Homeಮುಖಪುಟನ್ಯಾಷನಲ್ ಎಕ್ಸಿಟ್ ಟೆಸ್ಟ್ ಎಂಬ ಮತ್ತೊಂದು ಹುಚ್ಚಾಟ!

ನ್ಯಾಷನಲ್ ಎಕ್ಸಿಟ್ ಟೆಸ್ಟ್ ಎಂಬ ಮತ್ತೊಂದು ಹುಚ್ಚಾಟ!

- Advertisement -
- Advertisement -

ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ನ್ಯಾಷನಲ್ ಎಕ್ಸಿಟ್ ಟೆಸ್ಟ್‌ಅನ್ನು (NEXT) ಜಾರಿಗೊಳಿಸುವ ಸಲುವಾಗಿ ರೂಪಿಸಿರುವ ನಿಯಮಗಳ ಕರಡನ್ನು ಡಿಸೆಂಬರ್ 28ರಂದು ಬಿಡುಗಡೆಗೊಳಿಸಿ ಈ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಒಂದು ತಿಂಗಳ ಕಾಲಾವಕಾಶವನ್ನೂ ನೀಡಿತ್ತು. ಈ ಕರಡು ದಸ್ತಾವೇಜನ್ನು ಸರ್ಕಾರವು ಬಿಡುಗಡೆಗೊಳಿಸಿರುವ ಬಗ್ಗೆ ಒಂದಷ್ಟು ಮಾಧ್ಯಮಗಳು ಸುದ್ದಿ ಮಾಡಿದ್ದು ಬಿಟ್ಟರೆ, ಈ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಚರ್ಚೆಗಳು ನಡೆಯಲೇ ಇಲ್ಲ.

ಏನಿದು ನ್ಯಾಷನಲ್ ಎಕ್ಷಿಟ್ ಟೆಸ್ಟ್?

ವೈದ್ಯಕೀಯ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳನ್ನು ಒಂದೇ ಮಾದರಿಯ ಮೌಲ್ಯಮಾಪನಕ್ಕೆ ಒಳಪಡಿಸುವ ಮೂಲಕ, ಕನಿಷ್ಟ ಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ಅವರು ಹೊಂದಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಈ ಪರೀಕ್ಷೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಬಿಡುಗಡೆಗೊಳಿಸಿದ್ದ ದಸ್ತಾವೇಜಿನಲ್ಲಿ ನಮೂದಿಸಲಾಗಿದೆ.

ದೇಶದ ವೈದ್ಯಕೀಯ ವ್ಯವಸ್ಥೆಯ ಕನಿಷ್ಟ ಗುಣಮಟ್ಟವನ್ನು ಕಾಯ್ದುಕೊಳ್ಳಲು ತರಲಾಗಿರುವ ಈ ಪರೀಕ್ಷೆಯ ಕೆಲವು ವಿವರಗಳನ್ನು ಗಮನಿಸೋಣ.

ನ್ಯಾಷನಲ್ ಎಕ್ಸಿಟ್ ಟೆಸ್ಟ್ ಎರಡು ಪ್ರಮುಖ ರೀತಿಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದು, ಆಧುನಿಕ ವೈದ್ಯ ಪದ್ಧತಿಯನುಸಾರ (ಇದಕ್ಕೆ ಸಾಮಾನ್ಯವಾಗಿ ’ಅಲೋಪತಿ’ ಎಂದು ಕರೆಯಲಾಗುವುದಾದರೂ, ಇದು ತಪ್ಪು ಪದಪ್ರಯೋಗವಾಗಿದೆ) ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಎಲ್ಲರೂ (ಅವರು ತಮ್ಮ ವೈದ್ಯಕೀಯ ವ್ಯಾಸಂಗವನ್ನು ವಿದೇಶದಲ್ಲಾಗಲೀ ಅಥವಾ ಭಾರತದಲ್ಲಾಗಲೀ ಪಡೆದುಕೊಂಡಿರಲಿ) ತಮ್ಮ ಪರವಾನಗಿಯನ್ನು ಪಡೆಯಲು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಿರಬೇಕು. ಎರಡು, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಕೂಡ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಪಾಸು ಮಾಡಿರಬೇಕು. ಇದರಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನೇ ಆಧರಿಸಿಯೇ ರ್‍ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುವುದು.

