Homeರಾಜಕೀಯಮೈತ್ರಿ ಸರಕಾರದ ಗೋಜಲು ಸಂದೇಶಗಳು

ಮೈತ್ರಿ ಸರಕಾರದ ಗೋಜಲು ಸಂದೇಶಗಳು

- Advertisement -
- Advertisement -
  • ಎ. ನಾರಾಯಣ |

ಎಲ್ಲಾ ಮೈತ್ರಿ ಸರಕಾರಗಳೂ ಅವಕಾಶವಾದದ ಶಿಶುಗಳೇ ಆಗಿರುತ್ತವೆ. ಹಾಗಿರುವಾಗ ಕರ್ನಾಟಕದಲ್ಲಿ 2018ರ ಚುನಾವಣೆಯ ನಂತರ ರೂಪುಗೊಂಡ ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆsಸ್ ಪಕ್ಷಗಳ ಮೈತ್ರಿ ಸರಕಾರವನ್ನು ಕೆಲವರು ಅಪವಿತ್ರ ಅಂತಲೂ ಅನೈತಿಕ ಅಂತಲೂ ಟೀಕಿಸುತ್ತಿರುವುದು ವಿಚಿತ್ರವಾಗಿದೆ. ಭಾರತದ ಪ್ರಜಾತಾಂತ್ರಿಕ ರಾಜಕೀಯವೇ ಒಂದು ರೀತಿಯ ಅಪವಿತ್ರ ಮತ್ತು ಅನೈತಿಕ ಆಯ್ಕೆಗಳ ಸರಮಾಲೆ. ಇರುವುದರಲ್ಲಿ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆಗಳನ್ನು ಮಾಡುವುದೇ ಇಲ್ಲಿ ಪರಮಪವಿತ್ರ ಪೌರ ಕೈಂಕರ್ಯ. ಅದು ಚುನಾವಣೆಯಾದರೂ ಅಷ್ಟೇ. ಆಡಳಿತವಾದರೂ ಅಷ್ಟೇ, ಸಂಸದೀಯ ವ್ಯವಹಾರಗಳಾದರೂ ಅಷ್ಟೇ .

ಆದುದರಿಂದ ಕರ್ನಾಟಕದಲ್ಲಿ ನಡೆದ ಚುನಾವಣೋತ್ತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಬಹುದಾಗಿದ್ದ ಪ್ರಶ್ನೆ ಬಹಳ ಸರಳವಾಗಿತ್ತು. ಯಾವುದು ಕಡಿಮೆ ಅಪವಿತ್ರ ಮತ್ತು ಅನೈತಿಕ? ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಸರಳ ಬಹುಮತಕ್ಕೆ ಬೇಕಾಗಿದ್ದ ಸಂಖ್ಯೆಗಳನ್ನು ಹೊಂದಿಸಲು ಇತರ ಪಕ್ಷಗಳ ಶಾಸಕರನ್ನು ಅಪ್ಪಟ ಹರಾಜಿನಲ್ಲಿ ವಿಕ್ರಯಿಸಿ ಸರಕಾರ ರಚಿಸುವುದೇ? ಅಥವಾ ಚುನಾವಣೆಯಲ್ಲಿ ಎಲ್ಲರೂ ಸೋತ ಹಿನ್ನೆಲೆಯಲ್ಲಿ ಸೋತ ಎರಡು ಪಕ್ಷಗಳು ಸೇರಿ ಕಾನೂನುಬದ್ಧವಾಗಿ ಸರಕಾರ ನಡೆಸುವುದೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಕೋರ್ಟು-ಕಚೇರಿ ಅಲೆಯಬೇಕಾಗಿಲ್ಲ, ರಾಜ್ಯಪಾಲರ ಬಳಿ ಬಿನ್ನವತ್ತಲೆ ಸಮರ್ಪಿಸಿ ಕಾಯಬೇಕಾಗಿಲ್ಲ, ಮಾಧ್ಯಮಗಳ ಚರ್ಚಾ ರಂಪಾಟದ ಅಗತ್ಯವಿಲ್ಲ. ನಿಷ್ಪಕ್ಷಪಾತವಾಗಿ ಯೋಚಿಸಬಲ್ಲ ಮೂರ್ಖನಿಗೂ ಇವೆರಡರ ನಡುವೆ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆ ಯಾವುದು ಎಂದು ತಿಳಿದಿರುತ್ತದೆ. ಹಾಗಂತ ಕರ್ನಾಟಕದಲ್ಲಿ ಆಗಿ ಹೋದದ್ದೆಲ್ಲ ಬಹಳ ಅಪೇಕ್ಷಣೀಯ ಮತ್ತು ಆದರ್ಶಪ್ರಾಯ ಬೆಳವಣಿಗೆಗಳು ಎನ್ನುವ ಹಾಗಿಲ್ಲ. ಕಾನೂನುಬದ್ಧವಾದ ಎಲ್ಲವೂ ಆದರ್ಶಪ್ರಾಯವಾಗಿರುವುದಿಲ್ಲ. ಹಾಗಂತ ಅವು ಕಾನೂನು ವಿರೋಧಿ ಕೃತ್ಯಗಳಿಗಿಂತ ಅಪೇಕ್ಷಣೀಯ. ಮುಂದೊಂದು ದಿನ ಅತೀ ಹೆಚ್ಚು ಸ್ಥಾನಗಳು ಬಂದ ಪಕ್ಷದ ಜತೆ ಸಣ್ಣಪಕ್ಷಗಳು ಸೇರಿಕೊಳ್ಳಬೇಕು ಎಂಬ ಕಾನೂನೇ ಬಂದರೆ ಅದು ಬೇರೆ ಪ್ರಶ್ನೆ. ಹಾಗೊಂದು ಕಾನೂನು ತಂದು ರಾಜಕೀಯ ಪಕ್ಷಗಳ ಸ್ವಾತಂತ್ರ್ಯಹರಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಬಿಜೆಪಿಗೆ ಸಹಜವಾಗಿಯೇ ಬಹಳ ಕೋಪ ಬಂದಿದೆ. ಅದರ ಕೋಪ ಕೂಡಾ ಅರ್ಥವಾಗುವಂತಾದ್ದೆ. ಅದರ ಬಳಿ ಸಾಕಷ್ಟು ಸಂಖ್ಯೆಗಳಿಲ್ಲದೆ ಇರಬಹುದು. ಆದರೆ ಇರುವ ಮೂರು ಪಕ್ಷಗಳ ಪೈಕಿ ಅದು ಅತೀಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆದುದರಿಂದ ಅತೀ ಕಡಿಮೆ ಸಂಖ್ಯೆ ಹೊಂದಿದ ಜೆಡಿ(ಎಸ್) ತನ್ನೊಂದಿಗೆ ಬಾರದೆ ಕಾಂಗ್ರೆಸ್ ಜೊತೆಗೆ ಸೇರಿದ್ದಕ್ಕೆ ಅದು ಕುದಿಯುತ್ತಿದೆ. ಆದರೆ ಯಾರ ಜತೆ ಸೇರಿಕೊಳ್ಳಬೇಕೆನ್ನುವುದು ಜೆಡಿ(ಎಸ್)ನ ಆಯ್ಕೆ. ತನಗೆ ಬೇಕಾದ ಪಕ್ಷದೊಂದಿಗೆ ಕಾನೂನಿನ ಪರಿಧಿಯೊಳಗೆ ಅದು ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಅದರ ಬಳಿ ಬಂದು ಪ್ರಸ್ತಾಪ ಮಂಡಿಸಿತು ಎನ್ನುವುದು ಕೇವಲ ಸಾಂದರ್ಭಿಕ. ಜೆಡಿ(ಎಸ್)ಗೆ ಕಾಂಗ್ರೆಸ್ಸಿನ ಜತೆ ಹೋಗುವುದು ಇಷ್ಟವಿರಲಿಲ್ಲ ಎಂದಾದರೆ ಬಿಜೆಪಿಯ ಜತೆ ಹೋಗುವ ರಾಜಮಾರ್ಗ ತೆರೆದೇ ಇತ್ತು. ಬಹುಶಃ ಬಿಜೆಪಿಯ ಜತೆ ಸೇರಿಕೊಂಡಿದ್ದರೆ ಅದಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರಲಿಲ್ಲವೋ ಏನೋ. ಜೆಡಿ(ಎಸ್) ಮುಖ್ಯಮಂತ್ರಿ ಪಟ್ಟ ತನಗೆ ಅನಾಯಾಸವಾಗಿ ದೊರಕಿತು ಎಂದು ಕಾಂಗ್ರೆಸ್ಸಿನೊಂದಿಗೆ ಸೇರಿಕೊಂಡಿತೇ? ಅಥವಾ ಅದರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಜಾತ್ಯತೀತತೆಯ ಬದ್ಧತೆಯಿಂದ ಬಿಜೆಪಿಯನ್ನು ದೂರವಿಸಿ ಕಾಂಗ್ರೆಸ್ಸನ್ನು ಅಪ್ಪಿಕೊಂಡಿತೇ? ಅಥವಾ ಜಾತ್ಯತೀತತೆಗೆ ಬದ್ಧರಾಗಿರುವ ಮತ್ತು ಬದ್ಧರಾಗಿರದ ತಮ್ಮ ಶಾಸಕರು ಬೇರೆಬೇರೆ ದಾರಿ ಹಿಡಿಯುವ ಮೂಲಕ ಪಕ್ಷ ಇಬ್ಭಾಗವಾಗಿ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗುವ ಸನ್ನಿವೇಶ ತಪ್ಪಿಸಲು ಕಾಂಗ್ರೆಸ್ಸಿನ ಪ್ರಸ್ತಾಪ ಒಪ್ಪಿಕೊಂಡಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸ್ಪಷ್ಟವಾಗಿ ದೊರಕಲಾರದು.

ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭಕ್ಕೆ ಬಂದ ವಿರೋಧ ಪಕ್ಷಗಳ ರಾಷ್ಟ್ರ ನಾಯಕರುಗಳಿಗೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತಮ್ಮ ಸ್ವಹಿತಾಸಕ್ತಿ ಇತ್ತು. ಆದರೆ ಕರ್ನಾಟಕದಾಚೆಗೆ ದೊಡ್ಡಮಟ್ಟದ ಅಸ್ತಿತ್ವ ಇಲ್ಲದ ಜೆಡಿ(ಎಸ್)ಗೆ ಇಂತಹದ್ದೊಂದು ಸ್ವಹಿತಾಸಕ್ತಿಯ ಪ್ರಶ್ನೆ ಪ್ರೇರಣೆಯಾಗಿರುವ ಸಾಧ್ಯತೆ ಕಡಿಮೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಜಾತಿಯ ಬೆಂಬಲದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಜೆಡಿ(ಎಸ್) ಪಕ್ಷವನ್ನು ಬಿಜೆಪಿ ಇಡಿಯಾಗಿ ನುಂಗಿಬಿಡುವ ಸಾಧ್ಯತೆ ಇಲ್ಲ. ಜೆಡಿ(ಎಸ್)ಗೆ ಕಂಟಕ ಇರುವುದು ಮತ್ತು ಬರುವುದು ಕಾಂಗ್ರೆಸ್ಸಿನಿಂದ. ಸದ್ಯದಲ್ಲೇ ಬರಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ಮಾಡದೆ ಉಳಿದರೂ ಜೆಡಿ(ಎಸ್) ಸಂಕಟವನ್ನು ಅನುಭವಿಸಬೇಕು. ಈ ಸಂಕಟಕ್ಕೆ ಅದು ಸಿದ್ಧವಾಗಿದ್ದರೆ ರಾಜ್ಯಮಟ್ಟದಲ್ಲಿ ಮಾಡಿಕೊಂಡ ಮೈತ್ರಿ ಸರಕಾರಕ್ಕೆ ಕಂಟಕ ಇಲ್ಲ. ಆದರೆ ಆರಂಭದಲ್ಲಿ ಬೇಷರತ್ ಬೆಂಬಲ ಅಂತ ಹೇಳಿಕೊಂಡಿದ್ದ ಕಾಂಗ್ರೆಸ್ ಈಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಿದೆ ಎನ್ನುವ ವರ್ತಮಾನವಿದೆ. ಇದನ್ನೆಲ್ಲಾ ನೋಡುತಿದ್ದರೆ ಕಾಂಗ್ರೆಸ್ಸಿನ ಬದ್ಧತೆ ಜಾತ್ಯತೀತತೆಗೊ ಅಥವಾ ಸೋತರೂ ಅಧಿಕಾರದಲ್ಲಿ ಮುಂದುವರಿಯುವುದಕ್ಕೋ ಎನ್ನುವ ಸಂಶಯ ಬರುತ್ತಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಬೆಂಬಲ ನೀಡಿದ್ದು ಜಾತ್ಯತೀತತೆಗಿಂತ ಹೆಚ್ಚಾಗಿ ತನ್ನನ್ನು ನಿರ್ನಾಮ ಮಾಡಲು ಹೊರಟಿರುವ ಬಿಜೆಪಿಯನ್ನು ಕರ್ನಾಟಕದ ಮಟ್ಟಿಗೆ ಅಧಿಕಾರದಿಂದ ಹೊರಗಿಡಲು ಎನ್ನುವುದು ಹೆಚ್ಚು ಸೂಕ್ತ. ಜಾತ್ಯತೀತತೆಯ ಕುರಿತ ಬದ್ಧತೆ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು, ಇವೆರಡೂ ಒಂದೇ ಎಂದು ಕಾಂಗ್ರೆಸ್ ವಾದಿಸಬಹುದು. ವಾಸ್ತವದಲ್ಲಿ ಇವೆರಡು ಬೇರೆಬೇರೆ. ಅದೇನೇ ಇರಲಿ, ಈ ಮೈತ್ರಿ ಒಂದು ಸಂದೇಶವನ್ನಂತೂ ನೀಡಿದೆ. ಅದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದ್ದ ಸಂದೇಶ. ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ರಾಜ್ಯಗಳ ಚುನಾವಣೆಯಲ್ಲಿ ಗೆದ್ದರೂ, ಗೆಲ್ಲದೇ ಅತಂತ್ರಸ್ಥಿತಿ ನಿರ್ಮಾಣವಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ವಿರಮಿಸುವುದು ಎನ್ನುವುದು ಎಲ್ಲಾ ಕಾಲದಲ್ಲೂ ಎಲ್ಲಾ ರಾಜ್ಯಗಳಲ್ಲೂ ಸಾಧ್ಯವಾಗಬೇಕಿಲ್ಲ ಎನ್ನುವುದೇ ಆ ಸಂದೇಶ. ಈ ಸಂದೇಶದ ಪ್ರಸ್ತುತತೆ ಮೈತ್ರಿ ಸರಕಾರ ಉಳಿದಷ್ಟು ಕಾಲ ಮಾತ್ರ. ಇದರ ಜತೆಗೆ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬೇಕಾದರೆ ಒಂದಷ್ಟು ತ್ಯಾಗಗಳಿಗೂ ಸಿದ್ಧವಾಗಿದೆ ಎನ್ನುವ ಒಂದು ಸಂದೇಶವೂ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಮಂತ್ರಿಮಂಡಲ ರಚಿಸುವಲ್ಲಿ ಕಾಂಗ್ರೆಸ್ ನಡೆÀಸುತ್ತಿರುವ ಮೇಲಾಟ, ಜತೆಗೆ ಐದು ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೋ ಇಲ್ಲವೋ ಎನ್ನುವ ಕುರಿತ ನಿಲುವಿನಲ್ಲಿ ಅದು ತೋರುತ್ತಿರುವ ಅಸ್ಪಷ್ಟತೆ ಇತ್ಯಾದಿಗಳನ್ನು ನೋಡಿದರೆ ಆ ಸಂದೇಶ ಕೇವಲ ಕಣ್ಣುಕಟ್ಟು ಅನ್ನಿಸುತ್ತದೆ. ಮುಂದೇನೋ? ಊಹಿಸುವುದು ಕಷ್ಟ.

