ಇಡೀ ಕೆಪಿಸಿಸಿ ಭವಿಷ್ಯವನ್ನೇ ನಿರ್ಧರಿಸಲಿದೆ.
ಇನ್ನು ದಿನೇಶ್ ಗುಂಡುರಾವ್ ಟೀಮಿನ ಮುಂದಿರುವ ಮತ್ತೊಂದು ನಾಜೂಕಿನ ಸವಾಲೆಂದರೆ ಮೀಡಿಯಾಗಳನ್ನು ನಿಭಾಯಿಸುವ ತುರ್ತು. ಈ ವಿಚಾರದಲ್ಲಿ ದೇಶಮಟ್ಟಕ್ಕಿಂತ ಕರ್ನಾಟಕದಲ್ಲಿ ಕಾಂಗ್ರೆಸ್ ಕೆಳಗಿಳಿದಿದೆ. ಕರ್ನಾಟಕದ ದೃಶ್ಯ ಮಾಧ್ಯಮಗಳ ಟಿಆರ್‍ಪಿಯ ಶೇ.85ರಷ್ಟು ಮತ್ತು ವೃತ್ತಪತ್ರಿಕೆಗಳ ಒಟ್ಟಾರೆ ಪ್ರಸರಣದ ಶೇ.85ರಷ್ಟು (ಪ್ರಜಾವಾಣಿಯ ಒಂದಷ್ಟು ಭಾಗವೂ ಸೇರಿ) ಕಾಂಗ್ರೆಸ್ ವಿರೋಧಿಯಾಗಿದೆ ಎಂಬುದನ್ನು ಗಮನಿಸಿದರೆ ಇದರ ಮಹತ್ವ ಅರ್ಥವಾಗುತ್ತದೆ. ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾದ ಕಂಟೆಂಟ್ ಒಂದಷ್ಟು ಆಕ್ರಮಣಕಾರಿಯಾಗಿತ್ತಾದರೂ, ಅದಕ್ಕೆ ಒಂದು ಕಾರ್ಯತಂತ್ರವೇ ಇರಲಿಲ್ಲ. ಜೊತೆಗೆ ತಾನು ತಯಾರಿಸಿದ ಅತ್ಯುತ್ತಮ ಪೋಸ್ಟ್‍ಗಳನ್ನು ಎಲ್ಲರಿಗೂ ತಲುಪಿಸಬೇಕಾದ ಯಂತ್ರಾಂಗವೇ ಇರಲಿಲ್ಲ. ತಮ್ಮದೇ ಆದ ಸಮರ್ಥ ಟಿವಿ ಚಾನೆಲ್ ಮತ್ತು ಪತ್ರಿಕೆಗಳಿಲ್ಲದ ಯಾವ ರಾಜಕೀಯ ಪಕ್ಷವೂ ಇಂದು ಯಶಸ್ವಿಯಾಗಲಾರದು ಎನ್ನುವ ಪರಿಸ್ಥಿತಿಯಲ್ಲಿ ಜನರಲ್ಲಿ ತಮಗೆ ಪೂರಕ ವಾತಾವರಣ ಸೃಷ್ಟಿಸಲು ಮಾಧ್ಯಮವನ್ನು ಸಮರ್ಪಕವಾಗಿ ನಿಭಾಯಿಸುವ ಇಲ್ಲವೇ ಇಂಥಾ ಒನ್‍ಸೈಡೆಟ್ ಬೊಗಳೆ ಮಾಧ್ಯಮಗಳನ್ನು ಸಮರ್ಥವಾಗಿ ಎದುರಿಸುವ ಚಕ್ಯತೆಯನ್ನು ಕೆಪಿಸಿಸಿ ಹೊಸ ಟೀಮು ಪ್ರದರ್ಶಿಸಲೇಬೇಕಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಕರ್ನಾಟಕದ ರೈತರ ಅಸಲೀ ಸಮಸ್ಯೆಗಳನ್ನು ಸೂಕ್ತವಾಗಿ ಅರ್ಥಮಾಡಿಕೊಂಡು ಸ್ಪಂದಿಸುವಂತೆ ಪಕ್ಷವನ್ನು