Homeಅಂಕಣಗಳುಅವ್ವ - ನನ್ನ ದೊಡ್ಡಮ್ಮ

ಅವ್ವ – ನನ್ನ ದೊಡ್ಡಮ್ಮ

- Advertisement -
- Advertisement -

ಇಶಾ ಲಂಕೇಶ್
ಅನುವಾದ-ಮಲ್ಲಿಗೆ |

ಯಾವುದಾದರೊಂದು ಭಾವನೆಯ ಬಗ್ಗೆ ನಾನು ಬಹಳ ಹೆಚ್ಚು ಚಿಂತಿಸಿದ್ದರೆ-ಅದು ನೋವಿನ ಬಗ್ಗೆ. ಅದು ನಮಗೆ ದೈಹಿಕವಾಗಿ ಏಟಾದಾಗ ಉಂಟಾಗುವ ನೋವಿನಂಥದ್ದಲ್ಲ; ನಾವು ಯಾರನ್ನಾದರೂ ಕಳೆದುಕೊಂಡಾಗ ಉಂಟಾಗುವ ನೋವು! ನಾನು ಚಿಕ್ಕವಳಾಗಿದ್ದಾಗ ಇದರ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೆ, ಯಾವಾಗಲಾದರೂ ಒಮ್ಮೆ ಆ ಒಂದು ದಿನ ಬರಬಹುದೇನೋ, ನಾನು ನನಗೆ ತುಂಬ ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುವ ದಿನ ಎಂದು ಹೆದರುತ್ತಿದ್ದೆ. ಆದರೆ ನಿಜಕ್ಕೂ ಅಂತಹ ಘಟನೆ ಸಂಭವಿಸುವವರೆಗೂ ಅದು ಸತ್ಯವೆಂದು ಅನಿಸಿರಲಿಲ್ಲ!
ಒಂದು ಸಂಜೆ, ನನ್ನ ಅಜ್ಜಿ ಮತ್ತು ನಾನು ದೊಡ್ಡಮ್ಮ ಕುಸಿದುಬಿದ್ದರೆಂಬ ಸುದ್ದಿ ಕೇಳಿದೆವು. ಮನೆಯಲ್ಲಿ ನಾವು ಇಬ್ಬರೇ ಇದ್ದದ್ದು. ನನ್ ಅಜ್ಜಿ ನನ್ನನ್ನು ದೊಡ್ಡಮ್ಮನ ಮನೆಗೆ ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋದರು…ದಾರಿಯುದ್ದಕ್ಕೂ ಹೆದರುತ್ತಾ ಅಳುತ್ತಾ……ಏನಾಗಿರಬಹುದೆಂದು ಅವರಿಗೆ ಭಯವಾಗಿತ್ತು. ನಾವು ದೊಡ್ಡಮ್ಮನ ಮನೆ ತಲುಪಿದಾಗ ಅವರನ್ನು ಗುಂಡಿಟ್ಟು ಕೊಲೆಮಾಡಲಾಗಿತ್ತೆಂಬ ವಿಚಾರ ತಿಳಿಸು ಆಘಾತಗೊಂಡೆವು. ನನ್ನಮ್ಮ ಆಗಲೇ ಅಲ್ಲಿದ್ದರು…..ಎದೆಯೊಡೆದು, ಅಳುತ್ತಾ. ನಾನೂ ಅಳತೊಡಗಿದೆ. ಹಿಂದೆಂದೂ ಇಲ್ಲದಂತೆ ಅತ್ತೆ; ಯಾಕೆಂದರೆ ಹಿಂದೆಂದೂ ಇಂತಹ ನೋವನ್ನು ನಾನು ಅನುಭವಿಸಿರಲಿಲ್ಲ….ಎಂದೂ ಕಲ್ಪಿಸಿಕೊಂಡಿರಲೇ ಇಲ್ಲ. ನಡೆದದ್ದು ಎಷ್ಟು ಆಘಾತಕರವಾಗಿತ್ತೆಂದರೆ, ಹೆಚ್ಚೂ ಕಡಿಮೆ ನಂಬಲಸಾಧ್ಯವಾದುದಾಗಿತ್ತು. ಇಂದಿನತನಕವೂ ನನಗೆ ಆಕೆ ಇಲ್ಲೇ ಇರುವಂತೆ ಭಾಸವಾಗುತ್ತದೆ, ಶಾಶ್ವತವಾಗಿ ನಿಜವಾಗಿ ಹೊರಟು ಹೋಗಿಲ್ಲವೇನೋ ಎನಿಸುತ್ತದೆ. ಸಮಯ ಗಾಯಗಳನ್ನು ಮಾಯಿಸುತ್ತದೆ ಎನ್ನುತ್ತಾರೆ. ಒಂದು ವರ್ಷ ಕಳೆದಿದೆ, ಆದರೆ ಆ ಘಟನೆ ನಿನ್ನೆ ನಡೆಯಿತೇನೋ ಎಂಬಂತೆ ಆ ನೋವನ್ನು ನಾನು ಅನುಭವಿಸುತ್ತಿದ್ದೇನೆ. ಬಹುಶಃ ನಾನು ಅಂದು ಅತ್ತಂತೆ ಈಗ ಅಳುತ್ತಿಲ್ಲ…ಆದರೆ ನನ್ನೊಳಗಿನ ಖಾಲಿತನ ಅಂದಿನಷ್ಟೇ ಇಂದೂ ಆಳವಾಗಿದೆ, ಗಾಢವಾಗಿದೆ!
