Homeಚಳವಳಿವೈಕೋಂ ಸತ್ಯಾಗ್ರಹಕ್ಕೆ ನೂರು ವರ್ಷ

ವೈಕೋಂ ಸತ್ಯಾಗ್ರಹಕ್ಕೆ ನೂರು ವರ್ಷ

- Advertisement -
- Advertisement -

ಅಸ್ಪೃಶ್ಯತೆಯನ್ನು ವಿರೋಧಿಸಿ ಮಾನವೀಯತೆಯನ್ನು ನೆಲೆಗೊಳಿಸಲು ತಂದೈ ಪೆರಿಯಾರ್ ಕೇರಳದಲ್ಲಿ ಹೊತ್ತಿಸಿದ ಐತಿಹಾಸಿಕ “ವೈಕೋಂ” ಸತ್ಯಾಗ್ರಹಕ್ಕೆ ಮಾರ್ಚ್-ಏಪ್ರಿಲ್ 2023ಕ್ಕೆ ಶತಮಾನದ ಸಂಭ್ರಮ. ಮೇಲ್ಜಾತಿಯ ಜನರ ಕ್ರೌರ್ಯದಿಂದ ದಲಿತರಿಗೆ ಬಿಡುಗಡೆಯ ಮುನ್ನುಡಿ ಬರೆದ ಈ ಹೋರಾಟಕ್ಕೆ ಭಾರತದ ಇತಿಹಾಸದಲ್ಲಿ ಬಲು ಎತ್ತರದ ಸ್ಥಾನವಿದೆ. 1927ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಮತ್ತೊಂದು ಐತಿಹಾಸಿಕ “ಮಹಾಡ್ ಕೆರೆ ಸತ್ಯಾಗ್ರಹ” ಹೋರಾಟಕ್ಕೆ 1924ರಲ್ಲೇ ವೈಕೋಂನಲ್ಲಿ ಪೆರಿಯಾರ್ ಮುನ್ನುಡಿ ಬರೆದಿದ್ದರು. ಇದೇ ಕಾರಣಕ್ಕಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರ ವೈಕೋಂ ಹೋರಾಟದ ಗೆಲುವಿನ ಸಂಭ್ರಮವನ್ನು ಸತತ ಒಂದು ವರ್ಷ ಆಚರಿಸಲು ನಿರ್ಧರಿಸಿದೆ.

ವೈಕೋಂ ಗೆಲುವಿಗೆ ಶತಮಾನ ಕಳೆದರೂ ಅಸ್ಪೃಶ್ಯತೆಯೇನೂ ಮಾಯವಾಗಿಲ್ಲ; ದಲಿತರ ಮೇಲಿನ ಹಲ್ಲೆ, ಮರ್ಯಾದ ಹತ್ಯೆ, ಅವಮಾನಗಳು ನಾಗರಿಕ ಸಮಾಜದಿಂದ ಇನ್ನೂ ಮರೆಯಾಗಿಲ್ಲ. ಜಾತಿ ಶ್ರೇಷ್ಠತೆಯ ವ್ಯಸನವಂತೂ ಈಗಲೂ ಭಾರತೀಯ ಸಮಾಜವನ್ನು ಬೆಂಬಿಡದೆ ಕಾಡುತ್ತಿದೆ. ಇಂತಹ ದಿನಮಾನದಲ್ಲಿ ಇಂದಿನ ತಲೆಮಾರು ವೈಕೋಂ ಚಳವಳಿಯ ಬಗ್ಗೆ ಮೆಲುಕು ಹಾಕುವ ಅವಶ್ಯಕತೆಯಿದೆ..

ವೈಕೋಂ ಚಳವಳಿಯ ಇತಿಹಾಸ

ಕೊಪ್ಪಳದಲ್ಲಿ ದಲಿತ ಬಾಲಕನೊಬ್ಬ ದೇವಾಲಯ ಪ್ರವೇಶಿಸಿದ್ದಕ್ಕೆ ಸವರ್ಣೀಯರಿಂದ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ; ಕೋಲಾರದ ಹಳ್ಳಿಯೊಂದರಲ್ಲಿ ಸವರ್ಣೀಯ ವ್ಯಕ್ತಿಯ ಬೈಕ್ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ, ನಂತರ ಆತ್ಮಹತ್ಯೆ; ತುಮಕೂರಿನ ಗ್ರಾಮವೊಂದರಲ್ಲಿ ಬೈಕ್ ಕದ್ದರೆಂಬ ಸುಳ್ಳು ಆರೋಪಕರಿಬ್ಬರು ದಲಿತ ಯುವಕರ ದಾರುಣ ಹತ್ಯೆ- ಇಂತಹ ಅಮಾನವೀಯ ಘಟನೆಗಳು ದಿನದಿನಕ್ಕೂ ನಡೆಯುತ್ತಲೇ ಇವೆ. ಇಷ್ಟೇ ಏಕೆ ದಲಿತ ರಾಷ್ಟ್ರಪತಿ ದೇವಾಲಯಕ್ಕೆ ಬಂದುಹೋದ ಕಾರಣಕ್ಕೆ ಇಡೀ ದೇವಾಲಯಕ್ಕೆ ಗೋಮೂತ್ರ ಸಿಂಪಡಿಸಿ ಶುದ್ಧಿಕಾರ್ಯ ನಡೆಸಿರುವ ಎಷ್ಟೋ ಸುದ್ದಿಗಳನ್ನು ಓದಿರುತ್ತೇವೆ. ಇನ್ನೂ ಖೈರ್ಲಾಂಜಿ, ಕಂಬಾಲಪಲ್ಲಿಯಂತಹ ಅಸಂಖ್ಯಾತ ದಲಿತ ಹತ್ಯಾಕಾಂಡವನ್ನು ಈ ’ಮರೆಗುಳಿ’ ದೇಶವೂ ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವಿಲ್ಲ.

ಸ್ವಾತಂತ್ರ್ಯ ಗಳಿಸಿ, ಸಂವಿಧಾನ ರಚಸಿಕೊಂಡು, ಯಶಸ್ವಿ ಚಂದ್ರಯಾನ ನಡೆಸಿ, 75ನೇ ಅಮೃತ ಮಹೋತ್ಸವ ಆಚರಿಸಿರುವ ಭಾರತದಂತಹ ರಾಷ್ಟ್ರದಲ್ಲಿ 21ನೇ ಶತಮಾನದಲ್ಲೂ ದಲಿತರ ಗೌರವಯುತ ಬದುಕಿನ ಹಕ್ಕಿಗೆ ಇಷ್ಟೆಲ್ಲಾ ಅಡೆತಡೆಗಳಿವೆ ಎಂದರೆ, ಇನ್ನೂ ಸವರ್ಣೀಯರ ಶಕ್ತಿಯೇ ಮೇಲಾಟವಾಗಿದ್ದ ಶತಮಾನದ ಹಿಂದಿನ ಭಾರತದ ಸ್ಥಿತಿಯನ್ನೂ ಊಹಿಸುವುದೂ ಅಸಾಧ್ಯ. ಅಂತಹದ್ದೊಂದು ಕಾರಣಕ್ಕಾಗಿ ಹೋರಾಟದ ಕಣವಾಗಿ ಕೊನೆಗೆ ಇತಿಹಾಸ ಎಂದೂ ಮರೆಯದ ಅಧ್ಯಾಯವಾಗಿ ಉಳಿದುಹೋದ ಪ್ರದೇಶವೇ ಕೇರಳದ ವೈಕೋಂ.

ತ್ರಿವಾಂಕೂರಿನ ನಂಬೂದರಿ ರಾಜ ಮನೆತನ ಬ್ರಿಟಿಷರ ಎದುರು ಮಂಡಿಯೂರಿ ನಾಮಕಾವಸ್ಥೆಯ ತನ್ನ ರಾಜಾಧಿಕಾರವನ್ನಷ್ಟೇ ಉಳಿಸಿಕೊಂಡಿತ್ತು. ಆದರೆ, ಮಾನವೀಯತೆಯನ್ನು ಅಕ್ಷರಶಃ ಕಳೆದುಕೊಂಡಿತ್ತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಏಕೆಂದರೆ ದಲಿತರಿಗೆ ಊರಿನೊಳಕ್ಕೆ ಪ್ರವೇಶವೇ ಇರಲಿಲ್ಲ. ಊರಿನೊಳಕ್ಕೆ ಬಂದರೂ ವೈಕೋಂನ ಸೋಮನಾಥರ ದೇವಾಲಯದ ಸುತ್ತಲಿನ ಬೀದಿಗಳಲ್ಲಿ ನಡೆಯುವಂತಿರಲಿಲ್ಲ. ಇನ್ನೂ ದೇವಾಲಯ ಪ್ರವೇಶ ದೂರದ ಮಾತು.

ದಲಿತರು ಮೈಮೇಲೆ ಅಂಗಿ ಧರಿಸುವಂತಿಲ್ಲ, ಸವರ್ಣೀಯರ ಎದುರು ನಡೆಯುವಂತಿರಲಿಲ್ಲ. ಸವರ್ಣೀಯರ ಮತ್ತು ತ್ರಿವಾಂಕೂರು ಅರಮನೆಯಲ್ಲಿ ದಲಿತರು ಪುಕ್ಕಟೆ ಚಾಕರಿ ಮಾಡಬೇಕಿತ್ತು. ದಲಿತರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ. ಆದರೆ, ಕೇರಳದಲ್ಲಿ ಅಸ್ಪೃಶ್ಯತೆಯ ಜೊತೆಗೆ ದಲಿತರು ಯಾರ ಕಣ್ಣಿಗೂ ಕಾಣಿಸಿಕೊಳ್ಳದಿರಬೇಕಾದ ನಿರ್ಬಂಧದ ನೀಚ ಪದ್ಧತಿಯೂ ಆಚರಣೆಯಲ್ಲಿತ್ತು.

“ಕುದುರೈ ವನ್ನಾರ್” ಎಂಬ ನಿರ್ದಿಷ್ಟ ಜಾತಿಯ ಜನ ಯಾರ ಕಣ್ಣಿಗೂ ಕಾಣಿಸಿಕೊಳ್ಳಲು ಅನರ್ಹರು ಎಂದು ತ್ರಿವಾಂಕೂರು ಸಂಸ್ಥಾನ ಷರಾ ಬರೆದಿತ್ತು. ಅಕಸ್ಮಾತ್ ಈ ಸಮುದಾಯದ ಜನ ಬೆಳಗಿನ ಹೊತ್ತು ಯಾರ ಕಣ್ಣಿಗಾದರೂ ಕಂಡರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಉದಾಹರಣೆಗಳೂ ಇವೆ. ಹೀಗಾಗಿ ಈ ಸಮುದಾಯದ ಜನ ರಾತ್ರಿ ಹೊತ್ತಿನಲ್ಲಿ ಮಾತ್ರ ಮನೆಯಿಂದ ಹೊರಬರಬೇಕಿತ್ತು. ಇದೇ ಕಾರಣಕ್ಕೆ ಒಮ್ಮೆ ತ್ರಿವಾಂಕೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದ “ಕೇರಳ ಒಂದು ಹುಚ್ಚಾಶ್ರಮ, ಜಾತೀಯತೆಯ ಹುಚ್ಚು ಮನೆ” ಎಂದು ಜರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಟಿ.ಕೆ. ಮಾಧವನ್

ಆದರೆ, ಕೊನೆಗೂ 30 ಮಾರ್ಚ್ 1924ರಂದು ದಲಿತರ ಮೇಲಿನ ಈ ಶೋಷಣೆಯ ವಿರುದ್ಧ ಎದ್ದುನಿಲ್ಲಲು ಕೆಲವರು ನಿರ್ಧರಿಸಿದ್ದರು. ಕೇರಳ ಕಾಂಗ್ರೆಸ್ ನಾಯಕ ಹಾಗೂ ಈಳವ ಸಮುದಾಯದ ಟಿ.ಕೆ.ಮಾಧವನ್, ಕೆ.ಕೇಳಪ್ಪನ್ ಮತ್ತು ಕೆ.ಪಿ.ಕೇಶವ ಮೆನನ್ ನೇತೃತ್ವದ ತಂಡ ವಿವಿಧ ಸಮುದಾಯದ ಸಾವಿರಾರು ದಲಿತರನ್ನು ಒಟ್ಟುಗೂಡಿಸಿ ಸವರ್ಣೀಯರ ಕಟ್ಟುಪಾಡುಗಳನ್ನು ಧಿಕ್ಕರಿಸಿ ದೇವಾಲಯದೊಳಕ್ಕೆ ಪ್ರವೇಶಿಸಲು ಮುಂದಾಗುವ ಮೂಲಕ ಈ ಐತಿಹಾಸಿಕ ಹೋರಾಟಕ್ಕೆ ಅಂಕಿತ ಹಾಕಲಾಗಿತ್ತು. ಆದರೆ, ಈ ಹೋರಾಟದ ಪೂರ್ವ ತಯಾರಿ ಮಾತ್ರ ರೋಚಕವಾದದ್ದು.

