Homeಮುಖಪುಟಉತ್ತರ ಪ್ರದೇಶ: ಟ್ರಕ್ ಅಫಘಾತದಲ್ಲಿ 23 ವಲಸೆ ಕಾರ್ಮಿಕರು ಮೃತ

ಉತ್ತರ ಪ್ರದೇಶ: ಟ್ರಕ್ ಅಫಘಾತದಲ್ಲಿ 23 ವಲಸೆ ಕಾರ್ಮಿಕರು ಮೃತ

- Advertisement -
- Advertisement -

ಇಂದು ಉತ್ತರ ಪ್ರದೇಶದ ಔರಿಯಾ ಬಳಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ ಮತ್ತೊಂದು ಟ್ರಕ್‌ಗೆ ಢಿಕ್ಕಿ ಹೊಡೆದು ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ದುರಂತವೂ ಮುಂಜಾನೆ 3.30ರ ಸುಮಾರಿಗೆ ಸಂಭವಿಸಿದೆ. 15-20 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಔರಿಯಾ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ “ಹೆಚ್ಚಿನವರು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದವರು” ಎಂದು ಹೇಳಿದ್ದಾರೆ.

ಇವರೆಲ್ಲರೂ ರಾಜಸ್ಥಾನದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಳೆದ ತಿಂಗಳು ದೇಶದಾದ್ಯಂತ ಘೋಷಿಸಿದ್ದ ಲಾಕ್‌ಡೌನ್ ನಿಂದಾಗಿ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗೆ ಮಹಾವಲಸೆಯನ್ನು ಪ್ರಾರಂಭಿಸಿದ್ದರು. ಈ ಸಮಯದಲ್ಲಿ ನೂರಾರು ಮಂದಿ ಅಫಘಾತ ಹಾಗೂ ಬಳಲಿಕೆಯಿಂದ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂ ಮತ್ತು ಗಾಯಗೊಂಡವರಿಗೆ 50,000 ರೂ. ಘೋಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಎರಡೂ ಲಾರಿಗಳನ್ನು ವಶಪಡಿಸಿ ಟ್ರಕ್ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಧಾನ ಮಂತ್ರಿ ಮೋದಿ ಸಂತಾಪ

ಘಟನೆಯ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. “ಉತ್ತರ ಪ್ರದೇಶದ ಔರಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತ ಬಹಳ ದುರಂತ. ಪರಿಹಾರ ಕಾರ್ಯಗಳಲ್ಲಿ ಸರ್ಕಾರ ನಿರತವಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ, ಹಾಗೆಯೇ ಗಾಯಾಳುಗಳು ಆದಷ್ಟು ಬೇಗ ಚೇತರಿಕೆ ಹೊಂದಲಿ ಎಂದು ಹಾರೈಸುತ್ತೇನೆ.” ಎಂದು ಹೇಳಿದ್ದಾರೆ.

“ಔರಿಯಾ ಜಿಲ್ಲೆಯಲ್ಲಿ ರಸ್ತೆ ಅಪಘಾತದಿಂದ ವಲಸೆ ಕಾರ್ಮಿಕರ ಸಾವು ದುರದೃಷ್ಟಕರ ಮತ್ತು ದುಃಖಕರವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರಿಗೆ ಪರಿಹಾರ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ. ತನಿಖೆಗೆ ಸಹ ಆದೇಶಿಸಲಾಗಿದೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ಘಟನೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದಾರೆ. “ಉತ್ತರ ಪ್ರದೇಶದ ಔರಿಯಾದಲ್ಲಿ ರಸ್ತೆ ಅಪಘಾತದಿಂದ ಹಲವಾರು ಕಾರ್ಮಿಕರು ಸಾವನ್ನಪ್ಪಿದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಲ್ಲದೆ, ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಅಪಘಾತದ ಬಗ್ಗೆ ಉತ್ತರ ಬಿಎಸ್ಪಿ ನಾಯಕಿ ಮಾಯಾವತಿ ಮಾತನಾಡಿ, “ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಅಪಘಾತದಲ್ಲಿ ಮೃತಪಟ್ಟ ಅಥವಾ ಗಾಯಗೊಂಡವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.” ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರಿಗೆ ಆಹಾರ, ನೀರು ಒದಗಿಸಲು ಕೇಂದ್ರಕ್ಕೆ ಆದೇಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ವಜಾಗೊಳಿಸಿದೆ.

“ನ್ಯಾಯಾಲಯ ಯಾರು ನಡೆಯುತ್ತಿದ್ದಾರೆ ಯಾರು ನಡೆಯುತ್ತಿಲ್ಲ ಎಂದು ಮೇಲ್ವಿಚಾರಣೆ ಮಾಡುವುದು ಅಸಾಧ್ಯ” ಎಂದಿತ್ತಲ್ಲದೆ, “ಈ ಬಗ್ಗೆ ರಾಜ್ಯ ತೀರ್ಮಾನಿಸಲಿ. ನ್ಯಾಯಾಲಯ ಯಾಕೆ ಕೇಳಬೇಕು ಅಥವಾ ತೀರ್ಮಾನಿಸಬೇಕು?” ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇನ್ನಷ್ಟು ಓದಿ: ವಲಸಿಗರ ಬಗ್ಗೆ ನಾವು ಯಾಕೆ ತೀರ್ಮಾನಿಸಬೇಕು, ರಾಜ್ಯಗಳು ತೀರ್ಮಾನಿಸಲಿ: ಸುಪ್ರೀಂ ಕೋರ್ಟ್


ನಮ್ಮ ಯೂಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...