ಅಂದರೆ, ಎಂಬಿಬಿಎಸ್ ಪದವಿಯನ್ನು ಪಡೆಯಲು; ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಿರುವ ಪರವಾನಗಿ ಪಡೆದುಕೊಳ್ಳಲು; ಹಾಗೂ ಉನ್ನತ ಶಿಕ್ಷಣದ ಪ್ರವೇಶಾತಿ ಪಡೆಯಲು ಹೀಗೆ, ಮೂರು ವಿವಿಧ ಉದ್ದೇಶಗಳಿಗೆ ಒಂದೇ ಪರೀಕ್ಷೆ! ಇಂತಹ ಸಿನಿಕತನವನ್ನು ಎಲ್ಲಾದರೂ ಕೇಳಿದ್ದೀರ?

ಇದನ್ನು ದೇಶದ ಮತ್ತೊಂದು ವೃತ್ತಿಪರ ಶಿಕ್ಷಣ ಕ್ಷೇತ್ರದೊಂದಿಗೆ ಹೋಲಿಕೆ ಮಾಡಿ ನೋಡಿದರೆ ಇದು ಇನ್ನಷ್ಟೂ ಸ್ಪಷ್ಟವಾಗಲಿದೆ. ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಎಲ್‌ಎಲ್‌ಬಿ ಪದವಿ ಪಡೆದುಕೊಳ್ಳುತ್ತಾರೆ ಮತ್ತು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಬಾರ್ ಕೌನ್ಸಿಲ್ ಎಕ್ಸಾಮ್‌ಅನ್ನು ಪಾಸು ಮಾಡಬೇಕು. ಎಲ್‌ಎಲ್‌ಎಂ ಪದವಿ ಪ್ರವೇಶಾತಿಗಾಗಿ ಸಿ.ಎಲ್.ಎ.ಟಿ ಪರೀಕ್ಷೆಯನ್ನು ಪಾಸು ಮಾಡಬೇಕು. ಅದರೆ, ಈ ಮೂರು ಪರೀಕ್ಷೆಗಳ ಬದಲಿಗೆ ಒಂದೇ ಪರೀಕ್ಷೆ ನಡೆಸಿದರೆ ಹೇಗೆ? ಇದನ್ನೇ ನ್ಯಾಷನಲ್ ಎಕ್ಸಿಟ್ ಟೆಸ್ಟ್ ವೈದ್ಯಕೀಯ ಶಿಕ್ಷಣದಲ್ಲಿ ಮಾಡಹೊರಟಿರುವುದು.

ಹೇಗಿರಲಿದೆ ಪರೀಕ್ಷೆ?