ಮೊದಮೊದಲಿಗೆ ನನಗೆ ಆ ಕೊಲೆಗಾರರ ಮೇಲೆ ತುಂಬ ಸಿಟ್ಟು ಬಂತು. ಅವರು ಆಕೆಯನ್ನು ನೋಯಿಸಿದಂತೆಯೇ ನಾನು ಅವರುಗಳನ್ನು ನೋಯಿಸಬೇಕು ಎಂದುಕೊಂಡೆ. ನಾವು ಇಂದು ಅನುಭವಿಸುತ್ತಿರುವ ನೋವನ್ನು ಅವರೂ ಅನುಭವಿಸುವಂತೆ ಮಾಡಬೇಕೆನಿಸಿತ್ತು. ಈಗಲೂ ಹಾಗೆಯೇ ಅನಿಸುತ್ತದೆ. ಆದರೆ ಕೊಲೆಗಾರರು ನೋವನುಭವಿಸಿದರೂ ನನ್ನ ದೊಡ್ಡಮ್ಮ ಹಿಂತಿರುಗಿ ಬರುವುದಿಲ್ಲ ಎಂಬುದೇ ಕಹಿ ಸತ್ಯ. ‘ಒಂದು ಕಣ್ಣಿಗೆ ಇನ್ನೊಂದು ಕಣ್ಣು ಎಂಬುದು ಇಡೀ ಜಗತ್ತನ್ನು ಕುರುಡಾಗಿಸುತ್ತದೆ’ ಎಂಬುದು ನನಗೆ ಗೊತ್ತಾಗಿದೆ. ನಾವು ಮಾಡಬಹುದಾದ್ದೇನೆಂದರೆ, ನೋವು ಕಡಿಮೆಯಾಗುವವರೆಗೆ ಕಾಯುವುದು, ಕಾನೂನು ಪ್ರಕಾರವಾಗಿ ಕೊಲೆಗಾರರಿಗೆ ಶಿಕ್ಷೆಯಾಗುವಂತೆ ಮಾಡುವುದು ಮತ್ತು ನಮಗೆ ನ್ಯಾಯ ದೊರಕಿಸಿಕೊಳ್ಳುವುದು.

ನಾನು ಆಕೆಯ ಬಗ್ಗೆ ಯೋಚಿಸದೇ ಸರಿದುಹೋದಂತಹ ಒಂದು ದಿನವೂ ಇಲ್ಲ. ನನ್ನ ಬಗ್ಗೆ ಆಕೆಗಿದ್ದ ಪ್ರೀತಿಯ ಬಗ್ಗೆ ಯೋಚಿಸಿದಾಗ ನಾನು ಭಯಂಕರವಾಗಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ದೊಡ್ಡಮ್ಮನಿಗೆ ಅವರದ್ದೇ ಆದ ಮಕ್ಕಳಿರಲಿಲ್ಲ. ಆದರೆ ನಾನು ಆಕೆಯನ್ನು ‘ಅವ್ವ’ ಎಂದು ಕರೆಯುತ್ತಿದ್ದ ಹಾಗೆ ಅವರೂ ನನ್ನನ್ನು ಮಗಳು ಎಂದೇ ಕರೆಯುತ್ತಿದ್ದರು. ಆಕೆ ನನಗೆ ಎರಡನೇ ತಾಯಿಯಿದ್ದಂತೆ. ಕೆಲವೊಮ್ಮೆ ಯಾರನ್ನಾದರೂ ಕಳೆದುಕೊಳ್ಳುವವರೆಗೂ ನಮಗೆ ಅವರ ನಿಜವಾದ ಬೆಲೆ ಅರ್ಥವಾಗಿರುವುದಿಲ್ಲ ಎಂದು ಹೇಳುತ್ತಾರೆ. ನಾನು ಅವ್ವನನ್ನು ಎಷ್ಟು ಇಷ್ಟಪಡುತ್ತಿದ್ದೆನೆಂಬುದು ಆಕೆಯನ್ನು ಕಳೆದುಕೊಳ್ಳುವವರೆಗೆ ನನ್ನ ಅರಿವಿಗೆ ಬಂದಿರಲೇ ಇಲ್ಲ. ಅವರಿಲ್ಲದ ಒಂದು ಜಗತ್ತನ್ನು ನಾನು ಕಲ್ಪಿಸಿಕೊಂಡಿರಲೇ ಇಲ್ಲ.

