ವಿನಯಾ ಒಕ್ಕುಂದ |
         ಮತ್ತೊಂದು ಮಹಾಚುನಾವಣೆ ಹತ್ತಿರವಾಗುತ್ತಿದೆ.  ದೇಶವನ್ನು ಮುನ್ನಡೆಸುವ ನಾಯಕತ್ವದ ಬಗ್ಗೆ ಯೋಚಿಸಬೇಕಾದ ಹೊತ್ತಲ್ಲಿ, ದೇಶದ ಉಸ್ತುವಾರಿಕೆಯ ಗುತ್ತಿಗೆ ಯಾರ ಪಾಲಾಗಲಿದೆ ಎಂದು ಸಿನಿಕತನದಿಂದ ಕೇಳಿಕೊಳ್ಳುವ ಸ್ಥಿತಿಯಿದೆ.  ನಾವುಗಳು ಒಪ್ಪಲಿ ಬಿಡಲಿ, ಈ ಚುನಾವಣೆ ಭಾರತದ ಬದುಕಿನಲ್ಲಿ ನಿರ್ಣಾಯಕವೆನಿಸಲಿದೆ.  ಸೋಲು ಖಚಿತವೆಂದು ಗೊತ್ತಿದ್ದರೂ ಪ್ರತಿಸ್ಪರ್ಧಿಗಳಾಗಿ ನಿಂತು ನೈತಿಕ ವಿರೋಧವನ್ನು ದಾಖಲಿಸಬೇಕು ಎನ್ನುವ ಮಟ್ಟಿಗೆ ಹತಾಶೆಯ ಸ್ಥಿತಿಯಿದೆ.  ಗುಪ್ತಮತದಾನ, ಮತದಾನದ ಗಾಂಭೀರ್ಯತೆ ಎಂಬುದೆಲ್ಲ ಬಾಲಿಶವೆನಿಸಿಬಿಟ್ಟಿವೆ.  ಯಾರು, ಯಾರಿಗೆ ಮತ ಹಾಕುತ್ತಾರೆ ಎನ್ನುವುದನ್ನು ಯಾರು ಬೇಕಾದರೂ ಹೇಳಬಹುದಾದಷ್ಟು ಭಾರತದ ಮತದಾರರು ಜಾತಿ-ಧರ್ಮಗಳಿಗೆ ಸ್ಟಿಕಾನ್ ಆಗಿದ್ದಾರೆ.  ಈ ಹತಾಶೆಯ ವಾಸ್ತವವನ್ನು, ಎಪ್ರಿಲ್ 2 ರಂದು ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಚುನಾವಣೆಗೆ ಮಹಿಳಾ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ನಾಡಿನ ಚಿಂತಕಿ ಡಾ.ವಿಜಯಮ್ಮ – ಕೊಳೆತ ಹಣ್ಣುಗಳ ಬುಟ್ಟಿಯ ಮುಂದೆ ನಿಂತಿದ್ದೇವೆ.  ಅರ್ಧ ಕೊಳೆತ ಹಣ್ಣನ್ನು ಹುಡುಕಿ ಆಯ್ದುಕೊಳ್ಳಬೇಕಾದ ಸ್ಥಿತಿಯಿದೆ – ಎಂದಿದ್ದರು.
