Homeಅಂಕಣಗಳುಬೇಡವಾದ ಮುಸ್ಲಿಮರ ಓಟು

ಬೇಡವಾದ ಮುಸ್ಲಿಮರ ಓಟು

- Advertisement -
- Advertisement -
  • ರಹಮತ್ ತರೀಕೆರೆ |

ಈಚೆಗೆ ಕೆ.ಎಸ್. ಈಶ್ವರಪ್ಪನವರು ‘ನಮಗೆ ಮುಸ್ಲಿಮರ ಓಟಿನ ಅಗತ್ಯವಿಲ್ಲ’ ಎಂದು ಹೇಳಿದರು. ಸಜ್ಜನಿಕೆಗೆ ಹೆಸರಾಗಿದ್ದ ವಾಜಪೇಯಿ ಕೂಡ ಲಖನೋದಲ್ಲಿ ಚುನಾವಣೆಗೆ ನಿಂತಾಗ ‘ವಿ ಕ್ಯನ್ ಡೂ ವಿತ್‍ಔಟ್ ದೆಮ್’ ಎಂದು ಹೇಳಿದ್ದುಂಟು. ಬಿಜೆಪಿಯಲ್ಲಿ ಇದೇನು ಹೊಸಕರೆಯಲ್ಲ. ಮುಸ್ಲಿಮರಿಗೆ ಟಿಕೇಟು ಕೊಡದಿರುವುದರಲ್ಲೂ ಈ ಧೋರಣೆ ವ್ಯಕ್ತವಾಗಿದೆ. ಘಾತುಕವಾದದ್ದು ಓಟು ಹಾಕುವುದು-ಹಾಕದಿರುವುದಲ್ಲ. ನಾವು-ಅವರು ಎಂದು ವಿಭಜಿಸುವುದು. ನಿಜ, ಭಾರತದ ಬಹುತೇಕ ಮುಸ್ಲಿಮರು ಬಿಜೆಪಿಗೆ ಓಟುಹಾಕುವುದಿಲ್ಲ. ಆದರೆ ಚುನಾವಣಾ ರಾಜಕಾರಣದಲ್ಲಿ ಮುಸ್ಲಿಮರ ಹಾಗೂ ಬಿಜೆಪಿಯ ಸಂಬಂಧ ಇಷ್ಟು ಸರಳವಾಗಿದೆಯೇ?

ಈಶ್ವರಪ್ಪನವರ ಮಾತು ಕೇಳಿದಾಗ ತಟ್ಟನೆ ನೆನಪಾಗಿದ್ದು, ಹಳ್ಳಿಯೊಂದರಲ್ಲಿರುವ ನನ್ನಕ್ಕನ ಅಳಿಯ; ಹೆಂಡತಿ ಬಾನುವಿನ ತವರೂರಲ್ಲಿರುವ ಅವಳ ಚಿಕ್ಕಪ್ಪನ ಮಗ. ಇವರು ಬಿಜೆಪಿ ಕಾರ್ಯಕರ್ತರು. ಇಬ್ಬರಿಗೂ ಆರೆಸ್ಸೆಸ್ ಗೊತ್ತು. ಆದರೆ ಅವರ ಕಣ್ಣೆದುರು ಇರುವುದು ಆರೆಸ್ಸೆಸ್, ವಿಎಚ್‍ಪಿ, ಭಜರಂಗದಳವಲ್ಲ. ತಮ್ಮೂರಿನಲ್ಲಿ ರಾಜಕೀಯ ಅವಕಾಶ ಅರಸುತ್ತ ಬಿಜೆಪಿಗೆ ಹೋಗಿರುವ ವ್ಯಕ್ತಿಯ ಜತೆಗಿರುವ ಲಾಗಾಯ್ತಿನ ಆಪ್ತ ಸಂಬಂಧ; ಅವಕಾಶವಾದ. ಬಳ್ಳಾರಿಯಲ್ಲೂ ರಾಮುಲು-ರೆಡ್ಡಿಗಳ ಜತೆ ಶಾನೆ ಮುಸ್ಲಿಮರುಂಟು. ಈ ಭಾಗದ ಕೆಲವು ಮುಸ್ಲಿಂ ನಾಯಕರು ಕಾಂಗ್ರೆಸ್ಸಿನಲ್ಲಿ ಅನ್ಯಾಯವೆನಿಸಿದಾಗ ಸೇಡಿನಿಂದ ಬಿಜೆಪಿ ಸೇರುವ ಪರಿಪಾಠವಿದೆ. ಇಲ್ಲೆಲ್ಲ ಕೆಲಸ ಮಾಡುವ ತರ್ಕವೇನೆಂದರೆ, ಯಾವ ಪಕ್ಷವಾದರೇನು, ನಮಗೆ ಒಳಿತಾದರೆ ಸಾಕು ಎನ್ನುವ ಸಮೀಪದೃಷ್ಟಿ. ಆದರೆ ಈ ತಮ್ಮ ಪ್ರಿಯ ನಾಯಕರು ಅಂತಿಮವಾಗಿ ಆರೆಸ್ಸೆಸ್ಸಿನ ಹಿಂದೂರಾಷ್ಟ್ರದ ವಿಶಾಲಚಿತ್ರದಲ್ಲಿ ಒಂದು ಚುಕ್ಕಿಯಾಗಿ ಬದಲಾಗುತ್ತಾರೆ ಎಂಬ ಖಬರು ಅವರಿಗಿರುವುದಿಲ್ಲ. ತಕ್ಷಣ ಕಾಣುವುದು ಎರೆಹುಳ. ಅದರೊಳಗಿರುವ ಗಾಳವಲ್ಲ. ಎಷ್ಟೊ ಸಲ ಅವರ ನಾಯಕನೂ ಯಾರದೊ ಹತ್ಯಾರವಾಗಿರುವ ಬಲಿಪಶುವಾಗಿರುತ್ತಾನೆ.

ಸ್ವಹಿತಾಸಕ್ತಿಯುಳ್ಳ ಹಾಗೂ ದೂರದೃಷ್ಟಿಯ ರಾಜಕೀಯ ಪ್ರಜ್ಞೆಯಿರದ, ಸ್ಥಳೀಯ ರಾಜಕಾರಣದಲ್ಲಿ ಮಾತ್ರ ವ್ಯವಹರಿಸುವ ಸಾಮಾನ್ಯ ಮುಸ್ಲಿಮರ ರಾಜಕೀಯ ಆಯ್ಕೆಗಳನ್ನು ಹೇಗೊ ಅರ್ಥಮಾಡಿಕೊಳ್ಳಬಹುದು. ಆದರೆ ಶಹನÀವಾಜ್ ಹುಸೇನ್, ಮುಕ್ತಿಯಾರ್, ಎಂ.ಜೆ. ಅಕ್ಬರ್, ನಜ್ಮಾಹೆಪ್ತುಲ್ಲ ಇವರ ಮಾನಸಿಕತೆಯನ್ನು ಹೇಗೆ ಅರಿಯುವುದು? ಇವರಿಗೆ ಬಿಜೆಪಿ ಮುಖವಾಡದ ಹಿಂದಿರುವ ಆರೆಸ್ಸೆಸ್‍ನ ಮುಖ ಗೊತ್ತು; ಮುಸ್ಲಿಮರನ್ನು ಎರಡನೆಯ ದರ್ಜೆಗಿಳಿಸಬೇಕೆಂಬ ಹಿಂದುರಾಷ್ಟ್ರದ ಸಿದ್ಧಾಂತವೂ ಗೊತ್ತು. ಆದರೂ ಹೇಗೆ ಒಳಗಿದ್ದಾರೆ? ಈಶ್ವರಪ್ಪನಂಥವರು ಮಾಡುವ ವಿದ್ವೇಷದ ಹೇಳಿಕೆಗಳನ್ನು ಅವರು ಹೇಗೆ ಪರಿಭಾವಿಸುತ್ತಾರೆ ಎಂದು ಸೋಜಿಗವಾಗುತ್ತದೆ. ಸ್ವಹಿತಾಸಕ್ತಿ ಅಷ್ಟು ಅಮೂಲ್ಯವೇ? ಬೇರೆ ಪಕ್ಷದಲ್ಲೂ ಇದೇ ಅವಸ್ಥೆ ಎಂಬ ಹತಾಶ ವಾಸ್ತವಪ್ರಜ್ಞೆಯೇ? ಅಪ್ರಾಮಾಣಿಕರಾಗಿ ಬದುಕುವ ಗುಲಾಮಿಪ್ರಜ್ಞೆಯೇ, ಏನಿದ್ದೀತು?