ನಾನು ಚಿಕ್ಕವಳಾಗಿದ್ದಾಗ ವಾರಾಂತ್ಯಗಳಲ್ಲಿ ಅವರ ಮನೆಗೆ ಹೋಗುತ್ತಿದ್ದೆ. ಆಕೆ ನನಗೆ ಮಲಗುವಾಗ ತಾನೇ ಸೃಷ್ಟಿಸಿದ ಬೇರೆ ಬೇರೆ ಆವೃತ್ತಿಗಳ ಸಿಂಡ್ರೆಲಾ ಕಥೆಯನ್ನು ಹೇಳುತ್ತಿದ್ದರು. ನನ್ನ ದೊಡ್ಡಮ್ಮನ ಆವೃತ್ತಿಯಲ್ಲಿ ಸಿಂಡ್ರೆಲಾ ಒಬ್ಬ ಶಕ್ತಿಶಾಲಿ ಸ್ವತಂತ್ರ ಹುಡುಗಿಯಾಗಿದ್ದಳು. ಸಿಂಡ್ರೆಲಾ ಒಬ್ಬ ದುಡಿಯುವ ಮಹಿಳೆಯಾಗಿರುತ್ತಿದ್ದಳು ಮತ್ತು ಪ್ರತಿ ಸಾರಿ ಕಥೆ ಹೇಳುವಾಗಲೂ ದೊಡ್ಡಮ್ಮ ಆಕೆಯ ವೃತ್ತಿಯನ್ನು ಬದಲಿಸುತ್ತಿದ್ದರು. ಕೆಲವೊಮ್ಮೆ ಸಿಂಡ್ರೆಲಾ ಚೆಫ್ ಆಗಿದ್ದರೆ ಇನ್ನೊಮ್ಮೆ ಆಕೆ ಬರಹಗಾರ್ತಿಯಾಗಿರುತ್ತಿದ್ದಳು! ಒಟ್ಟಿನಲ್ಲಿ ಸಿಂಡ್ರೆಲಾ ತನ್ನ ರಾಜಕುಮಾರನಿಗಾಗಿ ಕಾಯುವ ದುರ್ಬಲ ಹುಡುಗಿಯಂತೂ ಆಗಿರುತ್ತಿರಲಿಲ್ಲ. ಪ್ರತಿಬಾರಿಯೂ ಕಥೆಯಲ್ಲಿ ಸಿಂಡ್ರೆಲಾಳ ಸನ್ನಿವೇಶ ಅಥವಾ ಅವಳೆದುರಿಸುವ ಸವಾಲುಗಳು ಸ್ವಲ್ಪ ಬದಲಾಗಿರುತ್ತಿದ್ದವು. ಈ ಕಥೆಗಳನ್ನು ಕೇಳುವುದೆಂದರೆ ನನಗೆ ತುಂಬ ಇಷ್ಟವಾಗುತಿತ್ತು. ನಾನು ಸವಲ್ಪ ದೊಡ್ಡವಳಾದಂತೆ ಆಕೆ ನನಗೆ ಜಿಮ್ ಕಾರ್ಬೆಟ್, ಕೆನೆತ್ ಆಂಡರ್‍ಸನ್ ಕಥೆಗಳನ್ನು ಹೇಳುತ್ತಿದ್ದರು ಮತ್ತು ಪೂರ್ಣಚಂದ್ರ ತೇಜಸ್ವಿ ಮೊದಲಾದವರ ಪುಸ್ತಕಗಳನ್ನು ಕೂಡಾ ಓದಲು ಕೊಡುತ್ತಿದ್ದರು. ಆಕೆ ಭಯಾನಕ ಓದುಗಾರ್ತಿಯಾಗಿದ್ದರು. ಆಕೆ ಚಿಕ್ಕವರಾಗಿದ್ದಾಗಲೂ, ಒಡಹುಟ್ಟಿದವರು ಹೊರಹೋಗಿ ಆಟಾಡುವುದರಲ್ಲಿ ತೊಡಗಿದ್ದರೆ ನನ್ನ ದೊಡ್ಡಮ್ಮ ಮಾತ್ರ ಆನಂದವಾಗಿ ತನ್ನ ಪುಸ್ತಕಗಳ ಲೋಕದಲ್ಲಿ ಮುಳುಗಿರುತ್ತಿದ್ದರಂತೆ!

