ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026ರ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ ಎರಡು ತೃತೀಯಾಂಶ(ಮೂರನೇ ಎರಡು) ಬಹುಮತವನ್ನೂ ಪಡೆಯದೆ ಸೋಲು ಕಂಡಿತು.
ಈ ಮಸೂದೆಯು 2011ರ ಜನಗಣತಿಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನು ಡಿಲಿಮಿಟೇಷನ್ (ಕ್ಷೇತ್ರ ಮರುವಿಂಗಡಣೆ) ಮಾಡುವುದಕ್ಕೆ ದಾರಿ ಮಾಡಿಕೊಡುವ ಗುರಿ ಹೊಂದಿತ್ತು. ಸೋಲಿನ ನಂತರ, ಇದಕ್ಕೆ ಸಂಬಂಧಿಸಿದ ಎರಡು ಮಸೂದೆಗಳಾದ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ-2026 ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ-2026 ಈ ಎರಡನ್ನೂ ಸರ್ಕಾರವು ಹಿಂತೆಗೆದುಕೊಂಡಿದೆ.
’ಮಹಿಳಾ ಮೀಸಲಾತಿ ಮಸೂದೆ’ಯನ್ನು ಬಿಜೆಪಿ ಸರ್ಕಾರ ಮತ್ತೆ ತನ್ನ ರಾಜಕೀಯ ತಂತ್ರವಾಗಿ ಬಳಸಿಕೊಂಡಿದೆ. ಅಲ್ಲದೇ ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್‌ಗೆ ಮುಂದಾಗಿದ್ದ ಬಿಜೆಪಿಯ ಕುತಂತ್ರಕ್ಕೆ ಆದ ಸೋಲನ್ನೇ ಮೋದಿ ಸೇರಿದಂತೆ ಬಿಜೆಪಿ ನಾಯಕರು ’ಮಹಿಳಾ ಮೀಸಲಾತಿ ಮಸೂದೆಗೆ ಆಗಿರುವ ಸೋಲು’ ಎಂದು ಬಿಂಬಿಸುವ ಮೂಲಕ ಅದೇ ವಿಚಾರಗಳನ್ನು ಈಗ ಚುನಾವಣಾ ಪ್ರಚಾರದ ವಿಷಯಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ನಿಜವಾಗಲೂ ಸೋಲಾಗಿರುವುದು ’ಮಹಿಳಾ ಮೀಸಲಾತಿ ಮಸೂದೆ’ಗಾ ಅಥವಾ ಮಹಿಳಾ ಮೀಸಲಾತಿ ಮುಖವಾಡದಲ್ಲಿ ದಕ್ಷಿಣ ರಾಜ್ಯಗಳ ರಾಜಕೀಯ ಅಧಿಕಾರವನ್ನೇ ಬುಡಮೇಲು ಮಾಡುವ ಬಿಜೆಪಿಯ ವ್ಯವಸ್ಥಿತ ’ಕ್ಷೇತ್ರ ಪುನರ್‌ವಿಂಗಡಣೆ’ ಎಂಬ ವಂಚನೆಗಾ ಎಂಬ ಪ್ರಶ್ನೆ ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲ, ರಾಜಕೀಯ ವಿಶ್ಲೇಷಕರು, ಚಿಂತಕರು ಮತ್ತು ಹೋರಾಟಗಾರರು ಕೇಳುತ್ತಿದ್ದಾರೆ.
ಯಾಕೆಂದರೆ ಬಿಜೆಪಿ ಮತ್ತು ಬಿಜೆಪಿಯ ಮಡಿಲ ಮಾಧ್ಯಮಗಳು ಹೇಳುತ್ತಿರುವ ’ಮಹಿಳಾ ಮೀಸಲಾತಿ ಮಸೂದೆಗೆ ಸೋಲು’ ಎಂಬ ಸುದ್ದಿಯೇ ತಳಬುಡವಿಲ್ಲದ್ದು. ಯಾಕೆಂದರೆ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33 ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಸರ್ವಾನುಮತದಿಂದ ಮಂಡನೆಯಾಗಿ ಅಂಗೀಕೃತವಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವತಃ ಕಾಂಗ್ರೆಸ್ ಸರ್ಕಾರವೇ ಎರಡು ಬಾರಿ ಮಂಡಿಸಿತ್ತು. ಹಲವು ಕಾರಣಗಳಿಂದ ಮಸೂದೆ ಜಾರಿಯಾಗದೇ ತಡವಾಗಿತ್ತು. ಆನಂತರ 2023ರಲ್ಲಿ ಮಸೂದೆ ಅಂಗೀಕಾರವಾಗಿದ್ದಲ್ಲದೇ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು.
ಮಹಿಳಾ ಮೀಸಲಾತಿ ಚರ್ಚೆಯ ಹಾದಿ
ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ. ಬೃಹತ್ ಚುನಾವಣಾ ವ್ಯವಸ್ಥೆಯನ್ನು ಹೊಂದಿರುವ ದೇಶ, ಸಂವಿಧಾನಾತ್ಮಕ ಗಣರಾಜ್ಯವಾಗಿ ಗುರುತಿಸಿಕೊಂಡಿದೆ. ಇದೆಲ್ಲದರ ನಡುವೆ ದೇಶ ಸ್ವಾತಂತ್ರ್ಯ ಗಳಿಸಿ 78 ವರ್ಷಗಳು ಕಳೆದರೂ ದೇಶದ ಶಾಸನ ರಚನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮಾತ್ರ ಅತ್ಯಂತ ನಿರಾಶಾದಾಯಕವಾಗಿದೆ.
ದೇಶದ ಜನಸಂಖ್ಯೆಯಲ್ಲಿ ಶೇ. 50ರಷ್ಟಿರುವ ಮಹಿಳೆಯರಿಗೆ ಲೋಕಸಭೆಯಲ್ಲಿ ಇಂದಿಗೂ ಇರುವ ಪ್ರಾತಿನಿಧ್ಯ ಕೇವಲ ಶೇ. 13.6ರಿಂದ 15ರಷ್ಟು ಮಾತ್ರ. ಈ ಅಸಮಾನತೆಯನ್ನು ಸರಿದೂಗಿಸಲು ’ಮಹಿಳಾ ಮೀಸಲಾತಿ ಮಸೂದೆ’ಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಚರ್ಚೆ ನಡೆಯುತ್ತಲೇ ಇದೆ.