ಈ ಸಲದ ಕರ್ನಾಟಕ ಚುನಾವಣೆಯಲ್ಲಿ ಉತ್ತರಪ್ರದೇಶ, ಗುಜರಾತ್ ಚುನಾವಣೆಗಳಿಗೆ ಹೋಲಿಸಿದರೆ, ಮುಸ್ಲಿಂದ್ವೇಷದ ಪರಿಭಾಷೆ ಹೆಚ್ಚು ಬಳಕೆಯಾಗಲಿಲ್ಲ. ಉತ್ತರದಲ್ಲಿರುವಂತೆ ದಕ್ಷಿಣದಲ್ಲಿ ಮತೀಯ ನುಡಿಗಟ್ಟಿಗೆ ಅಷ್ಟೊಂದು ಬೆಲೆಯಿಲ್ಲ ಎಂಬ ತಿಳುವಳಿಕೆಯು ಬಿಜೆಪಿಗೆ ಇರಬಹುದು. ಆದರೂ ಚುನಾವಣೆ ಎದುರಿಸದ ಸಂಘಪರಿವಾರದ ನಾಯಕರಿಗೆ ಹೋಲಿಸಿದರೆ, ಚುನಾವಣೆ ಎದುರಿಸುವ ರಾಜಕಾರಣಿಗಳು ನಂಜಿನ ಮಾತಾಡಲು ಹಿಂಜರಿಯುವರು. ಅದರಲ್ಲೂ ಯಡಿಯೂರಪ್ಪನವರು ಈಶ್ವರಪ್ಪನಂತೆ ಸಂಘದ ಶಾಖೆಯ ಮೂಲಕ ಬಂದವರಾದರೂ, ಮತೀಯ ಪರಿಭಾಷೆ ಬಳಸುವುದು ಕಡಿಮೆ. ಇದಕ್ಕೆ ಕಾರಣ, ಮುಸ್ಲಿಮರಿಲ್ಲದ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬಾಲ್ಯಾನುಭವವೊ, ಶಿಕಾರಿಪುರದ ರಾಜಕೀಯ ವಾಸ್ತವಿಕತೆಯೊ ಇರಬೇಕು. ಶಿಕಾರಿಪುರದಲ್ಲಿ ಅವರು ಕೋಮುಗಲಭೆ ಆಗಗೊಟ್ಟಿಲ್ಲ; ಅಲ್ಲಿನ ಮುಸ್ಲಿಮರೂ ಅವರಲ್ಲಿ ವಿಶ್ವಾಸವಿಟ್ಟಿದ್ದಾರೆ ಎಂದು ಹೇಳುವುದುಂಟು. ಹಾಗಿದ್ದರೆ, ಪಕ್ಷದೊಳಗೆ ಮಗ್ಗುಲಮುಳ್ಳಾಗಿರುವ ಯಡಿಯೂರಪ್ಪನವರಿಗೆ ತೊಡಕಾಗಬೇಕು ಎಂಬ ಉದ್ದೇಶವೇನಾದರೂ ಈಶ್ವರಪ್ಪನವರ ಹೇಳಿಕೆಯಲ್ಲಿದೆಯೊ? ಏನೇಯಿರಲಿ, ತಮ್ಮ ದೈನಿಕ ಬದುಕಿಗೆ ಸಣ್ಣಪುಟ್ಟ ರೀತಿಯಲ್ಲಿ ನೆರವಾಗುವ ಕೋಮುಗಲಭೆ ಮಾಡಗೊಡದ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಬೆಂಬಲಿಸುವ ಪ್ರವೃತ್ತಿ ಮುಸ್ಲಿಮರಲ್ಲಿದೆ.

