Homeಅಂಕಣಗಳುಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

ಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

- Advertisement -
- Advertisement -

’ದೇವಸ್ಥಾನದೊಳಗೆ ಹೋಗೋದೂ ಒಂದೇ ಬೆಂಕಿಯೊಳಗೆ ಹೋಗೋದು ಒಂದೇ’ ಈ ಮಾತುಗಳನ್ನಾಡಿದ್ದು 50 ವರ್ಷ ವಯಸ್ಸಿನ ಕೊಪ್ಪಳದ ಮಾದಿಗರ ಹನುಮವ್ವ. ಬುದ್ಧಿ ಬಂದಾಗಿನಿಂದಲೂ ಊರಿನ ದೇಸ್ಥಾನದೊಳಗೆ ಇಂದಲ್ಲ ನಾಳೆ ಪ್ರವೇಶ ಸಿಗುತ್ತದೆ ಎಂದು ಕಾಯುತ್ತಿರುವ ಹನುಮವ್ವನ ಆಸೆ ಇಂದಿಗೂ ತೀರಿಲ್ಲ. ಹನುಮವ್ವ ಅಂತಿಂತ ಗಟ್ಟಿಗಿತ್ತಿಯಲ್ಲ, ಊರಿನ ಮೇಲ್ಜಾತಿಯವರು ಬೆದರಿಕೆ ಒಡ್ಡಿದ್ದರೂ ಸಹ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದವರು.

