Homeಮುಖಪುಟಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ?

ಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ?

ಯಡಿಯೂರಪ್ಪನವರ ಸರ್ಕಾರಕ್ಕೆ ಒಳಗಿನಿಂದಲೇ ಬಿಕ್ಕಟ್ಟು ತರಬಯಸಿರುವ ಶಕ್ತಿಗಳು ಪಾದರಾಯನಪುರದ ಘಟನೆಯನ್ನು ಬಳಸಿಕೊಳ್ಳುತ್ತಿವೆಯೇ ಎಂಬ ಸುದ್ದಿಯ ವಿಶ್ಲೇಷಣೆ

- Advertisement -
- Advertisement -

ಪಾದರಾಯನಪುರದ ವಿಚಾರಕ್ಕೆ ಹೋಗುವ ಮುನ್ನ ವೈಟ್‍ಫೀಲ್ಡ್ ವಿಚಾರಕ್ಕೆ ಹೋಗಬೇಕಿದೆ. ಏಕೆಂದರೆ ಪಾದರಾಯನಪುರದ ರೀತಿಯಲ್ಲೇ ಅಲ್ಲೂ ಸಹಾ ಮಾಧ್ಯಮಗಳು (ವಿಶೇಷವಾಗಿ ಟಿವಿ ಚಾನೆಲ್‍ಗಳು) ಅಧಿಕಾರಿಗಳನ್ನು ಒಂದು ಕಾರ್ಯಾಚರಣೆ ಮಾಡಲೇಬೇಕೆನ್ನುವ ಒತ್ತಡ ನಿರ್ಮಿಸಿ ಕಾನೂನಿಗೆ ವಿರುದ್ಧವಾದ ಕೆಲಸ ನಡೆದಿತ್ತು. ಅಂತಿಮವಾಗಿ ಇಬ್ಬರು ತಳಹಂತದ ಅಧಿಕಾರಿಗಳು ಶಿಕ್ಷೆ ಅನುಭವಿಸಿದರು ಹಾಗೂ ಹೈಕೋರ್ಟ್ ಸಹಾ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಪಾದರಾಯನಪುರದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನ ಇದೆಯಾದರೂ ಎರಡೂ ಕಡೆ ಮುಖ್ಯಮಂತ್ರಿಯವರಿಗಿಂತ ಭಿನ್ನವಾದ ಶಕ್ತಿಗಳು ‘ಕಾರ್ಯಾಚರಣೆ’ಯಲ್ಲಿದ್ದರು ಎಂಬುದು ಖಚಿತವಾಗಿದೆ.

ವೈಟ್‍ಫೀಲ್ಡ್‍ನ ಬಳಿಯ ಮುನೆಕೊಳಲು, ಕರಿಯಮ್ಮನ ಅಗ್ರಹಾರ, ಕಾಡುಬಿಸನಹಳ್ಳಿ ಮತ್ತು ತುಬರಹಳ್ಳಿಗಳ 200 ಗುಡಿಸಲುಗಳನ್ನು ಜನವರಿ 19ರ ಬೆಳಿಗ್ಗೆ ಧ್ವಂಸ ಮಾಡಲಾಗಿತ್ತು. ಯಾವುದೇ ಕಟ್ಟಡಗಳನ್ನು ಒಡೆಯುವುದು ಪೊಲೀಸರ ಕೆಲಸವಲ್ಲ; ಬಿಬಿಎಂಪಿಯವರು ಅದನ್ನು ಮಾಡಬೇಕಿತ್ತು. ವಾಸ್ತವದಲ್ಲಿ ಬಿಬಿಎಂಪಿಯ ಎಇಇ ಅಧಿಕೃತವಾಗಿ ಸ್ಥಳೀಯ ಠಾಣೆಗೆ ಪತ್ರ ಬರೆದು ಧ್ವಂಸಕ್ಕೆ ರಕ್ಷಣೆಯನ್ನೂ ಕೋರಿದ್ದರು. ಆದರೆ, ಧ್ವಂಸ ಮಾಡಿದ್ದು ಪೊಲೀಸರು ಹಾಗೂ ಕಾರ್ಯಾಚರಣೆ ನಡೆಯುವಾಗ ಬಿಬಿಎಂಪಿಯವರು ಅಲ್ಲಿ ಹಾಜರಿರಲೇ ಇಲ್ಲ. ಅಂತಿಮವಾಗಿ ಗೊತ್ತಾಗಿದ್ದೇನೆಂದರೆ ಆ ಕಾರ್ಯಾಚರಣೆಯ ಕುರಿತು ವಲಯ ಆಯುಕ್ತರಾದ ಐಎಎಸ್ ಅಧಿಕಾರ ರಂದೀಪ್ ಅವರಿಗೆ ತಿಳಿದಿರಲೇ ಇಲ್ಲ. ನಾನುಗೌರಿ.ಕಾಂ ಅವರನ್ನು ಮಾತಾಡಿಸಿದಾಗ ಅವರೇ ಅದನ್ನು ಖಚಿತ ಪಡಿಸಿದ್ದರು.

