Homeನ್ಯಾಯ ಪಥಸಂಖ್ಯಾಬಲ ಕೊರತೆಯ ಆತುರದ ಆಪರೇಷನ್ : ಮೋದಿ ಯುಗಾಂತ್ಯದ ಸುಳಿವೇ?

ಸಂಖ್ಯಾಬಲ ಕೊರತೆಯ ಆತುರದ ಆಪರೇಷನ್ : ಮೋದಿ ಯುಗಾಂತ್ಯದ ಸುಳಿವೇ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಎಂಪಿ ಎಲೆಕ್ಷನ್‍ಗೆ ಇನ್ನುಳಿದಿರೋದು ಕೇವಲ ನಾಲ್ಕು ತಿಂಗಳು ಮಾತ್ರ. ಇಂಥಾ ಹೊತ್ತಲ್ಲಿ, ಆಪರೇಷನ್ ಕಮಲ ಎಂಬ ಹೊಲಸು ಕಾರ್ಯಾಚರಣೆಯ ಮೂಲಕ ಸ್ಥಿರ ಸರ್ಕಾರವೊಂದನ್ನು ಕೆಡವಲು ಹೆಣಗಾಡುವುದು ಪಕ್ಷಕ್ಕೆ ಕೆಟ್ಟ ಹೆಸರು ತಂದುಕೊಡೋದಲ್ಲದೆ ಪಾರ್ಲಿಮೆಂಟ್ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಉತ್ತರದ ಐದು ವಿಧಾನಸಭೆ ಚುನಾವಣೆಗಳಲ್ಲಿ ಜನ ಸಾರಾಸಗಟಾಗಿ ತಿರಸ್ಕರಿಸಿದ ಮೇಲೂ ಹೀಗೆ ಮಾನಗೆಟ್ಟು ಶಾಸಕರ ಖರೀದಿ ವ್ಯವಹಾರಕ್ಕೆ ಮುಂದಾದರೆ ಜನರಿಗೆ ಪಕ್ಷದ ಬಗ್ಗೆ ಎಂಥಾ ಮೆಸೇಜು ಹೋಗಲಿದೆ? ಒಬ್ಬರೋ ಇಬ್ಬರೋ ಓಕೆ. ಅನಾಮತ್ತು ಹದಿನೈದು ಮೈತ್ರಿ ಶಾಸಕರ ರಾಜೀನಾಮೆ ಕೊಡಿಸುವುದು ಸುಲಭದ ಮಾತೆ?……..

ಯಡ್ಯೂರಪ್ಪನ ಆಪರೇಷನ್ ಕಮಲದ ಅನಾಹುತಕಾರಿ ಆತುರವನ್ನು ನೋಡಿದವರಿಗೆ ಇಂಥಾ ಸರಳ ಪ್ರಶ್ನೆಗಳು ಮೂಡುವುದು ಸಹಜ. ಅಂತದ್ದರಲ್ಲಿ ಬಿಜೆಪಿ ಹೈಕಮ್ಯಾಂಡ್ ಹೇಗೆ ಆಪರೇಷನ್ ಕಮಲಕ್ಕೆ ಅಸ್ತು ಅಂದಿತು? ಅದ್ಯಾವ ಧೈರ್ಯದ ಮೇಲೆ ಯಡ್ಯೂರಪ್ಪ ದೂರದ ಗುರೆಗಾಂವ್‍ನ ಚಳಿಯಲ್ಲಿ ತಮ್ಮ ಶಾಸಕರನ್ನು ಗುಡ್ಡೆ ಹಾಕಿಕೊಂಡು ಕೂತಿದ್ದಾರೆ?…..
ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೋದಂತೆ ಯಡ್ಯೂರಪ್ಪನ ಅಧಿಕಾರ ದಾಹ ಮಾತ್ರವಲ್ಲ ಪ್ರಧಾನಿ ಮೋದಿಯ ಯುಗಾಂತ್ಯದ ಸುಳಿವೂ ಸಿಗುತ್ತದೆ! ಮೊದಲು `ಸಂಕ್ರಾಂತಿ ಕ್ರಾಂತಿ’ಯ ಈ ಹೈಡ್ರಾಮಾ ಬಿಜೆಪಿ ಪಾಲಿಗೆ ಹೇಗೆ ಮುಳ್ಳಿನ ಹಾದಿ ಅನ್ನೋದನ್ನು ಶಾಸಕರ ಬಲಾಬಲದ ಮೂಲಕ ನೋಡೋಣ.

