Homeರಂಜನೆಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

ಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಈ ವಾರದ ಸಿನಿಯಾನದಲ್ಲಿ ಯಾವುದೇ ನಿರ್ದೇಶಕರ ಅಥವಾ ಸಿನೆಮಾದ ಬಗ್ಗೆ ಇರದೇ ಒಂದು ಟಿವಿ ಸಿರೀಸ್ ಬಗ್ಗೆ ಬರೆಯುತ್ತಿದ್ದೇನೆ. ಇದು ಗೇಮ್ ಆಫ್ ಥ್ರೋನ್ಸ್ ಎನ್ನುವ ಧಾರಾವಾಹಿ.
ಬೆಂಕಿಯನ್ನು ಉಗುಳುವ ದೈತ್ಯ ಡ್ರಾಗನ್‍ಗಳು, ದಶಕಗಳ ಕಾಲ ಮುಂದುವರೆಯುವ ಬೇಸಿಗೆ, ಒಂದು ಜೀವಮಾನದಷ್ಟು ಸಮಯ ಮುಂದುವರೆಯಬಲ್ಲ ಚಳಿಗಾಲ, ಸತ್ತ ಮೇಲೆ ಜೀವ ಪಡೆದುಕೊಂಡು ಮನುಷ್ಯರನ್ನು ಕೊಲ್ಲುವ ನೈಟ್‍ವಾಕರ್‍ಗಳು, ಈ ವೈಟ್‍ವಾಕರ್‍ಗಳನ್ನು ಮತ್ತು ಇತರೆ ಪ್ರದೇಶಗಳನ್ನು ಬೇರ್ಪಡಿಸಲು ನಿರ್ಮಿಸುವ ಒಂದು ಮಹಾನ್ ಗೋಡೆ, ಏಳು ಕಿಂಗ್‍ಡಮ್‍ಗಳು, ಅನೇಕ ರಾಜರು, ರಾಜಕುಮಾರರು, ರಾಜಕುಮಾರಿಯರು ಮತ್ತು ಅವೆಲ್ಲವುಗಳನ್ನು ಆಳುವ ಒಂದು ಐರನ್ ಥ್ರೋನ್ (ಕಬ್ಬಿಣದ ಸಿಂಹಾಸನ) ಮತ್ತು ಅದಕ್ಕಾಗಿ ನಡೆಯುವ ಸಮರಗಳು.
ಜಾರ್ಜ್ ಆರ್ ಆರ್ ಮಾರ್ಟಿನ್ ಎನ್ನುವ ಲೇಖಕರು ಬರೆದ ‘ದಿ ಸಾಂಗ್ ಆಫ್ ಐಸ್ ಅಂಡ್ ಫೈರ್’ ಎನ್ನುವ ಕಾದಂಬರಿಗಳ ಸರಣಿಯ ಕಿರುಪರೆದಯ ಅಳವಣಿಕೆ. ಜಾರ್ಜ್ ಮಾರ್ಟಿನ್ ಅವರ ಮುಂದೆ ತಮ್ಮ ಕಾದಂಬರಿಗಳನ್ನು ಒಂದು ಸಿನೆಮಾ ಮಾಡಬೇಕೆಂದು ಅನೇಕ ಪ್ರಸ್ತಾಪಗಳಿದ್ದವು. ಆದರೆ ಒಂದು ಸಿನೆಮಾದ ಅವಧಿ 2 ಗಂಟೆ. ಎರಡು ಗಂಟೆಯೊಳಗೆ ಇಂತಹ ಬೃಹತ್ ಗಾತ್ರದ ಕೃತಿಯನ್ನು ಅಳವಡಿಸಿಕೊಳ್ಳಲಾಗದು ಎಂದು ಅವರಿಗೆ ಗೊತ್ತಿತ್ತು. ಹಾಗಾಗಿ ಡೇವಿಡ್ ಬೆನಿಆಫ್ ಮತ್ತು ಡಿ.ಬಿ. ವೈಸ್ ಎನ್ನುವ ನಿರ್ಮಾಪಕ/ಲೇಖಕರು ಒಂದು ಧಾರವಾಹಿಯನ್ನಾಗಿ ನಿರ್ಮಿಸುವ ಪ್ರಸ್ತಾಪ ಇಟ್ಟಾಗ ಮಾರ್ಟಿನ್ ಸಂತೋಷದಿಂದಲೇ ಒಪ್ಪಿಕೊಂಡರು. ಅದರರ್ಥ ನೂರಾರು ಗಂಟೆಗಳ ಅವಧಿಯ ಬೃಹತ್ ಸಿನೆಮಾ ಟಿವಿ ಪರದೆಯ ಮೇಲೆ! (ಹೆಚ್ಚಿನ ಜನರು ತಮ್ಮ ಕಂಪೂಟರ್ ಪರದೆಯ ಮೇಲೆಯೇ ನೋಡಿದ್ದು ಬೇರೆ ಮಾತು).