ಮಾರತ್ತಹಳ್ಳಿಯಲ್ಲಿ ಗುಡಿಸಲು ಧ್ವಂಸ
ಮಾರತ್ತಹಳ್ಳಿಯ ಗುಡಿಸಲು ಧ್ವಂಸ

ರಾಜಕೀಯ ಹುನ್ನಾರಕ್ಕೆ ಬಲಿಯಾದ ತಳಹಂತದ ಅಧಿಕಾರಿಗಳು

ನಂತರ ಸದರಿ ಎಇಇಯನ್ನು ಮಾತೃ ಇಲಾಖೆಗೆ ಕಳಿಸಿದ್ದಲ್ಲದೇ ಶಿಸ್ತು ಕ್ರಮಕ್ಕೂ ಶಿಫಾರಸ್ಸು ಮಾಡಲಾಗಿತ್ತು. ಅದೇ ರೀತಿಯಲ್ಲಿ ಮಾರತ್ತಹಳ್ಳಿಯ ಇನ್ಸ್‍ಪೆಕ್ಟರ್ ಬಿ.ಪಿ.ಗಿರೀಶ್‍ರನ್ನು ಅಮಾನತುಗೊಳಿಸಲಾಗಿತ್ತು. ಆತ ಬಿಬಿಎಂಪಿಯ ಅಧಿಕಾರಿಯ ಪತ್ರವನ್ನು ತನ್ನ ಡಿಸಿಪಿಗೆ ತೋರಿಸಿ ರಕ್ಷಣೆ ನೀಡಲು ಅನುಮತಿ ಪಡೆದುಕೊಂಡಿದ್ದರಾದರೂ (ಇದನ್ನು ವೈಟ್‍ಫೀಲ್ಡ್ ಡಿಸಿಪಿ ಅನುಚೇತ್ ನಮಗೆ ಖಚಿತಪಡಿಸಿದ್ದರು) ತಾನೇ ನಿಂತು ಗುಡಿಸಲು ಧ್ವಂಸ ಮಾಡಿದ್ದು ಯಾರ ಅಪ್ಪಣೆಯ ಮೇರೆಗೆ ಎಂದು ಹೇಳಿರಲಿಲ್ಲ. ಇಬ್ಬರ ಮೇಲೂ ನಡೆದ ತನಿಖೆಯು ಎಲ್ಲಿಗೆ ಬಂದಿದೆ, ಇದರ ಹಿಂದಿದ್ದ ಕಾಣದ ಕೈಗಳು ಯಾರು ಎಂಬುದನ್ನು ವಿಚಾರಿಸಲು ಸದರಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು ವಿವರ ತಿಳಿದುಬಂದ ನಂತರ ಇಲ್ಲಿ ಅಪ್‍ಡೇಟ್ ಮಾಡಲಾಗುವುದು.
ಪೂರ್ವ ಭಾರತ ಮತ್ತು ಉತ್ತರ ಕರ್ನಾಟಕದವರ ಷೆಡ್‌ಗಳ ನಾಶ
ಪೂರ್ವ ಭಾರತ ಮತ್ತು ಉತ್ತರ ಕರ್ನಾಟಕದವರ ಷೆಡ್‌ಗಳ ನಾಶ
ಆದರೆ, ಮೇಲ್ನೋಟಕ್ಕೆ ಖಚಿತವಾದ ಸಂಗತಿ ಏನಾಗಿತ್ತೆಂದರೆ ಸುವರ್ಣ ನ್ಯೂಸ್ ಈ ಕುರಿತು ನಡೆಸಿದ ನಕಲಿ ಕುಟುಕು ಕಾರ್ಯಾಚರಣೆ (ನಕಲಿ ಏಕೆಂದರೆ ಅದರಲ್ಲಿ ವಾಸ್ತವವನ್ನು ತಿರುಚಲಾಗಿತ್ತು) ಮತ್ತು ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿಯವರು ಹಾಕಿದ ಒತ್ತಡವೇ ಈ ಗುಡಿಸಲು ನಾಶಕ್ಕೆ ಕಾರಣವಾಗಿತ್ತು. ಅಕ್ರಮ ಬಾಂಗ್ಲಾದೇಶೀಯರು ಅಲ್ಲಿದ್ದಾರೆಂದು ಹೇಳಲಾಗಿತ್ತಾದರೂ, ಅಂತಿಮವಾಗಿ ಅಲ್ಲಿ ಒಬ್ಬರೂ ಬಾಂಗ್ಲಾದೇಶೀಯರು ಇರಲಿಲ್ಲ; ಮತ್ತು ಪೂರ್ವ ಭಾರತ ಮತ್ತು ಉತ್ತರ ಕರ್ನಾಟಕದ ಜನರು ವಾಸವಾಗಿದ್ದ ಸುಮಾರು 200 ಗುಡಿಸಲುಗಳನ್ನು ಒಡೆದು ಹಾಕಲಾಗಿತ್ತು. ಅಂತಿಮವಾಗಿ, ಹೈಕೋರ್ಟ್ ಈ ವಿಚಾರದಲ್ಲಿ ಛೀಮಾರಿ ಹಾಕಿತು. ಆದರೆ ಗುಡಿಸಲು ಕಳೆದುಕೊಂಡವರು, ಕಳೆದುಕೊಂಡರು ಅಷ್ಟೇ.
ಸರ್ಕಾರವು ಛೀಮಾರಿ ಹಾಕಿಸಿಕೊಂಡ ಮಾರತ್ತಹಳ್ಳಿ ಪ್ರಕರಣದಲ್ಲಿ ಯಾರ ಹಿತಾಸಕ್ತಿ ಅಡಗಿತ್ತು ಎಂಬುದು ಮೇಲಿನ ಪ್ರಕರಣದಲ್ಲಿ ಗೊತ್ತಾಗುತ್ತದೆ. ಪಾದರಾಯನಪುರದಲ್ಲೂ ಕೆಲವು ವೈರುಧ್ಯಗಳು ಎದ್ದು ಕಾಣುತ್ತಿವೆ.