ದಲಿತ ಕ್ರಾಂತಿಯ ಕಹಳೆ

ಟಿ.ಕೆ. ಮಾಧವನ್ ಅವರು ಡಿಸೆಂಬರ್, 1917ರಲ್ಲೇ “ದೇಶಾಭಿಮಾನಿ” ಪತ್ರಿಕೆಯ ಸಂಪಾದಕೀಯದಲ್ಲಿ ’ಶೋಷಿತ ಜಾತಿಯ ಜನ ದೇವಾಲಯ ಪ್ರವೇಶಿಸಬಾರದೇಕೆ?’ ಎಂಬ ಹಕ್ಕಿನ ಪ್ರಶ್ನೆಯನ್ನು ಮೊದಲ ಬಾರಿಗೆ ಎತ್ತಿದ್ದರು. ಕೇರಳದಲ್ಲಿ ಆ ಕಾಲದಲ್ಲಿಯೇ ಈ ಸಂಪಾದಕೀಯ ಸಾಕಷ್ಟು ಸದ್ದು ಮಾಡಿತ್ತು. 1917 ಮತ್ತು 1920ರ ನಡುವೆ ಎಸ್‌ಎನ್‌ಡಿಪಿ ಯೋಗಂ (S N D P Yogam) ಮತ್ತು ಟ್ರಾವಂಕೂರ್ ಅಸೆಂಬ್ಲಿ ಸಭೆಗಳಲ್ಲಿ ಶೋಷಿತ ಸಮುದಾಯದ ಜನಗಳ ದೇವಾಲಯ ಪ್ರವೇಶದ ಕುರಿತು ಹಲವು ಬಾರಿ ಚರ್ಚಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸುಮಾರು 5,000 ಜನರಿಂದ ಕೂಡಿದ ಈಳವರ ಸಭೆಯು ತ್ರಿವಾಂಕೂರು ಸಂಸ್ಥಾನದಿಂದ ನಿರ್ವಹಿಸಲ್ಪಡುವ ಎಲ್ಲ ಹಿಂದೂ ದೇವಾಲಯಗಳಿಗೆ ಪ್ರವೇಶಿಸುವ ಹಕ್ಕನ್ನು ಕೋರಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

ಸೆಪ್ಟೆಂಬರ್ 1921ರಲ್ಲಿ ತಿರುನೆಲ್ವೇಲಿಯಲ್ಲಿ ಮಹಾತ್ಮ ಗಾಂಧಿಯವರನ್ನು ಭೇಟಿಯಾಗಿದ್ದ ಟಿ ಕೆ ಮಾಧವನ್ ದಲಿತರಿಗೂ ದೇವಾಲಯ ಪ್ರವೇಶ ನೀಡುವ ಹೋರಾಟಕ್ಕೆ ಬೆಂಬಲ ಕೋರಿದ್ದರು. ಅಷ್ಟೇ ಅಲ್ಲದೆ 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ’ಅಸ್ಪೃಶ್ಯತೆ ನಿರ್ಮೂಲನೆ’ಗಾಗಿ ಕಾಂಗ್ರೆಸ್ ಕೆಲಸ ಮಾಡಲು ಬದ್ಧವಾಗಿರುವ ನಿರ್ಣಯವನ್ನು ಅಂಗೀಕರಿಸಲಾಯಿತು. ಟಿ ಕೆ ಮಾಧವನ್ ಪರಿಚಯಿಸಿದ ಈ ನಿರ್ಣಯ “ದೇವಾಲಯ ಪ್ರವೇಶವು ಎಲ್ಲಾ ಹಿಂದೂಗಳ ಜನ್ಮಸಿದ್ಧ ಹಕ್ಕು” ಎಂಬುದನ್ನು ಒತ್ತಿಹೇಳಿತ್ತು.