* 1917-1919ರ ವೇಳೆಯಲ್ಲಿ ಬ್ರಿಟಿಷ್ ಸರ್ಕಾರದ ಮಾಂಟೇಗ್ಯು-ಚೆಲ್ಮ್‌ಸ್‌ಫರ್ಡ್ ಸುಧಾರಣೆಗಳು (Montagu-Chelmsford Reforms) ಮತ್ತು 1919ರ Government of India Act ಸಂದರ್ಭದಲ್ಲಿ ಮಹಿಳೆಯರ ರಾಜಕೀಯ ಹಕ್ಕುಗಳ ಬಗ್ಗೆ ಚರ್ಚೆ ತೀವ್ರಗೊಂಡಿತು. ಮೊದಲು ಮಹಿಳೆಯರಿಗೆ ಮತದಾನ ಹಕ್ಕು (suffrage) ಬೇಡಿಕೆ ಇತ್ತು (1917ರಲ್ಲಿ ಮಾರ್ಗರೆಟ್ ಕೌಸಿನ್ಸ್ ನೇತೃತ್ವದಲ್ಲಿ ಡೆಪ್ಯೂಟೇಶನ್). ಆದರೆ 1920ರಲ್ಲಿ ಇದು ಪ್ರಾಂತೀಯ ಶಾಸನಸಭೆಗಳಲ್ಲಿ ಪ್ರಾತಿನಿಧ್ಯಕ್ಕೆ ವಿಸ್ತರಣೆಗೊಂಡಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸರೋಜಿನಿ ನಾಯ್ಡು ಮತ್ತು ಮಾರ್ಗರೆಟ್ ಕೌಸಿನ್ಸ್ (Women’s Indian Association – WIA ಸಂಸ್ಥಾಪಕಿ, ಐರಿಷ್-ಭಾರತೀಯ ಸ್ತ್ರೀವಾದಿ) ಅವರು ಮಹಿಳಾ ಗುಂಪನ್ನು ಮುನ್ನಡೆಸುವ ಮೂಲಕ ಪ್ರಾಂತೀಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಬೇಡಿಕೆ ಇಟ್ಟರು. ಇದು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಸಾಮಾಜಿಕ-ರಾಜಕೀಯ ಸಮಾನತೆಗಾಗಿ ಒತ್ತಾಯಿಸಿದ ಮೊದಲ ಬೇಡಿಕೆಯಾಗಿತ್ತು.
ಆದರೆ ಈ ಬೇಡಿಕೆಯನ್ನು ಹೆಚ್ಚಿನ ಮಹಿಳಾ ಸಂಘಟನೆಗಳು (All India Women’s Conference, Women’s Indian Association, National Council of Women in India), ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ವಿರೋಧಿಸಿದವು. ಇದು ಬ್ರಿಟಿಷ್ “divide and rule” ನೀತಿಗೆ ಸಹಕಾರಿಯಾಗುತ್ತದೆ ಹಾಗೇ ಸಾರ್ವತ್ರಿಕ ವಯಸ್ಕ ಮತದಾನ (universal adult franchise) ಮತ್ತು ಸಮಾನ ಚುನಾವಣಾ ಹಕ್ಕುಗಳಿಗೆ ಅಡ್ಡಿಯಾಗುತ್ತದೆ ಎಂದು ಭಾವಿಸಲಾಯಿತು. ಮಹಿಳೆಯರು “ಪ್ರತ್ಯೇಕ ಜಾತಿ”ಯಾಗಬಾರದು ಎಂಬ ನಿಲುವು ವಿರೋಧಿಗಳದ್ದಾಗಿತ್ತು.
ಹೀಗೆ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಸಂಘಟನೆಗಳಲ್ಲಿ ಹೆಚ್ಚಿನವರು ಮೇಲ್ಜಾತಿಯ, ಮೇಲ್ವರ್ಗದ, ಆರ್ಥಿಕವಾಗಿ ಸದೃಢವಾಗಿದ್ದ ಮಹಿಳೆಯರೇ ಹೆಚ್ಚಿದ್ದರು., ಕೆಲವು ದಮನಿತ ಸಮುದಾಯಗಳ ಮಹಿಳೆಯರಿದ್ದರಾದರೂ ಅವರ ಮಾತಿಗೆ ಮಾನ್ಯತೆ ದೊರೆಯುತ್ತಿದ್ದದ್ದು ಬಹಳ ಕಡಿಮೆ. ಹಾಗಾಗಿ ತಳಸಮುದಾಯಗಳ ಮಹಿಳೆಯರು ಈ ಸಂಘಟನೆಗಳನ್ನು “ಮೇಲ್ವರ್ಗದ ಮಹಿಳೆಯರ ಕ್ಲಬ್‌ಗಳು” ಎಂದೇ ಭಾವಿಸಿದ್ದರು. ಮೂಲದಲ್ಲಿ ಭಾರತದ ಜಾತೀಯತೆ, ಮೂಲಭೂತವಾದ ತತ್ವಗಳನ್ನು ಆಚರಿಸುತ್ತಿದ್ದವರೇ ಹೆಚ್ಚಿನವರಾದ್ದರಿಂದ ಸಮಾನತೆಯ ಆಶಯಗಳನ್ನೇ ಅನುಮಾನದಲ್ಲಿ ನೋಡುವಂತಾಗಿತ್ತು.
1928ರಲ್ಲಿ ಸೈಮನ್ ಕಮೀಷನ್‌ಗೆ ಮಹಿಳಾ ಸಂಘಟನೆಗಳು ಪ್ರತ್ಯೇಕ ಮೀಸಲಾತಿ ಬೇಡಿಕೆ ಸಲ್ಲಿಸಿದವು. ಆದರೆ 1931ರಲ್ಲಿ ಸರೋಜಿನಿ ನಾಯ್ಡು ಮತ್ತು ಬೇಗಂ ಷಾ ನವಾಜ್ ಅವರು ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಬೇಡುವುದನ್ನು ವಿರೋಧಿಸಿ, ಸಮಾನತೆಯ ಮೂಲಕ ಪ್ರಾತಿನಿಧ್ಯ ಬೇಕು ಎಂದು ಹೇಳಿದ್ದರು. ಸಂವಿಧಾನ ಸಭೆಯಲ್ಲಿ (1946–1949) ಮಹಿಳಾ ಸದಸ್ಯರು (ಸುಮಾರು 15 ಮಂದಿ) ಮೀಸಲಾತಿಯನ್ನು ವಿರೋಧಿಸಿದ್ದರು. ಇದರಿಂದಾಗಿ ಮತ್ತೆ ಮಹಿಳಾ ಮೀಸಲಾತಿ ಚರ್ಚೆ ನೆನೆಗುದಿಗೆ ಬೀಳುವಂತಾಯಿತು.
