ಯುದ್ಧೋನ್ಮಾದಿಗಳ ಕಣ್ತೆರೆಸುವ ಒಂದು ಕವಿತೆ

0

1920ರಲ್ಲಿ ಜನಿಸಿದ ಅಬ್ದುಲ್ ಹಯೀ ಅವರ ಕಾವ್ಯನಾಮ ಸಾಹಿರ್ ಲುಧಿಯಾನ್ವಿ. ಭಾರತದ ಪಂಜಾಬಿನ ಲುಧಿಯಾನಾದಲ್ಲಿ ಜನಿಸಿದ ಇವರು 1943ರಲ್ಲಿ ಲಾಹೋರಿನಲ್ಲಿ ಹೋಗಿ ನೆಲೆಸಿದರು. ಅದೇ ವರ್ಷ ತಮ್ಮ ಮೊದಲ ಕವನ ಸಂಕಲನವನ್ನೂ ಪ್ರಕಟಿಸಿದರು. ಅಲ್ಲಿ ಅವರು ಪ್ರೊಗ್ರೆಸಿವ್ ರೈಟರ್ಸ ಅಸೋಸಿಯೇಷನ್ ಸೇರಿ ಸಕ್ರಿಯವಾದರು. ಸ್ವಾತಂತ್ರೋತ್ತರದಲ್ಲಿ ಅವರು ಅವರು ದೆಹಲಿಗೆ ಬಂದು, ಅಲ್ಲಿ ಕೆಲ ದಿನಗಳನ್ನು ಕಳೆದು ನಂತರ ಅವರ ಕರ್ಮಭೂಮಿಯಾದ ಬಾಂಬೆಗೆ ಬಂದು ಸೇರಿದರು. ಪಾಕಿಸ್ತಾನದ ನಷ್ಟ, ಭಾರತದ ಲಾಭವಾಯಿತು. ಪಾಕಿಸ್ತಾನ ತನ್ನನ್ನು ತಾನು ಒಂದು ಧಾರ್ಮಿಕ ದೇಶವೆಂದು ಘೋಷಿಸಿಕೊಂಡಿದ್ದಾಗ ಭಾರತ ಜಾತ್ಯತೀತವಾಗಿ, ಪ್ರಗತಿಪರವಾಗಿ, ಸಿನೆಮಾ, ಸಂಗೀತ ಮುಂತಾದ ಕಲೆಗಳನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿತ್ತು. ಸ್ವಾಭಾವಿಕವಾಗಿಯೇ ಸಾಹಿರ್ ಅವರನ್ನು ಬಾಂಬೇ ಚಿತ್ರರಂಗ ತೆರೆದ ಹೃದಯದಿಂದ ಸ್ವಾಗತಿಸಿತು. ಅವರ ಮತ್ತು ಎಸ್.ಡಿ. ಬರ್ಮನ್ ಅವರ ಜೋಡಿ ಭಾರತೀಯ ಚಿತ್ರರಂಗದ ದಂತಕತೆ.

ದೋಸ್ತೋವ್‌ಸ್ಕಿ ಅವರ ಕಾದಂಬರಿ ಕ್ರೈಮ್ ಆಂಡ್ ಪನಿಶ್‌ಮೆಂಟ್ ಆಧಾರಿತ ಚಿತ್ರ ಮಾಡುತ್ತಿರುವಾಗ, ಆ ದಿನದ ಖ್ಯಾತ ಸಂಗೀತ ನಿರ್ದೇಶಕ ಜೋಡಿಯು ಸಂಗೀತ ನೀಡುವುದೆಂದು ನಿರ್ಧಾರವಾಯಿತು. ಆಗ ಅವರಿಗೆ ಸಮಾಜದ ಆಳದ ಅರಿವಿಲ್ಲ, ಆ ಜೋಡಿ ಬೇಡವೇ ಬೇಡ ಎಂದು ಸಾಹಿರ್ ಪಟ್ಟುಹಿಡಿದರು. ಅದರ ಪರಿಣಾಮವಾಗಿ ಫಿರ್ ಸುಬಹ್ ಹೋಗಿ ಚಿತ್ರವು ಖಯ್ಯಾಮ್ ಅವರ ಸಂಗೀತ ನಿರ್ದೇಶನದಲ್ಲಿ ಬಂದಿತು. ಆ ಚಿತ್ರದಲ್ಲಿ ರಾಜ್‌ಕಪೂರ್ ಮತ್ತು ಮಾಲಾ ಸಿನ್ಹ ಅವರ ನಟನೆಯಲ್ಲಿ ಬಂದ ಹಾಡು ವೋ ಸುಬಹ ಕಭಿ ತೊ ಆಯೇಗಿ ಭಾರತದ ಆ ಕಾಲದ ಹಿಂದೆ ಸಿನೆಮಾ ಪ್ರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಎಸ್.ಡಿ.ಬರ್ಮನ್ ಅವರೊಂದಿಗೆ ಸಾಹಿರ್ ಅವರ ಕೊನೆಯ ಚಿತ್ರ ಗುರು ದತ್ ಅವರ ಪ್ಯಾಸಾ. ಅಲ್ಲಿ ಅವರು ಯೆಹ್ ದುನಿಯಾ ಅಗರ್ ಮಿಲ್ ಭಿ ಜಾಯೇಂ ತೊ ಕ್ಯಾ ಹೈ ಎಂದು ಈ ಜಗತ್ತನ್ನೇ ಧಿಕ್ಕರಿಸಿದವರು. ಸಮಾಜದ ಆಳವನ್ನರಿತು ತಮ್ಮ ಕವಿತೆಗಳಲ್ಲಿ ಕನ್ನಡಿ ತೋರಿಸಿದ ಸಾಹಿರ್ ಅವರು ಭಾರತೀಯ ಚಿತ್ರರಂಗವನ್ನು ೧೯೮೦ರವರೆಗೆ ಆಳಿದರು. ಅವರ ಒಂದು ಕವಿತೆಯ ಅನುವಾದ ಇಲ್ಲಿದೆ.