ಗೇಮ್ ಆಫ್ ಥ್ರೋನ್ಸ್ ನೋಡುತ್ತಿದ್ದರೆ ಇದನ್ನು ನೋಡಲು ಚಿಕ್ಕ ಪರದೆಯಲ್ಲ, ಬೆಳ್ಳಿ ಪರದೆಯೂ ಸಾಲದು ಎಂದು ಅನಿಸಿದರೆ ಆಶ್ಚರ್ಯವಲ್ಲ.
ಗೇಮ್ ಆಫ್ ಥ್ರೋನ್ಸ್ ಎಂದರೆ ಮೊದಲು ಕಣ್ಸೆಳೆಯುವುದು ಅದರ ಗಾತ್ರ, ಬೃಹತ್ ಪ್ರಮಾಣ. ಕೆಲವು ಅಂಕಿ ಅಂಶಗಳನ್ನು ಗಮನಿಸೋಣ.
ಬಜೆಟ್ – ಒಂದು ಎಪಿಸೋಡಿನ ಖರ್ಚು 10 ಮಿಲಿಯನ್ ಡಾಲರ್‍ಗಳು ಅಂದರೆ ಸರಿಸುಮಾರು 70 ಕೋಟಿ ರೂಪಾಯಿಗಳು. ಇಂತಹ 73 ಎಪಿಸೋಡುಗಳು. ಒಟ್ಟಾರೆ ಬಜೆಟ್ಟಿನ ಲೆಕ್ಕ ನೀವೇ ಹಾಕಿ. (ಎಹ್‍ಬಿಓ ಬಜೆಟ್ಟಿನ ಅಧೀಕೃತ ಅಂಕಿಅಂಶಗಳನ್ನು ಬಿಡುಗಡೆ ಪಡಿಸಿಲ್ಲ)
ವೀಕ್ಷಕರು – ಬರೀ ಅಮೇರಿಕದಲ್ಲಿ, ಮೊದಲ ಸರಣಿಯ ಮೊದಲ ಎಪಿಸೋಡ್ ನೋಡಿದ್ದು 22 ಲಕ್ಷ ಜನರಾದರೆ 7ನೇ ಸರಣಿಯ ಕೊನೆಯ ಎಪಿಸೋಡ್ ನೋಡಿದ್ದು 1 ಕೋಟಿ 20 ಲಕ್ಷ ಜನರು. 8 ನೇ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಮೊದಲ ಎಪಿಸೋಡನ್ನು 1 ಕೋಟಿ 74 ಲಕ್ಷ ಜನರು ನೋಡಿದ್ದಾರೆಂದು ಎಹ್‍ಬಿಓ ಹೇಳಿಕೊಂಡಿದೆ. 7ನೇ ಸರಣಿಯ ಕೊನೆಯ ಎಪಿಸೋಡನ್ನು 14 ಕೋಟಿ 33 ಲಕ್ಷ ಸಲ ಡೌನಲೋಡ್ ಮಾಡಲಾಗಿದೆ!
ಇನ್ನೂ ಕೆಲವು ಅಂಕಿಅಂಶಗಳು – ಗೇಮ್ ಆಫ್ ಥ್ರೋನ್ಸ್‍ನಲ್ಲಿ ಬಳಸಾದ ಕಿರಿಯ ಕಲಾವಿದರು (ಎಕ್ಸ್ಟ್ರಾಸ್) 1 ಒಂದು ಲಕ್ಷ 5 ಸಾವಿರ. ಈ ಧಾರವಾಹಿ ಪ್ರಸಾರವಾಗುತ್ತಿರುವುದು 170 ದೇಶಗಳಲ್ಲಿ.
ಗೇಮ್ ಆಫ್ ಥ್ರೋನ್ಸ್ ಹಿಂಸೆಯ, ಯುದ್ಧಗಳ ಧಾರವಾಹಿ. ಈ ಕಥೆಯಲ್ಲಿ ಬರುವ ಮುಖ್ಯಪಾತ್ರಗಳ ಸಾವುಗಳು ದಂಗುಪಡಿಸುತ್ತವೆ. ಮೊದಲನೇ ಸರಣಿಯಲ್ಲಿ 59 ಸಾವುಗಳನ್ನು ಕಂಡಿದ್ದರೆ, 7ನೇ ಸರಣಿಯಲ್ಲಿ ಕಂಡುಬಂದ ಸಾವುಗಳು 549!
