ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ.
ಹೈದರಾಬಾದ್‌ನ ನಲ್ಸಾರ್ ವಿಶ್ವವಿದ್ಯಾಲಯದ 2026ರ ಬ್ಯಾಚ್‌ನ ವಿದ್ಯಾರ್ಥಿಗಳು ವಕೀಲರಾಗಿ ನೋಂದಣಿ ಮಾಡಿಕೊಳ್ಳುವುದನ್ನು ತಡೆಯಲು ಬಿಸಿಐ ಈ ಹಿಂದೆ ಆದೇಶಿಸಿತ್ತು. ವಿದ್ಯಾರ್ಥಿಗಳು ಘಟಿಕೋತ್ಸವಕ್ಕೆ ಮುಖ್ಯ ನ್ಯಾಯಮೂರ್ತಿಗಳನ್ನು ಆಹ್ವಾನಿಸುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ಕಾನೂನು ವಲಯ ಮತ್ತು ಸುಪ್ರೀಂ ಕೋರ್ಟ್‌ನಿಂದ ತೀವ್ರ ವಿರೋಧ ವ್ಯಕ್ತವಾದ ನಂತರ, ಬಿಸಿಐ ತನ್ನ ಆದೇಶವನ್ನು ಹಿಂತೆಗೆದುಕೊಂಡಿತ್ತು.
ಈ ಬೆನ್ನಲ್ಲೇ, ಸ್ವಾತಂತ್ರ್ಯ ದಿನಾಚರಣೆಯಂದು ಪತ್ರ ಬರೆದಿರುವ ಮನನ್ ಕುಮಾರ್ ಮಿಶ್ರಾ ಅವರು, ತಮ್ಮ ಮಾತುಗಳು ಅಥವಾ ನಿರ್ದೇಶನಗಳು ವಿದ್ಯಾರ್ಥಿಗಳ ಮನಸ್ಸಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುವುದಾಗಿ ಮತ್ತು ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.
“ಪ್ರಸ್ತುತ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಯಾವುದೇ ಮಾತುಗಳು ಅಥವಾ ಪತ್ರಗಳು ನಮ್ಮ ಕಾನೂನು ವಿದ್ಯಾರ್ಥಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದು ಮಿಶ್ರಾ ಅವರು ಪತ್ರದಲ್ಲಿ ಹೇಳಿದ್ದಾರೆ.
“ಹೀಗೆ ಹೇಳಲು ಯಾವುದೇ ಹಿಂಜರಿಕೆ ಇರಬಾರದು. ವಿಷಾದ ವ್ಯಕ್ತಪಡಿಸುವುದು ಗೌರವ ಅಥವಾ ಅಹಂಕಾರದ ವಿಷಯವಲ್ಲ. ಇದು ಕೇವಲ ನಮ್ಮ ವಿದ್ಯಾರ್ಥಿಗಳ ಭಾವನೆಗಳು ಮತ್ತು ಕಾಳಜಿಗಳು ನಮಗೆ ಮುಖ್ಯ ಎಂಬುದನ್ನು ಒಪ್ಪಿಕೊಳ್ಳುವ ವಿಧಾನವಾಗಿದೆ” ಎಂದು ಮಿಶ್ರಾ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಅವರು ಪತ್ರದಲ್ಲಿ ಯಾವುದೇ ವಿಶ್ವವಿದ್ಯಾಲಯದ ಹೆಸರನ್ನು ಉಲ್ಲೇಖಿಸಿಲ್ಲ ಅಥವಾ ನಿರ್ದಿಷ್ಟ ವಿವಾದದ ಬಗ್ಗೆ ನೇರವಾಗಿ ಪ್ರಸ್ತಾಪಿಸಿಲ್ಲ.