ಇದಕ್ಕೆ ಪೂರಕವಾಗಿ ಬಿಜೆಪಿ ಮುಸ್ಲಿಮರ ಬೆಂಬಲವನ್ನೂ ಪಡೆಯಲು ಈಚಿನ ವರ್ಷಗಳಲ್ಲಿ ಯತ್ನಿಸುತ್ತಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರ ಮುಂದೆ ತಲಾಕ್ ಸಮಸ್ಯೆಯಿಟ್ಟು ಮುಸ್ಲಿಂ ಗಂಡಸರನ್ನು ಅವರ ಎದುರಾಳಿಗಳಂತೆ ಬಿಂಬಿಸಿ ಮೋದಿ, ಸಾಕಷ್ಟು ಮತಗಳನ್ನು ಪಡೆದರು ಎಂಬ ಅಭಿಪ್ರಾಯವಿದೆ. ಈಗ ಬುರ್ಖಾಧಾರಿ ಮಹಿಳೆಯೊಬ್ಬರು ಕರ್ನಾಟಕದ ಚುನಾವಣೆಯಲ್ಲಿ ಹುರಿಯಾಳು ನಿಲ್ಲಿಸಿರುವುದು ಪರೋಕ್ಷವಾಗಿ ಮುಸ್ಲಿಂ ಮಹಿಳೆಯರ ಮತ ಪಡೆದು ಬಿಜೆಪಿಗೆ ನೆರವಾಗಲೆಂದು ಎಂಬ ವ್ಯಾಖ್ಯಾನವಿದೆ. ‘ಸಬಕ್ ಸಾಥ್’ ಘೋಷಣೆ, `ಮುಸ್ಲಿಂ ರಾಷ್ಟ್ರೀಯ ಮಂಚ ಸ್ಥಾಪನೆ’ ಇವೆಲ್ಲ ವಿವಿಧ ತಂತ್ರಗಾರಿಕೆಯಿಂದ ಹುಟ್ಟಿದ ಉಪಾಯಗಳು. ತಾವು ಮುಖ್ಯಮಂತ್ರಿಯಾದರೆ ತಮ್ಮ ಸಂಪುಟದಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳುವ ವಾಗ್ದಾನವನ್ನು ಹಿಂದೆ ಯಡಿಯೂರಪ್ಪ ಮಾಡಿದ್ದರು. ಇದರ ಪರಿಣಾಮ ಮುಸ್ಲಿಮರ ಮತಗಳು ಎಷ್ಟು ವಾಲಿದವೊ ತಿಳಿಯದು. ಆದರೆ ಪರಿಣಾಮವಾಗಿ ಸಂಘಪರಿವಾರಕ್ಕೆ ಹಿತಕರ ದನಿಯಲ್ಲಿ ವಾಚಕರವಾಣಿ ಬರೆಯುತ್ತಿದ್ದ ಮಮ್ತಾಜಲಿ ಖಾನರಿಗೆ ಮಂತ್ರಿಯೋಗ ಸಿಕ್ಕಿತು. ಈಗ ಯಾಕೆ ಮುಸ್ಲಿಮರಿಗೆ ಟಿಕೇಟನ್ನು ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಯಡಿಯೂರಪ್ಪನವರು “ಅವರು ಗೆಲ್ಲುವುದಿಲ್ಲ’’ ಎಂದರು. ಇದು ನಿಜ. ಸಂಘ ಪರಿವಾರದ ಮತದಾರರಿಗೆ ಮುಸ್ಲಿಮರು ತಮ್ಮ ಪ್ರತಿನಿಧಿ ಆಗುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ತಮ್ಮ ಧರ್ಮದವನೊಬ್ಬನನ್ನು ಬೆಂಬಲಿಸುವುದು ಮುಸ್ಲಿಮರಿಗೂ ಕಷ್ಟ.