ರಕ್ತ ನಮ್ಮದಾದರೇನು? ಅವರದಾದರೇನು?

ರಕ್ತ ನಮ್ಮದಾದರೇನು? ಅವರದಾದರೇನು?
ಒಟ್ಟಿನಲ್ಲದು ಮನುಷ್ಯರದ್ದೇ..
ಯುದ್ಧ ಪೂರ್ವದಲ್ಲಾದರೇನು? ಪಶ್ಚಿಮದಲ್ಲಾದರೇನು?
ಒಟ್ಟಿನಲ್ಲಿ ಕುಸಿಯುವುದು ಶಾಂತಿನಿಕೇತನವೇ..

ಬಾಂಬುಗಳು ಮನೆಯ ಮೇಲೆ ಬಿದ್ದರೇನು?
ದೂರದ ಗಡಿಯಲ್ಲಾದರೇನು?
ಭೂಮಿಯ ಹೊಲಿಗೆಗಳು ಘಾಸಿಗೊಳ್ಳುತ್ತವೆ
ಬೆಂಕಿಬಿದ್ದ ಹೊಲ ನಮ್ಮದಾದರೇನು? ಅವರದಾದರೇನು?
ಸುಡುಬೆಂಕಿಗೆ ಸಕಲ ಜೀವಗಳು ತತ್ತರಿಸುತ್ತವೆ

ಟ್ಯಾಂಕುಗಳು ಮುನ್ನುಗ್ಗಿದರೇನು?
ಹಿಂದೆ ಸರಿದರೇನು?
ಭೂತಾಯಿ ಒಡಲು ಬರಿದಾಗುತ್ತದೆ
ವಿಜಯದ ಸಂಭ್ರಮವಾದರೇನು? ಸೋಲಿನ ಸೂತಕವಾದರೇನು?
ಬದುಕು ಗೋರಿಯಲ್ಲಿ ಅವಿತು ಕಣ್ಣೀರಿಡುತ್ತದೆ.

ಯುದ್ಧವೇ ಸಮಸ್ಯೆಯಾಗಿರುವಾಗ
ಯುದ್ಧ ಹೇಗೆ ಸಮಸ್ಯೆಗಳ ಬಗೆಹರಿಸೀತು
ಇಂದು ರಕ್ತ ಮತ್ತು ಬೆಂಕಿಗಳ ಮಳೆ ಸುರಿಸುತ್ತವೆ
ನಾಳೆ ಹಸಿವು ಮತ್ತು ಕ್ಷಾಮಗಳು ಬೆಳೆಯುತ್ತವೆ
ಆದ್ದರಿಂದ ಸಜ್ಜನರೇ
ಯುದ್ಧವು ಹಿಂದೆ ಸರಿದು ಇಲ್ಲವಾದರೆ ಚಂದ
ನಮ್ಮ ನಿಮ್ಮ ಅಂಗಳದಲ್ಲಿ ದೀಪ ಬೆಳಗಿದರೆ ಚಂದ

ಹಿಂದಿ ಮೂಲ- ಸಾಹಿರ್ ಲೂಧಿಯಾನ್ವಿ
ಅನುವಾದ- ಶಿವಸುಂದರ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here