Homeಮುಖಪುಟಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

- Advertisement -
- Advertisement -

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಅವರಿಗೆ ಜಾಮೀನು ಮಂಜೂರಾದರೂ ಸಹ, ನ್ಯಾಯಾಲಯಗಳು ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ತೀವ್ರವಾಗಿ ಹತ್ತಿಕ್ಕುವಂತಹ ಅತ್ಯಂತ ಕಠಿಣ ಹಾಗೂ ನಿರ್ಬಂಧಿತ ಜಾಮೀನು ಷರತ್ತುಗಳನ್ನು ವಿಧಿಸುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

“ನಾನು ದೇಶದ ಯಾವುದೇ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ; ಅದರಿಂದ ನಾನು ದೂರವಿರುತ್ತೇನೆ. ಆದರೆ ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾರ್ವಜನಿಕ ಸ್ಥಳಗಳು ಕಡಿಮೆಯಾಗುತ್ತಿವೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು. ಒಬ್ಬರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ನಾಗರಿಕರ ಮೂಲಭೂತ ಸ್ವಾತಂತ್ರ್ಯಗಳಾಗಿವೆ. ಚರ್ಚೆ ಮತ್ತು ಭಿನ್ನಾಭಿಪ್ರಾಯಗಳೇ ಪ್ರಜಾಪ್ರಭುತ್ವದ ಜೀವಾಳ. ದುರದೃಷ್ಟವಶಾತ್, ಇಂದು ಸಾಮಾನ್ಯ ಚಟುವಟಿಕೆಗಳನ್ನೂ ಸಹ ಅಪರಾಧೀಕರಿಸಲಾಗುತ್ತಿದೆ. ಪರಿಸರ ನಾಶದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬರುವ ಜನರನ್ನು ಅಪರಾಧಿಗಳಂತೆ ಅಟ್ಟಾಡಿಸಲಾಗುತ್ತಿದೆ, ಆದರೆ ಪರಿಸರ ನಾಶ ಎಂಬುದು ಕಟು ವಾಸ್ತವವಾಗಿದೆ. ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತಿದೆ ಮತ್ತು ಅವರಿಗೆ 30 ರಿಂದ 40 ದಿನಗಳವರೆಗೆ ಜಾಮೀನು ಸಿಗುತ್ತಿಲ್ಲ. ಅವರನ್ನು ಅಮಾನತುಗೊಳಿಸಲಾಗುತ್ತಿದೆ, ನಂತರ ಅವರು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತಿದೆ, ಆದರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ” ಎಂದು ಭುಯಾನ್ ಹೇಳಿದ್ದಾರೆ.

ಗಂಗಾನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಯುವಕರಿಗೆ ಜಾಮೀನು ನಿರಾಕರಿಸಿದ ಘಟನೆಯನ್ನು ತೀವ್ರವಾಗಿ ಪ್ರಶ್ನಿಸಿದ ನ್ಯಾಯಮೂರ್ತಿ ಭುಯಾನ್ ಅವರು, ಅಪರಾಧವೇ ಅಲ್ಲದ ವಿಷಯಕ್ಕೆ ಒಬ್ಬರಿಗೆ ಜಾಮೀನು ನಿರಾಕರಿಸಲು ಹೇಗೆ ಸಾಧ್ಯ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“ಗಂಗಾನದಿಯ ಮೇಲೆ ಚಿಕನ್ ಬಿರಿಯಾನಿ ಸೇವಿಸುವುದು ಅಪರಾಧವಲ್ಲ ಎಂಬುವುದು ನನಗೆ ಗೊತ್ತಿದೆ. ಗಂಗಾನದಿಯ ಮೇಲೆ ಚಿಕನ್ ತಿನ್ನುವುದನ್ನು ನಿಷೇಧಿಸುವ ಯಾವುದೇ ಕಾನೂನು ಜಾರಿಯಲ್ಲಿಲ್ಲ; ಆದರೂ ಅವರನ್ನು ಇದೇ ಕಾರಣಕ್ಕಾಗಿ ಬಂಧಿಸಲಾಯಿತು ಮತ್ತು ಅವರು ಮೂರು ತಿಂಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಇಂತಹ ಒಂದು ಚಟುವಟಿಕೆಗಾಗಿ ಜನರನ್ನು ಬಂಧಿಸಿ, 3 ತಿಂಗಳ ಕಾಲ ಜಾಮೀನು ನಿರಾಕರಿಸಲು ಸಾಧ್ಯವೇ ಎಂದು ನಾನು ನನ್ನನ್ನೇ ಕೇಳಿಕೊಳ್ಳುತ್ತೇನೆ! ನಾಗರಿಕರು ಇದನ್ನು ಗಮನಿಸುತ್ತಿದ್ದಾರೆ, ದೇಶದ ಜನರೆಲ್ಲಾ ಇದನ್ನು ನೋಡುತ್ತಿದ್ದಾರೆ” ಎಂದಿದ್ದಾರೆ.