ಸಜ್ಜುಗೊಳಿಸುವುದರ ಜೊತೆಗೆ ಸರ್ಕಾರವನ್ನೂ ನಿರ್ದೇಶಿಸಬೇಕಿದೆ. ಯಾಕೆಂದರೆ, ಪ್ರಸ್ತುತ ಸಮ್ಮಿಶ್ರ ಸರ್ಕಾರ ರೈತಪರ ಯೋಜನೆಗಳನ್ನು ತಂದಾಗ್ಯೂ, ಅದರ ಸಂಪೂರ್ಣ ಕ್ರೆಡಿಟ್ಟು ಮಣ್ಣಿನ ಮಕ್ಕಳ ಖ್ಯಾತಿಯ ದೇವೇಗೌಡರ ಜೆಡಿಎಸ್‍ಗೆ ಸಂದಾಯವಾಗುವ ಸಾಧ್ಯತೆಯೇ ಹೆಚ್ಚು. ಮೈತ್ರಿಧರ್ಮಕ್ಕೆ ಭಂಗ ತಂದುಕೊಳ್ಳದೆ, ಸರ್ಕಾರದ ರೈತಪರ ಯೋಜನೆಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಪಂದನೆಯೂ ಇದೆ ಎಂಬ ಸಂದೇಶವನ್ನು ಜನರಿಗೆ ರವಾನಿಸಬೇಕೆಂದರೆ ಅದಕ್ಕೆ ಕೆಪಿಸಿಸಿ ಕಾರ್ಯೋನ್ಮುಖವಾಗಲೇಬೇಕಿದೆ. ದೇಶದಲ್ಲಿ ಎರಡನೇ ಅತೀ ದೊಡ್ಡ ಬರಪೀಡಿತ ಪ್ರದೇಶವನ್ನು ಹೊಂದಿರುವ ರಾಜ್ಯವಾಗಿರುವ ಕರ್ನಾಟಕಕ್ಕೆ ವಿಶೇಷ ಅನುದಾನ ಕೊಡಲು ಕೇಂದ್ರದ ಮೇಲೆ ಒತ್ತಡ ಹಾಕುವುದರ ಮುಖಾಂತರ ಇದನ್ನು ಸಾಧಿಸಬಹುದು.
ಇವೆಲ್ಲವನ್ನೂ ಮಾಡಬೇಕೆಂದರೆ, ಕೆಪಿಸಿಸಿ ತಂಡವೂ ಪುನರ್‍ರಚನೆಗೊಳ್ಳಬೇಕು ಮತ್ತು ಮೇಲಿನೆಲ್ಲಾ ಕ್ಷೇತ್ರಗಳಲ್ಲಿನ ಪರಿಣಿತರು ಮತ್ತು ಕೆಲಸ ಮಾಡಿ ಬಲ್ಲ ತಜ್ಞರನ್ನು ಒಳಗೊಳ್ಳಬೇಕು. ಹಾಗಿಲ್ಲವಾದರೆ, ಯಾವ ಹೊಸತನವೂ ಇಲ್ಲದೇ, ಹಳೆಯ ಮಾಸ್ ಆಧಾರಿತ ಪಕ್ಷವಾಗಿಯೂ ಉಳಿಯದೇ ಕಾಂಗ್ರೆಸ್ ಮತ್ತಷ್ಟು ಕುಸಿಯುತ್ತದೆ. ಈ ಎಚ್ಚರಿಕೆಯನ್ನು ಹೊಸ ಅಧ್ಯಕ್ಷರು ಮತ್ತು ಕಾಯಾಧ್ಯಕ್ಷರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ ಇಲ್ಲವೋ ಎಂಬುದು ತಿಳಿಯಲು ಮುಂದಿನ ಆರು ತಿಂಗಳ ನಡೆಗಳೇ ಸಾಕು.

– ನೀಲಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read