ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಕಂಪನಿಯು ತನ್ನ ಒಟ್ಟು ಉದ್ಯೋಗಿಳ ಪೈಕಿ ಶೇಕಡ 18ರಷ್ಟು ಮಂದಿಯನ್ನು ಅಥವಾ 30 ಸಾವಿರ ಜನರನ್ನು ವಜಾಗೊಳಿಸಲು ನಿರ್ಧರಿಸಿದೆ. ಮಂಗಳವಾರ (ಮಾ.31) ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸಾವಿರಾರು ಉದ್ಯೋಗಿಗಳಿಗೆ ಕಂಪನಿಯು ಕೆಲಸದಿಂದ ತೆಗೆದು ಹಾಕಿರುವ ಕುರಿತು ಇ-ಮೇಲ್ ಕಳುಹಿಸಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.
ಕಂಪನಿಯು ತನ್ನ ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕಿದೆ ಎಂದು ನಂಬಲಾಗಿದೆ. ಅವರ ಪೋಸ್ಟ್ ಅಥವಾ ಅನುಭವವನ್ನು ಪರಿಗಣಿಸದೆ ಎಲ್ಲರನ್ನೂ ವಜಾಗೊಳಿಸಿರುವುದು, ನೀಡಲಾಗುತ್ತಿರುವ ಪರಿಹಾರದ ಪ್ಯಾಕೇಜ್ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈವರೆಗೆ ಎಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಅಥವಾ ಅವರಿಗೆ ನೀಡುತ್ತಿರುವ ನಿಖರವಾದ ಪರಿಹಾರದ ಮೊತ್ತ ಎಷ್ಟು ಎಂಬ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳು ಮತ್ತು ಇತರ ವೇದಿಕೆಗಳಲ್ಲಿ ತಮ್ಮ ವೈಯಕ್ತಿಕ ಅನುಭವ ಹಾಗೂ ಈ ಬೆಳವಣಿಗೆಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಭಾರತೀಯ ಉದ್ಯೋಗಿಗಳಿಗೆ ಒರಾಕಲ್ ಪರಿಹಾರ ಪ್ಯಾಕೇಜ್ ಎಷ್ಟು?
ಒರಾಕಲ್ ಸಂಸ್ಥೆಯು ಪರಿಹಾರದ ಪ್ಯಾಕೇಜ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಕೆಲ ಉದ್ಯೋಗಿಗಳು ‘r/employeesofOracle’ ಎಂಬ ಸಬ್‌ರೆಡಿಟ್‌ನಲ್ಲಿ (subreddit) ತಮಗೆ ದೊರೆತಿರಬಹುದಾದ ಪ್ಯಾಕೇಜ್‌ನ ವಿವರಗಳನ್ನು ಹಂಚಿಕೊಂಡಿದ್ದಾರೆ.
