Homeಕರ್ನಾಟಕನಮ್ಮ ಸಚಿವರಿವರು; ನಿರಾಡಂಬರ ವ್ಯಕ್ತಿತ್ವದ ಕೃಷ್ಣಭೈರೇಗೌಡ

ನಮ್ಮ ಸಚಿವರಿವರು; ನಿರಾಡಂಬರ ವ್ಯಕ್ತಿತ್ವದ ಕೃಷ್ಣಭೈರೇಗೌಡ

- Advertisement -
- Advertisement -

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವನ್ನು ದಾಖಲಿಸಿದೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಣಾಹಣಿ ಸ್ಪರ್ಧೆಯಿಂದ ಕೇವಲ ಐದು ಸಾವಿರ ಮತಗಳಿಂದ ಗೆದ್ದಿದ್ದ ಕೃಷ್ಣಭೈರೇಗೌಡರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದು ನಿರಾಯಾಸವಾಗಿ ಗೆದ್ದಿದ್ದಾರೆ. ಈ ಬಾರಿ ಅವರಿಗೆ ಗೆಲುವು ಸುಲಭವಲ್ಲವೆಂದು ಅನೇಕ ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದರು. ಆದರೆ ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಫಲಿತಾಂಶ ಬಂದಿದೆ. ಕೃಷ್ಣಭೈರೇಗೌಡರು ಕ್ಷೇತ್ರದ ಜನರ ಸೇವೆ ಮಾಡಲು ಮತ್ತೊಮ್ಮೆ ಮುಂದಿನ ಐದು ವರ್ಷಗಳ ಕಾಲ ಅವಕಾಶ ಸಿಕ್ಕಿದೆ. ಹಿಂದಿನ ಅವಧಿಯಲ್ಲಿ ಒಬ್ಬ ಶಾಸಕ ಕ್ಷೇತ್ರಕ್ಕೆ ಮಾಡಬಹುದಾದ ಕೆಲಸಕಾರ್ಯಗಳನ್ನು ತಮ್ಮ ಶಕ್ತ್ಯಾನುಸಾರವಾಗಿ ಮಾಡಿದ್ದಾರೆ. ಹಾಗಾಗಿ 39000 ಕ್ಕಿಂತಲೂ ಅಧಿಕ ಮತಗಳ ಗೆಲುವು ದಾಖಲಾಗಿದೆ.

ಚುನಾವಣಾ ಅಧಿಕಾರಿಯಾಗಿ ಅವರ ಮನೆಯ ಸುತ್ತಮುತ್ತ ಚಲನವಲನವನ್ನು ಗಮನಿಸುವ ಸಲುವಾಗಿ ಓಡಾಡುತ್ತಿದ್ದಾಗ, ಪ್ರತಿ ಬಾರಿ ಅವರ ಮನೆ ಕಂಡುಹಿಡಿಯುವುದು ತ್ರಾಸದಾಯಕವಾಗಿತ್ತು. ಅವರ ಮನೆಯ ಮುಂದೆ ಬ್ಯಾನರ್, ಬಂಟಿಂಗ್, ಕಟೌಟ್ ಯಾವುದೂ ಕಾಣಿಸುತ್ತಿರಲಿಲ್ಲ. ಯಾವಾಗಲೂ ಅವರ ಮನೆಯ ಬಾಗಿಲು ತೆರೆದೇ ಇರುತ್ತಿತ್ತು. ಹೆಚ್ಚು ಕಾರ್ಯಕರ್ತರು ಕಾಣಿಸುತ್ತಿರಲಿಲ್ಲ. ನಾಲ್ಕಾರು ಜನ ಮಾತ್ರ ಅಲ್ಲಿರುತ್ತಿದ್ದರು. ಹೊಸದಾಗಿ ನೋಡುವವರಿಗೆ ಈ ದೃಶ್ಯ ವಿಚಿತ್ರವಾಗಿ ಕಾಣಿಸುತ್ತಿತ್ತು. ಒಬ್ಬ ಎಂ.ಎಲ್.ಎ ಎಂದರೆ, ಮನೆಯ ಸುತ್ತಮುತ್ತ ಜನಸಂದಣಿ ಇರಬೇಕೆಂದು ಬಯಸುವುದು ಸಹಜ. ಆದರೆ ಈ ರೀತಿಯ ವಾತಾವರಣ ನೋಡಿದಾಗ ಅಭ್ಯರ್ಥಿ ಬಹುಶಃ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು ಅಥವಾ ಈ ಚುನಾವಣೆಯಲ್ಲಿ ಆಸಕ್ತಿ ಇಲ್ಲದಿರಬಹುದು ಎಂದೆನಿಸುತ್ತದೆ; ಆದರೆ ಇವರ ರಾಜಕಾರಣವೇ ಬೇರೆ. ಚುನಾವಣೆಯ ನಾಮಿನೇಶನ್ ಸಲ್ಲಿಕೆ ಮಾಡಬೇಕಾದರೂ ಕೂಡ ಅವರ ತಾಯಿ ಮತ್ತು ಒಬ್ಬ ವಕೀಲರು ಇದ್ದರು. ಕೊನೆಯ ದಿನ ಮಾತ್ರ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಅವರ ಹರ್ಷೋದ್ಘಾರದ ಮಧ್ಯೆ ಬಂದುಹೋಗಿದ್ದು ಬಿಟ್ಟರೆ ಹೆಚ್ಚು ಆಡಂಬರ ಮಾಡಬೇಕು ಎಂಬ ಇರಾದೆ ಇವರಿಗೆ ಇರಲಿಲ್ಲ.