ಅದೇ ಊರಿನಲ್ಲಿ ದಲಿತ ಜಾತಿಯಾದ ’ದಾಸ’ರ 3 ವರ್ಷದ ವಿನಯ್ ಆಡುತ್ತಿದ್ದಾಗ ಮಳೆ ಬಂದ ಕಾರಣ ಆಶ್ರಯಕ್ಕಾಗಿ ದೇವಸ್ಥಾನದೊಳಗೆ ಕಾಲಿಟ್ಟುಬಿಟ್ಟ. ತಕ್ಷಣವೇ ಇಡೀ ಊರಿನ ಮೇಲ್ಜಾತಿ ಮುಖಂಡರು ಆ ಮಗುವಿನ ಕುಟುಂಬದ ಮೇಲೆ ಮುಗಿಬಿದ್ದರು. ದೇವಸ್ಥಾನ ದಲಿತನ ಪ್ರವೇಶದಿಂದ ಮೈಲಿಗೆಯಾಗಿದೆ, ಹಾಗಾಗಿ ಶುದ್ಧೀಕರಿಸಬೇಕೆಂದು ತೀರ್ಮಾನಿಸಿದರು. ಈ ಶುದ್ಧೀಕರಣಕ್ಕೆ ತಗಲುವ ಖರ್ಚನ್ನು ವಿನಯ್ ಕುಟುಂಬವೇ ಭರಿಸಬೇಕೆಂದು ಮೇಲ್ಜಾತಿ ಮನಸುಗಳು ತೀರ್ಪು ನೀಡಿದವು. ವಿಷಯ ತಿಳಿದ ಜಿಲ್ಲಾಡಳಿತ ಮೇಲ್ಜಾತಿ ಮುಖಂಡರನ್ನು ಬಂಧಿಸಿ ಜಿಲ್ಲೆಯ ಎಲ್ಲಾ ದೇವಸ್ಥಾನಕ್ಕೂ ದಲಿತರಿಗೆ ಪ್ರವೇಶ ನೀಡಬೇಕೆಂದು ತಾಕೀತು ಮಾಡಿತು. ವಿನಯ್ ಕುಟುಂಬವೂ ಸಹ ದೇವಸ್ಥಾನಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ಪ್ರವೇಶ ಪಡೆಯಿತು. ಒಂದು ದಿನದ ಹರುಷವೂ ಮುಗಿಯಿತು. ವಿನಯ್ ಕುಟುಂಬಕ್ಕೆ ಕಿರುಕುಳ ನೀಡಿದ್ದ ಮೇಲ್ಜಾತಿ ಮುಖಂಡರನ್ನು ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಮುನ್ನಾ ದಿನವೇ ವಿನಯ್ ಕುಟುಂಬವನ್ನು ಊರು ಬಿಡುವಂತೆ ಮಾಡಲಾಯಿತು. ಇಲ್ಲದಿದ್ದರೆ ಅನಾಹುತ ಸಂಭವಿಸಬಹುದೆಂದು ಹೇಳಲಾಯಿತು. ಈ ಬೆದರಿಕೆ-ಹೆದರಿಕೆಗೆ ಜಿಲ್ಲಾಡಳಿತ ಬೆಂಗಾವಲು ನೀಡಲಾಗಲಿಲ್ಲ, ಆಗುವುದೂ ಇಲ್ಲ. ಸರ್ಕಾರ ವಿನಯ್‌ನನ್ನು ದತ್ತು ತೆಗೆದುಕೊಂಡು ಓದಿಸುವುದಾಗಿ ಭರವಸೆ ನೀಡಿತು. ಆದರೆ ಆತನ ಕುಟುಂಬ ಈಗ ಊರೂರು ಅಲೆಯುತ್ತ ಅನಾಥವಾಗಿದೆ. ಈ ಭಾಗದ ಮಾದಿಗ ಮತ್ತು ಛಲವಾದಿ ದಲಿತರ ಪಾಡು ಇದೇ ಆಗಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಸಿಹಸಿಯಾಗಿ ಜೀವಂತವಿರುವ ಅಸ್ಪೃಶ್ಯತೆ ಆಚರಣೆಗೆ ಮತ್ತೊಂದು ಸಾಕ್ಷಿ ಕೋಲಾರದ ಮುಳಬಾಗಿಲು. ಇಲ್ಲಿ ದೇವರ ಕಂಬವನ್ನು ದಲಿತ ಯುವಕನೊಬ್ಬ ಮುಟ್ಟಿದ್ದಕ್ಕೆ ಮೇಲ್ಜಾತಿವಾದಿಗಳು 60,000 ರೂಪಾಯಿ ದಂಡ ವಿಧಿಸಿದ್ದರು. ಅಲ್ಲಿನ ದಲಿತರೂ ಸಹ ಹಿಂದೂ ಮೇಲ್ಜಾತಿ ದೇವರುಗಳನ್ನು ಮನೆಯಿಂದ ಹೊರಗೆ ಹಾಕಿ ಅಂಬೇಡ್ಕರ್ ದಾರಿಯನ್ನು ಹಿಡಿಯಲು ಮುಂದಾದರು.

ಇದು ಇಂದು ನಿನ್ನೆಯ ವಿಷಯವಲ್ಲ. ಸನಾತನ ಪರಂಪರೆಯ ಸಮಸ್ಯೆ. ಮಾನವೀಯವಾದ ನಮ್ಮ ಸಂವಿಧಾನ ಈ ಸನಾತನದ ವಿರುದ್ಧವಾಗಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಗೊಳಿಸಿದ ನಂತರವೂ ಇಂತಹ ಅಮಾನವೀಯ ಆಚರಣೆಗಳು ಈ ನೆಲದಲ್ಲಿ ಇನ್ನೂ ಜೀವಂತವಾಗಿವೆ. ಅಷ್ಟೇಅಲ್ಲದೇ ಬಹಿರಂಗವಾಗಿ ನಡೆಯುತ್ತವೆ.

