ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿಯ ಕನ್ಸಾಲ್ ಮತ್ತು ನಯಾಗಾಂವ್ ಟಿ-ಪಾಯಿಂಟ್‌ನಲ್ಲಿ ಸ್ಪೋಟಕ ಬಾಂಬ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಪತ್ತೆಯಾದ ಪ್ರದೇಶವು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದಿಂದ 2 ಕಿಮೀಗಿಂತ ಹತ್ತಿರದಲ್ಲಿದ್ದು, ಅವರು ಬಳಸುತ್ತಿದ್ದ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿದೆ ಎಂದು ಎನ್ನಲಾಗಿದೆ.
ಸಂಜೆ 4 ರಿಂದ 4:30ರ ಸುಮಾರಿಗೆ ಹೆಲಿಪ್ಯಾಡ್ ಮತ್ತು ಪಂಜಾಬ್ ಮುಖ್ಯಮಂತ್ರಿಯವರ ನಿವಾಸದ ಬಳಿಯ ಮಾವಿನ ತೋಟದಲ್ಲಿ ಬಾಂಬ್ ಪತ್ತೆಯಾಗಿದ್ದು, ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಕೂಡ ತನಿಖೆಗಾಗಿ ನಿಯೋಜಿಸಲಾಗಿದೆ.
ಮಾಹಿತಿ ಪಡೆದ ನಂತರ ಮೊಹಾಲಿ ಮತ್ತು ಚಂಡೀಗಢ ಎರಡೂ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿವೆ. ಈ ಸಮಯದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದಲ್ಲಿ ಇರಲಿಲ್ಲ.
ಸ್ಪೋಟಕದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದೇವೆ. ಅದು ಜೀವಂತ ಬಾಂಬ್ ಎಂದು ತಿಳಿದುಬಂದಿದ್ದು, ಅದು ಇಲ್ಲಿಗೆ ಬಂದಿದ್ದೇಗೆ ಎಂಬುದರ ಕುರಿತು ಹೆಚ್ಚಿನ ತನಿಖೆಗೆ ಮುಂದಾಗಿದ್ದೇವೆ. ಸುತ್ತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಸೇನೆಯೂ ಸುತ್ತುವರಿದಿದೆ ಎಂದು ಚಂಡೀಗಢ ಆಡಳಿತದ ನೋಡಲ್ ಅಧಿಕಾರಿ ಕುಲದೀಪ್ ಕೊಹ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ಒಪ್ಪದ ಸಹಪಾಠಿಯನ್ನು ಕೊಂದು, ತನಗೂ ಚಾಕುವಿನಿಂದ ಇರಿದುಕೊಂಡ ವಿದ್ಯಾರ್ಥಿ


