ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮುಂದೆ ಖಾತೆ ಬದಲಾವಣೆ ಪ್ರಸ್ತಾವನೆ ಇಟ್ಟಿದ್ದು ಎಂದು ತಿಳಿದುಬಂದಿದೆ. ಕೇಂದ್ರದ ಪ್ರಸ್ತಾವನೆಯನ್ನು ವಿದ್ಯಾರ್ಥಿ ನೇತೃತ್ವದ ಸಂಘಟನೆ ನಿರಾಕರಿಸಿ, ತಮ್ಮ ರಾಜೀನಾಮೆ ಬೇಡಿಕೆಗೆ ದೃಢವಾಗಿ ನಿಂತಿತ್ತು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ವಿದ್ಯಾರ್ಥಿಗಳ ಆಂದೋಲನದ ನೇತೃತ್ವ ವಹಿಸಿರುವ ಸಿಜೆಪಿ ಮತ್ತು ವಿದ್ಯಾರ್ಥಿ ನಾಯಕರು ಪ್ರಧಾನ್ ಅವರನ್ನು ಕ್ಯಾಬಿನೆಟ್ ಸಚಿವರಾಗಿ ಮುಂದುವರಿಸುವ ಮೂಲಕ ಶಿಕ್ಷಣ ಖಾತೆಯಿಂದ ಕೈಬಿಡಲು ಒಪ್ಪುತ್ತಾರೆ ಎಂದು ಸರ್ಕಾರ ಆಶಿಸಿತ್ತು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಿಜೆಪಿ ಜೊತೆ ಮಾತುಕತೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದ ಇಬ್ಬರು ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್, “ನೀವು ಪ್ರತಿಭಟನೆ ರದ್ದುಗೊಳಿಸಿದರೆ ಹೊಸ ಶಿಕ್ಷಣ ಸಚಿವರನ್ನು ನೇಮಿಸಬಹುದು, ಸಿಜೆಪಿಯ ಇತರ ಎಲ್ಲ ಬೇಡಿಕೆಗಳನ್ನು ಈಡೇರಿಸಬಹುದು” ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದರು.
“ಸರ್ಕಾರ ಆ ಪ್ರಸ್ತಾಪವನ್ನು ನಮ್ಮ ಮುಂದಿಟ್ಟಿತ್ತು. ಆದರೆ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ದೃಢನಿಶ್ಚಯ ಹೊಂದಿದ್ದರು” ಎಂದು ಸಿಜೆಪಿ ವಕ್ತಾರರು ತಿಳಿಸಿದ್ದಾರೆ.
ಸಿಜೆಪಿಯ ಎರಡು ಪ್ರಮುಖ ಬೇಡಿಕೆಗಳಾದ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಹಿಂತೆಗೆದುಕೊಳ್ಳುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ರದ್ದತಿಗಳ ನಂತರ ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ಪರಿಹಾರವನ್ನು ಮಾತುಕತೆಗೂ ಮೊದಲೇ ಅಂಗೀಕರಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
“ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಾಕಷ್ಟು ಪರಿಹಾರ ನೀಡುವ ಕಾರ್ಯವಿಧಾನವನ್ನು ಸಹ ನಾವು ಪ್ರಾರಂಭಿಸಿದ್ದೇವೆ” ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಆಸ್ತಿಗೆ ಗಂಭೀರ ಹಾನಿ ಸಂಭವಿಸಿದ ಸಂದರ್ಭಗಳಲ್ಲಿ ಹೊರತುಪಡಿಸಿ, ಹೋರಾಟದ ಸಂದರ್ಭಗಳಲ್ಲಿ ಎಫ್‌ಐಆರ್ ಹಿಂಪಡೆಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಮೂಲಗಳು ತಿಳಿಸಿವೆ.