ತಮ್ಮ ಹೋರಾಟದ ಆರಂಭಿಕ ಘಟ್ಟದಲ್ಲಿ ಸ್ವತಃ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರೇ ಕಾಳರಾಮ್ ದೇವಸ್ಥಾನ ಪ್ರವೇಶಕ್ಕೆ ಹೋರಾಟ ರೂಪಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಮೇಲ್ಜಾತಿ ಹಿಂದೂಗಳ ಜಡತ್ವವನ್ನು ಅರಿತು ದೇಗುಲ ಪ್ರವೇಶ ಹೋರಾಟದಿಂದಲೇ ದೂರ ಸರಿದರು. ಅಂಬೇಡ್ಕರರು ದೇವಸ್ಥಾನ ಪ್ರವೇಶ ಹೋರಾಟ ಕೈಬಿಟ್ಟು ಇಲ್ಲಿಗೆ ಸುಮಾರು 9 ದಶಕಗಳೇ ಕಳೆದಿವೆ. ಆದರೆ ಇಂದಿಗೂ ದಲಿತರು ದೇವಸ್ಥಾನದ ಬಾಗಿಲುಗಳನ್ನು ತಟ್ಟುತ್ತಲೇ ಇದ್ದಾರೆ. ಅಂಬೇಡ್ಕರ್ ಅವರ ದೂರದೃಷ್ಟಿ ಇವರಿಗೆ ಇಂದಿಗೂ ಅರ್ಥವಾಗಿಲ್ಲದಿರುವುದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಆದರೆ ಮತ್ತೊಂದು ಕಡೆ ಕೋಲಾರದ ಮುಳಬಾಗಿಲಿನ ದಲಿತ ಕುಟುಂಬ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ’ನಿನಗೆಲ್ಲಿ ಗೌರವವಿಲ್ಲವೋ ಅಲ್ಲಿ ನಿನ್ನ ಚಪ್ಪಲಿಗಳನ್ನೂ ಸಹ ಬಿಡಬೇಡ’ ಎಂಬ ಅಂಬೇಡ್ಕರರ ಸ್ವಾಭಿಮಾನದ ಮಾತುಗಳನ್ನು ಮುಳಬಾಗಿನ ದಲಿತ ಕುಟುಂಬ ಪಾಲಿಸಿದೆ. ಇದು ಆಶಾದಾಯಕವಾದ ಬೆಳವಣಿಗೆ.

ಇದನ್ನೂ ಓದಿ: ಮಾತು ಮರೆತ ಭಾರತ-35; ಮಿರ್ಯಾಲಗುಡ ಫೈಲ್: ’ಅಪ್ಪನನ್ನು ಗಲ್ಲಿಗೇರಿಸಿ’ ಎಂದ ಅಮೃತಳ ಕತೆ

ಹಾಗೆಂದು ಇಂದಿಗೂ ದೇಗುಲ ಪ್ರವೇಶಕ್ಕಾಗಿಯೇ ಕಾಯುತ್ತಿರುವ ದಲಿತ ಸಮುದಾಯಕ್ಕೆ ನಿಜಸ್ಥಿತಿಯನ್ನು ಸಾರಿಸಾರಿ ಹೇಳಬೇಕಾಗಿದೆ. ಉದಾಹರಣೆಗೆ, 2022ರಲ್ಲಿ ರಾಯಚೂರಿನ ಗ್ರಾಮೀಣ ಕೂಲಿಕಾರ್ಮಿಕರ ಸಂಘವು 56 ಹಳ್ಳಿಗಳನ್ನು ಸಮೀಕ್ಷೆ ಮಾಡಿತು. ಅದರ ಪ್ರಕಾರ 56ರಲ್ಲಿ ಕೇವಲ 9 ಹಳ್ಳಿಗಳಲ್ಲಿ ಮಾತ್ರ ದಲಿತರಿಗೆ ದೇಗುಲ ಪ್ರವೇಶವಿತ್ತು. 2018ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ’ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್’ನ ಪ್ರೊ. ಮಾರುತಿಯವರ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಯಿತು. ಈ ಅಧ್ಯಯನದ ಪ್ರಕಾರ ಕರ್ನಾಟಕದ ಶೇ.34ರಷ್ಟು ದಲಿತರಿಗೆ ದೇಗುಲ ಪ್ರವೇಶವೇ ಇಲ್ಲ. ಮಾರುತಿಯವರ ಪ್ರಕಾರ ಎಲ್ಲಿ ಅನಕ್ಷರತೆ ಕಡಿಮೆ ಇದೆಯೋ ಹಾಗೂ ಬಡವರು-ಶ್ರೀಮಂತರ ನಡುವಿನ ಅಂತರ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹೆಚ್ಚಿನ ಜಾತಿ ತಾರತಮ್ಯವಿದೆ. ಎಲ್ಲಿ ದಲಿತರು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದಾರೋ ಅಲ್ಲಿ ದಲಿತರ ಮೇಲಿನ ತಾರತಮ್ಯ ಕಡಿಮೆ ಆಗುತ್ತಿದೆ. ಜೊತೆಗೆ ದಲಿತರ ಆರ್ಥಿಕ ಸ್ಥಿತಿಗತಿಯೂ ಸಹ ಚನ್ನಾಗಿದೆ.