1920ರಲ್ಲಿ ಮಹಿಳೆಯರಿಗೆ ಪ್ರಾಂತೀಯ ಶಾಸನಸಭೆಗಳಲ್ಲಿ ಸಮಾನ ಪ್ರಾತಿನಿಧ್ಯ ಬೇಡಿಕೆ ಇಟ್ಟ ಸರೋಜಿನಿ ನಾಯ್ಡು ಅವರೇ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿದರು. ಅಲ್ಲದೇ ಯಾವುದೇ ವಿಶೇಷ ಸೌಲಭ್ಯ ಬೇಡುವುದು ಮಹಿಳೆಯರ ಸಾರ್ವತ್ರಿಕ ಸಮಾನತೆಯ ಬೇಡಿಕೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
1980–1990ರ ದಶಕದಲ್ಲಿ ಮಹಿಳಾ ಮೀಸಲಾತಿ ವಿಚಾರ ಮುನ್ನಲೆಗೆ ಬಂದಿತು. 1987ರಲ್ಲಿ ರಾಜೀವ್ ಗಾಂಧಿ ಸರ್ಕಾರ ಮಹಿಳಾ ಮೀಸಲಾತಿಗಾಗಿ ಮಾರ್ಗರೇಟ್ ಆಳ್ವಾ ನೇತೃತ್ವದ ಸಮಿತಿ ರಚಿಸಿತು. 1989ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ 33% ಮೀಸಲಾತಿ ಬಿಲ್ ಮಂಡಿಸಲಾಯಿತು. ಲೋಕಸಭೆಯಲ್ಲಿ ಮಸೂದೆ ಅಂಗೀಕೃತವಾಯಿತು. ಆದರೆ ರಾಜ್ಯಸಭೆಯಲ್ಲಿ (ಸೆಪ್ಟೆಂಬರ್ 1989) ಅಗತ್ಯವಾದ ಮೂರನೇ ಎರಡರಷ್ಟು ಬಹುಮತ (two-thirds majority) ಪಡೆಯಲು ವಿಫಲವಾಯಿತು.
1992–93 ಪಿ.ವಿ. ನರಸಿಂಹ ರಾವ್ ಸರ್ಕಾರ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 33% ಮಹಿಳಾ ಮೀಸಲಾತಿ ಅನ್ನು ಕಡ್ಡಾಯಗೊಳಿಸಿತು. ಇದು ಮಹಿಳಾ ಮೀಸಲಾತಿ ನೆಲೆಯಲ್ಲಿ ದೊಡ್ಡ ಯಶಸ್ಸು. ಇದರ ನಂತರ ರಾಷ್ಟ್ರೀಯ ಮಟ್ಟದಲ್ಲಿ (ಲೋಕಸಭೆ ಮತ್ತು ವಿಧಾನಸಭೆ) 33% ಮೀಸಲಾತಿಗೆ ಬೇಡಿಕೆ ತೀವ್ರಗೊಂಡಿತು.
ಸದ್ಯ ಚರ್ಚೆಯಲ್ಲಿರುವ 33% ಮಹಿಳಾ ಮೀಸಲಾತಿಯ ನಿರ್ದಿಷ್ಟ ಚರ್ಚೆ ಮತ್ತು ಬಿಲ್ ಮಂಡನೆ ನಡೆದಿದ್ದು 1996ರಲ್ಲಿ. ಆಗ ಅಧಿಕಾರದಲ್ಲಿದ್ದ ಹೆಚ್.ಡಿ. ದೇವೇಗೌಡ ಅವರ ನಾಯಕತ್ವದಲ್ಲಿ ರಚನೆಯಾದ ಯುನೈಟೆಡ್ ಫ್ರಂಟ್ ಸರ್ಕಾರ 1996ರ ಸೆಪ್ಟೆಂಬರ್ 12ರಂದು ಲೋಕಸಭೆಯಲ್ಲಿ 81ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು.
ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮೊದಲ ಮಸೂದೆಯಾಗಿತ್ತು. ಈ ಮಸೂದೆಯನ್ನು ಜಂಟಿ ಸಮಿತಿಗೆ ಕಳುಹಿಸಲಾಯಿತು. ಆದರೆ ಸರ್ಕಾರ ಬಿದ್ದುಹೋದ ಕಾರಣ ಲೋಕಸಭೆಯನ್ನೇ ವಿಸರ್ಜನೆ ಮಾಡಲಾಯಿತು. ಇದರಿಂದಾಗಿ ಆ ಮಸೂದೆಯೂ ಬಿದ್ದುಹೋಯಿತು.
ಮತ್ತೆ 1998ರಿಂದ 2003ರ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ’ಮಹಿಳಾ ಮೀಸಲಾತಿ ಮಸೂದೆ’ಯನ್ನು ನಾಲ್ಕು ಬಾರಿ ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಪಕ್ಷಗಳ ನಡುವೆ ಒಮ್ಮತ ಮೂಡದೇ ಇದ್ದುದರಿಂದ ಮಸೂದೆ ಅಂಗೀಕಾರವಾಗಿರಲಿಲ್ಲ.

ಆ ನಂತರದಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ 2008ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿತ್ತು. ಚರ್ಚೆಯ ಬಳಿಕ ಸಂಸದೀಯ ಸ್ಥಾಯಿ ಸಮಿತಿಗೆ ಮಸೂದೆಯನ್ನು ಒಪ್ಪಿಸಲಾಗಿತ್ತು. ಲೋಕಸಭೆಯ ಅವಧಿ ಮುಗಿಯುವವರೆಗೂ ವರದಿ ಬಾರದೇ ಇದ್ದುದರಿಂದ ಮಸೂದೆ ಮತ್ತೆ ಬಿದ್ದು ಹೋಯಿತು.
2014, 2019ರ ಚುನಾವಣೆ ಸಂದರ್ಭದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದ ಬಿಜೆಪಿ ಈ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ.
2021ರಲ್ಲಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟವು ಸುಪ್ರೀಂಕೋರ್ಟ್‌ನಲ್ಲಿ ಮಹಿಳಾ ಮೀಸಲಾತಿ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಲೋಕಸಭೆಯಲ್ಲಿ ಮಂಡಿಸಲು ನಿರ್ದೇಶನ ನೀಡಬೇಕು ಎಂದು ಅದು ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎರಡು ಬಾರಿ ಸೂಚನೆ ನೀಡಿದ್ದರೂ ಎರಡು ವರ್ಷ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದೆಲ್ಲದರ ನಡುವೆ 2023ರ ಆಗಸ್ಟ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಎರಡೂ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ’ನಾರಿ ಶಕ್ತಿ ವಂದನಾ ಮಸೂದೆ’ ಎಂಬ ಹೆಸರಿನಲ್ಲಿ ಮಂಡಿಸಿತ್ತು. ಇದು ಸರ್ವಾನುಮತದಿಂದ ಅಂಗೀಕಾರವೂ ಆಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್‌ನಲ್ಲಿ ಮಸೂದೆಗೆ ಅಂಕಿತವನ್ನು ಹಾಕಿದ್ದರು.
ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಯಾದ ಕೇಂದ್ರದ ನಿಯಮಗಳು
ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಸರ್ವಾನುಮತದಿಂದ ಅಂಗೀಕಾರವಾಗಿದ್ದರೆ ಮಹಿಳಾ ಮೀಸಲಾತಿ ಜಾರಿಯಾಗಿಲ್ಲವೇಕೆ ಅನ್ನುವ ಪ್ರಶ್ನೆ ಎಲ್ಲರೊಳಗೂ ಉದ್ಭವಿಸಬಹುದು. ಆದರೆ ಮಹಿಳಾ ಮೀಸಲಾತಿ ಜಾರಿ ತಮ್ಮ ಪಕ್ಷದ ಉದ್ದೇಶವೇ ಆಗಿಲ್ಲದ ಬಿಜೆಪಿ ತಾನು ಮಂಡಿಸಿದ ಈ ಮಹತ್ವದ ಮಸೂದೆಯಲ್ಲಿಯೂ ಅದು ಜಾರಿಯಾಗದಂತೆ ತಡೆಯುವ ಹಲವು ನಿಯಮಗಳನ್ನು ಸೇರಿಸಿದ್ದೇ ಮಸೂದೆ ಜಾರಿಗೆ ದೊಡ್ಡ ಅಡ್ಡಿಯಾಯಿತು.
ಹೌದು, 2023ರಲ್ಲಿ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕೃತವಾದ ’ನಾರಿ ಶಕ್ತಿ ವಂದನ ಅಧಿನಿಯಮ’ (106ನೇ ಸಾಂವಿಧಾನಿಕ ತಿದ್ದುಪಡಿ) ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ಒದಗಿಸುವ ಮಹತ್ವದ ಕಾಯ್ದೆಯಾಗಿತ್ತು. ಆದರೆ ಈ ಕಾಯ್ದೆಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್)ಗೆ ನೇರವಾಗಿ ಜೋಡಿಸಲಾಗಿತ್ತು.
ಕಾಯ್ದೆಯ ಪ್ರಕಾರ, ಮಹಿಳಾ ಮೀಸಲಾತಿ ಮುಂದಿನ ಜನಗಣತಿ ಪೂರ್ಣಗೊಂಡ ನಂತರ ಮತ್ತು ಅದರ ಆಧಾರದ ಮೇಲೆ ನಡೆಯುವ ಕ್ಷೇತ್ರ ಮರುವಿಂಗಡಣೆಯ ನಂತರವಷ್ಟೇ ಜಾರಿಗೆ ಬರಬೇಕಿತ್ತು. 2011ರ ಜನಗಣತಿಯ ನಂತರ ಮುಂದಿನ ಜನಗಣತಿ ತಡವಾಗಿರುವುದರಿಂದ, ಮೀಸಲಾತಿ ಜಾರಿಯು 2029ರ ಲೋಕಸಭಾ ಚುನಾವಣೆಗೂ ಮುಂಚೆ ಸಾಧ್ಯವಾಗದಂತೆ ಆಯಿತು.
ಈ ನಿಯಮಗಳಿಂದಾಗಿ ಮಹಿಳೆಯರಿಗೆ ತಕ್ಷಣದ ರಾಜಕೀಯ ಪ್ರಾತಿನಿಧ್ಯ ದೊರೆಯದೆ, ಮೀಸಲಾತಿ ಜಾರಿ ದೀರ್ಘಕಾಲದವರೆಗೆ ಮುಂದೂಡಲ್ಪಟ್ಟಿತು. ವಿರೋಧ ಪಕ್ಷಗಳು ಇದನ್ನು “ಮಹಿಳಾ ಸಬಲೀಕರಣಕ್ಕೆ ಬದಲು ರಾಜಕೀಯ ತಂತ್ರ ಎಂದು ಟೀಕಿಸಿದ್ದವು. ಈ ಜೋಡಣೆಯೇ ಮುಖ್ಯ ಕಾರಣವಾಗಿ 2023ರಲ್ಲಿ ಪಾಸ್ ಆದ ಮಸೂದೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.
ಮಹಿಳಾ ಮೀಸಲಾತಿ ವಿಚಾರವನ್ನು ಚುನಾವಣಾ ಗಿಮಿಕ್ ಆಗಿ ಬಳಸುತ್ತಿರುವ ಮೋದಿ ಸರ್ಕಾರ
’ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ವಿಪಕ್ಷಗಳಿಂದ ಭ್ರೂಣಹತ್ಯೆಯಾಗಿದೆ’ ಎಂದು ಸಾರ್ವಜನಿಕ ಮಾಧ್ಯಮಗಳಲ್ಲೂ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ಮೋದಿ ಅವರು ಆರೋಪಿಸುತ್ತಿದ್ದಾರೆ. ಆದರೆ ಚುನಾವಣಾ ನೀತಿಸಂಹಿತೆ ಜಾರಿ ಇರುವ ಸಮಯದಲ್ಲಿ ವಿಪಕ್ಷಗಳೊಂದಿಗೆ ಚರ್ಚೆಯನ್ನೂ ಮಾಡದೆ ತ್ವರಿತವಾಗಿ ’ಮಹಿಳಾ ಮೀಸಲಾತಿ ಮಸೂದೆ’ ತಿದ್ದುಪಡಿ ಹೆಸರಿನ ಅಡಿಯಲ್ಲಿ ಡಿಲಿಮಿಟೇಷನ್‌ಗೆ ಮುಂದಾಗಿದ್ದೇ ಬಿಜೆಪಿಯ ಚುನಾವಣಾ ತಂತ್ರದ ಭಾಗ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕಿಸಿವೆ.
ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹೊತ್ತಿನಲ್ಲಿ ಎರಡು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಹೊರಟಿದ್ದು ಸಹ ಸಾಕಷ್ಟು ಅನುಮಾನವನ್ನು ಹುಟ್ಟುಹಾಕುವುದಲ್ಲದೇ, ದಕ್ಷಿಣ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದೆ.
2023ರಲ್ಲಿಯೇ ಸರ್ವಾನುಮತದಿಂದ ಅಂಗೀಕಾರವಾಗಿರುವ ಮಹಿಳಾ ಮೀಸಲಾತಿ ಮಸೂದೆಗೆ ಈಗ ತರಾತುರಿಯಲ್ಲಿ ತಿದ್ದುಪಡಿ ಮಾಡುವ ಹುನ್ನಾರವೇ ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಅನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಗಳಲ್ಲಿ ಲಾಭ ಪಡೆಯುವ ಬಿಜೆಪಿಯ ಲೆಕ್ಕಾಚಾರವೂ ಇದರ ಹಿಂದೆ ಇದ್ದೇ ಇದೆ.
ಕ್ಷೇತ್ರ ಪುನರ್‌ವಿಂಗಡಣೆ ಎಂಬ ರಾಜಕೀಯ ದ್ರೋಹ
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬಹುಮುಖ್ಯ ತೊಡಕಾಗಿರುವುದು ಡಿಲಿಮಿಟೇಷನ್ (ಕ್ಷೇತ್ರ ಮರುವಿಂಗಡಣೆ) ಎಂಬ ಕೇಂದ್ರದ ಸರ್ವಾಧಿಕಾರಿ ಧೋರಣೆ.