ಚುನಾವಣೆ ಹತ್ತಿರವಾದಂತೆಲ್ಲ, ಭಾರತದ ಪ್ರಜಾಪ್ರಭುತ್ವ ಒತ್ತರಿಸಲ್ಪಟ್ಟಿರುವ ಅಪಾಯದ ಅಂಚು ನಿಚ್ಚಳವಾಗಿ ಕಾಣುತ್ತಿವೆ. ಚುನಾವಣೆಯನ್ನು ನಿಷ್ಕಲ್ಮಶವಾಗಿ ನಡೆಯಿಸಬೇಕಾದ ಹೊಣೆಗಾರಿಕೆ ಚುನಾವಣಾ ಆಯೋಗದ್ದು.  ಚುನಾವಣೆಯ ಸಂಕೀರ್ಣ ಕಾಲದಲ್ಲಿ ದೇಶದ ನಾಗರಿಕರಿಗೆ ನೈತಿಕ ಸ್ಥೈರ್ಯವನ್ನು ತುಂಬಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ಜವಾಬ್ದಾರಿಯದು. ಆದರೆ ಮತಪತ್ರಗಳಿಂದ ಮತಯಂತ್ರಗಳವರೆಗಿನ ಚುನಾವಣಾ ಪ್ರಕ್ರಿಯೆಯ ಬೆಳವಣಿಗೆಯಲ್ಲಿ ಸಾಕಷ್ಟು ಸ್ಥಿತ್ಯಂತರಗಳಾಗಿವೆ. ಮತಯಂತ್ರಗಳನ್ನು ತಂತ್ರಜ್ಞಾನ ಬಳಸಿ ಹ್ಯಾಕ್ ಮಾಡಲಾಗಿದೆ, ಮಾಡಬಹುದು – ಎಂಬೆಲ್ಲ ತೀವ್ರ ತಕರಾರುಗಳು ಕೇಳಿಬಂದಾಯಿತು. ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ವಿ.ವಿ. ಪ್ಯಾಟ್‍ಗಳ ಜೋಡಣೆಯಾಯಿತು.  ಆದರೆ ಚುನಾವಣಾ ಆಯೋಗ ನಾಗರಿಕರ ಪೂರ್ಣ ವಿಶ್ವಾಸವನ್ನು ಪಡೆಯಲಾಗದೆ ಸೋತಿತು.  ಈಗ ಮತಪತ್ರಗಳನ್ನು-ಮತಯಂತ್ರವನ್ನು ತಾಳೆನೋಡುವ ಕ್ರಮಕ್ಕೆ ಮುಂದಾಗಲಾಗಿದೆ.  ಇದರಿಂದ ನಿಸ್ಸಂಶಯ ಫಲಿತ ದೊರಕಬಹುದೇ?  ನೋಡಬೇಕು.  ಚುನಾವಣಾ ಆಯೋಗವು ಆಯತ ಸಂದರ್ಭಗಳಲ್ಲಿ ಮೌನವಾಗಿರುವುದು, ಕುರುಡು ನಟಿಸುವುದು-ಪ್ರಶ್ನಾರ್ಹ ಎನಿಸತೊಡಗಿದೆ.  ಒಂದೆರಡು ಢಾಳಾಗಿ ರಾಚುತ್ತಿರುವ ಉದಾಹರಣೆಗಳನ್ನೇ ಗಮನಿಸುವಾ.  (1) ಚುನಾವಣೆ ಘೋಷಣೆಯಾದ ಮೇಲೆ ಗುರಿಯಿಟ್ಟು ಹೊಡೆವಂತೆ, ವಿರೋಧ ಪಕ್ಷಗಳ ರಾಜಕಾರಣಿಗಳು – ಅಧಿಕಾರಿಗಳ ಮೇಲೆ ಮೇಲೆ ಆಯ್.ಟಿ. ರೇಡ್ ನಡೆತ್ತಿದೆ.  ಹಣವಿಲ್ಲದೆಯೂ ಚುನಾವಣೆಯು ನಡೆಯಬಹುದೆಂಬ  ಸ್ಥಿತಿಯನ್ನು ಬಿಟ್ಟು ಬಂದು ಬಹಳ ಕಾಲವಾಗಿದೆ.  ಈ ಅನೈತಿಕ ದಾಳಿಯನ್ನು ಚುನಾವಣಾ ಆಯೋಗ ಪ್ರಶ್ನಿಸಬಹುದಿತ್ತಲ್ಲವೇ? ತಡೆಯಬಹುದಿತ್ತಲ್ಲವೇ?  ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ನಡೆ-ರೀತಿ, ಚಲನ-ವಲನವನ್ನು ಪರೀಕ್ಷಿಸುವ ಕರ್ತವ್ಯವಾದರೂ ಸರಿಯಾಗಿದೆಯೇ? ಚುನಾವಣಾ ಪ್ರಚಾರದ ವೇಳೆಯಲ್ಲಿ ನರೇಂದ್ರ ಮೋದಿಯವರು, ಸೈನಿಕ ಉಡುಪು-ಸೈನಿಕ ಭಾಷೆಗಳ ಯತೇಚ್ಛ ಬಳಕೆ ಮಾಡಿದರು, ಸೈನಿಕ ಕಾರ್ಯಾಚರಣೆಯ ಎಲ್ಲ ಒಳಿತನ್ನೂ ತನಗೇ ಸಮರ್ಪಿಸಿಕೊಂಡರು.  ವಿಜ್ಞಾನಿಗಳ ಕೃತಕ ಉಪಗ್ರಹದ ಸಾಧನೆಯನ್ನು ತಮ್ಮದೇ ಎನ್ನುವಂತೆ ಘೋಷಿಸಿಕೊಂಡರು.  ಅದಾಗಲೇ ನೀತಿಸಂಹಿತೆ ಜಾರಿಯಲ್ಲಿತ್ತು.  ದೇಶದ ಗೌರವಾನ್ವಿತ ಸ್ಥಾನದಲ್ಲಿದ್ದ ಮೋದಿಯವರಿಗೆ ಅಂತಹ ಯಾವ ಅಳುಕೂ ಇರಲಿಲ್ಲ.  ನಮೋ ಟಿ.ವಿ. ವಾಹಿನಿಯು – ಪ್ರಸಾರ ಲೈಸೆನ್ಸ್ ಇಲ್ಲದೆ, ಪ್ರಸಾರ ಕಾನೂನು ಭದ್ರತೆಯ ಅನುಮತಿಯನ್ನೂ ಪಡೆಯದೆ – ಮೋದಿ ಭಾಷಣದ ಪ್ರಸಾರದಲ್ಲಿ ತೊಡಗಲೆತ್ನಿಸಿತು.  ಮೋದಿಯವರ ಕುರಿತ ಸಿನಿಮಾದ್ದೂ ಇದೇ ಕಥೆ.  ಅನಿವಾರ್ಯವಾಗಿ ನ್ಯಾಯಾಲಯದ ಮೊರೆಹೋಗಿ, ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾದ ಸ್ಥಿತಿ ಬಂತು.  ಚುನಾವಣಾ ಆಯೋಗವು ಸರಕಾರದ ಪರವಾಗಿ, ಸರಕಾರದ ಅಂಗಸಂಸ್ಥೆಯಂತೆ ವ್ಯವಹರಿಸುತ್ತಿದೆಯೇ?  ಎಂಬ ಅನುಮಾನ ಮೂಡಿತು.  ದೇಶದಲ್ಲಿ ಉನ್ನತ ಸ್ಥಾನದಲ್ಲಿರುವ 60ಕ್ಕೂ ಹೆಚ್ಚು ಅಧಿಕಾರಿಗಳು ‘ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು’- ಎಂಬ ಎಚ್ಚರಿಕೆಯ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಪಕ್ಷಗಳ ಅಭ್ಯರ್ಥಿಗಳಲ್ಲಿ ಸ್ವಾರ್ಥ, ಸ್ವಾರ್ಥದ ಬಂಡಾಯ, ಸ್ವಹಿತದ ಮಾತನ್ನು ದೇಶದ ಹಿತ ಎಂಬಂತೆ ಬಿಂಬಿಸುವ ಲಾಲಸೆಯನ್ನು ಕಾಣುತ್ತೇವೆ.  ಅಧಿಕಾರ ದಾಹ ಮತ್ತು ಅದನ್ನು ಬೈತಿಟ್ಟುಕೊಳ್ಳಲು ಜನಹಿತದ ಮಾತುಗಳು ಇಷ್ಟೇ ಪ್ರಾಥಮಿಕ ಅರ್ಹತೆಎನ್ನುವಂತಾಗಿದೆ. ಯಾವ ರಾಜಕೀಯ ಪಕ್ಷಗಳಿಗೂ, ಅಭ್ಯರ್ಥಿಗಳಿಗೂ – ಈ ಮುಂದಿನ 5 ವರ್ಷಗಳ ಅವಧಿಯಲ್ಲಿ ಯಾವ ಯೋಜನೆಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ – ಎಂಬ ಪ್ರಣಾಳಿಕೆಯು ಮುಖ್ಯವಲ್ಲ. ಕಾಂಗ್ರೆಸ್ ಅತಿ ಆದರ್ಶದ ಪ್ರಣಾಳಿಕೆಯನ್ನು ಮುಂದಿಟ್ಟಿದೆಯಾದರೂ, ಪ್ರಣಾಳಿಕೆ ಕಾರ್ಯರೂಪಕ್ಕೆ ಬರುವ ಬದ್ಧತೆಯನ್ನು ಕಳಕಳಿಯನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವುದಂತೂ ಸಾಧ್ಯವಿಲ್ಲ.  2014ರಲ್ಲಿ ಮತದಾನಕ್ಕೆ 1 ದಿನ ಇರುವಾಗ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, ಈಗ ಮೊದಲ ಹಂತದ ಮತದಾನಕ್ಕೆ 3 ದಿನ ಇರುವಾಗ ಪ್ರಣಾಳಿಕೆ ಬಿಡುಗಡೆ ಮಾಡಿದೆ.  