ಗೌರಿ ಲಂಕೇಶ್
25 ಏಪ್ರಿಲ್ , 2007 (`ಕಂಡಹಾಗೆ’ ಸಂಪಾದಕೀಯದಿಂದ)|

ಮೊನ್ನೆ ಬೆಂಗಳೂರಿನಲ್ಲಿ ಕುತೂಹಲಕಾರಿ ಕಾರ್ಯಕ್ರಮವೊಂದು ನಡೆಯಿತು. ಸಂಘ ಪರಿವಾರದವರು ಏರ್ಪಡಿಸಿದ್ದ “ಅಂಬೇಡ್ಕರ್ ಸಂಸ್ಕøತಿ ಶೋಭಾಯಾತ್ರೆ” ಎಂಬ ಆ ಕಾರ್ಯಕ್ರಮದಲ್ಲಿ ಒಂದು ಕರಪತ್ರವನ್ನೂ ಹಂಚಿದ್ದರು. ಯಾರಿಗೂ ಬಾರದ ಸಂಸ್ಕøತ ಭಾಷೆಯಲ್ಲೇ ಬರೆಯಲಾಗಿದ್ದ ಆ ಕರಪತ್ರದಲ್ಲಿ ಒಂದೇ ಒಂದು ಸಾಲು ಕನ್ನಡದಲ್ಲಿದ್ದು, ಅದು ಹೀಗಿತ್ತು. “1949ರ ಸೆಪ್ಟೆಂಬರ್ 10ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಸಂಸ್ಕøತವೇ ರಾಷ್ಟ್ರಭಾಷೆ ಆಗಬೇಕೆಂದಿದ್ದರಲ್ಲದೆ, ತಮ್ಮ ಈ ಅಭಿಪ್ರಾಯವನ್ನು ಸಂಸ್ಕøತದಲ್ಲೇ ಮಂಡಿಸಿದ್ದರು.”
ಅಂಬೇಡ್ಕರ್ ಸಂಸ್ಕøತ ಭಾಷೆಯನ್ನು ಚೆನ್ನಾಗಿ ಕಲಿತಿದ್ದರು ಅನ್ನೋದು ಗೊತ್ತಿತ್ತು. ಅವರು ಅದನ್ನು ಕಲಿತದ್ದು ಸ್ವ-ಇಚ್ಛೆ ಮತ್ತು ಶ್ರದ್ಧೆಯಿಂದ. ಅಂಬೇಡ್ಕರ್ ದಲಿತರಾಗಿದ್ದರಿಂದ ಅವರಿಗೆ ಶಾಲೆಯಲ್ಲಿ ಸಂಸ್ಕøತ ಹೇಳಿಕೊಡುವುದಿಲ್ಲ ಎಂದು ಮಾಸ್ತರರು ಹೇಳಿದ್ದರು. ಜನರ ಶೋಷಣೆಯ ಭಾಷೆಯೇ ಆಗಿದ್ದ ಸಂಸ್ಕøತದಲ್ಲಿ ಮತ್ತು ಸಂಸ್ಕøತದಲ್ಲೇ ರಚಿಸಿದ್ದ ಪುಸ್ತಕಗಳಲ್ಲಿ ಏನಿರಬಹುದು ಎಂದು ಅರಿಯಲಿಕ್ಕೇ ಅವರು ಆ ಭಾಷೆಯನ್ನು ಕಲಿತಿದ್ದರು. ಅಂದಮಾತ್ರಕ್ಕೆ ಅವರು ಸಂಸ್ಕøತವೇ ರಾಷ್ಟ್ರಭಾಷೆಯಾಗಲಿ ಎಂದು ಸಂಸ್ಕøತದಲ್ಲೇ ವಾದ ಮಂಡಿಸಿದ್ದರೆ?
ಇಂಟರ್‍ನೆಟ್‍ನಲ್ಲಿ ಹುಡುಕಾಡಿದಾಗ 1949ರ ಸೆಪ್ಟೆಂಬರ್ 10ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯು “ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್‍ರವರು ಈ ಪ್ರಸ್ತಾವನೆಯನ್ನು ಮಂಡಿಸಿದರು” ಎಂದು ತಳಬುಡವಿಲ್ಲದ ವರದಿ ಸಿಕ್ಕಿತೇ ವಿನಾಃ ನಿಖರ ಮಾಹಿತಿ ಸಿಗಲಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರೋದು ಖಾತ್ರಿಯಾಯ್ತು.
