Homeಮುಖಪುಟ‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

- Advertisement -
- Advertisement -

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ ಸಹೋದರಿಯರಿಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ನ್ಯಾಯ ಒದಗಿಸಿದೆ. ಯುವತಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡು, ಅವರನ್ನು ಅಕ್ರಮ ಬಂಧನದಲ್ಲಿಡಲು ಸಾಥ್ ನೀಡಿದ್ದ ತಂದೆ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಜಂಟಿಯಾಗಿ ₹25 ಲಕ್ಷ ಪರಿಹಾರ ವಿಧಿಸಿ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಯಾವುದೇ ವ್ಯಕ್ತಿಯ ಪೋಷಕರ ಅಧಿಕಾರ, ಸಾಮಾಜಿಕ ನೈತಿಕತೆ ಅಥವಾ ಬಹುಸಂಖ್ಯಾತ ಸಮಾಜದ ಭಾವನೆಗಳು ಭಾರತದ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಮರೆಮಾಡಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿರುವ ಹೈಕೋರ್ಟ್, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ. 

‘ಮಕ್ತೂಬ್’ ಮಾಧ್ಯಮದ ಬಳಿ ಲಭ್ಯವಿರುವ 22 ಪುಟಗಳ ಸುದೀರ್ಘ ಹಾಗೂ ವಿವರವಾದ ತೀರ್ಪಿನ ಪ್ರತಿಯಲ್ಲಿ, ರಾಜ್ಯ ಆಡಳಿತ ಯಂತ್ರದ ನಿರಾಸಕ್ತಿ, ಕಾರ್ಯಾಂಗದ ವೈಫಲ್ಯ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ಆದ ಗಂಭೀರ ಲೋಪಗಳನ್ನು ನ್ಯಾಯಾಲಯ ಅತ್ಯಂತ ಪ್ರಬುದ್ಧವಾಗಿ ವಿಶ್ಲೇಷಿಸಿದೆ.

ಈ ಪ್ರಕರಣವು 2020ರಲ್ಲಿ ಪ್ರಾರಂಭವಾಯಿತು. ಅಂಶು ಭಾಟಿಯಾ (ಅಧಿಕೃತವಾಗಿ ಅಮಿನಾ ಅಂಶು ಭಾಟಿಯಾ ಎಂದು ಹೆಸರು ಬದಲಿಸಿಕೊಂಡವರು) ಮತ್ತು ದಿಯಾ ಭಾಟಿಯಾ (ಅಧಿಕೃತವಾಗಿ ಝೋಯಾ ದಿಯಾ ಭಾಟಿಯಾ ಎಂದು ಹೆಸರು ಬದಲಿಸಿಕೊಂಡವರು) ಎಂಬ ಸುಮಾರು 20 ರಿಂದ 35 ವರ್ಷ ವಯೋಮಾನದ ಇಬ್ಬರು ವಯಸ್ಕ, ವಿದ್ಯಾವಂತ ಸಹೋದರಿಯರು ತಮ್ಮ ಸ್ವಂತ ಇಚ್ಛೆ, ಆತ್ಮಸಾಕ್ಷಿ ಹಾಗೂ ಆಧ್ಯಾತ್ಮಿಕ ತೃಪ್ತಿಗಾಗಿ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ತಮಗೆ ಮನಸ್ಸಿನ ಶಾಂತಿ ಮತ್ತು ಆಧ್ಯಾತ್ಮಿಕ ನೆಮ್ಮದಿ ನೀಡಿದ ಕಾರಣಕ್ಕೆ ತಾವು ಈ ನಿರ್ಧಾರ ತಳೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದರು. ತದನಂತರ, ತಮ್ಮ ಸ್ವಂತ ಆಯ್ಕೆಗೆ ಅನುಗುಣವಾಗಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ವಯಸ್ಕ ಹೆಣ್ಣುಮಕ್ಕಳ ಈ ವೈಯಕ್ತಿಕ ಆಯ್ಕೆಯನ್ನು ಒಪ್ಪದ ಅವರ ತಂದೆ, ಅವರನ್ನು ಈ ನಿರ್ಧಾರದಿಂದ ತಡೆಯಲು ಪೋಲಿಸ್ ಠಾಣೆಯ ಮೆಟ್ಟಿಲೇರಿ ಅಪಹರಣ ಪ್ರಕರಣವನ್ನು ದಾಖಲಿಸಿದರು. ತರುವಾಯ, ಈ ಪ್ರಕರಣಕ್ಕೆ ಉತ್ತರ ಪ್ರದೇಶದ ವಿವಾದಾತ್ಮಕ ‘ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ, 2021’ರ ವಿವಿಧ ಕಠಿಣ ವಿಧಿಗಳನ್ನು ಸೇರಿಸಲಾಯಿತು. ಅರ್ಜಿದಾರರ ಪ್ರಕಾರ, ಮಹಿಳೆಯರ ತಂದೆಯು ಪಶ್ಚಿಮ ಬಂಗಾಳ ಪೊಲೀಸರ ಸಹಕಾರದೊಂದಿಗೆ ಇಬ್ಬರೂ ಯುವತಿಯರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದು ಬಂಧನದಲ್ಲಿಟ್ಟಿದ್ದರು. ಗಮನಾರ್ಹ ವಿಷಯವೆಂದರೆ, ಈ ಮಹಿಳೆಯರ ವಿರುದ್ಧ ಯಾವುದೇ ರೀತಿಯ ಅಪರಾಧ ಎಸಗಿದ ಆರೋಪಗಳಿರಲಿಲ್ಲ.

