Homeಚಳವಳಿಗೌರಿ ಲಂಕೇಶ್ ಇದನ್ನೆಲ್ಲಾ ನೋಡಬೇಕಿತ್ತೇ - ಆನಂದ್ ತೇಲ್ತುಂಬ್ಡೆ

ಗೌರಿ ಲಂಕೇಶ್ ಇದನ್ನೆಲ್ಲಾ ನೋಡಬೇಕಿತ್ತೇ – ಆನಂದ್ ತೇಲ್ತುಂಬ್ಡೆ

- Advertisement -
- Advertisement -

ಮಹಾರಾಷ್ಟ್ರದ ರಾಜೂರಿನ ಬಡ ದಲಿತ ರೈತ ಕುಟುಂಬದಿಂದ ಬಂದ ಆನಂದ್ ತೇಲ್ತುಂಬ್ಡೆಯವರು ಇಂದು ಭಾರತದ ಅತಿಮುಖ್ಯ ಸಾರ್ವಜನಿಕ ವ್ಯಕ್ತಿಗಳಲ್ಲೊಬ್ಬರು ಮತ್ತು ಪ್ರಖರ ಚಿಂತಕರು. ಅಹಮದಾಬಾದಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಿಂದ ಎಂಬಿಎ, ಪಿಎಚ್‍ಡಿ ಪಡೆದು, ಭಾರತ್ ಪೆಟ್ರೋಲಿಯಂನ ಉನ್ನತ ಮಟ್ಟದ ಅಧಿಕಾರಿಯಾಗಿದ್ದರು. ಚಳವಳಿಗಳಿಗೆ ಪೂರಕವಾಗಿ ತೀಕ್ಷ್ಣವಾದ ಬರವಣಿಗೆಯನ್ನೂ ಮಾಡುತ್ತಾ ಬಂದ ತೇಲ್ತುಂಬ್ಡೆಯವರು, ಅಂಬೇಡ್ಕರ್ ಮತ್ತು ಮಾಕ್ರ್ಸ್‍ರನ್ನು ಗಾಢವಾಗಿ ಓದಿಕೊಂಡಿರುವ ಸ್ವತಂತ್ರ ಚಿಂತಕರು. ಇವರ ಪತ್ನಿ ರಮಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು. ಈ ಲೇಖನವನ್ನು ಪ್ರೊ. ಮಾಧವಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಗೌರಿ ಹೋಗಿದ್ದು ಒಳ್ಳೆಯದ್ದೇ ಆಯಿತು. ಗೌರಿಯಂತಹ ಆತ್ಮೀಯ ಸ್ನೇಹಿತೆಯನ್ನು ನೆನೆದು ಹೀಗೆ ಹೇಳುವುದು ಅತ್ಯಂತ ನೋವಿನ ಸಂಗತಿ. ಗೌರಿಯನ್ನು ನಾನು ನನ್ನ ಒಡನಾಡಿಗಳಾದ ಆಕ್ಟಿವಿಸ್ಟ್ ಗಳನ್ನು ತಿಳಿದಷ್ಟೇ ಆತ್ಮೀಯವಾಗಿ ಬಲ್ಲೆ. ಆಕೆ ಉತ್ಕಟಿ, ನಿರ್ಭೀತ, ಅವೇಶಪರ ಬಂಡುಕೋರಳಾಗಿದ್ದಳು. ಅಂತೆಯೇ ಮೃದು ಹೃದಯಿ ಹಾಗೂ ಪ್ರೀತಿಯ ಹೆಣ್ಣು ಮಗಳಾಗಿದ್ದಳು. ಉಳಿದ ಯಾವುದೇ ಆಕ್ಟಿವಿಸ್ಟ್‍ಗಳನ್ನು ಭೇಟಿ ಮಾಡಿದಂತೆಯೇ ನಾನು ಆಕೆಯನ್ನು ಒಂದರ್ಧ ಡಜನ್‍ಗಿಂತಲೂ ಕಡಿಮೆ ಸಲ ಭೇಟಿಯಾಗಿರಬಹುದು. ಆದರೆ ಅಷ್ಟರಲ್ಲೇ ಅತ್ಯಂತ ನಿಕಟವರ್ತಿಯೆನಿಸಿದ್ದ ಆಕೆ ಹಂತಕರ ಗುಂಡಿಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ನನ್ನೊಳಗಿನ ಒಂದು ಭಾಗ ಕುಸಿದು ಬಿದ್ದಂತೆ ಭಾಸವಾಯಿತು.

