ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿರುವ ಯುವತಿ ಸೇರಿದಂತೆ 18 ಜನರನ್ನು ದೆಹಲಿ ಪೊಲೀಸರು ಸೋಮವಾರ (ಅ.5) ವಶಕ್ಕೆ ಪಡೆದಿದ್ದಾರೆ. ಆರೋಪಿತ ಅಧಿಕಾರಿಯ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್, ವಶಕ್ಕೆ ಪಡೆದವರನ್ನು ಪೊಲೀಸ್ ವಶದಲ್ಲಿ ಹಲ್ಲೆಗೈಯಲಾಗಿದೆ ಎಂದು ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. “ವಶಕ್ಕೆ ಪಡೆದವರಲ್ಲಿ ಇಬ್ಬರನ್ನು ಬರ್ಬರವಾಗಿ ಥಳಿಸಲಾಗಿದೆ. ಮಹಿಳೆ ತಮಗೆ ಈ ಹಲ್ಲೆಯ ಬಗ್ಗೆ ತಿಳಿಸಿದ್ದಾಗಿ ತಿಳಿಸಿದ್ದಾರೆ. ಎಲ್ಲ 18 ಜನರನ್ನು ದೆಹಲಿ ಕಾಂಟ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ” ಎಂದು ರತ್ನಾ ಸಿಂಗ್ ತಿಳಿಸಿದ್ದಾರೆ.
“ಸಂತ್ರಸ್ತೆಯನ್ನು ರಕ್ಷಿಸಿ ಎಫ್‌ಐಆರ್ ದಾಖಲಿಸುವ ಬದಲು, ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವವರನ್ನು ಏಕೆ ವಶಕ್ಕೆ ಪಡೆದು ಹಲ್ಲೆ ಮಾಡಲಾಗುತ್ತಿದೆ? ದೆಹಲಿ ಪೊಲೀಸರೇ ಕೂಡಲೇ ಎಲ್ಲರನ್ನೂ ಬಿಡುಗಡೆ ಮಾಡಿ” ಎಂದು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ರತ್ನಾ ಸಿಂಗ್ ಬರೆದುಕೊಂಡಿದ್ದಾರೆ.
ಅಕ್ಟೋಬರ್ 3 ರಂದು ಶನಿವಾರ ಜಂತರ್ ಮಂತರ್‌ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಮೂವರು ಮಹಿಳಾ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ಆರೋಪದ ಬಗ್ಗೆ ಎಫ್‌ಐಆರ್ ಮತ್ತು ತನಿಖೆ ನಡೆಸುವಂತೆ ಒತ್ತಾಯಿಸಿ ಸಂಸತ್ ರಸ್ತೆ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನಾಕಾರರು ಜಮಾಯಿಸಿದಾಗ ಈ ಬಂಧನಗಳು ನಡೆದಿವೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ಪತ್ರಕರ್ತೆಯರು ಭಾಗವಹಿಸಿದ್ದರು.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪ್ರಕಾರ, ಪ್ರತಿಭಟನಾಕಾರರು ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕೆಂದು ಬಯಸಿದ್ದರು. ಘಟನೆ ನಡೆದ ದಿನದಂದು ತಾವು ಪೊಲೀಸ್ ಠಾಣೆಗೆ ಹೋಗಿ ಸಿಸಿಟಿವಿ ಫೂಟೇಜ್‌ಗಳನ್ನು ಕೇಳಿದ್ದೆವು. 24 ಗಂಟೆಗಳ ನಂತರ ಬರುವಂತೆ ಹೇಳಲಾಗಿತ್ತು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ. “ನಾವು ವಾಪಸ್ ಹೋಗಿ ಮತ್ತೆ ಸಿಸಿಟಿವಿ ಫೂಟೇಜ್ ಕೇಳಿದೆವು, ಆದರೆ ಅವರು ಅದನ್ನು ನೀಡಲಿಲ್ಲ. ಅವರು ಎಫ್‌ಐಆರ್ ಕೂಡ ದಾಖಲಿಸಿಲ್ಲ ಅಥವಾ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ನಮ್ಮನ್ನೇ ವಶಕ್ಕೆ ಪಡೆದಿದ್ದಾರೆ” ಎಂದು ಆ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಅದೇ ಅಧಿಕಾರಿಯ ವಿರುದ್ಧ ಜುಲೈ ತಿಂಗಳಲ್ಲಿಯೂ ಇದೇ ರೀತಿಯ ದೂರು ನೀಡಲಾಗಿತ್ತು. ಆದರೆ ಯಾವುದೇ ತನಿಖೆ ನಡೆದಿಲ್ಲ ಎಂದು ವಶಕ್ಕೆ ಪಡೆದ ಮತ್ತೊಬ್ಬ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಅನುಪಸ್ಥಿತಿಯನ್ನು ಪ್ರಶ್ನಿಸಿದಾಗ ಎಸಿಪಿ ಒಬ್ಬರು ತನ್ನ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಪತ್ರಕರ್ತೆಯರಲ್ಲಿ ಒಬ್ಬರು ತಿಳಿಸಿದ್ದಾರೆ. “ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ನವದೆಹಲಿ ಜಿಲ್ಲಾ ಪೊಲೀಸರು ದೂರುಗಳನ್ನು ಅಪರಾಧ ವಿಭಾಗಕ್ಕೆ (ಕ್ರೈಂ ಬ್ರಾಂಚ್) ವರ್ಗಾಯಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮುಂಚಿತವಾಗಿ ತಿಳಿಸಿದ್ದರು.
ಹೆಸರಿನ ಟ್ಯಾಗ್ ಇಲ್ಲದೆ ಕರ್ತವ್ಯ ನಿರ್ವಹಿಸಿದ ಪೊಲೀಸರು
ಜಂತರ್ ಮಂತರ್‌ನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರಿನ ಗುರುತಿನ ಚೀಟಿಗಳನ್ನು (name tags) ಧರಿಸಿರಲಿಲ್ಲ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಜುಲೈ 20 ರ ಸಿಜೆಪಿ ಮೆರವಣಿಗೆಯ ಹಿಂಸಾಚಾರದ ನಂತರ ಸಂಭವಿಸಿದಂತೆ, ಸಿಬ್ಬಂದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿ ಗುರಿಯಾಗಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಮೊದಲ ದಿನ, ಪ್ರತಿಭಟನಾಕಾರರು ಪೊಲೀಸರನ್ನು ವೀಡಿಯೊ ಮಾಡಿದರು. ಅವರು ಯಾಕೆ ಟ್ಯಾಗ್‌ಗಳನ್ನು ಧರಿಸಿಲ್ಲ ಎಂದು ಪ್ರಶ್ನಿಸಿದರು. ಕೆಲವು ಸಿಬ್ಬಂದಿ ಟ್ಯಾಗ್‌ಗಳು ಬಿದ್ದುಹೋಗಿವೆ ಎಂದರು, ಇನ್ನು ಕೆಲವರು ಮರೆತುಹೋಗಿದೆ ಎಂದರು, ಹಲವರು ಯಾವುದೇ ಸ್ಪಷ್ಟನೆ ನೀಡಲಿಲ್ಲ.
ವರದಿಯ ಪ್ರಕಾರ, ಜುಲೈ ತಿಂಗಳ ಜನಸಂದಣಿಯನ್ನು ನಿಭಾಯಿಸಿದ ಅಧಿಕಾರಿಗಳು, ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಆನ್‌ಲೈನ್‌ನಲ್ಲಿ ಗುರಿಯಾಗಿಸಲಾಗಿದೆ ಎಂದು ಪರಾಮರ್ಶನಾ ಸಭೆಗಳಲ್ಲಿ ತಿಳಿಸಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಟ್ಯಾಗ್‌ಗಳನ್ನು ತೆಗೆದುಹಾಕಿದ್ದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರಿಗೆ ಭರವಸೆ ನೀಡಲಾಗಿತ್ತು ಎಂದು ವರದಿಯಾಗಿದೆ. ಈ ಬಾರಿ ಹೆಚ್ಚಿನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ತಮ್ಮ ಟ್ಯಾಗ್‌ಗಳನ್ನು ಧರಿಸಿಕೊಂಡಿದ್ದರು. ಅನೇಕ ತಳಹಂತದ ಸಿಬ್ಬಂದಿ ಟ್ಯಾಗ್ ಧರಿಸಿರಲಿಲ್ಲ.


