Homeಮುಖಪುಟನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

ನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

- Advertisement -
- Advertisement -

 

ಡಿ.ಉಮಾಪತಿ

ಚಿತ್ರದುರ್ಗದ ಡಿ.ಉಮಾಪತಿಯವರು ದೀರ್ಘಕಾಲ ದೆಹಲಿಯಿಂದ ಕನ್ನಡದ ಮೂರು ಪ್ರಮುಖ ದಿನಪತ್ರಿಕೆಗಳಿಗೆ (ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾವಾಣಿ) ವರದಿ ಮಾಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಡಿ ಘಟನೆಗಳನ್ನು ವಿಶಾಲ ಭಿತ್ತಿಯಲ್ಲಿಟ್ಟು ನೋಡುವ ಅವರ ಸಾಂದ್ರವಾದ ಬರಹಗಳು ಓದುಗರನ್ನು ಆಳವಾಗಿ ಕಲಕುತ್ತವೆ. ಅವರ `ಡೆಲ್ಲಿ ಡೈರಿ’ ಮತ್ತು `ದೆಹಲಿ ನೋಟ’ ಅಂಕಣಗಳು ಹೆಚ್ಚು ಓದುಗರನ್ನು ಸೆಳೆದಿದ್ದವು. ಪ್ರಸ್ತುತ `ನ್ಯಾಯಪಥ’ ಪತ್ರಿಕೆಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ ಮತ್ತು ಪ್ರತಿಧ್ವನಿ ಅಂತರ್ಜಾಲ ಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅವರ ಬರಹಗಳು ಮುಂದುವರೆದಿವೆ.

ಮೂವತ್ತೆರಡು ವರ್ಷಗಳಷ್ಟು ಕಾಲದ ವರದಿಗಾರನ ಕಸುಬಿನಲ್ಲಿ ಇಪ್ಪತ್ತು ವರ್ಷಗಳನ್ನು ದಿಲ್ಲಿಯಲ್ಲೇ ಸವೆಸಿದ ಕಾರಣ ಗೌರಿ ಲಂಕೇಶ್ ಅವರ ಸಂಪರ್ಕ ನನಗೆ ಕೆಲಕಾಲ ಹತ್ತಿರದ್ದು ಮತ್ತು ಬಹುಕಾಲ ದೂರದ್ದೂ ಆಗಿ ಉಳಿಯಿತು.

1996ರಲ್ಲಿ ‘ಕನ್ನಡಪ್ರಭ’ ನನ್ನನ್ನು ದಿಲ್ಲಿಗೆ ಕಳಿಸುವ ತನಕ ಹನ್ನೆರಡು ವರ್ಷಗಳ ಕಾಲ ಬೆಂಗಳೂರಲ್ಲಿ ಕೆಲಸ. ಇಂಗ್ಲಿಷ್ ಪತ್ರಕರ್ತರು ಅದರಲ್ಲಿಯೂ ಹೆಣ್ಣುಮಕ್ಕಳು ಕನ್ನಡ ಪತ್ರಕರ್ತರೊಂದಿಗೆ ದೂರ ಕಾಯ್ದುಕೊಳ್ಳುತ್ತಿದ್ದರು. ಕೃತಕ ಗೋಡೆಗಳನ್ನು ಎಬ್ಬಿಸಿ ನಿಲ್ಲಿಸುತ್ತಿದ್ದರು. ಈ ಮಾತಿಗೆ ಅಪವಾದದಂತೆ ನಡೆದುಕೊಳ್ಳುತ್ತಿದ್ದ ವಿರಳರಲ್ಲಿ ಗೌರಿಯೂ ಒಬ್ಬರು. ಹೌದು, ಗೌರಿ ಇಂಗ್ಲಿಷ್ ಪತ್ರಕರ್ತೆಯಾಗಿದ್ದರು. ನಿತ್ಯದ ವರದಿಗಾರಿಕೆಯಲ್ಲಿ ಆಗಾಗ ಸಿಗುತ್ತಿದ್ದರು. ನಿಗರ್ವಿಯೂ ಸ್ನೇಹಪರರೂ ಹಾಗೂ ಸರಳ ಸ್ವಭಾವದವರೂ ಆಗಿರುತ್ತಿದ್ದರು. ಕನ್ನಡ ಇಂಗ್ಲಿಷಿನ ದೂರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಎಂಬತ್ತರ ದಶಕ. ಆ ವೇಳೆಗಾಗಲೆ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಓದಿ ಪದವಿ ಪಡೆದವರಾಗಿದ್ದರು. ಅವರ ಮೇಲೆ ತಂದೆ ಲಂಕೇಶರ ಪ್ರಭಾವವಿತ್ತು. ದೆಹಲಿಯ ಜೆ.ಎನ್.ಯು.ವಿನ ಸಮ ಸಮಾಜದ ಆಶಯದ ವಾತಾವರಣ ಅದನ್ನು ಗಟ್ಟಿಗೊಳಿಸಿತ್ತು.