ಕರ್ನಾಟಕ ಸರ್ಕಾರವು ಜುಲೈ 2017ರಲ್ಲಿ ಅಂಬೇಡ್ಕರ್ ಅವರ ಬಗೆಗೆ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ನಾವು ಕೊನೆಯ ಬಾರಿ ಭೇಟಿಯಾಗಿದ್ದೆವು. ಅಂದು ನಾವು ಒಟ್ಟಿಗೆ ಊಟ ಮಾಡಿದ್ದೆವು. ಮಹಡ್ ಬಗ್ಗೆ ನಾನು ಬರೆದ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸುವ ಇಚ್ಛೆಯನ್ನು ಆಕೆ ಪುನರುಚ್ಚರಿಸಿದ್ದಳು ಮತ್ತು ಅದನ್ನು ಅನುವಾದಿಸಲು ನನ್ನ ಸ್ನೇಹಿತರು ಸಹಕರಿಸಲಿಲ್ಲವೆಂದೂ ದೂರಿದ್ದಳು. ಆಕೆಯ ಇಚ್ಛೆಗನುಗುಣವಾಗಿ ನ್ಯಾಯಪಥ ಪ್ರಕಾಶನ ಇದನ್ನು ಪ್ರಕಟಿಸಿದರೆ ನನಗೆ ಸಂತಸವಾಗುತ್ತದೆ. ಆಕೆಯ ಆನೇಕ ಆಶಯಗಳನ್ನು ಈಡೇರಿಸುವ ಸಾಧ್ಯತೆಯು ವೇಗವಾಗಿ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರಯಶಃ ಇಂಥವುಗಳನ್ನಷ್ಟೇ ನಮಗೆ ಮಾಡಲು ಸಾಧ್ಯ. ಭಾರತವು ಜಾತ್ಯತೀತವಾದುದು ಎನ್ನಬಹುದೇ? ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ದೊರೆಯುವುದೆಂದು ನಿರೀಕ್ಷಿಸಬಹುದೇ? ನಮ್ಮ ಜನರ ಮನಸ್ಸುಗಳಿಂದ ಕೋಮುವಾದದ ವಿಷವನ್ನು ಹೊರಹಾಕಲಾಗುವುದೇ? ಗೌರಿ ಆಶಿಸಿದ ಇಂತಹ ಅನೇಕ ಸಂಗತಿಗಳು ಇಂದು ನಾವು ತಲುಪಲಾಗದಷ್ಟು ದೂರ ಸರಿಯುತ್ತಿವೆ.

