Homeಮುಖಪುಟಜಗತ್ತಿನ 42 ದೇಶಗಳು ನಿರಂಕುಶ ಆಳ್ವಿಕೆ ಕಡೆ ಚಲಿಸಿವೆ: ವಿ-ಡೆಮ್‌ ವರದಿ

ಜಗತ್ತಿನ 42 ದೇಶಗಳು ನಿರಂಕುಶ ಆಳ್ವಿಕೆ ಕಡೆ ಚಲಿಸಿವೆ: ವಿ-ಡೆಮ್‌ ವರದಿ

ವಿ-ಡೆಮ್ ಸಂಸ್ಥೆಯು ಚುನಾವಣೆಯ ಮೂಲಕ ಭಾರತದಲ್ಲಿ ನಿರಂಕುಶ ಪ್ರಭುತ್ವ ಅಧಿಕಾರವನ್ನು ಹಿಡಿದಿದೆ ಎಂದರೆ 2021ರಲ್ಲಿ ಫ್ರೀಡಮ್ ಹೌಸ್ ಸಂಸ್ಥೆಯು ಭಾರತವನ್ನು ‘ಅರೆ ಸ್ವಾತಂತ್ರ್ಯ’ ಪಟ್ಟಿಗೆ ಸೇರಿಸಿದೆ.

- Advertisement -
- Advertisement -

ಸ್ಪಷ್ಟವಾಗಿ ಜಗತ್ತಿನ ಹಲವು ಭಾಗಗಳಲ್ಲಿ ನಿರಂಕುಶ ಆಳ್ವಿಕೆ ಕಡೆಗಿನ ಚಲನೆ ಆರಂಭ ಆಗಿದೆ. ಇದು 2020ರಿಂದ ಇನ್ನು ತೀವ್ರಗೊಂಡಿದೆ. 2022ರ ಕೊನೆಯಲ್ಲಿ 42 ದೇಶಗಳನ್ನು ನಿರಂಕುಶ ಆಳ್ವಿಕೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿ-ಡೆಮ್‌ನ ಹೊಸ ವರದಿ ಹೇಳುತ್ತಿದೆ.

2022ರ ಕೊನೆಯಲ್ಲಿ ಜಗತ್ತಿನ ಒಟ್ಟು 794 ಕೋಟಿ ಜನಸಂಖ್ಯೆಯಲ್ಲಿ 72% ಜನರು (570ಕೋಟಿ) ನಿರಂಕುಶ ಆಳ್ವಿಕೆಯಲ್ಲಿ ಬದುಕುತ್ತಿದ್ದಾರೆ. ಅದರಲ್ಲಿ 28% ಜನರು (220ಕೋಟಿ) ಹೆಚ್ಚು ನಿರಂಕುಶ ಸರ್ವಾಧಿಕಾರದಡಿಯಲ್ಲಿ ಬದುಕುತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ. ಈ ಸಾಲಿನಲ್ಲಿ ಚೀನಾ, ರಷ್ಯಾ, ಅಪ್ಘಾನಿಸ್ತಾನ್, ಬ್ರೆಜಿಲ್‌ದಂತಹ ಇನ್ನು ಅನೇಕ ದೇಶಗಳು ಸೇರಿದೆ. ಕಳೆದ 10 ವರ್ಷಗಳಲ್ಲಿ ವೇಗವಾಗಿ ಪ್ರಭುತ್ವವನ್ನು ನಿರಂಕುಶಗೊಳಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ. ಸ್ವೀಡನ್ ದೇಶದಲ್ಲಿರುವ ಗೋಥನ್‌ಬರ್ಗ್ ವಿಶ್ವವಿದ್ಯಾಲಯದ V-Dem (Varieties of Democracy) ಸಂಸ್ಥೆ ಈ ಹೊಸ ವರದಿಯನ್ನು ಅಧ್ಯಯನ ಮಾಡಿ ಹೊರ ತಂದಿದೆ.

