ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ (ಫೆ.3) ತೀವ್ರ ವಾಗ್ದಾಳಿ ನಡೆಸಿದ್ದು, “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ, ದೇಶವನ್ನು ಮಾರಿದ್ದಾರೆ” ಎಂದು ಆರೋಪಿಸಿದರು.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಮೋದಿಯವರು ಜರ್ಜರಿತರಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ನರೇಂದ್ರ ಮೋದಿ ನಿನ್ನೆ ರಾತ್ರಿ ಸಹಿ ಹಾಕಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ. ಅದರಿಂದ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು. ಮುಖ್ಯ ವಿಷಯವೆಂದರೆ ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಯೋಚಿಸಬೇಕು ಎಂದರು.
“ನರೇಂದ್ರ ಮೋದಿಯವರು ಈ ವ್ಯಾಪಾರ ಒಪ್ಪಂದದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಮಾರಿದ್ದಾರೆ. ಏಕೆಂದರೆ ಅವರು ರಾಜಿ ಮಾಡಿಕೊಂಡಿದ್ದಾರೆ. ಅವರು ದೇಶವನ್ನೇ ಮಾರಿದ್ದಾರೆ. ನರೇಂದ್ರ ಮೋದಿಯವರು ಭಯಭೀತರಾಗಿದ್ದಾರೆ. ಏಕೆಂದರೆ, ಅವರ ಇಮೇಜ್ ರೂಪಿಸಿದವರು ಈಗ ಆ ಇಮೇಜ್ ಅನ್ನು ಮುರಿಯುತ್ತಿದ್ದಾರೆ” ಎಂದು ಹೇಳಿದರು.
ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ನೀವು ಹೇಗೆ ಅಂದುಕೊಳ್ಳುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ರಾಹುಲ್ ಗಾಂಧಿ ಅವರು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಎಪ್‌ಸ್ಟೀನ್ ಫೈಲ್‌ಗಳನ್ನು ಉಲ್ಲೇಖಿಸಿದರು.
ಅಮೆರಿಕದಲ್ಲಿ ಅದಾನಿ ಮೇಲೆ ಒಂದು ಪ್ರಕರಣವಿದೆ, ಅದು ವಾಸ್ತವವಾಗಿ ಮೋದಿ ಮೇಲೆ ಇರುವ ಪ್ರಕರಣ. ಎಪ್‌ಸ್ಟೀನ್ ಫೈಲ್ಸ್ ಅಮೆರಿಕ ಇನ್ನೂ ಬಿಡುಗಡೆ ಮಾಡದ ಹೆಚ್ಚಿನ ವಿಷಯಗಳನ್ನು ಒಳಗೊಂಡಿದೆ. ಅದರಿಂದ ಒತ್ತಡವೂ ಇದೆ. ಇವು ಎರಡು ಒತ್ತಡದ ವಿಷಯಗಳು. ದೇಶವು ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಬಂದ ನಂತರ ಭಾರತೀಯ ರಫ್ತಿನ ಮೇಲಿನ ಸುಂಕವನ್ನು ಶೇ. 25 ರಿಂದ ಶೇ. 18 ಕ್ಕೆ ಇಳಿಸಲಾಗಿದೆ. ಆದರೆ, ಕಾಂಗ್ರೆಸ್ ಈ ವ್ಯಾಪಾರ ಒಪ್ಪಂದದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಒಪ್ಪಿಗೆ ನೀಡಲಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದು ಭಾರತೀಯ ರೈತರ ಹಿತಾಸಕ್ತಿಗೆ ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸಲಾಗುವ ಸುಂಕವನ್ನು ‘ಶೂನ್ಯ’ಕ್ಕೆ ಇಳಿಸಲು ಭಾರತ ಒಪ್ಪಿಕೊಂಡಿದೆಯೇ? ಎಂದು ಪ್ರಶ್ನಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಯಿಂದ ಭಾರತೀಯ ಉದ್ಯಮಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ರಿಯಾಯಿತಿ ದರದಲ್ಲಿ ಪಡೆಯುತ್ತಿರುವ ತೈಲ ಖರೀದಿಯನ್ನು ಭಾರತ ನಿಲ್ಲಿಸಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ಮತ್ತು ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಟೀಕಿಸಿದ್ದಾರೆ.
ಭಾರತ ಸರ್ಕಾರ ಅಧಿಕೃತವಾಗಿ ವಿವರ ನೀಡುವ ಮೊದಲೇ ಅಮೆರಿಕ ಅಧ್ಯಕ್ಷರು ಒಪ್ಪಂದದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