ನ್ಯಾಯಾಲಯಗಳು ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬರು ತಮ್ಮ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯನ್ನು ವ್ಯಕ್ತಪಡಿಸದಂತೆ ಪರೋಕ್ಷವಾಗಿ ತಡೆಯುವಂತಹ ಜಾಮೀನು ಷರತ್ತುಗಳನ್ನು ವಿಧಿಸುತ್ತಿವೆ ಎಂದು ಭುಯಾನ್ ಅವರು ವಿಷಾದಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹರಣವನ್ನು ವಿವರಿಸಲು ಫೇಸ್‌ಬುಕ್ ಪೋಸ್ಟ್‌ನ ಉದಾಹರಣೆಯೊಂದನ್ನು ನೀಡಿದ ನ್ಯಾಯಮೂರ್ತಿ, “ಸೇವೆಯಲ್ಲಿದ್ದ ಭಾರತೀಯ ಸೇನಾ ಅಧಿಕಾರಿಯೊಬ್ಬರನ್ನು ‘ಭಯೋತ್ಪಾದಕನ ಮಗಳು’ ಎಂದು ಕರೆದ ಸಚಿವರ ನಡವಳಿಕೆಯನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಾಗುತ್ತದೆ, ಮತ್ತು ಆ ವ್ಯಕ್ತಿ ನಿರೀಕ್ಷಣಾ ಜಾಮೀನು ಕೋರಬೇಕಾಗುತ್ತದೆ. ಜಾಮೀನು ಮಂಜೂರಾಗುತ್ತದೆ, ಆದರೆ ನ್ಯಾಯಾಲಯ ಏನು ಮಾಡುತ್ತದೆ? ಆ ವ್ಯಕ್ತಿ ದೇಶ ಬಿಟ್ಟು ಓಡಿಹೋಗುವ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಸಹ ‘ನಿಮ್ಮ ಪಾಸ್‌ಪೋರ್ಟ್ ಒಪ್ಪಿಸಿ’ ಎಂದು ಹೇಳುತ್ತದೆ. ಅಲ್ಲದೆ, ‘ಫೇಸ್‌ಬುಕ್‌ನಲ್ಲಿ ಇನ್ನು ಮುಂದೆ ಏನನ್ನೂ ಪೋಸ್ಟ್ ಮಾಡಬೇಡಿ’ ಎಂದು ಆದೇಶಿಸುತ್ತದೆ” ಎಂದಿದ್ದಾರೆ.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ‘ಗುಲ್ಫಿಶಾ ಫಾತಿಮಾ’ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, ಅದರಲ್ಲಿ ನ್ಯಾಯಾಲಯಗಳು ವಿಧಿಸಿರುವ ಅತ್ಯಂತ ಕಠಿಣ ಹಾಗೂ ನಿರ್ಬಂಧಿತ ಜಾಮೀನು ಷರತ್ತುಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