ಯಥಾಪ್ರಕಾರ ರಾಮಮಂದಿರ ನಿರ್ಮಾಣ, 370ನೇ ವಿಧಿ ಮತ್ತು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳಿಗೆ ಮಣೆ ಹಾಕಲಾಗಿದೆ. ಸ್ವತಂತ್ರ ಭಾರತದ ಮೊದಲ ಐದು ದಶಕಗಳಲ್ಲಿ ರಾಜಕೀಯ ಪಕ್ಷಗಳಿಗೆ. ಪ್ರಣಾಳಿಕೆಗಳು, ಕಾರ್ಯಯೋಜನೆಗಳು ಮತದಾರರನ್ನು ಸೆಳೆಯುವ ಅಂಶಗಳಾಗಿದ್ದವು.  ಈಗ ಈ ತಾತ್ವಿಕತೆಯೇ ಕಾಣೆಯಾಗುತ್ತಿದೆ. ಈ ದುರಂತ ಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಸಂಭಾಳಿಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದು.  ಆ ಜವಾಬ್ದಾರಿಯನ್ನದು ನಿರ್ವಹಿಸಿದೆಯೇ?
ಪ್ರಜಾಸತ್ತೆಯ ನೈತಿಕ ಪತನವಿರುವುದು- ಅಭ್ಯರ್ಥಿಗಳು ಮುಂದಾಳುಗಳು ಯಾವ ಭ್ರಮೆಯನ್ನು ನಂಬಿಸುತ್ತಿದ್ದಾರೆ ಎನ್ನುವಲ್ಲಿ. ಚುನಾವಣೆ ಎನ್ನುವುದು ಬಹುದೊಡ್ಡ ಬಂಡವಾಳೋದ್ಯಮವಾಗಿದೆ.  ಈ ಉದ್ಯಮದ ಯಶಸ್ಸು ನಿಲ್ಲುವುದು, ಜನರನ್ನು ಹುಂಬ-ನಿಸ್ತೇಜ ಗ್ರಾಹಕರನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ.  ಜನರೆದುರು ಭ್ರಮಾತ್ಮಕತೆಯನ್ನೇ ಸತ್ಯವೆಂದು ಪ್ರತಿಪಾದಿಸುವ ಜಾಣ್ಮೆ ತೋರುವಲ್ಲಿ. ಹಾಗಾಗಿ ಪೊಜಷನಿಂಗ್ ಸ್ಟೇಟ್‍ಮೆಂಟ್ಸ್‍ಗಳು ಚಾಲ್ತಿಗೆ ಬರುತ್ತವೆ.  ಮಾಂತ್ರಿಕ ಸ್ಲೋಗನ್ನುಗಳ ಮೂಲಕ, ಉನ್ಮತ್ತ ವರ್ತನೆಗಳ ಮೂಲಕ ಜನರನ್ನು ವಶೀಕರಣಕ್ಕೆ ತೆಗೆದುಕೊಳ್ಳಲಾಗುತ್ತದೆ.  ಜನರಿಗೆ ಸತ್ಯ ಮತ್ತು ಭ್ರಮೆಗಳ ಅಂತರ ತಿಳಿಯದ ಹಾಗೆ, ಸುಳ್ಳು ಮತ್ತು ನಿಜಗಳು ಅರಿವಾಗದ ಹಾಗೆ ಉನ್ಮಾದಕಾರಿ ಸ್ಥಿತಿಯಲ್ಲಿ ಇಡಬಲ್ಲವರನ್ನು ಜನನಾಯಕರೆಂದು ಭಾವಿಸಲಾಗುತ್ತದೆ. ಈ ಭಾವನೆಯ ನಿರಂತರತೆಯನ್ನು ಕಾದುಕೊಳ್ಳಲು ಮಾಧ್ಯಮಗಳು ಸತತ ಶ್ರಮಿಸುತ್ತವೆ.  ಪ್ರತಿಬಾರಿಯ ಚುನಾವಣೆಯೂ ಇಂತಹ ಮಿಥ್ಯೆಯನ್ನು ಹುಟ್ಟುಹಾಕುತ್ತ ಬಂದಿದೆ.  ಈಗದು ತನ್ನ ಶಿಖರಾವಸ್ಥೆಯನ್ನು ತಲುಪಿದೆ.  ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಪ್ರಾಸಬದ್ಧತೆಯು ‘ಎಲ್ಲರು’ ಎಂಬ ಪದದ ಅರ್ಥವನ್ನೇ ಸಂಕುಚಿತಗೊಳಿಸಿತು.  ಈಗ ಚೌಕಿದಾರ್, ಚೌಕಿದಾರ್ ಚೋರ ಹೈ, ಮೈ ಭಿ ಚೌಕಿದಾರ್ – ಎಂಬ ವಾಗ್ವಾದಗಳನ್ನು, ಅವು ಜನರ ಮನಸ್ಸನ್ನು ಭ್ರಷ್ಟಗೊಳಿಸುತ್ತಿರುವ ವಿಧಾನವನ್ನೂ ನೋಡಿದರೆ, ಚುನಾವಣಾ ನಂತರ ದೇಶ ಒಳಗಾಗಬಹುದಾದ ಆಂತರಿಕ ವಿಧ್ವಂಸಕತೆಯ ಬಗ್ಗೆ ಗಾಬರಿಯಾಗುತ್ತದೆ.