ನ್ಯಾಷನಲ್ ಎಕ್ಸಿಟ್ ಟೆಸ್ಟ್‌ನಲ್ಲಿ ಎರಡು ಹಂತಗಳಿರಲಿದ್ದು, ಹಂತ 1ರಲ್ಲಿ ಅಂತಿಮ ಎಂ.ಬಿ.ಬಿ.ಎಸ್‌ನ ಕೊನೆಯ ನಾಲ್ಕು ಸೆಮಿಸ್ಟರುಗಳ ವಿಷಯಗಳನ್ನು ಆಧರಿಸಿದ ಬಹು ಆಯ್ಕೆ ಪ್ರಶ್ನೆಗಳಿರಲಿದೆ. ಇದರಲ್ಲಿ ಫೇಲಾಗಿಬಿಟ್ಟರೆ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳ ನಂತರ ಮತ್ತೊಮ್ಮೆ ಈ ಪರೀಕ್ಷೆಯನ್ನು ನೀಡುವ ಅವಕಾಶವಿರುತ್ತದೆ. ಅದರಲ್ಲೂ ಫೇಲಾದರೆ ಅವರು ಮತ್ತೊಮ್ಮೆ ಒಂದು ವರ್ಷ ಕಾಯಬೇಕಿರುತ್ತದೆ. ಇದನ್ನು ಪಾಸಾದರೆ ಮಾತ್ರವೇ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯ. ತಮ್ಮ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಬಳಿಕ, ಪರೀಕ್ಷೆಯ ಹಂತ 2ರಲ್ಲಿಯೂ ಕೂಡ ವಿದ್ಯಾರ್ಥಿಗಳು ಪಾಸಾಗಬೇಕು. ಹಂತ 2 ಪ್ರಾಕ್ಟಿಕಲ್ ಪರೀಕ್ಷೆಯಾಗಿರಲಿದೆ ಮತ್ತು ಇದರಲ್ಲಿ ವಿದ್ಯಾರ್ಥಿಗಳು ವೈದ್ಯ ವೃತ್ತಿಗೆ ಅಗತ್ಯವಾಗಿ ಬೇಕಾದ ಕೆಲವು ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಹಂತದಲ್ಲಿ ಅಂಕಗಳನ್ನು ನೀಡಲಾಗುವುದಿಲ್ಲ. ಬದಲಿಗೆ, ವಿದ್ಯಾರ್ಥಿಗಳು ಈ ಕೌಶಲ್ಯಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನಷ್ಟೇ ಪರೀಕ್ಷಿಸಲಾಗುತ್ತದೆ.

ಇದನ್ನೂ ಓದಿ: ಗೌರಿ ಕೊಲೆಯೂ, ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂಬ ಕರೆಯೂ..

ಹೀಗೆ, ಪರೀಕ್ಷೆಗೆ ಒಳಪಡುವ ಮತ್ತು ಒಳಪಡದಿರುವ ವಿಷಯಗಳ ಬಗ್ಗೆಯೂ ತಜ್ಞರು ಈಗಾಗಲೇ ದನಿಯೆತ್ತಿದ್ದಾರೆ. ಪ್ರತಿಷ್ಠಿತ ವೆಲ್ಲೂರಿನ ಸಿ.ಎಂ.ಸಿ ಕಾಲೇಜಿನ ಬಯೋಕೆಮಿಸ್ಟ್ರಿ ವಿಷಯದ ಸಹ ಪ್ರಾಧ್ಯಾಪಕರಾದ ಪದ್ಮನಾಭನ್ ಮತ್ತು ಮುತ್ತುರಾಮನ್ ಅವರು ದಿ ವೈರ್‌ಗಾಗಿ ಬರೆದ ತಮ್ಮ ಲೇಖನದಲ್ಲಿ, ’ಈ ಪರೀಕ್ಷೆಯಲ್ಲಿ ಕೇವಲ ಕ್ಲಿನಿಕಲ್ ಮತ್ತು ನಾನ್-ಕ್ಲಿನಿಕಲ್ ವಿಷಯಗಳಲ್ಲಿನ ಅಪ್ಲೈಡ್ ವಿಚಾರಗಳಿಗೆ ಸಂಬಂಧಿಸಿದಂತೆ ಮಾತ್ರವೇ ಈ ಪರೀಕ್ಷೆ ನಡೆಯಲಿದ್ದು, ಸೋಶಿಯಲ್ ಮತ್ತು ಪ್ರಿವೆಂಟಿವ್ ಮಡೆಸಿನ್‌ಗಳಂತಹ ಅಗತ್ಯ ವಿಷಯಗಳನ್ನು ಕಡೆಗಣಿಸುತ್ತದೆ ಮತ್ತು ಇವು ವೈದ್ಯರೆಲ್ಲರೂ ತಿಳಿದಿರಬೇಕಾದ ವಿಷಯಗಳಾಗಿವೆ’ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೇ ನಾನ್-ಕ್ಲಿನಿಕಲ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಹೆಚ್ಚಿರುವಾಗ, ಆ ವಿಷಯವನ್ನೇ ಮೂಲೆಗುಂಪು ಮಾಡಿರುವುದು ಸರಿಯಲ್ಲ ಎಂದು ಅವರು ವಿವರಿಸಿದ್ದಾರೆ.