‘ಸಬ್ ಕಾ ಸಾಥ್’ ಎಂಬ ಒಳಗೊಳ್ಳುವ್ರ, ‘ನಿಮ್ಮ ಓಟು ಬೇಕಿಲ್ಲ’ ಎಂಬ ದೂರೀಕರಿಸುವ ಹೇಳಿಕೆಗಳು ಪರಸ್ಪರ ವಿರುದ್ಧವಿದ್ದರೂ, ಅವುಗಳ ಹಿಂದೆ ಮತಗಳನ್ನು ಸೆಳೆಯುವ ಮತ್ತು ಹಿಂದೂ ಓಟುಗಳನ್ನು ಧ್ರುವೀಕರಿಸುವ ಸಮಾನ ಉದ್ದೇಶವಿದೆ; ಇದರ ಭಾಗವಾಗಿಯೇ ಅನಂತಕುಮಾರ್ ಹೆಗಡೆ ಮಾಡಿದ “ಮುಸ್ಲಿಮರನ್ನೂ ಇಸ್ಲಾಮನ್ನೂ ಪ್ರಪಂಚದಿಂದ ಒರೆಸಿಹಾಕುವ ತನಕ ಲೋಕಕ್ಕೆ ಶಾಂತಿಯಿಲ್ಲ” ಎಂಬ ಹೇಳಿಕೆಯನ್ನು ನೋಡಬೇಕು. ಬೆಳಗಾವಿ ಭಾಗದ ಶಾಸಕರೊಬ್ಬರು ಈ ಸಲದ ಚುನಾವಣೆ ಹಿಂದು ಮತ್ತು ಮುಸ್ಲಿಮರ ಪಾಕಿಸ್ತಾನ ಭಾರತದ, ಮಸೀದಿ ಮತ್ತು ಗುಡಿಯ ನಡುವಣ ಕದನ ಎಂದು ಹೇಳಿಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ತೊಗಾಡಿಯಾ, ಮುತಾಲಿಕ್, ಕಲ್ಕಡ್ಕ, ಕಟಿಯಾರ್ ಮೊದಲಾದ ಚುನಾವಣೆಗೆ ನಿಲ್ಲದ ನಾಯಕರು ಕೊಡುತ್ತಲೇ ಬಂದಿದ್ದಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಸಂಸದರು, ಶಾಸಕರು, ಮಂತ್ರಿಗಳು, ಸರ್ವಧರ್ಮಗಳನ್ನು ಸಮಾನವಾಗಿ ನೋಡಬೇಕೆಂಬ ಆಶಯವುಳ್ಳ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿದವರು, ಈಗ ಇಂತಹ ಹೇಳಿಕೆಗಳನ್ನು ನಿರ್ಭಿಡೆಯಿಂದ ಕೊಡುತ್ತಿದ್ದಾರೆ. ಬಿಜೆಪಿಯಲ್ಲಿರುವ ಶೂದ್ರ ರಾಜಕಾರಣಿಗಳಿಗೆ ಆರೆಸ್ಸೆಸ್ಸನ್ನು ಸಂತೃಪ್ತವಾಗಿಸಲು ಹೆಚ್ಚು ಮುಸ್ಲಿಂ ವಿರೋಧಿ ಪರಿಭಾಷೆ ಬಳಸುವ ಒತ್ತಡವೂ ಇರಬಹುದು. ಎಂತಲೇ ದನದಮಾಂಸ ವಿಷಯದಲ್ಲಿ ಕೈಕಾಲು ನಾಲಗೆ ಕತ್ತರಿಸುವಂತಹ ಹೇಳಿಕೆಗಳನ್ನು ಈಶ್ವರಪ್ಪನವರು ಕೊಡುವಂತೆ ಮಾಡಲಾಗಿದೆ. ಆದರೆ ಮುಚ್ಚುಮರೆಯಿಲ್ಲದೆ ತಮ್ಮ ಮನದೊಳಗಿನ ಮಾತನ್ನು ಪ್ರಕಟಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಬೇಕು.