ಕರ್ನಾಟಕದ ರಾಜಕಾರಣದಲ್ಲಿ ಸರಳ, ಸಜ್ಜನ, ನಿರಾಡಂಬರ ವ್ಯಕ್ತಿತ್ವದ ರಾಜಕಾರಣಿ ಕೃಷ್ಣಭೈರೇಗೌಡರು. ವಿಧಾನಸಭೆಯಲ್ಲಿ ಅವರು ಮಾತಾಡಲು ನಿಂತುಕೊಂಡರೆ ನಿಶ್ಯಬ್ದತೆ ಇರುತ್ತದೆ. ಏಕೆಂದರೆ ಅವರ ಭಾಷಣ ಪೂರ್ವತಯಾರಿಯಿಂದ ಕೂಡಿರುತ್ತದೆ. ಬೇರೆ ಶಾಸಕರಿಗೆ ಆಸಕ್ತಿದಾಯಕವಾಗಿರುತ್ತದೆ. ಹಾಗಾಗಿ ಉಳಿದ ವಿಧಾನಸಭಾ ಸದಸ್ಯರು ಕೂಡ ಕಿವಿಗೊಟ್ಟು ಕೇಳುತ್ತಾರೆ. ವಿನಾಕಾರಣ ವಿರೋಧಪಕ್ಷದವರನ್ನು ಗುರಿಯಾಗಿಸಿ ಮಾತಾಡುವುದಿಲ್ಲ. ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಕೆಲಸವನ್ನು ತಾವು ಮಾಡಿಕೊಂಡು ಹೋಗುವ ಕೆಲವೇಕೆಲವು ರಾಜಕಾರಣಿಗಳಲ್ಲಿ ಕೃಷ್ಣಭೈರೇಗೌಡರು ಒಬ್ಬರು. ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟು ಪ್ರಾಮಾಣಿಕತೆಯಿಂದ ದುಡಿಯುವ ಇವರಿಗೆ ಜನಬೆಂಬಲ ಶ್ರೀರಕ್ಷೆಯಾಗಿದೆ. ಚುನಾವಣಾ ಪ್ರಚಾರದಲ್ಲಿ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಗಳ ಬಗ್ಗೆ ಮಾತ್ರ ಮತದಾರರಿಗೆ ಮಾಹಿತಿ ಕೊಡುತ್ತಿದ್ದರು. ವಿರೋಧಿಗಳ ಕುರಿತು ಹೆಚ್ಚು ಮಾತಾಡುತ್ತಿರಲಿಲ್ಲ. ಒಂದು ದಿನ ಕೊಡಿಗೆಹಳ್ಳಿಯ ಬೀದಿಯೊಂದರಲ್ಲಿ ತಾವು ಶಾಸಕರಾಗಿ ಮಾಡಿದ ಸಾಧನೆಗಳನ್ನು ಬಿಡಿಸಿ ಹೇಳುತ್ತಿದ್ದರು. ಅಷ್ಟರಲ್ಲಿ ಹಿಂದಿನಿಂದ ಯಾರೋ “ಬೋಲೋ ಭಾರತ್ ಮಾತಾಕಿ” ಎಂದು ಘೋಷಣೆ ಕೂಗಿ “ನೀವು ಏನೂ ಮಾಡಿಲ್ಲ, ಬನ್ನಿ” ಎಂದಾಗ ವೇದಿಕೆ ಮೇಲೆ ಕೂತಿದ್ದ ಇತರೆ ಕಾಂಗ್ರೆಸ್ ನಾಯಕರು ಅವನ ಕಡೆ ಧಾವಿಸಿ ಬಂದು ಅವನನ್ನು ಅಲ್ಲಿಂದ ಕಳುಹಿಸಿದರು. ಈ ಘಟನೆ ಸಂಭವಿಸಿದ ನಂತರ ತಮ್ಮ ಮಾತು ಮುಂದುವರಿಸಿದ ಕೃಷ್ಣಭೈರೇಗೌಡರು ಹಿಗ್ಗಾಮುಗ್ಗಾ ಅಂದಿನ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ಟೀಕೆಗಳನ್ನು