Homeಮುಖಪುಟಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

- Advertisement -
- Advertisement -

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಆ.11) ಮೌಖಿಕವಾಗಿ ಹೇಳಿದೆ. ಆದಾಗ್ಯೂ, ಈ ನ್ಯಾಯಾಧಿಕರಣಗಳ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಸ್ಪಷ್ಟಪಡಿಸಿದೆ ಎಂದು livelaw.in ವರದಿ ಮಾಡಿದೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಎಸ್‌ಐಆರ್ ಮೇಲ್ಮನವಿ ನ್ಯಾಯಾಧಿಕರಣಗಳ ವಿಲೇವಾರಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ತ್ವರಿತಗೊಳಿಸಲು ವಿವಿಧ ನಿರ್ದೇಶನಗಳನ್ನು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ.

ಮೇಲ್ಮನವಿ ನ್ಯಾಯಾಧಿಕರಣಗಳು ವಿಲೇವಾರಿ ಮಾಡಿರುವ ಒಟ್ಟು ಮೇಲ್ಮನವಿಗಳ ವಿವರಗಳನ್ನು ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಇದೇ ವೇಳೆ, ಈ ಪ್ರಕರಣವನ್ನು ಮತ್ತೊಂದು ಅರ್ಜಿಯೊಂದಿಗೆ ಜೋಡಿಸಿದ ಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ನಿಗದಿಪಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರೌಫ್ ರಹೀಮ್, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟ ವ್ಯಕ್ತಿಗಳ ಮೇಲ್ಮನವಿಗಳನ್ನು ನ್ಯಾಯಾಧಿಕರಣಗಳು ತ್ವರಿತವಾಗಿ ಇತ್ಯರ್ಥಪಡಿಸುತ್ತಿಲ್ಲ ಮತ್ತು ಈ ಮಧ್ಯೆ ಅಂತಹ ಜನರಿಗೆ ಪಡಿತರದಂತಹ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದ್ದರಿಂದ, ನ್ಯಾಯಾಧಿಕರಣಗಳು ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವೇಳೆ, ನ್ಯಾಯಾಧಿಕರಣಗಳು ಇದುವರೆಗೆ ಎಷ್ಟು ಮೇಲ್ಮನವಿಗಳನ್ನು ಇತ್ಯರ್ಥಪಡಿಸಿವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದು, ಭಾರತೀಯ ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ನ್ಯಾಯವಾದಿ ದಾಮಾ ಶೇಷಾದ್ರಿ ನಾಯ್ಡು ಅವರು ಈ ದತ್ತಾಂಶವನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ.

ನ್ಯಾಯಾಧಿಕರಣಗಳಿಗೆ ಸಂಬಂಧಿಸಿದ ವ್ಯವಸ್ಥಿತ ಮತ್ತು ಲಾಜಿಸ್ಟಿಕಲ್ ಸಮಸ್ಯೆಗಳನ್ನು ಪರಿಶೀಲಿಸಲು ಒಪ್ಪಿಕೊಂಡ ಪೀಠವು, ತಾನು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ನ್ಯಾಯಮೂರ್ತಿ ಬಾಗ್ಚಿ ಅವರು ಈ ರೀತಿ ಅವಲೋಕಿಸಿದ್ದಾರೆ : “ಈ ನ್ಯಾಯಾಲಯದ ಆದೇಶಗಳ ಅನ್ವಯವೇ ನ್ಯಾಯಾಧಿಕರಣಗಳನ್ನು ಸ್ಥಾಪಿಸಲಾಗಿದೆ. ನಿಯಮಬದ್ಧ ಪ್ರಕ್ರಿಯೆಯಲ್ಲಿ ಅವುಗಳು ಒಂದು ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ. ಆದ್ದರಿಂದ ನಾವು ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕಿದೆಯೇ ಹೊರತು ಬೇರೇನೂ ಅಲ್ಲ. ಪ್ರಕರಣಗಳ ಪ್ರಮಾಣ ಮತ್ತು ತೆಗೆದುಕೊಳ್ಳುತ್ತಿರುವ ಸಮಯಕ್ಕೆ ಹೋಲಿಸಿದರೆ ಅವುಗಳ ಕಾರ್ಯಕ್ಷಮತೆ ಕೊರತೆಯಿಂದ ಕೂಡಿದೆ ಎಂದು ಕಂಡುಬಂದರೆ, ವಿಲೇವಾರಿಯ ಇಡೀ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಲು ಮತ್ತು ಪುನರ್‌ರಚಿಸಲು ನಾವು ನಿಮಗೆ ಕೋರಬೇಕಾಗುತ್ತದೆ. ನೀವು ಮಧ್ಯಸ್ಥಿಕೆ (ಆರ್ಬಿಟ್ರೇಷನ್) ಪ್ರಕ್ರಿಯೆಯಲ್ಲಿ ಹೊಂದಿರುವಂತೆ, ಸಂಬಂಧಪಟ್ಟ ನ್ಯಾಯಾಧೀಶರಿಗೆ ಆನ್‌ಲೈನ್ ಪ್ರವೇಶಾವಕಾಶವನ್ನು ನೀಡಲು ಸಾಧ್ಯವಿದೆಯೇ,… ನಮ್ಮ ತಕ್ಷಣದ ಕಾಳಜಿಯೆಂದರೆ, ಸಾಕಷ್ಟು ಸಮಯ ಕಳೆದಿರುವುದರಿಂದ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸುವುದಾಗಿದೆ. ವಿಲೇವಾರಿ ಮಾಡಲಾದ ಪ್ರಕರಣಗಳ ಒಟ್ಟು ಪ್ರಮಾಣ ಎಷ್ಟು? ನಮಗೆ ತೀರ್ಪಿನ ಫಲಿತಾಂಶ ಮುಖ್ಯವಲ್ಲ, ಬದಲಿಗೆ ವಿಲೇವಾರಿಯ ಪ್ರಮಾಣ ಮತ್ತು ಔಟ್‌ಪುಟ್ ಮುಖ್ಯವಾಗಿದೆ.”

ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸುತ್ತಾ, ಮೇಲ್ಮನವಿಗಳು ಇತ್ಯರ್ಥವಾಗುವಷ್ಟರಲ್ಲಿ ಮುಂದಿನ ಚುನಾವಣೆಗಳೇ ನಡೆದುಹೋಗಿರುತ್ತವೆ ಎಂದು ಹೇಳಿದ್ದಾರೆ.

“ಒಂದು ವೇಳೆ ವ್ಯವಸ್ಥಿತ ಅಥವಾ ಲಾಜಿಸ್ಟಿಕಲ್ ವಿಳಂಬಗಳಿದ್ದರೆ, ನಾವು ಅದನ್ನು ಪರಿಹರಿಸುತ್ತೇವೆ. ನಾವು ಅದರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳುತ್ತೇವೆ” ಎಂದು ನಾಯ್ಡು ತಿಳಿಸಿದ್ದಾರೆ.

“ನೀವು ನಮಗೆ ಉತ್ತರಿಸಬೇಕಾಗಿಲ್ಲದಿರಬಹುದು. ಆದರೆ ಈ ನ್ಯಾಯಾಧಿಕರಣಗಳ ಸೃಷ್ಟಿಕರ್ತರಾಗಿ, ನಿಯಮಬದ್ಧ ಪ್ರಕ್ರಿಯೆಯು ಸರಿಯಾದ ಫಲಿತಾಂಶ ನೀಡುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಸಹ ನಾವೇ ನೋಡಬೇಕಾಗಿದೆ. ಕೇವಲ ಮೇಲ್ಮನವಿ ಸಲ್ಲಿಸುವುದಷ್ಟೇ ಒಬ್ಬ ದಾವೇದಾರನಿಗೆ ತೃಪ್ತಿ ನೀಡಲಾರದು” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದ್ದಾರೆ.

ಇದುವರೆಗೆ ಶೇಕಡಾ 1 ಕ್ಕಿಂತಲೂ ಕಡಿಮೆ ಮೇಲ್ಮನವಿಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು, ನ್ಯಾಯಾಧಿಕರಣಗಳ ಸಂಖ್ಯೆ, ಅವುಗಳ ಕೆಲಸದ ಸಮಯ ಮತ್ತು ಅವುಗಳ ಪ್ರಕರಣ ವಿಲೇವಾರಿ ದರ ಸೇರಿದಂತೆ ಇನ್ನಿತರ ಪ್ರಮುಖ ಅಂಶಗಳನ್ನು ನ್ಯಾಯಾಲಯವು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

ನಂತರ ಅರ್ಜಿದಾರರ ಪರ ವಕೀಲರು ಪ್ರಕರಣಗಳ ಇತ್ಯರ್ಥಕ್ಕೆ ಒಂದು ನಿರ್ದಿಷ್ಟ ಕಾಲಮಿತಿಯನ್ನು ಸಹ ನಿಗದಿಪಡಿಸಬೇಕು ಎಂದು ವಿನಂತಿಸಿದ್ದುಮ, ಇದಕ್ಕೆ ತಕ್ಷಣವೇ ಉತ್ತರಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು, “ಕಾಲಮಿತಿಯನ್ನು ನಿಗದಿಪಡಿಸಲು ನಮಗೆ ಸಾಧ್ಯವಿಲ್ಲ” ಎಂದಿದ್ದಾರೆ.

