HomeUncategorizedಪ್ರತ್ಯೇಕ ರಾಜ್ಯದ ಕೂಗು ಅಭಿವೃದ್ಧಿಗೋ? ಲೂಟಿಗಾಗಿಯೋ?

ಪ್ರತ್ಯೇಕ ರಾಜ್ಯದ ಕೂಗು ಅಭಿವೃದ್ಧಿಗೋ? ಲೂಟಿಗಾಗಿಯೋ?

- Advertisement -
- Advertisement -

ಒಡೆದು ಆಳುವ ಹುಕಿಯು ಹಠವಾಗಿ ಮಾರ್ಪಡುವುದು ಯಾವಾಗೆಂದರೆ ನಾಡಿನ ಸಂಪತ್ತನ್ನು ಬಳಿದು ಆಪೋಶನ ಮಾಡುವ ಕ್ರೌರ್ಯ ಹೆಚ್ಚಾದಾಗ. ಸಂಪತ್ತಿನ ಲೂಟಿಗಾಗಿಯೇ ಅಧಿಕಾರ ಹಿಡಿಯುವ ದುಷ್ಟ ಆಟಗಳು ಶುರುವಿಟ್ಟುಕೊಳ್ಳುತ್ತವೆ. ಇದಕ್ಕೆ ಸಾಕ್ಷಿ ಏನೆಂದರೆ ಪ್ರತಿ ಸಾರಿಯೂ ಹೈದರಾಬಾದ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿನ ಕೂಗು ಏಳುವುದು ಗಮನಿಸಬೇಕು. ಹಿಂದೆ ವೈಜನಾಥ ಪಾಟೀಲರು ಹೈದರಾಬಾದ ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆ ಮಾಡಿ ಹೋರಾಟ ನಡೆಸಿದ್ದರು. ಮಾತ್ರವಲ್ಲ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಕೊಟ್ಟಿದ್ದರು. ಆದರೆ ಹೈದರಾಬಾದ ಕರ್ನಾಟಕದಿಂದ ಈವರೆಗೆ ಆರಿಸಿಹೋದ ರಾಜಕಾರಣಿಗಳು ಯಾಕೆ ಕೆಲಸ ಮಾಡಿಲ್ಲ ಎಂಬ ಪ್ರಶ್ನೆ ಮಾಡಿದ್ದಾರೆಯೇ? ಮಾಡಿಕೊಂಡಿದ್ದಾರೆಯೇ? ವೈಜನಾಥ ಪಾಟೀಲರು ಕಡೆಪಕ್ಷ ಹೈದರಾಬಾದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳೇನು ಎಂಬುದಕ್ಕೆ ಉದ್ಯೋಗ, ಶಿಕ್ಷಣ ಮುಂತಾದ ಸಂಗತಿಗಳನ್ನು ತುಲನಾತ್ಮಕವಾಗಿ ನಾಡಿನ ಮುಂದೆ ಮಂಡಿಸಿದ್ದರು. ಆದರೆ ಈಗ ಪ್ರತ್ಯೇಕತೆಯ ಮಾತಾಡುತ್ತಿರುವವರು ಅದಾವುದನ್ನೂ ಮಾತಾಡದೆ ಭಾವನಾತ್ಮಕ ಸಂಗತಿಗಳನ್ನು ಮುಂದೆ ಮಾಡುತ್ತಿದ್ದಾರೆ. ಹೈದರಾಬಾದ ಕರ್ನಾಟಕದಲ್ಲಿನ ಪ್ರಮುಖ ಸಮಸ್ಯೆಗಳು ಏನು ಎಂಬುದನ್ನು ಈವರೆಗೂ ಕಿಂಚಿತ್ತು ಸಹ ಆಲೋಚಿಸದ ಮತ್ತು ಸಮಸ್ಯೆಗೆ ಪರಿಹಾರ ಕಂಡುಹಿಡಿಯದ ಇವರು ಇದ್ದಕ್ಕಿದ್ದಂತೆ ಪ್ರತ್ಯೇಕ ರಾಜ್ಯ ಬೇಕೆಂಬ ಅಂಶ ಯಾಕೆ ಮುಂದೆ ಮಾಡುತ್ತಿದ್ದಾರೆ? ವೈರುದ್ದ್ಯದ ಸಂಗತಿ ಎಂದರೆ ನಮ್ಮ ನಾಡಿನ ಗಣಿಗಳನ್ನು ಲೂಟಿ ಮಾಡಿದ ಶ್ರೀರಾಮುಲು ರೆಡ್ಡಿಗಳು ಪ್ರತ್ಯೇಕ ರಾಜ್ಯಕ್ಕಾಗಿನ ಹೋರಾಟದ ನಾಯಕರಂತೆ. ಈಗ ಈ ಲೂಟಿಕೋರರು ಬಿಜೆಪಿ ಪಕ್ಷದ ನಾಯಕರೂ ಹೌದು.