ಫಲಿತಾಂಶ ಹೊರಬಿದ್ದ ದಿನದಿಂದಲೂ ಅಧಿಕಾರಕ್ಕಾಗಿ ಬಿಜೆಪಿ ಹಪಾಹಪಿಸುತ್ತಲೇ ಇದೆ. ಅದಕ್ಕೆ ಕಾರಣವೂ ಉಂಟು. ಸಮೀಕ್ಷೆಯ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮಿದ ಬಿಜೆಪಿಯ 104ರ ಬಲವನ್ನು ಓವರ್‍ಟೇಕ್ ಮಾಡಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಯಕಶ್ಚಿತ್ 37 ಸ್ಥಾನಗಳ ಕುಮಾರಸ್ವಾಮಿಯನ್ನು ಸಿಎಂ ಗಾದಿಯಲ್ಲಿ ಕೂರಿಸಿದರೆ ಯಡ್ಯೂರಪ್ಪನಂತಹ ವೃದ್ಧ ಮನಸ್ಸಿಗೆ ಅದಿನ್ನೆಷ್ಟು ಘಾಸಿ ಮಾಡಬೇಡ. ಅದಕ್ಕಿಂತಲೂ ಪ್ರಧಾನಿ ಮೋದಿಯೇ `ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡಲು ನಾನು ಬಿಡಲ್ಲ’ ಅಂತ ಅಸಾಂವಿಧಾನಿಕ ಧಮಕಿ ಹಾಕಿದ ಮೇಲೆ ಯಡ್ಯೂರಪ್ಪ ಅದೇಗೆ ತಾನೆ ಸುಮ್ಮನಿರಲು ಸಾಧ್ಯ. ರಾಜೀನಾಮೆ ಕೊಡುವುದಕ್ಕೆಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರಂತೆ ಮೂರೇ ದಿನಕ್ಕೆ ಮಾಜಿ ಸಿಎಂ ಎನಿಸಿಕೊಂಡರೂ ಯಡ್ಯೂರಪ್ಪನ ಅಂತರಾತ್ಮ ಅಧಿಕಾರಕ್ಕಾಗಿ ಕೊಸರಾಡುತ್ತಲೇ ಇತ್ತು.

ನಂಬರ್ ಗೇಮ್ ಬಿಜೆಪಿ ಕೈಹಿಡಿಯದು

ಇತ್ತೀಚೆಗೆ ಮೈತ್ರಿ ಸರ್ಕಾರ ಸಂಪುಟ ಪುನರ್ರಾಚನೆ ಮಾಡಿದಾಗ ಬಿಜೆಪಿಯ ಆ ಹಪಾಹಪಿಗೆ ಜೀವ ಬಂದಿದೆ. ಸಹಜವಾಗಿಯೇ ಮಂತ್ರಿಗಿರಿಯಿಂದ ಕೆಳಗಿಳಿಸಲ್ಪಟ್ಟ ರಮೇಶ್ ಜಾರಕಿಹೊಳಿ, ಪಕ್ಷೇತರ ಶಾಸಕ ರಾಣೆಬೆನ್ನೂರಿನ ಆರ್.ಶಂಕರ್ ಮುನಿಸಿಕೊಂಡರು. ಅಂತದ್ದಕ್ಕಾಗಿಯೇ ಕಾಯುತ್ತಿದ್ದ ರಾಜ್ಯ ಬಿಜೆಪಿ ನಾಯಕತ್ವ ಒಳಗಿಂದೊಳಗೇ ಆಪರೇಷನ್ ಕಮಲದ ಅಖಾಡಕ್ಕಿಳಿದಿದ್ದರು. ರಾಜ್ಯದ ಆಗುಹೋಗುಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಬೆಳಗಾವಿಯ ಅಧಿವೇಶನ ಕೂಡ ಬಿಜೆಪಿ ಪಾಲಿಗೆ ಇಂತಹ ವ್ಯಾಪಾರದ ಮಾತುಕತೆಗೆ ಒದಗಿದ ‘ಸುವರ್ಣ’ ಅವಕಾಶವೇ ಆಗಿತ್ತು! ಮೊಗಸಾಲೆಯಲ್ಲಿ ಈ ದಂಧೆಯ ಬಗ್ಗೆ ಮಾತಾಡಲೆಂದೇ ಹಲವರನ್ನು ನಿಜೆಪಿ ನಿಯೋಜಿಸಿತ್ತು ಕೂಡ!