ಮುಸ್ಲಿಂ ದ್ವೇಷದ ನುಡಿಗಟ್ಟಿನಲ್ಲಿ ಗೋವಿಂದ ಕಾರಜೋಳ, ಚಂದ್ರಕಾಂತ ಬೆಲ್ಲದ, ಜಗದೀಶ ಶೆಟ್ಟರ್, ಶ್ರೀರಾಮುಲು ಮುಂತಾದವರು ಮಾತಾಡುವುದು ಕಡಿಮೆ. ಇದಕ್ಕೆ ಕಾರಣ ಅವರ ವ್ಯಕ್ತಿತ್ವದಲ್ಲಿರುವ ಉದಾರವಾದಿತ್ವವೊ, ಸ್ಥಳೀಯ ರಾಜಕೀಯ ಸಂಬಂಧಗಳು ಸಂಕೀರ್ಣತೆಯೊ, ಸಂಘಪರಿವಾರದ ತರಬೇತಿಯಿಲ್ಲದೆ ರಾಜಕೀಯ ಅವಕಾಶಕ್ಕಾಗಿ ಬಿಜೆಪಿಗೆ ಬಂದಿರುವುದೊ ಆಗಿದೆ. ಆದರೆ ಅನಂತಕುಮಾರ್ ಹೆಗಡೆ, ಸಂಘ ಪರಿವಾರದಲ್ಲಿರುವ ಮುಸ್ಲಿಂದ್ವೇಷದ ವಿಶಿಷ್ಟ ಪ್ರತಿನಿಧಿ. ಗೋಳ್ವಾಳ್ಕರ್ ದೇಶದ ಆಂತರಿಕ ಶತ್ರುಗಳಲ್ಲಿ ಮುಸ್ಲಿಮರನ್ನು ಮೊದಲ ಸ್ಥಾನದಲ್ಲಿರಿಸಿದ್ದರು; ಸಾವರ್ಕರ್ ಮುಸ್ಲಿಮರನ್ನು ಹೆಚ್ಚಿನ ಸೌಲಭ್ಯ ಕೇಳದೆ ಬದುಕುವ ಎರಡನೇ ದರ್ಜೆಯ ನಾಗರಿಕರಾಗಿಸಬೇಕೆಂದು ಹೇಳಿದ್ದರು; ಆದರೆ ಅನಂತ್, ಎರಡು ಹೆಜ್ಜೆ ಮುಂದೆ ಹೋಗಿ, ಸಮುದಾಯವನ್ನೇ ನಾಶಮಾಡಬೇಕು ಎಂದಿದ್ದಾರೆ. ಇದು ಒಬ್ಬನ ತಪ್ಪಿಗೆ ಇಡೀ ಕುಲವನ್ನೇ ನಾಶಮಾಡಬೇಕೆಂದು ಭೂಪ್ರದಕ್ಷಿಣೆ ಮಾಡುತ್ತ ಜನಸಂಹಾರಗೈದ ಕೊಡಲಿರಾಮನ ಪ್ರಜ್ಞೆ. ಹೆಗಡೆಯವರಾದರೂ ಪರಶುರಾಮನ ಸೃಷ್ಟಿ ಎನ್ನಲಾಗುವ ಕರಾವಳಿಯಿಂದ ಬಂದವರು. ಜನಾಂಗನಾಶದ ಪ್ರಯೋಗವನ್ನು ನಾಜಿಗಳು ಯಹೂದಿಗಳ ನಡೆಸಿದರು. ಆದರೆ ಯಹೂದಿಗಳನ್ನು ಸರ್ವನಾಶ ಮಾಡಲಾಗಲಿಲ್ಲ. ಮುಸ್ಲಿಮರನ್ನು ನಾಶಮಾಡುವ ಪ್ರಶ್ನೆಯೂ ಇಂತಹುದೇ. ಆದರೆ ಈ ದಿಸೆಯಲ್ಲಿ 2002ರಲ್ಲಿ ಗುಜರಾತಿನಲ್ಲಿ ಸಣ್ಣಪ್ರಯೋಗ ಮಾಡಲಾಯಿತು. ಇದರ ಫಲವಾಗಿ ರಾಷ್ಟ್ರನಾಯಕರಾಗಿ ಮೋದಿ ಹಾಗೂ ಅಮಿತ್‍ಶಾ ರೂಪುಗೊಂಡರು. ಅವರಿಗೆ ‘ಮುಸ್ಲಿಮರ ಓಟು ಬೇಡ’ ‘ಅವರನ್ನು ನಿರ್ಮೂಲ ಮಾಡಬೇಕು’ ಎಂಬ ಹೇಳಿಕೆಗಳು ಅಪರಾಧ ಅನಿಸಿರಲಿಕ್ಕಿಲ್ಲ.