ಇಂದು ಪ್ರಜಾಪ್ರಭುತ್ವಕ್ಕಿಂತ ನಿರಂಕುಶ ಸರ್ವಾಧಿಕಾರ ವ್ಯವಸ್ಥೆಗಳು ಹೆಚ್ಚು ಇವೆ. ಜಗತ್ತಿನ 13% ಜನರು ಮಾತ್ರ (100 ಕೋಟಿ) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದಾರೆ ಎಂದು ವಿ-ಡೆಮ್ ವರದಿ ಹೇಳುತ್ತದೆ.
“ಕಳೆದ 35 ವರ್ಷಗಳಲ್ಲಿ ಜಾಗತಿಕ ಮಟ್ಟದ ಪ್ರಜಾಪ್ರಭುತ್ವದ ಪ್ರಗತಿಗಳು ನಾಶವಾಗಿವೆ”  ಎಂದು ಈ ವರದಿಯಲ್ಲಿ ‘ನಿರಂಕುಶ ಆಳ್ವಿಕೆಯಲ್ಲಿ ಹೋರಾಟ’ ಎಂಬ ಶೀರ್ಷಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಜಗತ್ತಿನ ಈ ಘಟನೆಗಳಿಗೆ ಜಾಗತಿಕ ಮಟ್ಟದ ರಾಜಕಾರಣಿಗಳು ಮತ್ತು ನೀತಿ ನಿರೂಪಕರು ಇಬ್ಬರನ್ನೂ ಸಮಾನವಾಗಿ ಕಾರಣವಾಗಿಸಬೇಕು ಎಂದು ವರದಿ ಹೇಳುತ್ತದೆ.

ವಿವಿಧ ದೇಶಗಳ ಪ್ರಜಾಪ್ರಭುತ್ವ ಮಟ್ಟವನ್ನು ಅಳೆಯಲು ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಬಳಸುವ ಜೊತೆಗೆ ವರದಿಯು, ಅಭಿವ್ಯಕ್ತಿ ಸ್ವಾತಂತ್ರ್ಯ (35 ದೇಶಗಳಲ್ಲಿ ಕ್ಷೀಣಿಸುತ್ತಿದೆ), ಮಾಧ್ಯಮಗಳ ಮೇಲೆ ಸರ್ಕಾರದ ನಿರ್ಬಂಧ (47 ದೇಶಗಳಲ್ಲಿ ಕ್ಷೀಣಿಸುತ್ತಿದೆ), ನಾಗರಿಕ ಸಮಾಜದ ಪ್ರತಿನಿಧಿಗಳ ಮೇಲೆ ಪ್ರಭುತ್ವದ ದಮನ (37 ದೇಶಗಳಲ್ಲಿ ಕ್ಷೀಣಿಸುತ್ತಿದೆ), ಚುನಾವಣೆಗಳ ಗುಣಮಟ್ಟ ಕುಸಿಯುವುದು (30 ದೇಶಗಳಲ್ಲಿ ಕ್ಷೀಣಿಸುತ್ತಿದೆ) ಇವುಗಳನ್ನು ಮುಖ್ಯವಾಗಿ ಮಾನದಂಡವಾಗಿ ತೆಗೆದುಕೊಳ್ಳಲಾಗಿದೆ. ಅರ್ಮೇನಿಯಾ, ಗ್ರೀಸ್, ಮಾರಿಷಸ್ ದೇಶಗಳಲ್ಲಿ ಪ್ರಜಾಪ್ರಭುತ್ವವು ಅತಿಯಾಗಿ ಕುಸಿದಿದೆ ಎಂದು ವರದಿ ಹೇಳಿದೆ.

