ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಕೇವಲ ಮೊಬೈಲ್ ಫೋನ್ ಕಳ್ಳತನದ ಆರೋಪದ ಮೇಲೆ ಒಬಿಸಿ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ತಲೆ ಬೋಳಿಸಿ, ಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಿ ಭೀಕರವಾಗಿ ಅವಮಾನಿಸಲಾಗಿದೆ. ಈ ಕೃತ್ಯ ಎಸಗಿದ ಮೇಲ್ಜಾತಿ ಸಮುದಾಯಕ್ಕೆ ಸೇರಿದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವಕನನ್ನು 30 ವರ್ಷದ ಸೋನು ಎಂದು ಗುರುತಿಸಲಾಗಿದ್ದು, ಆತ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಈತನ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಆರೋಪದ ಮೇಲೆ ಉನ್ನಾವೋ ಜಿಲ್ಲೆಯ 50 ವರ್ಷದ ರಾಜು ಮತ್ತು ಆತನ 27 ವರ್ಷದ ಮಗ ರಾಜ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳು ಸ್ಥಳೀಯ ಮೇಲ್ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಈ ಅಮಾನವೀಯ ಘಟನೆಯು ಆಗಸ್ಟ್ 1 ರಂದು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ‘ವಹಾದ್ ಗ್ರಾಮ ಪಾಠಕ್‌ಪುರ’ ಗ್ರಾಮದಲ್ಲಿ ನಡೆದಿದೆ. ಆರಂಭದಲ್ಲಿ ಈ ದೌರ್ಜನ್ಯದ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ ಮತ್ತು ವಿಷಯ ಹೊರಪ್ರಪಂಚಕ್ಕೆ ತಿಳಿದಿರಲಿಲ್ಲ. ಆದರೆ, ಆಗಸ್ಟ್ 9 ರಂದು ರಾತ್ರಿ ಸುಮಾರು 8:30 ರ ವೇಳೆಗೆ ಸೋನು ಅವರ ತಲೆ ಬೋಳಿಸಿ ಹಳ್ಳಿಯಲ್ಲಿ ಮೆರವಣಿಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಯಿತು. ವೀಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಫ್‌ಐಆರ್ ದಾಖಲಿಸಿಕೊಂಡರು. ತದನಂತರ ಸಂತ್ರಸ್ತ ಸೋನು ಅವರ ತಂದೆ ಅಸಿವಾನ್ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿಗಳ ವಿರುದ್ಧ ಅಧಿಕೃತ ದೂರು ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ (ಮಕ್ತೂಬ್) ಜೊತೆ ಮಾತನಾಡಿದ ಪೊಲೀಸರು, ಎಫ್‌ಐಆರ್ ಪ್ರತಿಯ ಪ್ರಕಾರ, ಭಾರತೀಯ ನ್ಯಾಯ ಸಂಹಿತಾ (BNS) ನ ವಿವಿಧ ಕಠಿಣ ಸೆಕ್ಷನ್‌ಗಳಾದ 3(5), 115(2), 352, 351(3) ಮತ್ತು 356(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹಲ್ಲೆ, ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿ ಅವಮಾನಿಸುವುದು, ಕ್ರಿಮಿನಲ್ ಬೆದರಿಕೆ ಹಾಕುವುದು ಹಾಗೂ ಅಪಹರಣದಂತಹ ಗಂಭೀರ ಅಪರಾಧಗಳ ಅಡಿಯಲ್ಲಿ ಪ್ರಕರಣಗಳನ್ನು ಹೊರಿಸಲಾಗಿದೆ. ಪ್ರಕರಣದಲ್ಲಿ ಸೋನು ಅವರ ತಲೆ ಬೋಳಿಸಲು ನೆರವಾದ ಮೂರನೇ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆಯ ಕುರಿತು ಅಸಿವಾನ್ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಅವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಜುಲೈ 30 ರಂದು ಮೇಲ್ಜಾತಿಯ ರಾಜು ಅವರ ಮನೆಯಿಂದ ಎರಡು ಮೊಬೈಲ್ ಫೋನ್‌ಗಳು ಕಾಣೆಯಾಗಿದ್ದವು. ಫೋನ್‌ಗಳು ಕಾಣೆಯಾಗುವ ಸ್ವಲ್ಪ ಸಮಯದ ಮೊದಲು ಸೋನು ಅವರ ಮನೆಗೆ ಭೇಟಿ ನೀಡಿದ್ದ ಕಾರಣ, ರಾಜು ಕುಟುಂಬದವರು ಸೋನು ಮೇಲೆಯೇ ಕಳ್ಳತನದ ಅನುಮಾನ ವ್ಯಕ್ತಪಡಿಸಿದ್ದರು” ಎಂದು ಅಧಿಕಾರಿಯು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಸೋನು ಮನೆಯಿಂದ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ನಂತರ ನಮಗೆ ದೊರೆತ ಮಾಹಿತಿಯಂತೆ, ರಾಜು ಮತ್ತು ಆತನ ಮಗ ರಾಜ್ ಇಬ್ಬರೂ ಸೇರಿ ಸೋನುನನ್ನು ಲಕ್ನೋದಲ್ಲಿ ಪತ್ತೆಹಚ್ಚಿ, ಆಗಸ್ಟ್ 1 ರಂದು ತಮ್ಮ ಗ್ರಾಮವಾದ ಪಾಠಕ್‌ಪುರಕ್ಕೆ ಬಲವಂತವಾಗಿ ಕರೆತಂದಿದ್ದಾರೆ. ನಮ್ಮ ಆರಂಭಿಕ ತನಿಖೆಯ ವೇಳೆಯಲ್ಲಿ ಗ್ರಾಮಸ್ಥರು ನೀಡಿದ ಮಾಹಿತಿಯಂತೆ, ಸೋನು ಬಂದಿದ್ದ ಅಂಗಡಿಯನ್ನು ಪರಿಶೀಲಿಸಿದಾಗ, ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಹಳೆಯ ಜನರಲ್ ಅಂಗಡಿಯಲ್ಲಿ ತಮ್ಮ ಫೋನ್ ಸಿಕ್ಕಿದೆ ಎಂಬುದನ್ನು ಆರೋಪಿಗಳಾದ ತಂದೆ ಮತ್ತು ಮಗ ಇಬ್ಬರೂ ಒಪ್ಪಿಕೊಂಡಿದ್ದಾರೆ” ಎಂದು ಸಬ್-ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ವಿವರಿಸಿದ್ದಾರೆ.
ಯುವಕನಿಗೆ ನೀಡಿರುವ ಶಿಕ್ಷೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಸಬ್ ಇನ್ಸ್‌ಪೆಕ್ಟರ್, “ಆರೋಪಿಯು ತಲೆ ಬೋಳಿಸಿಕೊಂಡು ಹಳ್ಳಿಯ ಸುತ್ತಲೂ ಮೆರವಣಿಗೆಯಾಗಿದ್ದಾನೆ ಎಂಬುದು ನಮಗೆ ತಿಳಿದುಬಂದಿದೆ. ಒಂದು ವೇಳೆ ಆ ಯುವಕ ನಿಜವಾಗಿಯೂ ಕಳ್ಳತನದಲ್ಲಿ ಭಾಗಿಯಾಗಿದ್ದರೆ, ಆರೋಪಿಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು ಆತನನ್ನು ತಕ್ಷಣವೇ ಪೊಲೀಸರಿಗೆ ಒಪ್ಪಿಸಬೇಕಿತ್ತು” ಎಂದು ಖಡಕ್ಕಾಗಿ ಹೇಳಿದ್ದಾರೆ.
“ನಾವು ಈಗಾಗಲೇ ಕೃತ್ಯ ಎಸಗಿದ ತಂದೆ ರಾಜು ಮತ್ತು ಮಗ ರಾಜ್ ಇಬ್ಬರನ್ನೂ ಬಂಧಿಸಿದ್ದೇವೆ. ಸೋನು ಅವರ ತಲೆ ಬೋಳಿಸಲು ತಾವು ಹಳ್ಳಿಯ ಕ್ಷೌರಿಕನ ಸಹಾಯ ಪಡೆದುಕೊಂಡಿದ್ದಾಗಿ ವಿಚಾರಣೆ ವೇಳೆ ಅವರು ಒಪ್ಪಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಕ್ಷೌರಿಕ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ” ಎಂದು ಅಧಿಕಾರಿಯು ಮಾಹಿತ ನೀಡಿದ್ದಾರೆ.
ಸಂತ್ರಸ್ತ ಸೋನು ವಿರುದ್ಧದ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, “ಇದು ಸಂಪೂರ್ಣವಾಗಿ ತನಿಖೆಯ ವಿಷಯವಾಗಿದೆ. ಆಪಾದಿತ ಫೋನ್ ಕಳ್ಳತನದ ಪ್ರಕರಣದ ವಿಚಾರಣೆಯೂ ಒಂದು ಬದಿಯಲ್ಲಿ ನಡೆಯುತ್ತಿದ್ದು, ಅದರೊಂದಿಗೆ ಯುವಕನಿಗೆ ಸಾರ್ವಜನಿಕವಾಗಿ ಮಾಡಿದ ಅಮಾನವೀಯ ಅವಮಾನ ಮತ್ತು ದೌರ್ಜನ್ಯದ ಕುರಿತೂ ಪ್ರತ್ಯೇಕ ಹಾಗೂ ಗಂಭೀರ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಅವಮಾನದ ವೀಡಿಯೊ ವ್ಯಾಪಕವಾಗಿ ಹರಿದಾಡಿದ ನಂತರವೇ ಈ ಭೀಕರ ಘಟನೆ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ವೀಡಿಯೊದ ತೀವ್ರತೆಯನ್ನು ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸ್ಥಳ ಪರಿಶೀಲನೆ ನಡೆಸಿ ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