ಕಾಂಗ್ರೆಸ್ ಮುಕ್ತ ಭಾರತ್ ಘೋಷಣೆಯು ಇದೇ ಮಾನಸಿಕತೆಯ ಇನ್ನೊಂದು ಭಾಗ. ಭಾರತದ ಸಾಮಾಜಿಕ ರಾಜಕೀಯ ವಾಸ್ತವದಲ್ಲಿ ಹಾಗೆ ಒಂದು ಜನಾಂಗವನ್ನು ತತ್ವವನ್ನು ಆಹಾರಕ್ರಮವನ್ನು ಭಾಷೆಯನ್ನು ಪಕ್ಷವನ್ನು ಸಂಸ್ಕೃತಿಯನ್ನು ನಾಶಮಾಡಲು ಸಾಧ್ಯವೇ? ತಾವು ಒಪ್ಪದ ಆಹಾರ, ಪಕ್ಷ, ಸಮುದಾಯ, ತತ್ವ ಚಿಂತಕ ಇರಬಾರದು ಎಂಬ ಆಲೋಚನಾಕ್ರಮವೇ ಡೆಮಾಕ್ರಸಿಗೆ ಸಂವಿಧಾನಕ್ಕೆ ವಿರುದ್ಧವಾದುದು. ಯಾವುದೇ ಬಹುಧರ್ಮೀಯ ಬಹುಜನಾಂಗೀಯ ಬಹುಸಂಸ್ಕೃತಿಯ ಬಹುಭಾಷಿಕ ಸಮಾಜದಲ್ಲಿ ಇದು ಹೇಯಚಿಂತನೆ. ನಿಜವಾಗಿ ಲೋಕದಿಂದ ಶಾಶ್ವತವಾಗಿ ಒರೆಸಿಹಾಕಬೇಕಿರುವ ಸಂಗತಿಗಳಿವೆ. ಅವೆಂದರೆ, ಬಡತನ ಹಸಿವು ಅನಕ್ಷರತೆ ಜನಾಂಗವಾದ, ಜಾತಿವಾದ ಹಾಗೂ ಎಲ್ಲ ಧರ್ಮಗಳಲ್ಲಿ ಕ್ಯಾನ್ಸರ್ ಗಡ್ಡೆಯಂತೆ ಬೆಳೆದಿರುವ ಮೂಲಭೂತವಾದ ಮತ್ತು ಕೋಮುವಾದ. ಎಲ್ಲ ಮತಧರ್ಮಗಳೂ ತಮ್ಮ ಮುಖಕ್ಕೆ ಕೆಸರು ಬಳಿಯುತ್ತಿರುವ ಮತೀಯ ವಿಕಾರಗಳನ್ನು ಉಜ್ಜಿ ತೆಗೆಯಬೇಕಿದೆ- ಹಿಂದೆ ವೈದ್ಯರು ಸಿಡುಬು ಕುಷ್ಠ ಕಾಲರಾ ಮುಂತಾದ ರೋಗಗಳಿಂದ ಮುಕ್ತವಾದ ವಿಶ್ವವನ್ನು ಕಲ್ಪಿಸಿಕೊಂಡು ಯುದ್ಧ ಮಾಡಿದ ಹಾಗೆ.