ಸುಳಿದಾಡುತ್ತಾಳ ನೆನಪಿನೊಳಗ

ನನ್ನ ದೊಡ್ಡಮ್ಮನಿಗೆ ನನ್ನ ಮೇಲೆ ಎಷ್ಟು ಒಂದು ರೀತಿಯ ಆರಾಧನೆಯಂತಹ ಪ್ರೀತಿಯಿತ್ತೆಂದರೆ ತನ್ನ ಸ್ನೇಹಿತರಿಗೆ ನನ್ನನ್ನು ಮಗಳು ಎಂದೇ ಪರಿಚಯಿಸುತ್ತಿದ್ದರೇ ಹೋರತು, ಯಾವತ್ತೂ ನನ್ನನ್ನು ತಂಗಿಯ ಮಗಳು ಎಂದು ಪರಿಚಯಿಸುತ್ತಿರಲಿಲ್ಲ. ತಾನು ಅತ್ಯಂತ ಬಿಜಿಯಾಗಿದ್ದಾಗಲೂ ನನ್ನ ಕುರಿತಾದ ಚಿಕ್ಕ ಪುಟ್ಟ ಕಥೆಗಳನ್ನು ಹೇಳಿ ತನ್ನ ಸ್ನೇಹಿತರ ಮನರಂಜಿಸುತ್ತಿದ್ದರು. ನಾನು ನನ್ನ ಅಭಿಪ್ರಾಯವನ್ನು ದಿಟ್ಟವಾಗಿ ವ್ಯಕ್ತಪಡಿಸುವಂತಹ ಗಟ್ಟಿ ಹೆಣ್ಣುಮಗಳಾಗಬೇಕೆಂದು ನನಗೆ ಯಾವಾಗಲೂ ಹೇಳುತ್ತಿದ್ದರು. ಸಮಕಾಲೀನವಾದ ಎಲ್ಲ ಬೆಳವಣಿಗೆಗಳ ಬಗ್ಗೆ ನನಗೆ ಪೂರ್ಣ ಮಾಹಿತಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಭಾಷಣಗಳನ್ನು ಕೇಳಲು ಕರೆದೊಯ್ಯುತ್ತಿದ್ದರು ಹಾಗೂ ಯುವ ನಾಯಕರಾದ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್ ಮೊದಲಾದವರ ಭಾಷಣಗಳ ವಿಡಿಯೋ ತೋರಿಸುತ್ತಿದ್ದರು. ಯುವಜನರೇ ಪರಿವರ್ತನೆಯನ್ನು ತರುವವರಾದ್ದರಿಂದ ಅವರು ಅರಿವುಳ್ಳವರಾಗಿರಬೇಕೆಂದು ಯಾವಾಗಲೂ ಹೇಳುತ್ತಿದ್ದರು.