ಕೊಪ್ಪಳದಲ್ಲಿ ಪದೇಪದೇ ಅಸ್ಪೃಶ್ಯತೆ ಆಚರಣೆಯ ಘಟನೆಗಳು ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣ ಅಲ್ಲಿನ ದಲಿತರಲ್ಲಿರುವ ಅಜಾಗೃತಿ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಎಲ್ಲೆಲ್ಲಿ ಲಿಂಗಾಯತರು, ಬ್ರಾಹ್ಮಣರು, ಕುರುಬರು, ಗೌಡರು ಹಾಗೂ ನಾಯಕರ ಪ್ರಾಬಲ್ಯ ಹೆಚ್ಚಿದೆಯೋ ಅಲ್ಲೆಲ್ಲಾ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಹೆಚ್ಚಿದೆ ಎಂದು ಈ ಸಮೀಕ್ಷೆ ಹೇಳುತ್ತದೆ. ಒಟ್ಟಾರೆ ಕರ್ನಾಟಕದಲ್ಲಿ 2019ರಿಂದ 2021ರ ನಡುವೆ ಶೇ.11ರಷ್ಟು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿರುವುದಕ್ಕೆ ಕಾರಣ ಹಿಂದೂ ಮೇಲ್ಜಾತಿ ಪರ ನಿಂತಿರುವ ಬಿಜೆಪಿ ಸರ್ಕಾರವೇ ಆಗಿದೆ.

ಕೊನೆಯದಾಗಿ, ದಲಿತರು ಹೋರಾಡಿ ದೇಗುಲ ಪ್ರವೇಸಿದ ಮೇಲೆಯೂ ಅವರ ಜೀವನ ಮತ್ತಷ್ಟು ಚಿಂತಾಜನಕವಾಗುತ್ತದೆ ಎಂಬುವುದಕ್ಕೆ ಈ ಮುಂದಿನ ಪ್ರಕರಣವೇ ಸಾಕ್ಷಿ. ಹಾಸನದ ದಿಂಡಗೂರು ಗ್ರಾಮದಲ್ಲಿ ದೇಗುಲ ಪ್ರವೇಶಕ್ಕೆ ಹೋರಾಡಿದ ದಲಿತ ಯುವಕ ಸಂತೋಷ್ ಇಂದು ಗ್ರಾಮದವರ ಅಘೋಷಿತ ಬಹಿಷ್ಕಾರಕ್ಕೆ ನಲುಗಿಹೋಗಿದ್ದಾನೆ. ಆತನೊಬ್ಬನೇ ಅಲ್ಲ, ಅವನ ಜೊತೆಗೆ ಇಡೀ ಸಮುದಾಯವನ್ನೇ ಮೇಲ್ಜಾತಿಗಳು ಬಹಿಷ್ಕಾರ ಮಾಡಿದ್ದಾರೆ. ಅಲ್ಲಿನ ದಲಿತರು ಹೊಟ್ಟೆಪಾಡಿಗಾಗಿ ದೂರದೂರಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಸವಲತ್ತುಗಳು ಸಿಗದೇ ಸ್ವತಃ ಸಂತೋಷ್ ಕಂಗಾಲಾಗಿದ್ದಾನೆ. ಇನ್ನು ಮುಂದೆ ದೇಗುಲ ಪ್ರವೇಶಕ್ಕಾಗಿ ಒತ್ತಾಯಿಸುವುದಿಲ್ಲವೆಂಬ ಷರತ್ತಿನ ಮೇಲೆ ಅಲ್ಲಿನ ಒಕ್ಕಲಿಗರು ಕೆಲವು ದಲಿತ ಕುಟುಂಬಗಳಿಗೆ ಕೆಲಸ ನೀಡಲು ಒಪ್ಪಿಕೊಂಡಿವೆ.