ರಮೇಶ್ ಜಾರಕಿಹೊಳಿ

ಅದೆಲ್ಲವೂ ಈಗ ತಕ್ಕಮಟ್ಟಿಗೆ ವರ್ಕ್‍ಔಟ್ ಆಗಿದೆ. ಮಂತ್ರಿಗಿರಿ ಕೈತಪ್ಪಿದ ದಿನದಿಂದಲೇ ನಾಪತ್ತೆಯಾಗಿರುವ ರಮೇಶ್ ಜಾರಕಿಹೊಳಿಯನ್ನು ಗುರಾಣಿಯನ್ನಾಗಿಟ್ಟುಕೊಂಡೇ ಬಿಜೆಪಿ ಆಟವಾಡುತ್ತಿದೆ. ರಮೇಶ್ ಜೊತೆಗೆ ಮಹೇಶ್ ಕುಮಟಹಳ್ಳಿ, ಉಮೇಶ್ ಜಾಧವ್, ಬಿ.ನಾಗೇಂದ್ರ ಎಂಬ ಮೂವರು ಶಾಸಕರು ಕಮಲದ ಆಪರೇಷನ್ ಥಿಯೇಟರ್‍ನಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಜ್ಜಾಗಿದ್ದಾರೆ ಅನ್ನೋದು ಸುದ್ದಿ. ಆದರೆ ಮೈತ್ರಿ ಸರ್ಕಾರಕ್ಕೆ ಅಧಿಕೃತ ಶಾಕ್ ಬಂದಿರೋದು ಇವರಿಂದ ಅಲ್ಲ, ಇಬ್ಬರು ಪಕ್ಷೇತರ ಶಾಸಕರಿಂದ. ಕಾಡುಮಂತ್ರಿಗಿರಿಯಿಂದ ಕೈಬಿಟ್ಟ ಕಾರಣಕ್ಕೆ ಆರ್.ಶಂಕರ್, ನಿಗಮ ಮಂಡಳಿಯೂ ದಕ್ಕದ ಕಾರಣಕ್ಕೆ ಮುಳಬಾಗಿಲಿನ ಎಚ್.ನಾಗೇಶ್ ತಾವು ಅವಿತಿಟ್ಟುಕೊಂಡಿರುವ ಮುಂಬೈನ ನಿಗೂಢ ತಾಣದಿಂದ ನೇರ ರಾಜ್ಯಪಾಲರಿಗೆ ತಾವು ಮೈತ್ರಿ ಸರ್ಕಾರಕ್ಕೆ ನೀಡುತ್ತಿರುವ ಬೆಂಬಲ ವಾಪಾಸು ಪಡೆಯುತ್ತಿರೋದಾಗಿ ಪತ್ರವನ್ನು ಫ್ಯಾಕ್ಸ್ ಮಾಡಿದ್ದಾರೆ. ಅವರನ್ನು ಬಿಜೆಪಿಯೇ ಫೀಲ್ಡ್ ಮಾಡುತ್ತಿದೆ ಅನ್ನೋದು ರಹಸ್ಯವಾಗೇನೂ ಉಳಿದಿಲ್ಲ.

ಆರ್ ಶಂಕರ್
ಎಚ್. ನಾಗೇಶ್

ಇವರ ಬೆಂಬಲ ವಾಪಾಸಾತಿಯಿಂದ 224 ಒಟ್ಟು ಸಂಖ್ಯಾಬಲದ ವಿಧಾನಸಭೆಯಲ್ಲಿ ಸರ್ಕಾರದ ಬಲ 120ರಿಂದ 118ಕ್ಕೆ ಇಳಿದಿದೆ. ಇದರಲ್ಲಿ ಸಭಾಧ್ಯಕ್ಷರು ಸಹಾ ಮೈತ್ರಿ ಕೂಟದವರೇ. ವಿಶ್ವಾಸ ಮತ ಯಾಚನೆ ಸಮಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಮ ಬಲ ಏರ್ಪಟ್ಟಾಗ ಮಾತ್ರ ಸ್ಪೀಕರ್ ಮತ ಚಲಾಯಿಸಬಹುದು. ಹಾಗಾಗಿ ಅವರನ್ನು ಹೊರಗಿಟ್ಟರೆ ಮೈತ್ರಿಯ ಬಲ 117ಕ್ಕೆ ಕುಸಿಯಲಿದೆ. ಆದಾಗ್ಯೂ ಅದು ಸರ್ಕಾರವನ್ನು ಬಿಳಿಸುವುದಿಲ್ಲ. ಯಾಕೆಂದರೆ ಮ್ಯಾಜಿಕ್ ನಂಬರ್ 113ಕ್ಕಿಂತ ಇದು ಜಾಸ್ತಿಯೇ ಇದೆ. ಬಿಜೆಪಿಯ ಬಲ ಈಗ 106ಕ್ಕೆ ಏರಿದೆ (ಇಬ್ಬರ ಪಕ್ಷೇತರರಿಂದ). ಪಕ್ಷೇತರ ಶಾಸಕರನ್ನು ಅಲ್ಲಿಂದ ಇಲ್ಲಿಗೆ ಕರೆತಂದಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಇತ್ತ ಎಳೆದು ತರೋದು ಸುಲಭವಲ್ಲ. ಯಾಕೆಂದರೆ ಬೆರಳಿಣಿಕೆಯ ಶಾಸಕರು ಒಂದು ಪಕ್ಷದಿಂದಲ ಮತ್ತೊಂದು ಪಕ್ಷಕ್ಕೆ ಹೋಗುವಂತಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅವರು ಅನರ್ಹಗೊಳ್ಳುತ್ತಾರೆ. ಅಂದರೆ ಈಗ ಬಿಜೆಪಿ ಮುಂದಿರುವ ಆಯ್ಕೆಯೆಂದರೆ 113 ಮ್ಯಾಜಿಕ್ ನಂಬರ್ ಏನಿದೆಯಲ್ಲ ಅದನ್ನೇ ಕೆಳಗಿಳಿಸಿ ತನ್ನ ಬಲ 106ಕ್ಕಿಂತ ಕಡಿಮೆ ಮಾಡುವುದು. ಅಂದರೆ ಜೆಡಿಎಸ್, ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ವಿಧಾನಸಭೆಯ ಒಟ್ಟು ಸಂಖ್ಯಾಬಲವನ್ನೇ ಕಡಿಮೆ ಮಾಡಿದಾಗ ಸಹಜವಾಗಿಯೇ ಮ್ಯಾಜಿಕ್ ನಂಬರ್ ಕೂಡಾ ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತದೆ.