ಹಾಗಿದ್ದರೆ ಈ ಪರೀಕ್ಷೆಯನ್ನು ನಡೆಸುವುದು ಯಾರು?

ಈವರೆಗೂ, ಎಂ.ಬಿ.ಬಿ.ಎಸ್ ಪದವಿಯನ್ನು ಪಡೆಯಲು 9ನೇ ಸೆಮಿಸ್ಟರ್‌ನ ಅಂತ್ಯದಲ್ಲಿ ಅಂತಿಮ ಪರೀಕ್ಷೆಯ ಭಾಗ 2ಅನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಸಲಾಗುತ್ತಿತ್ತು. ಅದರ ಬದಲಿಗೆ, ಈಗ ರಾಷ್ಟ್ರಮಟ್ಟದ ಪರೀಕ್ಷೆ ನಡೆಯಲಿದೆ ಎಂಬುದು ಸ್ಪಷ್ಟವಾಗಿದ್ದರೂ, ಈ ಪರೀಕ್ಷೆಯನ್ನು ನಡೆಸುವವರು ಯಾರು ಎಂಬ ಸ್ಪಷ್ಟತೆಯಿರಲಿಲ್ಲ. ಆದರೆ, ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಅಮೆಂಡೆಮೆಂಟ್) ಬಿಲ್ 2022 ಕರಡನ್ನೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡಿಸೆಂಬರಿನಲ್ಲಿ ಬಿಡುಗಡೆಗೊಳಿಸಿತ್ತು. ಇವೆರಡೂ ದಸ್ತಾವೇಜುಗಳನ್ನು ಜೊತೆಯಲ್ಲಿ ಓದಿಕೊಂಡಾಗ ಈ ಪರೀಕ್ಷೆಯನ್ನು ನಡೆಸಲು ’ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್’ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಮಸೂದೆ ಜಾರಿಯಾದಲ್ಲಿ ನ್ಯಾಷನಲ್ ಎಕ್ಸಿಟ್ ಟೆಸ್ಟ್‌ಅನ್ನು ಹೊಸದಾಗಿ ಸ್ಥಾಪನೆಯಾಗಲಿರುವ ಬೋರ್ಡು ನಡೆಸಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಪರೀಕ್ಷೆಯನ್ನು ಯಾರು ನಡೆಸಿದರೇನು?

ಇದು ವೈದ್ಯಕೀಯ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದರೂ ಇತರೆ ರಾಷ್ಟ್ರೀಯ ಪರೀಕ್ಷೆಗಳಿಗೆ ಅನ್ವಯಿಸುವ ರೀತಿಯ ತೊಂದರೆಗಳು ಇದರಲ್ಲಿಯೂ ಕಂಡುಬರಲಿದೆ.