ಯಾವುದೋ ಒಂದು ಭವ್ಯವಾದ ಪ್ರಾಚೀನ ಕಾಲಕ್ಕೆ ಕರೆದುಕೊಂಡುಹೋಗುವ ಗೇಮ್ ಆಫ್ ಥ್ರೋನ್ಸ್‍ನಲ್ಲಿ ನಗ್ನತೆ, ಹಿಂಸೆ ಅದರಲ್ಲೂ ಮಹಿಳೆಯರ ಮೇಲಾಗುವ ಹಿಂಸೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಮುಖ ಪಾತ್ರವೆಂದು ಪರಿಗಣಿಸಿ ನಾವು ಯಾರನ್ನು ತೀವ್ರವಾದ ಆಸಕ್ತಿಯಿಂದ ನೋಡುತ್ತಿರತ್ತೇವೆ ಆ ಪಾತ್ರಗಳು ಸಾವು ವೀಕ್ಷಕರನ್ನು ದಂಗುಬಡಿಸುತ್ತವೆ. ಪ್ರಮುಖ ಪಾತ್ರಗಳೆಲ್ಲರೂ ಸೇರಿ ಒಂದು ಮದುವೆಯ ಸಮಾರಂಭಕ್ಕೆ ಹೋದಾಗ ಅಲ್ಲಿ ಆಗುವ ಹತ್ಯಾಕಾಂಡ, ಇವರೇ ಪ್ರಮುಖ ಪಾತ್ರಗಳು ಅಂದುಕೊಂಡವರೆಲ್ಲರ ಕೊಲೆಗಳು, ಯಾವುದೇ ದಾರವಾಹಿ ಅಥವಾ ಸಿನೆಮಾದ ಇತಿಹಾಸದಲ್ಲೇ ನೋಡಿರಲಿಕ್ಕಿಲ್ಲ. ಇದರಲ್ಲಿ ಬರುವ ಆಳುವ ಕುಟುಂಬಗಳು ಎಷ್ಟು ಪ್ರಸಿದ್ಧವಾಗಿವೆಯೆಂದರೆ, ಕಾಲೇಜುಗಳಲ್ಲಿಯ ಅನೇಕ ವಿದ್ಯಾರ್ಥಿಗಳ ಗುಂಪುಗಳು ತಮ್ಮನ್ನು ತಾವು ಒಂದೊಂದು ರಾಜಕುಟುಂಬಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ.
ಗೇಮ್ ಆಫ್ ಥ್ರೋನ್ಸ್ ಈ ಸರಣಿಯಲ್ಲಿ ಅಭಿನಯಿಸಿದ ನಟರಿಂದಲೂ ಪ್ರಸಿದ್ಧಿ ಗಳಿಸಿದೆ. ಮೂಲ ಪುಸ್ತಕದಲ್ಲಿ 2103 ಪಾತ್ರಗಳಿದ್ದರೆ, ಅವತರಣಿಕೆಯಲ್ಲಿ ಕಿರಿಯ ಕಲಾವಿದರನ್ನು ಬಿಟ್ಟು 553 (ಹೆಸರಿರುವ) ಪಾತ್ರಗಳು ಬರುತ್ತವೆ ಎಂದು ಒಬ್ಬ ನೋಡುಗ ಲೆಕ್ಕ ಹಾಕಿದ್ದಾರೆ. ಅದರಲ್ಲಿ ನೂರಾರು ನಟರು ಗಮನ ಸೆಳೆದರೂ, ಒಬ್ಬ ನಟ ಮಾತ್ರ ಎದ್ದು ಕಾಣುತ್ತಾನೆ. ಪೀಟರ್ ಡಿಂಕ್ಲಿಜ್, ಲ್ಯಾನಿಸ್ಟರ್ ರಾಜಕುಟುಂಬದ ಸದಸ್ಯನಾಗಿರುವ ಕುಬ್ಜನ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ ನಾಲ್ಕೂಕಾಲು ಅಡಿ ಎತ್ತರವಿರುವ ಈ ನಟ ಈಗ ವಿಶ್ವವಿಖ್ಯಾತಿ ಪಡೆದ ನಟರಾಗಿದ್ದಾರೆ. ತನ್ನ ಕುಬ್ಜತೆಯಿಂದ ಕೀಳರಿಮೆ ಅನುಭವಿಸಿಯೇ ಬೆಳೆದ ಪೀಟರ್, ತಾನು ನಟನಾಗಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಹರಸಾಹಸ ಪಟ್ಟವರು. ಚಿಕ್ಕಂದಿನಿಂದಲೇ ನಾಟಕದಲ್ಲಿ ಭಾಗವಹಿಸುತ್ತಿದ್ದ ಪೀಟರ್, ಕುಬ್ಜರನ್ನು ಹಾಸ್ಯಕ್ಕಾಗಿ ಬಳಸುವ ಪಾತ್ರಗಳನ್ನು ಮಾಡಲು ನಿರಾಕರಿಸಿದರು. 