ಅಷ್ಟಾಗಬೇಕೆಂದರೆ ಕಾಂಗ್ರೆಸ್, ಜೆಡಿಎಸ್‍ನ ಕನಿಷ್ಠ 13 ಶಾಸಕರು ರಾಜೀನಾಮೆ ಕೊಡಬೇಕು. ಆಗ ಮೈತ್ರಿಯ ಸಂಖ್ಯಾಬಲ 105ಕ್ಕೆ ಕುಸಿಯಲಿದ್ದು ಮ್ಯಾಜಿಕ್ ನಂಬರ್ 106ಕ್ಕೆ ಇಳಿಯಲಿದೆ (ಒಟ್ಟು 211 ವಿಧಾನಸಭಾ ಶಾಸಕ ಸಂಖ್ಯಾಬಲದ ಪ್ರಕಾರ). ಈಗಿರುವ ಮಾಹಿತಿಯ ಪ್ರಕಾರ ರಮೇಶ್ ಜಾರಕಿಹೊಳಿ ಸೇರಿದಂತೆ ಒಟ್ಟು ನಾಲ್ವರು ಮಾತ್ರ ಬಿಜೆಪಿಯ ತೆಕ್ಕೆಯಲ್ಲಿದ್ದಾರೆ. ಈ ನಾಲ್ವರು ರಾಜೀನಾಮೆ ಕೊಟ್ಟರೂ ಮೈತ್ರಿಯ ಬಲ 113ಕ್ಕೆ ಮಾತ್ರ ಕುಸಿಯಲಿದೆ. ನೆನಪಿರಲಿ ಆಗ ಮ್ಯಾಜಿಕ್ ನಂಬರ್ 113 ಆಗಿರುವುದಿಲ್ಲ, 110 ಆಗಿರುತ್ತದೆ (220 ಒಟ್ಟು ಶಾಸಕರು). ಆಗಲೂ ಸರ್ಕಾರಕ್ಕೆ ಯಾವುದೇ ಭಯವಿರಲ್ಲ. ಆ ನಾಲ್ವರು ರಾಜೀನಾಮೆ ಕೊಟ್ಟದ್ದೂ ಯಾವ ಪ್ರಯೋಜನಕ್ಕೂ ಬಾರದು. ಮತ್ತೆ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಅದರಲ್ಲಿ ಬಿಜೆಪಿ ಎಷ್ಟರಲ್ಲಿ ಗೆಲ್ಲುತ್ತೆ, ಮೈತ್ರಿ ಎಷ್ಟು ತನ್ನದಾಗಿಸಿಕೊಳ್ಳುತ್ತೆ ಅನ್ನೋದರ ಮೇಲೆ ಅವಲಂಬನೆಯಾಗಿರುತ್ತೆ.

ಅತೃಪ್ತರೂ ಹಿಂದೇಟು

ಹಾಗಾಗಿ ಯಡ್ಯೂರಪ್ಪ ಕಟ್ಟಿರುವ ಈ ಆಪರೇಷನ್ ಕಮಲದ ಆಟ ಯಶಸ್ವಿಯಾಗಬೇಕೆಂದರೆ ಒಟ್ಟು ಹದಿಮೂರು ಮೈತ್ರಿ ಶಾಸಕರು ರಾಜೀನಾಮೆ ಗೀಚಬೇಕು. ಅದು ಅಷ್ಟು ಸುಲಭವಿಲ್ಲ. ಹಾಗಂತ ಗುರುಗಾಂವ್‍ನ ರೆಸಾರ್ಟ್‍ನಲ್ಲಿರುವ ಯಡ್ಡಿ ಆಪ್ತರೇ ತಮ್ಮ ಆತಂಕ ಹಂಚಿಕೊಂಡಿದ್ದಾರೆ. ಯಾಕೆಂದರೆ ಇಷ್ಟು ದಿನ ಅತೃಪ್ತ ಶಾಸಕರ ಲೀಡರ್ ರಮೇಶ್ ಜಾರಕಿಹೊಳಿಯ ಸಂಪರ್ಕದಲ್ಲಿದ್ದ ಬಳ್ಳಾರಿಯ ವಿಜಯನಗರ ಶಾಸಕ ಆನಂದ್‍ಸಿಂಗ್ ಆ ಬೆಟಾಲಿಯನ್‍ನಿಂದ ಹೊರಬಂದು ಕಾಂಗ್ರೆಸ್‍ನ ಉಸ್ತುವಾರಿ ವೇಣುಗೋಪಾಲ್ ಜೊತೆ ಮಾತಾಡಿ ತಾನು ಕಾಂಗ್ರೆಸ್ ಜೊತೆಗೇ ಇದ್ದೇನೆ ಅಂತ ಫೋಟೊ ತೆಗೆಸಿಕೊಂಡಿದ್ದಾರೆ. ಅಲ್ಲಿಗೆ ಅತೃಪ್ತ ಬೆಟಾಲಿಯನ್ ಕೂಡಾ ಅಲ್ಲಾಡುತ್ತಿರೋದು ಖಾತ್ರಿಯಾಯಿತು.

ಅಲ್ಲದೇ ಬಿಜೆಪಿ ಗಾಳ ಹಾಕಿದ್ದ ಕಾಂಗ್ರೆಸ್‍ನ ಭೀಮಾನಾಯಕ್, ಸಂಗಮೇಶ್ವರ್, ಬಿ.ಸಿ.ಪಾಟೀಲ್, ಡಾ.ಸುಧಾಕರ್, ಗಣೇಶ್, ಪ್ರತಾಪ್‍ಗೌಡ ಪಾಟೀಲ್, ಬಸವರಾಜ್ ದದ್ದಲ್, ಶಿವರಾಮ್ ಹೆಬ್ಬಾರ್ ಕೂಡಾ ಆಪರೇಷನ್ ಕಮಲದಿಂದ ಹಿಂದೇಟು ಹಾಕಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಇನ್ನು ಜೆಡಿಎಸ್‍ನ ಶಿರಾದ ಸತ್ಯನಾರಾಯಣ, ನಾಗಠಾಣಾದ ದೇವಾನಂದ್ ಚೌಹಾಣ್‍ರಿಗೂ ಬಿಜೆಪಿ ಗಾಳ ಬೀಸಿತ್ತಾದರು ಗೌಡರ ಕೋಟೆಯಿಂದ ಅವರು ಕದಲುವುದು ಅಸಾಧ್ಯದ ಮಾತು. ಮುಖ್ಯವಾಗಿ, ಜೆಡಿಎಸ್‍ನ ಚುನಾವಣಾಪೂರ್ವ ಮೈತ್ರಿ ಪಕ್ಷವಾದ ಬಿಎಸ್‍ಪಿಯ ಶಾಸಕ ಮಾಜಿ ಮಂತ್ರಿ ಎನ್.ಮಹೇಶ್ ಸಹಾ ಮೈತ್ರಿಯಿಂದ ಹಿಂದೆ ಸರಿಯಲ್ಲ ಎಂದಿರೋದು ಸರ್ಕಾರದ ಆತಂಕವನ್ನು ಕಡಿಮೆ ಮಾಡಿದೆ.

ಒಟ್ಟಿನಲ್ಲಿ ಬಿಜೆಪಿ ಪಾಲಿಗೆ ಗಟ್ಟಿಯಾಗಿ ಉಳಿದಿರೋದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಉಮೇಶ್ ಜಾಧವ್ ಮತ್ತು ಬಿ.ನಾಗೇಂದ್ರ ಎಂಬ ನಾಲ್ಕು ಹುದ್ದರಿಗಳು ಮಾತ್ರ. ಇವರು ಸಹಾ ರಾಜೀನಾಮೆಗೆ ಆತುರ ತೋರಿಲ್ಲ. `ಸರ್ಕಾರವನ್ನು ಪತನಗೊಳಿಸುವಷ್ಟು ಸಂಖ್ಯೆಯ ಶಾಸಕರನ್ನು ರಾಜೀನಾಮೆಗೆ ಸಿದ್ದಗೊಳಿಸಿ ಆಗ ನಾನು ಹದಿಮೂರನೇ ಶಾಸಕನಾಗಿ ರಾಜೀನಾಮೆ ಕೊಡ್ತೀನಿ, ಗ್ಯಾರಂಟಿ’ ಅನ್ನೋ ನಿಬಂಧನೆ ಇಟ್ಟೇ ರೆಸಾರ್ಟ್‍ನಲ್ಲಿ ಕೂತಿದ್ದಾರೆ. ಈ ಹಿಂದೆ ಆಪರೇಷನ್ ಕಮಲಕ್ಕೆ ತುತ್ತಾಗಿ ರಾಜೀನಾಮೆ ಗೀಚಿ, ನಂತರದ ಚುನಾವಣೆಯಲ್ಲಿ ಜನರಿಂದ ಸರಿಯಾದ ಪಾಠ ಕಲಿಸಿಕೊಂಡ ಮಾಜಿ ಕಲಿಗಳ ನಿದರ್ಶನ ಕಣ್ಮುಂದೆ ಇರುವಾಗ ಯಾರು ತಾನೇ ಯಡ್ಯೂರಪ್ಪನ ಅಧಿಕಾರ ದಾಹಕ್ಕೆ ತಮ್ಮ ಭವಿಷ್ಯವನ್ನೇ ಬಲಿಕೊಟ್ಟಾರು?

ಇದು ಮೋದಿ ಯುಗಾಂತ್ಯದ ಸುಳಿವಾ?