ಮೊದಲನೆಯದಾಗಿ, ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಪರೀಕ್ಷೆಯಿಂದಾಗಿ ರಾಜ್ಯಗಳು ಹಾಗೂ ವಿಶ್ವವಿದ್ಯಾಲಯಗಳು ತಮ್ಮ ರಾಜ್ಯದ ಅಥವಾ ಪ್ರದೇಶದ ವೈದ್ಯಕೀಯ ಸ್ಥಿತಿ-ಗತಿಗಳನ್ನು ಆಧರಿಸಿ, ಅದರ ಅಗತ್ಯಗಳಿಗೆ ತಕ್ಕಂತೆ ವೈದ್ಯಕೀಯ ಶಿಕ್ಷಣವನ್ನು ರೂಪಿಸುವ ಹಕ್ಕನ್ನು ಇದು ಮೊಟಕುಗೊಳಿಸುತ್ತದೆ. ಅದರಲ್ಲಿಯೂ ಮುಖ್ಯವಾಗಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪಡೆದುಕೊಳ್ಳಲು ಈ ಪರೀಕ್ಷೆಯನ್ನು ಪಾಸು ಮಾಡಲೇಬೇಕಾದ ಕಾರಣದಿಂದಾಗಿ, ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮವನ್ನು ಈ ಪರೀಕ್ಷೆಯನ್ನೇ ಮನದಲ್ಲಿರಿಸಿ ರೂಪಿಸಲು ಮುಂದಾಗುತ್ತವೆ. ಈ ಕ್ರಮವು ಜಾರಿಗೊಂಡಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ, ರಾಜ್ಯ ಸರ್ಕಾರದ ಕಾಲೇಜುಗಳಲ್ಲಿರುವ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲೂ ರಾಜ್ಯಗಳ ಪಾತ್ರವೇ ಇಲ್ಲದಂತಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಈಗಾಗಲೇ ನ್ಯಾಷನಲ್ ಎಕ್ಸಿಟ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ.

ಎಂ.ಕೆ ಸ್ಟಾಲಿನ್

ಸ್ವತಃ ಕರ್ನಾಟಕ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿರುವ ಬಿ.ಎಲ್ ಸುಜಾತ ರಾಥೋಡ್ ಅವರು ’ದಿ ಹಿಂದೂ’ ಪತ್ರಿಕೆಗಾಗಿ ನೀಡಿರುವ ಹೇಳಿಕೆಯೂ ಇದನ್ನು ಪುಷ್ಟೀಕರಿಸುವಂತಿದೆ: “ನ್ಯಾಷನಲ್ ಎಕ್ಸಿಟ್ ಟೆಸ್ಟ್ ಜಾರಿಗೊಂಡ ನಂತರ, ಇದು ಡಿಸೆಂಬರ್‌ನಿಂದ ಜಾರಿಗೊಳ್ಳುವ ಸಾಧ್ಯತೆಯಿದ್ದು, ಸ್ನಾತಕೋತ್ತರ ಹಂತದ ವೈದ್ಯಕೀಯ ಶಿಕ್ಷಣ ಸೀಟು ಹಂಚಿಕೆಯಲ್ಲಿ, ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಹಾಗೂ ಶುಲ್ಕ ನಿರ್ಧರಿಸುವಲ್ಲಿ ರಾಜ್ಯಗಳ ಪಾತ್ರವು ಅತ್ಯಂತ ಕಡಿಮೆಯಿರಲಿದೆ. ಸದ್ಯ, ಸ್ನಾತಕೋತ್ತರ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ನಡೆಸುತ್ತಿದ್ದು, ರಾಷ್ಟ್ರೀಯ ಎಕ್ಸಿಟ್ ಪರೀಕ್ಷೆಯೊಂದಿಗೆ ಇಡೀ ಪ್ರಕ್ರಿಯೆಯನ್ನು ’ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮಡೆಕಲ್ ಸೈನ್ಸಸ್’ ಆನ್‌ಲೈನ್‌ನಲ್ಲಿ ನಡೆಸುತ್ತದೆ. ಇಡೀ ಪ್ರಕ್ರಿಯೆಯು ಕೇಂದ್ರೀಕೃತವಾಗಿ, ಆನ್‌ಲೈನ್ ಮೂಲಕ ನಡೆಯಲಿದೆ” ಎಂದಿದ್ದಾರೆ.

