ಇದು ಮೊದಲೇ ಹೊಳೀಲಿಲ್ಲ ಬ್ರದರ್!

ಸದ್ಯದ ಕರ್ನಾಟಕದಲ್ಲಿ ಎಲ್ಲಿ ನೋಡಿದರೂ ಅಳುಮೋರೆ ಕಾಣುತ್ತಿವೆ. ಸರಳ ಬಹುಮತ ಪಡೆವ ಸಂತೋಷದಲ್ಲಿದ್ದ ಸಿದ್ದು ಮುಖ ನೋಡಲಾಗುತ್ತಿಲ್ಲ. ಗೆದ್ದು ಬಹುಮತ ಪಡೆದು 24 ಗಂಟೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಪಡೆವ ತಯಾರಿ ನಡೆಸಿದ್ದ ಯಡ್ಡಿ ಮುಖ ಕಾದ ಹೆಂಚಿನಂತೆ ರವಗುಡುತ್ತಿದೆ. ಇನ್ನು ಗೆದ್ದ 24 ಗಂಟೆಯಲ್ಲಿ ರೈತರ ಸಾಲ ಫೈಸಲ್ ಎಂದಿದ್ದ ಕುಮಾರಣ್ಣ ಪೈಲ್ಸ್ ವ್ಯಾಧಿಯ ಮುಖಭಾವದಲ್ಲಿ ಅವುಡು ನುರಿಯುತ್ತಿದ್ದಾರೆ. ಹಾಗೂ ತಡೆದುಕೊಳ್ಳಲಾರದವರಂತೆ ಎಮ್ಮೆಕರುವಿನಂತೆ ಅತ್ತೇಬಿಟ್ಟಿದ್ದಾರೆ. ಇದರ ನಿಗೂಢ ಕಾರಣ ತಿಳಿಯಲು ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ನಿನಗ್ಯಾರಿದ್ದರೇನೂ ಸುಖವಿಲ್ಲ ಪ್ರಭುವೇ, ದಾರಿ ಸುಖವಿಲ್ಲ, ಬಾಯಾರಿತು ಎಂದು ಕಾಂಗೈ ಬಾಗಿಲಿಗೋದೆ, ಬಾಗಿಲ ತೆಗೆಯದೆ ಗದರಿದರಲ್ಲೋ………. ‘ಹಲೋ ಯಾರು’
“ನಾನು ಸಾರ್ ಯಾಹೂ”
“ಒಂದು ನಿಮಿಷ ಬ್ರದರ್ ನಂತರ ಕಾಲ್ ಮಾಡ್ತೀನಿ”
“ನನಿಗೂ ಒಂದೇ ನಿಮಿಷ ಸಾರ್ ಡೆಡ್‍ಲೈನು”
“ಅದೇನು ಕೇಳಿ”
“ಯಾಕ್ ಸಾರ್ ಸೊರಗರಿಯೋ ಶಬ್ದ, ಅಳತಾಯಿರಂಗಿದೆ”
“ಇನ್ನೇನು ಮಾಡ್ಲಿ ಬ್ರದರ್, ಈಚೆಗೆ ಯಾಕೋ ತುಂಬಾ ಅಳು ಬರ್ತಾಯಿದೆ”
“ಅದು ಹೇರ್ಡಿಟಿ ಸಾರ್ ತಡಕೋಬೇಕು”
“ಹೇರ್ಡಿಟಿನಾ”
“ಹೌದು ಸಾರ್ ದೇವೇಗೌಡ್ರು ತುಂಬ ಅಳತಿದ್ರು”
“ತಂದೆಯವರ ಅಳು ಯಾಕೆ ಅಂದ್ರೇ, ಅದಕ್ಕೆ ಒಂದು ಉನ್ನತ ಮಟ್ಟದ ಕಾರಣ ಇರತಿತ್ತು”