ಸರಿ, ಇಷ್ಟೆಲ್ಲಾ ತೊಡಕುಗಳಿದ್ದಾಗ್ಯೂ, ಎಂಪಿ ಎಲೆಕ್ಷನ್‍ನಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದ್ದಾಗ್ಯೂ ಬಿಜೆಪಿ ಯಾಕೆ ಇಂಥಾ ವ್ಯರ್ಥ ಸಾಹಸಕ್ಕೆ ಕೈಹಾಕಿದೆ? ಅನ್ನೋದು ಈಗುಳಿಯುವ ಪ್ರಶ್ನೆ. ಇದೇ ತುಂಬಾ ಮುಖ್ಯವಾದ ಪ್ರಶ್ನೆ. ಮೇಲ್ನೋಟಕ್ಕೆ ಇದು ಯಡ್ಯೂರಪ್ಪನವರ ಅಧಿಕಾರ ಧಾವಂತದಂತೆ ಕಂಡುಬಂದರು, ಇದು ಅವರಿಗೆ ಅನಿವಾರ್ಯ ಧಾವಂತವೂ ಹೌದು. Now or Never ಅನ್ನೋ ಪರಿಸ್ಥಿತಿ ಅವರದು. ಈಗಾಗಲೇ ಎಪ್ಪತ್ತೈದರ ವಯಸ್ಸನ್ನೂ ದಾಟಿದ್ದಾರೆ ಅನ್ನೋದಕ್ಕಿಂತ ಹೆಚ್ಚಾಗಿ ಇದೇ ಮೇ ತಿಂಗಳಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ನಂತರ ರಾಷ್ಟ್ರರಾಜಕಾರಣದಲ್ಲಿ ತನಗೆ ಆಸರೆಯಾಗುವ ಎಲ್ಲಾ ಅವಕಾಶಗಳೂ ಕಮರಿಹೋಗುವ ಸ್ಪಷ್ಟ ಚಿತ್ರಣಗಳು ಅವರಿಗೆ ಸಿಕ್ಕಿರುವುದೇ ಈ ಧಾವಂತಕ್ಕೆ ಕಾರಣ.

ಹೌದು, ಎಂಪಿ ಎಲೆಕ್ಷನ್ ತರುವಾಯ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ ಮಾತ್ರವಲ್ಲ, ಬಿಜೆಪಿಯೊಳಗೆ ಲೆಕ್ಕಕ್ಕೂ ಇಲ್ಲದಂತೆ ಮೂಲೆಗುಂಪಾಗಲಿದ್ದಾರೆ ಅನ್ನೋದು ಸಂಘ ಪರಿವಾರದ ಒಳ ಒಡನಾಟವಿರುವ ಯಡ್ಯೂರಪ್ಪನವರಿಗೆ ಚೆನ್ನಾಗಿ ಮನದಟ್ಟಾಗಿಹೋಗಿದೆ. ಈಗಾಗಲೇ ಜನಪ್ರಿಯತೆ ಕಳೆದುಕೊಂಡಿರುವ ಮೋದಿ 2014ರಲ್ಲಿ ಕೇವಲ ತನ್ನ ನಾಮಬಲದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ದಡ ಹತ್ತಿಸುವ ಸಾಮಥ್ರ್ಯ ಉಳಿಸಿಕೊಂಡಿಲ್ಲ. ಅದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ ಅಸೆಂಬ್ಲಿ ಚುನಾವಣೆಯಲ್ಲಿ ಸಾಬೀತಾಗಿದೆ. ದೇಶದಲ್ಲಿ ಬಿಜೆಪಿ ವಿರುದ್ಧ ರಾಜಕೀಯ ಲೆಕ್ಕಾಚಾರದ ಮೈತ್ರಿಗಳು ಏರ್ಪಡುತ್ತಿರೋದ್ರಿಂದ ಎನ್‍ಡಿಎ ಮತ್ತೆ ಅಧಿಕಾರಕ್ಕೇರುವುದು ಸಾಧ್ಯವಾ? ಎಂಬ ಪ್ರಶ್ನೆ ಉದ್ಭವಿಸಲು ಶುರುವಾಗಿದೆ. ಹಾಗೊಮ್ಮೆ ಸೆಂಟ್ರಲ್‍ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದಿಟ್ಟುಕೊಳ್ಳಿ, ಆಗ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಯಡ್ಯೂರಪ್ಪನವರು ಶಾಶ್ವತವಾಗಿ ಎಳ್ಳುನೀರು ಬಿಡಬೇಕಾಗುತ್ತದೆ. ಯಾಕೆಂದರೆ ರಾಜ್ಯಪಾಲರ ಯಾವುದೇ ತೀರ್ಮಾನ ರಾಷ್ಟ್ರಪತಿಯಿಂದ ಅಂಗೀಕಾರಗೊಳ್ಳಬೇಕು. ರಾಷ್ಟ್ರಪತಿಯ ಅಂಗೀಕಾರಗಳೆಲ್ಲವೂ ಕೇಂದ್ರ ಸರ್ಕಾರದಿಂದ ಪ್ರಭಾವಿತವಾಗಿರುತ್ತವೆ. ಹಾಗಾಗಿ ಬಿಜೆಪಿಯೇತರ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ರಾಜ್ಯಪಾಲರ ಮೂಲಕ ಬಿಜೆಪಿಯೇತರ ಸರ್ಕಾರವನ್ನು ಕೆಡವುವುದು ಗಾಳಿಯನ್ನು ಗುದ್ದಿ ಮೈನೋಯಿಸಿಕೊಂಡಂತೆ.