ಹಾಗಾಗಿ ಇಂದು ದಲಿತರ ಮುಂದೆ, ದೇಗುಲ ಪ್ರವೇಶಕ್ಕಿಂತಲೂ ಹೆಚ್ಚು ಮುಖ್ಯವಾಗಿರುವ ಹಾಗೂ ತುರ್ತಾಗಿರುವ ಕಾರ್ಯಗಳಿವೆ. ಕರ್ನಾಟಕದ ಕೇವಲ ಶೇ.10ರಷ್ಟು ದಲಿತರು ಮಾತ್ರ ಭೂಮಿಯನ್ನು ಹೊಂದಿದ್ದಾರೆ. ದಲಿತರ ಸರಾಸರಿ ಭೂಮಿಯ ಪಾಲು ಕೇವಲ 0.2 ಹೆಕ್ಟೇರ್ ಮಾತ್ರ. ದಲಿತರೊಳಗೆ ಕೂಲಿಕಾರ್ಮಿಕರ ಪ್ರಮಾಣ ಬರೋಬ್ಬರಿ ಶೇ.84. ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿಯೂ ಸಹ ದಲಿತರದ್ದೇ ಮೇಲುಗೈ. ಪರಿಸ್ಥಿತಿ ಹೀಗಿರುವಾಗ ದಲಿತರು ದೇಗುಲ ಪ್ರವೇಶಕ್ಕೆ ಹಾಕುವ ಶ್ರಮವನ್ನು ಬೇರೆಡೆ ಹಾಕಬೇಕಾಗಿದೆ. ಅದೆಷ್ಟೇ ಬಾಗಿಲು ಬಡಿದರೂ ದೇಗುಲದೊಳಗಿನ ದೇವರ ಕೀಲಿಕೈ ಮೇಲ್ಜಾತಿ ಹಿಂದೂಗಳ ಕೈಲಿದೆ. ಅವರ ಪ್ರಕಾರ ದಲಿತರು ಹಿಂದೂಗಳಲ್ಲ. ದಲಿತರು ಹಿಂದೂಗಳಲ್ಲ ಎಂದು ಪದೇಪದೇ ಮೇಲ್ಜಾತಿ ಹಿಂದೂಗಳು ಘಂಟಾಘೋಷವಾಗಿ ಹೇಳುತ್ತಿರುವಾಗ ತಮ್ಮದಲ್ಲದ ಮನೆಯ ಬಾಗಿಲು ಬಡಿಯುವುದು ದಲಿತರಿಗೂ ಒಳ್ಳೆಯದಲ್ಲ. ಆದಷ್ಟು ಬೇಗ ಬಾಬಾಸಾಹೇಬ್ ಅಂಬೇಡ್ಕರರ ದಾರಿದೀಪ ದಲಿತರ ಕಣ್ಣಿಗೆ ಗೋಚರಿಸಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Dalitharu yavathu hindugalla,ee mathu sariyagide.Dalitaru kanade iruva devarannu bittu kanuva Ambedkar devarige pooje sallisali,tattekasu meljathiyavarige uddaravagalu sahayavagutte.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...