ಕೆಲವು ವರ್ಷಗಳ ಹಿಂದೆ ತನ್ನ ಹುಟ್ಟುಹಬ್ಬದ ದಿನ ನನ್ನ ದೊಡ್ಡಮ್ಮ ತನಗೆ ತಾನೇ ಒಂದು ಉಡುಗೊರೆ ಕೊಟ್ಟುಕೊಂಡರು, ತನ್ನ ತೋಳಿನ ಮೇಲೆ ನಮ್ಮ ತಾತನ ಪತ್ರಿಕೆಯ ಲೋಗೋ ಆಗಿದ್ದ ನವಿಲು ಗರಿಯ ಚಿಹ್ನೆ ಮತ್ತು ಅದರ ಕೆಳಗೆ ನನ್ನ ಹೆಸರಿನ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡರು. ಪ್ರತಿ ವಾರಾಂತ್ಯಗಳಲ್ಲಿ ನಮ್ಮ ಮನೆಗೆ ಬಂದು ನನ್ನೊಂದಿಗೆ ಹಾಗೂ ನಮ್ಮ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದರು. ನನ್ನ ದೊಡ್ಡಮ್ಮನಿಗೆ ಮಾಂಸದೂಟ ಅಂದರೆ ತುಂಬ ಇಷ್ಟ ಆದರೆ ಅವರು ಸಾಮಾನ್ಯವಾಗಿ ಅಡಿಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಮನೆಗೆ ಬಂದಾಗೆಲ್ಲ ನಮ್ಮಮ್ಮ ನಮ್ಮಿಬ್ಬರಿಗಾಗಿ ಚಿಕನ್ ಅಡಿಗೆ ಮಾಡುತ್ತಿದ್ದರು. ಅವರಿಬ್ಬರೂ ಬಿಡುವಾಗಿದ್ದರೆ, ತಮ್ಮ ಹಳೆಯ ದಿನಗಳ ತಮಾಷೆಯ ಘಟನೆಗಳನ್ನು, ನೆನಪುಗಳನ್ನು, ಅನುಭವಗಳನ್ನು ಮೆಲುಕು ಹಾಕುತ್ತಿದ್ದರು. ನಾವು ಇಡೀ ಮಧ್ಯಾಹ್ನ ನಗುತ್ತಾ ಸಂತೋಷವಾಗಿ ಕಳೆಯುತ್ತಿದ್ದೆವು.

ಜಾತ್ಯತೀತವಾಗಿರುವುದು ಮತ್ತು ಸಮಾನವಾಗಿರುವುದು ನನ್ನ ದೊಡ್ಡಮ್ಮನ ಮಟ್ಟಿಗೆ ತುಂಬ ಮಹತ್ವದ್ದಾಗಿತ್ತು ಮತ್ತು ಅದು ನಮ್ಮಲ್ಲೂ ನೆಲೆಯೂರಿದೆ. ನಮ್ಮ ಇಡೀ ಕುಟುಂಬ, ಗಣೇಶ ಹಬ್ಬವನ್ನು ನಮ್ಮ ಮಾವನ ಮನೆಯಲ್ಲಿ, ಕ್ರಿಸ್ಮಸ್ ಹಬ್ಬವನ್ನು ನಮ್ಮ ಮನೆಯಲ್ಲಿ ಮತ್ತು ರಂಜಾನ್ ಹಬ್ಬವನ್ನು ದೊಡ್ಡಮ್ಮನ ಮನೆಯಲ್ಲಿ ಕೂಡಿ ಆಚರಿಸುತ್ತಿತ್ತು. ಆಕೆ, ನನಗೆ ಮತ್ತು ನನ್ನ ಕಸಿನ್‍ಗಳಿಗೆ ಕಥೆಗಳನ್ನೂ, ಹಬ್ಬಗಳ ಮಹತ್ವದ ಕುರಿತ ವಿಚಾರಗಳನ್ನೂ ಹೇಳಿಕೊಡುತ್ತಿದ್ದರು. ದೊಡ್ಡಮ್ಮನ ಮಟ್ಟಿಗೆ, ಎಲ್ಲ ಸಮುದಾಯಗಳು ಮತ್ತು ಧರ್ಮಗಳ ಕೂಡಿಬಾಳುವ ವಿಚಾರ ಬಹಳ ಮುಖ್ಯವಾದುದಾಗಿತ್ತು. ಆಕೆ, ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ, ದಲಿತರು, ಮುಸ್ಲಿಮರು, ಲೈಂಗಿಕ ಅಲ್ಪಸಂಖ್ಯಾತರು ಮತ್ತಿತರ ಎಲ್ಲರಿಗಾಗಿ ಹೋರಾಡುತ್ತಿದ್ದರೆಂಬುದನ್ನೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆಕೆ ಒಬ್ಬ ನಿರ್ಭೀತ, ವೃತ್ತಿನಿಷ್ಟ ಪತ್ರಕರ್ತೆಯಾಗಿದ್ದರು. ತುಳಿತಕ್ಕೊಳಗಾದವರಿಗಾಗಿ, ಅವರ ಸಮಸ್ಯೆಗಳಿಗೆ ವಿರುದ್ಧವಾಗಿ ಹೋರಾಡುವ ಕಡು ಹೋರಾಟಗಾರ್ತಿಯಾಗಿದ್ದರು. ಆಕೆ, ನಕ್ಸಲೈಟರನ್ನು ತಮ್ಮ ಆಯುಧಗಳನ್ನು ತ್ಯಜಿಸಿ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸುವಂತೆ ಮನವೊಲಿಸಿದ್ದರು.

ಆಕೆ ತುಂಬ ಕಷ್ಟಪಟ್ಟು ದುಡಿಯುತ್ತಿದ್ದರು, ಸಣ್ಣ ಬಿಡುವನ್ನೂ ತೆಗೆದುಕೊಳ್ಳದೆ ಹಗಲೂ ರಾತ್ರಿ! ಆಕೆಯ ಸಾವಿನ ನಂತರವೇ ನನಗೆ ಅವರು ನಿಜವಾಗಿ ಏನಾಗಿದ್ದರು ಮತ್ತು ಸಮಾಜದ ಬೇರೆ ಬೇರೆ ಸ್ತರಗಳ ಜನರಿಗಾಗಿ ಎಷ್ಟೆಲ್ಲ ಶ್ರಮಿಸಿದ್ದರು ಎಂಬುದು ಅರಿವಾಯಿತು. ನನ್ನ ಮಟ್ಟಿಗೆ ಆಕೆ ನನ್ನ ಕಣಕಣವನ್ನೂ ಪ್ರೀತಿಸುವ ‘ಅವ್ವ’ ಅಷ್ಟೇ ಆಗಿದ್ದರು; ಆದರೆ, ಸಾವಿರಾರು ಜನರಿಗೆ, ಆಕೆ ‘ಅವ್ವ’, ‘ಅಮ್ಮ’, ಒಡನಾಡಿ, ಸ್ನೇಹಿತೆ ಆಗಿದ್ದರು ಮತ್ತು ಎಳೆಯರಿಗೆ ಪ್ರೀತಿಯ ಮಾರ್ಗದರ್ಶಿಯಾಗಿದ್ದರು ಎಂಬುದು ಅರಿವಾಯಿತು. ಆಕೆ ಏನು ಮಾಡುತ್ತಿದ್ದರು, ಆಕೆಗೆ ಯಾವುದನ್ನೆಲ್ಲ ಕಂಡರೆ ಇಷ್ಟ ಮತ್ತು ಅದಕ್ಕೂ ಹೆಚ್ಚಾಗಿ ಆಕೆಗೆ ಯಾವುದನ್ನು ಕಂಡರೆ ಆಕ್ರೋಶ ಎಂಬುದು ನನಗೆ ಗೊತ್ತಿತ್ತು. ಆದರೆ, ಎಳೆಯ, ಹಿರಿಯ, ದುರ್ಬಲ, ಏನನ್ನೂ ಹೊಂದಿಲ್ಲದ………. ಅದೆಷ್ಟು ಸಾವಿರ ಬದುಕುಗಳನ್ನು ಆಕೆ ಪ್ರಭಾವಿಸಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ಆಕೆಯ ಅಂತ್ಯ ಸಂಸ್ಕಾರದ ದಿನ ನಾವು ಒಂದಷ್ಟು ಜನರನ್ನು ನಿರೀಕ್ಷಿಸಿದ್ದೆವು. ಆದರೆ, ಸಮಾಜದ ವಿವಿಧ ವಿಭಾಗಗಳ ಸಾವಿರಾರು ಜನರು ತಾವಾಗಿಯೇ ಬಂದು ನೆರೆದದ್ದಕ್ಕೆ ಸಾಕ್ಷಿಯಾಗಿ ಆಶ್ಚರ್ಯಗೊಂಡೆವು. ಅಲ್ಲಿ ಮಹಿಳೆಯರಿದ್ದರು, ಯುವಜನರಿದ್ದರು, ಲೈಂಗಿಕ ಅಲ್ಪಸಂಖ್ಯಾತರಿದ್ದರು, ಮುಸ್ಲಿಮರಿದ್ದರು, ರಂಗಕರ್ಮಿಗಳು-ಸಿನೆಮಾಗಳ ಜನರಿದ್ದರು, ರಾಜಕಾರಣಿಗಳಿದ್ದರು….ಇನ್ನೂ ಹಲವರಿದ್ದರು. ನನ್ನ ದೊಡ್ಡಮ್ಮನ ಕೊಲೆಯ ವಿರುದ್ಧ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳಾದವು; ದೇಶದಾದ್ಯಂತ ಅಷ್ಟೇಕೆ ಜಗತ್ತಿನಾದ್ಯಂತ ಪ್ರತಿಭಟನೆಗಳಾದವು. ಇಂಡಿಯಾ ಗೇಟ್ ಬಳಿ ಜನರು ಕ್ಯಾಂಡಲ್‍ಗಳನ್ನು