ಮಾಡಲು ಪ್ರಾರಂಭಿಸಿದರು. ಇದು ಅರ್ಧ ಗಂಟೆಯವರೆಗೂ ಮುಂದುವರಿಯಿತು. ಅಲ್ಲಿಯವರೆಗೂ ವಿರೋಧ ಪಕ್ಷದ ಬಗ್ಗೆ ಮಾತಾಡದೆ ಇದ್ದ ಕೃಷ್ಣಭೈರೇಗೌಡರು ಅಲ್ಲಿಂದ ಮುಂದೆ ಪ್ರತಿ ಸಭೆಯಲ್ಲೂ ಇದನ್ನು ಮುಂದುವರಿಸಿದರು. ಮತ್ತೊಂದು ದಿನ ಹಜ್ ಭವನದ ಬಳಿ ಇರುವ ಶೋಭಾ ಸಿಟಿಯೊಳಗೆ ಒಂದು ಕಾರ್ಯಕ್ರಮವಿತ್ತು. ಅಲ್ಲಿ ಆ ಅಪಾರ್ಟ್‌ಮೆಂಟ್ ಒಳಗೆ ವಾಸವಿರುವ ಮತದಾರರನ್ನು ಸೇರಿಸಲಾಗಿತ್ತು. ಐವತ್ತರಿಂದ ಅರವತ್ತು ಚೇರ್‌ಗಳನ್ನು ಮಾತ್ರ ಹಾಕಲಾಗಿತ್ತು. ಸಾವಿರಕ್ಕಿಂತ ಹೆಚ್ಚು ಫ್ಲಾಟ್‌ಗಳಿರುವ ಆ ಶೋಭಾ ಸಿಟಿಯ ಮತದಾರರಿಗೆ ಇಷ್ಟು ಮಾತ್ರ ಆಸನ ವ್ಯವಸ್ಥೆ ಮಾಡಿದ್ದು ಚುನಾವಣಾಧಿಕಾರಿಗಳಾದ ನಮಗೆ ಆಶ್ಚರ್ಯವನ್ನುಂಟುಮಾಡಿತು. ಆದರೆ ಬಹಳ ಸಂತೋಷದಿಂದಲೇ ಒಬ್ಬಂಟಿಯಾಗಿ ಕಾರಿಳಿದು ಬಂದ ಕೃಷ್ಣಭೈರೇಗೌಡರು ತಮ್ಮದೇ ಆದ ಅತ್ಯಾಧುನಿಕ ಮೈಕನ್ನು ತಂದಿದ್ದರು. ಅದರ ಬ್ಯಾಟರಿಯನ್ನು ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸಿದರು. ಭಾಷಣವನ್ನು ಕನ್ನಡದಲ್ಲಿ ಪ್ರಾರಂಭ ಮಾಡಿ ಇಂಗ್ಲಿಷ್‌ನಲ್ಲಿ ಮುಂದುವರಿಸಿದರು. ಏಕೆಂದರೆ ಅಲ್ಲಿದ್ದವರಲ್ಲಿ ಬೇರೆ ರಾಜ್ಯಗಳಿಂದ ಬಂದವರೇ ಹೆಚ್ಚಾಗಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಸುಮಾರು 45 ನಿಮಿಷ ಮಾತಾಡಿದರು. ಇವರು ಭಾಷಣ ಮಾಡುತ್ತಿದ್ದಾಗ ಅಲ್ಲಿಯ ಕೆಲ ನಿವಾಸಿಗಳು ವಾಕಿಂಗ್, ಜಾಗಿಂಗ್ ಮಾಡುತ್ತಿದ್ದರು. ಇನ್ನು ಕೆಲವರು ತಮಗೇನೂ ಗೊತ್ತಿಲ್ಲದವರಂತೆ ಓಡಾಡುತ್ತಿದ್ದರು. ಆದರೂ ಅವರು ವಿಚಲಿತರಾಗಲಿಲ್ಲ. ತಮ್ಮ ಭಾಷಣವನ್ನು ಮುಂದುವರಿಸಿದರು. ಇದು ಮುಗಿಯುವಷ್ಟರಲ್ಲಿ ಪಡುವಣದ ದಿಕ್ಕಿನಲ್ಲಿ ಸೂರ್ಯ ಮುಳುಗಿದ್ದನು.