ಈ ದೇಶ, ಬಲು ಕಷ್ಟದಲ್ಲಿಯೂ ಜತನದಿಂದ ಕಾಪಾಡಿ ತಂದ ಬಹುತ್ವವನ್ನು ಕಳೆದುಕೊಂಡು, ಪ್ರಜಾಪ್ರಭುತ್ವದ ಅಂತಃಶಕ್ತಿಯನ್ನೇ ನಾಶಮಾಡಿಕೊಂಡು ವಿಕಾರವಾದರೆ- ಅದರ ಸಂಪೂರ್ಣ ಹೊಣೆಯನ್ನು ಭ್ರಷ್ಟ ಮಾಧ್ಯಮಗಳು ಹೊರಬೇಕಾಗುತ್ತದೆ.  ಪ್ರಜಾತಂತ್ರದ ಮೌಲ್ಯವನ್ನು ಪೋಷಿಸುವ ಮಾಧ್ಯಮಗಳು, ಬಂಡವಾಳವಾದಿಯ ಕೈವಸ್ತ್ರವಾಗಿ ಬಳಕೆಯಾಗತೊಡಗಿದೆ.  ತನ್ನ ನೈತಿಕ ಚಹರೆಯನ್ನು ಕಳೆದುಕೊಂಡಿದೆ.  ಮಾಧ್ಯಮಗಳನ್ನು ಪ್ರಮಾಣವಾಗಿ ನಂಬುವುದೀಗ ಮೂರ್ಖತನ ನಿಜ.  ಆದರದು ಜನಸಾಮಾನ್ಯರಿಗೆ ತಿಳಿಯವುದು ಹೇಗೆ? ಮಾಧ್ಯಮಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಭ್ರಷ್ಟರಾಗುತ್ತಾರೆ.  ಕೆಲವೊಮ್ಮೆ ಅವರ ಭ್ರಷ್ಟತೆ ಜಾಹೀರಾಗುತ್ತದೆ.  ಆದರೆ ಅದನ್ನು ಮಾಧ್ಯಮಲೋಕ,  ಕುಟುಂಬ ವಾತ್ಸಲ್ಯದಿಂದ ಮುಚ್ಚಿಟ್ಟುಕೊಳ್ಳುತ್ತದೆ.  ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಪಬ್ಲಿಕ್ ಟಿ.ವಿ.ಯ ಹೇಮಂತ್ ಕಶ್ಯಪ್ ಎಂಬ ಪತ್ರಕರ್ತನ ಮೋಸದ ಪ್ರಕರಣ ಎರಡು ಪತ್ರಿಕೆಗಳಲ್ಲಿ ಮಾತ್ರ ಅದೂ ಸಣ್ಣದಾಗಿ ಪ್ರಕಟವಾಗಿತ್ತು ಮತ್ತು ಒಂದರಲ್ಲಿ ಮಾತ್ರ ಸಂಸ್ಥೆಯ ಹೆಸರು ಉಲ್ಲೇಖಗೊಂಡಿತ್ತು.  ಮಾಧ್ಯಮಗಳೇ ಹೀಗೆ ಮಾರಿಕೊಂಡವರಾದ್ದರಿಂದ ಜನರಿಗೆ ಸುದ್ದಿಯ ವಾಸ್ತವ ಮತ್ತು ಜಾಹೀರಾತಿನ ಭಾಗವಾದ ಸುದ್ದಿಗಳ ವ್ಯತ್ಯಾಸ ತಿಳಿಯುವುದಿಲ್ಲ.