ಪ್ರಪಂಚದಾದ್ಯಂತ ಕಳೆದ ದಶಕದಲ್ಲಿ ನಿರಂಕುಶ ರಾಜಕೀಯ ಆಡಳಿತಗಳು ಹೆಚ್ಚಾಗಿದ್ದನ್ನು ನಾವು ನಿಸ್ಸಂದೇಹವಾಗಿ ಕಾಣುತ್ತೇವೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಬಂದಾಗ ಹಲವು ದೇಶಗಳು ಅಧಿಕಾರವನ್ನು ಕೇಂದ್ರೀಕರಿಸಲು ಪ್ರಯತ್ನಪಟ್ಟವು. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಪ್ರಕ್ರಿಯೆಯನ್ನು ಸಂಸತ್ತಿನ ಒಳಗೆ ತೀರ್ಮಾನ ಕೈಗೊಳ್ಳುವುದನ್ನು ಅಮಾನತ್ತು ಮಾಡಲಾಯಿತು. ಇಂತಹ ದೇಶಗಳು ಸಾಂಕ್ರಾಮಿಕ ರೋಗವನ್ನು ಬಳಸಿಕೊಂಡು ಕಾನೂನುಗಳನ್ನು ಜಾರಿಗೊಳಿಸಿ, ಪ್ರಜೆಗಳ ಹಕ್ಕುಗಳಿಗೆ ಮತ್ತು ಸ್ವಾತಂತ್ರಕ್ಕೆ ಅಡ್ಡಿಪಡಿಸಿದೆ.

ಕೆಲವು ದೇಶಗಳಲ್ಲಿ ಶಾಸಕಾಂಗಕ್ಕೆ ಎಲ್ಲಾ ರೀತಿಯ ಮಾಫಿ ನೀಡಿ ನಡೆಯಲು ಅವಕಾಶ ಮಾಡಿಕೊಡಲು ಸಾಂಕ್ರಾಮಿಕ ರೋಗವನ್ನು ಬಳಸಿಕೊಳ್ಳಲಾಯಿತು. ಅಂತಹ ದೇಶಗಳಲ್ಲಿ ಶಾಸಕಾಂಗವು ಅಸಮಾನ ಅಧಿಕಾರವನ್ನು ಹೊಂದಿತು. ಆ ದೇಶದ ನಾಗರಿಕರಿಗೆ ಹೋಲಿಕೆ ಮಾಡಿದರೆ ಮೇಲಿನ ನಾಯಕರುಗಳಿಗೆ ಅಸಮಾನವಾಗಿ ಹೆಚ್ಚಿನ ಅಧಿಕಾರ ಸಿಕ್ಕಿದೆ. ಉದಾಹರಣೆಗೆ, ಹಂಗೇರಿಯಲ್ಲಿ ಅಧ್ಯಕ್ಷ ವಿಕ್ಟರ್ ಓರ್ಬನ್ 2020ರಲ್ಲಿ ಆದೇಶದ ಮೂಲಕ ಆಳುವ ಅಧಿಕಾರವನ್ನು ಪಡೆದರು. ನಂತರ ವಿರೋಧಗಳು ಬಂದಾಗ “ವೈದ್ಯಕೀಯ ಬಿಕ್ಕಟ್ಟಿನ ಸ್ಥಿತಿಯನ್ನು” ಘೋಷಿಸಿದರು. ಈ ವೈದ್ಯಕೀಯ ತುರ್ತುಪರಿಸ್ಥಿತಿ (ಮೆಡಿಕಲ್ ಎಮರ್‌ಜೆನ್ಸಿ) ಘೋಷಣೆ ಅಧ್ಯಕ್ಷರಿಗೆ ಆದೇಶದ ಮೂಲಕ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿತು ಮತ್ತು ಎಲ್ಲಾ ರೀತಿಯ ಅಧಿಕಾರವನ್ನು ತಂದು ಕೊಟ್ಟಿತು. 2022ರಲ್ಲಿ ವಿಕ್ಟರ್ ಓರ್ಬನ್ ಯುಕ್ರೇನ್ ಯುದ್ಧದ ಕಾರಣದಿಂದ ಮತ್ತೊಂದು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಅಮೆರಿಕದ ಕೆಂಟುಕಿ ರಾಜ್ಯವು ಪ್ರತಿಭಟನೆಗಳನ್ನು ನಿಷೇಧಿಸಿತು. ಇಸ್ರೇಲ್‌ನಲ್ಲಿ ಬೆಂಜಮಿನ್ ನೆತನ್ಯಹು ಅವರು ಸಂಸತ್ತನ್ನು ಅಮಾನತ್ತು ಮಾಡಿದರು (ಇಸ್ರೇಲ್ ಸಂಸತ್ತನ್ನು ಕ್ನೆಸ್ಸೆಟ್ ಎಂದು ಕರೆಯಲಾಗುತ್ತದೆ). ತನ್ನ ವಿಚಾರಣೆ ನಡೆಸುವ ಕೋರ್ಟನ್ನು ಅಮಾನತು ಮಾಡುವ ಮೂಲಕ ಮುಂದೂಡಿದರು ಮತ್ತು ಕಣ್ಗಾವಲನ್ನು ಹೆಚ್ಚು ಮಾಡಿದರು.