ಹಾಗೊಮ್ಮೆ, ಎನ್‍ಡಿಎ ಮೈತ್ರಿಕೂಟವೇ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರಿತು ಅಂತಿಟ್ಟುಕೊಂಡರೂ ಯಡ್ಯೂರಪ್ಪನವರಿಗೆ ಯಾವ ಲಾಭವೂ ಆಗದು. ಯಾಕೆಂದರೆ, ಈಗಾಗಲೇ ಖುದ್ದು ಆರೆಸೆಸ್ ಸಂಘ ಪರಿವಾರವೇ ಮೋದಿಗೆ ಪರ್ಯಾಯವಾಗಿ ನಿತಿನ್ ಗಡ್ಕರಿಯನ್ನು ಬೆಳೆಸುತ್ತಿರುವುದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ಮೋದಿ-ಶಾ ಜೋಡಿ ಇಡೀ ಬಿಜೆಪಿಯನ್ನೇ ಹೈಜಾಕ್ ಮಾಡಿಕೊಂಡು ಆರೆಸೆಸ್‍ಗೂ ಕ್ಯಾರೇ ಅನ್ನದೆ ವರ್ತಿಸುತ್ತಿರೋದು ಪರಿವಾರಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಜೊತೆಗೆ ಮೋದಿಯ ಅಹಮ್ಮಿನ ವರ್ತನೆಯಿಂದ ದೂರ ಸರಿದಿರುವ ಎನ್‍ಡಿಎ ಮೈತ್ರಿಕೂಟ ಮಾಜಿ ಸ್ನೇಹಿತರು ಮೋದಿಯೇ ಪ್ರಧಾನಿಯಾಗುತ್ತಾರೆಂದರೆ ಮತ್ತೆ ಬೆಂಬಲ ಸೂಚಿಸಲಾರವು. ಹಂಗ್ ಪಾರ್ಲಿಮೆಂಟ್ ನಿರ್ಮಾಣವಾದರೆ ಮಿತ್ರಪಕ್ಷಗಳನ್ನು ಸೆಳೆಯುವಂಥಾ ಸರ್ವಸ್ನೇಹಿ ಮುಖವೇ ಬೇಕಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ನಿತಿನ್ ಗಡ್ಕರಿಯನ್ನು ಅಖಾಡಕ್ಕೆ ತರಲಾಗುತ್ತಿದೆ. ಮೋದಿ-ಶಾ ವಿರುದ್ಧವೇ ನಿತಿನ್ ಗಡ್ಕರಿ ದನಿ ಬಿಚ್ಚುತ್ತಿರೋದು ಇದೇ ಕಾರಣಕ್ಕೆ.

ಯಡ್ಯೂರಪ್ಪನವರಿಗೆ ಬಲವಿರುವುದೇ ಮೋದಿ ಸಾಂಗತ್ಯದಲ್ಲಿ. ನಿತಿನ್ ಗಡ್ಕರಿ ಹೇಳಿಕೇಳಿ ಅಡ್ವಾಣಿ ಕ್ಯಾಂಪಿನ ಬಂಟ. ಸಂಘದ ಗೇಮ್‍ಪ್ಲ್ಯಾನ್‍ನಿಂದ ಮೋದಿ ಮೂಲೆಗುಂಪಾಗಿ ಅಡ್ವಾಣಿ ಕ್ಯಾಂಪು ಮುಂಚೂಣಿಗೆ ಬಂದರೆ ಯಡ್ಯೂರಪ್ಪನವರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಹಾರಿಕೊಂಡಂತೆ. ಅಡ್ವಾಣಿಯವರಿಗೆ ಮೊದಲಿನಿಂದಲೂ ಭ್ರಷ್ಟ ಇಮೇಜಿನ ಯಡ್ಯೂರಪ್ಪನೆಂದರೆ ಅಷ್ಟಕ್ಕಷ್ಟೆ. ಆಗಲೂ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಆಪರೇಷನ್ ಕಮಲ ಮಾಡುತ್ತೇನೆ ಅಂತ ಮುಂದಾದರೆ ಹೇಳಿಕೊಳ್ಳುವಂಥಾ ಬೆಂಬಲ ಹೈಕಮ್ಯಾಂಡ್‍ನಿಂದ ಲಭಿಸುವುದಿಲ್ಲ. ಎಂಪಿ ಎಲೆಕ್ಷನ್ ಮುಗಿದು ರಿಸಲ್ಟ್ ಬರುವ ವೇಳೆಗೆ ತಾನು ಯಾವುದಾದರು ಅಧಿಕಾರಸ್ಥ ಹುದ್ದೆಯಲ್ಲಿದ್ದರೆ ಮಾತ್ರ ಮುಂದೆ ತನಗೆ ರಾಜಕೀಯ ಭವಿಷ್ಯವಿರುತ್ತದೆಯೇ ವಿನಾಃ, ಇಲ್ಲವಾದರೆ ಇಲ್ಲಿಗೆ ತನ್ನ ರಾಜಕಾರಣ ಅಂತ್ಯಗೊಂಡಂತೆ ಎಂಬ ಆತಂಕವೇ ಅವರನ್ನು ಇಷ್ಟು ಆಕ್ಟೀವ್ ಮಾಡಿದೆ. ಥೇಟು, ಆರುವ ದೀಪ ಜೋರಾಗಿ ಉರಿಯುವಂತೆ…..!

ಹೈಕಮಾಂಡ್‍ಗೇ ಇಷ್ಟವಿಲ್ಲದ ಆಪರೇಷನ್!