ಸೋಜಿಗವೆಂದರೆ, ನಿಮ್ಮ ಮತಬೇಡ, ನಿಮ್ಮನ್ನು ನಾಶಮಾಡುತ್ತೇವೆ ಎನ್ನುವ ಹೇಳಿಕೆಗಳಿಗೆ ಸಾಮಾನ್ಯ ಮುಸ್ಲಿಮರು ತಲೆಕೆಡಿಸಿಕೊಳ್ಳದೆ ನಿರ್ಲಿಪ್ತವಾಗಿರುವುದು. ‘ಆವರಣ’ ಕಾದಂಬರಿ ಬಂದಾಗಲೂ ಅವರ ಪ್ರತಿಕ್ರಿಯೆ ಹೀಗೇ ಇತ್ತು. ಅವರಿಗೆ ಈ ಬರೆಹ-ಮಾತು ತಲುಪುತ್ತಿಲ್ಲವೊ? ಇಂತಹವನ್ನು ಕೇಳಿಕೇಳಿ ಜಡ್ಡುಬಿದ್ದಿದ್ದಾರೊ? ಇವೆಲ್ಲ ಆಗುಹೋಗದ ಕೆಲಸವೆಂಬ ಆತ್ವವಿಶ್ವಾಸವೊ? ಕೊನೆಯದೇ ದಿಟವಿರಬೇಕು. ಆದರೆ ಇಂತಹ ವಿದ್ವೇಷದ ಹೇಳಿಕೆಗಳು ಪ್ರಜ್ಞಾವಂತರನ್ನು ಕಂಗೆಡಿಸಿವೆ. ಮನುಷ್ಯತ್ವದ ನೆಲೆಯಲ್ಲಿ ಸಮಾಜ ಕಟ್ಟಬಯಸುವ ನಾಗರಿಕಪ್ರಜ್ಞೆಯುಳ್ಳ ಎಲ್ಲರ ತಳಮಳಗಳೂ ಹೀಗೇ ಇರುತ್ತವೆ. ಪಾಕಿಸ್ತಾನ ಬಾಂಗ್ಲಾದೇಶಗಳಲ್ಲೂ ಹಿಂದುಗಳ ಬೆಂಬಲ ನಮಗೆ ಬೇಕಿಲ್ಲ ಎಂದು ಹೇಳುವ ರಾಜಕಾರಣಿಗಳಿರಬಹುದು; ಹಿಂದೂಗಳನ್ನು ದೇಶಬಿಟ್ಟು ಓಡಿಸಬೇಕು ಎಂಬ ಕೂಗುಮಾರಿಗಳು ಇದ್ದಾರು. ಅಮೆರಿಕ ಇಂಗ್ಲೆಂಡುಗಳಲ್ಲಿ ಟ್ರಂಪ್‍ನಂತಹ ಮತಿಗೆಟ್ಟವರು ಅಧಿಕಾರಕ್ಕೆ ಬಂದ ಬಳಿಕ, ವಲಸಿಗರನ್ನು ಹೊಡೆದೋಡಿಸಬೇಕು ಎಂಬ ಚಳುವಳಿ ಆರಂಭವಾಗಿದೆ. ಭಾರತದಿಂದ ಹೋದವರೇ ಇದರ ಬಲಿಪಶುಗಳು. ವ್ಯಂಗ್ಯವೆಂದರೆ, ಹೀಗೆ ಅಭದ್ರತೆಯಲ್ಲಿ ಅಪಮಾನದಲ್ಲಿ ಬದುಕುವ ಈ ಭಾರತೀಯ ಮೂಲದವರೇ ತಮ್ಮ ದೇಶದಲ್ಲಿರುವ ಜನಾಂಗದ್ವೇಷಿ ಸಿದ್ಧಾಂತದ ಬೆಂಬಲಿಗರು. ಆದರೆ ಎಲ್ಲ ಜೀವಂತ ಸಮಾಜಗಳಲ್ಲಿ ಮನುಷ್ಯತ್ವದ ಪಸೆ ಉಳಿದಿರುವುದು ಜನಾಂಗನಾಶದ ಧಮಕಿ ಹಾಕುವರಿಂದಲ್ಲ; ಅಂಥವರನ್ನು ಎದುರಿಸುವ ಮತ್ತು ಸೋಲಿಸುವ ಪ್ರಜ್ಞಾವಂತ ನಾಗರಿಕರಿಂದ; ನಮ್ಮಂತೆ ಅವರು ಸಹ ಎಂದು ತತ್ವದಲ್ಲಿ ಬದುಕುವ ಜನ ಸಾಮಾನ್ಯರಿಂದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...