ಲಂಕೇಶ್ ಪತ್ರಿಕೆಯ ಯಶಸ್ಸಿನ ನೆರಳಿನಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಬಯಸಿದ್ದರು. ಹೀಗಾಗಿ ಇಂಗ್ಲಿಷ್ ಪತ್ರಿಕೋದ್ಯಮ ಅವರ ಆಯ್ಕೆಯಾಗಿತ್ತು. Mid Day, Sunday ಆಗ ರಭಸದ ಪತ್ರಿಕೋದ್ಯಮ ನಡೆಸಿದ ಪತ್ರಿಕೆಗಳು. ಆನಂತರ Times of India, ಇಂಗ್ಲಿಷ್ ದೈನಿಕ, ETV, News Timeಗೆ ವರದಿ ಮಾಡಿದರು. ಇಂಡಿಯಾ ಟುಡೇ ಸಮೂಹದ Headlines Todayಯಲ್ಲೂ ಕೆಲಸ ಅವರ ವರದಿಗಾರಿಕೆಗೆ ಸಾಣೆ ಹಿಡಿದಿತ್ತು. ಹೊಳಪು ಹರಿತ ಎರಡೂ ದಕ್ಕಿದ್ದವು.

ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರಿಗೆ ರಾಜಧಾನಿಯ ರಾಜಕಾರಣದ ಒಳಸುಳಿಗಳ ಮೇಲೆ ಹಿಡಿತ ಸಿಕ್ಕಿತ್ತು. ಇಲ್ಲಿ ಕೂಡ ನನ್ನ ಪಾಲಿಗೆ ಅವರು ಅದೇ ಬೆಂಗಳೂರಿನ ನಿಗರ್ವಿ ಸಹೋದ್ಯೋಗಿ. ದೆಹಲಿಯಲ್ಲಿ ಕನ್ನಡ ಮೂಲದ ಮತ್ತೊಬ್ಬ ಯಶಸ್ವೀ ಇಂಗ್ಲಿಷ್ ಪತ್ರಕರ್ತ ಗಿರೀಶ್ ನಿಕ್ಕಮ್, ಗೌರಿ, ಔಟ್‍ಲುಕ್ ನಿಯತಕಾಲಿಕದ ವರದಿಗಾರ್ತಿ ಭಾವದೀಪ್ ಕಾಂಗ್ ಹೆಚ್ಚಾಗಿ ಕಲೆತು ಹರಟೆ ಹೊಡೆಯುತ್ತಿದ್ದೆವು. ದೈನಿಕ್ ಜಾಗರಣ್‍ನ ಹಿರಿಯ ವರದಿಗಾರ ನಿರ್ಮಲ್ ಪಾಠಕ್ ಒಂದು ಗುಂಪಾಗಿ ಸುದ್ದಿ ಸಂಗ್ರಹಕ್ಕೆಂದು ಅಲೆಯುತ್ತಿದ್ದೆವು. ಅನುಕೂಲಸ್ಥ ತಂದೆಯಿದ್ದಾರೆ ಎಂಬ ಭಾವದಿಂದ ಗೌರಿ ಯಾವೊತ್ತೂ ಕೆಲಸ ಕದಿಯಲಿಲ್ಲ. ಕಠಿಣ ಪರಿಶ್ರಮಕ್ಕೆ ಅಳುಕಲಿಲ್ಲ. ಅದಾಗಲೇ ಲಂಕೇಶರು ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆ ಮಗಳು ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದವರು. ತಂದೆಯ ಅನಾರೋಗ್ಯ ನೆನೆಸಿಕೊಂಡು ಗೌರಿ ಆಗಾಗ ಹನಿಗಣ್ಣಾಗುತ್ತಿದ್ದರು. ಬೆಂಗಳೂರಿಗೆ ತೆರಳಿ ಕೆಲ ದಿನ ಇದ್ದು ಬರುತ್ತಿದ್ದರು. ಯಾವ ಸುದ್ದಿಯನ್ನು ಕೇಳುವ ದಿನದ ಹೆದರಿಕೆಯಿತ್ತೋ ಆ ಕೆಟ್ಟ ಸುದ್ದಿ ಬಂದೇ ಬಿಟ್ಟಿತು. ಲಂಕೇಶರ ಆರೋಗ್ಯ ಬಿಗಡಾಯಿಸಿತ್ತು. ಒಮ್ಮೆ ಹೀಗೆ ಅಳುತ್ತಲೇ ಬೆಂಗಳೂರಿಗೆ ತೆರಳಿದ ಗೌರಿ ಮತ್ತೆ ದೆಹಲಿಗೆ ವಾಪಸು ಬರಲಿಲ್ಲ.