ಹೈದರಾಬಾದ ಕರ್ನಾಟಕವು ಅತಿದೊಡ್ಡ ಸಂಖ್ಯೆಯಲ್ಲಿ ಕೃಷಿಕೂಲಿಕಾರ್ಮಿಕರನ್ನು ಹೊಂದಿದೆ. ಬಡರೈತರು ಇಲ್ಲಿಯೇ ಇರುವರು. ದಲಿತ ದಮನಿತ ಜನತೆಯ ಜೀವನದ ತಲಾ ಆದಾಯವು ದಿನಕ್ಕೆ ಖಂಡಿತ ಇಪ್ಪತ್ತು ರೂಪಾಯಿ ದಾಟುವುದಿಲ್ಲ. ವಲಸೆ ಪ್ರಮಾಣವು ಅಧಿಕವಾಗಿದೆ. ಹೀಗೆ ಕಿತ್ತು ತಿನ್ನುವ ಬಡತನದಲ್ಲಿಯೂ ಜನರು ಉರಿವ ಬಿಸಿಲು ಮತ್ತು ಬಾರದ ಮಳೆಯನ್ನು ಸಹಿಸುತ್ತ ಬದುಕಿನ ಬಂಡಿ ಓಡಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಪ್ರಶ್ನೆ ಎತ್ತುವವರು ಭೂಮಿ ಇಲ್ಲದವರಿಗೆ ಭೂಮಿ ಕೊಡಿ, ಹೊಟ್ಟೆ ಹೊರೆಯಲಿಕ್ಕಾಗಿ ಗುಳೆ ಹೋಗುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ, `ಮನರೇಗಾ’ ಜಾರಿ ಮಾಡಿ ಉದ್ಯೋಗ ಸೃಷ್ಟಿಸಿ ಎಂಬ ಮುಂತಾದ ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ. ಇವರಿಗೆ ಬೇಕಿರುವುದು ಅಧಿಕಾರ. ಅಧಿಕಾರ ಹಿಡಿಯಲು ಜನತೆಯನ್ನು ಭಾಷೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಪ್ರತ್ಯೇಕತೆಯ ಹೆಸರಿನಲ್ಲಿ ಭಾವನಾತ್ಮಕವಾಗಿ ಅಣಿನೆರೆಸುವ ಹುನ್ನಾರನ್ನ ಮಾತ್ರ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್, ಜನತಾದಳ ಮತ್ತು ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಈ ಮೂರೂ ಪಕ್ಷಗಳಲ್ಲಿನ ಹಲವರು ಒಂದರ್ಥದಲ್ಲಿ ರಾಜ್ಯವನ್ನು ಲೂಟಿ ಮಾಡಿದವರೆ. ಇವರು ತಮ್ಮ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಮಾಡಿದ ಕೆಲಸವೇನು? ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಮಾಡಿದ ಪ್ರಯತ್ನಗಳೇನು? ಎಂಬುದನ್ನು ಹೇಳಬೇಕು. ಇವರದೇ ಪಕ್ಷದ ಎಂ.ಎಲ್.ಸಿ.ಯಾಗಿದ್ದ ಕಲಬುರಗಿಯ ಶಶಿಲ ಜಿ ನಮೋಶಿಯವರು 2008ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ಡಿ.ಎಂ.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದರು. ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣವನ್ನು ಆದ್ಯತೆಯನುಸಾರ ಅಸಮಾನತೆ ನಿವಾರಣೆಗೆ ಹಣ ವಿನಿಯೋಗ ಮಾಡುವುದು ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ ಶಶಿಲ ನಮೋಶಿಯವರು ತಮ್ಮ ಹೊಣೆಯನ್ನು ನಿಭಾಯಿಸಲೇ ಇಲ್ಲ. ಅವರೇನಾದರೂ ತಮ್ಮ ಅವಧಿಯಲ್ಲಿ ವಹಿಸಿಕೊಂಡ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರೆ ಅಸಮಾನತೆ ಕೊಂಚವಾದರೂ ನಿವಾರಣೆಯಾಗುತ್ತಿತ್ತು. ಇಂದಿಗೆ ಹತ್ತು ವರ್ಷಗಳು ಮುಗಿದುಹೋದವು. ಯಾಕೆ ಇನ್ನೂ ಸಮಸ್ಯೆಗಳು ಪರಿಹಾರವಾಗಿಲ್ಲ? ಕನಿಷ್ಠಪಕ್ಷ ಸರಿಯಾಗಿ ಯೋಜನೆ ಮಾಡಿ ತಳಹಂತದಿಂದ ಸಾಮಾನ್ಯ ಜನತೆಯ ತಲಾ ಆದಾಯ ಹೆಚ್ಚಳವಾಗುವಂತೆ ಕ್ರಮ ವಹಿಸುವಲ್ಲಿ ಮುತುವರ್ಜಿ ವಹಿಸಲಿಕ್ಕಾಗದ ಪಕ್ಷವು ಈಗ ಪ್ರತ್ಯೇಕ ರಾಜ್ಯದ ಬೆಂಕಿ ಹಚ್ಚುವಲ್ಲಿ ತೊಡಗಿದೆ. ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣವನ್ನು ವಿನಿಯೋಗ ಮಾಡಿದ್ದು ಅನುತ್ಪಾದನಾ ಕ್ರಮಗಳಿಗೆ ಹೆಚ್ಚು. ಇದರ ಬಹುದೊಡ್ಡ ವಿಮರ್ಶೆ ವಿಶ್ಲೇಷಣೆ ನಡೆಯಬೇಕಾದ ಜರೂರಿ ಇದೆ.
ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಸಾಮಾನ್ಯ ಜನತೆಯ ತಲಾ ಆದಾಯವು ಕುಸಿಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಚುನಾಯಿತ ಜನತೆಯ ಪ್ರತಿನಿಧಿಗಳ, ಶಿಕ್ಷಣ ಸಂಸ್ಥೆ ಮಾಲಿಕರ, ದಲ್ಲಾಳಿಗಾರರ ಆದಾಯವು ಸಾವಿರಾರು ಪಟ್ಟು ಹೆಚ್ಚಳವಾಗುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಇವರಿಗೆ ನಿಜವಾಗಿಯೂ ತಮ್ಮದೇ ಪ್ರದೇಶವು ಅಭಿವೃದ್ಧಿ ಆಗಬೇಕೆಂಬ ಹೆಬ್ಬಯಕೆ ಇದ್ದರೆ ಈ ನೆಲ ಮುಗಿಲಿನಂತಹ ಅಂತರ ಇರುತ್ತಿತ್ತೇ? ರೈತರ ಆತ್ಮಹತ್ಯೆಯು (ಕೊಲೆ) ಬೀದರನಿಂದ ಆರಂಭವಾಗಿ ಇಲ್ಲಿವರೆಗೆ ಸಾವಿರಾರು ರೈತರು ಕೊಲೆಯಾಗಿದ್ದಾರೆ. ಇದೇ ಬಿಜೆಪಿ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ 1,077 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೂ ಪತ್ರಿಕೆಯ ವರದಿ ಪ್ರಕಾರ ಸರಾಸರಿ ತಿಂಗಳಿಗ ಇಪ್ಪತ್ಯೈದು ರೈತರು ಆತ್ಮಹತ್ಯೆಯ ಒತ್ತಡಕ್ಕೆ ಒಳಗಾಗಿದ್ದಾರೆ. ಇದಕ್ಕೆ ಇರುವ ಮೂಲಭೂತ ಕಾರಣಗಳನ್ನು ಯಾವತ್ತೂ ಚರ್ಚಿಸದ ಬಿಜೆಪಿಯು ಈಗ ಪ್ರತ್ಯೇಕತೆಯ ದನಿ ಎತ್ತುತ್ತಿದೆ. ಚರಿತ್ರೆಯ ಪ್ರಜ್ಞೆ ಇಲ್ಲದ ಯುವಜನತೆಯನ್ನು ಪ್ರತ್ಯೇಕತೆಯ ಭಾವನಾತ್ಮಕತೆಯ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕುತಂತ್ರವಲ್ಲದೆ ಮತ್ತೇನೂ ಅಲ್ಲ.