“ನಿಮಗೆ ಕಾರಣ ಇಲ್ದೇ ಅಳು ಬರುತ್ತ”
“ಹೌದು ಬ್ರದರ್”
“ಸಾರ್, ಯಾವುದ್ಕೂ ಮನೋ ವೈದ್ಯರ ಕೇಳಿಬಿಡಿ, ಯಾಕಂದ್ರೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಅಳುಬಾರ್ದು. ನೋಡಿ ಈಗಾಗ್ಲೆ ಮಂಡ್ಯದ ಕಡೆ ಕೆಲುವು ತಿಕ್ಕಲಗಳು, ತಾವು ಅಳು ಸುರು ಮಾಡಿಕೊಂಡಿರದಲ್ದೇ, ಕಾಂಗ್ರೆಸ್‍ನವುರ ಬೈತಾ ಅವೆ. ಯಂಗೆ ಅಂದ್ರೆ, ಕಿವಿಕೊಟ್ಟು ಕೇಳಕ್ಕಾಗಲ್ಲ. ಇನ್ನೂ ಕೆಲುವು, ಆ ಸಿದ್ದರಾಮಯ್ಯನೇ ಕಾರಣ ಅಂತ, ಜಾತಿ ಹೆಸರಿಡದೇ ಬೈತಾ ಕುಂತವೇ. ಆದ್ರಿಂದ ನಿಮಗೆ ಅಳು ಬಂದಾಗ ಒಂದು ರೂಮಿಗೆ ಹೋಗಿ ಅತ್ತು ಬುಡಿ, ಸಾರ್ವಜನಿಕವಾಗಿ ಅಳುಬೇಡಿ”
“ನೋಡಿ ಬ್ರದರ್, ಸಡನ್ನಂತ ಅಳು ಬಂದಾಗ ರೂಮು ಹುಡುಕಿಕೊಂಡು ಓಡಕ್ಕಾಗಲ್ಲ, ಒಂದ ಮಾಡ್ತಕ್ಕಂತ ಅಥವಾ ಕಕ್ಕಸ್ ಮಾಡೋ ಸಂದರ್ಭ ಸೃಷ್ಟಿಯಾದಾಗ ಆ ತರದಲ್ಲಿ ಒಂದು ತೀರ್ಮಾನ ತಗೊಳೋ ಬಗ್ಗೆ ಯೋಚಿಸಬವುದು. ಸಡನ್ನಂತ ಅಳು ಬಂದ್ರೆ ಅಳಬೇಕಾಗುತ್ತೆ”
“ಅಳು ಬಂದಾಗ ನಿಮ್ಮ ವೈರಿಗಳ ನೆನೆಸಿಕೊಳ್ಳಿ ನಿಂತೋಯ್ತದೆ”
“ಈಗ್ಯಾರು ವೈರಿಗಳಿಲ್ಲ ಬ್ರದರ್”
“ನಿಜ ಸಾರ್, ವೈರಿಗಳನ್ನೆಲ್ಲಾ ಕರದು ಒಂದೇ ಟೇಬಲಿನಲ್ಲಿ ಊಟ ಹಾಕಿರೋದ್ರಿಂದ ಅವುರೂ ಇಲ್ಲ. ನನಗನ್ನಿಸುತ್ತೆ ಸಾರ್ ನಿಮ್ಮ ಅಳುವಿಗೆ ಖಾಸಗಿ ಕಾರಣ ಇರಬುವುದು”
“ಖಾಸಗಿ ಕಾರಣ ಯಾವುದೂ ನಮ್ಮ ಬಾವುನೆಗೆ ಬರ್ತಾಯಿಲ್ಲ”
“ಅದು ನಿಮಗೆ ಗೊತ್ತಾಗಲ್ಲ ಸಾರ್, ಸಿದ್ದರಾಮಯ್ಯ ಒಂದು ಸತಿ ಅತೃ. ಯಾಕಂದ್ರೆ ಮಗ ತೀರೋಗಿದ್ದ. ಎಡೂರಪ್ಪ ಒಂದು ಸತಿ ಬಿಕ್ಕಡಿಸಿಕಂಡು ಅತೃ ಯಾಕೇಳಿ?”