ಸುಮಾರು 2021ರಿಂದಲೂ ಈ ಯುವತಿಯರು ತಮ್ಮ ಮೂಲಭೂತ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತರಾಗಿ ಬಂಧನದಲ್ಲಿದ್ದರು. ಈ ಅಕ್ರಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ‘ಹೇಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸಲಾಯಿತು. ವಿಚಾರಣೆ ವೇಳೆ, ಯುವತಿಯರನ್ನು ಬಿಡುಗಡೆ ಮಾಡಿ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಬದಲು, ಉತ್ತರ ಪ್ರದೇಶದ ರಾಜ್ಯ ಆಡಳಿತ ಯಂತ್ರವು ಕ್ರಿಮಿನಲ್ ಮೊಕದ್ದಮೆಗಳ ತೋರಿಕೆಯ ಮುಸುಕಿನ ಅಡಿಯಲ್ಲಿ ಅವರನ್ನು ದೀರ್ಘಕಾಲ ಬಂಧನದಲ್ಲಿಡಲು ಅವಕಾಶ ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯ ಯಂತ್ರವು ತನ್ನ ಸಾಂವಿಧಾನಿಕ ಬಾಧ್ಯತೆಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ತನ್ನ ಲೋಪಗಳು ಮತ್ತು ಕೃತ್ಯಗಳ ಮೂಲಕ, ಪ್ರಜೆಗಳ ಮೂಲಭೂತ ಹಕ್ಕುಗಳ ನಿರಂತರ ಅಭಾವಕ್ಕೆ ಮೌನ ಬೆಂಬಲ ನೀಡಿದೆ ಎಂಬುದು ದಾಖಲೆಗಳಿಂದ ನಿಸ್ಸಂದಿಗ್ಧವಾಗಿ ಬಹಿರಂಗಗೊಳ್ಳುತ್ತದೆ ಎಂದು ಹೈಕೋರ್ಟ್ ಅತ್ಯಂತ ಖಾರವಾಗಿ ಅಭಿಪ್ರಾಯಪಟ್ಟಿದೆ. ಇಂತಹ ಕಾರ್ಯಾಂಗೀಯ ನಿಷ್ಕ್ರಿಯತೆ ಮತ್ತು ಸಾಂವಿಧಾನಿಕ ಉದಾಸೀನತೆಗೆ ಯಾವುದೇ ನ್ಯಾಯಾಂಗದ ಅನುಮೋದನೆ ಸಿಗಲು ಸಾಧ್ಯವಿಲ್ಲ. ನಾಗರಿಕರ ಹಕ್ಕುಗಳ ಉಲ್ಲಂಘನೆಗೆ ರಾಜ್ಯ ಸರ್ಕಾರವು ಸಾರ್ವಜನಿಕ ಕಾನೂನಿನಡಿ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ವಿಚಾರಣೆ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು, ಹಿಂದೂ ಧರ್ಮದಿಂದ ಇಸ್ಲಾಂಗೆ ಈ ಮಹಿಳೆಯರು ಮತಾಂತರಗೊಂಡಿರುವುದು ಕೇವಲ ವೈಯಕ್ತಿಕ ವಿಷಯವಲ್ಲ, ಇದು ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಒಂದು ದೊಡ್ಡ ಸಂಚು ಅಥವಾ ಪಿತೂರಿಯ ಭಾಗವಾಗಿದೆ ಎಂದು ವಾದಿಸಿತ್ತು. ಆದರೆ, ಈ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿತು. ಪ್ರಥಮ ಮಾಹಿತಿ ವರದಿಯಲ್ಲಿರುವ ಸಾಮಾನ್ಯ ಆರೋಪಗಳು ಮತ್ತು ತನಿಖೆ ಬಾಕಿಯಿದೆ ಎಂಬ ನೆಪವನ್ನು ಹೊರತುಪಡಿಸಿ, ವಯಸ್ಕ ಪ್ರಜೆಯೊಬ್ಬರು ಸ್ವಯಂಪ್ರೇರಿತವಾಗಿ ಧಾರ್ಮಿಕ ಆಯ್ಕೆ ಮಾಡಿಕೊಂಡಿರುವುದು ದೇಶದ ಸಾರ್ವಭೌಮತ್ವಕ್ಕಾಗಲಿ, ಭದ್ರತೆಗಾಗಲಿ ಅಥವಾ ಸಮಗ್ರತೆಗಾಗಲಿ ಅಪಾಯವನ್ನುಂಟುಮಾಡುತ್ತದೆ ಎಂದು ತೋರಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿಲ್ಲ ಎಂದು ನ್ಯಾಯಪೀಠ ನುಡಿಯಿತು. 

ಮೂಲಭೂತ ಹಕ್ಕುಗಳು ಅಪಾಯದಲ್ಲಿರುವಾಗ, ಕೇವಲ ಊಹೆಗಳು ಅಥವಾ ಆತಂಕಗಳು ಎಷ್ಟೇ ಗಂಭೀರವಾಗಿದ್ದರೂ, ಕಾನೂನುಬದ್ಧವಾಗಿ ಅಂಗೀಕೃತವಾದ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಬಲವಾಗಿ ಹೇಳಿದ ನ್ಯಾಯಾಲಯ, ‘ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ’ಯ ನಿಯಮಗಳನ್ನು ಮಹಿಳೆಯರು ಪಾಲಿಸಿಲ್ಲ ಎಂಬ ನೆಪವನ್ನೊಡ್ಡಿ, ಅವರ ತಂದೆಗೆ ಅಥವಾ ರಾಜ್ಯಕ್ಕೆ ಅವರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಅಕ್ರಮ ಬಂಧನದಲ್ಲಿಡಲು ಯಾವುದೇ ಅಧಿಕಾರ ಸಿಗುವುದಿಲ್ಲ ಎಂದು ಸಾರಿತು.

ತೀರ್ಪು ನೀಡುವ ಮುನ್ನ ನ್ಯಾಯಾಲಯವು ಜುಲೈ 30 ರಂದು ಪೊಲೀಸ್ ಅಧಿಕಾರಿಗಳು ಮತ್ತು ಮಹಿಳೆಯರ ತಂದೆಗೆ ನಿರ್ದೇಶನ ನೀಡಿ, ಯುವತಿಯರನ್ನು ನ್ಯಾಯಾಲಯದ ಮುಂದೆ ನೇರವಾಗಿ ಹಾಜರುಪಡಿಸುವಂತೆ ಆದೇಶಿಸಿತ್ತು. ನ್ಯಾಯಾಧೀಶರು ಯುವತಿಯರೊಂದಿಗೆ ನೇರವಾಗಿ ಸಂವಹನ ನಡೆಸಿ, ಅವರ ನಿರ್ಧಾರಗಳು ಸ್ವಯಂಪ್ರೇರಿತವೇ ಅಥವಾ ಯಾರದ್ದಾದರೂ ಒತ್ತಡವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು. ತರುವಾಯ ನ್ಯಾಯಮೂರ್ತಿ ಸಂದೀಪ್ ಜೈನ್ ಅವರಿದ್ದ ಪೀಠವು ಆಗಸ್ಟ್ 6 ರಂದು ಈ ಮಹತ್ವದ ತೀರ್ಪನ್ನು ಪ್ರಕಟಿಸಿತು. ಇದರಲ್ಲಿ, ಇಬ್ಬರೂ ಮಹಿಳೆಯರು ತಮ್ಮ ಇಸ್ಲಾಂ ಧರ್ಮ ಸ್ವೀಕಾರದ ನಿರ್ಧಾರವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಅದು ತಮ್ಮ ವೈಯಕ್ತಿಕ ನಂಬಿಕೆ ಮತ್ತು ಆತ್ಮಸಾಕ್ಷಿಯ ವಿಷಯವಾಗಿದೆ ಎಂಬುದನ್ನು ನಿರಂತರವಾಗಿ ಮತ್ತು ಸ್ಪಷ್ಟವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ದಾಖಲಿಸಲಾಯಿತು. ಅವರು ಯಾವುದೇ ಬಲವಂತ, ಅನಗತ್ಯ ಪ್ರಭಾವ, ವಂಚನೆ, ಆಮಿಷ ಅಥವಾ ಹಿಂಸಾತ್ಮಕ ವಾತಾವರಣದಲ್ಲಿ ಈ ನಿರ್ಧಾರ ತಳೆದಿದ್ದಾರೆ ಎಂದು ಸೂಚಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬುದನ್ನು ಪೀಠ ಸ್ಪಷ್ಟಪಡಿಸಿತು.

ಈ ಪ್ರಕರಣದ ಕೇಂದ್ರಬಿಂದು ಯುವತಿಯರು ವಯಸ್ಕರು ಎಂಬ ಅಂಶವಾಗಿದೆ ಎಂದ ನ್ಯಾಯಾಲಯ, ಪ್ರೌಢ ವಯಸ್ಸಿನ ನಾಗರಿಕರಾಗಿ ತಮ್ಮ ಜೀವನದ ಹಾದಿ, ಧರ್ಮ, ವಾಸಸ್ಥಳ ಮತ್ತು ಜೊತೆಯಲ್ಲಿ ವಾಸಿಸಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರ್ಣ ಸಾಂವಿಧಾನಿಕ ಹಕ್ಕು ಈ ಮಹಿಳೆಯರಿಗಿದೆ ಎಂದು ಪುನರುಚ್ಚರಿಸಿತು. ಈ ಸ್ವಾತಂತ್ರ್ಯಗಳು ಭಾರತೀಯ ಸಂವಿಧಾನದ ವಿಧಿ 21ರ ಅಡಿಯಲ್ಲಿ ಖಾತರಿಪಡಿಸಲಾದ ‘ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು’ ಹಾಗೂ ವಿಧಿ 25ರ ಅಡಿಯಲ್ಲಿ ಸಿಗುವ ‘ಆತ್ಮಸಾಕ್ಷಿಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು’ಗಳ ಅತ್ಯಂತ ಪ್ರಮುಖ ಭಾಗಗಳಾಗಿವೆ. ಪೋಷಕರು ತಮ್ಮ ವಯಸ್ಕ ಮಕ್ಕಳ ಧರ್ಮ, ನಂಬಿಕೆ ಅಥವಾ ವೈಯಕ್ತಿಕ ನಿರ್ಧಾರಗಳನ್ನು ಒಪ್ಪುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಬಂಧನದಲ್ಲಿಡಲು ಅಥವಾ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯಾವುದೇ ಅಧಿಕಾರ ಹೊಂದಿಲ್ಲ. ಕೌಟುಂಬಿಕ ಅಸಮ್ಮತಿ, ಸಾಮಾಜಿಕ ಸಾಂಪ್ರದಾಯಿಕತೆ ಅಥವಾ ಕಾರ್ಯಾಂಗದ ನಿರಾಸಕ್ತಿಗೆ ಪ್ರಜೆಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ಬಲಿ ಕೊಡಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾದ ಸಂದೇಶ ನೀಡಿತು.

ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹಲವು ಕಟ್ಟುನಿಟ್ಟಿನ ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡಿದೆ. ಝೋಯಾ ದಿಯಾ ಭಾಟಿಯಾ ಮತ್ತು ಅಮಿನಾ ಅಂಶು ಭಾಟಿಯಾ ಅವರು ತಮ್ಮ ತಂದೆ, ರಾಜ್ಯ ಸರ್ಕಾರ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ತಮಗೆ ಇಷ್ಟಬಂದ ಸ್ಥಳದಲ್ಲಿ, ಇಷ್ಟಬಂದ ವ್ಯಕ್ತಿಯೊಂದಿಗೆ ಸ್ವತಂತ್ರವಾಗಿ ವಾಸಿಸಲು ಸಂಪೂರ್ಣ ಅರ್ಹರಾಗಿದ್ದಾರೆ ಎಂದು ಘೋಷಿಸಲಾಯಿತು. ಮಹಿಳೆಯರ ಮೂಲಭೂತ ಹಕ್ಕುಗಳನ್ನು ಅಕ್ರಮವಾಗಿ ಕಸಿದುಕೊಂಡಿದ್ದಕ್ಕಾಗಿ ಅವರ ತಂದೆ ಮತ್ತು ಉತ್ತರ ಪ್ರದೇಶ ಸರ್ಕಾರ ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ ₹25 ಲಕ್ಷ ಪರಿಹಾರ ನೀಡಬೇಕು ಮತ್ತು ಈ ಮೊತ್ತವನ್ನು ಇಬ್ಬರೂ ಯುವತಿಯರಿಗೆ ತಲಾ ₹12.5 ಲಕ್ಷದಂತೆ ಸಮಾನವಾಗಿ ಹಂಚಿ, ಎಂಟು ವಾರಗಳ ಒಳಗೆ ಪಾವತಿಸಬೇಕು ಎಂದು ಆದೇಶಿಸಿತು.

ಪರಿಹಾರದ ಮೊತ್ತವನ್ನು ಪಾವತಿಸಿದ ನಂತರ, ರಾಜ್ಯ ಸರ್ಕಾರವು ಅದರಲ್ಲಿ 50% ಮೊತ್ತವನ್ನು (₹12.5 ಲಕ್ಷ) ಮಹಿಳೆಯರ ತಂದೆಯಿಂದ ವಸೂಲಿ ಮಾಡಬಹುದು ಮತ್ತು ಉಳಿದ 50% ಮೊತ್ತವನ್ನು ಅಕ್ರಮ ಬಂಧನಕ್ಕೆ ಕಾರಣರಾದ, ಕರ್ತವ್ಯ ಲೋಪ ಎಸಗಿದ ತಪ್ಪಿತಸ್ಥ ಸಾರ್ವಜನಿಕ ಸೇವಕರಿಂದ ಅವರ ವೈಯಕ್ತಿಕ ಖಾತೆಯಿಂದ ವಸೂಲಿ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಈ ವಸೂಲಾತಿಯನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ, ಸೂಕ್ತ ಅವಕಾಶ ನೀಡಿದ ನಂತರವೇ ಮಾಡಬೇಕು ಎಂದು ಸೂಚಿಸಲಾಗಿದೆ. ಇದರ ಜೊತೆಗೆ, ಯುವತಿಯರ ತಂದೆಯು ಅವರ ಪಾಸ್‌ಪೋರ್ಟ್, ಶೈಕ್ಷಣಿಕ ಅಂಕಪಟ್ಟಿಗಳು, ಪ್ರಮಾಣಪತ್ರಗಳು, ಗುರುತಿನ ಚೀಟಿಗಳು, ಬ್ಯಾಂಕ್ ಪಾಸ್‌ಬುಕ್, ಚೆಕ್ ಬುಕ್, ಮತಾಂತರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಮೂಲ ವೈಯಕ್ತಿಕ ವಸ್ತುಗಳನ್ನು ಏಳು ದಿನಗಳ ಒಳಗಾಗಿ ಹಿಂತಿರುಗಿಸಬೇಕು, ಹಾಗೆಯೇ ತಂದೆಯು ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಹೆಣ್ಣುಮಕ್ಕಳ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಕಟ್ಟಾಜ್ಞೆ ಹೊರಡಿಸಲಾಗಿದೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಯುವತಿಯರ ಪರವಾಗಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಸೈಯದ್ ಕೈಫ್ ಹಸನ್ ಅವರು ‘ಮಕ್ತೂಬ್’ ಮಾಧ್ಯಮದೊಂದಿಗೆ ಮಾತನಾಡಿ, ಈ ತೀರ್ಪು ಕೇವಲ ಇಬ್ಬರು ಮಹಿಳೆಯರನ್ನು ಸ್ವತಂತ್ರರು ಎಂದು ಘೋಷಿಸುವುದಕ್ಕಷ್ಟೇ ಸೀಮಿತವಾಗಿಲ್ಲ, ಬದಲಿಗೆ ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಯಂತ್ರ ಮತ್ತು ಪೋಲಿಸ್ ವ್ಯವಸ್ಥೆಯ ಮೇಲೆ ಹೊರಿಸಿದೆ ಎಂದು ತಿಳಿಸಿದ್ದಾರೆ. 

ಪ್ರಸ್ತುತ ಸನ್ನಿವೇಶದಲ್ಲಿ ಸಾಂವಿಧಾನಿಕ ನ್ಯಾಯಾಲಯವೊಂದು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿ ಪ್ರಜೆಗಳ ಹಕ್ಕನ್ನು ಎತ್ತಿಹಿಡಿದಿರುವುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ತಪ್ಪು ಎಸಗಿದ ಸರ್ಕಾರಿ ಅಧಿಕಾರಿಗಳ ವೈಯಕ್ತಿಕ ಜವಾಬ್ದಾರಿಯನ್ನು ಗುರುತಿಸಿ, ಅವರಿಂದಲೇ ಪರಿಹಾರದ ಹಣವನ್ನು ವಸೂಲಿ ಮಾಡಲು ಆದೇಶಿಸಿರುವುದು ಈ ತೀರ್ಪಿನ ಅತ್ಯಂತ ಕ್ರಾಂತಿಕಾರಿ ಭಾಗವಾಗಿದೆ ಎಂದ ಅವರು, ವಯಸ್ಕ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಪೋಷಕರ ಅಧಿಕಾರಕ್ಕಾಗಲಿ, ಧಾರ್ಮಿಕ ಅಸಮ್ಮತಿಗಾಗಲಿ, ಸಾಮಾಜಿಕ ಒತ್ತಡಕ್ಕಾಗಲಿ ಅಥವಾ ಆಧಾರರಹಿತ ಪಿತೂರಿಯ ಆರೋಪಗಳಿಗಾಗಲಿ ಬಲಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪು ಬಲವಾಗಿ ಸಾರಿದೆ ಎಂದು ಪ್ರತಿಪಾದಿಸಿದ್ದಾರೆ. 

ದ್ವೇಷ ಮತ್ತು ಧಾರ್ಮಿಕ ಧ್ರುವೀಕರಣದ ವಾತಾವರಣದಲ್ಲಿ, ಪ್ರಜೆಗಳ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿದಿರುವ ಅಲಹಾಬಾದ್ ಹೈಕೋರ್ಟ್‌ನ ಈ ನಿರ್ಧಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಆಶಾದಾಯಕ ಮತ್ತು ಐತಿಹಾಸಿಕ ಮೈಲಿಗಲ್ಲಾಗಿ ಹೊರಹೊಮ್ಮಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...