“ದೀರ್ಘಕಾಲದವರೆಗೆ ಜೈಲುವಾಸ ಅನುಭವಿಸಿದ ಯುವ ವಿದ್ಯಾರ್ಥಿ ಹೋರಾಟಗಾರ್ತಿಯೊಬ್ಬರ ಪ್ರಕರಣವನ್ನೇ ತೆಗೆದುಕೊಳ್ಳಿ. ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆಯಾದರೂ, ಅವರು ತಮ್ಮ ಪಾಸ್‌ಪೋರ್ಟ್‌ ಒಪ್ಪಿಸಬೇಕು. ಅಲ್ಲದೆ, ಭೌತಿಕವಾಗಿ ಆಗಲಿ ಅಥವಾ ವರ್ಚುವಲ್ ಮೂಲಕವಾಗಲಿ ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬಾರದು ಅಥವಾ ಅವುಗಳನ್ನು ಉದ್ದೇಶಿಸಿ ಮಾತನಾಡಬಾರದು ಎಂದೂ ಆದೇಶಿಸಿದೆ. ಇಂತಹ ಕಠಿಣ ಹಾಗೂ ನಿರ್ಬಂಧಿತ ಷರತ್ತುಗಳನ್ನು ವಿಧಿಸುವುದು ಅವರ ಮೂಲಭೂತ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಗಳನ್ನು ತೀವ್ರವಾಗಿ ಹತ್ತಿಕ್ಕುತ್ತದೆ. ಇಂತಹ ಆದೇಶಗಳನ್ನು ನೀಡುವ ಮೂಲಕ ಅಥವಾ ಇಂತಹ ಷರತ್ತುಗಳನ್ನು ವಿಧಿಸುವ ಮೂಲಕ ನ್ಯಾಯಾಲಯವು ‘ಇನ್ಮುಂದೆ ಇಂತಹ ಯಾವುದೇ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ’ ಎಂಬ ಸಂದೇಶವನ್ನು ರವಾನಿಸುತ್ತಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವುದು ಸಂಪೂರ್ಣ ನ್ಯಾಯಸಮ್ಮತವಾಗಿದೆ” ಎಂದು ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ “ಜನಾಂಗೀಯ ಹತ್ಯೆ” ವಿರುದ್ಧ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಬಯಸಿದ್ದ ಪ್ರತಿಭಟನಾಕಾರರ ನೆರವಿಗೆ ಧಾವಿಸದ ಮುಂಬೈ ಹೈಕೋರ್ಟ್‌ನ ನಿಲುವನ್ನು ನ್ಯಾಯಮೂರ್ತಿ ಭುಯಾನ್ ತೀವ್ರವಾಗಿ ಟೀಕಿಸಿದ್ದಾರೆ.

“ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ವಜಾಗೊಳಿಸಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯವು, “ನಮ್ಮ ದೇಶವು ಎದುರಿಸಬೇಕಾದ ಹಲವಾರು ಸ್ವಂತ ಸಮಸ್ಯೆಗಳಿವೆ… ನಮಗೆ ಇಂತಹ ವಿಷಯಗಳು ಬೇಡ. ಇದನ್ನು ಹೇಳಲು ವಿಷಾದವಾಗುತ್ತದೆ, ಆದರೆ ನೀವೆಲ್ಲರೂ ದೂರದೃಷ್ಟಿ ಇಲ್ಲದವರಾಗಿದ್ದೀರಿ… ನೀವು ಗಾಝಾ ಮತ್ತು ಪ್ಯಾಲೆಸ್ತೀನ್ ಕಡೆಗೆ ನೋಡುತ್ತಿದ್ದೀರಿ… ನಮ್ಮ ಸ್ವಂತ ದೇಶಕ್ಕಾಗಿ ನೀವು ಏನನ್ನಾದರೂ ಏಕೆ ಮಾಡಬಾರದು… ದೇಶಪ್ರೇಮಿಗಳಾಗಿರಿ… ಗಾಝಾ ಮತ್ತು ಪ್ಯಾಲೆಸ್ತೀನ್ ಪರವಾಗಿ ಮಾತನಾಡುವುದು ದೇಶಪ್ರೇಮವಲ್ಲ… ನಮ್ಮ ಸ್ವಂತ ದೇಶದ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿ… ನೀವು ಇತರರಿಗೆ ಹೇಳುವ ಬುದ್ಧಿಮಾತನ್ನು ಮೊದಲು ನೀವೇ ಪಾಲಿಸಿ…” ಎಂದು ಹೇಳಿಕೆ ನೀಡಿತ್ತು”