ಕರ್ನಾಟಕವು ಹೈದರಾಬಾದ ಮುಂಬೈ ಮದ್ರಾಸ್ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿತ್ತು. ದೇಶದಾದ್ಯಂತ ಭಾಷಾವಾರು ಪ್ರಾಂತಗಳ ರಚನೆಗಾಗಿ ಹೋರಾಟ ನಡೆದವು. ಕಾಂಗ್ರೆಸ್, ಕಮ್ಯುನಿಸ್ಟ್ ಸೋಶಿಯಲಿಸ್ಟ್ ಪಕ್ಷಗಳು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದವು. ಆದರೆ ಅಂದಿನ ಜನಸಂಘ ಮತ್ತು ಇಂದಿನ ಬಿಜೆಪಿಯು ಹಾಗೂ ಆರ್ ಎಸ್ ಎಸ್ ಭಾಷಾವಾರು ಪ್ರಾಂತ ರಚನೆಯ ವಿರೋಧವಾಗಿದ್ದವು. ಐವತ್ತರ ದಶಕದಲ್ಲಿ ಭಾಷಾವಾರು ಪ್ರಾಂತ ರಚನೆಗಾಗಿ ಚಳುವಳಿಗಳು ತೀವ್ರಗೊಂಡವು. ಆಂದ್ರಪ್ರದೇಶದಲ್ಲಿ ಅಮರಣ ನಿರಶನ ನಡೆಸಿದ್ದ ಪೊಟ್ಟಿ ಶ್ರೀರಾಮುಲು ಸಾವಿಗೀಡಾದರು. ಆಗ ಕೇಂದ್ರ ಸರಕಾರವು ಭಾಷಾವಾರು ಪ್ರಾಂತ ರಚನೆಗೆ ಅನುಮತಿಸಿತು. ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಅಸ್ತಿತ್ವಕ್ಕೆ ಬಂತು. ಅಂತೆಯೇ ಕರ್ನಾಟಕದಲ್ಲಿಯೂ ಸಮಾವೇಶ ಹೋರಾಟಗಳು ನಡೆದವು. ನಂತರ ಕರ್ನಾಕಟ ರಾಜ್ಯವು ಅಸ್ತಿತ್ವಕ್ಕೆ ಬಂತು. ಅಸ್ತಿತ್ವಕ್ಕೆ ಬಂದ ಕರ್ನಾಟಕವನ್ನು ದೀರ್ಘ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಯಾಕೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂಬುದಕ್ಕೆ ಉತ್ತರ ಕೊಡಬೇಕು. ಇದಕ್ಕೆ ಇವರೇ ನೇರವಾಗಿ ಹೊಣೆಗಾರರಾಗಿದ್ದಾರೆ. ಹಿಂದಿಯಲ್ಲಿ ಒಂದು ಮಾತಿದೆ ‘ಉಲ್ಟಾ ಚೋರ್ ಕೋತವಾ¯ಕೊ ಡಾಟಾ’ ಅಂತ. ಕಳ್ಳನೇ ಪೊಲೀಸ್‍ಗೆ ತಿರುಗಿ ಬೈದಂತೆ. ಕಳ್ಳತನ ಮಾಡಿದ್ದು ತಾವೇ ಮತ್ತು ಈಗ ಹೈದರಾಬಾದ ಕರ್ನಾಟಕಕ್ಕೆ ಅನ್ಯಾಯವಾಗಿ ಪ್ರತ್ಯೇಕ ರಾಜ್ಯ ಬೇಕು ಎಂದು ಕೂಗುವುದೂ ತಾವೇ.