“ನೀವೆ ಹೇಳಿ”
“ಶೋಭಕ್ಕನ್ನ ಸಂಪುಟದಿಂದ ತೆಗೀರಿ ಅಂತ ರೆಡ್ಡಿಗಳು ಗುಡ್ಡ ಹಗಿಯದ್ನೆ ನಿಲ್ಲಿಸಿದ್ರು. ಆಗ ಎಡೂರಪ್ಪ ಯಮ್ಮೆ ಕಳಕಂಡ ಕೋಣನ ತರ ಅತ್ತಿದ್ರು. ಹಾಗೆ ನಿಮ್ಮದು ಯಾವುದೋ ಖಾಸಗಿ ಕಾರಣ ಇರಬವುದು ಹುಡುಕಿ”
“ಇಲ್ಲ ಬ್ರದರ್”
“ಒಂದು ಕೆಲಸ ಮಾಡಿ ಸಾರ್, ರಾಧಕ್ಕನ ಮನೆಗೋಗಿ ಇದ್ದು, ಶಮಿಕನ್ನ ಮುದ್ದಾಡಿ ಬಂದ್ರೆ ಅಳು ನಿಲ್ಲಬವುದು ನೋಡಿ”
“ಅದ್ಯಲ್ಲ ಈಗ ಸಾಧ್ಯಯಿಲ್ಲ”
“ಅದೇ ಅಳುವಿನ ಮೂಲ ಇರಬವುದು ಸಾರ್”
“ಇಲ್ಲ ಬ್ರದರ್, ನನ್ನ ಅಳುಗೆ ಒಂದೇ ಕಾರಣ ಇಲ್ಲ ಅಂತ ನನ್ನ ಮನಸು ಹೇಳ್ತಾಯಿದೆ”
“ಇರಬವುದು ಸಾರ್, ದಡ್ಡತನಗಳಿಂದ ಮಾಡಿಕೊಂಡ ಅನಾಹುತಗಳೂ ಕಾರಣ ಆಗಿರಬವುದು”
“ದಡ್ಡತನ ನಾನು ಯಾವತ್ತೂ ಮಾಡಿಲ್ಲ ಬ್ರದರ್, ಯಲ್ಲಾ ಸನ್ನಿವೇಶಗಳನ್ನ ತುಂಬಾ ಬುದ್ದಿವಂತಿಕೆಯಿಂದ್ಲೆ ಸರಿಪಡಿಸತಕ್ಕಂತ ಕಾರ್ಯವನ್ನೆ ಪ್ಳಾನ್ ಮಾಡಿದ್ದೀನಿ”
“ನೋಡಿ ಸಾರ್, ನಿಮ್ಮ ಇವತ್ತಿನ ಸ್ಥಿತಿ ಊಹೆ ಮಾಡಿದ್ರೋ ಇಲ್ಲವೋ. ಮುಖ್ಯಮಂತ್ರಿಯಾದ 25 ಗಂಟೇಲಿ ರೈತರ ಸಾಲ ಮನ್ನಾ ಅಂದ್ರಿ, ರೈತರಿಗೆ ನೀವು ನನ್ನ ಉಳಿಸಿದ್ರೆ ನಾನು ನಿಮ್ಮನ್ನ ಉಳುಸ್ತೀನಿ ಅಂದ್ರಿ, ಇನ್ನ ನಿಮ್ಮ ಪ್ರಣಾಳಿಕೇಲಿದ್ದ ಅಶ್ವಾಸನೆ ನೋಡಿದ್ರೆ ಯಂಥಾ ಸರಕಾರ ಬಂದ್ರೂ ಈಡೇರಸಕ್ಕೆ ಸಾಧ್ಯವೇಯಿಲ್ಲ, ಅಂಗಿದ್ದೋ. ನಿಮಗೇನಾರ ತಲೆ ಇದ್ರೆ ನನ್ನ ಅಧಿಕಾರದ ಅವಧೀಲಿ ರೈತರ ಸಾಲ ಪೂರ್ಣ ಮನ್ನಾ ಮಾಡ್ತೀನಿ ಅನ್ನಬವುದಿತ್ತು. ಆಗ 5 ವರ್ಷ ಅವಕಾಶ ಸಿಗುತ್ತಿತ್ತು. ಈಗ ನೋಡಿ ಯಾರೋ ಕೆಲವೇ ಕೆಲವು ರೈತರ ಸಾಲ ಮನ್ನಾ ಕಾರಣಕ್ಕೆ ಇಡೀ ಕರ್ನಾಟಕದ ಜನ ತೆರಿಗೆ ತೆರಬೇಕಾಗ್ಯದೆ. ನಾನು ಅಧ್ಯಯನ ಮಾಡಿದ ಕೆಲವು ಜನ ರೈತರು, ಯಾಕೆ ಲಕ್ಷಲಕ್ಷ ಸಾಲ ಮಾಡ್ಯವುರೆ ಗೊತ್ತಾ”