ಮುಂಬೈ ಹೈಕೋರ್ಟ್‌ನ ಈ ಆದೇಶ ತಮಗೆ ಅತ್ಯಂತ ಆಶ್ಚರ್ಯ ಮತ್ತು ವಿನೋದವನ್ನು ಉಂಟುಮಾಡಿತು ಎಂದು ನ್ಯಾಯಮೂರ್ತಿ ಲೇವಡಿ ಮಾಡಿದ್ದಾರೆ.

“ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಒಂದು ಗುಂಪಿನ ಜನರು ಗಾಝಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಪ್ರತಿಭಟನೆ ನಡೆಸಲು ಬಯಸಿದಾಗ ಸರ್ಕಾರ ಅವರಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ, ಅವರು ಮುಂಬೈ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು; ಆಗ ಅಲ್ಲಿನ ಗೌರವಾನ್ವಿತ ನ್ಯಾಯಾಧೀಶರು, ‘ನಿಮಗೆ ಭಾರತದಲ್ಲಿ ಹೋರಾಡಲು ಯಾವುದೇ ಸಮಸ್ಯೆಗಳಿಲ್ಲವೇ, ಪ್ರತಿಭಟನೆ ಮಾಡಲು ಅಷ್ಟೊಂದು ದೂರದ ವಿಷಯವನ್ನು ಏಕೆ ಆರಿಸಿಕೊಳ್ಳಬೇಕು?’ ಎಂದು ಪ್ರಶ್ನಿಸಿದ್ದು ನನಗೆ ಅತ್ಯಂತ ಆಶ್ಚರ್ಯ ತಂದಿತ್ತು ಎಂದಿದ್ದಾರೆ.

ಭಾರತವು ಸಾಂಪ್ರದಾಯಿಕವಾಗಿ ಪ್ಯಾಲೆಸ್ತೀನ್ ಅನ್ನು ಗುರುತಿಸಿದೆ ಮತ್ತು ದೇಶದಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿಯೂ ಇದೆ ಎಂದು ನೆನಪಿಸಿದ ಭುಯಾನ್ ಅವರು, ಆದರೂ ಸಹ, ಜನರು ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸುವಂತಹ ಘಟನೆಗಳು ನಡೆದಿರುವುದು ಆಶ್ಚರ್ಯಕರ ಎಂದು ಹೇಳಿದ್ದಾರೆ.

“ಭಾರತವು ಪ್ಯಾಲೆಸ್ತೀನ್ ದೇಶವನ್ನು ಗುರುತಿಸಿದೆ; ನಮ್ಮ ದೇಶದಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿಯೂ ಇದೆ. ಸಾಂಪ್ರದಾಯಿಕವಾಗಿ, ಭಾರತವು ಯಾವಾಗಲೂ ಪ್ಯಾಲೆಸ್ತೀನ್ ಅನ್ನು ಬೆಂಬಲಿಸುತ್ತಾ ಬಂದಿದೆ. ಗಾಝಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ವಿರುದ್ಧ ದಕ್ಷಿಣ ಆಫ್ರಿಕಾ ದೇಶವು ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿ, ಅಲ್ಲಿ ನಡೆಯುತ್ತಿರುವುದು ‘ಜನಾಂಗೀಯ ಹತ್ಯೆ’ ಎಂದು ಘೋಷಿಸುವಂತೆ ಕೋರಿದೆ. ಒಡಿಶಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಮುರಳೀಧರ್ ಅವರನ್ನು ವಿಶ್ವಸಂಸ್ಥೆಯು ಗಾಝಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನೇಮಿಸಿತ್ತು. ಅವರು ಈಗಾಗಲೇ ಒಂದು ವರದಿಯನ್ನು ಪ್ರಕಟಿಸಿದ್ದು, ಅದನ್ನು ವಿಶ್ವಸಂಸ್ಥೆಯು ಅಂಗೀಕರಿಸಿದೆ ಮತ್ತು ಅದು ಈಗ ಸಾರ್ವಜನಿಕವಾಗಿ ಲಭ್ಯವಿದೆ. ಅಲ್ಲಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಮೇಲೆ ಇಸ್ರೇಲ್ ಎಸಗುತ್ತಿರುವ ಹಿಂಸಾಚಾರದ ಬಗ್ಗೆ ಆ ವರದಿಯಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.” ಎಂದು ನ್ಯಾಯಮೂರ್ತಿ ಭುಯಾನ್ ಅವರು ಸಭಿಕರನ್ನುದ್ದೇಶಿಸಿ ಹೇಳಿದ್ದಾರೆ.