ಕೇಂದ್ರ ಸರ್ಕಾರ ಈಗಾಗಲೇ ಎಸ್‌ಐಆರ್ ಮೂಲಕ ಸಂವಿಧಾನದ ಆಶಯಗಳಿಗೆ ಕೊಡಲಿ ಪೆಟ್ಟು ನೀಡಿದೆ. ಇದೀಗ ಮುಂದಿನ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮಹಿಳಾ ಮೀಸಲಾತಿ ಮಸೂದೆ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆ ಎಂಬ ವಿನಾಶಕಾರಿ ಕಾಯ್ದೆ ಜಾರಿಗೆ ರಂಗಸಜ್ಜಿಕೆಯನ್ನು ಸಿದ್ಧ ಮಾಡುತ್ತಿದೆ. ಇದು ದಕ್ಷಿಣ ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ. ಇದೇ ಕಾರಣಕ್ಕೆ ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ ಸರ್ಕಾರಗಳು ಈ ಕ್ಷೇತ್ರ ಮರುವಿಂಗಡಣೆಯನ್ನು ಬಲವಾಗಿ ವಿರೋಧಿಸುತ್ತಿವೆ.
ಮಹಿಳಾ ಮೀಸಲಾತಿ ಮಸೂದೆ ಮಹಿಳೆಯರನ್ನು ರಾಜಕೀಯವಾಗಿ ಸದೃಢಗೊಳಿಸುವ ಯೋಜನೆ ಎಂದು ಬಿಜೆಪಿ ಬಾಯಿಮಾತಿಗೆ ಹೇಳುತ್ತಿದ್ದರೂ ಅದರ ಉದ್ದೇಶವಿರುವುದು ಈಗಿರುವ ಲೋಕಸಭೆಯ 543 ಸ್ಥಾನಗಳನ್ನು 850ಕ್ಕೆ ಏರಿಸುವುದು. ಜನಸಂಖ್ಯಾ ಆಧಾರದಲ್ಲಿ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ಈ ಕಾಯ್ದೆಯೇ ದಕ್ಷಿಣ ಭಾರತದ ರಾಜ್ಯಗಳನ್ನು ರಾಜಕೀಯವಾಗಿ ಮುಗಿಸುವ ಕಾಯ್ದೆಯಾಗಿದೆ.
ಯಾಕೆಂದರೆ ಭಾರತದ ಸಾಮಾಜಿಕ ಸಮಸ್ಯೆಯಾಗಿದ್ದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿ 2000ಯನ್ನು ಅತ್ಯುತ್ತಮವಾಗಿ ಜಾರಿಗೊಳಿಸಿದ ದಕ್ಷಿಣ ರಾಜ್ಯಗಳು ಈಗ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣ ರಾಜ್ಯಗಳ ರಾಜಕೀಯ ಅಸ್ಮಿತೆಯೇ ಕೊನೆಯಾಗುತ್ತದೆ. ಅಲ್ಲದೇ ತಾವು ಸಾಧಿಸಿದ ಅಭಿವೃದ್ಧಿಗೆ, ಭಾರತದ ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಶಿಕ್ಷೆ ಅನುಭವಿಸುವಂತಾಗುತ್ತದೆ. ಬದಲಾಗಿ ಜನಸಂಖ್ಯೆ ನಿಯಂತ್ರಿಸದ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಲೋಕಸಭೆಯ ಸ್ಥಾನಗಳು ಹೆಚ್ಚಾಗುವುದಲ್ಲದೇ ಕೇಂದ್ರ ಸರ್ಕಾರ ಸರ್ವಾಧಿಕಾರಿಯಾಗಿ ಬದಲಾಗುತ್ತದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಜನಗಣತಿ ಆಧಾರದ ಕ್ಷೇತ್ರ ಮರುವಿಂಗಡಣೆಗೆ ಜೋಡಿಸಿರುವುದೇ ದ್ರೋಹ. ಯಾಕೆಂದರೆ ಜನಸಂಖ್ಯಾ ನಿಯಂತ್ರಣ ಎಂಬುದು ಮಹಿಳಾ ಅಭಿವೃದ್ಧಿಯೊಂದಿಗೆ ಬೆಸೆದುಕೊಂಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ರಾಜ್ಯಗಳು ಮಹಿಳಾ ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆ ಕಾರಣಕ್ಕೆ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗಿದೆ. ಒಂದು ಮಟ್ಟಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮಹಿಳೆಯರ ಸುರಕ್ಷಿತ ಜೀವನ ಸಾಧ್ಯವಾಗಿದೆ. ಇದಾವುದಕ್ಕೂ ಮಹತ್ವ ನೀಡದ ಕಾರಣ ಉತ್ತರ ಭಾರತದಲ್ಲಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಈ ಜನಸಂಖ್ಯಾ ಆಧಾರದಲ್ಲೇ ಲೋಕಸಭೆ ಸೀಟುಗಳನ್ನು ಹೆಚ್ಚಿಸಿದರೆ ಅದರಲ್ಲಿ ಉತ್ತರ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಾಗುತ್ತದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿರುವ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಇದು ಕೇಂದ್ರದ ಯಾವುದೇ ಕಾಯ್ದೆ, ಕಾನೂನುಗಳ ಜಾರಿ ವಿಚಾರದಲ್ಲಿ ದಕ್ಷಿಣ ರಾಜ್ಯಗಳು ಲೆಕ್ಕಕ್ಕೇ ಇಲ್ಲದಂತಾಗುತ್ತದೆ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಗೆ ಬಹುದೊಡ್ಡ ತೊಡಕಾಗುತ್ತದೆ.
ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗುವುದು ಬಿಜೆಪಿಯ ಉದ್ದೇಶವಲ್ಲ!
ಸದ್ಯ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಚಾರವೆಂದರೆ ’ಮಹಿಳಾ ಮೀಸಲಾತಿ ಮಸೂದೆ’ ಜಾರಿಯಾಗುವುದು ಬಿಜೆಪಿಯ ಉದ್ದೇಶವೇ ಆಗಿರಲಿಲ್ಲ ಎಂಬುದು. ಯಾಕೆಂದರೆ ಕೇಂದ್ರ ಸರ್ಕಾರ ಮಂಡಿಸಿದ ಮೂರು ಮಸೂದೆಗಳಿಗೆ ಸಾಂವಿಧಾನಿಕ ತಿದ್ದುಪಡಿ ವಿಧೇಯಕ ಅಂಗೀಕಾರವಾಗಲು ಕೇಂದ್ರದ ಬಳಿ ಸಂಖ್ಯಾಬಲ ಇರಲಿಲ್ಲ. ಆದ್ದರಿಂದ ಮೋದಿ ಸರ್ಕಾರಕ್ಕೆ ಈ ಮಸೂದೆಗಳು ಅಂಗೀಕಾರಗೊಳ್ಳುವುದಿಲ್ಲ ಎಂಬ ಸ್ಪಷ್ಟತೆ ಮೊದಲೆ ಇತ್ತು. ಆದರೆ ತಮ್ಮ ಚುನಾವಣಾ ತಂತ್ರಕ್ಕೆ ಮಸೂದೆಗಳನ್ನು ಬಳಸಿಕೊಂಡ ಬಿಜೆಪಿ ಮಸೂದೆ ಪಾಸ್ ಆದರೆ ಒಂದು, ಸೋತರೆ ಮತ್ತೊಂದು ಲೆಕ್ಕಾಚಾರದೊಂದಿಗೆ ಮಸೂದೆಗಳನ್ನು ಮಂಡಿಸಿತ್ತು. ಈ ಮಸೂದೆಗಳು ಅಂಗೀಕಾರವಾಗಲು ಕೇಂದ್ರ ಸರ್ಕಾರಕ್ಕೆ 352 ಮತಗಳ ಅವಶ್ಯಕತೆಯಿತ್ತು. ಆದರೆ, ಮಸೂದೆಗಳ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಆ ಮೂಲಕ, 54 ಮತಗಳ ಅಂತರದಿಂದ, ಬಿಜೆಪಿ ಸರ್ಕಾರಕ್ಕೆ ನಿರೀಕ್ಷಿಸಿದಂತೆ ಸೋಲಾಗಿದೆ.