ಮೇಲುನೋಟಕ್ಕೆ ಇದು ಸೀಟು ಹಂಚಿಕೆಯ ತೊಂದರೆಯಾಗಿ ಕಂಡುಬಂದರೂ, ಆಳದಲ್ಲಿ ಇದು ಇನ್ನಷ್ಟೂ ಗಂಭೀರವಾಗಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಭದ್ರ ಬುನಾದಿ ಹಾಕಬೇಕಿರುವ ವೈದ್ಯಕೀಯ ಶಿಕ್ಷಣ ಕ್ಷೇತ್ರವು ಅತ್ಯಂತ ಹೆಚ್ಚು ಬಂಡವಾಳವನ್ನು ಬೇಡುತ್ತದೆ. ಲಾಭವನ್ನೇ ಮನದಲ್ಲಿರಿಸಿಕೊಳ್ಳುವ ಖಾಸಗಿ ಕ್ಷೇತ್ರವು ಇಷ್ಟು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗದ ಕಾರಣ (ಲಾಭದಾಯಕವೆನಿಸುವ ವೈದ್ಯಕೀಯ ರಂಗದಲ್ಲಿನ ಕೆಲವೇ ಕೆಲವು ವಿಚಾರಗಳಿಗೆ ಮಾಡಬಹುದಷ್ಟೇ) ಇದನ್ನು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳೇ ಕೂಡಿ ಭರಿಸಬೇಕಿದೆ. ಎರಡೂ ಸರ್ಕಾರಗಳು ಈ ಕ್ಷೇತ್ರಕ್ಕೆ ಬಂಡವಾಳ ಹೂಡುತ್ತಿದ್ದರೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಗತ್ಯತೆಯ ಅರ್ಧದಷ್ಟು ಹಣವನ್ನೂ ಒದಗಿಸಲಾಗುತ್ತಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರಗಳು ಹೆಚ್ಚೆಚ್ಚು ಹೂಡಿಕೆ ಮಾಡುವಂತೆ ಒಕ್ಕೂಟ ಸರ್ಕಾರ ಉತ್ತೇಜಿಸಬೇಕಿತ್ತು. ಆದರೆ, ತಮ್ಮ ಜಾಗವನ್ನು ನೀಡಿ, ಕಾಲೇಜು-ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಅದಕ್ಕಾಗಿಯೇ ಬಹಳಷ್ಟು ವೆಚ್ಚವನ್ನು ಭರಿಸುತ್ತಿರುವ ರಾಜ್ಯಗಳಿಗೆ ಪ್ರವೇಶಾತಿಯಲ್ಲಿ ಮಾತ್ರ ಯಾವುದೇ ಪಾತ್ರವಿಲ್ಲದಿದ್ದರೆ ರಾಜ್ಯಗಳು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನೇ, ಕಾಲೇಜು-ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ವಿಚಾರವನ್ನೇ ಕೈಬಿಡುವ ಸಾಧ್ಯತೆಗಳಿವೆ. ಹಾಗೇನಾದರೂ ಆದಲ್ಲಿ, ಈಗಿರುವ ಅಷ್ಟಿಷ್ಟೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಪಾಳು ಬೀಳುತ್ತವೆ ಮತ್ತು ಅವುಗಳ ಸ್ಥಾನವನ್ನು ಖಾಸಗಿ ಕಾಲೇಜುಗಳೇ ಆಕ್ರಮಿಸಿಕೊಳ್ಳಲಿವೆ. ಅಂದರೆ, ಈಗಲೇ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟುಕದ ವೈದ್ಯಕೀಯ ಶಿಕ್ಷಣ ಇನ್ನಷ್ಟೂ ನಿರ್ದಿಷ್ಟವಾಗಿ ಧನಿಕರ, ಮೇಲ್ಜಾತಿ-ಮೇಲ್ವರ್ಗಗಳ ಸೊತ್ತಾಗುತ್ತದೆ. ಇದು ದೇಶದ ಆರೋಗ್ಯ ವ್ಯವಸ್ಥೆಯ ಕುಸಿತಕ್ಕೆ ಮತ್ತಷ್ಟು ಕೊಡುಗೆ ನೀಡುವ ಸಂಭವವಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಯಾವುದೇ ರಾಷ್ಟ್ರೀಯ ಮಟ್ಟದ ಪರೀಕ್ಷೆ ಜಾರಿಗೊಂಡಾಗಲೂ ಅದಕ್ಕಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ’ಕೋಚಿಂಗ್ ಸೆಂಟರ್’ಗಳ ಹಾವಳಿ ಹೆಚ್ಚಾಗುತ್ತಲೇ ಸಾಗುತ್ತವೆ. ಅದರಲ್ಲೂ ಬಹು ಆಯ್ಕೆಯ ಪ್ರಶ್ನೆಗಳನ್ನೇ ಹೊಂದಿರುವ ಪರೀಕ್ಷೆಯಲ್ಲಿ ಇದು ಇನ್ನೂ ದೊಡ್ಡ ಕಂಟಕವಾಗಿ ಕಾಡಲಿದೆ.