ಯಡ್ಯೂರಪ್ಪನವರು ಮಾಡಹೊರಟಿರುವ ಈ ಆಪರೇಷನ್ ಬಗ್ಗೆ ದಿಲ್ಲಿ ನಾಯಕರಿಗೇ ಇಷ್ಟವಿಲ್ಲ ಅನ್ನೋದು ಲೇಟೆಸ್ಟ್ ಸುದ್ದಿ. ಯಡಿಯೂರಪ್ಪ ಕುರ್ಚಿಗಾಗಿ ಹಿಡಿದಿರುವ ದಾರಿ ಮೋದಿ-ಶಾಗಳಿಗೆ ನುಂಗಲಾರದ ತುತ್ತಾಗಿದೆ.

ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಎಲ್ಲ ತಂತ್ರ-ಮಂತ್ರ ಬಳಸಿದ ನಂತರವೂ ಸೋತ ಮೇಲೆ ಮೋದಿ-ಶಾ ಜೋಡಿಗೆ ಪರಿಸ್ಥಿತಿಯ ಅರಿವಾದಂತಿದೆ. ಅಲ್ಲದೇ ಆರೆಸೆಸ್ ಅಂಗಳದಲ್ಲೇ ತಮಗೆ ಪರ್ಯಾಯ ರೂಪಿಸುತ್ತಿರೋದು ಅವರನ್ನು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಈಗೇನಿದ್ದರು ಅವರಿಗೆ ಎಂಪಿ ಎಲೆಕ್ಷನ್‍ನಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಗೆಲ್ಲಿಸಿಕೊಳ್ಳುವ ಅವಕಾಶವೊಂದೇ ಉಳಿದಿರೋದು. ಅಂತದ್ದರಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಈ ಆಪರೇಷನ್‍ಗೆ ಹೇಗೆ ತಾನೆ ಒಪ್ಪಿಯಾರು? ಅದಕ್ಕೇ ಮೊನ್ನೆ ಭಾನುವಾರ ಆಪರೇಷನ್ ಕಮಲಕ್ಕೆ ಅನುಮತಿ ಪಡೆಯಲು ಜಗದೀಶ್ ಶೆಟ್ಟರ್, ಈಶ್ವರಪ್ಪ, ಅನಂತ್‍ಕುಮಾರ್ ಹೆಗಡೆ, ಜೋಶಿ ಮೊದಲಾದವರ ತಂಡ ಕರೆದುಕೊಂಡು ದಿಲ್ಲಿಯ ಜನಪಥ್ ರಸ್ತೆಯ ಆಫೀಸಿನಲ್ಲಿ ಅಮಿತ್ ಶಾ ಜೊತೆಗೆ ಯಡ್ಯೂರಪ್ಪನವರು ಸಭೆ ನಿಗಡಿ ಮಾಡಿದ್ದರು. ಬೆಳಿಗ್ಗೆ ಬರುತ್ತೇನೆಂದಿದ್ದ ಶಾ, ಮಧ್ಯಾಹ್ನವಾದರು ಬರಲಿಲ್ಲ. ಕೊನೆಗೆ ಸಂಜೆ ನಾಲ್ಕಕ್ಕೆ ಬರುತ್ತೇನೆ ಎಂದವರು ಆಗಲೂ ಬರದೆ, ಇವತ್ತು ಬರಲು ಸಾಧ್ಯವಿಲ್ಲ, ಬೇಕಾದರೆ ನಾಳೆ ಸಿಗೋಣ ಅನ್ನೋ ಅಸ್ಪಷ್ಟ ನೆಪ ಹೇಳಿ ಸಾಗಹಾಕಿದ್ದರು. ಅಮಿತ್ ಶಾ ಇಂಥಾ ಗಂಭೀರ ವಿಷಯದ ಬಗ್ಗೆ ಇಷ್ಟು ಉದಾಸೀನವಾಗಿ ವರ್ತಿಸುತ್ತಾರೆಂದರೆ ಏನರ್ಥ? ಹಾಗಂತ ಪ್ರಬಲ ಜಾತಿಯ ಯಡ್ಯೂರಪ್ಪನವರನ್ನೂ ಎದುರು ಹಾಕಿಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಎಂಪಿ ಎಲೆಕ್ಷನ್ ಹತ್ತಿರದಲ್ಲೇ ಇದೆ. ಹಾಗಾಗಿ ಅಡ್ಡಗೋಡೆ ದೀಪ ಇಟ್ಟಂತೆ ಪ್ರಯತ್ನ ನಿಮ್ಮದು, ಅಪವಾದವೂ ನಿಮ್ಮದೇ ಅನ್ನೋ ಕಂಡೀಷನ್ ಮೇಲೆ ತಲೆಯಾಡಿಸಿದ್ದಾರೆ. ಹೇಗಿದ್ದರೂ ಸಕ್ಸಸ್ ಆದ್ರೆ ಅದು ಮೋದಿ-ಶಾ ರಣತಂತ್ರ, ಫೇಲ್ ಆದ್ರೆ ಅದು ಯಡ್ಯೂರಪ್ಪನವರ ಸೋಲು ಅಂತ ಬಿಂಬಿಸಲು ಮೀಡಿಯಾಗಳು ಮೋದಿ-ಶಾ ಜೋಡಿಯ ಬೆನ್ನಿಗಿವೆಯಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...