ಎಷ್ಟೋ ಜಾಹೀರಾತುಗಳು, ರಾಜಕೀಯ ಪ್ರಚಾರ ಜಾಹೀರಾತುಗಳಲ್ಲದೆ, ವಸ್ತುವಿನ ಮಾರುಕಟ್ಟೆಯ ಉದ್ದೇಶದ ಜಾಹೀರಾತುಗಳಾಗಿ ಮೇಲ್ನೋಟಕ್ಕೆ ಕಾಣುತ್ತವೆ. ಅಂತರಾರ್ಥದಲ್ಲಿ ರಾಜಕೀಯ ನಿಲುವುಗಳನ್ನು ಪ್ರಚೋದಿಸುತ್ತಿರುತ್ತವೆ.  ನಿದರ್ಶನವಾಗಿ, ಕೇಸರಿ ಎಂಬ ಪಾನ್‍ಮಸಾಲಾ ಜಾಹೀರಾತು- ಹಿಂದೂತ್ವದ ಧೈರ್ಯ ಕ್ಷಮತೆಯನ್ನು ಉದ್ದೀಪಿಸುವ ಸಾಧನವಾಗಿ ಕಾಣುತ್ತದೆ.  ನೀತಿಸಂಹಿತೆಯು ರಾಜಕೀಯ ಪಕ್ಷಗಳ ನೇರ, ಜಾಹೀರಾತುಗಳನ್ನು ನಿಲ್ಲಿಸಿದಾಗಲೂ ಇಂಥವು ಯಾವ ಎಗ್ಗಿಲ್ಲದೆ ಸತತ ಪ್ರಸಾರಗೊಳ್ಳುತ್ತಲೇ ಇರುತ್ತದೆ.  ಮಾಧ್ಯಮಗಳು ಸುದ್ದಿಯನ್ನು ನೇರ ಸುದ್ಧಿ ಮತ್ತು  ‘ಹಣದ ಸುದ್ದಿ’ ಎಂಬ ವರ್ಗೀಕರಣ ಮಾಡಿಕೊಂಡ ಮೇಲೆ ಮಾಧ್ಯಮಗಳಿಂದ ಪ್ರಜಾತಂತ್ರವು ತನ್ನ ಅಧಃಪತನದ ಗೆರೆಗಳನ್ನು ಚಿತ್ರಿಸಿಕೊಳ್ಳುತ್ತಲಿದೆ.  ದೇಶದಾದ್ಯಂತ ಬರಹಗಾರರು, ಕಲಾವಿದರು, ಸಿನಿಮಾ ನಿರ್ದೇಶಕರು, ವಿಜ್ಞಾನಿಗಳು -ಸಾವಿರಾರು ಸಂಖ್ಯೆಯಲ್ಲಿ ಸಹಿ ಮಾಡಿ “ದೇಶದ ಬಹುತ್ವವನ್ನು ಛಿದ್ರಗೊಳಿಸುತ್ತಿರುವವರಿಗೆ,ವಿಜ್ಞಾನ ಕಲೆಗಳನ್ನೂ ಬಂಡವಾಳ ಮಾಡಿ ಬಿಸಾಡುತ್ತಿರುವವರಿಗೆ ಮತ ಚಲಾಯಿಸಬೇಡಿ” ಎಂದು ಕೇಳಿಕೊಂಡಿದ್ದಾರೆ.  ಆದರೆ. . .  ಈ ಸಂದೇಶವನ್ನು ಜನರಿಗೆ ತಲುಪಿಸಬೇಕಾದ ಮಾಧ್ಯಮಗಳು ಶ್ರೀಮಂತರ ಚೌಕಿದಾರರಾಗಿ ಕೂತರೆ ಪ್ರಜಾಪ್ರಭುತ್ವವನ್ನು ಮತಯಂತ್ರಗಳು ರಕ್ಷಿಸಬಲ್ಲವೆ?

LEAVE A REPLY

Please enter your comment!
Please enter your name here