ಯಾಕೆ ಈಗ ಬಿಜೆಪಿಯು ಪ್ರತ್ಯೇಕ ರಾಜ್ಯದ ಪ್ರಶ್ನೆ ಮುಂದೆ ಮಾಡಿದೆ? ಮತ್ತು ಈ ಪ್ರತ್ಯೇಕತೆಯ ಬೇಡಿಕೆಗೆ ಗಣಿಗಳ್ಳ ಶ್ರೀರಾಮುಲುನನ್ನೆ ನಾಯಕನನ್ನಾಗಿ ಮಾಡಿದ್ದು ಯಾಕೆ? ಹಾಗೆ ನೋಡಿದರೆ ಬಿಜೆಪಿಗೆ ಕರ್ನಾಟಕದ ಅಭಿವೃದ್ಧಿ ಖಂಡಿತ ಬೇಕಿಲ್ಲ. ಅಸೆಂಬ್ಲಿ ಚುನಾವಣೆಯ ಫಲಿತಾಂಶವು ಅದನ್ನು ಚಿಂತೆಗೆ ಹಚ್ಚಿದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹೆಸರಲ್ಲಿ ಸರಳ ಬಹುಮತ ಪಡೆಯುವ ಭರವಸೆ ಇಟ್ಟುಕೊಂಡಿದ್ದ ಬಿಜೆಪಿಗೆ ಅಧಿಕಾರ ಕೈ ತಪ್ಪಿದ್ದು ಆಘಾತವನ್ನುಂಟು ಮಾಡಿದೆ. ಹಣಬಲ, ಕೋಮುದಂಗೆ, ಅನಾಚಾರ, ಧರ್ಮದ ಹೆಸರಿನಲ್ಲಿ ಮಂಕುಬೂದಿ, ಭಯೋತ್ಪಾದನೆ ಹೀಗೆ ಏನೆಲ್ಲ ಮಾಡಿದರೂ ಕರ್ನಾಟಕದ ಜನತೆ ಬಿಜೆಪಿಗೆ ಬಹುಮತ ನೀಡಲಿಲ್ಲ. ಬಿಜೆಪಿಯ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರ ಬಳಸಿದ ಮೇಲೆಯೂ ಅಧಿಕಾರ ಸರಳವಾಗಿ ಸಿಗಲಿಲ್ಲ ಅಂತಾದರೆ ಮುಂದಕ್ಕೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಏನು ಮಾಡಬೇಕು? ಹೌದು ಬಿಜೆಪಿಯು ಸ್ವತ: ಕನ್ನಡದ ಕರ್ನಾಟಕದ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದೆ. ಅಂದರೆ ಕನ್ನಡದ ಬಾವುಟ ಮತ್ತು ಭಾಷೆಯ ವಿಷಯ ಬಂದಾಗ ನೇರವಾಗಿ ಬಿಜೆಪಿ ವಿರೋಧಿಸಿದೆ. ಅದು ಹಿಂದಿ ಹೇರಿಕೆಯನ್ನು ಪುರಸ್ಕರಿಸುತ್ತದೆ. ಸಂಸ್ಕøತ ಪೂಜೆ ಬಯಸುತ್ತದೆ. ಕನ್ನಡ ನಾಡಿನ ಮೊದಲ ಧರ್ಮವಾದ ಲಿಂಗಾಯತ ಧರ್ಮ ಮಾನ್ಯತೆಯ ಪ್ರಶ್ನೆ ಬಂದಾಗ ಬಿಜೆಪಿಯು ಬಹಿರಂಗವಾಗಿ ವಿರೋಧಿಸಿದೆ. ಕನ್ನಡದ ಭಾಷೆ, ಬಾವುಟ, ಬಹುಸಂಸ್ಕøತಿಯನ್ನು ವಿರೋಧಿಸುವ ಬಿಜೆಪಿಯು ಅದು ಹೇಗೆ ಕರ್ನಾಟಕವನ್ನು ಪ್ರೀತಿಸಲು ಸಾಧ್ಯ? ಆದ್ದರಿಂದಲೇ ಅದು ಕರ್ನಾಟಕವನ್ನು ಒಡೆಯಬಯಸುತ್ತದೆ. ಲಿಂಗಾಯತ ಪ್ರಶ್ನೆ ಬಂದಾಗ ವೀರಶೈವರೊಳಗೆ ಆರ್ ಎಸ್ ಎಸ್ ಕಮಂಗಿಗಳನ್ನು ಸೇರಿಸಿ ವೀರಶೈವರನ್ನೂ ದಿಕ್ಕುತಪ್ಪಿಸಿದೆ. ಹಾಗೆ ನೋಡಿದರೆ ಲಿಂಗಾಯತ ಮತ್ತು ವೀರಶೈವರನ್ನು ನಿಜವಾಗಿಯೂ ಒಡೆದಿದ್ದು ಬಿಜೆಪಿ. ತಾನೊಂದು ರಾಜಕೀಯ ಪಕ್ಷ. ಅಂತಹದೇನೂ ತಾನು ಮಾಡಿಲ್ಲ ಎಂದು ಅದು ಹೇಳುವಂತಿಲ್ಲ. ಅದು ಯಾವತ್ತೂ ಕರ್ನಾಟಕದ ನೆಲದ ದನಿಯಾದ ರಾಜಕೀಯ ಪಕ್ಷವಾಗಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅದು ಯಾವತ್ತೂ ಕನ್ನಡ ನೆಲವನ್ನು ಆಪೋಷನ ಮಾಡಲು ಹವಣಿಸುತ್ತದೆ. ಅದು ಎಷ್ಟು ಭಂಡತನಕ್ಕೆ ಇಳಿದಿದೆ ಎಂದರೆ ಕರ್ನಾಟಕದ ಗಣಿ ಲೂಟಿ ಮಾಡಿದ ಕಳ್ಳರಿಗೆ ಅದು ಚುನಾವಣೆಯ ನೇತೃತ್ವ ಕೊಡುತ್ತದೆ, ಮತ್ತು ಪ್ರತ್ಯೇಕ ರಾಜ್ಯಕ್ಕಾಗಿ ಅಂತ ದುಷ್ಟನಾಯಕತ್ವವನ್ನೇ ಮುಂದು ಮಾಡುತ್ತದೆ.