ಕೆ. ಕೇಳಪ್ಪನ್

ಜನವರಿ 1924ರಲ್ಲಿ, ಕಾಂಗ್ರೆಸ್ ಮುಖಂಡ ಕೆ. ಕೇಳಪ್ಪನ್ ಅವರು ಕೇರಳ ಕಾಂಗ್ರೆಸ್‌ನಲ್ಲಿ “ಅಸ್ಪೃಶ್ಯತೆ ವಿರೋಧಿ ಸಮಿತಿ”ಯ ಸಭೆಯನ್ನು ಕರೆದರು. ಅಲ್ಲದೆ, ಮಾಧವನ್ ಮತ್ತು ಕೇಳಪ್ಪನ್ ಮಲಬಾರ್ ಜಿಲ್ಲೆಯ ಕಾಂಗ್ರೆಸ್ ನಾಯಕರ ತಂಡದೊಂದಿಗೆ ದಕ್ಷಿಣ ಕೇರಳದ ಪ್ರವಾಸ ಮಾಡುವ ಮೂಲಕ ಸತ್ಯಾಗ್ರಹಕ್ಕೆ ಅಗತ್ಯ ಹಣಕಾಸನ್ನು ಸಂಗ್ರಹಿಸಲಾಯಿತು.

ಪೆರಿಯಾರ್ ಪ್ರವೇಶದೊಂದಿಗೆ ಕಾವೇರಿದ ವೈಕೋಂ ಚಳವಳಿ

30 ಮಾರ್ಚ್ 1924 ರಂದು ಮಾಧವನ್ ನೇತೃತ್ವದ ತಂಡ ವೈಕೋಂ ದೇವಾಲಯ ಪ್ರವೇಶಕ್ಕೆ ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದರು. ತ್ರಿವಾಂಕೂರು ಸಂಸ್ಥಾನ ಈ ಹೋರಾಟವನ್ನು ಹತ್ತಿಕ್ಕಲು ಎಲ್ಲ ರೀತಿಯ ಕೆಲಸಕ್ಕೂ ಮುಂದಾಗಿತ್ತು. ಅದೇ ವೇಳೆಗೆ ತಮಿಳುನಾಡಿನ ಸಾಮಾಜಿಕ ಸುಧಾರಕ ತಂದೈ ಪೆರಿಯಾರ್ ಅವರ ವೈಕೋಂ ಪ್ರವೇಶವಾಗಿತ್ತು. ಚಳವಳಿಯ ಕಾವೂ ಏರಿತ್ತು.

ಪೆರಿಯಾರ್ ಆ ಕಾಲಕ್ಕೇ ದಕ್ಷಿಣ ಭಾರತದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ದಲಿತ ಮತ್ತು ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ದಶಕಗಳ ಕಾಲ ಹೋರಾಡಿದ್ದ ಪೆರಿಯಾರ್, ದ್ರಾವಿಡರ ಅಸ್ಮಿತೆಯ ಉಳಿವಿಗಾಗಿ ಶತಮಾನಗಳ ಹಿಂದೆಯೇ “ಹಿಂದಿ ವಿರೋಧಿ” ಹೋರಾಟ ಮತ್ತು ದ್ರಾವಿಡ ಚಳವಳಿಯನ್ನು ರಾಜಕೀಯವಾಗಿ ಕಟ್ಟಿ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕೆ ರಾಷ್ಟ್ರೀಯ ಮಟ್ಟದ ಅಗ್ರಗಣ್ಯ ನಾಯಕರೂ ಆಗಿದ್ದರು. ಇವರ ಪ್ರವೇಶವಾಗುತ್ತಿದ್ದಂತೆ ವೈಕೋಂ ಹೋರಾಟ ಆಗಿನ ಕಾಲಕ್ಕೆ “ಪ್ಯಾನ್ ಇಂಡಿಯಾ” ಹೋರಾಟವಾಗಿ ಇಡೀ ದೇಶದ ಗಮನ ಸೆಳೆಯಿತು.