ಪುಂಡಾಟಿಕೆಯನ್ನು ಹಿಗ್ಗಿಸುತ್ತಿರುವ ಪ್ರಾಪಗಾಂಡಾ ಯಂತ್ರಾಂಗ

ಪಾದರಾಯನಪುರದಲ್ಲಿ ಪುಂಡ ಯುವಕರು ಸೀಲ್‍ಡೌನ್ ತಗಡು ಶೀಟ್‍ಗಳನ್ನು ಕಿತ್ತುಹಾಕಿದ್ದು, ಶಾಮಿಯಾನ ಕಿತ್ತಿದ್ದು, ಬೀದಿ ದೀಪಗಳಿಗೆ ಕಲ್ಲು ಹೊಡೆದದ್ದು ಅಕ್ಷಮ್ಯವಾದುದು ಮತ್ತು ಅದಕ್ಕಾಗಿ ಅವರ ಮೇಲೆ ಕಾನೂನುಕ್ರಮವೂ ಆಗಬೇಕಿದೆ. ಇದನ್ನು ಸ್ಥಳೀಯ ಶಾಸಕ, ಕಾರ್ಪೋರೇಟರ್, ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಆಚೆಗೆ ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನ ಮಾಡುವುದೂ ಬಹಳ ಮುಖ್ಯ, ಆ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದರೆ ನಂತರದಲ್ಲಿ ಇದು ತೆಗೆದುಕೊಂಡ ಮತ್ತು ತೆಗೆದುಕೊಳ್ಳುತ್ತಿರುವ ತಿರುವುಗಳು ಅನುಮಾನ ಹುಟ್ಟಿಸುವ ಹಾಗಿದೆ. ಒಟ್ಟಾರೆ ಪರಿಸ್ಥಿತಿಯನ್ನು ಸಮಸ್ಯೆಯಿಲ್ಲದೇ ಬಗೆಹರಿಸುವ ಬದಲಿಗೆ ಬಿಕ್ಕಟ್ಟನ್ನು ತೀವ್ರಗೊಳಿಸುವ ಕಡೆಗೆ ನಡೆದಿದೆ. ಇದರ ಹಿಂದೆಯೂ ಒಂದು ಪ್ರಾಪಗಾಂಡಾ ಯಂತ್ರಾಂಗವು ವ್ಯವಸ್ಥಿತವಾಗಿ ಕೆಲಸ ಮಾಡುತ್ತಾ, ಅಧಿಕಾರಿಗಳ ಮೇಲೆ ಒತ್ತಡ ತರುತ್ತಿರುವುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿಗಳನ್ನು ದುರ್ಬಲಗೊಳಿಸುವ ಹುನ್ನಾರವೊಂದು ನಡೆದಿದೆ ಮತ್ತು ಅದು ಆಡಳಿತ ಪಕ್ಷದೊಳಗಿಂದಲೇ ನಡೆಯುತ್ತಿದೆ ಎಂಬ ವದಂತಿಗಳಿಗೂ ಪುಷ್ಟಿ ಸಿಕ್ಕಿದೆ.

ಎದ್ದು ಕಾಣುವ ವಿರೋಧಾಭಾಸಗಳ ಹಿಂದೆ ಯಾರ ರಕ್ತದಾಹ?

ಪ್ರಕರಣದ ಬೆಳವಣಿಗೆಗಳಿಂದ ಆರಂಭಿಸುವುದಾದರೆ ಸಂಜೆ 6.45ರ ಹೊತ್ತಿಗೆ ಬಿಬಿಎಂಪಿ ಸಿಬ್ಬಂದಿ, ಸ್ಥಳೀಯರು ಈಗ ಕ್ವಾರಂಟೈನ್‍ಗೆ ಒಳಪಡಲು ನಿರಾಕರಿಸುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತರಿಗೆ ಫೋನ್ ಮಾಡಿದ್ದಾರೆ. ಆಗ ಆಯುಕ್ತರು ರಾತ್ರಿ ಹೊತ್ತಿನಲ್ಲಿ ಹೋಗಿದ್ದೇಕೆಂದು ಆಕ್ಷೇಪಿಸಿ, ಈಗ ವಾಪಸ್ಸು ಬನ್ನಿ ಎಂದು ಆದೇಶಿಸಿದ್ದಾರೆ. ಇದನ್ನು ಆಯುಕ್ತರು ಹಿರಿಯ ಪತ್ರಕರ್ತರಿಗೆ ಫೋನಿನಲ್ಲಿ ಹೇಳಿರುವ ರೆಕಾರ್ಡ್ ಇದೆ. ಹಾಗೆಯೇ ಬಿಟಿವಿಗೆ ಅವರು ನೀಡಿದ ಹೇಳಿಕೆಯಲ್ಲಿ ಬಿಬಿಎಂಪಿಯ ಯಾರ ಮೇಲೂ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದುವರೆದು, ಪೊಲೀಸ್ ಕಮೀಷನರ್ ಭಾಸ್ಕರರಾವ್ ಅವರು ಸ್ಪಷ್ಟವಾಗಿ ಯಾರ ಮೇಲೂ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದೂ ದಾಖಲಾಗಿದೆ.

ಪಾದರಾಯನಪುರಕ್ಕೆ ಭೇಟಿ ನೀಡಿದ ಗೃಹಮಂತ್ರಿ

ಆದರೆ ಅದರ ನಂತರ ನಡೆದ ಮಾಧ್ಯಮಗಳ ಅಬ್ಬರದ ದಾಳಿಯ ಪರಿಣಾಮವಾಗಿ 10 ಗಂಟೆಯ ಹೊತ್ತಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವರು ‘ನಮ್ಮ ಕಾರ್ಪೋರೇಷನ್, ಹೆಲ್ತ್ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮತ್ತು ಅಟ್ಯಾಕ್ ಸಹಾ ಮಾಡಿದ್ದಾರೆ’ ಎಂದು ಹೇಳುತ್ತಾರೆ. ಮನುಷ್ಯರ ಮೇಲೆ ನಡೆದ ದಾಳಿಗೂ ಮುಂಚೆ ಅವರು ಪೆಂಡಾಲ್, ಟೇಬಲ್, ಕುರ್ಚಿಗಳು, ಬ್ಯಾರಿಕೇಡ್, ಸಿಸಿಟಿವಿಗೆ ಆದ ಡ್ಯಾಮೇಜ್ ಮಾಡಿದ್ದನ್ನು ಪಟ್ಟಿ ಮಾಡುತ್ತಾರೆ. ವಾಸ್ತವದಲ್ಲಿ ಕರ್ತವ್ಯನಿರತ ಸರ್ಕಾರೀ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರೆ ಅದು ಆಸ್ತಿಪಾಸ್ತಿಗೆ ಆದ ನಷ್ಟಕ್ಕಿಂತ ಬಹಳ ಸೀರಿಯಸ್ ಆದದ್ದು. ಕಾನೂನಿನ ಪ್ರಕಾರ ಮಾತ್ರವಲ್ಲಾ, ಕೊರೊನಾದಂತಹ ಸಂದರ್ಭದಲ್ಲಿ ಸರ್ಕಾರೀ ವ್ಯವಸ್ಥೆಯು ಕೆಲಸ ಮಾಡದಂತೆ ತಡೆಯುವುದೆಂದರೆ ಯಾರೇ ಆಗಲಿ ಅದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಗೃಹಸಚಿವರು ಯಾವುದೋ ಕಾರಣಕ್ಕೆ ಹಿಂದುಮುಂದಾಗಿ ಹೇಳಿದ್ದಾರೆಂದು ಸುಮ್ಮನಿರಬಹುದಿತ್ತು. ಆದರೆ ಇಬ್ಬರು ಕಮೀಷನರ್ ಹೇಳಿಕೆಯ ಹಿನ್ನೆಲೆಯಲ್ಲಿ ನೋಡುವುದಾದರೆ, ಸ್ವತಃ ಗೃಹಸಚಿವರಿಗೂ ವಾಸ್ತವ ಸಂಗತಿ ಗೊತ್ತಿತ್ತು.

ಆ ನಂತರ ಹೊರಬಂದ ಎಫ್‍ಐಆರ್‍ಗಳಲ್ಲಿ ‘ಪೊಲೀಸರು ಮತ್ತು ವೈದ್ಯರನ್ನು ಕೊಲ್ಲೋಣ’ ಎಂದು ಘೋಷಣೆ ಹಾಕಿದುದರ ಬಗ್ಗೆಯೂ ಸೇರಿಸಲಾಯಿತು. ಅದನ್ನು ‘ನರಮೇಧವೊಂದು ಯೋಜಿತವಾಗಿತ್ತು’ ಎಂಬವರೆಗೆ ಟಿವಿ ಚಾನೆಲ್‍ಗಳು ಹಿಗ್ಗಿಸಿದವು. ಕನಿಷ್ಠ 4 ಟಿವಿ ಚಾನೆಲ್‍ಗಳು ಅಲ್ಲಿನವರನ್ನು ಕೊಲ್ಲಬೇಕೆಂದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ‘ಆದೇಶ’ ಮಾಡಿದವು. ಈ ಬರಹಕ್ಕೆ ಮುಂಚೆ ಇನ್ನೊಮ್ಮೆ ಟಿವಿ ವರದಿಗಳನ್ನು ನೋಡಬೇಕಾಗಿ ಬಂದಿತು. ಬಳಸದೇ ಇದ್ದರೆ ರಿವಾಲ್ವರ್ ಏನು ಸೊಂಟಕ್ಕೆ ಕಟ್ಟಿಕೊಂಡ ಡಾಬಾ? ಎಂದೂ ಕೇಳಲಾಯಿತು.
ಯಡಿಯೂರಪ್ಪ ಮತ್ತು ಗೃಹಮಂತ್ರಿ ರಾಜೀನಾಮೆ ನೀಡಬೇಕು ಎಂದು ಟಿವಿ ಆಂಕರ್‍ಗಳೇ ಆಗ್ರಹಿಸುವ ಮಟ್ಟಿಗೆ ಬೆಳೆಯಿತು. ಇವೆಲ್ಲಾ ಒತ್ತಡಗಳ ಆಚೆಗೆ ಸರ್ಕಾರ ನಡೆಸುವವರಿಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಣಗುತ್ತಿರುವವರಿಗೆ ಅವರದ್ದೇ ಆದ ಕಷ್ಟಗಳೂ ಇರುತ್ತವೆ. ಒಂದಲ್ಲಾ ಒಂದು ಘಟನೆಯಲ್ಲಿ ಸರಿಯಾಗಿ ಪಾಠ ಕಲಿಸುವ ಒಂದು ಉದಾಹರಣೆಯನ್ನು ತೋರಿಸದಿದ್ದರೆ ಮ್ಯಾನೇಜ್ ಮಾಡುವುದು ಕಷ್ಟ. ಹೇಗೂ ಈ ಘಟನೆ ಒದಗಿ ಬಂದಿದೆ; ಇಲ್ಲಿ ಬಿಸಿ ಮುಟ್ಟಿಸೋಣ ಎಂದು ತೀರ್ಮಾನಿಸಿರುವ ಸಾಧ್ಯತೆಯೂ ಇದೆ.

ಬಿಕ್ಕಟ್ಟನ್ನು ಹೆಚ್ಚಿಸಬಹುದಾದ ಈಗಿನ ಕ್ರಮಗಳು

ಹಾಗಾಗಿಯೇ 22ರ ಸಂಜೆಯ ಹೊತ್ತಿಗೆ ಪಾದರಾಯನಪುರದಲ್ಲಿ 126 ಜನರ ಅಧಿಕೃತ ಬಂಧನವಾಗಿದ್ದರೆ, ಸುಮಾರು 250ರಷ್ಟು ಜನರನ್ನು ಕರೆದುಕೊಂಡು ಹೋಗಿದ್ದಾರೆ, ಬಂಧನ ತೋರಿಸಿಲ್ಲ ಎಂದು ಹೇಳಲಾಗುತ್ತಿದೆ. ಅಂದಿನ ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದವರು ಯಾರೇ ಆಗಿದ್ದರೂ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಬುದ್ಧಿ ಹೇಳಬೇಕು, ಮುಂದಿನ ದಿನಗಳಲ್ಲಿ ಮನವರಿಕೆ ಮಾಡಿಕೊಡಬೇಕು ಇತ್ಯಾದಿ ಏನೇ ಸದ್ಭಾವನೆಯನ್ನು ತೋರಬಹುದಾಗಿದ್ದರೂ, ಈಗ ಮಾಡಬೇಕಾದ್ದು ಬಂಧನವನ್ನೇ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕ ಶಿಕ್ಷೆಯಾಗುವ ಹಾಗೆ ಮಾಡುವುದೇ ಪೊಲೀಸ್ ಇಲಾಖೆಯ ಕರ್ತವ್ಯ. ಅದನ್ನು ಯಾರೂ ಆಕ್ಷೇಪಿಸಲಾಗದು. ಆದರೆ ಸುಮಾರು 100 ಜನ ಅಂದು ಟೆಂಟ್ ಇತ್ಯಾದಿಗಳನ್ನು ಕಿತ್ತರು ಎಂದು ಎಲ್ಲರೂ ಪದೇ ಪದೇ ಹೇಳಿದ ನಂತರವೂ ಈ ಸಂಖ್ಯೆಯ ಯುವಕರನ್ನು ಸೀಲ್‍ಡೌನ್‍ನಲ್ಲಿರುವ ಪ್ರದೇಶದಿಂದ ಕರೆದುಕೊಂಡು ಹೋಗುವುದು ಏಕಾಗಿ? ಅದು ಬಿಕ್ಕಟ್ಟನ್ನು ಹೆಚ್ಚಿಸುತ್ತದೆಯೋ, ಕಡಿಮೆ ಮಾಡುತ್ತದೆಯೋ?
ತಮ್ಮ ಮನೆಗಳ ಯುವಕರನ್ನು ಕರೆದುಕೊಂಡು ಹೋದಾಗ, ಅವರು ಬಂಧಿಸಲ್ಪಟ್ಟಿದ್ದಾರೋ, ಕ್ವಾರಂಟೈನ್‍ನಲ್ಲಿದ್ದಾರೋ ಅಥವಾ ಅಕ್ರಮವಾಗಿ ಎತ್ತಾಕಿಕೊಂಡು ಹೋಗಲಾಗಿದೆಯೋ ಎಂಬುದನ್ನು ತಿಳಿಯಲು ಮನೆಯಿಂದ ಹೊರಗೆ ಬರಲಾಗದ ಸ್ಥಿತಿಯಲ್ಲಿರುವ ಕುಟುಂಬಸ್ಥರ ಕಥೆಯೇನು ಎಂಬ ಪ್ರಶ್ನೆಗಳು ಏಳುತ್ತವೆ.

ಈ ಮಧ್ಯೆ ಮೇಲಿನೆಲ್ಲಾ ಘಟನೆಗಳು ನಡೆಯುವ ಮುಂಚೆಯೇ ಆಗಿದ್ದ ಕೆಲವು ಎಫ್‍ಐಆರ್‍ಗಳು ದಿಢೀರನೆ ಪತ್ರಕರ್ತರನ್ನು ತಲುಪುತ್ತವೆ. ತಲುಪಿಸುವುದು ಬಿಜೆಪಿಯ ಬೆಂಗಳೂರು ಘಟಕದ ಪದಾಧಿಕಾರಿ. ಅದು ತಬ್ಲಿಕ್ ಸಂಘಟನೆಗೆ ಸೇರಿದ ಮಲೇಶಿಯಾದಿಂದ ಬಂದಿದ್ದ ಹಲವರ ಮೇಲೆ ಹಾಕಲಾಗಿದ್ದ ಎಫ್‍ಐಆರ್‍ಗಳು. ಇವರು ದೆಹಲಿಯ ಸಮಾವೇಶಕ್ಕೆ ಹೋದವರಲ್ಲ. ಆದರೆ ಮಸೀದಿಯೊಂದರಲ್ಲಿ ಉಳಿದುಕೊಂಡಿದ್ದರು. ಅವರನ್ನು ಕ್ವಾರಂಟೈನ್‍ಗೆ ನಂತರ ಒಳಪಡಿಸಲಾಯಿತು ಮತ್ತು ವೀಸಾ ಉಲ್ಲಂಘನೆಯ ಕೇಸನ್ನೂ ಹಾಕಲಾಯಿತು. ಇದೂ ಸಹಾ ಮಾಡಲೇಬೇಕಿದ್ದ ಕೆಲಸ ಹಾಗೂ ನೆಲದ ಕಾನೂನಿನ ಪ್ರಕ್ರಿಯೆಗೆ ಅವರನ್ನು ತಪ್ಪದೇ ಒಳಪಡಿಸಬೇಕು. ಆದರೆ ಪಾದರಾಯನಪುರದ್ದಲ್ಲದ ಮಸೀದಿಯಲ್ಲಿ ಇದ್ದವರನ್ನು ಇಲ್ಲಿನದ್ದೇ ಮಸೀದಿಯ ಒಳಗಿದ್ದರು ಎಂದು ಬಿಂಬಿಸಲು ಬಳಸಲಾಯಿತು.

ಜಮೀರ್ ಅಹಮದ್ ಅವರು ಹೊರಬೇಕಾದ ಜವಾಬ್ದಾರಿ

ಈ ಮಧ್ಯೆ ಜಮೀರ್ ಅಹಮದ್ ಅವರ ಮೇಲೆ ಮಿತಿಮೀರಿದ ವಾಗ್ದಾಳಿ ನಡೆಸಲು ಹಾಗೂ ಅತಿರೇಕದ ಆರೋಪಗಳನ್ನು ಮಾಡಲು ಸ್ವತಃ ಸಚಿವರುಗಳೇ ಫೀಲ್ಡಿಗಿಳಿದರು. ಜಮೀರ್ ಅಹಮದ್ ಥರದ ನಾಯಕರುಗಳ ಮೇಲೆ ಮಾಡಲೇಬೇಕೆಂದರೆ ಹಲವು ಬೇರೆ ಕಾರಣಗಳಿದ್ದವು. ಭಾನುವಾರ ರಾತ್ರಿ ಬರ್ಲಿನ್ ಗೋಡೆಯನ್ನೇ ಕೆಡವುತ್ತಿದ್ದೇವೆಂಬ ಹುಮ್ಮಸ್ಸಿನಲ್ಲಿ ತಗಡಿನ ಷೀಟುಗಳನ್ನು ಕಿತ್ತ ಹುಡುಗರು ಕೇವಲ ಸೀಲ್‍ಡೌನ್ ಹುಟ್ಟಿಸಿದ್ದ ಹತಾಶೆ ಅಥವಾ ಮುಸ್ಲಿಮರ ಮೇಲಾಗುತ್ತಿರುವ ಅಪಪ್ರಚಾರದಿಂದ ಕ್ರುದ್ಧರಾಗಿರಲಿಲ್ಲ ಎಂಬುದು ಗುಟ್ಟಿನ ವಿಚಾರವಲ್ಲ. ಅಸಲೀ ಕಾರಣಕ್ಕೆ ಸೀಲ್‍ಡೌನ್‍ನ ಎಂಟ್ರಿ/ಎಕ್ಸಿಟ್ ಪಾಯಿಂಟ್‍ನಲ್ಲಿದ್ದ ಪೊಲೀಸರನ್ನು ಮಾತಾಡಿಸಿದರೂ ಗೊತ್ತಾಗುತ್ತದೆ. ಗಾಂಜಾ, ಸಲ್ಯೂಶನ್‍ಗಳಿಗೆ ದಾಸರಾಗಿರುವ ಹುಡುಗರು ಅಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಅದೇ ಕಾರಣಕ್ಕೆ ಅದೇ ಪ್ರದೇಶದ ಹಲವು ಮುಸ್ಲಿಂ ಸಮುದಾಯದ ವ್ಯಕ್ತಿಗಳು ನಿರಂತರವಾಗಿ ದುಶ್ಚಟ ಬಿಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ವಿಚಾರದಲ್ಲಿ ಜಮೀರ್ ಅಹಮದ್ ಅಥವಾ ಇಮ್ರಾನ್‍ಪಾಷಾ ಥರದವರು ಎಷ್ಟು ಜವಾಬ್ದಾರಿ ತೆಗೆದುಕೊಂಡಿದ್ದರೆಂಬುದನ್ನು ಅವರೇ ಹೇಳಬೇಕು.
ಹಾಗೆಯೇ ಅಂದು ಗಾಂಜಾ, ಸಲ್ಯೂಷನ್ ಹುಡುಗರು 20-30 ಜನರು ಗಲಭೆಗೆ ಪ್ರಚೋದಿಸಿದರು ಎಂದೇ ಇಟ್ಟುಕೊಳ್ಳೋಣ. ಆದರೆ ಅವರೊಂದಿಗೆ ಸೇರಿದ ಉಳಿದ 70 ಹುಡುಗರಿಗೆ ಸಿಟ್ಟು ಯಾವ್ಯಾವ ಕಾರಣಕ್ಕಿತ್ತು? ಊಟ ಸಿಗದೇ ಇದ್ದುದೂ ಕಾರಣ ಎನ್ನುವುದಾದರೆ ಅದರ ಕುರಿತಾಗಿ ಜನಪ್ರತಿನಿಧಿಗಳ ಕರ್ತವ್ಯ ಏನು? ಇಂದಿನ ಸಂದರ್ಭದಲ್ಲಿ ಯಾವುದೇ ಬಡವರ ಪ್ರದೇಶದಲ್ಲಿ ಆಗಬಹುದಾದ ಘಟನೆ ಇದು. ಆದರೆ ಈ ಭಾಗದಲ್ಲಿ ಇರುವ ಈ ಬಡವರ ಸ್ಥಿತಿ ಹೀಗೆಯೇ ಇರಲು ಕಾರಣವೇನು? ಜಮೀರ್ ಅಹಮದ್ ಅವರು ಮೊದಲ ಬಾರಿ ಶಾಸಕರಾದಾಗ 10 ವರ್ಷದವರಿದ್ದವರೇ ಇಂದು ಅಲ್ಲಿ ಗುಂಪುಗೂಡಿ ಶೀಟ್ ಕೀಳಲು ಹೋಗಿದ್ದು. ಈ ಮಧ್ಯೆ ಸ್ಥಳೀಯ ಶಾಸಕರಿಂದ ಯಾವ ಸುಧಾರಣೆಯ ಕೆಲಸಗಳು ಅಲ್ಲಾಗಿವೆ? ಜೆಜೆನಗರ/ಪಾದರಾಯನಪುರಕ್ಕೇ ಸೀಮಿತವಾದ ಕೆಲವು ಸಮಸ್ಯೆಗಳಿವೆಯಾ ಇಲ್ಲವಾ? ಈ ಪ್ರಶ್ನೆಗಳನ್ನು ಯಾವ ಟಿವಿ ಆಂಕರ್ ಸಹಾ ಕೇಳಲಿಲ್ಲ. ಏಕೆಂದರೆ ಅವರು ಬಡವರಿಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ಆಸಕ್ತಿ ಹೊಂದಿಲ್ಲ. ಧರ್ಮದ ವಿಚಾರದಲ್ಲಿ ಮಾತ್ರ ಆಸಕ್ತಿ ಹೊಂದಿದ್ದರು. ಆದರೆ ಧರ್ಮದ ಕಾರಣಕ್ಕಾದರೂ ಜನಪ್ರತಿನಿಧಿಗಳು ಇದನ್ನು ಯೋಚಿಸಬೇಕಿತ್ತಲ್ಲವೇ? ಹರಾಮ್ ಆದ ಚಟಗಳಿಂದ ತಮ್ಮ ಮತದಾರ ಬಂಧುಗಳನ್ನು ಮುಕ್ತಗೊಳಿಸಲು ಪ್ರಯತ್ನಿಸುವುದು ಇವರ ಕರ್ತವ್ಯವೂ ಆಗಿತ್ತಲ್ಲವೇ?