ಬೆಳಗಿಸಿ ಆಕೆಯನ್ನು ನೆನೆದರು. ಪತ್ರಕರ್ತರು ಪ್ರತಿಯೊಂದು ಪಟ್ಟಣದಲ್ಲೂ ಪ್ರತಿಭಟಿಸಿದರು. ಈಗ ಒಂದು ವರ್ಷದ ನಂತರವೂ ಪ್ರಭುತ್ವಾಧಿಕಾರಕ್ಕೆ ಎದುರಾಗಿ ಸತ್ಯ ನುಡಿಯುವ ಪತ್ರಕರ್ತರ ಭದ್ರತೆ ಮತ್ತು ನ್ಯಾಯದ ಪ್ರಶ್ನೆಗಳನ್ನೆತ್ತುತ್ತಾ ಈಗಲೂ ಫ್ರಾನ್ಸ್, ನ್ಯೂಯಾರ್ಕ್, ಜರ್ಮನಿ, ಮಾಲ್ಟಾದಂತಹ ಸ್ಥಳಗಳಲ್ಲಿ ಪ್ರತಿಭಟನೆಗಳಾಗುತ್ತಿವೆ. ಪ್ರಾನ್ಸ್‍ನ ಬೇಯಕ್ಸ್ ಎಂಬ ಪಟ್ಟಣದಲ್ಲಿ ದೊಡ್ಡಮ್ಮನ ಗೌರವಾರ್ಥ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯು ಒಂದು ಕಂಬವನ್ನೇ ಉದ್ಘಾಟಿಸಿದೆ.

ಆಕೆಯನ್ನು ಕಳೆದುಕೊಂಡ ನೋವನ್ನು ಕಡಿಮೆ ಮಾಡುವ ಒಂದೇ ಅಂಶವೆಂದರೆ ನಾನು ಆಕೆಯ ಬಗ್ಗೆ ಎಷ್ಟು ಹೆಮ್ಮೆ ಹೊಂದಿದ್ದೇನೆ ಎಂಬುದು! ಆಕೆಯ ಕೊಲೆಗಾರರು ಆಕೆಯ ದನಿಯನ್ನು ಅಡಗಿಸಲಾಗಲಿಲ್ಲ; ಬದಲಿಗೆ ಜಗತ್ತಿನ ಎಲ್ಲಾ ಭಾಗದಲ್ಲೂ ಯಾವ ಆಶಯಗಳಿಗಾಗಿ ಆಕೆ ದನಿಯೆತ್ತಿದ್ದರೋ ಅವು ಇನ್ನಷ್ಟು ಗಟ್ಟಿಯಾಗಿ ಕೇಳಿಸುವಂತಾಯಿತು ಎಂಬುದು!

ಆಕೆಯನ್ನು ಕಳೆದುಕೊಳ್ಳುವವರೆಗೆ ಯಾರನ್ನಾದರೂ ಕಳೆದುಕೊಂಡರೆ ಹೇಗನ್ನಿಸುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಯಾವಾಗಲೂ ನನಗೆ ನಾನು ತುಂಬ ಇಷ್ಟಪಡುವ ಯಾರನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯ ಇದ್ದಾಗಲೂ ಅದು ಎಲ್ಲದರ ಅಂತ್ಯವಾಗಿರುತ್ತದೆ ಎಂದು ಅನಿಸಿರಲೇ ಇಲ್ಲ; ಎಲ್ಲವೂ ಮತ್ತೆ ಸಹಜ ಸ್ತಿತಿಗೆ ಮರಳುತ್ತದೆ ಎಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಅದು ಎರಡೂ ಹೌದು. ಕೆಲವು ಸಂಗತಿಗಳು ಧಿಡೀರನೆ ಕೊನೆಗೊಂಡವು, ಬದುಕಿನ ಕೆಲವು ಸಂಗತಿಗಳು ಏನೂ ಜರುಗಿರಲೇ ಇಲ್ಲ ಎಂಬಂತೆ ಎಂದಿನಂತೆ ಮುಂದುವರೆದವು.