“ನಾನು ಕೇವಲ ಈ ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳುತ್ತಿಲ್ಲ. ಆದರೆ ಇವು ಒಬ್ಬ ವಿದ್ಯಾರ್ಥಿಯ ಅಥವಾ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಯುವ ಮನಸ್ಸನ್ನು ಕಲಕಬೇಕಾದ ಮತ್ತು ಯೋಚಿಸುವಂತೆ ಮಾಡಬೇಕಾದ ವಿಷಯಗಳಾಗಿವೆ. ನೀವು ಓದಬೇಕು, ನೀವು ಪ್ರಶ್ನಿಸಬೇಕು. ವಿಶ್ವವಿದ್ಯಾಲಯ ಎಂಬುದು ಅದಕ್ಕಾಗಿಯೇ ಇರುವ ಸ್ಥಳವಾಗಿದೆ” ಎಂದಿದ್ದಾರೆ.

ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯೂನಿವರ್ಸಿಟಿ (ಎನ್‌ಎಲ್‌ಟಿಯು) ಆಯೋಜಿಸಿದ್ದ 5ನೇ ನ್ಯಾಯಮೂರ್ತಿ ಜಿ.ಪಿ. ಸಿಂಗ್ ಸ್ಮರಣಾರ್ಥ ಶನಿವಾರ (ಜು.25) ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಭುಯಾನ್ ಅವರು ಮೇಲಿನ ಮಾತುಗಳನ್ನು ಆಡಿದ್ದಾರೆ.

ಭುಯಾನ್ ಅವರು ಅಧಿಕಾರ ವಿಭಜನೆಯ ಮಹತ್ವ ಮತ್ತು ಸರ್ಕಾರದ ಮೂರು ಅಂಗಗಳು (ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ) ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಮಾಜಿ ನ್ಯಾಯಾಧೀಶರು ನಿವೃತ್ತಿಯ ನಂತರ ರಾಜಕೀಯ ಸೇರುವುದು ಸಾಂವಿಧಾನಿಕ ಅಧಿಕಾರ ವಿಭಜನೆಯ ತತ್ವವನ್ನು ಸ್ಪಷ್ಟವಾಗಿ ಉಲ್ಲಂಘಿಸುವುದರಿಂದ, ಇದು ಮೂಲಭೂತವಾಗಿಯೇ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂರು ಕಾಲುಗಳ ಸ್ಟೂಲ್ ಉದಾಹರಣೆ ನೀಡುತ್ತಾ, ಎರಡು ಕಾಲುಗಳು ಒಂದೇ ಕಡೆ ಬಂದರೆ ಆ ಸ್ಟೂಲ್ ಬಿದ್ದುಹೋಗುತ್ತದೆ ಎಂದು ಹೇಳಿದ್ದಾರೆ.