ಭಾರತವು ಈ ಥರದ ಬೆಳವಣಿಗೆಗಳಿಂದ ಹೊರತಾಗಿಲ್ಲ. 2021ರಲ್ಲಿ ವಿ-ಡೆಮ್ ಸಂಸ್ಥೆಯು ಭಾರತವನ್ನು ‘ಚುನಾವಣಾ ನಿರಂಕುಶ ಪ್ರಭುತ್ವ’ ಎಂದು ವರ್ಗೀಕರಿಸಿದೆ. ಚುನಾವಣೆಯ ಮೂಲಕ ಭಾರತದಲ್ಲಿ ನಿರಂಕುಶ ಪ್ರಭುತ್ವ ಅಧಿಕಾರವನ್ನು ಹಿಡಿದಿದೆ. 2021ರಲ್ಲಿ ಫ್ರೀಡಮ್ ಹೌಸ್ ಸಂಸ್ಥೆಯು ಭಾರತವನ್ನು ‘ಅರೆ ಸ್ವಾತಂತ್ರ್ಯ’ ಪಟ್ಟಿಗೆ ಸೇರಿಸಿದೆ. 2021ರಲ್ಲಿ ‘ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವು ಸಂಸ್ಥೆ’ಯು ಭಾರತವನ್ನು ‘ಹಿಂದೆಕ್ಕೆ ಸರಿಯುತ್ತಿರುವ ಪ್ರಜಾಪ್ರಭುತ್ವ’ ಎಂದು ವರ್ಗೀಕರಿಸಿದೆ ಮತ್ತು ಪ್ರಜಾಪ್ರಭುತ್ವದ ಜಾಗತಿಕ ಸ್ಥಿತಿ ವರದಿಯಲ್ಲಿ ಭಾರತದ ಸ್ಥಾನ ದೊಡ್ಡದಾಗಿ ಕುಸಿತಗೊಳ್ಳುತ್ತಿದೆ.

ಪ್ರಜಾಪ್ರಭುತ್ವದ ಜಾಗತಿಕ ಸ್ಥಿತಿ ವರದಿಯ ಡೇಟಾ ತಿಳಿಸುವುದೇನೆಂದರೆ 1975ರ ಭಾರತ ಸರ್ಕಾರದ ಅಂಕ .59 ಇತ್ತು. ಅದು 1995ರಲ್ಲಿ .69ಕ್ಕೆ ಚಲಿಸಿತು. 2015ಕ್ಕೆ .72 ಅಂಕಕ್ಕೆ ಬಂದಿದೆ. ಆದಾಗ್ಯೂ, 2020ರಲ್ಲಿ ಭಾರತ ಸರ್ಕಾರದ ಅಂಕ .61ಕ್ಕೆ ತಲುಪಿತ್ತು. ಅಂದರೆ, ಇದು 1975ರ ಇಂದಿರಾ ಗಾಂಧಿ ಅವರ ಸರ್ಕಾರದ ತುರ್ತು ಪರಿಸ್ಥಿತಿಯ ಅಂಕಕ್ಕೆ ಹತ್ತಿರವಾಗಿದೆ. ಪ್ರಜಾಪ್ರಭುತ್ವದ ಜಾಗತಿಕ ವರದಿಯ ಪ್ರಕಾರ ಭಾರತವು ಧಾರ್ಮಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 1975ರಿಂದ ಕಡಿಮೆ ಅಂಕ ಪಡೆದಿರುವ ಶ್ರೀಲಂಕಾ ಮತ್ತು ಇಂಡೋನೆಷ್ಯಾಗಳ ಜೊತೆಗೆ ಬರುತ್ತದೆ.