ಇವರ ಸಭೆಗಳಿಗೆ ಹೆಚ್ಚು ಜನರನ್ನು ಸೇರಿಸುತ್ತಿರಲಿಲ್ಲ. ಕೇವಲ 80 ರಿಂದ 100 ಜನಗಳವರೆಗೆ ಮಾತ್ರ ಜಮಾವಣೆ ಮಾಡಲಾಗುತ್ತಿತ್ತು. ಅದರಲ್ಲೂ ಮಹಿಳೆಯರನ್ನು ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಸಭೆ ಆಯೋಜಿಸಲಾಗುತ್ತಿತ್ತು. ಬಹುಶಃ ಅದು ಏಕೆಂದರೆ ಒಬ್ಬ ಮಹಿಳೆಗೆ ಗ್ಯಾರಂಟಿಗಳನ್ನು ಮನದಟ್ಟು ಮಾಡಿಕೊಟ್ಟರೆ ಅವರ ಮನೆಯವರೆಲ್ಲರ ಮತವನ್ನು ಹಾಕಿಸುತ್ತಾರೆಂಬ ನಂಬಿಕೆಯಿಂದ. ಅದು ಹುಸಿಯಾಗಲಿಲ್ಲ. ಸಭೆಗಳಲ್ಲಿ ಮಹಿಳೆಯರು ಪರಸ್ಪರ ಚರ್ಚೆಯಲ್ಲಿ ತೊಡಗುತ್ತಿದ್ದದ್ದು ಮಾಮೂಲಾಗಿತ್ತು. ಇದು ಕಾಂಗ್ರೆಸ್ಸಿನ ಪಾಲಿಗೆ ಶುಭ ಸೂಚನೆಯಾಗಿತ್ತು. ಕೃಷ್ಣಭೈರೇಗೌಡರು ಮಾತಾಡುತ್ತಿದ್ದರೆ ಮಹಿಳೆಯರ ಮುಖದ ಮೇಲೆ ಒಂದು ಬಗೆಯ ನಿರೀಕ್ಷೆಗಳ ಖುಷಿ ಗೋಚರಿಸುತ್ತಿತ್ತು. 5 ಲಕ್ಷದಷ್ಟು ಮತದಾರರನ್ನು ಹೊಂದಿದ್ದ ಕ್ಷೇತ್ರದಲ್ಲಿ 80-100 ಜನ ಪ್ರತಿ ಸಭೆಗೆ ಸೇರುತ್ತಿದ್ದದ್ದು ಬೆರಳೆಣಿಕೆಯಷ್ಟು ಮಾತ್ರ ಅನಿಸುತ್ತಿತ್ತು. ಆದರೂ ಇವರ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರು ಲೆಕ್ಕವಿಲ್ಲದಷ್ಟಿದ್ದರು. ಅವರ ಬಗ್ಗೆ ಸಕಾರಾತ್ಮಕ ಧೋರಣೆ ತಾಳಿದ್ದರು; “ಸರ್ ಅವರು ಒಳ್ಳೆಯವರು, ಅವರನ್ನು ಗೆಲ್ಲಿಸಬೇಕು” ಎಂದು ಅಂತರಾಳದಿಂದ ಹೇಳುತ್ತಿದ್ದರು. ಹೊರನೋಟದಲ್ಲಿ ಏಕಪಕ್ಷೀಯ ಫಲಿತಾಂಶದ ಮುನ್ಸೂಚನೆ ಕಾಣಿಸುತ್ತಿರಲಿಲ್ಲ.

ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇವರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಯಾರೂ ಸ್ಟಾರ್ ಪ್ರಚಾರಕರಾಗಿ ಬರಲಿಲ್ಲ. ಬಹುಶಃ ಅದಕ್ಕೆ ಕಾರಣ ಅವರಿಗೆ ತಮ್ಮ ಅಭಿವೃದ್ಧಿ ಕೆಲಸದ ಬಗ್ಗೆ ಇದ್ದ ಅದಮ್ಯ ವಿಶ್ವಾಸ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಬರುತ್ತೇನೆಂದು ಹೇಳಿದರೂ, ಕೃಷ್ಣಭೈರೇಗೌಡರು ಅದನ್ನು ನಿರಾಕರಿಸಿದ್ದಾಗಿ, ತಾನೇ ಕ್ಷೇತ್ರದ ಪ್ರಚಾರವನ್ನು ನಿಭಾಯಿಸುವುದಾಗಿ, ಬೇರೆ ಕ್ಷೇತ್ರಗಳ ಕಡೆ ಗಮನಹರಿಸುವಂತೆ ತಿಳಿಸಿದ್ದರು ಎಂಬ ಸುದ್ದಿ ನಮ್ಮ ಕಿವಿಗೆ ಬಿತ್ತು. ಎಲ್ಲ ಮತಗಳ ಬಗ್ಗೆ ಗೌರವವನ್ನು ಇಟ್ಟುಕೊಂಡಿರುವ ಇವರಿಗೆ ಜನಬೆಂಬಲವಿರುವುದು ಅವರ ಸತತ ಗೆಲುವುಗಳೇ ಸಾಕ್ಷೀಕರಿಸಿವೆ. ವಿರೋಧಿ ಪಾಳೆಯದ ಯಾವುದೇ ಪಟ್ಟಿಗೆ ಜಗ್ಗದೆ ಗುರಿ ತಲುಪಿದ್ದು ಅವರ ಹೆಗ್ಗಳಿಕೆ. ವಿರೋಧಿ ಪಾಳೆಯದ ಆಂತರಿಕ ಕಚ್ಚಾಟ, ಜನಬೆಂಬಲದ ಕೊರತೆ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ಬದಲಾವಣೆ ಮತ್ತು ಇವರು ಮಾಡಿದ ಅಭಿವೃದ್ಧಿ ಇವರ ಕೈ ಹಿಡಿದಿದೆ. ಆದರೂ ಕ್ಷೇತ್ರದಲ್ಲಿ ಸರ್ಕಾರಿ ಕಾಲೇಜುಗಳ ಕೊರತೆ ಎದ್ದು ಕಾಣುತ್ತದೆ. ಪಕ್ಕದ ಯಲಹಂಕ ಹಾಗೂ ಹೆಬ್ಬಾಳ ಕ್ಷೇತ್ರಗಳಲ್ಲಿ ಸರ್ಕಾರಿ ಡಿಗ್ರಿ ಕಾಲೇಜುಗಳಿವೆ. ಆದರೆ ಇಲ್ಲಿಲ್ಲ. ಇದಿಷ್ಟೆ ಅಲ್ಲದೆ ಬ್ಯಾಟರಾಯನಪುರ ಕ್ಷೇತ್ರದ ಬೆಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ಚಿಕ್ಕ ಜಾಗದಲ್ಲಿದೆ. ದೊಡ್ಡ ಜಾಗದಲ್ಲಿ ಒಂದು ಬಹುಮಹಡಿ ಕಟ್ಟಡ ಬರಬೇಕಿದೆ. ಇವರು ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮುಸಲ್ಮಾನ ಮತದಾರರಿದ್ದಾರೆ. ಅಧಿಕತಮವಾಗಿ ವಾಸವಿರುವ ಮುಸಲ್ಮಾನರ ಹೆಗಡೆ ನಗರ, ಸಾರಾಯಿಪಾಳ್ಯ, ರಜ಼ಾಕ್ ಪಾಳ್ಯ, ಎಂ.ಎಸ್.ಪಾಳ್ಯ ಬಡಾವಣೆಗಳಿವೆ. ಇವರಲ್ಲಿ ಬೀದಿ ಬದಿ ವ್ಯಾಪಾರಿಗಳು, ಆಟೋ ಡ್ರೈವರ್‌ಗಳು, ಕೂಲಿ ಕಾರ್ಮಿಕರು, ಹೆಚ್ಚಾಗಿ ವಾಸವಿದ್ದಾರೆ. ಈ ವರ್ಗ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಮತ ಹಾಕಿರುವುದಿಲ್ಲ. ಸಾಮಾಜಿಕ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಮುಖ್ಯವಾಗಿರಿಸಿಕೊಂಡು