“ನಾವು ಎರಡು ಕಾಲುಗಳನ್ನು ಒಂದೇ ಕಡೆ ಇಟ್ಟರೆ, ಆ ಸ್ಟೂಲ್ ಬಿದ್ದು ಹೋಗುತ್ತದೆ. ಇದು ಅತ್ಯಂತ ಮೂಲಭೂತ ತತ್ವವಾಗಿದೆ. ಆದ್ದರಿಂದಲೇ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರು ತಾವು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಂತರವನ್ನು ಕಡಿಮೆ ಮಾಡಲು (ಸೇತುವೆಯಾಗಲು) ರಾಜ್ಯಸಭೆಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ, ಅದು ಸಾಂವಿಧಾನಿಕವಾಗಿ ತಪ್ಪು ನಿರ್ಧಾರವಾಗುತ್ತದೆ. ಇದು ಮೂಲಭೂತವಾಗಿಯೇ ಸಂಪೂರ್ಣ ತಪ್ಪು. ಇದು ಅಧಿಕಾರ ವಿಭಜನೆಯ ತತ್ವಗಳಿಗೆ ವಿರುದ್ಧವಾಗಿದೆ; ಅದರಲ್ಲಿಯೇ ಅತ್ಯಂತ ಮೂಲಭೂತವಾದ ದೋಷವಿದೆ.” ಎಂದಿದ್ದಾರೆ.

“13 ನ್ಯಾಯಾಧೀಶರ ಪೀಠವು ಸಂವಿಧಾನದ ಯಾವುದೇ ನಿಬಂಧನೆಯನ್ನು ತಿದ್ದುಪಡಿ ಮಾಡಬಹುದು ಆದರೆ ಅದರ ಮೂಲ ರಚನೆಯನ್ನು (Basic Structure) ಬದಲಾಯಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ‘ಕೇಶವಾನಂದ ಭಾರತಿ’ ತೀರ್ಪು ಕಾಲದ ಪರೀಕ್ಷೆಗೆ ಒಡ್ಡಿಕೊಂಡು ಇಂದಿಗೂ ಅಚಲವಾಗಿ ನಿಂತಿದೆ ಎಂದು ನ್ಯಾಯಮೂರ್ತಿ ಭುಯಾನ್ ತಿಳಿಸಿದ್ದು, ಇದೇ ವೇಳೆ, ಈ ಐತಿಹಾಸಿಕ ತೀರ್ಪನ್ನು ಸಾರ್ವಜನಿಕವಾಗಿ ಟೀಕಿಸಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ನಿಲುವನ್ನು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.

“ಕೇಶವಾನಂದ ಭಾರತಿ ತೀರ್ಪು ಕಾಲದ ಪರೀಕ್ಷೆಗೆ ಒಡ್ಡಿಕೊಂಡು ಇಂದಿಗೂ ಅಚಲವಾಗಿ ನಿಂತಿದೆ. ಸಂವಿಧಾನ ಪೀಠಗಳು ಇದನ್ನು ಹನ್ನೆರಡಕ್ಕೂ ಹೆಚ್ಚು ಬಾರಿ ಅನ್ವಯಿಸಿವೆ. ಹಾಗಿರುವಾಗ, ಭಾರತದ ಮಾಜಿ ಉಪರಾಷ್ಟ್ರಪತಿಯವರು ಈ ತೀರ್ಪಿನ ನ್ಯಾಯಶಾಸ್ತ್ರದ ಸಿಂಧುತ್ವವನ್ನು ಪ್ರಶ್ನಿಸಿದ್ದು ತಪ್ಪು… ಹಾಗೆಯೇ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳು ರಾಜ್ಯಸಭೆಯಲ್ಲಿ ನಿಂತು ತಮಗೆ ಈ ತೀರ್ಪಿನ ನ್ಯಾಯಶಾಸ್ತ್ರದ ಸಿಂಧುತ್ವದ ಬಗ್ಗೆ ಸಂಪೂರ್ಣ ಭರವಸೆ ಇಲ್ಲ ಎಂದು ಪ್ರತಿಪಾದಿಸಿದ್ದು ಕೂಡ ಅಷ್ಟೇ ತಪ್ಪು” ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...