u/Lavishness897 ಎಂಬ ಯೂಸರ್ ನೇಮ್ ಹೊಂದಿರುವ ಒಬ್ಬ ರೆಡಿಟ್ ಬಳಕೆದಾರರು, ಒರಾಕಲ್‌ನ ಬೆಂಗಳೂರಿನಲ್ಲಿರುವ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್ (ಐಡಿಸಿ) ವಿಭಾಗದಲ್ಲಿ ತಮಗೆ ದೊರೆತ ಪರಿಹಾರದ ಪ್ಯಾಕೇಜ್ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಆ ಬಳಕೆದಾರರ ಪ್ರಕಾರ, ಕಂಪನಿಯು ಬಳಕೆಯಾಗದ ರಜೆಗಳ (unused leaves) ಜೊತೆಗೆ 15 ದಿನಗಳ ಮೂಲ ವೇತನವನ್ನು ನೀಡುತ್ತಿದೆ. ಇದರ ಜೊತೆಗೆ, ಕಂಪನಿಯು 2 ತಿಂಗಳ ಎಕ್ಸ್-ಗ್ರೇಷಿಯಾ ಪಾವತಿಯನ್ನು ಹಾಗೂ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿಯಾಗಿ 15 ದಿನಗಳ ಸಂಬಳವನ್ನು ನೀಡುತ್ತಿದೆ. ಅಂತಿಮವಾಗಿ, ಈ ನಿರ್ಧಾರದಿಂದ ಸಂಕಷ್ಟಕ್ಕೊಳಗಾದ ಭಾರತೀಯ ಉದ್ಯೋಗಿಗಳಿಗೆ 1 ತಿಂಗಳ ಗಾರ್ಡನಿಂಗ್ ಲೀವ್ ಸಂಬಳ ಮತ್ತು ವಿಮೆಗಾಗಿ ರೂ. 20,000 ಮೊತ್ತವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಆ ಬಳಕೆದಾರರು ಹೀಗೆ ಬರೆದಿದ್ದಾರೆ : “ಪ್ರತಿ ವರ್ಷಕ್ಕೆ 15 ದಿನಗಳು + ವಾರ್ಷಿಕ ರಜೆ + (ಎಕ್ಸ್-ಗ್ರೇಷಿಯಾ ಅಂದರೆ ಪ್ರತಿ ವರ್ಷಕ್ಕೆ ಹೆಚ್ಚುವರಿ 15 ದಿನಗಳು + 2 ತಿಂಗಳು) + 1 ತಿಂಗಳ ಗಾರ್ಡನ್ ಲೀವ್ ಅಥವಾ ಅದರ ಬದಲಿಗೆ ಸಂಬಳ + ವಿಮೆಗಾಗಿ 20 ಸಾವಿರ. ಗಮನಿಸಿ: ಇದು ಬೆಂಗಳೂರಿನ ಐಡಿಸಿ ಡಿಬಿ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ.”
ಈ ಪೋಸ್ಟ್ ಸರಿಯಾಗಿದ್ದರೆ, ಒರಾಕಲ್ ತನ್ನ ಭಾರತೀಯ ಉದ್ಯೋಗಿಗಳಿಗೆ ಒಟ್ಟು 3 ತಿಂಗಳು ಮತ್ತು 15 ದಿನಗಳ ಸಂಬಳದ ಜೊತೆಗೆ, ಬಳಕೆಯಾಗದ ರಜೆಗಳ ಹಣ ಮತ್ತು ಅವರ ಅನುಭವದ ಆಧಾರದ ಮೇಲೆ ತಲಾ 15 ದಿನಗಳ ಮೊತ್ತವನ್ನು ನೀಡುತ್ತಿದೆ. ಉದ್ಯೋಗದ ಪೋಸ್ಟ್ ಮತ್ತು ಹುದ್ದೆಯ ಹಂತಕ್ಕೆ ಅನುಗುಣವಾಗಿ ಈ ಪ್ಯಾಕೇಜ್‌ಗಳು ಬದಲಾಗಬಹುದು, ಆದರೆ ಒರಾಕಲ್ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ವಿವರಗಳನ್ನು ನೀಡಿಲ್ಲ.
ಜನವರಿ 2026ರಲ್ಲಿ, ಅಮೆಜಾನ್ ತನ್ನ ಭಾರತದ ಉದ್ಯೋಗಿಗಳು ಸೇರಿದಂತೆ ಜಾಗತಿಕವಾಗಿ ಒಟ್ಟು 16,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ಸಂಕಷ್ಟಕ್ಕೊಳಗಾದ ಉದ್ಯೋಗಿಗಳ ಪ್ರಕಾರ, ಕಂಪನಿಯು 90 ದಿನಗಳ (3 ತಿಂಗಳು) ಪೂರ್ಣ ಸಂಬಳ ಮತ್ತು ಸೌಲಭ್ಯಗಳನ್ನು ಒಳಗೊಂಡ ಪರಿಹಾರದ ಪ್ಯಾಕೇಜ್ ನೀಡಿದೆ.
ಒರಾಕಲ್ 30,000 ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವುದು ಏಕೆ?