ಪೆರಿಯಾರ್

ಸತತ 22 ತಿಂಗಳ ಕಾಲ ನಡೆದ ಈ ಹೋರಾಟಕ್ಕಾಗಿ ಪೆರಿಯಾರ್ ಕೇರಳದ ಮೂಲೆಮೂಲೆಗೆ ಸುತ್ತಿ ದಲಿತರನ್ನು ಒಟ್ಟುಗೂಡಿಸಿದ್ದರು. ತಮಿಳುನಾಡಿನಿಂದಲೂ ಅನೇಕರು ಕೇರಳಕ್ಕೆ ಆಗಮಿಸಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟದ ವೇಳೆ ಪೆರಿಯಾರ್ ಎರಡು ಬಾರಿ ಕಠಿಣ ಜೈಲು ವಾಸ ಅನುಭವಿಸಿದ್ದರೂ ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ಹೋರಾಟದ ಕಾವೂ ಕೊನೆಯಾಗಿರಲಿಲ್ಲ. ಜೈಲಿನಿಂದ ಬಿಡುಗಡೆಗೊಂಡ ನಂತರವೂ ಸತತ ಹೋರಾಟದಲ್ಲಿ ಪಾಲ್ಗೊಂಡ ಪೆರಿಯಾರ್ ಈ ಹೋರಾಟವನ್ನು ಹತ್ತಿಕ್ಕಲು ತ್ರಿವಾಂಕೂರು ಸಂಸ್ಥಾನ ಮಾಡಿದ್ದ ಎಲ್ಲ ಪ್ರಯತ್ನಕ್ಕೂ ಸೆಡ್ಡುಹೊಡೆದಿದ್ದರು. ಪರಿಣಾಮ ಕೊನೆಗೂ ದಲಿತರಿಗೆ ದೇವಾಲಯ ಪ್ರವೇಶ ಸಾಧ್ಯವಾಗಿತ್ತು. ಒಂದು ರಸ್ತೆಯನ್ನು ಹೊರತುಪಡಿಸಿ ಉಳಿದೆಲ್ಲಾ ರಸ್ತೆಗಳನ್ನು ದಲಿತರು ದೇವಸ್ಥಾನಕ್ಕೆ ಬರುವಂತೆ ತೆರೆಯಲಾಯಿತು. ಈ ಪಾರ್ಶ್ವ ಪರಹಾರವನ್ನು ಪೆರಿಯಾರ್ ವಿರೋಧಿಸಿದ್ದರು. ನಂತರ ಎಷ್ಟೋ ವರ್ಷಗಳ ತರುವಾಯ ಎಲ್ಲಾ ರಸ್ತೆಗಳನ್ನು ಮುಕ್ತಗೊಳಿಸಲಾಯಿತು. ಭಾರತೀಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘಟನೆಯಾಗಿ ಸ್ಥಾನ ಪಡೆಯಿತು. “ಮಹಾಡ್ ಸತ್ಯಾಗ್ರಹ” ಸೇರಿದಂತೆ ದೇಶದಲ್ಲಿ ನಂತರ ಹುಟ್ಟಿದ ಹಲವು ದಲಿತ ಹೋರಾಟಗಳಿಗೆ ವೈಕೋಂನ ಪಾರ್ಶ್ವ ಗೆಲುವು ಸ್ಫೂರ್ತಿಯಾಗಿತ್ತು. ಇದೇ ಕಾರಣಕ್ಕೆ ವೈಕೋಂ ಹೋರಾಟಕ್ಕೆ ಅಂಕಿತ ಹಾಕಿದ್ದ ಟಿ ಕೆ ಮಾಧವನ್ ಸಹ ಪೆರಿಯಾರ್ ಅವರನ್ನು “ವೈಕೋಂ ವೀರರ್” ಎಂದು ಕೊಂಡಾಡಿದ್ದರು.

ಹೀಗೆ ಇಡೀ ಭಾರತದಲ್ಲಿ ದಲಿತ ಹೋರಾಟಕ್ಕೆ ಹೊಸ ಭರವಸೆಯನ್ನು ನೀಡಿದ ಗದ ವೈಕೋಂ ಚಳವಳಿ ಭಾರತದ ಇತಿಹಾಸ ಪುಟಗಳಲ್ಲಿ ಈಗಲೂ ವಿಶೇಷ ಸ್ಥಾನ ಹೊಂದಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಆಯೋಜಿಸುತ್ತಿರುವ ವರ್ಷ ಪೂರ್ಣ ಆಚರಣೆಗಳು ಜಾತಿವಿನಾಶಕ್ಕೆ ಶ್ರಮಿಸುತ್ತಿರುವ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಬಲ್ಲದು..

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪರಿಷತ್ ಫಲಿತಾಂಶ ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರನ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

0
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ...