ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ. ಆದರೆ, ಅದರಲ್ಲಿ ತನ್ನ ವಿರುದ್ದ ಯಾವುದೇ ಪುರಾವೆಗಳು ಇಲ್ಲದ ಕಾರಣ ಬಹಿರಂಗಪಡಿಸುತ್ತಿಲ್ಲ ಎಂದಿದ್ದಾರೆ.
ಗುವಾಹಟಿಯಲ್ಲಿ ಸೋಮವಾರ (ಫೆ.9) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೊಗೊಯ್, “ನನ್ನ ಪತ್ನಿ 2013ರಲ್ಲಿ ಕೆಲಸದ ನಿಮಿತ್ತ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ಆ ವರ್ಷದ ಡಿಸೆಂಬರ್‌ನಲ್ಲಿ 10 ದಿನಗಳ ಭೇಟಿಯ ಸಮಯದಲ್ಲಿ ನಾನು ಅವರ ಜೊತೆಗಿದ್ದೆ. ಈ ವಿಷಯದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಈ ಬಗ್ಗೆ ತನ್ನನ್ನು ಎಂದಿಗೂ ಪ್ರಶ್ನಿಸಿಲ್ಲ” ಎಂದು ಹೇಳಿದ್ದಾರೆ.
“ಸಿಎಂ ಶರ್ಮಾ ಎಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ಅವರು ನನ್ನ ಮಕ್ಕಗಳ ಬಗ್ಗೆಯೂ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರ ಮಕ್ಕಳ ಬಗ್ಗೆಯೂ ನಮಗೆ ಗೊತ್ತಿದೆ, ಎಲ್ಲರಿಗೂ ಗೊತ್ತಿದೆ. ಆದರೆ, ಅವರ ಮಾಹಿತಿಯನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಹಿಮಂತ ಬಿಸ್ವಾ ಶರ್ಮಾ ತಾನು ಸಿಎಂ ಕುರ್ಚಿಯಲ್ಲಿ ಕೂರಲು ಅರ್ಹವಾದ ವ್ಯಕ್ತಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ಅವರ ಹೇಳಿಕೆಗಳು ಅಸ್ಸಾಂಗೆ ನಾಚಿಕೆಗೇಡು, ಅವರು ಸುಳ್ಳು ಸುದ್ದಿಯನ್ನು ಏಕೆ ಹರಡುತ್ತಿದ್ದಾರೆ? ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಳ್ಳಬೇಕು” ಎಂದು ಗೊಗೊಯ್ ಹೇಳಿದ್ದಾರೆ. ತನ್ನ ಅಪ್ರಾಪ್ತ ಮಕ್ಕಳನ್ನು ವಿವಾದಕ್ಕೆ ಎಳೆದಿರುವ ಸಿಎಂ ಶರ್ಮಾ ವಿರುದ್ದ ಕ್ರಮಕ್ಕೆ ಕಾನೂನು ಆಯ್ಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಎಸ್‌ಐಟಿ ವರದಿಯನ್ನು ಬಹಿರಂಗಗೊಳಿಸುವಂತೆ ಗೊಗೊಯ್ ಒತ್ತಾಯಿಸಿದ್ದಾರೆ. “ನಾನು ಆರಂಭದಿಂದಲೂ ಹೇಳುತ್ತಿದ್ದೇನೆ, ನಾನು ಎಸ್‌ಐಟಿ ತನಿಖೆಯ ವಿರುದ್ದ ಇಲ್ಲ. ಎಸ್‌ಐಟಿ ವರದಿಯನ್ನು ಬಿಡುಗಡೆ ಮಾಡಬೇಕೆಂದೇ ನಾನೂ ಬಯಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಶರ್ಮಾ ಅವರ ಪತ್ರಿಕಾಗೋಷ್ಠಿಯ ಸಮಯದ ಬಗ್ಗೆ ಪ್ರತಿಕ್ರಿಯಿಸಿದ ಗೊಗೊಯ್, “ನಿನ್ನೆಯ ಸುದೀರ್ಘ ಪತ್ರಿಕಾಗೋಷ್ಠಿಯ ಹಿಂದಿನ ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಹೆಚ್ಚುತ್ತಿದೆ… ಅಲ್ಲದೆ ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದರೆ, ಅವರು ಕಳೆದ ಆರು ತಿಂಗಳಿನಿಂದ ಏಕೆ ಸುಮ್ಮನಿದ್ದರು?.. ಕಾಂಗ್ರೆಸ್ ಪಕ್ಷವು 12,000 ಬಿಘಾ ಭೂಮಿ ಸಿಎಂ ಕುಟುಂಬದ ಒಡೆತನದಲ್ಲಿದೆ ಎಂದು ಬಹಿರಂಗಪಡಿಸಿದ ನಂತರ ಸಿಎಂ ಪತ್ರಿಕಾಗೋಷ್ಠಿ ನಡೆಸಬೇಕಾಯಿತು” ಎಂದು ಗೊಗೊಯ್ ತಿಳಿಸಿದ್ದಾರೆ.
