ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರಾಜ್ ಅವರನ್ನು ಭೇಟಿಯಾದ ಸಂತ್ರಸ್ತರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ಕುರಿತು ಉಂಟಾಗಿರುವ ಗೊಂದಲ ಹಾಗೂ ತಮಗೆ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗ ಆಗಸ್ಟ್ 24ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪೋಲಂಪಲ್ಲಿ ಮತ್ತು ಅಪ್ಪಿರೆಡ್ಡಿಹಳ್ಳಿ ಬೂತ್‌ಗಳ ವ್ಯಾಪ್ತಿಯಲ್ಲಿ ಬದುಕಿರುವ ಹಲವು ಮತದಾರರನ್ನು ಮೃತಪಟ್ಟವರು ಎಂದು ಗುರುತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ 87 ವರ್ಷದ ಎಂ. ಚನ್ನರಾಯಪ್ಪ ಅವರು ಪ್ರಕಾಶ್ ರಾಜ್ ಅವರನ್ನು ಖುದ್ದಾಗಿ ಭೇಟಿಯಾಗಿ, ತಾವು ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ತಮ್ಮನ್ನು ಮೃತಪಟ್ಟವರು ಎಂದು ಗುರುತಿಸಿರುವ ಬಗ್ಗೆ ಅಳಲು ತೋಡಿಕೊಂಡರು.
ಪೋಲಂಪಲ್ಲಿ ಬೂತ್ ವ್ಯಾಪ್ತಿಯ ಮತದಾರ ಕೊಂಡಪ್ಪ ಅವರು ಕೂಡ ಚುನಾವಣಾ ಆಯೋಗದ ಪಟ್ಟಿಯಲ್ಲಿ ಮೃತಪಟ್ಟವರು ಎಂದು ಗುರುತಿಸಲ್ಪಟ್ಟಿರುವವರ ಮಾಹಿತಿ ನೀಡಿದರು. ಇದೇ ಬೂತ್ ವ್ಯಾಪ್ತಿಯ ಮುನಿಕೃಷ್ಟ ಅವರ ಪತ್ನಿ, ಕೇವಲ 31 ವರ್ಷದ ನೀಲಮ್ಮ ಜೆನ್ ಅವರನ್ನು ಮೃತಪಟ್ಟವರು ಎಂದು ಗುರುತಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಪ್ಪಿರೆಡ್ಡಿಹಳ್ಳಿ ಬೂತ್ ವ್ಯಾಪ್ತಿಯ 36 ವರ್ಷದ ಬಿಆರ್ ಶ್ರೀನಿವಾಸ್ ಅವರು ಮನೆಯಲ್ಲೇ ಇದ್ದರೂ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲಾಗಿದೆ ಎಂದು ಸಂತ್ರಸ್ತರು ದೂರಿದರು.
ಅಲೆಮಾರಿ ಸಮುದಾಯದ ಮಹಿಳೆ ಚೌಡಮ್ಮ ಕೂಡ ತಾವು ಊರಲ್ಲೇ ಇದ್ದರೂ ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಿರುವುದಾಗಿ ಪ್ರಕಾಶ್ ರಾಜ್ ಬಳಿ ಅಳಲು ತೋಡಿಕೊಂಡರು. ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್, ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಸಂಚರಿಸುವ ಅಲೆಮಾರಿ ಸಮುದಾಯದ ಜನರಿಗೆ ಒಂದೇ ಸ್ಥಳದಲ್ಲಿ ವಾಸವಿದ್ದು ದಾಖಲೆಗಳನ್ನು ಸಲ್ಲಿಸುವಂತೆ ಹೇಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಎಸ್ಐಆರ್‌ನ ಪರಿಣಾಮ ಅಲೆಮಾರಿಗಳು, ದಲಿತರು, ಮುಸ್ಲಿಮರು ಸೇರಿದಂತೆ ಬಡ ಮತ್ತು ದುರ್ಬಲ ವರ್ಗದ ಜನರ ಮೇಲೆ ಬೀಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅನಕ್ಷರಸ್ಥರು ಹಾಗೂ ಭಾಷೆಯ ಸಮಸ್ಯೆ ಎದುರಿಸುವವರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ಎಷ್ಟು ದಿನ ಸರ್ಕಾರಿ ಕಚೇರಿಗಳ ಮುಂದೆ ಅಲೆದಾಡಬೇಕು ಎಂದು ಪ್ರಶ್ನಿಸಿದ ಅವರು, ಒಬ್ಬ ಮತದಾರನ ಮತ ಕಳೆದುಹೋಗುವುದೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗಂಭೀರ ಪರಿಣಾಮ ಬೀರುವ ವಿಚಾರ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪರಿಶೀಲಿಸಿ, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಂಡಿದೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿ ಬಳಿ ಸಭೆ ನಡೆಸಲಾಗಿದ್ದು, ಸಂತ್ರಸ್ತ ಮತದಾರರಿಂದ ನೇರವಾಗಿ ಮಾಹಿತಿ ಸಂಗ್ರಹಿಸಲಾಯಿತು.