ಮತ ಹಾಕಿರುತ್ತಾರೆ. ಹೀಗಾಗಿ ಈ ಬಡಾವಣೆಗಳಿಗೂ ಸಹಕಾರನಗರ, ಕೊಡಿಗೇಹಳ್ಳಿಯ ರಸ್ತೆಗಳಂತೆ ಚೆಂದ ಕಾಣುವ, ಬಾಳಿಕೆ ಬರುವ ರಸ್ತೆಗಳನ್ನು ಹಾಕಿಸಬೇಕಿದೆ. ಈಗ ಎಷ್ಟೋ ಬೀದಿಗಳು ಟಾರ್ ರಸ್ತೆಯನ್ನೇ ಕಂಡಿಲ್ಲ. ಹೀಗಾಗಿ ಮುಗ್ಧ ಬಡಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕೃಷ್ಣಭೈರೇಗೌಡರು ಇನ್ನಷ್ಟು ಕಾರ್ಯೋನ್ಮುಖರಾಗುವ ಕಾಲ ಬಂದಿದೆ.

ಇದನ್ನೂ ಓದಿ: ರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

ಕೃಷ್ಣಭೈರೇಗೌಡರು ಕಂದಾಯ ಮಂತ್ರಿಗಳಾಗಿದ್ದಾರೆ. ಗ್ಯಾರಂಟಿಗಳ ಘೋಷಣೆಯಾಗಿದೆ. ಈಗ ಸರ್ಕಾರದ ಆರ್ಥಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಎಲ್ಲಾ ಮಂತ್ರಿಗಳ ಮೇಲಿದೆ. ಕೃಷ್ಣಭೈರೇಗೌಡರು ಈಗಾಗಲೇ ಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವವಿರುವುದರಿಂದ ಹಾಗೂ ಶಿಕ್ಷಣದಲ್ಲಿ ಪರಿಶ್ರಮ ಇರುವುದರಿಂದ ಇನ್ನಷ್ಟು ಬುದ್ಧಿಮತ್ತೆಯಿಂದ ಕೆಲಸ ನಿರ್ವಹಿಸಬೇಕಿದೆ. ಕರ್ನಾಟಕ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದಕ್ಕಬೇಕಿದೆ. ದಲ್ಲಾಳಿಗಳ ಹಾವಳಿ ಇಲ್ಲದಂತೆ ಸ್ವಚ್ಛ, ಭ್ರಷ್ಟಾಚಾರರಹಿತ ಆಡಳಿತವನ್ನು ಕೊಡಬೇಕಿದೆ. ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣವಾಗಿರುವುದರಿಂದ ಹೆಚ್ಚಿನ ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅವರ ಸುರಕ್ಷತೆಯೇ ಮುಖ್ಯವಾದ ಆದ್ಯತೆಯಾಗಿ ಪರಿಗಣಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಸ್ಸುಗಳ ಒಳಗೆ ಅದರಲ್ಲೂ ರಾತ್ರಿಯ ಹೊತ್ತು ಹೊರಡುವ ಬಸ್ಸುಗಳಲ್ಲಿ ಸಿ.ಸಿ. ಕ್ಯಾಮರ ಅಳವಡಿಸುವಿಕೆ, ಜಿ.ಪಿ.ಆರ್.ಎಸ್ ಅಂತಹ ತಂತ್ರಜ್ಞಾನವನ್ನು ಅಳವಡಿಸಬೇಕಿದೆ. ಜನರ ನೆಮ್ಮದಿಯ ಬದುಕಿನ ಕನಸು ನನಸಾಗುವ ಕಾಲದಲ್ಲಿ ಶಾಸಕರು, ಮಂತ್ರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಪ್ರತಿಯೊಂದು ನಡೆಯಲ್ಲೂ ಎಚ್ಚರಿಕೆ ಇಟ್ಟರೆ ಸರ್ಕಾರಕ್ಕೆ ಆಶಾದಾಯಕ ವಾತಾವರಣ ನಿರ್ಮಾಣವಾಗುವುದು ಖಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...