“ಸಿಎಂ ಶರ್ಮಾ ತಮ್ಮ ಸಾಮಾಜಿಕ ಮಾಧ್ಯಮದ ವಿಡಿಯೋಗಳ ಮೂಲಕ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ” ಎಂದು ಗೊಗೊಯ್ ಆರೋಪಿಸಿದ್ದಾರೆ.
ಸಿಎಂ ಶರ್ಮಾ ಅವರು ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಮತ್ತು ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ನಡುವೆ ಆಳವಾದ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಗುಪ್ತಚರ ಬ್ಯೂರೋದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಲಾಗಿದೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ ಮತ್ತು ಗೌರವ್ ಗೊಗೊಯ್ ಅವರು 2013ರಲ್ಲಿ ಪಾಕಿಸ್ತಾನಕ್ಕೆ ‘ಅತ್ಯಂತ ಗೌಪ್ಯ ಭೇಟಿ’ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳನ್ನು ಗೌರವ್ ಗೊಗೊಯ್ ಅವರು “ಸಿ-ಗ್ರೇಡ್ ಸಿನಿಮಾ” ಮತ್ತು “ಸಂಪೂರ್ಣ ಸುಳ್ಳು” ಎಂದು ತಳ್ಳಿಹಾಕಿದ್ದಾರೆ.
ಭಾರತಕ್ಕೆ ವರ್ಗಾವಣೆಯಾಗುವ ಮೊದಲು ಕೋಲ್ಬರ್ನ್ ಅವರು ತೌಕೀರ್ ಶೇಖ್ ನಡೆಸುತ್ತಿದ್ದ ‘ಲೀಡ್ ಪಾಕಿಸ್ತಾನ್’ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದರು. ಭಾರತಕ್ಕೆ ಬಂದ ಮೇಲೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘಿಸಿ ಶೇಖ್ ಅವರಿಂದ ಸಂಬಳ ಪಡೆಯುವುದನ್ನು ಮುಂದುವರೆಸಿದ್ದರು ಎಂದು ಶರ್ಮಾ ಆರೋಪ ಮಾಡಿದ್ದಾರೆ.
ಭಾರತದಲ್ಲಿ ಕೆಲಸ ಮಾಡಿದ ನಂತರ, ಕೋಲ್ಬರ್ನ್ ಶೇಖ್ ಅವರಿಗೆ ಮಾಹಿತಿಯನ್ನು ಸಂಗ್ರಹಿಸಿ ವರದಿಗಳನ್ನು ನೀಡಿದ್ದಾರೆ. ಗೊಗೊಯ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಪಾಕಿಸ್ತಾನಿ ಬ್ಯಾಂಕ್ ಖಾತೆಯನ್ನು ಘೋಷಿಸಿಲ್ಲ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.