ಇವೆಲ್ಲವನ್ನು ಬದಿಗೊತ್ತಿ ಒಂದು ಸಲ ಯೋಚಿಸೋಣ. ತರಗತಿಯಲ್ಲಿ ಮಕ್ಕಳು ಕಲಿಯುತ್ತಿಲ್ಲ ಎಂದು ಕಂಡುಬಂದರೆ ಏನು ಮಾಡುತ್ತಾರೆ? ಒಂದು, ಮಕ್ಕಳು ಕಲಿಯಲು ಪೂರಕವಾದ ವಾತಾವರಣವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಲೇ ಕಲಿಕೆಗೆ ಅಗತ್ಯವಾದ (ಪುಸ್ತಕವೋ, ಪೆನ್ನೋ, ಪುಸ್ತಕಾಲಯವೋ) ಸಾಮಗ್ರಿ-ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಾರೆ. ಇಲ್ಲವೇ, ಅವರಿಗೆ ಪಾಠ ಮಾಡುತ್ತಿರುವ ಶಿಕ್ಷಕರು ತಮ್ಮ ಪಾಠದ ಶೈಲಿಯನ್ನು ಬದಲಿಸಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇಲ್ಲಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಮಾಡಲು ಹೊರಟಿರುವುದೇನು? ವಿದ್ಯಾರ್ಥಿಗಳು ಕನಿಷ್ಟ ಇಷ್ಟನ್ನಾದರೂ ಓದಿರಬೇಕೆಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇರುವ ಎಲ್ಲಾ ಮಾರ್ಗಗಳನ್ನು ಬಿಟ್ಟು (ಕಾಲೇಜುಗಳ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳನ್ನು ನಿಯಂತ್ರಿಸುವುದನ್ನು ಬಿಟ್ಟು) ಹೊಸ ಪರೀಕ್ಷೆಯನ್ನು ತರಲು ಹೊರಟಿದೆ. ಅದೇ ಶಿಕ್ಷಕರಿಲ್ಲದ ತರಗತಿಗಳಲ್ಲಿ, ಅದೇ ಎಕ್ವಿಪ್‌ಮೆಂಟ್‌ಗಳೇ ಇಲ್ಲದ ಲ್ಯಾಬುಗಳಲ್ಲಿ, ಎಕ್ಸಾಮುಗಳನ್ನು ಪಾಸು ಮಾಡಬೇಕೆಂಬ ಒತ್ತಡದಲ್ಲೇ ವಿದ್ಯಾರ್ಥಿಗಳು ಸದಾ ಸಿಲುಕಿರುವಾಗ, ಹೊಸ ಪರೀಕ್ಷೆ ಜಾರಿಗೆ ಬಂದ ಮಾತ್ರಕ್ಕೇ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತಿದ್ದೇವೆ ಎಂಬ ಒಣ ಘೋಷಣೆಯ ಹುಚ್ಚಾಟದ ಬಗ್ಗೆ ನಗು ಬರುವುದಿಲ್ಲವೇ?

ಶಶಾಂಕ್

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...