ವಾಸ್ತವದಲ್ಲಿ, ಕಾಂಗ್ರೆಸ್ಸಿಗೆ ಸೆಕ್ಯುಲರಿಸಂ ಕುರಿತಾದ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮತ್ತು ಬಿಜೆಪಿಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಂದಾಗಿಸಲು ಒಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಉದ್ದೇಶಗಳೇ ಇದ್ದಿದ್ದರೆ ಅದು ಕುಮಾರಸ್ವಾಮಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕಿತ್ತು. ಒಂದುವೇಳೆ ಸರಕಾರದಲ್ಲಿ ಪಾಲ್ಗೊಳ್ಳಲೇಬೇಕು ಎಂದಿದ್ದಲ್ಲಿ ಮಂತ್ರಿಮಂಡಲದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧಿತ್ವ ಸಾಕು ಎನ್ನಬೇಕಿತ್ತು. ಆಗ ಅದು ನೈತಿಕವಾಗಿ ಹಲವು ಮೆಟ್ಟಿಲು ಮೇಲೇರುತ್ತಿತ್ತು. ಬಿಜೆಪಿಯ ವಿಷಯಕ್ಕೆ ಬಂದರೆ ಆ ಪಕ್ಷದಲ್ಲಿ ಇಲ್ಲದ ನೈತಿಕತೆ ಅದಕ್ಕಿದೆ ಅಂತ ಜನ ಭಾವಿಸುತ್ತಾರೆ. ಅದೇವೇಳೆ ಕಾಂಗ್ರೆಸ್ ವಾಸ್ತವದಲ್ಲಿ ಎಷ್ಟು ನೈತಿಕ ಅಧಃಪತನ ಕಂಡಿದೆಯೋ ಅದಕ್ಕಿಂತ ಹೆಚ್ಚಿನ ಪತನವನ್ನು ಜನ ಅದರ ಮೇಲೆ ಆರೋಪಿಸುತ್ತಿದ್ದಾರೆ. ಸುದೀರ್ಘ ಕಾಲ ಆಡಳಿತದಲ್ಲಿದ್ದ ಪಕ್ಷವಾದ ಕಾರಣ ಕಾಂಗ್ರೆಸ್ ಇಂತಹ ಟೀಕೆಗಳನ್ನು ಎದುರಿಸುವುದು ಸಹಜ. ಜತೆಗೆ ಜನ ಕಾಂಗ್ರೆಸ್ಸನ್ನು ಈ ರೀತಿ ಕಾಣಲು ಬೇಕಾದ ಎಲ್ಲಾ ರೀತಿಯ ಪ್ರಚಾರವನ್ನು ಬಿಜೆಪಿ ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಇದನ್ನು ಮೆಟ್ಟಿನಿಂತು ತನ್ನ ಪರವಾಗಿ ಜನಾಭಿಪ್ರಾಯ ಮತ್ತೆ ರೂಪುಗೊಳ್ಳುವಂತೆ ಮಾಡಬೇಕಾದರೆ ಕಾಂಗ್ರೆಸ್ ಗಟ್ಟಿಯಾದ ಕೆಲ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋತರೂ ಅಧಿಕಾರ ಬಿಡಲೊಪ್ಪದ ಭಂಡಪಕ್ಷ ಈ ಕಾಂಗ್ರೆಸ್ ಎನ್ನುವ ರೀತಿಯಲ್ಲಿ ಜನ ಯೋಚಿಸಲು ಅನುವಾಗುವಂತೆ ಆ ಪಕ್ಷದ ನಡವಳಿಕೆ ಸಾಗಿದರೆ ಮುಂದಿನ ದಾರಿ ಅದಕ್ಕೆ ಇನ್ನೂ ದುರ್ಗಮವಾದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...