ಹಿಂತಿರುಗಿ ನೋಡಿದಾಗ, ನಾನು ‘ಅವ್ವ’ನೊಂದಿಗೆ ಇನ್ನಷ್ಟು ಹೆಚ್ಚು ಸಮಯ ಕಳೆದಿದ್ದರೆ ಎಂದು ಆಸೆಯಾಗುತ್ತದೆ; ಇನ್ನೂ ಹೆಚ್ಚು ಸಲ ನಾನು ಅವರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದೆ ಎಂದು ಹೇಳಿಕೊಳ್ಳಬೇಕಿತ್ತು ಎಂದು ಆಸೆಯಾಗುತ್ತದೆ; ಆಕೆಯ ಬಗ್ಗೆ ಮತ್ತು ಆಕೆಯ ಕೆಲಸದ ಬಗ್ಗೆ ನನಗೆ ಎಷ್ಟು ಹೆಮ್ಮೆಯಿದೆ ಎಂಬುದನ್ನು ನಾನು ಹೇಳೀರಬೇಕಿತ್ತು ಎನಿಸುತ್ತದೆ; ನಾನು ಆಕೆ ಯಾವುದರ ಪರವಾಗಿ ನಿಂತಿದ್ದಾರೆಂಬುದನ್ನು ಇನ್ನೊಂದಷ್ಟು ಹೆಚ್ಚು ಅರ್ಥಮಾಡಿಕೊಂಡಿರಬೇಕಿತ್ತು; ಆಕೆ ಕೇವಲ ನನ್ನ ದೊಡ್ಡಮ್ಮನಷ್ಟೇ ಅಲ್ಲ, ಅದಕ್ಕಿಂತ ತುಂಬ ಹೆಚ್ಚು, ನಾನು ಆಕೆಯನ್ನು ಅಗಾಧವಾಗಿ ಗೌರವಿಸುತ್ತೇನೆ ಎಂದು ಹೇಳಿರಬೇಕಿತ್ತು ಎಂದು ಆಸೆಯಾಗುತ್ತದೆ! ನಾನು ಇದನ್ನೆಲ್ಲ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಇಲ್ಲದಿದ್ದರೂ, ನಾನು ಆಕೆಯನ್ನು ತುಂಬ ಇಷ್ಟಪಡುತ್ತೇನೆಂಬುದು ಅವರಿಗೆ ಗೊತ್ತಿತ್ತೆಂದು ನನಗೆ ಗೊತ್ತು. ಹಾಗೆಯೇ ನನ್ನನ್ನು ಅವರು ಎಷ್ಟು ಇಷ್ಟಪಡುತ್ತಿದ್ದರೆಂಬುದು ನನಗೂ ಗೊತ್ತು. ಮತ್ತು ಈಗ ನಾನು ಆಕೆಗೇನಾದರೂ ಹೇಳುವುದಾದರೆ, ನನ್ನ ಜೊತೆ 13 ವರ್ಷಗಳನ್ನು ಕಳೆದಿದ್ದಕ್ಕೆ ಮತ್ತು ನನ್ನ ಬದುಕಿಗೆ ಮಾದರಿಯಾಗಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ನಾನು ಹಂಚಿಕೊಳ್ಳಬೇಕಾದ ಎಷ್ಟೆಲ್ಲ ವಿಚಾರಗಳನ್ನು ಕೇಳಲು ಅವರು ನನ್ನೊಂದಿಗಿಲ್ಲ ಎಂದು ನಾನು ನಂಬುವುದಿಲ್ಲ; ಆಕೆಯ ಚೇತನ ಯಾವಾಗಲೂ ನನ್ನೊಂದಿಗಿದೆ ಎಂಬುದು ನನಗೆ ಗೊತ್ತು. ಇಷ್ಟು ಚಿಕ್ಕ ತನ್ನ ಜೀವಿತಾವಧಿಯಲ್ಲಿ ಆಕೆ ಎಷ್ಟೆಲ್ಲವನ್ನೂ ಮಾಡಿದ್ದರೆಂದರೆ, ನನ್ನ ಹೃದಯದಲ್ಲಿ ಮತ್ತು ಇನ್ನೂ ಅನೇಕರ ಹೃದಯದಲ್ಲಿ ತುಂಬ ಕಾಲ ಬದುಕಿರುತ್ತಾರೆ. ತುಂಬ ದೀರ್ಘ ಕಾಲ……………….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...