ಹೋಗಲಿ ಈವರೆಗೆ ಸಣ್ಣ ಸಣ್ಣ ರಾಜ್ಯಗಳಾಗಿ ಒಡೆದುಹೋದ ರಾಜ್ಯಗಳೆಲ್ಲ ನಿಜವಾಗಿಯೂ ಅಭಿವೃದ್ಧಿ ಹೊಂದಿವೆಯೇ? ಪಕ್ಕದ ತೆಲಂಗಾಣ ರಾಜ್ಯದಲ್ಲಿ ಸರಕಾರಿ ನೌಕರರಿಗೆ ಕೊಡಲು ಖಜಾನೆಯಲ್ಲಿ ಹಣವಿಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಬಡಿದಾಡಿ ಒಡೆದುಹೋದ ರಾಜ್ಯಗಳ ನೈಜ ಅಭಿವೃದ್ಧಿಯ ಚಿತ್ರಣವನ್ನು ಜನತೆಯ ಮುಂದೆ ಇಡಲಿ. ಆಗ ಇವರ ನಿಜ ಬಣ್ಣ ಬಯಲಾಗುವುದು. ಸಣ್ಣ ರಾಜ್ಯಗಳು ತಮ್ಮ ಆದಾಯದ ಬಹು ಭಾಗವನ್ನು ಕೇಂದ್ರಕ್ಕೆ ಕೊಟ್ಟು ಎಲ್ಲದಕ್ಕೂ ಕೇಂದ್ರ ಸರಕಾರದ ಮುಂದೆ ಮಂಡಿಯೂರಬೇಕು ಎಂಬ ಷಡ್ಯಂತ್ರವೂ ಇದರಲ್ಲಿ ಅಡಗಿದೆ. ಆದ್ದರಿಂದಲೇ ರಾಜ್ಯವನ್ನು ಭಾವನಾತ್ಮಕವಾಗಿ ಒಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ಚುನಾವಣಾ ಕುತಂತ್ರ ಇದರಲ್ಲಿ ಅಡಗಿದೆ. ಇವರಿಗೆ ಸುಸ್ಥಿರ ಅಭಿವೃದ್ಧಿಯ ಕಾಳಜಿ ಇದ್ದಿದ್ದರೆ, ತಮ್ಮ ಅಧಿಕಾರದ ಅವಧಿಯಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ರೈತರ ಆತ್ಮಹತ್ಯೆ, ಹೊಟ್ಟೆಗಾಗಿ ವಲಸೆ ತೊಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇದಾವುದರ ಬಗ್ಗೆಯೂ ಚಕಾರವೆತ್ತದೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ ಎಂದರೆ ಅದು ರಾಜ್ಯದ ಜನತೆಗಾಗಿ ಅಲ್ಲ, ತಾವು ಅಧಿಕಾರ ಹಿಡಿಯಲಿಕ್ಕಾಗಿ ಎಂಬುದು ಸ್ಪಷ್ಟ. ಹಾಗಾಗಿ ಬಿಜೆಪಿಯ ಈ ದುಷ್ಟರ ಖೆಡ್ಡಾಕ್ಕೆ ಉತ್ತರ ಕರ್ನಾಟಕದ ಜನತೆ ಬಲಿ ಬೀಳಬಾರದು.

  • ಕೆ.ನೀಲಾ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...