ಸದ್ಯ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಬಾಕಿ ಇರುವುದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳದ್ದು. ಈ ಎರಡು ರಾಜ್ಯಗಳಲ್ಲಿ ಅತಿಹೆಚ್ಚು ಮಹಿಳಾ ಮತದಾರರಿದ್ದಾರೆ, ಚುನಾವಣೆಗಳಲ್ಲಿ ನಿರ್ಣಾಯಕವಾಗಿರುವ ಮಹಿಳಾ ಮತಗಳ ಮೇಲೆ ಬಿಜೆಪಿಯ ಕಣ್ಣಿದೆ. ಅಲ್ಲದೇ ಈ ಎರಡೂ ರಾಜ್ಯಗಳನ್ನೂ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳುವುದು ಬಿಜೆಪಿಯ ದಶಕಗಳ ಕನಸು, ಹಾಗಾಗಿಯೇ, ಇಲ್ಲಿನ ಮತದಾನಕ್ಕೆ ಒಂದು ವಾರ ಇರುವಾಗ ಈ ವಿಶೇಷ ಅಧಿವೇಶನ ಕರೆಯಲಾಗಿತ್ತು ಎಂದು ಹಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಮುಖ್ಯವಾಗಿ ಲೋಕಸಭೆಯಲ್ಲಿ NDA ಮತ್ತು ಇಂಡಿಯಾ ಮೈತ್ರಿಕೂಟದ ಬಲಾಬಲವನ್ನು ಅವಲೋಕಿಸಿದಾಗ, ಎರಡು ಮೈತ್ರಿಕೂಟದಿಂದ ಹೊರತಾಗಿ ಕಾಣಿಸಿಕೊಂಡ ಪಕ್ಷಗಳು, ಬಿಜೆಪಿ ಪರವಾಗಿ ಮತಚಲಾಯಿಸಿದರೂ, ಮಸೂದೆ ಅಂಗೀಕಾರವಾಗಲು ಬೇಕಾದ ನಂಬರ್ ಸಿಗುತ್ತಿರಲಿಲ್ಲ ಎನ್ನುವುದೇ ವಾಸ್ತವ. ಆದರೆ ಈ ಸಮಯನ್ನು ತನ್ನ ಪ್ರಚಾರಕ್ಕೆ ತಕ್ಕಂತೆ ಸಿದ್ಧಮಾಡಿಕೊಂಡದ್ದು ಬಿಜೆಪಿ ರಾಜಕೀಯ ಲೆಕ್ಕಾಚಾರವೇ ಆಗಿತ್ತು.
ಮಸೂದೆ ಸೋಲಿನ ಬೆನ್ನಲ್ಲೇ ಹೆಚ್ಚು ಚರ್ಚೆಯಾದ ವಿಷಯವೆಂದರೆ ಸಂಖ್ಯಾಬಲದ ಕೊರತೆ ಮತ್ತು ಬಿಲ್ ಮಂಡನೆಯ ಟೈಮಿಂಗ್ಸ್. ಒಂದು ವೇಳೆ ಈ ಮಸೂದೆ ಗೆದ್ದಿದ್ದರೆ, ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಿತ್ತು. ಸೋತರೆ, ವಿಪಕ್ಷಗಳಿಂದ ಸೋಲಾಯಿತು ಎಂದು ಮತದಾರರ ಮುಂದೆ ಹೋಗುವ ಯೋಜನೆಯೂ ಸಿದ್ಧವಾಗಿತ್ತು. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮಾತನಾಡುತ್ತಿರುವುದು ಅದೇ ಧಾಟಿಯಲ್ಲಿ.
ಇದಕ್ಕೆ ಸಾಕ್ಷಿ ಎಂಬಂತೆ ’ನಾರಿಶಕ್ತಿ ಮಸೂದೆ’ಯ ಸಂಪೂರ್ಣ ಕ್ರೆಡಿಟ್ ಅನ್ನು ವಿಪಕ್ಷಗಳಿಗೆ ನೀಡುತ್ತೇನೆ, ನಿಮಗೆ ಬ್ಯ್ಲಾಂಕ್ ಚೆಕ್ ಕೊಡುತ್ತೇನೆ, ವಿರೋಧಿಸಿದರೆ ಅದರ ಕ್ರೆಡಿಟ್ ಅನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯಲ್ಲಿಯೇ ಹೇಳಿದ್ದರು. ’ಮಹಿಳಾ ಮಸೂದೆಗೆ ವಿರೋಧಿಸಿದ ವಿಪಕ್ಷದವರನ್ನು ನಮ್ಮ ದೇಶದ ಮಹಿಳೆಯರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ’ ಎಂದು ಅಮಿತ್ ಶಾ ಹೇಳಿದ್ದರು. ಆ ಮೂಲಕ, ಮಸೂದೆ ಸೋಲನ್ನು ಬಿಜೆಪಿ ಯಾವ ರೀತಿ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವ ಸುಳಿವನ್ನು ಅಂದೇ ನೀಡಿತ್ತು.
ಬಿಜೆಪಿಯ ಲೆಕ್ಕಾಚಾರದಂತೆ ಕ್ಷೇತ್ರ ಮರುವಿಂಗಡಣೆಯನ್ನು ವಿರೋಧಿಸಲು ಹೋಗಿ, ಮಹಿಳಾ ಮೀಸಲಾತಿಗೆ ಸೋಲಾಗುವಂತೆ ವಿಪಕ್ಷಗಳು ಒಗ್ಗಟ್ಟಾದವು. ಆ ಮೂಲಕ, ಮಹಿಳಾ ಸಬಲೀಕರಣವನ್ನು ವಿಪಕ್ಷಗಳು ತಡೆದಿವೆ ಎನ್ನುವ ಆಯಾಮದಲ್ಲಿ ಬಿಜೆಪಿ ಮೈತ್ರಿಕೂಟ ರಾಜಕೀಯ ಹೆಜ್ಜೆಯನ್ನಿಡುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಲು ಬಯಸಿದೆವು, ಮಹಿಳಾ ಶಕ್ತಿಯನ್ನು ದೇಶದಲ್ಲಿ ಇನ್ನಷ್ಟು ಮುಂದಕ್ಕೆ ತರಲು ಪ್ರಯತ್ನಿಸಿದೆವು, ಆದರೆ, ವಿಪಕ್ಷಗಳು ಅದಕ್ಕೆ ಕಲ್ಲುಹಾಕಿವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿಯ ಪ್ರಮುಖ ರಾಜಕೀಯ ತಂತ್ರವಾಗಿತ್ತು.