ನಂತರ ಹಿರಿಯ ವಕೀಲರು, ಎಸ್‌ಐಆರ್‌ನಲ್ಲಿ ಹೊರಗಿಟ್ಟ ವ್ಯಕ್ತಿಗಳ ಮೇಲ್ಮನವಿಗಳು ಇನ್ನೂ ಬಾಕಿ ಉಳಿದಿದ್ದರೂ ಸಹ ಅವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಸೌಲಭ್ಯಗಳನ್ನು ನಿರಾಕರಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು, ಈ ಅರ್ಜಿಯ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಮತ್ತು ಪಿಡಿಎಸ್ ಸಮಸ್ಯೆಯನ್ನು ಹೈಕೋರ್ಟ್‌ಗೆ ಒಪ್ಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಎಸ್‌ಐಆರ್‌ನಿಂದ ಹೊರಗುಳಿದ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು ಕಲ್ಯಾಣ ಸೌಲಭ್ಯಗಳನ್ನು ನಿರಾಕರಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದು ಬೇರೆಯದೇ ಆದ ಕಾನೂನು ಪ್ರಕ್ರಿಯೆಯಾಗಿದ್ದು (cause of action), ಇದನ್ನು ಹೈಕೋರ್ಟ್ ಮುಂದೆಯೇ ಪ್ರಸ್ತಾಪಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಬಂಧಿತ ಮತ್ತೊಂದು ಪ್ರಕರಣದ ಪರ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು, ಮೂಲಸೌಕರ್ಯಗಳ ಕೊರತೆಯಿಂದ ದೂರದ ಗ್ರಾಮೀಣ ಹಾಗೂ ಹಳ್ಳಿ ಪ್ರದೇಶಗಳ ಜನರಿಗೆ ನ್ಯಾಯಾಧಿಕರಣಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನ್ಯಾಯಾಧಿಕರಣಗಳಿಗೆ ಸಂಬಂಧಿಸಿದ ವ್ಯವಸ್ಥಿತ ಮತ್ತು ಲಾಜಿಸ್ಟಿಕಲ್ ಸಮಸ್ಯೆಗಳನ್ನು ಪರಿಶೀಲಿಸಲು ಪೀಠವು ಒಪ್ಪಿಕೊಂಡಿದ್ದು, ವಿಚಾರಣೆಯನ್ನು ಮುಂದೂಡುವ ಆದೇಶದಲ್ಲಿ, “ಮೇಲ್ಮನವಿ ನ್ಯಾಯಾಧಿಕರಣಗಳು ವಿಲೇವಾರಿ ಮಾಡಿರುವ ಒಟ್ಟು ಮೇಲ್ಮನವಿಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗವು ಸಲ್ಲಿಸಲಿ” ಎಂದು ಪೀಠವು ಅವಲೋಕಿಸಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಈ ಮೇಲ್ಮನವಿ ನ್ಯಾಯಾಧಿಕರಣಗಳನ್ನು ಸುಪ್ರಿಂ ಕೋರ್ಟ್ ನೀಡಿದ ನಿರ್ದೇಶನಗಳ ಅನ್ವಯವೇ ರಚಿಸಲಾಗಿತ್ತು. ಪ್ರಸ್ತುತ ಚಾಲ್ತಿಯಲ್ಲಿರುವ ವೇಗವನ್ನು ಗಮನಿಸಿದರೆ, ಸದ್ಯ ಬಾಕಿ ಉಳಿದಿರುವ ಸುಮಾರು 34 ಲಕ್ಷ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಬರೋಬ್ಬರಿ 21 ವರ್ಷಗಳು ಬೇಕಾಗಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಅವಲೋಕಿಸಿದೆ.

ಅರ್ಜಿದಾರರು ಈ ಕೆಳಗಿನ ಪರಿಹಾರಗಳನ್ನು ಕೋರಿದ್ದರು

  1. ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಬಾಕಿ ಇರುವ ಮೇಲ್ಮನವಿಗಳನ್ನು ಆದಷ್ಟು ಬೇಗ ಪರಿಶೀಲಿಸಿ, ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಬೇಕು; ಮತ್ತು
  2. ದೈನಂದಿನ ಕಾಸ್ ಲಿಸ್ಟ್‌ಗಳು (ವಿಚಾರಣಾ ಪಟ್ಟಿಗಳು), ಆದೇಶಗಳು, ಅಧಿಸೂಚನೆಗಳು, ನೋಟಿಸ್‌ಗಳು, ನಿಯಮಗಳು, ಮಾರ್ಗಸೂಚಿಗಳು, ಸುತ್ತೋಲೆಗಳು ಮತ್ತು ಇತರ ಕಾರ್ಯವಿಧಾನದ ನಿರ್ದೇಶನಗಳನ್ನು ಪ್ರಕಟಿಸಲು ಎಸ್‌ಐಆರ್ ನ್ಯಾಯಾಧಿಕರಣಗಳಿಗಾಗಿಯೇ ಪ್ರತ್ಯೇಕ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಟಲ್ ವೇದಿಕೆಯನ್ನು ರಚಿಸಲು ನಿರ್ದೇಶನಗಳನ್ನು ಕೋರಲಾಗಿದೆ. ಈ ಡಿಜಿಟಲ್ ವೇದಿಕೆಯ ಕುರಿತು ಬಂಗಾಳಿ ಭಾಷೆಯ ಪತ್ರಿಕೆಗಳು ಸೇರಿದಂತೆ ವಿವಿಧ ದಿನಪತ್ರಿಕೆಗಳು ಮತ್ತು ಇತರ ಸುದ್ದಿ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ನೀಡಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
  3. ಮುರ್ಷಿದಾಬಾದ್, ಮಾಲ್ಡಾ ಮುಂತಾದ ಹೆಚ್ಚು ಬಾಧಿತ ಜಿಲ್ಲೆಗಳಿಗೆ ನ್ಯಾಯಾಧಿಕರಣಗಳ ಸಂಖ್ಯೆಯನ್ನು ಹೆಚ್ಚಿಸಬೇಕು; ಪ್ರಮುಖವಾಗಿ ಬ್ಲಾಕ್ ಮಟ್ಟದ ಮೇಲ್ಮನವಿ ನ್ಯಾಯಾಧಿಕರಣಗಳನ್ನು ಮತ್ತು/ಅಥವಾ ಪಶ್ಚಿಮ ಬಂಗಾಳ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಇಂತಹ ಹೆಚ್ಚುವರಿ ಮೇಲ್ಮನವಿ ನ್ಯಾಯಾಧಿಕರಣಗಳನ್ನು ಸ್ಥಾಪಿಸಲು ನಿರ್ದೇಶನಗಳನ್ನು ಕೋರಲಾಗಿದೆ.
  4. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರಿಂದ ಉದ್ಭವಿಸಿರುವ ಭಾರಿ ಪ್ರಮಾಣದ ಬಾಕಿ ಮೇಲ್ಮನವಿಗಳನ್ನು ನ್ಯಾಯನಿರ್ಣಯ ಮಾಡಲು ಅಗತ್ಯವಿರುವಷ್ಟು ಸಂಖ್ಯೆಯ ನ್ಯಾಯಾಧೀಶರನ್ನು ನೇಮಿಸಬೇಕು, ಮತ್ತು ಅದಕ್ಕೆ ಬೇಕಾದ ಆಡಳಿತಾತ್ಮಕ ಹಾಗೂ ಮೂಲಸೌಕರ್ಯಗಳ ಬೆಂಬಲವನ್ನು ಒದಗಿಸಬೇಕು ಎಂದು ವಿನಂತಿಸಲಾಗಿದೆ.
  5. ಮತದಾರರ ಪಟ್ಟಿಯಿಂದ ಅನಿಯಂತ್ರಿತ ಮತ್ತು ನಿರಂಕುಶವಾಗಿ ಹೆಸರುಗಳನ್ನು ಕೈಬಿಟ್ಟಿರುವುದರಿಂದಾಗಿ, ಅಂತಹ ಕೈಬಿಡಲಾದ ಪಟ್ಟಿಯಲ್ಲಿರುವ (delete list) ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಅಥವಾ ಇತರ ಯಾವುದೇ ಅಧಿಕಾರಿಗಳು ಯಾವುದೇ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳದಂತೆ ತಡೆಯಬೇಕು; ಮತ್ತು
  6. ಮತದಾರರ ಪಟ್ಟಿಯಿಂದ ಕೈಬಿಡಲಾದ ಪಟ್ಟಿಯಲ್ಲಿ ಹೆಸರುಗಳಿರುವ ಯಾವುದೇ ವ್ಯಕ್ತಿಯ ಮೇಲ್ಮನವಿಗಳು ನ್ಯಾಯಾಧಿಕರಣ ಅಥವಾ ಇತರ ಯಾವುದೇ ನ್ಯಾಯಾಲಯ/ಅಧಿಕಾರಿಗಳ ಮುಂದೆ ಬಾಕಿ ಇರುವವರೆಗೆ, ಅವರಿಗೆ ಯಾವುದೇ ಸಾಮಾಜಿಕ ಸೌಲಭ್ಯಗಳು ಅಥವಾ ಇತರ ಸೌಲಭ್ಯಗಳನ್ನು ನಿರಾಕರಿಸದಂತೆ ರಾಜ್ಯ ಸರ್ಕಾರವನ್ನು ತಡೆಯಬೇಕು ಎಂದು ಕೋರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರು : ಚುನಾವಣಾ ಆಯೋಗದ ವಿರುದ್ಧ ಜನಾಂದೋಲನಕ್ಕೆ ಪ್ರಕಾಶ್ ರಾಜ್ ಕರೆ