ಪೊಲೀಸರ ಕಷ್ಟ ಹೆಚ್ಚಿಸಬಾರದು

ಸಮಯವಿದ್ದು ಕೂತು ಮಾತನಾಡಿದರೆ ಉಸ್ತುವಾರಿ ಹೊತ್ತಿರುವ ಕೆಲವು ಪೊಲೀಸ್ ಅಧಿಕಾರಿಗಳು ಇನ್ನೂ ಹಲವು ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಏಕೆಂದರೆ, ಅವರಿಗೂ ಗೊತ್ತಿರುವುದೇನೆಂದರೆ ಇವು ಪೊಲೀಸರಷ್ಟೇ ನಿಭಾಯಿಸಬಹುದಾದ ಸಮಸ್ಯೆಗಳಲ್ಲ. ಜೊತೆಗೆ ಇಂದು ಅಲ್ಲಿ ನಡೆದಿರದ ಅಪರಾಧಗಳನ್ನು ಎಫ್‍ಐಆರ್‍ನಲ್ಲಿ ಸೇರಿಸುವುದು, ಆ ಜಾಗದಲ್ಲಿ ಪಾಲ್ಗೊಂಡಿರದ ಯುವಕರನ್ನು ಕೇಸಿನಲ್ಲಿ ‘ಫಿಟ್’ ಮಾಡುವುದರ ಮೂಲಕ ಸ್ಥಳೀಯ ಪೊಲೀಸರ ತಲೆನೋವನ್ನೂ ಹೆಚ್ಚು ಮಾಡಲಾಗುತ್ತಿದೆ. ಅದಕ್ಕೆ ಕಾರಣ ಪೊಲೀಸರಷ್ಟೇ ಅಲ್ಲ. ರಕ್ತ ಬಯಸಿದ ಮಾಧ್ಯಮಗಳು ಮತ್ತು ಬಹುಶಃ ಯಡಿಯೂರಪ್ಪನವರನ್ನು ದುರ್ಬಲಗೊಳಿಸಲೆಂದು ಚಿತಾವಣೆ ಮಾಡುತ್ತಿರುವ ಪಕ್ಷದೊಳಗಿನ ಶಕ್ತಿಗಳು. ಅದೇನೇ ಇದ್ದರೂ ಇಲ್ಲಿ ಬಿಕ್ಕಟ್ಟು ಹೆಚ್ಚದೇ ಇರುವಂತೆ ನೋಡಿಕೊಳ್ಳುವುದು ಇಂದಿನ ಆದ್ಯತೆಯಾಗಬೇಕಿದೆ.