ನಲ್ಸಾರ್ (NALSAR) ಮತ್ತು ಎನ್ಎಲ್ಎಸ್ಐಯು (NLSIU) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಮಿಶ್ರಾ ಅವರಿಂದ ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು. ಎನ್ಎಲ್ಎಸ್ಐಯು ವಿದ್ಯಾರ್ಥಿಗಳು ತಮ್ಮ ಘಟಿಕೋತ್ಸವ ಸಮಾರಂಭದಲ್ಲಿ ಮಿಶ್ರಾ ಅವರು ಭಾಗವಹಿಸುವುದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ತಮ್ಮ ಮೂರು ಪುಟಗಳ ಪತ್ರದಲ್ಲಿ, ವಿಶೇಷವಾಗಿ ಘಟಿಕೋತ್ಸವ ಸಮಾರಂಭಗಳನ್ನು ಉಲ್ಲೇಖಿಸಿದ ಮಿಶ್ರಾ, ಇವು ವರ್ಷಗಳ ಕಠಿಣ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಜೀವನದ ಪ್ರಮುಖ ಬದಲಾವಣೆಯನ್ನು ಗುರುತಿಸುವ ವಿಶೇಷ ಸಂದರ್ಭಗಳಾಗಿವೆ ಎಂದು ಬಣ್ಣಿಸಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವು ವಿದ್ಯಾರ್ಥಿಗಳಿಗೇ ಬಿಟ್ಟಿದ್ದಾಗಿರಬೇಕು ಎಂದಿದ್ದಾರೆ.
“ಯಾವ ವಿದ್ಯಾರ್ಥಿಯನ್ನೂ ಹಾಜರಾಗಲು ಒತ್ತಾಯಿಸಬಾರದು ಮತ್ತು ಯಾವ ವಿದ್ಯಾರ್ಥಿಯೂ ದೂರವಿರಲು ಒತ್ತಾಯಿಸಲ್ಪಟ್ಟಂತೆ ಭಾವಿಸಬಾರದು” ಎಂದು ಹೇಳಿದ ಮಿಶ್ರಾ, ವಿಷಯವನ್ನು ಸಂಪೂರ್ಣವಾಗಿ ಪರಿಗಣಿಸಿದ ನಂತರ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ನ್ಯಾಯಾಂಗ, ಬಾರ್, ವಿಶ್ವವಿದ್ಯಾಲಯಗಳು ಮತ್ತು ಕಾನೂನು ವಿದ್ಯಾರ್ಥಿಗಳ ನಡುವಿನ ಸಂಬಂಧವು ಯಾವುದೇ ತಾತ್ಕಾಲಿಕ ವಿವಾದಕ್ಕಿಂತ ಹೆಚ್ಚು ಆಳವಾದದ್ದು ಮತ್ತು ದೀರ್ಘಕಾಲ ಉಳಿಯುವಂತದ್ದು ಎಂದು ಮಿಶ್ರಾ ಹೇಳಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಅಂತಿಮವಾಗಿ ಸಂವಾದ, ಸ್ಪಷ್ಟೀಕರಣ ಮತ್ತು ಪರಸ್ಪರ ಗೌರವದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಕಾನೂನು ವಿದ್ಯಾರ್ಥಿಗಳನ್ನು ಕಾನೂನು ವೃತ್ತಿಯ ಭವಿಷ್ಯ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಪರಿಗಣಿಸುತ್ತದೆ ಎಂದಿರುವ ಮಿಶ್ರಾ, ಹಾಗೆಯೇ ಅವರ ಗೌರವ, ಸ್ವತಂತ್ರ ಆಲೋಚನೆ ಮತ್ತು ನ್ಯಾಯಸಮ್ಮತವಾದ ಕಾಳಜಿಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ಸಂವಾದ, ಪರಸ್ಪರ ಗೌರವ ಮತ್ತು ಸಾಂವಿಧಾನಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದ್ದಾರೆ.
ಪ್ರಸ್ತುತ ಸಮಸ್ಯೆಯನ್ನು ‘ನ್ಯಾಯೋಚಿತತೆ ಮತ್ತು ಸಾಮರಸ್ಯದ ಮನೋಭಾವ’ದಿಂದ ಪರಿಗಣಿಸಬೇಕು ಎಂದಿರುವ ಮಿಶ್ರಾ, ಇದು ‘ಹೊರಗಿನ ಪ್ರಭಾವದಿಂದ ರಾಜಕೀಯ ಅಥವಾ ಬಾಹ್ಯ ಸ್ವರೂಪ’ವನ್ನು ಪಡೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸ್ವತಂತ್ರ ಆಲೋಚನೆಯನ್ನು ಗೌರವಿಸುವಂತೆ ಅವರು ಸಂಸ್ಥೆಗಳಿಗೆ ಒತ್ತಾಯಿಸಿದ್ದು, ಯಾವುದೇ ಅಡ್ಡಿಯಿಲ್ಲದೆ ಸಂವಾದ ನಡೆಸಲು ಹಾಗೂ ಮುನ್ನಡೆಯಲು ಮುಕ್ತ ಅವಕಾಶವಿರಬೇಕು ಎಂದಿದ್ದಾರೆ.