ನ್ಯಾಯಾಂಗದ ಮೂಲಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಕೆಳಗಿಳಿಸುವುದು ಸಾಧ್ಯವಾಗದಿರಬಹುದು, ಆದರೆ ಜನರ ಹಕ್ಕುಗಳಿಗಾಗಿ ಬೀದಿ ಚಳವಳಿ ನಡೆಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು. ಎಸ್‌ಐಆರ್ ಪರಿಶೋಧನೆ ಮತ್ತು...

ಬೆಳಗಾವಿ| ಕೂಲಿ ನೇಕಾರರಿಗೆ ಕಾರ್ಮಿಕ ಇಲಾಖೆ ನೀಡುವ ‘ಸ್ಮಾರ್ಟ್ ಕಾರ್ಡ್’ನಲ್ಲಿ ಲೋಪ, ಅನ್ಯಾಯ ಸರಿಪಡಿಸಲು ಆಗ್ರಹ

ಹಗಲಿರುಳೆನ್ನದೆ ಮಗ್ಗಗಳ ಮುಂದೆ ಕುಳಿತು ಬಟ್ಟೆ ನೇಯುವ ಬೆಳಗಾವಿ ಭಾಗದ ಲಕ್ಷಾಂತರ ಕೂಲಿ ನೇಕಾರರ ಬದುಕು ಇಂದು ಭರವಸೆಯಿಲ್ಲದ ತೂಗುಯ್ಯಾಲೆಯಲ್ಲಿದೆ. ಒಂದೆಡೆ ಕಳೆದ ಒಂದು ದಶಕದಿಂದ (10 ವರ್ಷ) ಮಾಲೀಕರಿಂದ ಶ್ರಮಕ್ಕೆ ತಕ್ಕಂತೆ...

ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ...

SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...

ಕರ್ನಾಟಕ ಎಸ್ಐಆರ್: ಅಳಿಸುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ಸುಮಾರು 6000 ಮತದಾರರು ನಾಪತ್ತೆ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಂಕಿಅಂಶಗಳ ವ್ಯತ್ಯಾಸ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ, ಚುನಾವಣಾ ಆಯೋಗದ ಅಂಕಿಅಂಶಗಳಲ್ಲೇ ಸುಮಾರು 6 ಸಾವಿರ ಮತದಾರರ ಅಳಿಸುವಿಕೆಗೆ ಸಂಬಂಧಿಸಿದ ವ್ಯತ್ಯಾಸ ಬೆಳಕಿಗೆ ಬಂದಿದೆ. ಮತದಾರರ...

Breaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಅದರ ಲಿಂಗಾನುಪಾತದ ಅಂಕಿಅಂಶಗಳು ಗಂಭೀರವಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಲಭ್ಯವಿರುವ 34 ಜಿಲ್ಲೆ/ನಗರ ಆಡಳಿತ ಘಟಕಗಳ...

ಎಸ್ಐಆರ್‌ನಲ್ಲಿ ಬದುಕಿದ್ದರೂ ‘ಮೃತ’, ಮನೆಯಲ್ಲಿದ್ದರೂ ‘ಸ್ಥಳಾಂತರ’: ಚಿಕ್ಕಬಳ್ಳಾಪುರದ ಸಂತ್ರಸ್ತರನ್ನು ಭೇಟಿಯಾದ ಪ್ರಕಾಶ್ ರಾಜ್ 

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ...