ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ ಚುನಾವಣಾ ಗೆಲುವಿಗಿಂತಲೂ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಬೆಳವಣಿಗೆ ಎಂದು ಜಾಗತಿಕ ಖ್ಯಾತಿಯ ಲೇಖಕಿ ಹಾಗೂ ಸಾಂಸ್ಕೃತಿಕ ಚಿಂತಕಿ ಅರುಂಧತಿ ರಾಯ್ ಪ್ರತಿಪಾದಿಸಿದ್ದಾರೆ.
ನವದೆಹಲಿಯ ಪ್ರತಿಷ್ಠಿತ ‘ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ನಲ್ಲಿ (IIC) ನಡೆದ ತಮ್ಮ ನೂತನ ಕೃತಿ ‘ಮದರ್ ಮೇರಿ ಕಮ್ಸ್ ಟು ಮೀ’ಯ ಹಿಂದಿ ಅನುವಾದಿತ ಪುಸ್ತಕ ‘ಮೇರಿ ಮಾ, ಮೇರಿ ಗ್ಯಾಂಗ್ಸ್ಟರ್’ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಮತ್ತು ಚಳವಳಿಗಳ ಸ್ವರೂಪವನ್ನು ವಿಶ್ಲೇಷಿಸಿದ ಅರುಂಧತಿ ರಾಯ್, ಚುನಾವಣಾ ಗೆಲುವು ಅಥವಾ ಸೋಲುಗಳು ರಾಜಕೀಯದ ಒಂದು ಸಣ್ಣ ಭಾಗ ಮಾತ್ರ. ಆದರೆ, ತಳಮಟ್ಟದ ಸಾರ್ವಜನಿಕ ಆಂದೋಲನವೊಂದು ಸುದೀರ್ಘ ಕಾಲದಿಂದ ನಿರ್ಮಿಸಲಾಗಿದ್ದ ಭ್ರಮಾತ್ಮಕ ರಾಜಕೀಯ ವರ್ಚಸ್ಸನ್ನು ಕೆಲವೇ ವಾರಗಳಲ್ಲಿ ನೆಲಸಮ ಮಾಡಬಲ್ಲದು ಎಂಬುದಕ್ಕೆ ಇತ್ತೀಚಿನ ವಿದ್ಯಾರ್ಥಿ-ಯುವಜನರ ಹೋರಾಟವೇ ಸಾಕ್ಷಿ ಎಂದರು.
“ನನಗೆ ಈ ಪ್ರಸಕ್ತ ವಿದ್ಯಮಾನದಲ್ಲಿ ಅತ್ಯಂತ ರೋಮಾಂಚನಕಾರಿ ಎನಿಸಿದ್ದು ಏನೆಂದರೆ— ನಮಗೂ ಮತ್ತು ಈ ದೇಶಕ್ಕೂ ಮುಂದೆ ಏನಾಗಲಿದೆ ಎಂಬುದು ಯಾರಿಗೂ ಊಹಿಸಲಾಗದ ಸ್ಥಿತಿ ನಿರ್ಮಾಣವಾಗಿರುವುದು! ಎಲ್ಲವೂ ಮೊದಲೇ ನಿಗದಿಯಾಗಿದೆ, ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಅಭಿನಯಿಸುತ್ತಿದ್ದಾರೆ ಹಾಗೂ ಇದೇ ಸ್ಥಿತಿ ಮುಂದಿನ ಸಾವಿರ ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಆಡಳಿತಗಾರರು ಭಾವಿಸಿದ್ದರು. ಆದರೆ ಕೇವಲ ಎರಡು ವಾರಗಳ ಜನಶಕ್ತಿಯ ಆಕ್ರೋಶ ಆ ಸರ್ವಾಧಿಕಾರಿ ವರ್ಚಸ್ಸನ್ನು ಬುಡಸಮೇತ ಅಲುಗಾಡಿಸಿದೆ” ಎಂದು ರಾಯ್ ಮಾರ್ಮಿಕವಾಗಿ ಹೇಳಿದರು.
ಪ್ರಧಾನಿ ಮೋದಿ ಅವರು ಕಳೆದ 24 ವರ್ಷಗಳಿಂದ ಒಂದೇ ಒಂದು ಮಾಧ್ಯಮ ಗೋಷ್ಠಿಯನ್ನೂ ಉದ್ದೇಶಿಸಿ ಮಾತನಾಡದೇ ಇದ್ದರೂ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಮತ್ತು ಪಿಆರ್ (PR) ತಂತ್ರಗಳನ್ನು ಬಳಸಿ ಅವರ ಸುತ್ತ ಬೃಹತ್ ರಾಜಕೀಯ ವರ್ಚಸ್ಸನ್ನು ಕಟ್ಟಲಾಗಿತ್ತು. ಕೆಲ ಅಭಿಮಾನಿಗಳಂತೂ ಅವರನ್ನು ‘ವಿಷ್ಣುವಿನ ಅವತಾರ’ ಎಂದೆಲ್ಲ ಕರೆಯಲು ಆರಂಭಿಸಿದ್ದರು. ಆದರೆ, ಕೇವಲ ಎರಡು ವಾರಗಳಲ್ಲಿ ಯುವಜನರು ಮತ್ತು ಸಿಜೆಪಿಯ ಬೃಹತ್ ಹೋರಾಟವು ಆ 24 ವರ್ಷಗಳ ಕೃತಕ ವರ್ಚಸ್ಸನ್ನು ಪೂರ್ಣವಾಗಿ ಧೂಳೀಪಟ ಮಾಡಿದೆ ಎಂದು ಬಣ್ಣಿಸಿದರು.
ಅಲ್ಲದೆ, ರಾಜಕೀಯ ಪಕ್ಷವೊಂದರ ಸಾಂಪ್ರದಾಯಿಕ ಚುನಾವಣಾ ಗೆಲುವಿಗಿಂತಲೂ ಇಂತಹ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯ ಪ್ರತಿರೋಧವೇ ಬಹುದೊಡ್ಡ ಸಾಧನೆ ಎಂದು ಅವರು ಬಣ್ಣಿಸಿದರು.
ಇದೇ ವೇಳೆ ಮುಂಬರುವ ದಿನಗಳ ಕುರಿತು ಮುನ್ನೆಚ್ಚರಿಕೆ ನೀಡಿದ ಅರುಂಧತಿ ರಾಯ್, ಕೇವಲ ಬೀದಿ ಹೋರಾಟಗಳಿಂದಲೇ ಈ ಸವಾಲು ಮುಗಿಯುವುದಿಲ್ಲ. ಪ್ರಭುತ್ವವು ದೇಶದ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳು, ತನಿಖಾ ಸಂಸ್ಥೆಗಳು ಹಾಗೂ ಅಧಿಕಾರದ ಪ್ರಮುಖ ಕೀಲಿಕೈಗಳನ್ನು ತನ್ನ ಕಟು ನಿಯಂತ್ರಣದಲ್ಲಿಟ್ಟು ಕೊಂಡಿರುವವರೆಗೆ ಸಾರ್ವಜನಿಕರ ಮೇಲಿನ ಆಡಳಿತಾತ್ಮಕ ದೌರ್ಜನ್ಯ ಮತ್ತು ಸವಾಲುಗಳು ಅಂತ್ಯಗೊಳ್ಳುವುದಿಲ್ಲ. ಜನಪರ ಚಳವಳಿಗಳು ಈ ಸಂಸ್ಥೆಗಳ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತಲೇ ಇರಬೇಕಾಗಿದೆ ಎಂದು ಕರೆ ನೀಡಿದರು.