ಒರಾಕಲ್ ಸಂಸ್ಥೆಯು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಜ್ಜೆ ಇಡಲು ಸಿದ್ಧತೆ ನಡೆಸುತ್ತಿದೆ. ಮುಖ್ಯವಾಗಿ ಓಪನ್ ಎಐ ಸಂಸ್ಥೆಗಾಗಿ ಎಐ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಒರಾಕಲ್ ಐದು ವರ್ಷಗಳ ಅವಧಿಗೆ 156 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು, ಕಂಪ್ಯೂಟಿಂಗ್‌ಗಾಗಿ ಬೇಕಾಗುವ ವಿಶೇಷ ಚಿಪ್‌ಗಳನ್ನು ಖರೀದಿಸಲು ಕಂಪನಿಯು ಭಾರಿ ಹಣ ವ್ಯಯಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಇಂತಹ ಮೂಲಸೌಕರ್ಯಗಳಿಗಾಗಿ ಒರಾಕಲ್ ಮಾಡುತ್ತಿರುವ ವೆಚ್ಚವು ಎರಡು ವರ್ಷಗಳ ಹಿಂದೆ 6.9 ಬಿಲಿಯನ್ ಡಾಲ್ ಇತ್ತು, ಇದು ಕಳೆದ ವರ್ಷ 50 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಹೊಂದಲಾಗಿತ್ತು.
ಈ ವಜಾಗಳಿಂದ ದೊರೆಯುವ ಹಣವನ್ನು ಇಂತಹ ಹೂಡಿಕೆಗಳಿಗೆ ಬಳಸಿಕೊಳ್ಳಬಹುದು. ಇನ್ವೆಸ್ಟ್‌ಮೆಂಟ್ ಬ್ಯಾಂಕ್ ‘TD Cowen’ ಪ್ರಕಾರ, ಈ ವಜಾಗಳು ಒರಾಕಲ್ ಸಂಸ್ಥೆಗೆ ಸುಮಾರು 8 ಬಿಲಿಯನ್‌ನಿಂದ ಡಾಲರ್‌ನಿಂದ 10 ಬಿಲಿಯನ್ ಡಾಲರ್‌ವರೆಗೆ ನಗದು ಹರಿವನ್ನು ಉಳಿಸಲು ಸಹಾಯ ಮಾಡಲಿವೆ.
ಮೇ 2025ರ ಮಾಹಿತಿಯಂತೆ ಒರಾಕಲ್ ಜಾಗತಿಕವಾಗಿ ಸುಮಾರು 1,62,000 ಪೂರ್ಣ ಸಮಯದ ಸಿಬ್ಬಂದಿಯನ್ನು ಹೊಂದಿತ್ತು. ವರದಿಗಳ ಪ್ರಕಾರ, ಈ ವಜಾಗಳು ಒರಾಕಲ್ ಹೆಲ್ತ್, ಸೇಲ್ಸ್, ಕ್ಲೌಡ್, ಕಸ್ಟಮರ್ ಸಕ್ಸಸ್ ಮತ್ತು ನೆಟ್‌ಸೂಟ್ ಸೇರಿದಂತೆ ಹಲವು ವಿಭಾಗಗಳ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಒರಾಕಲ್ ಶೀಘ್ರದಲ್ಲೇ ಮತ್ತೊಂದು ಸುತ್ತಿನ ವಜಾಗಳನ್ನು ಘೋಷಿಸಬಹುದು ಎಂಬ ವದಂತಿಗಳೂ ಇವೆ. ಕಂಪನಿಯು ಸದ್ಯ ಡಾಲರ್ 108 ಬಿಲಿಯನ್‌ಗಿಂತಲೂ ಹೆಚ್ಚು ಸಾಲವನ್ನು ಹೊಂದಿದ್ದು, ಈ ಕ್ರಮವು ತನ್ನ ಹಣಕಾಸಿನ ಸ್ಥಿತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.