2003 ರಲ್ಲಿ ‘ದಿ ಸ್ಟೇಷನ್ ಏಜೆಂಟ್’ ಎನ್ನುವ ಚಿತ್ರದಲ್ಲಿ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಕುಬ್ಜರ ಪಾತ್ರಗಳೆಂದರೆ, ಹಾಸ್ಯಕ್ಕಾಗಿ ಅಥವಾ ತುಂಬಾ ವಿವೇಕದ ಮನುಷ್ಯನಾಗಿಯೋ ಮತ್ತು ಲೈಂಗಿಕತೆ ಇಲ್ಲದ, ರೋಮಾಂಟಿಕ್ ಆಗದ, ತನ್ನ ಕುಬ್ಜತೆಯನ್ನು ಹೊರತುಪಡಿಸಿ ಯಾವುದೇ ದೋಷಗಳಿಲ್ಲದ ಪಾತ್ರಗಳು. ಅಂತಹದ್ದರಲ್ಲಿ ಸ್ಟೇಷನ್ ಏಜೆಂಟ್ ಎನ್ನುವ ಚಿತ್ರ ಅವರನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ತೋರಿಸಿತು. 2006ರಲ್ಲಿ ಸಿಡ್ನಿ ಲುಮೆಟ್(ಸಿನಿಯಾನ 2 ನೋಡಿ) ಅವರ ‘ಫೈಂಡ್ ಮಿ ಗಿಲ್ಟಿ’ ಚಿತ್ರದಲ್ಲಿ ಮತ್ತೊಮ್ಮೆ ಗಮನಸೆಳೆದ ಪೀಟರ್ ಡಿಂಕ್ಲಿಜ್, ಡೆತ್ ಎಟ್ ಎ ಫೂನರಲ್, ಅಂಡರ್‍ಡಾಗ್, ಪೆನೆಲೊಪ್, ನಾರ್ಣಿಯಾ ಮುಂತಾದ ಚಿತ್ರಗಳಲ್ಲಿ ಅಭಿನಿಯಿಸಿದರು. ಆದರೆ ಗೇಮ್ ಆಫ್ ಥ್ರೋನ್‍ನ ಟಿರಿಯನ್ ಲ್ಯಾನಿಸ್ಟರ್‍ನ ಪಾತ್ರವು ಇವರ ಅಭಿನಯ ಸಾಮಥ್ರ್ಯವನ್ನೆಲ್ಲೆ ಒರಗೆ ಹಚ್ಚಿದೆ.
ಎಪ್ರಿಲ್ 14 ರಂದು ಗೇಮ್ ಆಫ್ ಥ್ರೋನ್‍ನ ಕೊನೆಯ ಸರಣಿಯ ಮೊದಲ ಎಪಿಸೋಡ್ ವೀಕ್ಷಕರಿಗೆ ಲಭ್ಯವಾಯಿತು. ಈ ಸರಣಿಯಲ್ಲಿ 6 ಎಪಿಸೋಡ್‍ಗಳಿವೆ. ಮೇ 19ರಂದು ಪ್ರಸಾರವಾಗಲಿರುವ ಕೊನೆಯ ಎಪಿಸೋಡಿನಿಂದ ಗೇಮ್ ಆಫ್ ಥ್ರೋನ್ ಮುಕ್ತಾಯವಾಗಲಿದೆ. ಕೋಟ್ಯಾಂತರ ನೋಡುಗರನ್ನು ಒಂದು ಫ್ಯಾಂಟಸಿ ಲೋಕಕ್ಕೆ ಕೊಂಡೊಯ್ಯುವ ಗೇಮ್ ಆಫ್ ಥ್ರೋನ್ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗಲಿದ್ದು, ವಿಶ್ವದ ನೋಡುಗರು ಕಂಡ ಅತಿ ದೊಡ್ಡ ಶೋ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...