ತಂದೆ ತೊರೆದು ಹೋದ ಹೊಸ ರೂಹಿನ ಪತ್ರಿಕೋದ್ಯಮದ ‘ಬೃಹತ್ ಪಾದರಕ್ಷೆ’ಗಳಲ್ಲಿ ಗೌರಿ ತಮ್ಮ ಪುಟ್ಟ ಪಾದಗಳನ್ನು ಅಳುಕದೆ ಇರಿಸಿದ ದಿಟ್ಟ ಹೆಣ್ಣುಮಗಳು. ಪತ್ರಿಕೆಯೊಂದರ ಸಂಪಾದಕಿ ಆಗುವಷ್ಟು, ಪರಿಣಾಮಕಾರಿಯಾಗಿ ಬರೆಯುವಷ್ಟು ಕನ್ನಡ ಕಲಿತರು. ಅಲ್ಲಲ್ಲಿ ನ್ಯೂನತೆಗಳನ್ನು ಎಣಿಸಲು ಬಂದೀತು, ಆದರೆ ಒಟ್ಟಾರೆ ಲಂಕೇಶರು ನಡೆಸಿದ್ದು ಕೇವಲ ಪತ್ರಿಕೋದ್ಯಮ ಮಾತ್ರ ಆಗಿರಲಿಲ್ಲ. ಸಾಮಾಜಿಕ ಎಚ್ಚರದ ಹೊಸ ಪೀಳಿಗೆಯನ್ನೇ ರೂಪಿಸಿದರು. ತಂದೆಯ ಪ್ರಖರ ಪ್ರತಿಭೆ, ಭಾಷೆಯೊಂದಿಗಿನ ಮಾಂತ್ರಿಕ ಸ್ಪರ್ಶ, ಅಪಾರ ಓದು, ಆಳದ ಸಾಮಾಜಿಕ ರಾಜಕೀಯ ಒಳನೋಟಗಳು ಮಗಳಿಗಿರಲಿಲ್ಲ ನಿಜ. ಆದರೆ ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿ ಮುಂದೆ ಹೋದ ಮಗಳು ಪತ್ರಿಕೆಯನ್ನು ತುಳಿಸಿಕೊಂಡ ಜನರ ನೋವಿನ ದನಿಯಾಗಿಸಲು, ಕೋಮುವಾದಿಗಳ ವಿರುದ್ಧದ ಹತಾರು ಆಗಿಸಲು ಶ್ರಮಿಸಿದರು. ಹೋರಾಟಗಾರ್ತಿ ಪತ್ರಕರ್ತೆ ಆದರು.

ತಂದೆ ಆರಂಭಿಸಿದ ಪತ್ರಿಕೆ ತಮ್ಮನ ಪಾಲಾದಾಗಲೂ ಧೃತಿಗೆಡದೆ ಮತ್ತೊಂದನ್ನು ಶುರು ಮಾಡಿದರು. ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ‘ಕಂಡ ಹಾಗೆ’ ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು. ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು. ಅವರ ಅಂತರಂಗವನ್ನು ಅರಳಿಸಿತು.

ತುಂಟುತನ, ಜೀವಕಾರುಣ್ಯ, ಜೀವನಪ್ರೀತಿ ಅವರನ್ನು ಸುತ್ತಮುತ್ತಲ ಕನ್ನಡ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬೆಸೆಯಿತು. ಯುವಪೀಳಿಗೆಯೊಂದಿಗೆ ಸಂವಾದಕ್ಕೆ ಅವರಷ್ಟು ತೆರೆದುಕೊಂಡ ಅವರ ಓರಗೆಯ ಮತ್ತೊಬ್ಬ ಪತ್ರಕರ್ತರನ್ನು ನಾನು ಕಂಡಿಲ್ಲ. ಅಮ್ಮನ- ಅಕ್ಕನ ವಾತ್ಸಲ್ಯ ಅವರದು.

ಲಂಕೇಶರು ನಂಬಿದ್ದ ಲೋಹಿಯಾವಾದಿ-ಸಮಾಜವಾದ ಮತ್ತು ಗಾಂಧೀವಾದದ ಆಚೆಗೂ ಸರಿದ ಗೌರಿ, ಎಡಪಂಥೀಯ ವಿಚಾರಧಾರೆಯನ್ನು ದೂರ ಇರಿಸಲಿಲ್ಲ. ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚು ಹತ್ತಿರವಿಟ್ಟುಕೊಂಡರು. ಜನಾಂದೋಲನಗಳ ಜೊತೆ ಸಕ್ರಿಯವಾಗಿ ಬೆರೆತು ಗುರುತಿಸಿಕೊಂಡರು. ತಮ್ಮನ್ನು ‘ಆ್ಯಕ್ಟಿವಿಸ್ಟ್ ಜರ್ನಲಿಸ್ಟ್’ ಎಂದು ಹೆಮ್ಮೆಯಿಂದ ಕರೆದುಕೊಂಡರು.

ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಎಲ್ಲ ಮತಭೇದವನ್ನೂ ಬದಿಗಿಟ್ಟು ಒಂದಾಗಬೇಕೆಂಬುದು ಅವರ ಅಚಲ ಆಶಯವಾಗಿತ್ತು. ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿತ್ತು. ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರ ಕುರಿತು ತಂದೆಯದೇ ಬದ್ಧತೆ, ಪ್ರೀತಿ ಅವರಿಗಿತ್ತು. ಕನ್ಹಯ್ಯಕುಮಾರ್ ಮತ್ತು ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಬಹಿರಂಗವಾಗಿ ಕರೆದುಕೊಂಡಿದ್ದರು. ಹಂತಕರ ಗುಂಡು ಆಕೆಯನ್ನು ಬಲಿ ತೆಗೆದುಕೊಳ್ಳುವ ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಾಗ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ತಂದಿದ್ದುಂಟು.

ಪತ್ರಿಕೆ ನಡೆಸಲು ಆಕೆ ತನ್ನ ಕಟಿಬದ್ಧ ತಂಡದೊಂದಿಗೆ ಪಡುತ್ತಿದ್ದ ಪಡಿಪಾಟಲಿನ ಕಲ್ಪನೆಯೇ ನನಗಿರಲಿಲ್ಲ. ದೆಹಲಿ ರಾಜಕಾರಣದ ದಿಕ್ಕು ದೆಸೆಗಳನ್ನು ತಿಳಿದುಕೊಳ್ಳಲು ಆಗಾಗ ಫೋನ್ ಮಾಡುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ಚುನಾವಣಾ ರಾಜಕಾರಣದ ಸ್ಥಿತಿಗತಿಗಳ ವ್ಯಾಖ್ಯಾನಕಾರ್ತಿಯಾಗಿ ದೆಹಲಿಯಲ್ಲಿ ಖ್ಯಾತ ಟೀವಿ ಚಾನೆಲ್ಲುಗಳ ಪ್ಯಾನೆಲ್ ಡಿಸ್ಕಷನ್‍ಗಳಲ್ಲಿ ವಾರಗಟ್ಟಲೆ ಕುಳಿತುಕೊಳ್ಳುತ್ತಿದ್ದರು. ಅದರಿಂದ ಬಂದ ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪತ್ರಿಕೆ ನಡೆಸಲು ಬಳಸುತ್ತಿದ್ದ ವಿಚಾರ ನನಗೆ ತಿಳಿದದ್ದು ಆಕೆ ಗತಿಸಿದ ನಂತರವೇ. ಈ ದಿನಗಳಲ್ಲಿ ಊಟಕ್ಕೆ ಕುಳಿತಾಗಲೂ ಈ ಕಷ್ಟವನ್ನು ಹೇಳಿಕೊಳ್ಳದೆ ನಗುತ್ತಿದ್ದ ದೊಡ್ಡ ಹೃದಯದ ಹೆಣ್ಣುಮಗಳು ಗೌರಿ.

ಸಾಮಾಜಿಕ-ರಾಜಕೀಯ-ಧಾರ್ಮಿಕ-ವೈಚಾರಿಕ ಅಸಹಿಷ್ಣುತೆ ಅತ್ಯುಗ್ರ ರೀತಿಯಲ್ಲಿ ಪ್ರಕಟವಾದಾಗ ಪತ್ರಿಕೆಯ ಕಚೇರಿಯಲ್ಲಿ ಕುಳಿತುಕೊಳ್ಳದೆ ಬಯಲಿಗಿಳಿದು ಪ್ರವಾಸ ನಡೆಸಿ ಅದನ್ನು ಮುಖಾಮುಖಿಯಾದ ಅಪರೂಪದ ಪತ್ರಕರ್ತೆ ಆಕೆ.

ತಾವು ಗುಂಡಿಟ್ಟದ್ದು ಗೌರಿಯ ದೇಹಕ್ಕೇ ವಿನಾ ವಿಚಾರಕ್ಕಲ್ಲ ಎಂಬುದನ್ನು ದುರುಳರೂ ಮೂರ್ಖರೂ ಆದ ಹಂತಕರಿಗೆ ಈಗಲೂ ತಿಳಿದಿಲ್ಲ, ಮುಂದೆಯೂ ತಿಳಿಯುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...