“ಗೊತ್ತಿಲ್ಲ ಹೇಳಿ ಬ್ರದರ್”
“ವರದಕ್ಷಿಣೆ, ಕಲ್ಯಾಣ ಮಂಟಪ, ಬೀಗರೂಟ, ಇಂತ ಅಂದಾದುಂದಿ ಜನ ಲಕ್ಷಲಕ್ಷ ಸಾಲ ಮಾಡಿದ್ರು. ಆದ್ರೆ ನಿಜವಾದ ರೈತರು ಸಣ್ಣ ಸಾಲ ಮಾಡಿದ್ರು. ಅದು ಗೊತ್ತಿದ್ದ ಸಿದ್ದರಾಮಯ್ಯ ಐವತ್ತು ಸಾವುರದವರೆಗೂ ಮನ್ನಾ ಮಾಡಿದ್ರು ಅದು ಸರಿಯಾಗಿತ್ತು”
“ಬ್ರದರ್ ನಿಮ್ಮ ಮಾತಿನ ಭಾವುನೆಗಳಿಂದ ನೀವು ರೈತರ ವಿರೋಧಿಗಳು ಅಂಬತಕ್ಕಂತ ತೀರ್ಮಾನಕ್ಕೆ ಬರಬೇಕಾಯ್ತದೆ. ರೈತರು ಸಾಲ ಮಾಡಿ ಮದುವೆ ಮಾಡಿದಾರೆ ಅನ್ನತಕ್ಕಂತ ಮಾತನ್ನ ನಾನು ಒಪ್ಪಲ್ಲ”
“ಆಯ್ತು ಸಾರ್, ತೀರಸಕಾಗದೇಯಿದ್ರು ಲಕ್ಷಾಂತೃಪಾಯಿ ಸಾಲ ಯಾಕ್ ಮಾಡ್ತಾರೆ ಅನ್ನದನ್ನಾರೆ ಪತ್ತೆಹಚ್ಚಿ, ಒಂದುವೇಳೆ ಮದುವೆ ಕಾರಣಕ್ಕೆ ಸಾಲ ಮಾಡದಾದ್ರೆ, ಕುವೆಂಪುರವರ ಮಂತ್ರಮಾಂಗಲ್ಯ ಮದುವೆ ಜಾರಿಗೆ ತನ್ನಿ. ಇಲ್ಲ ಅಂದ್ರೆ ನೀವು ರಾಧಿಕನ್ನ ಮದುವೆ ಆದ್ರಲ್ಲ ಆತರ ಆಗದಕ್ಕೆ ಪ್ರೋತ್ಸಾಹ ಕೊಡಿ. ರೈತರು ಉಳಕತ್ತರೆ. ಇಲ್ಲ ಅಂದ್ರೆ ಅವರು ಸಾಲ ಮಾಡದು, ನೀವು ತೀರಸದು, ಅನ್ನದಾದ್ರೆ ಕರ್ನಾಟಕದ ಸಾಮಾನ್ಯ ಜನಗಳ ಪಾಡೇನು ಸಾರ್”
“ನೀವು ಹೇಳತಕ್ಕಂತ ವಿಷಯದಲ್ಲಿ ಯೋಚನೆ ಮಾಡ್ತಕ್ಕಂತ ಭಾವುನೆಗಳೇನಿವೆ, ಅವುಗಳನ್ನ ಚಿಂತನೆ ಮಾಡ್ತೀನಿ. ಆದ್ರೆ ರೈತರ ಸಾಲದ ವಿಷಯದಲ್ಲಿ ನಾನು ತಗಂಡ ತೀರ್ಮಾನ ಸರಿ ಬ್ರದರ್”
“ನೀವು ಅಧಿಕಾರಕ್ಕೆ ತಂದ್ರೆ ನಾನು ಸಾಲಮನ್ನಾ ಮಾಡ್ತೀನಿ ಅಂದಿದ್ರಿ, ಆದ್ರೆ ಜನ 38 ಸೀಟು ಕೊಟ್ರು. ಆದ್ರಿಂದ ಪ್ರತಿಯೊಬ್ಬ ರೈತನ 38 ಸಾವಿರ ಸಾಲ ಮಾತ್ರ ಮನ್ನಾ ಅನ್ನಬೇಕಾಗಿತ್ತು”
“ಇದು ಮೊದಲೆ ಹೊಳಿಲಿಲ್ಲವಲ್ಲ ಬ್ರದರ್”
“ಥೂತ್ತೇರಿ”,

– ಯಾಹೂ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here