ಯಾವುದಕ್ಕೂ ಇರಲಿ ಎಂದು ನಮ್ಮ ಬಳಗದ, ತುಂಬಾ ಜಾಣೆ ರಾಜಲಕ್ಷ್ಮಿ ಅಂಕಲಗಿ ಎಂಬ ಯುವ ವಕೀಲೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. “ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಕುರಿತ ಐದು ಪುಸ್ತಕಗಳೂ ನಮ್ಮ ಆಫೀಸಿನಲ್ಲಿವೆ. ಅವನ್ನು ನೋಡಿ ನಿಮಗೆ ತಿಳಿಸುತ್ತೇನೆ” ಎಂದಳು ಆಕೆ. ಅರ್ಧ ಗಂಟೆಯ ನಂತರ ಆಕೆ ನೀಡಿದ ಮಾಹಿತಿ ಹೀಗಿತ್ತು:
“1949ರ ಸೆಪ್ಟೆಂಬರ್ ಎಂಟನೇ ಮತ್ತು ಒಂಬತ್ತನೇ ತಾರೀಖು ನಡೆದ ಸಂವಿಧಾನ ರಚನಾ ಸಭೆಯಲ್ಲಿ ತೆರಿಗೆ ಕುರಿತ ಚರ್ಚೆಗಳು ಶುರುವಾಗಿ 10ನೇ ತಾರೀಖಿನವರೆಗೂ ಸಾಗಿದವು. 10ನೇ ತಾರೀಖು ಆಸ್ತಿ ಹೊಂದುವ ನೀತಿಗಳನ್ನು ಕುರಿತಂತೆ ಆರ್ಟಿಕಲ್ 24ರ ಬಗ್ಗೆ ಚರ್ಚೆಗಳಾದವು. ಅಂದು ಶನಿವಾರವಾದ್ದರಿಂದ ಸಭೆ ಮಧ್ಯಾಹ್ನ ನಿಂತಿತು. 11ನೇ ತಾರೀಖು ಭಾನುವಾರವಾದ್ದರಿಂದ ಸಭೆ ಮತ್ತೆ 12ನೇ ತಾರೀಖಿನಂದು ಸೇರುತ್ತದೆ. ಅವತ್ತೂ ಸಂಜೆ ನಾಲ್ಕು ಗಂಟೆಯ ತನಕ ಆಸ್ತಿ ಕುರಿತಂತೆ ಚರ್ಚೆ ನಡೆಯುತ್ತದೆ. ಆನಂತರ ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚೆ ಆರಂಭವಾಗಿ ಅದು 13 ಮತ್ತು 14ನೇ ತಾರೀಖಿನವರೆಗೂ ನಡೆಯುತ್ತದೆ. ಆಗಲೂ ಹೇಗೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಬೇಕು ಮತ್ತು ಹಿಂದಿಯನ್ನು ಯಾಕೆ ಹೇರಬಾರದು ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತದೆ. 8ರಿಂದ 14ನೇ ತಾರೀಖಿನವರೆಗೂ ನಡೆದ ಚರ್ಚೆಗಳಲ್ಲಿ ಎರಡು ಮುಖ್ಯ ಅಂಶಗಳು ಇವೆ: ಮೊದಲನೆಯದಾಗಿ. ಸಂಸ್ಕøತ ಭಾಷೆಯಲ್ಲಿ ಮಾತನಾಡಿದವರು ಬಿಹಾರದ ಗುಪ್ತನಾಥ ಸಿಂಗ್ ಎಂಬುವವರು. ಆಸ್ತಿ ಹೊಂದುವ ವಿಚಾರ ಕುರಿತಂತೆ ಸಮಾಜವಾದಿ ಸಂವಿಧಾನವನ್ನು ನಿರೂಪಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿರುವಾಗ ಅವರು ಮನುಶಾಸ್ತ್ರದಲ್ಲಿ ಹೇಗೆ ಬಂಡವಾಳಶಾಹಿ ಪರ ಸಿದ್ಧಾಂತಗಳು ಅಡಗಿವೆ ಎಂದು ವಿವರಿಸುತ್ತಾರೆ. ಎರಡನೆಯದು: ಅಂಬೇಡ್ಕರ್‍ರವರು ಸಂಸ್ಕøತದ ಪರವಾಗಿ ಸಂಸ್ಕøತದಲ್ಲಿ ಮಾತನಾಡುವುದಿರಲಿ, ಪ್ರಾದೇಶಿಕ ಭಾಷೆಗಳನ್ನು ಕುರಿತ ಚರ್ಚಾಸಭೆಗಳಲ್ಲಿ ಅವರು ಭಾಗವಹಿಸಿಯೇ ಇಲ್ಲ!!”
ಇದು ಅಧಿಕೃತವಾಗಿ ದಾಖಲಾಗಿರುವ ಸತ್ಯ! ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿತ್ತೆನ್ನಲಾದ ತಲೆ-ಬುಡವಿಲ್ಲದ ಊಹಾಪೋಹವಲ್ಲ! ಆದರೆ ಚಡ್ಡಿಗಳು ಎಂತಹ ಕುತಂತ್ರಿಗಳು ನೋಡಿ. ಒಂದೆಡೆ ಮನುಸ್ಮøತಿಯೇ ನಮ್ಮ ಸಂವಿಧಾನವಾಗಬೇಕಿತ್ತು ಎಂದು ವಾದಿಸಿದ್ದ ಗೋಲ್ವಾಲ್ಕರ್ ಎಂಬ ದ್ವೇಷದ ಗುರುವಿನ ನೂರನೇ ಜನ್ಮೋತ್ಸವವನ್ನು ‘ಹಿಂದೂ ಸಮಾವೇಶ’ ಎಂದು ಆಚರಿಸುತ್ತಾರೆ. ಇನ್ನೊಂದೆಡೆ ದಲಿತರ ನಾಯಕ ಮತ್ತು ಆತ್ಮಪ್ರಜ್ಞೆಯಾಗಿದ್ದ ಅಂಬೇಡ್ಕರ್ ಅವರೇ ಸ್ವತಃ ಸಂಸ್ಕøತದ ಪರವಾಗಿದ್ದರು ಎಂದು ಕಲ್ಪಿಸಿಕೊಂಡು ಸಭೆ ಏರ್ಪಡಿಸುತ್ತಾರೆ. ಇದನ್ನೆಲ್ಲ ಶೂದ್ರರು, ದಲಿತರು ನಂಬುತ್ತಾರೆ. ಗೋಲ್ವಾಲ್ಕರ್‍ನ ಸಭೆಗಳಲ್ಲಿ ಶೂದ್ರರು ಭಾಗವಹಿಸಿದರೆ, ಚೆಡ್ಡಿಗಳ ಅಂಬೇಡ್ಕರ್ ಕಾರ್ಯಕ್ರಮಗಳಲ್ಲಿ ದಲಿತರು ಪಾಲ್ಗೊಳ್ಳುತ್ತಾರೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here