ಗೌರಿ ಇದ್ದಿದ್ದರೆ ಹಾರರ್ ಸಿನಿಮಾಗಳಲ್ಲಿ ಕ್ಷಿಪ್ರವಾಗಿ ಚಲಿಸುವ ಫ್ರೇಮುಗಳಂತೆ ನಮ್ಮ ಸುತ್ತಮುತ್ತ ಜರುಗುತ್ತಿರುವ ಸಂಗತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಳು ಎಂದು ಬೆರಗುಗೊಳ್ಳುತ್ತೇನೆ. ನಮಗೆ ಗ್ರಹಿಸಲೂ ಸಾಧ್ಯವಾಗದಷ್ಟು ವೇಗವಾಗಿ ನಮ್ಮ ಕೆಟ್ಟ ದುಃಸ್ವಪ್ನಗಳು ಒಂದಾದ ಮೇಲೊಂದರಂತೆ ನಮ್ಮ ಕಣ್ಣಮುಂದೆ ಜೀವ ತಳೆಯುವಂತೆ ತೋರುತ್ತಿದೆ. ಮಾಧ್ಯಮಗಳು ಅಧಿಕಾರಸ್ಥರ ಪಾದಗಳಿಗೆರಗಿರುವುದನ್ನು ಕಂಡು ಆಕೆಗೇನೆನ್ನಿಸುತ್ತಿತ್ತು? ಮೂಢರಾಗಿರುವ ಜನರನ್ನು ಅಥವಾ ತಾವೇ ದುಃಸ್ವಪ್ನಗಳಲ್ಲಿ ಭಾಗಿಗಳಾಗಿರುವವರನ್ನು ಕಂಡು ಆಕೆ ಏನೆಂದುಕೊಳ್ಳುತ್ತಿದ್ದಳು. ತಮ್ಮ ಬದುಕಿನ ಬಹುಭಾಗ ಜನರನ್ನು ಪ್ರೀತಿಸುವುದು ಹೇಗೆಂದು ಕಲಿಸಿದವರಿಗೆ ಅಸಹಾಯಕ ಮನುಷ್ಯರನ್ನು ಕ್ರೂರ ಮೃಗಗಳಂತೆ ಗುಂಪಾಗಿ ಹತ್ಯೆಗೈಯುವುದನ್ನು ನೋಡಿ ಏನೆನ್ನಿಸಬಹುದು? ಹೀಗೆ ಕೊಲ್ಲುವುದು, ಅತ್ಯಾಚಾರವೆಸಗುವುದು ಮತ್ತು ವ್ಯಭಿಚಾರಿಗಳೆಂದು ಅಪಖ್ಯಾತಿಗೊಳಿಸುವುದನ್ನು ಕಂಡು ಸಂಭ್ರಮಿಸುವವರನ್ನು ನೋಡಿ ಆಕೆಗೆ ಏನೆನ್ನಿಸುತ್ತಿತ್ತು? ನಮ್ಮನ್ನು ಕಾಯುವ ಸಂಸ್ಥೆಗಳು ಅಪರಾಧಿಗಳೊಂದಿಗೆ ಕೈ ಜೋಡಿಸಿದಾಗ ಕಾಡುವ ಅಸಹಾಯಕತೆ ಮತ್ತು ಅಸುರಕ್ಷತೆಯಿಂದ ಅನುಭವಿಸುವ ತಲ್ಲಣವೆಂತಹುದು?

23 ವರ್ಷದ ವಿದ್ಯಾರ್ಥಿನಿಯೊಬ್ಬಳು, ತನ್ನ ಕಾಲೇಜಿನ ಅಧ್ಯಕ್ಷನೂ, ಸಂಸತ್ ಸದಸ್ಯನೂ ಹಾಗೂ ಕೇಂದ್ರದ ಮಂತ್ರಿಯೂ ಆಗಿದ್ದು ಪ್ರಸಕ್ತ ಮುಖ್ಯಮಂತ್ರಿಯ ನಿಕಟವರ್ತಿಯೂ ಆಗಿರುವ ಅತ್ಯಾಚಾರಿಯೊಬ್ಬನ ಹಿಡಿತದಿಂದ ಬಿಡಿಸಿಕೊಂಡು ಓಡುತ್ತಾ, ಈ ಶಕ್ತಿಶಾಲಿ ದುರುಳನ ವಿರುದ್ಧ ದನಿ ಎತ್ತುವ ಅಸಾಧಾರಣ ಧೈರ್ಯವನ್ನು ತೋರುತ್ತಾಳೆ. ಸಂತನ ಸೋಗಿನಲ್ಲಿರುವ ಈತ ಒಂದು ವರ್ಷಕ್ಕೂ ಹೆಚ್ಚು ಕಾಲ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಮತ್ತು ಆಕೆಯ ವಸತಿನಿಲಯದ ಇತರ ಹಲವು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗಿದ ಆಪಾದನೆಗೊಳಗಾಗಿದ್ದಾನೆ. ಆದರೂ ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ರಚಿತವಾಗಿರುವ ಎಸ್‍ಐಟಿ ಈ ವಿದ್ಯಾರ್ಥಿನಿಯನ್ನು ಸತತ 15 ಗಂಟೆಗಳ ಕಾಲ ಪ್ರಶ್ನಿಸುತ್ತದೆ. ಆಕೆಯ ವಾಸಸ್ಥಳವನ್ನು ಶೋಧಿಸುತ್ತದೆ ಆದರೆ ಈ ದುರುಳನ ವಿರುದ್ಧ ಎಫ್‍ಐಆರ್‍ಅನ್ನು ದಾಖಲಿಸುವುದಿಲ್ಲ. ಅಷ್ಟೇ ಅಲ್ಲ ಆತನನ್ನು ಪ್ರಶ್ನಿಸುವುದೂ ಇಲ್ಲ. ಆ ಪಾಪದ ಹುಡುಗಿಗೆ ಮಸಿಬಳಿಯುವುದರೊಂದಿಗೆ ಕೊನೆಗೊಳ್ಳಲಿರುವ ಈ ದಿಗಿಲುಗೊಳಿಸುವ ವೃತ್ತಾಂತ ದೇಶದಲ್ಲಿ ಯಾವುದೇ ರೀತಿಯ ಸದ್ದು ಮಾಡುವಲ್ಲಿ ಸೋಲುತ್ತದೆ.

ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಉನ್ನಾವೋದ 17 ವರ್ಷದ ಹುಡುಗಿಯೊಬ್ಬಳು ಆಡಳಿತ ಪಕ್ಷದ ಶಾಸಕನೊಬ್ಬನಿಂದ ಅತ್ಯಾಚಾರಕ್ಕೀಡಾಗಿ ಜೂನ್ 2017ರಿಂದ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಳೆ. ಈ ಹೋರಾಟದಲ್ಲಿ ಆಕೆ ನ್ಯಾಯಾಂಗ ಬಂಧನದಲ್ಲಿದ್ದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ, ತಾನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ಕೊಂದು ಗುದ್ದಿದ ಕಾರಣ ತನ್ನ ಮತ್ತಿಬ್ಬರು ಬಂಧುಗಳನ್ನು ಕಳೆದುಕೊಂಡಿದ್ದಾಳೆ. ಮುಂದೆ ತನಗಾಗಿರುವ ಹಾನಿಯನ್ನು ನೋಡಲು ಪ್ರಯಾಸದಿಂದ ಬದುಕುಳಿದಿದ್ದಾಳೆ. ಇಂತಹ ಕೊಲೆಗಳ ಹಿಂದಿರುವವರು ಯಾರು ಎಂಬುದು ದಾರಿಹೋಕನಿಗೂ ತಿಳಿಯುತ್ತದೆ. ಆದರೆ ಈ ದಿನಗಳಲ್ಲಿ ನಮ್ಮ ನ್ಯಾಯ ದಾನ ಮಾಡುವ ವ್ಯವಸ್ಥೆಗೆ ಅದು ಕಾಣುವುದಿಲ್ಲ. ಅಧಿಕಾರಸ್ಥರು ನೋಡಲು ಸೂಚಿಸಿದ್ದನ್ನೇ ಅದು ನೋಡುತ್ತಿರುವಂತೆ ಕಾಣುತ್ತದೆ.