ಆದ್ದರಿಂದ, “ಕಳೆದ 10 ವರ್ಷಗಳಲ್ಲಿ ವೇಗವಾಗಿ ಪ್ರಭುತ್ವವನ್ನು ನಿರಂಕುಶಗೊಳಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ” ಎಂದು 2023ರ ವಿ-ಡೆಮ್ ವರದಿ ಹೇಳಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ವಿ-ಡೆಮ್ ಅಧ್ಯಯನದ ಪ್ರಕಾರ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಭಾರತವು 97ನೇ ಸ್ಥಾನ ಪಡೆದಿದೆ. ಚುನಾವಣಾ ಪ್ರಜಾತಂತ್ರದಲ್ಲಿ 108ನೇ ಸ್ಥಾನ ಪಡೆದಿದೆ. ಸಮಾನತೆಯ ಸೂಚ್ಯಂಕದಲ್ಲಿ 123ನೇ ಸ್ಥಾನ ಪಡೆದಿದೆ.

ಪ್ರಪಂಚದ ಕೆಲವು ದೇಶಗಳು 10 ವರ್ಷಗಳಲ್ಲಿ (2012ರಿಂದ 2022) ಪ್ರಜಾಪ್ರಭುತ್ವದಿಂದ ನಿರಂಕುಶ ಆಳ್ವಿಕೆ ಕಡೆಗೆ ಚಲಿಸಿರುವುದನ್ನು ಕೆಳಗಿನ ಬಾಕ್ಸ್ ಅಲ್ಲಿ ಕಾಣಬಹುದು. ಬಾಕ್ಸ್ ಮಧ್ಯೆ ರೇಖೆಯ ಕೆಳಗಿರುವ ದೇಶಗಳು ಹೆಚ್ಚು ನಿರಂಕುಶಗೊಂಡಿರುವ ದೇಶಗಳಾಗಿವೆ. ಪ್ರತಿ ದೇಶಗಳ ಸ್ಥಾನ 2012ರಲ್ಲಿ ಏನಾಗಿತ್ತು 2022ರಲ್ಲಿ ಏನಾಗಿದೆ ಎಂದು ತಿಳಿಯುತ್ತದೆ.

ದೇಶಗಳು ಸಂಪೂರ್ಣ ನಿರಂಕುಶಾಧಿಕಾರ ಆದ ನಂತರ ಭಾರತವನ್ನು ಒಳಗೊಂಡಂತೆ ಕೆಲವು ದೇಶಗಳಲ್ಲಿ ನಿರಂಕುಶ ಪ್ರಕ್ರಿಯೆ ಗಣನೀಯವಾಗಿ ಕಡಿಮೆ ಆಗುತ್ತದೆ ಅಥವಾ ಸ್ಥಗಿತಗೊಳ್ಳುತ್ತದೆ ಎಂದು ವಿ-ಡೆಮ್ ವರದಿ ಒಪ್ಪಿಕೊಳ್ಳುತ್ತದೆ. ಆದರೆ ಅದು ಈಗಲೇ ಅಲ್ಲ.

ವಿ-ಡೆಮ್ ವರದಿಯು ನಿರಂಕುಶ ಪ್ರಭುತ್ವದ ಹಲವು ಗುಣಲಕ್ಷಣಗಳನ್ನು ಪಟ್ಟಿ ಮಾಡಿದೆ. ಆದರೆ ಎಲ್ಲಾ ನಿರಂಕುಶ ದೇಶಗಳು ಮಾಧ್ಯಮಗಳ ಮೇಲೆ ನಿರ್ಬಂಧ ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಮೇಲೆ ದಮನ, ಇವೆರಡರಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಚರಣೆ ನಡೆಸಿದೆ. ಇಂಡೋನೆಷ್ಯಾ, ರಷ್ಯಾ ಮತ್ತು ಉರುಗ್ವೆ ದೇಶಗಳು ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಲವು ಬಾರಿ ಕಸಿದುಕೊಂಡಿದೆ.

ವಿ-ಡೆಮ್ ವರದಿಯ ವಿಶ್ಲೇಷಣೆಗಳು, ಬಳಸಿದ ಮಾನದಂಡಗಳು ದೇಶಗಳು ನಿರಂಕುಶಗೊಳ್ಳುತ್ತಿರುವುದನ್ನು ಪುಷ್ಟೀಕರಿಸಿದೆ. ಸುಳ್ಳು ಪ್ರಚಾರ, ದ್ರುವೀಕರಣ ಮತ್ತು ನಿರಂಕುಶ ಆಳ್ವಿಕೆಯನ್ನು ಬಲಪಡಿಸುವುದು ಎಲ್ಲಾ ದೇಶಗಳು ಮಾಡುತ್ತಿವೆ. ಪ್ರಜಾಪ್ರಭುತ್ವದ ಸ್ಥಾಪನೆ ಉತ್ತಮವಾಗಿರುವ ದೇಶದಲ್ಲಿ ಸುಳ್ಳು ಪ್ರಚಾರ, ದ್ರುವೀಕರಣ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಸಾಧ್ಯವಾಗಿದೆ. ಅಂತಹ ಉದಾಹರಣೆಗಳು ಎಂದರೆ ಡೊಮಿನಿಕನ್ ರಿಪಬ್ಲಿಕ್, ಗ್ಯಾಂಬಿಯಾ, ಸೀಶೆಲ್ಸ್ (ಆಫ್ರಿಕಾ ಖಂಡದಲ್ಲಿ ಬರುವ ಪುಟ್ಟ ದೇಶ). ಪ್ರತಿಯೊಂದು ದೇಶವು ‘ನಾಗರಿಕರನ್ನು ಮುನ್ನಡೆಸಲು’ ಸುಳ್ಳು ಪ್ರಚಾರವನ್ನು ಸಾಧನವಾಗಿ ಬಳಸಿಕೊಂಡಿದ್ದಾರೆ. ರಾಜಕೀಯ ದ್ರುವೀಕರಣ ಹೆಚ್ಚು ಮಾಡಲು ಸುಳ್ಳು ಪ್ರಚಾರವನ್ನು ನಿರಂಕುಶ ಆಡಳಿತವು ಸತತವಾಗಿ ಬಳಸಿಕೊಂಡಿದೆ. ಈ ರೀತಿ ನಿರಂಕುಶ ಆಳ್ವಿಕೆ ಗೊಂಡಿರುವ/ಗೊಳ್ಳುತ್ತಿರುವ ಸಾಲಿನಲ್ಲಿ ಅಪ್ಘಾನಿಸ್ತಾನ, ಭಾರತ, ಬ್ರೆಜಿಲ್, ಮಯನ್ಮಾರ್ ಅಂತಹ ದೇಶಗಳನ್ನು ಕಾಣಬಹುದು. ಈ ದೇಶದಲ್ಲಿ ರಾಜಕೀಯ ದ್ರುವೀಕರಣವು ಅತ್ಯಂತ ನಾಟಕೀಯವಾಗಿ ಹೆಚ್ಚಾಗಿದ್ದನ್ನು ನಾವು ಕಾಣುತ್ತೇವೆ.