ಅಂಬೇಡ್ಕರ್ ಅವರ ಬಹುದೊಡ್ಡ ಕನಸಾಗಿದ್ದ ’ಹಿಂದೂ ಕೋಡ್ ಬಿಲ್’ ಕಾಯ್ದೆಯನ್ನು ಸುಟ್ಟಿದ್ದ ಬಿಜೆಪಿ
ದೇಶದ ಅರ್ಧ ಪಾಲು ಜನಸಂಖ್ಯೆ ಇರುವ ಮಹಿಳೆಯರಿಗೆ ಕೇವಲ 33% ಮೀಸಲಾತಿ ಕಲ್ಪಿಸಲು ಮೂರ್ನಾಲ್ಕು ದಶಕಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. “ವರ್ಗಗಳ ನಡುವೆ ಮತ್ತು ಲಿಂಗಗಳ ನಡುವಿನ ಅಸಮಾನತೆಯನ್ನು ಮುಟ್ಟದೆ, ಆರ್ಥಿಕ ಕಾನೂನುಗಳನ್ನು ಮಾತ್ರ ಜಾರಿಗೊಳಿಸುವುದು ಸಂವಿಧಾನವನ್ನು ಹಾಸ್ಯ ಮಾಡುವಂತೆ. ಇದು ಕೊಳೆತ ಅಡಿಪಾಯದ ಮೇಲೆ ಅರಮನೆ ಕಟ್ಟುವಂತೆ” ಎಂದು ಬಾಬಾ ಸಾಹೇಬರು ಹೇಳಿದ್ದ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ಇಲ್ಲಿ ಬೇರು ಬಿಟ್ಟಿರುವ ವರ್ಗ ಅಸಮಾನತೆ ಮತ್ತು ಮುಖ್ಯವಾಗಿ ಲಿಂಗ ಅಸಮಾನತೆಯ ಕುರಿತು ಅಂಬೇಡ್ಕರ್ ಅವರಿಗಿದ್ದ ದೂರದೃಷ್ಟಿಯೇ ’ಹಿಂದೂ ಕೋಡ್ ಬಿಲ್ಗಾಗಿ ಅವರ ಹೋರಾಟಕ್ಕೆ ಕಾರಣವಾಗಿತ್ತು. ಆದರೆ ಅಂದು ಮಹಿಳೆಯರ ಉನ್ನತಿಗಾಗಿ ಬಾಬಾ ಸಾಹೇಬರು ಮಂಡಿಸಿದ ’ಹಿಂದೂ ಕೋಡ್ ಬಿಲ್’ಅನ್ನು ವಿರೋಧಿಸಿದ, ಕಾಯ್ದೆಯನ್ನು ಸುಟ್ಟು ಹಾಕಿದ ಅದೇ ಮನುವಾದಿಗಳು ಈಗ ನಾವು ಮಹಿಳಾ ಪರ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಈ ಸೋಲು ಬಿಜೆಪಿಯ ಕುತಂತ್ರಕ್ಕೆ ತಿರುಗುಬಾಣವಾಗಿದೆ
ಮಹಿಳಾ ಮೀಸಲಾತಿ ನಿಜವಾಗಿ ಜಾರಿಯಾಗಬೇಕಾದರೆ, ಅದನ್ನು ಜನಗಣತಿ ಮತ್ತು ಡಿಲಿಮಿಟೇಷನ್‌ನ ಜಾಲದಿಂದ ಬಿಡಿಸಿ, ಈಗಿರುವ 543 ಸ್ಥಾನಗಳಲ್ಲೇ 33% ಮೀಸಲಾತಿ ಕಲ್ಪಿಸುವ ಸ್ಪಷ್ಟ ಮಾರ್ಗವನ್ನು ಅನುಸರಿಸಬೇಕು. ದಕ್ಷಿಣ ರಾಜ್ಯಗಳ ರಾಜಕೀಯ ಅಸ್ಮಿತೆಯನ್ನು ಕಾಪಾಡುವುದು ಮತ್ತು ಮಹಿಳೆಯರ ನಿಜವಾದ ಸಬಲೀಕರಣವನ್ನು ಸಾಧಿಸುವುದು ಒಂದೇ ನಾಣ್ಯದ ಎರಡು ಮುಖಗಳು. ಇದನ್ನು ಬೇರ್ಪಡಿಸಿ ನೋಡುವುದು ರಾಜಕೀಯ ವಂಚನೆಯನ್ನು ಮುಂದುವರಿಸುವಂತೆಯೇ. ದೇಶದ ಅರ್ಧ ಜನಸಂಖ್ಯೆಯನ್ನು ಇನ್ನೂ ದೀರ್ಘಕಾಲ ವಂಚಿಸುವುದು ಸಾಧ್ಯವಿಲ್ಲ. ಮಹಿಳಾ ಸಬಲೀಕರಣ ನಿಜವಾಗಬೇಕಾದರೆ, ಅದು ರಾಜಕೀಯ ಕುತಂತ್ರ ಅಲ್ಲದೆ, ಸಂವಿಧಾನದ ನಿಜವಾದ ಆಶಯವಾಗಿ ಕಾರ್ಯರೂಪಕ್ಕೆ ಬರಬೇಕು ಇಲ್ಲದಿದ್ದರೆ ಈ ’ಸೋಲು’ಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಾ ಹೋಗುತ್ತವೆ.
’ಮಸೂದೆ ಸೋಲಿಗೆ ಪ್ರತಿಪಕ್ಷಗಳನ್ನು ದೂಷಿಸುತ್ತಾ ರಾಜಕೀಯ ಲಾಭ ಪಡೆಯಲು ಆಡಳಿತ ಪಕ್ಷ ಯತ್ನಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಹೇಗೆ ಮಹಿಳಾ ವಿಚಾರಗಳೂ ಕೇವಲ ರಾಜಕೀಯ ಅಸ್ತ್ರಗಳಾಗಿ ರಾಜಕೀಯ ಲಾಭಗಳಿಕೆಗೆ ಬಳಕೆಯಾಗುತ್ತವೆ ಎಂಬುದಕ್ಕೆ ಇದು ನಿದರ್ಶನ.
ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಉದ್ದೇಶವು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಇದ್ದಿದ್ದಲ್ಲಿ ಲೋಕಸಭೆಯಲ್ಲಿ ಈಗಿರುವ 543 ಸ್ಥಾನಗಳಲ್ಲೇ ಮಹಿಳೆಯರಿಗೆ ಮೀಸಲಾತಿ ನೀಡುವುದು ಏಕೆ ಸಾಧ್ಯವಿರಲಿಲ್ಲ? ಪುರುಷ ರಾಜಕಾರಣಿಗಳ ಗಂಡಾಳ್ವಿಕೆಯ ಮನಸ್ಥಿತಿಯನ್ನು ಸ್ಪಷ್ಟವಾಗಿ ಇದು ತೆರೆಮೂದಿಡುತ್ತದೆ. ಯಾವ ಪುರುಷ ರಾಜಕಾರಣಿಯೂ ಮಹಿಳಾ ಪ್ರಾತಿನಿಧ್ಯಕ್ಕಾಗಿ ತನ್ನ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ. ಇದಕ್ಕಾಗಿಯೇ ಲೋಕಸಭೆ ಸ್ಥಾನಗಳ ಹೆಚ್ಚಳದ ನೆಪವನ್ನು (ಕ್ಷೇತ್ರ ಮರು ವಿಂಗಡಣೆ) ಮಹಿಳಾ ಮೀಸಲಾತಿ ನೀಡುವುದಕ್ಕೆ ಗುರಾಣಿಯಾಗಿ ಬಳಸಿಕೊಳ್ಳಲಾಯಿತು ಎಂಬುದು ಸುಸ್ಪಷ್ಟ. ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಳ್ಳುವ ನಮ್ಮ ರಾಷ್ಟ್ರದಲ್ಲಿ ಮಹಿಳೆಯರು ರಾಜಕೀಯ ಅಧಿಕಾರ ವಂಚಿತರಾಗಿಯೇ ಇರುವುದು ನಾಚಿಕೆಗೇಡು’.
ಸಿ.ಜಿ. ಮಂಜುಳಾ, ಹಿರಿಯ ಪತ್ರಕರ್ತರು
ಯಾವುದೇ ಪಕ್ಷಗಳು ’ಮಹಿಳಾ ಮೀಸಲಾತಿ ಮಸೂದೆ’ಯನ್ನು ವಿರೋಧಿಸುತ್ತಿಲ್ಲ, ಬದಲಾಗಿ 2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಸದ್ಯ ಬಿಜೆಪಿ ’ಮಹಿಳಾ ಮೀಸಲಾತಿ ಮಸೂದೆ’ ಮುಖವಾಡದಲ್ಲಿ ಡಿಲಿಮಿಟೇಷನ್‌ಗೆ ಮುಂದಾಗಿದೆ. ಈಗ ಮಹಿಳಾ ಪರ ಎಂದು ಹೇಳುತ್ತಿರುವ ಇದೇ ಬಿಜೆಪಿ ಈ ಹಿಂದೆ ಕಾಂಗ್ರೆಸ್ ಮಹಿಳೆಯರಿಗೆ 33% ಮೀಸಲಾತಿ ನೀಡಲು ಮಸೂದೆಯನ್ನು ಮಂಡಿಸಿದಾಗ ತೀವ್ರವಾಗಿ ವಿರೋಧಿಸಿತ್ತು. ಬಿಜೆಪಿ ನಿಂತಿರುವುದೇ ಆರ್‌ಎಸ್‌ಎಸ್ ಆಲೋಚನೆಯೊಂದಿಗೆ. ಅದು ಎಲ್ಲಾ ಕಾಲಕ್ಕೂ ಮಹಿಳಾ ವಿರೋಧಿಯಾಗಿಯೇ ಇದೆ. ಅಂಬೇಡ್ಕರ್ ಅವರು ’ಹಿಂದೂ ಕೋಡ್ ಬಿಲ್’ ತರುವುದಕ್ಕೆ ಪ್ರಯತ್ನಿಸಿದಾಗ ’ಹಿಂದೂ ಕೋಡ್ ಬಿಲ್’ ಅನ್ನು ಸುಟ್ಟು, ಅಂಬೇಡ್ಕರ್ ವಿರುದ್ಧ ಪ್ರತಿಭಟಿಸಿದ್ದು ಇದೇ ಬಿಜೆಪಿ. ಈಗ ಚುನಾವಣೆ ಸಮಯದಲ್ಲಿ ನಾವು ಮಹಿಳಾ ಪರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮಹಿಳಾ ಮೀಸಲಾತಿ ಎಂದಿಗೂ ಜಾರಿಯಾಗದಂತೆ ಅದನ್ನು ಜನಗಣತಿ ಮತ್ತು ಡಿಲಿಮಿಟೇಷನ್‌ನೊಂದಿಗೆ ಜೋಡಿಸಿದ್ದಲ್ಲದೇ ಮಹಿಳಾ ಮೀಸಲಾತಿ ಮುಖವಾಡ ಧರಿಸಿ ಡಿಲಿಮಿಟೇಷನ್‌ಗೆ ಮುಂದಾಗಿದೆ’ ಡಿಲಿಮಿಟೇಷನ್ ಮೂಲಕ ಲೋಕಸಭೆ ಸ್ಥಾನಗಳು 543ರಿಂದ 850ಕ್ಕೆ ಹೆಚ್ಚಾಗಬೇಕು, ಅದರೊಳಗೆ ಮಹಿಳಾ ಮೀಸಲಾತಿ ನೀಡುವುದಾಗಿ ಬಿಜೆಪಿ ಹೇಳುತ್ತಿದೆ. ಯಾಕೆಂದರೆ ಮಹಿಳಾ ವಿರೋಧಿಯಾಗಿರುವ ಬಿಜೆಪಿ ಪಕ್ಷದಲ್ಲಿ ಈಗ ಕ್ಯಾಬಿನೆಟ್ ದರ್ಜೆಯಲ್ಲಿ ಇರುವುದು ಕೇವಲ ಇಬ್ಬರೇ ಮಹಿಳಾ ಸಚಿವರು. ಇದೇ ಕಾರಣಕ್ಕೆ ಕ್ಷೇತ್ರ ಮರುವಿಂಗಡಣೆ ಮಾಡಿಯೇ ಹೊಸದಾಗಿ ಮಹಿಳಾ ಮೀಸಲಾತಿ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಮೂಲಕ ಇಡೀ ಹಿಂದಿ ಬೆಲ್ಟ್ ಅನ್ನು ಬಿಜೆಪಿಮಯ ಮಾಡುವ ಉದ್ದೇಶ ಅವರದು. ಇದು ಸಾಧ್ಯವಾದರೇ ದಕ್ಷಿಣ ಭಾರತಕ್ಕೆ ಬಹುದೊಡ್ಡ ಅನ್ಯಾಯವಾಗಲಿದೆ’
ರಾಜಲಕ್ಷ್ಮಿ ಅಂಕಲಗಿ, ಹೈಕೋರ್ಟ್ ವಕೀಲರು, ಜನಪರ ಹೋರಾಟಗಾರರು
ಕೃಪೆ: ನ್ಯಾಯಪಥ