ಅಧಿಕಾರಿಗಳ ಮೇಲೆ ಅನಗತ್ಯ ಒತ್ತಡ ಇರದಂತೆ ಕಾನೂನಿನ ಪ್ರಕಾರವಷ್ಟೇ ಕೆಲಸ ಮಾಡಿಸುವ ಹೊಣೆ ಯಡಿಯೂರಪ್ಪನವರದ್ದಾಗಿದ್ದರೆ, ಪಾದರಾಯನಪುರದ ಜನರನ್ನು ಬಡತನ, ಅಶಿಕ್ಷಿತತೆ ಹಾಗೂ ಪುಂಡಾಟಿಕೆಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳಾಗಿರುವ ಮತ್ತು ಮುಸ್ಲಿಮರೂ ಆಗಿರುವ ರಾಜಕಾರಣಿಗಳದ್ದು.

ಎಲ್ಲವನ್ನೂ ಧರ್ಮಕ್ಕೆ ತಳುಕುಹಾಕಿ ಬೆಂಕಿ ಹಚ್ಚಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿರುವ ಮಾಧ್ಯಮಗಳಿಂದ ಜವಾಬ್ದಾರಿ ನಿರೀಕ್ಷಿಸಿದರೆ ಅದು ದುರಾಸೆಯಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಯಡಿಯೂರಪ್ಪನವರು ವೈಯಕ್ತಿಕವಾಗಿ ಮನುವಾದಿಯೂ, ಕೋಮುವಾದಿಯೂ ಆಗಿಲ್ಲದಿರುವುದು, ಅಪ್ಪಟ ಮನುವಾದಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದ್ದರಿಂದ ಹೇಗಾದರೂ ಮಾಡಿ, ‘ಯಡಿಯೂರಪ್ಪ ದುರ್ಬಲ ಮುಖ್ಯ ಮಂತ್ರಿ’ ಎಂಬಂತೆ ಬಿಂಬಿಸಿ, ಅವರನ್ನು ಅದಿಕಾರದಿಂದ ಕೆಳಗಿಳಿಸಿ, ಅವರ ಜಾಗದಲ್ಲಿ, ಅನಂತ ಕುಮಾರ್ ಹೆಗಡೆಯಂತಹ ಬೆಂಕಿಯುಗುಳುವ ಕಟ್ಟಾ ಮನುವಾದಿಯೊಬ್ಬನನ್ನು ಪ್ರತಿಷ್ಟಾಪನೆ ಮಾಡಬೇಕೆಂಬ ಹುನ್ನಾರ ನಡೆಯುತ್ತಿದೆ.ಇನ್ನು, ಪಾದರಾಯನಪುರದಲ್ಲಿ ತಪ್ಪು ಮಾಡಿರುವವರಿಗೆ ಶಿಕ್ಶೆ ಆಗಲಿ. ಅದರಲ್ಲಿ ರಿಯಾಯಿತಿ ಬೇಡ. ಆದರೆ ಯಾವುದೇ ಅಪರಾಧ ಮಾಡಿಲ್ಲದ ಯುವಕನೊಬ್ಬ ಜೈಲುಪಾಲಾದರೆ, ಅವನ ಮನಸ್ಥಿತಿ ಹೇಗಿರುತ್ತದೆ, ಎಂಬುದು ಅವಿವೇಕಿಗಳಿಗೆ ತಿಳಿದಿಲ್ಲ. ಇದು ಸಮಾಜದ ಮೇಲೆ ದೇಶದ ಮೇಲೆ ದೂರಗಾಮಿಯಾದ ದುಷ್ಪರಿಣಾಮವನ್ನು ಬೀರುತ್ತದೆ. ಒಟ್ಟಾರೆಯಾಗಿ, “ನಾವು ಮಾತ್ರ ದೇಶಪ್ರೇಮಿಗಳು” ಎಂದು ಬೊಂಬಡ ಬಜಾಯಿಸುತ್ತಿರುವ ಮನುವಾದಿಗಳು, ಈ ದೇಶದ ಕೋಮುಸೌಹಾರ್ದತೆಗೆ ಬೆಂಕಿ ಇಕ್ಕುವುದರಲ್ಲಿ ನಿರತರಾಗಿದ್ದಾರೆ.

  2. ಪಾದರಾಯನಪುರದಲ್ಲಾದುದರ ಕುರಿತು ಬೆಂಗಳೂರಿನ ಹೊರಗಿನ politicians ಮಾತನಾಡಬಾದಿತ್ತು.
    ಮೀಡಿಯಾಗಳು ಇಲ್ಲಿನ ಆಗುಹದ,ಈ ಊರಿನ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಬದುಕುತ್ತಿರುವವರನ್ನು ಮಾತಾನಾಡಿಸಬೇಕಿತ್ತೇ ಹೊರತು ಪರ ಊರಿನವರನ್ನಲ್ಲ.
    #ಕಳಪೆ ಕೇಡಿ ಮೀಡಿಯಾ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...