ಇದೇ ವರ್ಷ ಜೂನ್‍ನಲ್ಲಿ ನಿರ್ದಯವಾಗಿ ಹೊಡೆದು ಕೊಲ್ಲಲಾದ 24 ವರ್ಷದ ಮುಸ್ಲಿಂ ಯುವಕ ತಬ್ರೇಜ್ ಅನ್ಸಾರಿಯ ಪ್ರಕರಣ ನಡೆಯಿತು. ತನ್ನ ಆತ್ಮವನ್ನು ಸಂಪೂರ್ಣವಾಗಿ ಮಾರಿಕೊಂಡ ಮಾಧ್ಯಮಗಳ ಪ್ರಭಾವದಲ್ಲಿರುವ ನಮ್ಮ ನೆನಪಿನ ಗಡಿಯಾರಗಳಿಗೆ ಅದಾಗಿ ಈಗಾಗಲೇ ದಶಕಗಳಾಗಿವೆ ಎಂಬಂತೆ ತೋರುತ್ತದೆ. ದೂರದರ್ಶನದಲ್ಲಿ ಸಾರ್ವಜನಿಕವಾಗಿ ಬಿತ್ತರಗೊಂಡ ಚಿತ್ರದಲ್ಲಿ ತೋರಿದಂತೆ ಆತ ತನ್ನ ಮೇಲೆ ದೌರ್ಜನ್ಯವೆಸಗುತ್ತಿರುವವರ ಆದೇಶದಂತೆ ಅಸಹಾಯಕವಾಗಿ ಜೈ ಶ್ರೀರಾಮ್ ಎಂದು ಕೂಗುತ್ತಾ ನಿರ್ದಯವಾಗಿ ಥಳಿಸಲ್ಪಟ್ಟ. ಆತನ ಮರಣೋತ್ತರ ವರದಿಯಲ್ಲಿ ಹೇಳಿದಂತೆ ಆತ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಮೃತಪಟ್ಟ. ಅದೇ ವರದಿಯು ಅಮಾನುಷ ಹೊಡೆತಗಳಿಂದ ಆತನಿಗಾದ ಗಾಯಗಳು ಹೃದಯಸ್ತಂಭನಕ್ಕೆ ಕಾರಣವೆಂದೂ ಹೇಳಿತು. ಆದರೆ ಈ ಕೃತ್ಯಕ್ಕೆ ಕಾರಣರು ಎನ್ನಲಾದ 11 ಆರೋಪಿಗಳ ಮೇಲೆ ಹಾಕಿದ್ದ ಕೊಲೆ ಕೇಸನ್ನು ಕೈಬಿಡಲು ಪೊಲೀಸರಿಗೆ ಕಂಡಿದ್ದು ‘ಹೃದಯಸ್ತಂಭನ’ ಎಂಬ ಪದ ಮಾತ್ರ. ಹೀಗೆ ಘೋರವಾದ ರೀತಿಯಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಮುಗ್ಧ ಹೆಣ್ಣುಮಗಳು ಎಂದಿಗೂ ದೊರೆಯದಿರಬಹುದಾದ ನ್ಯಾಯಕ್ಕಾಗಿ ಆಗ್ರಹಿಸುತ್ತಾ ಶೂನ್ಯನೋಟ ಬೀರುತ್ತಾಳೆ.

ಸಂವಿಧಾನಿಕ ನೈತಿಕತೆಯ ನೇರ ಉಲ್ಲಂಘನೆಯಾದ ಕಾಶ್ಮೀರದ ಬಗ್ಗೆಯಾಗಲೀ ಅಥವಾ ತಮಗೇನಾಗುತ್ತಿದೆ ಎಂದು ಸದ್ದಿಲ್ಲದೇ ನಿಬ್ಬೆರಗಾಗಿರುವ ಕಾಶ್ಮೀರಿಗಳ ಬಗ್ಗೆಯಾಗಲೀ ಮತ್ತು ಸನ್ಮಾನ್ಯ ಗೃಹಮಂತ್ರಿಗಳು ನೀಡಿರುವ ಭರವಸೆಯಂತೆ ಅನಾವರಣಗೊಂಡಲ್ಲಿ ಆಧುನಿಕ ಇತಿಹಾಸದ ಅತಿದೊಡ್ಡ ದುರಂತವಾಗಿಬಿಡಬಹುದಾದ ಎನ್‍ಆರ್‍ಸಿ ಬಗ್ಗೆಯಾಗಲೀ ನಾವು ಮಾತಾಡುವಂತೆಯೇ ಇಲ್ಲ. ಪ್ರತಿದಿನ ನಮ್ಮ ಅಧಿಕಾರ ಮತ್ತು ಆಳರಸರು ಎಸಗುತ್ತಿರುವ ಇಂತಹ ಅನೇಕ ದುಷ್ಕೃತ್ಯಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿವೆ. ಇವು ಅವರ ಭಕ್ತಗಣಕ್ಕೆ ಧೈರ್ಯ ತುಂಬುತ್ತಿವೆ.

ಅಂದು ಗೌರಿ ನಮ್ಮನ್ನು ಅಗಲದಿದ್ದರೂ, ಬಹುಶಃ ಸದಾ ವಿಸ್ತರಿಸುತ್ತಲೇ ಇರುವ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆಕೆಯನ್ನೂ ಸಿಕ್ಕಿಹಾಕಿಸುತ್ತಿದ್ದರು ಎನಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...