ವಿ-ಡೆಮ್ ವರದಿಯು ತನ್ನ ವರದಿಯ ಕೊನೆಯಲ್ಲಿ ತಿಳಿಸಿದ ಮತ್ತೊಂದು ವಿಚಾರವೆಂದರೆ ಎಲ್ಲವು ನಾಶವಾಗಿಲ್ಲ. ಕೆಲವು ದೇಶಗಳು ಇನ್ನು ಹೆಚ್ಚು ಪ್ರಜಾಪ್ರಭುತ್ವದ ಕಡೆ ಸಾಗುತ್ತಿದೆ. ಅಂತಹ ಕೆಲ ದೇಶಗಳು ಅಂದರೆ ಬಲ್ಗೇರಿಯಾ, ದಿ ಜೆಕ್ ರಿಪಬ್ಲಿಕ್, ಮಾಲ್ಡೋವಾ, ಡೊಮಿನಿಕನ್ ರಿಪಬ್ಲಿಕ್, ಗ್ಯಾಂಬಿಯಾ, ಮಾಲಾವಿ. ಕಡಿಮೆ ಮಟ್ಟಕ್ಕೆ ಮಾಲ್ಡೀವ್ಸ್, ಉತ್ತರ ಮ್ಯಾಸಿಡೋನಿಯಾ, ಸ್ಲೊವೆನಿಯಾ ದೇಶಗಳು ಸಕರಾತ್ಮವಾಗಿ ಪ್ರಜಾಪ್ರಭುತ್ವದ ಕಡೆ ತಿರುವು ಪಡೆದಿದೆ.

ಜಾಗತಿಕವಾಗಿ ಆರ್ಥಿಕ ಶಕ್ತಿಯ ಬಲಾಬಲಗಳಲ್ಲಿ ಬದಲಾವಣೆ ಆಗುತ್ತಿದೆ. ವಿಶ್ವ ವ್ಯಾಪಾರದಲ್ಲಿ ದೇಶ ದೇಶಗಳ ನಡುವೆ ಇದ್ದ ಆಂತರಿಕ ಸ್ನೇಹ ಕುಸಿದಿದೆ. ಇದು 1998ರಲ್ಲಿ 74% ಇದ್ದದ್ದು 2022ಕ್ಕೆ 47%ಗೆ ಕುಸಿದಿದೆ ಎಂದು ವಿ-ಡೆಮ್ ತಿಳಿಸಿದೆ. ಪ್ರಪಂಚದ 46% ಜಿಡಿಪಿ ನಿರಂಕುಶ ದೇಶಗಳಿಂದ ಬರುತ್ತಿದೆ ಹಾಗೂ ಕಳೆದ ಮೂರು ದಶಕಗಳಲ್ಲಿ ಪ್ರಜಾಪ್ರಭುತ್ವವಾದಿ ದೇಶಗಳು ನಿರಂಕುಶ ದೇಶಗಳ ಮೇಲೆ ಅವಲಂಬನೆ ಆಗಿರುವುದು ಎರಡು ಪಟ್ಟು ಹೆಚ್ಚಾಗಿದೆ. ಪ್ರಜಾಪ್ರಭುತ್ವವಾದಿ ದೇಶಗಳು ವ್ಯಾಪಾರಕ್ಕಾಗಿ ನಿರಂಕುಶ ದೇಶಗಳ ಮೇಲೆ ಅವಲಂಬನೆ ಆಗಿರುವುದು ಪ್ರಜಾಪ್ರಭುತ್ವ ರಕ್ಷಣೆಯ ವಿಚಾರವಾಗಿ ಹೊರಹೊಮ್ಮಿದೆ. ನಿರಂಕುಶ ದೇಶಗಳಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಆಗಬೇಕು. ಇಲ್ಲವಾದಲ್ಲಿ ಭವಿಷ್ಯದ ಜಗತ್ತು ದೊಡ್ಡ ವಿನಾಶಕ್ಕೆ ತುತ್ತಾಗಲಿದೆ.

ಮೂಲ: ದಿ ವೈರ್
ಲೇಖನ: ವಸುಂಧರಾ ಸಿರ್ನೇಟ್
ಅನುವಾದ: ಸಂಜಯ್

ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನು ಬೆದರಿಸಲು ಸಾವಿರಕ್ಕೂ ಹೆಚ್ಚು IT, ED, CBI ಅಧಿಕಾರಿಗಳು ಕರ್ನಾಟಕಕ್ಕೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...